ಇಹದ ದಾರಿಯೊಂದು, ಪರದ ದಾರಿಯೊಂದು. ಇಹಪರದ ನಡುವಿನ ದಾರಿ ಕವಿಗಳದು. ಅವರು ಸೇತುವೆ ಇದ್ದ ಹಾಗೆ. ನಿದ್ದೆಯಲ್ಲಿ ಒಮ್ಮೊಮ್ಮೆ ನಾವು ಎತ್ತರೆತ್ತರಕ್ಕೆ ಏರಿದಂತೆ ಭಾಸವಾಗುವ ಹಾಗೆ. ಏರಿದ್ದು ಭಾಸವಾಗದಿದ್ದರೂ ಬಿದ್ದದ್ದು ಅರಿವಾಗುವ ಹಾಗೆ. ಬಿದ್ದರೂ ಬಿದ್ದಿಲ್ಲ ಎಂಬ ಖುಷಿಯೊಂದು ಆದ್ಯಂತ ಪ್ರವಹಿಸುವ ಹಾಗೆ.
ಕವಿಯ ಮುಂದೆಯೂ ಎರಡು ದಾರಿಗಳು:
ಲೌಕಿಕದ್ದೊಂದು ಅಲೌಕಿಕದ್ದು ಮತ್ತೊಂದು. ಲೌಕಿಕದ ಹಾದಿಯ ತುದಿ ಎಲ್ಲಿ ಮುಗಿದು ಅಲೌಕಿಕದ ನಡೆ ಶುರುವಾಗುತ್ತದೆ ಎಂಬುದು ಓದುಗನಿಗೆ ಬಿಟ್ಟದ್ದು. ನಮ್ಮೊಳಗಿರುವ ಹಾದಿಯ ಜೊತೆ ಕವಿಯ ಕೂಡಿಕೊಳ್ಳುತ್ತದೆ. ಅಂಥ ಕೂಡು ಹಾದಿಯಲ್ಲಿ ನಿಲ್ಲಬೇಕಿದ್ದರೆ, ಆ ಜುಗಾರಿ ಕ್ರಾಸ್ ತಲುಪಬೇಕಿದ್ದರೆ ನಮ್ಮೊಳಗೂ ಒಂದು ಹಾದಿಯಿರಲೇಬೇಕು. ಬೆಳಕಿಲ್ಲದ ಹಾದಿಯೋ ಕನಸಿಲ್ಲದ ಹಾದಿಯೋ ಸವೆದ ಹಾದಿಯೋ ಸವೆಯದ ಹಾದಿಯೋ ಅನ್ನುವುದೆಲ್ಲ ನಂತರದ ಪ್ರಶ್ನೆ.
ಎಚ್ ಆರ್ ರಮೇಶ ಎಂಬ ಶುದ್ಧ ಕವಿ ಇದನ್ನೆಲ್ಲ ಹೇಳದೆಯೂ ಹೇಳುತ್ತಾನೆ. ಹಾಗೆ ಹೇಳುತ್ತಾ ಬೆಚ್ಚಿಬೀಳಿಸುತ್ತಾನೆ. ನಾನು ಮಡಿಕೇರಿಗೆ ಹೋದಾಗ ಅಲ್ಲಿನ ಅನೂಹ್ಯ ತಿರುವಿನಲ್ಲಿ ಧುತ್ತನೆ ಎದುರಾದ ರಮೇಶ ಮೂವತ್ತನಾಲ್ಕರ ತಾರುಣ್ಯ ಚಿಮ್ಮುವ ಹುಡುಗ. ಆಗಲೇ ಬೇರೆ ಥರ, ಬೇರೆ ಸ್ತರದಲ್ಲಿ ಬರೆಯಲು ಹೆಣಗುತ್ತಿದ್ದ. ಮಡಿಕೇರಿಯ ಕಾಲೇಜಿನಲ್ಲಿ ಪಾಠ ಮಾಡುತ್ತಾ ಅಲ್ಲಿಯ ಮಂಜುಮುಂಜಾವದಲ್ಲಿ ತನ್ನನ್ನು ಬೆಚ್ಚಗಿರಿಸಿಕೊಳ್ಳುತ್ತಿದ್ದ ರಮೇಶ ಚಿತ್ರದುರ್ಗದ ಹುಡುಗ. ಚಿತ್ರದುರ್ಗದ ಹುಡುಗರ ಬಗ್ಗೆ ನನಗೆ ವಿಚಿತ್ರ ಆಕರ್ಷಣೆ ಎಂದರೆ ತಪ್ಪು ತಿಳಿಯಬೇಕಿಲ್ಲ. ಅಲ್ಲಿಯ ಹುಡುಗರೆಲ್ಲ ಕವಿತೆ ಓದುತ್ತಾರೆ, ಜಗಳ ಕಾಯುತ್ತಾರೆ, ಯಾವುದೋ ಗೊತ್ತಿಲ್ಲದ ಪುಸ್ತಕ ಹುಡುಕಿಕೊಂಡು ಹೊರಡುತ್ತಾರೆ. ಕತೆ, ಕವಿತೆ ಮತ್ತು ಸಾಹಿತ್ಯ ತಮ್ಮೊಳಗೆ ನಿಜವಾಗುತ್ತದೆ ಎಂದು ನಂಬುತ್ತಾರೆ. ಕೋಟೆ ಕೊತ್ತಳ ಇದ್ದಲ್ಲೇ ಕೊಳವೂ ಇರುತ್ತದಂತೆ, ಸಂಪಿಗೆ ಮರ ಕೂಡ.
ಇತ್ತೀಚಿನ ಟಿಪ್ಪಣಿಗಳು