ಗೆಳೆಯ ರಹಮತ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿದೆ. ಅದಕ್ಕೆ ಸಂತೋಷ ಪಟ್ಟ ಅವನ ಸಾವಿರಾರು ಗೆಳೆಯರಲ್ಲಿ ನಾನು ಒಬ್ಬ. ಸುದ್ದಿ ತಿಳಿಯುತ್ತಿದ್ದಂತೆ ದೂರವಾಣಿಯಲ್ಲಿ ಸಂಪರ್ಕಿಸಲು ದಿನವಿಡೀ ಪ್ರಯತ್ನಿಸಿದೆ. ಆದರೆ ವಿಫಲನಾದೆ. ಏನೋ ಬರೆಯುತ್ತಿರಬಹುದು ಅಂದುಕೊಂಡೆ. ರಹಮತ್ ನನ್ನು ಕಳೆದ ಸುಮಾರು ೩೦ ವರ್ಷಗಳಿಂದ ನಾನು ಬಲ್ಲೆ. ಶಿವಮೊಗ್ಗದಲ್ಲಿ ಇದ್ದ ಅವನ ಮನೆಗೆ ಹೋಗಿದ್ದೆ, ಕನ್ನಡ ವಿವಿಗೆ ಆತ ಬರುವಂತಾಗಲು ಶ್ರಮಿಸಿದವರಲ್ಲಿ ನಾನು ಒಬ್ಬ.
ಆತನ ಜೊತೆ ಕನ್ನಡ ವಿವಿಯಲ್ಲಿ ಕಳೆದ ಒಳ್ಳೆಯ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಧ್ಯಾಹ್ನದ ಬುತ್ತಿ ಊಟದಿಂದ ಆರಂಭವಾಗಿ ಪ್ರತಿಭಟನೆಯ ಸೂಚನೆಯಾಗಿ ಕಾರಿಗೆ ಅಡ್ಡ ಮಲಗುವ ವರೆಗೆ ನಾವು ಜೊತೆಯಾಗಿದ್ದೆವು. ಉತ್ತರ ಕರ್ನಾಟಕದಾದ್ಯಂತ ನಾನು ಮತ್ತು ಆತ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಆತನ ಮಗಳನ್ನು ನಾನು ‘ಸೊಸೆ ಮುದ್ದು’ ಅಂತಲೇ ಈಗಲೂ ಕರೆ ಯುವುದು. ಕಾರಣಾಂತರಗಳಿಂದ ಮುಂದೆ ನಾನು ದೆಹಲಿ ಸೇರಿದೆ. ಈ ಗೆಳೆಯ ಹಂಪಿಯಲ್ಲಿಯೇ ಉಳಿದು, ಕನ್ನಡದ ಮಣ್ಣಲ್ಲಿ ಆಳವಾಗಿ ತಳ ಊರಿ ಇದೀಗ ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಆತನ ಬೆಳವಣಿಗೆಯ ಎಲ್ಲ ಹಂತಗಳನ್ನು ಹತ್ತಿರದಿಂದ ನೋಡಿದ ನನಗೆ ಈಗ ಈ ಪ್ರಶಸ್ತಿಯ ಸುದ್ದಿ ಕೇಳಿ ಅಚ್ಚರಿಯಗಲಿಲ್ಲ, ನಾನದನ್ನು ನಿರೀಕ್ಷಿಸಿದ್ದೆ, ನಿರೀಕ್ಷೆ ಹುಸಿಯಾಗದ್ದಕ್ಕೆ ಸಹಜವಾಗಿ ಸಂತೋಷವಾಗಿದೆ.
ರಹಮತ್ ನ ಸಾಹಿತ್ಯದ ಬದ್ಧತೆ ವಿಶೇಷವಾದುದು. ಆತ ಸಾಹಿತ್ಯದ ಅನನ್ಯತೆಯನ್ನು ಮರೆಯುವುದಿಲ್ಲ, ಹಾಗೆಯೇ ಅದರ ಸಾಮಾಜಿಕ ಪ್ರಸ್ತುತತೆ ಮತ್ತು ಆವರಣವನ್ನು ಕೂಡಾ ಮರೆಯುವುದಿಲ್ಲ. ಹೀಗಾಗಿ ಆತನ ವಿಮರ್ಶೆಗೆ ಒಂದು ಬಗೆಯ ಲವಲವಿಕೆ ಪ್ರಾಪ್ತಿಸಿದೆ ಈ ಲವಲವಿಕೆಗೆ ಕನ್ನಡ ಸಂಸ್ಕೃತಿಯ ಹಲವು ಆಯಾಮಗಳನ್ನು ಜೋಡಿಸಬಲ್ಲ ಕ್ಷೇತ್ರ ಕಾರ್ಯದ ಶ್ರಮವು ಸೇರಿಕೊಂಡದ್ದರಿಂದ ರಹಮತ್ ಬರೆವಣಿಗೆಯು ಬಹಳ ವೇಗವಾಗಿ ಇತರರ ಬರೆಹಗಳಿಂದ ಬೇರೆಯಾಗುತ್ತಾ ಹೋಯಿತು. ಹೋರಾಟ, ಅಧ್ಯಯನ , ಕ್ಷೇತ್ರಕಾರ್ಯ ಮತ್ತು ಬರವಣಿಗೆಗಳನ್ನು ರಹಮತ್ ನ ಹಾಗೇ ಸಮದೂಗಿಸಿಕೊನ್ಡು ಹೋಗುತ್ತಿರುವವರು ಕನ್ನಡದಲ್ಲಿ ವಿರಳ.
ರಹಮತ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ , ಐಯ್ ಕೆ ಬೊಳುವಾರು , ಫಕೀರ್ ಮಹಮದ್ ಕಟ್ಪಾಡಿ, ಸಬಿಹಾ ಮೊದಲಾದ ಅನೇಕರು ಕಾರಣಾಂತರಗಳಿಂದ ನನಗೆ ಬಹಳ ಅಪ್ತರಾದವರು. ಹಿಂದೂ ಕೋಮುವಾದಿಗಳು ಹೇಳುವ ಮಾತುಗಳ ಹಿಂದಿನ ಹುಂಬ ತನಗಳನ್ನು ತಮ್ಮ ಬದುಕಿನ ರೀತಿಯಿಂದಲೇ ಬಯಲುಗೊಳಿಸುವ ಇವರೆಲ್ಲ ನಮ್ಮ ಕಾಲದ ಅತಿ ದೊಡ್ಡ ಶಕ್ತಿಗಳು.
ರಹಮತ್ ಗೆಳೆಯನಿಗೆ ಅಭಿನಂದನೆಗಳು, ಭಾನುವಿಗೂ ಸಹಾ.
ಇತ್ತೀಚಿನ ಟಿಪ್ಪಣಿಗಳು