ಜೋಗಿ ಬರೆಯುತ್ತಾರೆ: ಝೆನ್ನದಿಯ ಓದಿ

 

ನಮ್ಮ ಮುಂದೆ ಎರಡು ದಾರಿಗಳು:

ಇಹದ ದಾರಿಯೊಂದು, ಪರದ ದಾರಿಯೊಂದು. ಇಹಪರದ ನಡುವಿನ ದಾರಿ ಕವಿಗಳದು. ಅವರು ಸೇತುವೆ ಇದ್ದ ಹಾಗೆ. ನಿದ್ದೆಯಲ್ಲಿ ಒಮ್ಮೊಮ್ಮೆ ನಾವು ಎತ್ತರೆತ್ತರಕ್ಕೆ ಏರಿದಂತೆ ಭಾಸವಾಗುವ ಹಾಗೆ. ಏರಿದ್ದು ಭಾಸವಾಗದಿದ್ದರೂ ಬಿದ್ದದ್ದು ಅರಿವಾಗುವ ಹಾಗೆ. ಬಿದ್ದರೂ ಬಿದ್ದಿಲ್ಲ ಎಂಬ ಖುಷಿಯೊಂದು ಆದ್ಯಂತ ಪ್ರವಹಿಸುವ ಹಾಗೆ.

ಕವಿಯ ಮುಂದೆಯೂ ಎರಡು ದಾರಿಗಳು:

ಲೌಕಿಕದ್ದೊಂದು ಅಲೌಕಿಕದ್ದು ಮತ್ತೊಂದು. ಲೌಕಿಕದ ಹಾದಿಯ ತುದಿ ಎಲ್ಲಿ ಮುಗಿದು ಅಲೌಕಿಕದ ನಡೆ ಶುರುವಾಗುತ್ತದೆ ಎಂಬುದು ಓದುಗನಿಗೆ ಬಿಟ್ಟದ್ದು. ನಮ್ಮೊಳಗಿರುವ ಹಾದಿಯ ಜೊತೆ ಕವಿಯ ಕೂಡಿಕೊಳ್ಳುತ್ತದೆ. ಅಂಥ ಕೂಡು ಹಾದಿಯಲ್ಲಿ ನಿಲ್ಲಬೇಕಿದ್ದರೆ, ಆ ಜುಗಾರಿ ಕ್ರಾಸ್ ತಲುಪಬೇಕಿದ್ದರೆ ನಮ್ಮೊಳಗೂ ಒಂದು ಹಾದಿಯಿರಲೇಬೇಕು. ಬೆಳಕಿಲ್ಲದ ಹಾದಿಯೋ ಕನಸಿಲ್ಲದ ಹಾದಿಯೋ ಸವೆದ ಹಾದಿಯೋ ಸವೆಯದ ಹಾದಿಯೋ ಅನ್ನುವುದೆಲ್ಲ ನಂತರದ ಪ್ರಶ್ನೆ.

ಎಚ್ ಆರ್ ರಮೇಶ ಎಂಬ ಶುದ್ಧ ಕವಿ ಇದನ್ನೆಲ್ಲ ಹೇಳದೆಯೂ ಹೇಳುತ್ತಾನೆ. ಹಾಗೆ ಹೇಳುತ್ತಾ ಬೆಚ್ಚಿಬೀಳಿಸುತ್ತಾನೆ. ನಾನು ಮಡಿಕೇರಿಗೆ ಹೋದಾಗ ಅಲ್ಲಿನ ಅನೂಹ್ಯ ತಿರುವಿನಲ್ಲಿ ಧುತ್ತನೆ ಎದುರಾದ ರಮೇಶ ಮೂವತ್ತನಾಲ್ಕರ ತಾರುಣ್ಯ ಚಿಮ್ಮುವ ಹುಡುಗ. ಆಗಲೇ ಬೇರೆ ಥರ, ಬೇರೆ ಸ್ತರದಲ್ಲಿ ಬರೆಯಲು ಹೆಣಗುತ್ತಿದ್ದ. ಮಡಿಕೇರಿಯ ಕಾಲೇಜಿನಲ್ಲಿ ಪಾಠ ಮಾಡುತ್ತಾ ಅಲ್ಲಿಯ ಮಂಜುಮುಂಜಾವದಲ್ಲಿ ತನ್ನನ್ನು ಬೆಚ್ಚಗಿರಿಸಿಕೊಳ್ಳುತ್ತಿದ್ದ ರಮೇಶ ಚಿತ್ರದುರ್ಗದ ಹುಡುಗ. ಚಿತ್ರದುರ್ಗದ ಹುಡುಗರ ಬಗ್ಗೆ ನನಗೆ ವಿಚಿತ್ರ ಆಕರ್ಷಣೆ ಎಂದರೆ ತಪ್ಪು ತಿಳಿಯಬೇಕಿಲ್ಲ. ಅಲ್ಲಿಯ ಹುಡುಗರೆಲ್ಲ ಕವಿತೆ ಓದುತ್ತಾರೆ, ಜಗಳ ಕಾಯುತ್ತಾರೆ, ಯಾವುದೋ ಗೊತ್ತಿಲ್ಲದ ಪುಸ್ತಕ ಹುಡುಕಿಕೊಂಡು ಹೊರಡುತ್ತಾರೆ. ಕತೆ, ಕವಿತೆ ಮತ್ತು ಸಾಹಿತ್ಯ ತಮ್ಮೊಳಗೆ ನಿಜವಾಗುತ್ತದೆ ಎಂದು ನಂಬುತ್ತಾರೆ. ಕೋಟೆ ಕೊತ್ತಳ ಇದ್ದಲ್ಲೇ ಕೊಳವೂ ಇರುತ್ತದಂತೆ, ಸಂಪಿಗೆ ಮರ ಕೂಡ.

ತೇವನೆಲದಲ್ಲಿ ನಡೆದುಹೋಗಿರುವ ಗುರುತು ಪಾದವೇ ಆಗಿದೆ.

ಎಲ್ಲಿ ನಡೆಯುತಿಹುದೋ ತೇವದಲ್ಲಿ ಅಚ್ಚಾಗಿರುವ ಪಾದ.

ಎದೆಯೊಳಗೆ ಇಳಿದು ಚಲಿಸುತಿದೆ ಹೂಪಾದ

ಎದೆ ಬಡಿದಂತೆ ಅದು ನಡೆದಂತೆ ಪ್ರತಿಫಲಿಸುತ

ಇಡೀ ರೂಪವ.

ಎಲ್ಲೋ ನಡೆಯುತ್ತಿಲ್ಲ ನಡೆಯುತಿದೆ ಇಲ್ಲೆ.

ನಿಂತ ಮಳೆ ಮತ್ತೆ

ಅಳಿಯುತಿದೆ

ಕಂಡು

ಆಗಿ

ಇದು ರಮೇಶನ ಶೈಲಿ. ಪುಲಕಿತಗೊಳಿಸುವ ಸಾಲುಗಳು ಈ ಹುಡುಗನಿಗೆ ಅದೆಲ್ಲಿಂದ ದಕ್ಕಿದುವೋ. ನಡೆದುಹೋಗಿರುವ ಗುರುತು ಪಾದವಾಗಿದೆಯಂತೆ. ಆ ಪಾದ ಮತ್ತೆಲ್ಲಿ ನಡೆಯುತ್ತಿದೆಯೋ ಎಂದು ಈತನಿಗೆ ಕುತೂಹಲ. ಆ ಪಾದ ಎದೆಯೊಳಗೆ ಇಳಿದು ಚಲಿಸಿದಂತೆ ಕನಸು ಮತ್ತು ಆಶೆ.

ಅಷ್ಟು ಹೇಳುತ್ತಲೆ ರಮೇಶ ಮತ್ತೊಂದು ಚಪ್ಪಾಳೆ ತಟ್ಟಿ ಕುಣಿಯಬೇಕು ಅನ್ನಿಸುವಂಥ ಸಾಲು ಬರೆಯುತ್ತಾನ. ಎದೆ ಬಡಿದಂತೆ, ಅದು ನಡೆದಂತೆ. ಇಷ್ಟಾಗುವ ಹೊತ್ತಿಗೆ ನಿಂತ ಮಳೆ ಅಳಿಯುತಿದೆ. ನಿಲ್ಲದ ಮಳೆ?

ಕವಿತೆಯ ಭಾಷೆ ಮತ್ತು ನುಡಿಗಟ್ಟನ್ನು ಹುಡುಕುವುದು ಕಷ್ಟದ ಕೆಲಸ. ಕವಿಗೂ, ಓದುಗನಿಗೂ. ಗಂಗಾಧರ ಚಿತ್ತಾಲರು ಒಂದೇ ಸಾಲಲ್ಲಿ ಹೇಳಿಬಿಟ್ಟರು: ನನ್ನ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ. ಇದರಲ್ಲಿರುವ ಎರಡು ಪದ ಕೊಂಚ ಕಷ್ಟದ್ದು: ಮುಖೋದ್ಗತ, ಹೃದ್ಗತ. ಹಾಗಂತ ಅದನ್ನು ಕನ್ನಡದಲ್ಲಿ ಹೇಳಲು ಹೊರಟರೆ ರುಚಿ ಕೆಡುತ್ತದೆ. ಅರ್ಥವಾದಷ್ಟೇ ಅರ್ಥ.

ರಮೇಶ ಹಾಗೊಂದು ಹೊಸ ನುಡಿಗಟ್ಟನ್ನೂ ಎದೆಯ ಲಾವಣಿಯನ್ನು ತನ್ನದೇ ಆದೊಂದು ಭಾಷೆಯನ್ನು ಹುಡುಕಿಕೊಂಡು ಎಲ್ಲಿಗೋ ಹೊರಟವನಂತೆ ಕಾಣುತ್ತಾನೆ. ಅವನು ಹುಡುಕುತ್ತಿರುವುದು ಪದಗಳನ್ನಲ್ಲ, ಲಯವನ್ನು. ಕಾವ್ಯದ ಮೂಲ ಅದೇ. ಅಂಥದ್ದೊಂದು ಲಯ ದಕ್ಕಿಬಿಟ್ಟರೆ ಎಲ್ಲವೂ ಸಿದ್ಧಿಸಿದ ಹಾಗೆ ಅನ್ನುವುದು ಅವನಿಗೂ ಗೊತ್ತು. ಗೋಪಾಲಕೃಷ್ಣ ಅಡಿಗರಿಗೊಂದು ಲಯ ದಕ್ಕಿತ್ತು ನೋಡಿ:

ಮೊರಗಿವಿಯ ಭಾರಕ್ಕೆ ಸೊರಗಿವಿ

ಘ್ನೇಶ್ವರ ಕಡುಬಿನಟ್ಟಕ್ಕಿಳಿದು ಕುಳಿತುಬಿಟ್ಟ.

ವಾಲಿಯೂಟದ ತಟ್ಟೆ ತಾರೆ

ಟಣಟಣ ಚಿಮ್ಮಿ ಸೇರಿದಳು ಸುಗ್ರೀವನಡುಗೆ ಮನೆಗೆ.

ಕಲಾವಿದನಿಗೆ ಕುಂಚದ ಒಂದು ಬೀಸು, ನಟನಿಗೆ ಸಹಜ ಭಂಗಿ, ಗಾಯಕನಿಗೆ ಮಂದ್ರತಾರಕದ ಸಮಶ್ರುತಿ, ಸೈಕಲ್ ಕಲಿಯುವ ಪುಟ್ಟ ಹುಡುಗನಿಗೆ ಮೈಗೂ ಸೈಕಲ್ಲಿಗೂ ಹೊಂದಿಕೆಯಾಗುವ ಒಂದು ಸಮಸ್ಥಿತಿ ಸಿಕ್ಕುವ ಹಾಗೆ, ಅಂಥದ್ದೊಂದು ಸಿಕ್ಕಿದೊಡನೆ ಅವರಲ್ಲ ವಿಜೃಂಭಿಸುವ ಹಾಗೆ ಕವಿ ಕೂಡ. ಲಯವೊಂದು ದಕ್ಕಿದರೆ ಅವನ ಹಾದಿ ಸುಗಮ. ಅರ್ಥವನ್ನು ಆವಾಹಿಸಿಕೊಳ್ಳುವುದು ಅಂಥ ಕಷ್ಟದ ಕೆಲಸ ಏನಲ್ಲ. ತೆರೆದಿಟ್ಟ ಬದುಕೇ ಅರ್ಥಕ್ಕೆ ತಕ್ಕ ಅನರ್ಥಗಳನ್ನು ದಯಪಾಲಿಸುತ್ತಾ ಹೋಗುತ್ತದೆ.

ರಮೇಶ ಬೆಚ್ಚಿಬೀಳಿಸುವುದಕ್ಕೆ ಬರೆಯುತ್ತಾನೆ ಎಂಬ ಗುಮಾನಿಯಲ್ಲೇ ಓದಿದೆ. ಅದು ಅವನ ಸಹಜ ನಿರಾಳ ಶೈಲಿ ಎಂಬುದು ನಂತರ ಹೊಳೆಯುತ್ತಾ ಹೋಯಿತು. ಅದು ಮಾಂತ್ರಿಕ ವಾಸ್ತವತೆಯೂ ಅಲ್ಲ. ಕಥನಕ್ಕೆ ಮ್ಯಾಜಿಕ್ ರಿಯಲಿಸಮ್ ಶಕ್ತಿ. ಕಾವ್ಯವೆಂಬುದೇ ಮ್ಯಾಜಿಕ್ ರಿಯಲಿಸಮ್. ವಾಸ್ತವ ಇಲ್ಲ, ನೆಪ ಮಾತ್ರ ಎದುರು. ಹಂಸ ಸರೋವರದಲಿ, ಅದರ ಬಿಂಬ ಜಿರಾಫೆ ಕನಸಿನಲಿ’ ಎಂಬ ಸಾಲು ಓದಿ ಹಂಸಕ್ಕೂ ಜಿರಾಫೆಗೂ ಏನು ಸಂಬಂಧ ಹುಡುಕಬಹುದು ಎಂದು ಯೋಚಿಸುತ್ತ ಕೂತೆ. ಕವಿಯಷ್ಟೇ ಅವರೆಡನ್ನೂ ಒಟ್ಟಿಗೆ ತರಬಲ್ಲ, ರಮೇಶನಂಥ ಕವಿ.

ಆಕಾಶವ ಚಿಗುರಿಸುತಿದೆ ವೃಕ್ಷ. ಆಕಾಶವನಷ್ಟೇ ಚಿಗುರಿಸುತಿದೆಯೇ ವೃಕ್ಷ.

ಹರಿಯುತಿದೆ ನೀರು. ಮೀನೂ. ಮೀನೇ ಹರಿಸುತಿದೆ ನೀರ.

ಉದುರುವ ಎಲೆ ಒಣ ಎಲೆ ಮಳೆ

ಎಲೆ ಉದುರೋ ಮಳೆ ತಪಸ್ಸು ಮಾಡಿ ಎದ್ದು ನಡೆದಂತೆ

ನಿಂತಿವೆ ಮರ.’

ಇದು ಎಲ್ಲರೂ ನಡೆಯಬಲ್ಲ ದಾರಿಯಲ್ಲ. ಇಂಥದ್ದೆ ಕವಿತೆ ಬರೆಯತ್ತೇನೆ ಅಂತ ಇನ್ನೊಬ್ಬ ಕವಿ ಯತ್ನಿಸಿದರೆ ನರಕ. ಒಬ್ಬೊಬ್ಬ ಕವಿಯೂ ತಾನೇ ತಾನಾಗಿ ಕಂಡುಕೊಳ್ಳಬೇಕಾದ, ಕಂಡುಕೊಳ್ಳಬಹುದಾದ ಮಾರ್ಗ ಇದು. ರಮೇಶನಿಗೆ ಈ ಮಾರ್ಗ ದಕ್ಕಿದೆ. ಇಲ್ಲಿನ ಅನೂಹ್ಯದಲ್ಲಿ, ಅಸ್ಪಷ್ಟತೆಯಲ್ಲಿ, ಒಳಗನ್ನು ಹೊರಗೂ ಹೊರಗನ್ನು ಒಳಗೂ ಮಾಡುವ ಚಂದದಲ್ಲಿ ಹಾಗೇ ಮಾಡಲೇಬೇಕೆಂಬ ಹಟದಲ್ಲಿ ಮುಗ್ಧತೆಯಿದೆ. ಕವಿಗೆ ಮುಗ್ಧತೆ ಅಪಾಯಕಾರಿ, ಕವಿಯ ಮುಗ್ಧತೆ ಕೂಡ.

ಸುರೇಂದ್ರನಾಥ ಮಿಣಜಗಿ ಎಂಬ ಹಿರಿಯ ವಿಮರ್ಶಕರು ಮೊನ್ನೆ ಮಾತಾಡುತ್ತಾ ಆಡಿದ ಒಂದೆರಡು ಮಾತು ಇದರ ಜೊತೆಜೊತೆಗೇ ನೆನಪಾಗುತ್ತಿದೆ. ದೈವತ್ವದಿಂದ ಕಾವ್ಯ ಮನುಷ್ಯತ್ವಕ್ಕೆ ಇಳಿಯಿತು ಎನ್ನುತ್ತಾ ಅವರು ಕಂಬಾರ, ಬೇಂದ್ರೆ ಮುಂತಾದವರ ಕವಿತೆಗಳಲ್ಲಿ ದೈವತ್ವವೂ ಇದೆ ಎಂದರು. ಇಲ್ಲಿ ದೈವತ್ವವನ್ನು ಆಸ್ತಿಕತೆ,ಢಾಂಬಿಕತೆ, ಭಕ್ತಿ ಎಂದು ಅರ್ಥೈಸಿಕೊಳ್ಳಕೂಡದು. ಅದು ತನ್ನ ಮೇಲಿನ ಅಗಾಧ ಶ್ರದ್ಧೆ ಕೂಡ ಆಗಿರಬಹುದು. ಆನಂತರದ ಕೆಲವು ಕವಿಗಳು ಅವೆರಡನ್ನೂ ಕಳಕೊಂಡು ಪಶುತ್ವದತ್ತ ಜಾರಿದರು ಎಂದೂ ಮಿಣಜಗಿ ಬೇಸರ ಮಾಡಿಕೊಂಡರು. ಹಾಗೆ ಮಾತಾಡುತ್ತಾ ಆಡುತ್ತಾ ಅವರು ಆಡಿದ ಒಂದು ಮಾತು ಅಲ್ಲಿದ್ದ ಎಲ್ಲರನ್ನೂ ಕಲಕಿತು: ನಾವು ಮಾಡಿದ ಪುಣ್ಯ ಎಂದರೆ ನಮ್ಮ ಮಕ್ಕಳಿಗಿಂತ ಮೊದಲು ನಾವು ಹುಟ್ಟಿದ್ದು’.

ಅವರು ಹಾಗೆ ಹೇಳುತ್ತಿದ್ದಂತೆ ನಾವೆಲ್ಲ ಸುಮ್ಮನೆ ಕೂತೆವು. ಯಾಕೋ ತುಂಬ ಕಳವಳವಾಯಿತು. ಮಿಣಜಗಿಯವರು ಕೂಡ ಯಾವುದೋ ನೆನಪು ಜಗ್ಗಿದವರಂತೆ ಅರೆಕ್ಷಣ ಸುಮ್ಮನುಳಿದರು. ಅವರ ಕಣ್ಣೂ ಕಲಕಿದಂತಿತ್ತು.

ವೈಶಾಖದ ದಿನಗಳು, ಮರಗಳಲಿ ಬೆಂಕಿಹೂವು ಎಂದು ಬರೆಯುವ ರಮೇಶ, ಸಾಲುಸಾಲು ಇರುವೆ ತೇಲುತಿಹುದು ಬಿಸಿಲನದಿಯಲಿ ಎಂದೂ ಬರೆಯಬಲ್ಲ. ಕವಿಗೆ ಬೆಳಕಿನ ದಾಹ, ಬೆಳದಿಂಗಳ ಮೋಹ, ನಮ್ಮಲ್ಲರ ಹಾಗೆ. ನನ್ನ ವಯಸ್ಸಿಗೆ ನಿಲುಕುವ ಮತ್ತು ಬೇಕೇ ಬೇಕಾದ ವಿಷಾದ ಈ ಹುಡುಗನ ಕವಿತೆಗಳಲ್ಲಿ ಸಿಗುತ್ತದೇನೋ ಎಂದು ಹುಡುಕಿ ಸೋತೆ. ಅವು ಹಾಗೇ ಇರಬೇಕು, ಮೂವತ್ತು ದಾಟಿದ ನಲವತ್ತು ತಲುಪದ ಪದ್ಯ.

ಒಂದೇ ಉಸುರಿಗೆ ಓದಿ, ಅಲ್ಲಲ್ಲಿ ನಿಂತು ಸಾಗಿ ಥಟ್ಟನೆ ಬರೆಯಬೇಕು ಅನ್ನಿಸಿ ಬರೆದಿದ್ದೇನೆ. ಮತ್ತೊಮ್ಮೆ ಓದಿದರೆ ಎಲ್ಲಿ ಅವು ಮುಕ್ಕಾಗುತ್ತವೋ ನಶ್ವರ ಎನ್ನಿಸುತ್ತವೋ ಎಂಬ ಭಯವಂತೂ ಇದೆ. ನನ್ನ ಭಯವನ್ನು ಅವು ಸುಳ್ಳಾಗಿಸಲಿ ಎಂಬುದು ಈ ಕ್ಷಣದ ಆಶೆ.

 

 

5 ಟಿಪ್ಪಣಿಗಳು (+add yours?)

 1. Veerendra
  ಡಿಸೆ 20, 2010 @ 12:51:50

  tumba channeagi Baredeedera. Tumbu Hrudayada Vandenegalu

  ಉತ್ತರ

 2. Ahalya Ballal
  ಡಿಸೆ 19, 2010 @ 07:35:09

  !!

  ಉತ್ತರ

 3. ಆನಂದ ಕೋಡಿಂಬಳ
  ಡಿಸೆ 18, 2010 @ 23:41:25

  ಗೆಳೆಯ ರಮೇಶ್ ಕವಿತೆಯ ಹೊಸ ಲಯದ ಜಾಡು ಹುಡುಕುವ ಕವಿ. ತನ್ನ ಕವಿತೆಗಳಲ್ಲಿ ಆತನಿಗೆ ಪದಗಳ ಹಂಗು ಇಲ್ಲ. ಜೋಗಿಯವರು ಅವನನ್ನು ಸರಿಯಾಗಿಯೇ ಗುರುತಿಸಿದ್ದಾರೆ ಜೋಗಿಯವರಿಗೆ ಧನ್ಯವಾದಗಳು. ರಮೇಶ್ ಬಹಳ ಬೇಗನೆ ಮೂರನೆಯ ಕವನ ಸಂಕಲನ ಹೊರತಂದಿದ್ದಾನೆ ಎಂದು ಅನ್ನಿಸದಷ್ಟು ಹೊಸತನ್ನು, ಮೆಚುರಿಟಿಯನ್ನು ಪಡೆದಿದ್ದಾನೆ. ಈ ಫ್ರೆಶ್ ನೆಸ್ ಕವಿಗೆ ತುಂಬ ಮುಖ್ಯ. ಕನ್ನಡ ಕವಿತೆ ಇಂಥ ಸಹಜ ಕವಿಗಳಿಂದ ಬಹಳ ನಿರೀಕ್ಷಿಸುತ್ತದೆ. ನಡೆವವರ ಹಾದಿಗೆ ನಮನಗಳು. ರಮೇಶ್ ಗೆ ಶುಭಾಶಯಗಳು.

  ಉತ್ತರ

 4. Nataraja
  ಡಿಸೆ 18, 2010 @ 15:42:40

  ನನಗೆ ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಕಲಿಸುತ್ತಿದ್ದ ರಮೇಶ್ ಸರ್ ಕುರಿತಾಗಿ ಹಾಗು ದುರ್ಗದ ಹುಡುಗರ ಕುರಿತಾಗಿ ಒಂದೆರಡು ಒಳ್ಳೆಯ ಮಾತು ಬರೆದಿರುವ ಜೋಗಿಯವರಿಗೆ ಅಷ್ಟೇ ಪ್ರೀತಿಯ ಧನ್ಯವಾದಗಳು.
  ಕವಿತೆ ಎಂಬುದೊಂದು ನಿಟ್ಟುಸಿರು ಎಂದು ನೀವೊಮ್ಮ ಹೇಳಿದ್ದ ಮಾತು ನನಗೆ ಎಂದೂ ನೆನಪಿರುವಂಥದ್ದು.

  ಉತ್ತರ

 5. kanam
  ಡಿಸೆ 18, 2010 @ 12:08:22

  jogiyavaru parada daari emba pada balasiddaare. adara moolaka tamma vichaara mandisalu daari kandukondiddare. idu pada balakeya koushalavaaguttadeye horatu nammannu yelligu karedoyyuvudilla. ihadalliye naavu kandukollabekaada daari iruvaaga parada maataadi daaritappisuva hunnaarakke jogiyavaru kai haakiddaare. avaru ondu mata
  praarambisuvudu olleyadu.
  kanam

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: