ಪ್ರೊ ಶಿವರಾಮಯ್ಯ ಬರೆಯುತ್ತಾರೆ :ಬಾ, ಹುಲಿಕಲ್ ನೆತ್ತಿಗೆ-2

-ಪ್ರೊ. ಶಿವರಾಮಯ್ಯ

ಮುಂದಿನ ಏಪ್ರಿಲ್-27ಕ್ಕೆ ನಾಟಕ ಪ್ರದರ್ಶನವೆಂದು ದಿನಾಂಕ ನಿಗದಿಯಾಗಿತ್ತು. ಇಡೀ ರಾತ್ರಿ ನಾಟಕವನ್ನು ನೋಡುವರಾರು? ಪ್ರೇಕ್ಷಕರು ಈ ಕಾಡಿನಲ್ಲಿ ಈ ಸೊಳ್ಳೆಯಲ್ಲಿ ಕೂತು ನಾಟಕ ನೋಡುವುದು ಸಾಧ್ಯವೇ? ಹೆಂಗಸರು ಮಕ್ಕಳು ಇಲ್ಲಿ ಬರುವುದು ಹೇಗಪ್ಪಾ? ಮುಂತಾದ ಪ್ರಶ್ನೆಗಳು ನಮಗೂ ಕಾಡಿದವು. ಆ ಎಲ್ಲ ಪ್ರಶ್ನೆಗಳಿಗೂ ಬಸು ಅವರ ಹತ್ತಿರ ರೆಡಿಮೇಡ್ ಪರಿಹಾರೋತ್ತರಗಳಿದ್ದವು; ನಾಟಕ ಮದುಮಗಳು ಇಡೀ ರಾತ್ರಿ ಇರುತ್ತೆ, ನೋಡುವ ಜನರಿದ್ದಾರೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಈ ಕೊರಕಲು ಕಾಡಿನಲ್ಲೆ ಪ್ರೇಕ್ಷರ ಗ್ಯಾಲರಿ ಆಗುತ್ತದೆ; ಸೊಳ್ಳೆ ಕಾಟಕ್ಕೆ ಸೊಳ್ಳೆ ನಿರೋಧಕ ತೈಲವನ್ನು ಸಪ್ಲೈ ಮಾಡಲಾಗುತ್ತೆ, ಹೊಗೆ ಬತ್ತಿ ಇರುತ್ತೆ, ಒಂದೂರಿನಿಂದ ಇನ್ನೊಂದೂರಿಗೆ ದಾರಿ ಬದಿಗೆ ಅಲ್ಲಲ್ಲಿ ಬೆಂಕಿ-ಬೆಳಕು ಸುಡಿಗೆ ಏರ್ಪಟ್ಟಿರುತ್ತೆ; ಸೊಳ್ಳೆಕಾಟ ಇನ್ನೂ ಇರುವುದಾದರೆ ಪ್ರೇಕ್ಷಕರ ಗ್ಯಾಲರಿಗೆಲ್ಲ ಸೊಳ್ಳೆ ಪರದೆಗಳನ್ನೇ ತಯಾರಿಸಿ ಇಳಿ ಬಿಡಿಸಲಾಗುತ್ತದೆ; ಪುಕ್ಕಲು ಜನರಾದರೆ ಮದುಮಗಳು ನಾಟಕ ನೋಡುವ ಅದೃಷ್ಟ ಎಲ್ಲಿಯದು?_ಹೀಗೆ ಅವರು ನಗುನಗುತ್ತಲೇ ಹೇಳುತ್ತಾ ನಡೆದರು.

ಕಡೆಯಲ್ಲಿ ಹೇಳಿದ ಇನ್ನೊಂದು ಆಘಾತಕರ ಸಂಗತಿ ಎಂದರೆ ಹುಲಿಕಲ್ ಗುಡ್ಡದ ನೆತ್ತಿಯಲ್ಲಿರುವ ಕಾವಲು ಮಂಟಪದಲ್ಲಿ ದೃಶ್ಯ ನಡೆಯುತ್ತಿರುವಾಗ ಪ್ರೇಕ್ಷಕರು ಅದಕ್ಕೂ ಎತ್ತರದ ಈ ಗಿಡ ಮರಗಳ ಅಟ್ಟಾಣೆಗಳಲ್ಲಿ ಕುಳಿತು ‘ಏರಿಯಲ್ ವ್ಯೂ’ನಲ್ಲಿ ನೋಡುತ್ತಾರೆ ಎಂದದ್ದು. ಆ ಕಲ್ಪನೆಗೆ ಆ ಹುಮ್ಮಸ್ಸಿಗೆ ದಿಗ್ ದಿಗಂತವೇ ರಂಗಭೂಮಿಯಾಗಿ ಮಾರ್ಪಾಡಾಗುತ್ತಿತ್ತು!  ನಾವು  ಮರು  ಮಾತಾಡದೆ ಆ ಕಿಂದರಿ ಜೋಗಿಯ ಹಿಂದೆ ಉರಿಬಿಸಿಲಿನಲ್ಲಿ ಕಾಲಾಕುತ್ತಿದ್ದೆವು!

ಪುನಃ ಫೆಬ್ರವರಿ ಮೊದಲವಾರದಲ್ಲಿ ರಂಗಾಯಣದಲ್ಲಿ ಕಲೆತೆವು. ಅಷ್ಟರಲ್ಲಿ ಬಸು ರಂಗಾಯಣದ ನುರಿತ ಕಲಾವಿದರೊಂದಿಗೆ, ಹೊಸದಾಗಿ 50 ಮಂದಿಯಷ್ಟು ಕಲಾವಿದರನ್ನು ಆಯ್ಕೆಮಾಡಿಕೊಂಡು ರಂಗತರಬೇತಿಗಾಗಿ ಸ್ಕ್ರಿಪ್ಟ್ ಕಾಯುತ್ತಿದ್ದರು. ಮದುಮಗಳು ಕಾದಂಬರಿ 64 ಆಧ್ಯಾಯಗಳ ಸು. 750 ಪುಟಗಳ ಬೃಹತ್ ಕೃತಿ. ಇಪ್ಪತ್ತನೇ ಶತಮಾನದ ಒಂದು ಮೇರುಕೃತಿ, ಇದನ್ನು ಒಂಭತ್ತು ಗಂಟೆಗಳ ಅವಧಿಯಲ್ಲಿ ರಂಗ ರೂಪಕ್ಕೆ ಇಳಿಸುವುದು ಸುಲಭದ ಮಾತಾಗಿರಲಿಲ್ಲ.

ನಾವು ಮೊದಲು ಕೈಗೊಂಡ ಕೆಲಸವೆಂದರೆ ಕಾದಂಬರಿಯಲ್ಲಿ ಕುವೆಂಪು ಅವರೇ ಬರೆದಿರುವ ಸಂಭಾಷಣಾ ಭಾಗವನ್ನು ಯಥಾವತ್ತಾಗಿ ಸಂಗ್ರಹಿಸಿದ್ದು. ಕೆವೈಎನ್ ಅಸೈನ್ಮೆಂಟ್ ವಹಿಸಿದ ಪ್ರಕಾರ, ನಾನು ಡಾ.ಎಂ.ಬೈರೇಗೌಡ ಮತ್ತು ರಂಗಾಯಣದ ಕಲಾವಿದರಲ್ಲಿ ಒಬ್ಬರಾದ ಕೃಷ್ಣ ಪ್ರಸಾದ್ ಮೂರು ಜನ ಈ ಕೆಲಸದಲ್ಲಿ ತೊಡಗಿಕೊಂಡೆವು. ಕ್ರಮವಾಗಿ ಮೊದಲ 22 ಅಧ್ಯಾಯಗಳನ್ನು ಕೃಷ್ಣಪ್ರಸಾದ್, ಅನಂತರದ 25 ಅಧ್ಯಾಯಗಳನ್ನು ಬೈರೇಗೌಡ, ಉಳಿದದಂತೆ ನನಗೆ ಹಂಚಿಯಾಯಿತು.

ಆಗ ಒಂದು ತಗಾದೆ ಶುರುವಾಯಿತು ಬಸವಲಿಂಗಯ್ಯನವರ ಉತ್ಸಾಹಕ್ಕೆ ತಣ್ಣೀರು ಎರಚುವ ಒಂದು ಪ್ರಸಂಗ, ಮೈಸೂರು ವಿಶ್ವವಿದ್ಯಾಲಯ ಮೊದಲು ಕುಕ್ಕರಹಳ್ಳಿ ಕೆರೆಯಂಚನ್ನು ಧಾರಾಳವಾಗಿ ನಾಟಕಕ್ಕೆ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದು ಆನಂತರ ಹಿಂಪಡೆದುಕೊಂಡಿತ್ತು. ರಾತ್ರಿ ವೇಳೆ ಪ್ರೇಕ್ಷಕರಿಗೆ ಹಾವೂ ಚೇಳಿನ ಕಾಟ, ಶಬ್ದ ಮತ್ತು ವಿದ್ಯುತ್ ಬೆಳಕಿಗೆ ಕುಕ್ಕರಹಳ್ಳಿಕೆರೆಯ ಪಕ್ಷಿ ಸಂಕುಲ ಹೆದರಬಹುದು ಇತ್ಯಾದಿ ಸಬೂಬು ನೀಡಿತು.

ಮುಂದುವರೆಯುವುದು….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: