ಅವರು ಜಿ ಎಚ್ ರಾಘವೇಂದ್ರ..

ನಗೆ ಹಂಚಿ ನೋವು ನುಂಗಿದ ಹಿರಿಯಣ್ಣ..

ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ

ಜಿ ಎಚ್ ರಾಘವೇಂದ್ರ ಇಲ್ಲ. ಹಲವು ಪ್ರತಿಭೆಗಳನ್ನು ಶೋಧಿಸಿದ, ಕಾಪಾಡಿದ ರಾಘವೇಂದ್ರ ಅವರು ಇಲ್ಲವಾಗಿ ಇಂದಿಗೆ ನಾಲ್ಕು ವರ್ಷ. ತಮ್ಮ ರಂಗ ಚಟುವಟಿಕೆಗಳ ಮೂಲಕ ವಿಚಾರಗಳನ್ನು ಬಿತ್ತಿದ ರಾಘವೇಂದ್ರರಿಗೆ ಧನಂಜಯ ಕುಲಕರ್ಣಿ ಇಲ್ಲಿ ನಮನ ಸಲ್ಲಿಸಿದ್ದಾರೆ.
ಅವು ೧೯೮೯ ರ ವಿಜಯದಶಮಿಯ ದಿನ . ಜಿ ಎಚ್ ಪರಿಚಯವಾಗಿ ಕೇವಲ ಒಂದು ವರ್ಷವಾಗಿತ್ತಷ್ಟೆ. ನನ್ನನ್ನು ಹುಬ್ಬಳ್ಳಿಯ ಕೆ .ಎಂ .ಸಿ ಆಸ್ಪತ್ರೆಗೆ ಸಂಜೆ ೫ ಗಂಟೆಗೆ ಬರಲು ಹೇಳಿದ್ದರು. ಕಾರಣ ಕೇಳಿದ್ದಕ್ಕೆ “ಸ್ವಲ್ಪ ಕೆಲಸ ಅದ….. ಬರ್ರಿ” ಎಂದಷ್ಟೇ ಹೇಳಿದ್ದರು. ಸರಿಯಾಗಿ ೫ ಗಂಟೆಗೆ ಅಲ್ಲಿಗೆ ಹೋದಾಗ ಜಿ .ಎಚ್ ತಮ್ಮ ಎಂದಿನ ಶೈಲಿಯಲ್ಲಿ ಬೀಡಿ ಸೇದುತ್ತ ನನಗಾಗಿ ಕಾಯುತ್ತ ನಿಂತಿದ್ದರು . ಇಬ್ಬರು ಸೇರಿ ಅದು…ಇದು ಅಂತ ಮಾತನಾಡುತ್ತಾ ಕೆ .ಎಂ .ಸಿ ಸಭಾಂಗಣದ ಕಡೆಗೆ ಹೆಜ್ಜೆ ಹಾಕಿದೆವು. ನಮಗಾಗಿ ಸುಮಾರು ೨೦ ಜನರು ಕಾಯುತ್ತಿದ್ದರು. ಅವರಿಗೆಲ್ಲ ಜಿ .ಎಚ್ ನನ್ನನ್ನು ಪರಿಚಯ ಮಾಡಿಸಿದ ರೀತಿ ಸ್ವಲ್ಪ ಮುಜುಗರವನ್ನುಂಟು ಮಾಡಿಟ್ಟು. ನಂತರ ಗೊತ್ತಾದ ವಿಷಯವೆಂದರೆ ಕೆ .ಎಂ .ಸಿ ತಂಡಕ್ಕೆ ಜಿ .ಎಚ್ “ಬೇಲಿ ಮತ್ತು ಹೊಲ” ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಮತ್ತು ಅದರ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಲು ಅಲ್ಲಿಗೆ ಕರೆಸಿದ್ದರು ಎಂದು. ನಾಟಕ ವಾಚನ ಮುಗಿದು , ಕಲಾವಿದರೊಂದಿಗೆ ಹರಟೆ ಹೊಡೆದು ಅಲ್ಲಿಂದ ಹೊರಟಾಗ ಸಂಜೆ ೮ ಗಂಟೆಯ ಸಮಯ. ಜಿ .ಎಚ್ ನನ್ನನ್ನು ನೇರವಾಗಿ ತಮ್ಮ ಕಾಯಂ ಜಾಗಕ್ಕೆ ಕರೆದುಕೊಂಡು ಹೋಗಿ , ಶೇಂಗಾ ಹಾಗೂ ರಂ ತರಲು ಆದೇಶಿಸಿದರು. ಮತ್ತೆ ನಮ್ಮ ಮಾತು ನಾಟಕ ತಯಾರಿಯ ಕಡೆಗೆ ವಾಲಿತು. ನಾವು ಹಿಂದೆ ಜಿ .ಎಚ್ ನಿರ್ದೇಶನದಲ್ಲಿ ಪ್ರದರ್ಶಿಸಿದ “ಒಂದು ಬೀದಿಯ ಕಥೆ” ಅದರ ಹಿಂದಿನ ಅನುಭವಗಳು…ಹೀಗೆ ಒಂದರ ಹಿಂದೆ ಒಂದರಂತೆ ಹಳೆಯ ನೆನಪಿನ ಬುತ್ತಿಯನ್ನು ಜಿ .ಎಚ್ ಬಿಚ್ಚುತ್ತಾ ಹೋದಂತೆ, ನಾನು ಒಬ್ಬ ವಿಧೇಯ ವಿದ್ಯಾರ್ಥಿಯಮ್ತೆ ಅದನ್ನು ಕೇಳುತ್ತಾ, ಅವರು ಸಿಡಿಸುತ್ತಿದ್ದ ಜೋಕುಗಳಿಗೆ ಹೊಟ್ಟೆತುಂಬ ನಗುತ್ತ ಕುಳಿತಿದ್ದಾಗ ಜಿ .ಎಚ್ ಇದ್ದಕ್ಕಿದ್ದಂತೆ ಭಾವುಕರಾದರು. ನನಗೆ ಏನು ಮಾತನಾಡಬೇಕೆಂದು ತೋಚುವ ಮೊದಲೇ, ಜಿ .ಎಚ್ ಎದ್ದು ಬಂಡು ನನ್ನ ಪಕ್ಕ ಕುಳಿತು ನನ್ನ ಕೈ ಹಿಡಿದುಕೊಂಡಿದ್ದರು ಮತ್ತು ನಿಜಕ್ಕೂ ಅಳುತ್ತಿದ್ದರು. ಅವರಾಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿವೆ “ಧನಂಜಯ …ನನ್ನ ತಮ್ಮ ವಸಂತ ಸತ್ತು ಇವತ್ತಿಗೆ ಒಂದು ವರ್ಷ ಆತು ….ನಿಮ್ಮನ್ನ ನೋಡಿದ್ರ ವಸಂತನ್ನ ನೋಡಿಧಂಗ ಆಗ್ತದ….”
ಅಂದಿನಿಂದ ಜಿ .ಎಚ್ ನನ್ನನ್ನು ತಮ್ಮ ಸ್ವಂತ ತಮ್ಮನಂತೆಯೇ ನೋಡಿಕೊಂಡರು. ಮನೆಗೆ ಹೋದಾಗಲೂ ಸಹ ವೈನಿ ನನ್ನನ್ನು ತಮ್ಮ ಸ್ವಂತ ಮೈದುನನಂತೆ ಬರಮಾದಿಕೊಳ್ಳುತ್ತಿದ್ದರು.

ಒಂದು ಅರ್ಥದಲ್ಲಿ ಜಿ .ಎಚ್ ಅವರಿಂದ ನನ್ನ ರಂಗಭೂಮಿಯ ಅರಗೇಟ್ರಮ ಆರಂಭವಾಯಿತು ಎಂದು ಹೇಳಿದರೆ ತಪ್ಪಾಗಲಾರದು . ೧೯೮೨ ರಿಂದ ಶಾಲೆಗಳಲ್ಲಿ ಸಣ್ಣ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ , ಬೇರೆಯವರ ನಾಟಕಗಳನ್ನು ನೋಡುತ್ತಾ ನನ್ನ ಆಸಕ್ತಿಯನ್ನು ತನಿಸಿಕೊಳ್ಳುತ್ತಿದ್ದ ನನಗೆ ಜಿ .ಎಚ್ ಅವರ ನಾಟಕದಲ್ಲಿ ಅಭಿನಯಿಸಲು ಅನುವು ಮಾಡಿಕೊಟ್ಟಿದ್ದು ಸಮುದಾಯ. ೧೯೮೯ರ ಮೊದಲ ದಿನ ಉತ್ತರ ಪ್ರದೇಶದ ಸಾಯಿಬಾಬಾದ್ ನಗರದಲ್ಲಿ “ಹಲ್ಲಾ ಬೋಲ್” ಎಂಬ ಕಾರ್ಮಿಕರ ಸಮಸ್ಯೆಯನ್ನು ಕುರಿತಾದ ಬೀದಿ ನಾಟಕವನ್ನು ಅಭಿನಯಿಸುತ್ತಿದ್ದಾಗ ಅತ್ಯಂತ ಕ್ರೂರವಾಗಿ ಹಲ್ಲೆಯಾದ ರಂಗಕರ್ಮಿ ಸಫ್ದರ್ ಹಶ್ಮಿ ಸ್ಮರಣಾರ್ಥ ಬೆಂಗಳುರಿನಲ್ಲಿ ೧೯೮೯, ಎಪ್ರಿಲ್ ೧೨ ರಿಂದ ೧೯ ರವರೆಗೆ ಒಂದು ವಾರದ ಬೀದಿನಾಟಕ, ವಿಚಾರಸಂಕಿರಣ , ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಮುದಾಯ ರಾಜ್ಯ ಸಂಗತನೆ ಹಮ್ಮಿ ಕೊಂಡಿತ್ತು . ಇದಕ್ಕಾಗಿ ಜಿ .ಎಚ್ ಧಾರವಾಡ ಸಮುದಾಯಕ್ಕಾಗಿ ಒಂದು ಬೀದಿ ನಾಟಕವನ್ನು ಬರೆದು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಸಮುದಾಯದೊಂದಿಗೆ ಮೊದಲಿನಿಂದ ನನಗೆ ಒಡನಾಟವಿದ್ದ ಕಾರಣ, ಈ ನಾಟಕದಲ್ಲಿ ಅಭಿನಯಿಸಲು ನನಗೆ ಅವಕಾಶ ಸಿಕ್ಕಿತು. ಇದಕ್ಕೂ ಮೊದಲು ಜಿ .ಎಚ್ ಅವರು ಬರೆದ ಅನೇಕ ರೇಡಿಯೋ ನಾಟಕ , ಪ್ರಹಸನಗಳಲ್ಲಿ ನಾನು ಅಭಿನಯಿಸಿದ್ದೆ . ಆದರೆ ಜಿ .ಎಚ್ ಅವರೊಂದಿಗೆ ಕುಡಿ ಕೆಲಸ ಮಾಡುವ ಅವಕಾಶ ದೊರೆತದ್ದು ಇದೆ ಮೊದಲು.
“ಹಲ್ಲಾ ಬೋಲ್” ಎಂಬ ನಾಟಕವನ್ನು ಅಭಿನಯಿಸುತ್ತಿರುವಾಗ ಹಲ್ಲೆ ಗೊಳಗಾಗಿ ಮರಣ ಹೊಂದಿದ ನಂತರ ಸಫ್ದರ್ ಹಶ್ಮಿ ಅವರ ಬಗ್ಗೆ ಹಾಗೂ ಹಲ್ಲಾ ಬೋಲ್ ನಾಟಕದ ಬಗ್ಗೆ ಅನೇಕ ಪತ್ರಿಕೆಗಳು ಪುಟಗಟ್ಟಲೆ ವರದಿಗಳನ್ನು ಬರೆದವು….ಅನೇಕ ಪತ್ರಿಕೆಗಳು ಸಂಪಾದಕೀಯವನ್ನು ಬರೆದವು. ಇದನ್ನು ಆಧರಿಸಿ ಜಿ .ಎಚ್ ಧಾರವಾಡ ಸಮುದಾಯ ತಂಡಕ್ಕೆ “ಒಂದು ಬೀದಿಯ ಕಥೆ” ಎಂಬ ಬೀದಿ ನಾಟಕವನ್ನು ಬರೆದರು. ಅತ್ಯಂತ ಸೂಕ್ಷ್ಮ ಹಾಗೂ ವಿಡಂಬನಾತ್ಮಕ ವಿಷಯಗಳನ್ನು ನವಿರಾದ ಹಾಸ್ಯ ಬಳಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆ ಜಿ .ಎಚ್ ಅವರಿಗೆ ಸಿದ್ಧಿಸಿತ್ತು. ಎಪ್ರಿಲ್ ೧೩, ೧೯೮೯ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ರಂಗಮಂದಿರದಲ್ಲಿ ನಾವು “ಒಂದು ಬೀದಿಯ ಕಥೆ”ಯನ್ನು ಅಭಿನಯಿಸುತ್ತಿದ್ದಾಗ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಇದಕ್ಕೆ ಒಂದು ಜೀವಂತ ನಿದರ್ಶನ. ಸಫ್ದರ್ ಹಶ್ಮಿ ಅವರ ಮೂಲ ಹಲ್ಲಾ ಬೋಲ್ ನಾಟಕವನ್ನು ನೋಡಿದ ಅನೇಕ ಜನರಿಂದ ಬಂದ ಒಂದೆ ಪ್ರತಿಕ್ರೀಯೆ ಎಂದರೆ “ಜಿ .ಎಚ್ ಅವರ ಈ ನಾಟಕ ಹಿಂದಿಯ ಹಲ್ಲಾ ಬೋಲ್ ನಾಟಕವನ್ನು ನೆನಪಿಗೆ ತರುತ್ತದೆ” ಇದು ಜಿ .ಎಚ್ ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಜಿ .ಎಚ್ ಅವರು ಬರೆದದ್ದು ಕೆಲವೇ ಕೆಲವು ನಾತಕಗಲಾದರು ಅವು ಗಳಿಸಿದ ಜನಮನ್ನಣೆ ಅಪಾರ. “ಬೇಲಿ ಮತ್ತು ಹೊಲ”, “ಬಂಗಾರದ ಕೊಡ”, “ಬಾಗಿಲಾ ತೆಗೀರಪ್ಪೋ ಬಾಗಲಾ”, “ಸುದ್ದಿ ಸುದ್ದಿ ಸುದ್ದಿ”, “ಭಾರತ ಸುಂದರಿ” ಹೀಗೆ ಕೆಲವೇ ನಾಟಕಗಳನ್ನು ಅವರು ಬರೆದರು ನಾಡಿನ ಬಹುತೇಕ ನಿರ್ದೇಶಕರು ಅವುಗಳನ್ನು ನಿರ್ದೇಶಿಸಿದರು . ಮುಖ್ಯವಾಗಿ ಜಿ .ಎಚ್ ಅವರ ನಾಟಕಗಳಲ್ಲಿ ನಾನು ಗುರುತಿಸಿದ ಪ್ರಮುಖ ಅಂಶವೆಂದರೆ ನಮ್ಮ ನಡುವೆ ನಡೆಯುವ ಘಟನೆಗಳಿಗೆ ಹಾಸ್ಯದ ಲೇಪನವನ್ನು ನೀಡಿ ಅವುಗಳನ್ನು ಜನರ ಮುಂದೆ ಬಿಚ್ಚಿಡುತಿದ್ದ ರೀತಿ . ಹೆಚ್ಚಿನ ತಂತ್ರಗಾರಿಕೆಯನ್ನು ಬಳಸದೆ ಅತ್ಯಂತ ಕಡಿಮೆ ಕರ್ಚಿನಲ್ಲಿ ಉತ್ತಮ ನಾಟಕವನ್ನು ಹೇಗೆ ಮಾಡಬಹುದು ಎಂದು ಅವರು ತೋರಿಸಿಕೊಟ್ಟರು. ಇದೆ ಕಾರಣಕ್ಕಾಗಿ ಅವರ ನಾಟಕಗಳು ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚು ಪ್ರೀತಿಗೆ ಪಾತ್ರವಾಗಿದ್ದವು . ೮೦ ಹಾಗೂ ೯೦ರ ದಶಕದ ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಪ್ರತೀ ವರ್ಷ ಜಿ .ಎಚ್ ಅವರ ನಾಟಕ ಹಾಗೂ ಪ್ರಹಸನಗಳು ಸತತವಾಗಿ ಪ್ರಶಸ್ತಿಯನ್ನು ಗಳಿಸಿದವು. ಅದರಲ್ಲಿ ಭಾರತ ಸುಂದರಿ ನಾಟಕವಂತು ೧೯೯೧, ೯೨ ಹಾಗೂ ೯೩ ಹೀಗೆ ಮೂರು ವರ್ಷ ಸತತವಾಗಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಹ್ಯಾಟ್ರಿಕ್ ಗಳಿಸಿದ್ದು ಈಗ ಇತಿಹಾಸ.
ಒಂದು ಬೀದಿಯ ಕಥೆ ನಾಟಕ ಅನೇಕ ಕಡೆ ಪ್ರದರ್ಶನ ಕಂಡು ಅನೇಕ ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿತು . ಈ ಮಧ್ಯೆ ಜಿ .ಎಚ್ ಕೆಲಸ ಮಾಡುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ತೊಂದರೆಗಳಿಂದ ಅನೇಕ ಕೆಲಸಗಾರರನ್ನು ಕೆಲಸದಿಂದ ಹೊರಹಾಕಲಾಯಿತು. ಅದರಲ್ಲಿ ಜಿ .ಎಚ್ ಕೂಡ ಒಬ್ಬರು. ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದರು ಜಿ .ಎಚ್ ಆಗ. ಮನೆಯಲ್ಲಿ ಚಿಕ್ಕ ಮಕ್ಕಳು, ಓದುತ್ತಿದ್ದ ತಮ್ಮ ಹೀಗೆ ಹತ್ತು ಹಲವು ಸಮಸ್ಯೆಗಲಿದ್ದರು , ಜಿ .ಎಚ್ ಅವರಲ್ಲಿ ಹಾಸ್ಯಕ್ಕೆ ಬಡತನವಿರಲಿಲ್ಲ. ಮನೆಯಲ್ಲಿ ತಮ್ಮ ತಂದೆಯವರನ್ನು ಇದೆ ಸಮಯದಲ್ಲಿ ಕಳೆದುಕೊಂಡರು , ಅನೇಕ ಸಾವು ನೋವುಗಳು ಮನೆಯಲ್ಲಿ ಬಂದರು ನಗುವೇ ನನ್ನ ಬದುಕು ಎನ್ನುವಂತೆ ಬದುಕಿದರು.
ನಂತರ ೧೯೯೩ ರಲ್ಲಿ ನಾನು ಬಿ .ಎಸ್ಸಿ ಮುಗಿಸಿ ರಾಷ್ಟೀಯ ನಾಟಕ ಶಾಲೆಯನ್ನು ಸೇರಬೇಕು , ರಂಗಭೂಮಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಆಸೆಯಿಂದ ಜಿ .ಎಚ್ ಹತ್ತಿರ ಹೋದೆ. ಅವರಲ್ಲಿ ನಾನು ಏನ್ .ಎಸ್ .ಡಿ ಸೇರುವ ಆಸೆಯನ್ನು ವ್ಯಕ್ತಪಡಿಸಿದಾಗ “ಧನಂಜಯ ಸುಮ್ಮನ ನಾಟಕಾ …ಪಾತಕಾ ಅಂತ ತಲೀಗೆ ಹಚ್ಚಿಕೊಂಡು ನಿಮ್ಮ ಭವಿಷ್ಯ ಹಾಲು ಮಾಡ್ಕ ಬ್ಯಾಡ್ರಿ ….ಏನಾರ ಮುಂದ ಓದ್ರಿ …ಇಲ್ಲಾ ಅಂದ್ರ ಏನಾರ ಕೆಲಸಾ ಮಾಡ್ರಿ” ಎಂದು ಬಿಟ್ಟರು ….ಮೊದಲ ನಿರಾಶೆ ನನಗೆ ಕಾದಿತ್ತು. ಮುಂದೆ ಕೆಲವು ತಾಂತ್ರಿಕ ಕಾರಣಗಳಿಂದ ನಾನು ರಾಷ್ಟೀಯ ನಾಟಕ ಶಾಲೆಯನ್ನು ಸೇರಲು ಸಾಧ್ಯವಾಗಲಿಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಾಗ ಅದಕ್ಕೂ ಸಹ ಜಿ .ಎಚ್ “ಧನಂಜಯ ಪತ್ರಿಕೋದ್ಯಮ ಹೊಟ್ಟಿ ತುಂಬ್ಸುದುಲ್ಲ …ಬ್ಯಾರೆ ಏನಾರ ಮಾಡಬೇಕಿತ್ತು ನೀವು” ಎಂದರು. ಅಂದಿನ ದಿನಗಳೇ ಹಾಗಿದ್ದವು . ಜಿ .ಎಚ್ ನಮಗೆ ಹೇಳುತ್ತಿದ್ದರು. ನಾವು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರೆ ನಮ್ಮೆದುರಿಗಿರುವವರು ಅದು ಸರಿ …ಆದ್ರ ಹೊತ್ತಿಗೆ ಏನು ಮಾಡ್ತೀರಿ ಎಂದು ಕೇಳುತ್ತಿದ್ದರು . ಹೀಗಾಗಿ ಕೆಲವೊಂದು ಬಾರಿ ಜಿ .ಎಚ್ ಅವರಿಗೆ ಪತ್ರಿಕೋದ್ಯಮದ ಬಗ್ಗೆಯೂ ಕೂಡ ಆಸಕ್ತಿ ಕಳೆದು ಕೊಂಡಿದ್ದರು. ಆದರೆ ಬರವಣಿಗೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.
ಮುಂದೆ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಸಿಕ್ಕಿತು . ನಾಟಕದ ವಿಷಯದಲ್ಲಿ ಜಿ .ಎಚ್ ಅವರೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ನಂತರ ಈಗ ಪತ್ರಿಕೋದ್ಯಮದಲ್ಲಿ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ಆಗ ನಾನು ಧಾರವಾಡದಲ್ಲಿ ಒಂದು ಸಣ್ಣ ರೂಂ ಮಾಡಿಕೊಂಡಿದ್ದೆ. ನನ್ನ ತಂದೆಯವರಿಗೆ ರಾಣೆಬೆನ್ನೂರಿಗೆ ವರ್ಗವಾಗಿದ್ದರಿಂದ ನನ್ನ ತಂದೆ – ತಾಯಿ ರಾಣೆಬೆನ್ನೂರಿನಲ್ಲಿ ಇರುತ್ತಿದ್ದರು. ೧೯೯೪ ಡಿಸೆಂಬರ್ ೩೧ ರಂದು ನಾನು ಸಂಯುಕ್ತ ಕರ್ನಾಟಕದಲ್ಲಿ ನನ್ನ ಕಾಯಕವನ್ನು ಆರಂಭಿಸಿದೆ. ಬೆಳಿಗ್ಗೆ ೧೧ ಗಂಟೆಗೆ ಸಂಯುಕ್ತ ಕರ್ಣಾಟಕದ ಕಚೇರಿಗೆ ಹೋದಾಗ ಅಂದಿನ ಸಂಪಾದಕರಾದ ಏನ್ .ವಿ .ಜೋಶಿ ಅವರು ನನ್ನನ್ನು ಉಳಿದ ಸಹೋದ್ಯೋಗಿಗಳಿಗೆ ಪರಿಚಯ ಮಾಡಿಸುತ್ತಿದ್ದರು. ಜಿ .ಎಚ್ ಅವರನ್ನು ಪರಿಚಯ ಮಾಡಿಸುವಾಗ, ಏನ್ .ವಿ .ಜೋಷಿ ಅವರನ್ನು ತಡೆದು ಜಿ .ಎಚ್ ತಿರುಗಿ ನನ್ನನ್ನೇ ಅವರಿಗೆ ಪರಿಚಯ ಮಾಡಿಸಿದ ರೀತಿಯಿಂದ ಕಛೇರಿಯ ಎಲ್ಲಾ ಸಿಬ್ಬಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಇಂದಿಗೂ ನನಗೆ ನೆನಪಿದೆ. ಮಧ್ಯಾಹ್ನ ಉಟಕ್ಕೆ ಕರೆದುಕೊಂಡು ಹೋದಾಗ ತಾವು ಮನೆಯಿಂದ ತಂದ ಊಟದಲ್ಲಿ ನನಗು ಪಾಲು ಕೊಟ್ಟು ತಿನ್ನುತ್ತಿದ್ದುದು, ಕೆಲಸದ ಮಧ್ಯೆ ಚಹಾ ಕುಡಿಯಲು ನನ್ನನ್ನು ಮರೆಯದೆ ಕರೆದುಕೊಂಡು ಹೋಗುತ್ತಿದ್ದುದು ಗತಿಸಿ ಹೋದ ಸುಂದರ ನೆನಪುಗಳು.
ಹೀಗೆ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದೆ. ನನಗೆ ಕೆಲಸವೂ ಅತ್ಯಂತ ಅಗತ್ಯವಾಗಿತ್ತು ಅಂತೆಯೇ ವಿದ್ಯಾಭ್ಯಾಸವು ಕೂಡ. ಸಂಯುಕ್ತ ಕರ್ನಾಟಕದಲ್ಲಿ ನಾನು ಮೊದಲನೇ ಅಥವಾ ಎರಡನೇ ಪಾಳಿಯಲ್ಲಿ ಕೆಲಸ ಮಾಡಿದರೆ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಈ ಸಮಸ್ಯೆಯನ್ನು ಜಿ .ಎಚ್ ಹಾಗೂ ಗುರುರಾಜ ಜೋಶಿ ಅವರಲ್ಲಿ ತೋಡಿಕೊಂಡಾಗ ಅವರು ನನಗೆ ರಾತ್ರಿ ಪಾಳಿ ಕೆಲಸ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆ ಎಂದು, ತಾವೇ ಸ್ವತಃ ಸಂಪಾದಕರ ಹತ್ತಿರ ಈ ಕುರಿತು ಮಾತನಾಡುವುದಾಗಿ ಹೇಳಿದರು. ಅದರಂತೆ ನನಗೆ ರಾತ್ರಿ ಪಾಳಿ ಕೆಲಸ ಮಾಡುವ ಅವಕಾಶ ದೊರೆಯಿತು, ಅಂತೆಯೇ ಬೆಳಿಗ್ಗೆ ತರಗತಿಗಳನ್ನು ಹಾಜರಾಗಲು ಸಾಧ್ಯವಾಯಿತು. ನಾನು ಮೊತ್ತ ಮೊದಲದಿನ ರಾತ್ರಿ ಪಾಳಿ ಮುಗಿಸಿಕೊಂಡು ಎರಡನೇ ದಿನದ ಕೆಲಸಕ್ಕೆ ಬಂದಾಗ ಜಿ .ಎಚ್ ತಮ್ಮ ಎರಡನೇ ಪಾಳಿ ಮುಗಿಸಿಕೊಂಡು ಹೊರಡಲು ತಯಾರಾಗುತ್ತಿದ್ದರು. ನನ್ನನ್ನು ನೋಡಿದವರೇ “ಧನಂಜಯ ಹೆಂಗಿತ್ತ್ ನಿನ್ನೆ ಫಸ್ಟ ನೈಟ್?” ಎಂದಾಗ ಇಡೀ ಕಚೇರಿಯೇ ನಗುವಿನ ಕಡಲಲ್ಲಿ ತೇಲಿತ್ತು. ಇದು ಜಿ .ಎಚ್ ಅವರ ಹಾಸ್ಯ ಮನೋಭಾವಕ್ಕೆ ಒಂದು ಸಾಕ್ಷಿ.
ಮುಂದೆ ನಾನು ಸಂಯುಕ್ತ ಕರ್ನಾಟಕ ಬಿಟ್ಟು , ಪ್ರಜಾವಾಣಿ ಸೇರಿಕೊಂಡೆ . ಅಲ್ಲಿ ಕೆಲ ಕಾಲ ಕೆಲಸ ಮಾಡಿ ಪತ್ರಿಕೋದ್ಯಮ ತೊರೆದು ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಧುಮುಕಿದೆ. ಜಿ .ಎಚ್ . ತುಂಬಾ ಕುಷಿ ಪಟ್ಟರು . ಬರ ಬರುತ್ತಾ ಅವರ ಆರೋಗ್ಯವು ಕ್ಷೀಣಿಸುತ್ತಿತ್ತು . ಅವರ ಆರೋಗ್ಯ ಮೊದಲಿನಂತೆ ಉಳಿದಿಲ್ಲ ಎಂದು ಅವರ ತಮ್ಮ ನರಸಿಂಹ ಆಗಾಗ ಹೇಳುತ್ತಲೇ ಇದ್ದ. ನಾನು ಧಾರವಾಡಕ್ಕೆ ಹೋದಾಗೊಮ್ಮೆ ಅವರನ್ನು ಭೇಟಿಯಾಗಿ ಬರುತ್ತಿದ್ದೆ. ಅವರ ಆರೋಗ್ಯ ಕ್ಷೀನಿಸುತ್ತಿದ್ದುದು ನನ್ನ ಗಮನಕ್ಕೆ ಬಂದಿದ್ದರು ಅವರಲ್ಲಿ ಹಾಸ್ಯ ಪ್ರಜ್ಞೆ ಹಾಗೆಯೇ ಉಳಿದಿತ್ತು. ಬದುಕನ್ನು ಅಷ್ಟೇ ಗಾಢವಾಗಿ ಅವರು ಪ್ರೀತಿಸುತ್ತಿದ್ದರು. ಅದೊಂದು ದಿನ ನಾನು ಮತ್ತು ಯಶವಂತ ನನ್ನ ಬೆಂಗಳೂರಿನ ಮನೆಯಲ್ಲಿ ಕುಳಿತು ಉಭಯ ಕುಶಲೋಪರಿ ಮಾತನಾಡುತ್ತಿದ್ದಾಗ ಒಂದು ಆಘಾತಕಾರಿ ವಿಷಯವನ್ನು ಹೇಳಿದ “ಧನ್ಯಾ ಜಿ .ಎಚ್ ಕ್ಯಾನ್ಸರಿನ ಲಾಸ್ಟ್ ಸ್ಟೇಜಿನ್ಯಾಗಿದ್ದಾರ ….ಆಪರೆಶನ್ನಿಗಂತ ಬೆಂಗಳೂರಿಗೆ ಬರ್ಲಿಕತ್ಯಾರ…” ಈ ವಿಷಯವನ್ನು ಕೇಳಲು ನಾನು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ . ತೀರ ಖಿನ್ನನಾದೆ….
ಮುಂದೆ ಜಿ .ಎಚ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದರು . ನರಸಿಂಹನನ್ನು ಎರಡು ದಿನಗಳಿಗೊಮ್ಮೆ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದೆ . ಸ್ವಲ್ಪ ಮಟ್ಟಿನ ಗುಣಮುಕರಾದಮೇಲೆ ಜಿ .ಎಚ್ ತಿರುಗಿ ಹುಬ್ಬಳ್ಳಿಗೆ ಬಂದರು . ಅವರು ತೀರಿಕೊಳ್ಳುವುದಕ್ಕೆ ಎರಡು ತಿಂಗಳ ಮುಂಚೆ ನಾನು ನನ್ನ ಕಾರನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗಿದ್ದೆ . ಜಿ .ಎಚ್ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ ನನ್ನನ್ನು ಕಂಡು ಅವರಿಗಾದ ಆನಂದ ಅಷ್ಟಿಷ್ಟಲ್ಲ. ಅವರ ದೇಹ ಸ್ವಲ್ಪ ಕ್ಷೀಣಿಸಿತ್ತು … ಅದರ ಹೊರತಾಗಿ ಅವರಲ್ಲಿ ಮೊದಲಿದ್ದ ಹಾಸ್ಯದ ಹೊನಲಿಗೆ ಯಾವುದೇ ಬರ ಬಂದಿರಲಿಲ್ಲ . ಸುಮಾರು ಮೂರು ಗಂಟೆಗಳ ಕಾಲ ನಮ್ಮನ್ನು ಬಿಟ್ಟು ಬಿಡದೆ ನಗಿಸಿದರು . ನನ್ನ ಕಾರನ್ನು ಪದೇ ಪದೇ ಮುಟ್ಟಿನೋಡಿ ಬಹಳ ಆನಂದ ಪಟ್ಟರು . ಆದರೆ ಇದು ನನ್ನ ಹಾಗೂ ಜಿ .ಎಚ್ ಅವರ ಕೊನೆಯ ಭೇಟಿಯಾಗಲಿದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ಅವರು ತೀರಿಕೊಂಡ ದಿನ ನಾನು ಮಿರಜನಲ್ಲಿ ನನ್ನ ಸೋದರನ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದೆ . ನರಸಿಂಹ ನನ್ನನ್ನು ಸಂಪರ್ಕಿಸಲು ಬಹಳ ಪ್ರಯತ್ನಿಸಿದ …ಆದರೆ ಸಾಧ್ಯವಾಗಲಿಲ್ಲಿ …ಜಿ .ಎಚ್ ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿ …ತಾವು ಮಾತ್ರ ತಿರುಗಿ ಬರದ ದಾರಿಯಲ್ಲಿ ಸಾಗಿದ್ದರು ….
ಇಂದಿಗೂ ಕೂಡ ವಿದ್ಯಾರ್ಥಿ ಸಮುದಾಯದಲ್ಲಿ ಜಿ .ಎಚ್ ಅವರ ನಾಟಕಗಳಿಗೆ ವಿಶೇಷವಾದ ಸ್ಥಾನವಿದೆ . ಹುಬ್ಬಳ್ಳಿ -ಧಾರವಾಡದಲ್ಲಿ ೯೦ರ ದಶಕದಲ್ಲಿದ್ದ ರಂಗ ಚಟುವಟಿಕೆಯ ಹುರುಪು ಈಗ ಉಳಿದಿಲ್ಲ . ಈ ಕುರಿತು ನಾನು ನನ್ನ ಅನೇಕ ರಂಗ ಸಂಗಾತಿಗಲೋಮ್ದಿಗೆ ಚರ್ಚಿಸಿದ್ದೇನೆ ಕೂಡ . ನಾನು , ನರಸಿಂಹ , ಜಗುಚಂದ್ರ , ರವಿ , ಯಶವಂತ ಮುಂತಾದವರೆಲ್ಲ ಸೇರಿ ಜಿ .ಎಚ್ ಹೆಸರಿನಲ್ಲಿ ಪ್ರತಿ ವರ್ಷ ವಿಶಿಷ್ಟವಾದ ರೀತಿಯಲ್ಲಿ ನಾಟಕೋತ್ಸವವನ್ನು ನಡೆಸಬೇಕೆಂಬ ಮಹದಾಸೆ …ತನ್ಮೂಲಕ ಧಾರವಾಡದಲ್ಲಿ ಮತ್ತೆ ಹಳೆಯ ರಂಗ ವೈಭವ ಮರುಕಳಿಸಲು ಸಾಧ್ಯವಾದೀತೆಂಬ ಒಂದು ಸಣ್ಣ ಕನಸಷ್ಟೇ…..

1 ಟಿಪ್ಪಣಿ (+add yours?)

  1. prakashchandra
    ಡಿಸೆ 29, 2010 @ 14:38:51

    G.H.Raghavendra naavu kanda sajjana vyakthigalli obbaru. hubliyallin samyukta karnatakadalli avarondige kelasa maaduvaaga kiriyarondige avaru athmeeyavaagi bereyuthidda reethi indigoo namma manassinalli achaliyade ninthide. bengalurininda hoda namage avaru sphurtiya chilumeyagiddaru.avaru heluthidda jokes indoo naavu marethilla. avaru badukilla andre namage nambale aguthilla. a sajjanana athmakke shanti koruthene.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: