ಸ್ಪಾಮ್ ಎಂಬ ಇಮೇಲ್ ಕಸ…

ಇ – ಜ್ಞಾನ

ಈಚೆಗೆ ಅಮೆರಿಕಾದ ಎಫ್‌ಬಿಐ ರಷ್ಯಾದ ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಓಲೆಗ್ ನಿಕೋಲ್ಯಾಂಕೋ ಎಂಬ ಇಪ್ಪತ್ತಮೂರು ವರ್ಷದ ಈ ಯುವಕನ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾದರೆ ಕನಿಷ್ಟ ಮೂರು ವರ್ಷ ಜೈಲುಶಿಕ್ಷೆಯ ಜೊತೆಗೆ ಎರಡೂವರೆ ಲಕ್ಷ ಡಾಲರುಗಳಷ್ಟು ದಂಡವನ್ನೂ ತೆರಬೇಕಾಗುತ್ತದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ.

ಈತ ಎಲ್ಲೂ ಬಾಂಬ್ ಸಿಡಿಸಿಲ್ಲ, ಅಥವಾ ಇನ್ನಾವುದೇ ರೂಪದ ಭಯೋತ್ಪಾದನೆ ಮಾಡಿಲ್ಲ; ಆತನ ಮೇಲಿರುವುದು ಇಮೇಲ್ ಮೂಲಕ ಕೋಟಿಗಟ್ಟಲೆ ರದ್ದಿ ಸಂದೇಶಗಳನ್ನು ಕಳಿಸಿ ಜನರನ್ನು ವಂಚಿಸಿದ, ಹಾಗೂ ಆ ಮೂಲಕ ಅಂತರಜಾಲದ ದುರ್ಬಳಕೆ ಮಾಡಿಕೊಂಡ ಆರೋಪ. ಒಂದು ಸಮಯದಲ್ಲಿ ಅಂತರಜಾಲದ ಮೂಲಕ ಹರಿದಾಡುತ್ತಿದ್ದ ಇಮೇಲ್ ರದ್ದಿ ಸಂದೇಶಗಳಲ್ಲಿ ಮೂರನೇ ಒಂದರಷ್ಟಕ್ಕೆ ಈತನೇ ಕಾರಣನಾಗಿದ್ದನಂತೆ!

ಸ್ಪಾಮ್ ಬಂತು ಸ್ಪಾಮ್

ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಇಂತಹ ರದ್ದಿ ಸಂದೇಶಗಳ ಹೆಸರೇ ಸ್ಪಾಮ್.

ಲೈಂಗಿಕ ಶಕ್ತಿ ಹೆಚ್ಚಿಸುವ ಮಾಯಾ ಔಷಧಿ, ರೋಲೆಕ್ಸ್‌ನಂತೆಯೇ ಕಾಣುವ ನಕಲಿ ಕೈಗಡಿಯಾರ, ಸಾವಿರದೊಂದು ಬಗೆಯ ಹೊಸರುಚಿ ಕಲಿಸಿಕೊಡುವ ಸಿ.ಡಿ., ಸುಲಭವಾಗಿ ದುಡ್ಡುಮಾಡುವ ವಿಧಾನ ಮೊದಲಾದ ವಿವಿಧ ಬಗೆಯ ಜಾಹೀರಾತುಗಳನ್ನು ನಾವು ಸ್ಪಾಮ್ ಸಂದೇಶಗಳಲ್ಲಿ ಕಾಣಬಹುದು. ವೈದ್ಯರ ಸಲಹೆಯಿಲ್ಲದೆ ಮಾರಾಟ ಮಾಡಬಾರದಾದ ಔಷಧಗಳನ್ನು (ಪ್ರಿಸ್ಕ್ರಿಪ್ಷನ್ ಡ್ರಗ್ಸ್) ಅನಧಿಕೃತವಾಗಿ ಮಾರುವವರ ದಂಧೆಗಂತೂ ಸ್ಪಾಮ್ ಸಂದೇಶಗಳೇ ಜೀವಾಳ.

ಭಾರೀ ಮೊತ್ತದ ಹಣದ ಆಮಿಷ ಒಡ್ಡಿ ಜನರನ್ನು ವಂಚಿಸುವವರು ಕೂಡ ಸ್ಪಾಮ್ ಸಂದೇಶಗಳನ್ನೇ ಬಳಸುತ್ತಾರೆ. ನನ್ನ ಬಳಿ ಅದೆಷ್ಟೋ ಲಕ್ಷ ಡಾಲರ್‌ಗಳಷ್ಟು ಕಪ್ಪು ಹಣ ಇದೆ; ಅದನ್ನು ನನ್ನ ದೇಶದಿಂದ ಹೊರಕ್ಕೆ ತರಲು ಸಹಾಯ ಮಾಡಿದರೆ ನಿನಗೆ ಅದರಲ್ಲಿ ಅರ್ಧಪಾಲು ಕೊಡುತ್ತೇನೆ ಎಂದೋ, ನಿನಗೆ ನಮ್ಮ ಸಂಸ್ಥೆ ನಡೆಸುವ ಲಾಟರಿಯಲ್ಲಿ ಲಕ್ಷಾಂತರ ಡಾಲರುಗಳ ಬಹುಮಾನ ಬಂದಿದೆ ಎಂದೋ ಅಥವಾ ನಿನಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದೋ ಹೇಳುವ ಸ್ಪಾಮ್ ಸಂದೇಶಗಳು ಇಂತಹ ವಂಚನೆಗಳಿಗೆ ನಾಂದಿಹಾಡುತ್ತವೆ.

ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಫಿಶಿಂಗ್ ಹಗರಣದಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ಸಾಕಷ್ಟು ನೈಜವಾಗಿಯೇ ತೋರುವ ಈ ಸಂದೇಶಗಳು ಸಾಮಾನ್ಯವಾಗಿ ಬೇರೆಬೇರೆ ಬ್ಯಾಂಕುಗಳ ಹೆಸರಿನಲ್ಲಿ ಆಗಿಂದಾಗ್ಗೆ ಬರುತ್ತಿರುತ್ತವೆ. ಬ್ಯಾಂಕಿನ ಹೆಸರು ಹೇಳಿ ನಂಬಿಸಿ ಬ್ಯಾಂಕ್ ಖಾತೆಯ ಅಥವಾ ಕ್ರೆಡಿಟ್ ಕಾರ್ಡಿನ ವಿವರಗಳನ್ನು ಕದಿಯುವುದು ಇಂತಹ ನಕಲಿ ಸಂದೇಶಗಳ ಉದ್ದೇಶವಾಗಿರುತ್ತದೆ. ಇದೇ ರೀತಿಯಲ್ಲಿ ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಬಾಟ್ ಮತ್ತು ಬಾಟ್‌ನೆಟ್

ವಿಶ್ವದಾದ್ಯಂತ ಹರಿದಾಡುವ ಸ್ಪಾಮ್ ಸಂದೇಶಗಳಲ್ಲಿ ದೊಡ್ಡ ಪಾಲು ನಮ್ಮನಿಮ್ಮಂಥ ಸಾಮಾನ್ಯ ಬಳಕೆದಾರರ ಗಣಕಗಳಿಂದ ಬರುತ್ತಿದೆಯಂತೆ. ಗೂಢಚಾರಿ ತಂತ್ರಾಂಶಗಳ ಮೂಲಕ ಈ ಗಣಕಗಳನ್ನು ‘ಹೈಜಾಕ್’ ಮಾಡುವ ಹ್ಯಾಕರ್‌ಗಳು ಅವನ್ನು ಸ್ಪಾಮ್ ಸಂದೇಶಗಳ ರವಾನೆಗಾಗಿ ಬಳಸುತ್ತಾರೆ.

ಯಾವುದೋ ಉಪಯುಕ್ತ ತಂತ್ರಾಂಶದ ಸೋಗಿನಲ್ಲಿ ಗಣಕವನ್ನು ಪ್ರವೇಶಿಸುವ ಇಂತಹ ತಂತ್ರಾಂಶ ಗಣಕದ ಕಾರ್ಯಾಚರಣ ವ್ಯವಸ್ಥೆಗೆ ಅಂಟಿಕೊಳ್ಳುತ್ತದೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಈ ತಂತ್ರಾಂಶ ಸಕ್ರಿಯವಾಗುತ್ತದೆ; ಸ್ವಇಚ್ಛೆಯಿಲ್ಲದೆಯೇ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುವ ಗಣಕ ಹ್ಯಾಕರ್‌ನ ಅಣತಿಯಂತೆ ಸ್ಪಾಮ್ ಸಂದೇಶಗಳನ್ನು ರವಾನಿಸುತ್ತಲೇ ಹೋಗುತ್ತದೆ.

ಇಂತಹ ಗಣಕಗಳು ಬೇರೊಬ್ಬರ ಆದೇಶ ಪಾಲಿಸುವ ಯಂತ್ರಮಾನವನಂತೆ (ರೋಬಾಟ್) ಕೆಲಸಮಾಡುವುದರಿಂದ ಅವುಗಳನ್ನು ಬಾಟ್‌ಗಳೆಂದು ಕರೆಯುತ್ತಾರೆ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ. ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿ ರಚನೆಯಾಗುವ ಜಾಲಗಳಿಗೆ ‘ಬಾಟ್‌ನೆಟ್’ಗಳೆಂದು ಹೆಸರು.

ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಈ ಜಾಲಗಳು ಸ್ಪಾಮ್ ಸಮಸ್ಯೆಯ ಕೇಂದ್ರಬಿಂದುಗಳೆಂದರೆ ತಪ್ಪಲ್ಲ. ಇದೀಗ ಎಫ್‌ಬಿಐ ಕೈಗೆ ಸಿಕ್ಕುಹಾಕಿಕೊಂಡಿರುವ ಓಲೆಗ್ ನಿಕೋಲ್ಯಾಂಕೋ ಕೂಡ ಇಂತಹುದೇ ಬಾಟ್‌ನೆಟ್ ಒಂದನ್ನು ನಿರ್ವಹಿಸುತ್ತಿದ್ದ. ಆತನ ಜಾಲ ದಿನಕ್ಕೆ ಹತ್ತು ಬಿಲಿಯನ್ ರದ್ದಿ ಸಂದೇಶಗಳನ್ನು ಕಳುಹಿಸಲು ಶಕ್ತವಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ನಕಲಿ ವಾಚುಗಳು ಹಾಗೂ ಅನಧಿಕೃತ ಔಷಧಿ ಮಾರಾಟಗಾರರಿಂದ ಹಣ ಪಡೆದು ಆತ ಇಷ್ಟೆಲ್ಲ ರದ್ದಿ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.

ಸ್ಪಾಮ್ ತಡೆ ಹೇಗೆ?

ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎನ್ನುವುದು ತಜ್ಞರ ಅಭಿಪ್ರಾಯ. ಸಂದೇಹಾಸ್ಪದ ಜಾಲತಾಣಗಳಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ದಾಖಲಿಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತೆಯೇ ನಂಬಲಸಾಧ್ಯವೆಂದು ತೋರುವ ಸಂದೇಶಗಳನ್ನು ಕಡ್ಡಾಯವಾಗಿ ನಂಬದಿರುವುದು ಇನ್ನೊಂದು ಅತ್ಯಗತ್ಯ ಕ್ರಮ. ಯಾವುದೋ ದೇಶದಲ್ಲಿರುವ ಯಾರೋ ನಿಮಗೆ ಕೋಟ್ಯಂತರ ರೂಪಾಯಿ ಕೊಡುತ್ತೇವೆ ಎಂದೋ ನೀವು ಕೇಳಿಲ್ಲದೆಯೇ ವಿದೇಶದಲ್ಲಿ ಉದ್ಯೋಗಾವಕಾಶ ಕೊಡುತ್ತೇವೆ ಎಂದೋ ಹೇಳಿದರೆ ಅದರಲ್ಲಿ ಖಂಡಿತಾ ಏನೋ ಮೋಸವಿರುತ್ತದೆ ಎನ್ನುವುದು ನೆನಪಿರಲಿ. ಹಾಗೆಯೇ ಯಾವುದೇ ತಾಣ ನಿಮ್ಮ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಇಮೇಲ್ ಖಾತೆಯ ವಿವರಗಳನ್ನು ದಾಖಲಿಸಲು ಹೇಳಿದರೆ ಎಚ್ಚರವಹಿಸಿ, ಸುಖಾಸುಮ್ಮನೆ ಯಾವ ಸಂಸ್ಥೆಯೂ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

 

1 ಟಿಪ್ಪಣಿ (+add yours?)

  1. jyothi
    ಡಿಸೆ 14, 2010 @ 17:29:07

    Good, informative article. I just delete those spam mails.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: