ಓಣಿಯ ತಿರುವಿನಲ್ಲಿ ಅವನು ಥಟ್ಟನೆ ಕಾಣಿಸಿಕೊಂಡ.
ತೇವವಾಗದ ಕಣ್ಣುಗಳ, ನಿರ್ಭೀತ ನಡಿಗೆಯ, ಎಂದೂ ಹಿಂದಿರುಗಿ ನೋಡದ ಆಳೆತ್ತರದ ಆಜಾನುಬಾಹು. ಅವನು ನಕ್ಕಿದ್ದನ್ನಾಗಲೀ, ಅತ್ತಿದ್ದನ್ನಾಗಲೀ ಯಾರೂ ನೋಡಿದವರಿಲ್ಲ. ಅವನು ಎದುರಾಗುತ್ತಿದ್ದಂತೆ ನನಗೆ ಇನ್ನು ಅವನು ನನ್ನನ್ನು ಬಿಡುವುದಿಲ್ಲ ಎಂದು ಖಾತ್ರಿಯಾಯಿತು.
ಅವನು ಯಾವಾಗ ಬರುತ್ತಾನೋ ಗೊತ್ತಿಲ್ಲ. ಯಾವಾಗ, ಯಾವ ರೂಪದಲ್ಲಿ ಬೇಕಿದ್ದರೂ ಬರಬಹುದು. ಅವನು ಕರೆದಾಗ ಸುಮ್ಮನೆ ಹೊರಟುಬಿಡಬೇಕು. ತಕರಾರು ಮಾಡಬಾರದು. ತರಲೆ ತೆಗೆದರೆ, ತಕರಾರು ಮಾಡಿದರೆ ಅವನು ಬಿಟ್ಟು ಹೋಗುವುದಿಲ್ಲ ಎಂದು ಅನೇಕ ದಾರ್ಶನಿಕರು ಎಚ್ಚರಿಸಿದ್ದರು.
ನಮ್ಮೂರಿನಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ಗೋಪ್ಳಿ ಒಮ್ಮೆ ನಮ್ಮನ್ನು ಪಕ್ಕಕ್ಕೆ ಕರೆದು ಹೇಳಿದ್ದ: ಎಲ್ಲರೂ ನನ್ನನ್ನು ಹುಚ್ಚ ಅಂತರೇ.. ಯಾರೂ ಮನೆಯೊಳಗೆ ಬಿಟ್ಕಳಲ್ಲ. ಯಾರೂ ಅನ್ನ ಹಾಕಲ್ಲ. ನಾಳೆ ಅವನು ಬರ್ತನೆ. ನನ್ನ ಕರಕೊಂಡು ಹೋಗ್ತನೇ. ಅವನು ಬುದ್ಧಿವಂತರನ್ನೂ ಬಿಡಲ್ಲ, ಹುಚ್ಚರನ್ನೂ ಬಿಡಲ್ಲ. ನನ್ನನ್ನೂ ಕರಕೊಂಡು ಹೋಗ್ತನೆ. ನನ್ನ ತಮ್ಮನನ್ನೂ ಕರಕೊಂಡು ಹೋಗ್ತಾನೆ.
ಅವನು ಹುಚ್ಚನಂತೆ ಮಾತಾಡುತ್ತಾನೆ ಅಂತ ನಾವೆಲ್ಲ ಅವನದೇ ಶೈಲಿಯಲ್ಲಿ ರಾಗ ಎಳೆದು ಮಾತಾಡಿ ನಕ್ಕಿದ್ದೆವು. ಮಾರನೇ ದಿನ ಹೊಳೆಯಲ್ಲಿ ಗೋಪ್ಳಿ ಮತ್ತು ಅವನ ತಮ್ಮ ಶ್ರೀಪತಿ ಕೊಚ್ಚಿಕೊಂಡು ಹೋದ ಸುದ್ದಿ ಬಂತು. ಶ್ರೀಪತಿ ಸ್ನಾನಕ್ಕೆಂದು ಹೊಳೆಗೆ ಹೋಗಿದ್ದನಂತೆ. ಈಜುತ್ತಿದ್ದಾಗ ಸೆಳವಿಗೆ ಸಿಕ್ಕಿಕೊಂಡನಂತೆ. ದಂಡೆಯಲ್ಲಿ ಕೂತಿದ್ದ ಗೋಪ್ಳಿ ಅವನನ್ನು ರಕ್ಷಿಸುವುದಕ್ಕೋಸ್ಕರ ಹೊಳಗೆ ಹಾರಿದನಂತೆ.
ಇಬ್ಬರೂ ಸೆಳವಿಗೆ ಸಿಕ್ಕು ಕೊಚ್ಚಿಕೊಂಡು ಹೋದರು ಎಂದು ದೇವಸ್ಥಾನದ ಅಂಚಿನಲ್ಲಿ ಕೂತವರು ಮರುಗುತ್ತಾ ಊರಿಡೀ ಸುದ್ದಿ ಹಬ್ಬಿಸಿದರು. ಹುಚ್ಚನಾದರೂ ತಮ್ಮನನ್ನು ಕಾಪಾಡಲು ಹೋದನಲ್ಲ ಎಂದು ಊರವರು ಅವನ ಗುಣಗಾನ ಮಾಡಿದರು. ಇಬ್ಬರು ಮಕ್ಕಳನ್ನೂ ಒಂದೇ ಏಟಿಗೆ ಕಳಕೊಂಡ ಸುನಂದಬಾಯಿ ಬಿಕ್ಕಿ ಬಿಕ್ಕಿ ಅಳುವುದು ಒಂದು ವಾರದ ತನಕ ರಥಬೀದಿಯ ಮನೆಯವರಿಗೆ ಕೇಳಿಸುತ್ತಿತ್ತಂತೆ.
ಅವನು ಧುತ್ತೆಂದು ಎದುರಾದಾಗ ನನಗೆ ಸಂತೋಷವೂ ಆಗಲಿಲ್ಲ. ಅಂಥ ದುಃಖವೂ ಆಗಲಿಲ್ಲ. ನಾನು ಮಾಡಬೇಕಾದ ಕೆಲಸ ಸಾಕಷ್ಟು ಉಳಿದಿದೆ ಎಂದು ನನಗೆ ಗೊತ್ತಿತ್ತು. ಆಗಷ್ಟೇ ಒಂದು ಕಾದಂಬರಿ ಬರೆಯಲು ಆರಂಭಿಸಿದ್ದೆ. ಷೇಕ್ಸ್ಪಿಯರನ ಮೂರು ನಾಟಕಗಳನ್ನು ಬೇರ ಥರ ಕನ್ನಡಕ್ಕೆ ಅನುವಾದಿಸುವ ಯೋಚನೆಯಿತ್ತು. ಕಗ್ಗಕ್ಕೊಂದು ಭಾಷ್ಯ ಬರೆಯುವುದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ.
ಒಂದಷ್ಟು ಪ್ರವಾಸದ ಯೋಜನೆಗಳೂ ಕಣ್ಮುಂದಿದ್ದವು. ಟಿಬೆಟ್ಟಿಗೆ ಹೋಗಿ, ಅಲ್ಲಿನ ಬೌದ್ಧಭಿಕ್ಷುಗಳ ಜೊತೆಗಿದ್ದು ಅವರ ಜೀವನವನ್ನು ಅಧ್ಯಯನ ಮಾಡುವ ಬಗ್ಗೆ ನಾನೂ ನನ್ನ ಗೆಳೆಯ ಸಂದೀಪನೂ ಯೋಜನೆ ಹಾಕಿಕೊಂಡಿದ್ದೆವು. ಕೊಪ್ಪದಿಂದ ಸಮಾಜಶಾಸ್ತ್ರಜ್ಞ ಸೀತಾಪತಿ ಪದೇ ಪದೇ ಫೋನು ಮಾಡಿ ಕರೆಯತ್ತಿದ್ದ. ನಕ್ಸಲರ ಹೋರಾಟ, ತಾತ್ವಿಕತೆಯನ್ನಲ್ಲ ಬದಿಗಿಡೋಣ.
ಅವರ ಜೀವನಶೈಲಿಯ ಬಗ್ಗೆ ಬರೆಯೋಣ. ನನಗೊಂದಷ್ಟು ಮಂದಿ ನಕ್ಸಲರು ಗೊತ್ತಿದ್ದಾರೆ. ಅವರ ಹೋರಾಟ, ಓಡಾಟ, ಕಾಡಿನ ವಾಸ, ಸಾವಿಗೂ ಅಂಜದ ಧೀರೋದಾತ್ತ ನಿಲುವು ಇವುಗಳ ಬಗ್ಗೆ ಬರೆದರೆ ಕುತೂಹಲಕಾರಿ ಆಗಿರುತ್ತೆ ಎಂದಿದ್ದ. ಈ ಮಧ್ಯೆ ನಾನೊಂದು ಮನೆ ಕೊಳ್ಳುವುದಿತ್ತು. ಮಗನಿಗೆ ಇನ್ನೊಂದು ವರ್ಷಕ್ಕೆ ಉಪನಯನ ಮಾಡುವುದೆಂದು ತೀರ್ಮಾನಿಸಿದ್ದೆ. ಮಗಳು ಪಿಯೂಸಿ ಮುಗಿಸಿದ ನಂತರ ಮದುವೆ ಮಾಡಿಬಿಡಬೇಕು ಎಂದು ಯೋಚಿಸಿದ್ದೆ.
ಹೀಗೆ ಕೈ ತುಂಬ ಕೆಲಸವಿತ್ತು. ಮನಸ್ಸು ತುಂಬ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಹೊತ್ತಿಗೇ ಅವನು ತಿರುವಿನಲ್ಲಿ ಕಾಣಿಸಿಕೊಂಡಿದ್ದ. ಅವನು ನನ್ನನ್ನು ನೋಡಿದ ರೀತಿಯಲ್ಲೇ, ಅವನು ನನ್ನನ್ನೇ ಹುಡುಕಿಕೊಂಡು ಬಂದಿದ್ದಾನೆ ಎನ್ನುವುದು ನನಗೆ ಖಾತ್ರಿಯಾಯಿತು.
ಎಲ್ಲಿಗೋ ಹೊರಟಿದ್ದ ನಾನು ಅಲ್ಲಿಂದಲೇ ಮರಳಿದೆ. ಅವನು ಬೆನ್ನಹಿಂದೆಯೇ ಬರುತ್ತಿದ್ದಾನೆ ಅನ್ನಿಸುತ್ತಿತ್ತು. ಹಾಗಂತ ನಾನೇನೂ ಭಯಪಡುತ್ತಿರಲಿಲ್ಲ. ಅವನು ಬಂದೇ ಬರುತ್ತಾನೆ ಅನ್ನುವುದೂ, ಅವನು ಬಂದಾಗ ನಾನು ಅವನನ್ನು ನಿರ್ವಿಕಾರವಾಗಿ ಎದುರಿಸಬೇಕು ಅನ್ನುವುದೂ ನನಗೆ ಅರ್ಥವಾಗಿತ್ತು.
ಅವನು ಬಂದ ಸುದ್ದಿಯನ್ನು ನಾನು ಯಾರಿಗೂ ಹೇಳುವ ಹಾಗಿರಲಿಲ್ಲ. ಹೇಳಿದರೆ ಅವರೆಲ್ಲ ಸೇರಿ ರಂಪ ಮಾಡಿ ಬಾಯಿಬಡಿದುಕೊಂಡು ಗದ್ದಲ ಶುರು ಮಾಡುತ್ತಿದ್ದರು. ಅವನಿಂದ ನನ್ನನ್ನು ಪಾರು ಮಾಡುವುದಕ್ಕೆ ನೂರೆಂಟು ವಿಧಾನಗಳನ್ನು ಹುಡುಕುತ್ತಿದ್ದರು. ಅದು ನನಗೆ ಇಷ್ಟವಿರಲಿಲ್ಲ. ಯಾರೂ ಕೂಡ ನನ್ನನ್ನು ಅವನಿಂದ ರಕ್ಷಿಸಲಾರರು ಎಂದು ಸ್ಪಷ್ಟವಾಗಿ ಗೊತ್ತಿದ್ದ ನಾನು ಹಾಗೆಲ್ಲ ಅವರಿಂದ ಸಹಾಯ ಕೇಳುವಂತಿರಲಿಲ್ಲ. ನಾನೊಬ್ಬನೇ ಎದುರಿಸಬೇಕಾಗಿದ್ದ ಕ್ಷಣ ಅದು.
ಅದಕ್ಕೆ ನಾನು ಸಿದ್ಧನಾಗಿದ್ದೆ. ನಾನು ಯಾರನ್ನೂ ನೋಡಿಲ್ಲ. ಯಾರೂ ನನ್ನನ್ನು ಹುಡುಕಿಕೊಂಡು ಬಂದಿಲ್ಲ. ಯಾರ ಹಿಂದೆಯೂ ನಾನು ಹೋಗಬೇಕಾಗಿಲ್ಲ ಎಂಬ ಉಡಾಫೆಯಲ್ಲಿ ಜೀವಿಸಲು ನಿರ್ಧರಿಸಿದೆ. ಅವನು ದರ್ಶನ ಕೊಟ್ಟ ನಂತರ ತುಂಬ ದಿನ ನನ್ನನ್ನು ಇಲ್ಲಿ ಉಳಿಸಿಕೊಳ್ಳುವುದಿಲ್ಲ ಎಂಬುದೂ ನನಗೆ ಗೊತ್ತಿತ್ತು.
ಹೊರಡಲು ಸಿದ್ಧತೆ ಮಾಡಿಕೊಳ್ಳುವುದು ಹೇಗ ಎಂಬುದು ಮಾತ್ರ ನನಗೆ ಗೊತ್ತಿರಲಿಲ್ಲ. ಅಲ್ಲಿನ ಕುರಿತು ಏನೂ ಗೊತ್ತಿಲ್ಲದ, ಇಲ್ಲಿನ ಕುರಿತು ಚಿಂತಿಸಬೇಕಿಲ್ಲದ ನಾನು ವಿಚಿತ್ರ ಸಂದಿಗ್ಧದಲ್ಲಿ ಕೂತಿದ್ದೆ. ಇಲ್ಲಿ ಮಾಡಿದ ಯಾವುದನ್ನೂ ಅಲ್ಲಿ ಮುಂದುವರಿಸಬೇಕಾಗಿಲ್ಲ ಎನ್ನುವುದು ಮಾತ್ರ ನನಗೆ ಅರಿವಿತ್ತು.
ಕಾದಂಬರಿ ಶುರುಮಾಡುವ ಅಗತ್ಯವೇ ಇರಲಿಲ್ಲ. ನನ್ನ ಅಧ್ಯಯನ, ಪ್ರವಾಸವನ್ನು ರದ್ದುಗೊಳಿಸಿದೆ. ಷೇಕ್ಸ್ಪಿಯರ್ ನಾಟಕಗಳನ್ನು ಅನುವಾದ ಮಾಡುವ ಕೆಲಸಕ್ಕೆ ಕೈ ಹಾಕಲಿಲ್ಲ. ಟಿಬೆಟ್ಟಿಗೆ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲ ಅನ್ನಿಸಿತು. ಹೀಗೆ ನಾನು ಕಾರ್ಯಕ್ರಮಗಳನ್ನು ಇದ್ದಕ್ಕಿದ್ದ ಹಾಗೆ ರದ್ದು ಮಾಡಿದ್ದಕ್ಕೆ ಸೀತಾಪತಿಗೆ ಸಿಟ್ಟು ಬಂತು.
ಸಂದೀಪನಿಗೂ ರೇಗಿಹೋಗಿ ಏನಾದ್ರೂ ಸತ್ಕೋ ಎಂದು ಫೋನು ಮಾಡುವುದನ್ನೆ ಬಿಟ್ಟುಬಿಟ್ಟ. ಸೀತಾಪತಿ ಬಂದುಹೋಗೋ, ಎಲ್ಲಾ ವ್ಯವಸ್ಥೆ ಮಾಡಿದ್ದೀನಿ. ಯಾಕೆ ಹೀಗಾಗಿದ್ದೀಯಾ ಎಂದು ಒಂದೆರಡು ಬಾರಿ ರೇಗಿ ಸುಮ್ಮನಾದ. ನನಗೆ ಅವರ ಯಾವ ಪ್ರಶ್ನೆಗೂ ಉತ್ತರಿಸುವ ಆಸಕ್ತಿಯೇ ಇರಲಿಲ್ಲ. ಅವರು ಪದೇ ಪದೇ ಫೋನು ಮಾಡಿದಾಗ ನಾನು ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಮನೆಗೆ ಬಂದಾಗ ನನ್ನ ಕೋಣೆಯೊಳಗೆ ಕೂತಿರುತ್ತಿದ್ದೆ. ನಾನು ಯಾರನ್ನೂ ಭೇಟಿಯಾಗುವುದಿಲ್ಲ ಎಂದು ಹೇಳಿದೆ.
ಈ ಮಧ್ಯೆ ಅವನು ಮತ್ತೊಂದೆರಡು ಸಲ ಕಾಣಿಸಿಕೊಂಡಂತೆ ಭಾಸವಾಯಿತು. ಮುಸ್ಸಂಜೆಯಲ್ಲಿ ನನ್ನ ಮನೆಯಂಗಳದಲ್ಲಿ ಅವಸರದಲ್ಲಿ ಅಡ್ಡಾಡುತ್ತಿದ್ದ. ಮತ್ತೊಂದು ಸಾರಿ ನಡು ಮಧ್ಯಾಹ್ನ ಮನೆಯೆದುರಿನ ಬೆಟ್ಟದ ತುದಿಯಲ್ಲಿ ನನ್ನ ಮನೆಯನ್ನೇ ನೋಡುತ್ತಾ ಕೂತಿದ್ದನ್ನು ನಾನು ಕಿಟಕಿಯಿಂದ ನೋಡಿ ನಕ್ಕೆ. ಅವನು ಯಾವುದೋ ಒಂದು ಕ್ಷಣಕ್ಕಾಗಿ ಕಾಯುತ್ತಿದ್ದಾನೆ ಎಂದು ನನಗೆ ಅನ್ನಿಸುತ್ತಿತ್ತು. ಯಾಕೆ ಕಾಯುತ್ತಿದ್ದಾನೆ ಅನ್ನುವುದನ್ನು ಮಾತ್ರ ನನಗೆ ತಿಳಿದುಕೊಳ್ಳಲು ಸಾಧ್ಯವೇ ಆಗಲಿಲ್ಲ.
ಆದರೆ ನಾನು ಮಾತ್ರ ತುಂಬ ಹುಷಾರಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೆ. ಯಾರ ಜೊತೆಗೂ ಹೆಚ್ಚಿನ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದೆ.
ಹೊರ ಜಗತ್ತಿನ ಸಂಪರ್ಕಗಳನ್ನು ಪೂರ್ತಿಯಾಗಿ ಕತ್ತರಿಸಿಕೊಂಡೆ. ತುಂಬು ಗಾಂಭೀರ್ಯದಿಂದ, ಅತೀವ ಏಕಾಗ್ರತೆಯಿಂದ ಆದಷ್ಟೂ ಒಂಟಿಯಾಗಿ ಬದುಕುವುದನ್ನು ನಿರ್ಧಾರಮಾಡಿದ್ದೆ.
ಬದುಕುವುದು ಎಂಬ ಮಾತೇ ತಮಾಷೆಯಾಗಿ ಕೇಳಿಸುತ್ತಿತ್ತು. ಬದುಕುವುದು ಅನ್ನುವ ಬದಲು ಅವನಿಗಾಗಿ ಕಾಯುವುದು ಎಂದು ಹೇಳಬಹುದಾಗಿತ್ತೇನೋ. ಆದರೆ, ಹಾಗೆ ಹೇಳಿದರೆ ನಾನು ಸೋತಂತೆ, ಭಯಗೊಂಡಂತೆ ಬೇರೆಯವರಿಗೆ ಭಾಸವಾಗುತ್ತದೆ. ಇಂಥ ಹೊತ್ತಲ್ಲಿ ತಲ್ಲಣಿಸಬಾರದು. ದಿಟ್ಟನಂತೆ ಎಲ್ಲವನ್ನೂ ಎದುರಿಸಬೇಕು ಎಂದು ತೀರ್ಮಾನಿಸಿದೆ. ಅವನಿಗೆ ಕಾಯುತ್ತಿಲ್ಲ ಎಂಬಂತೆ ಕಾಯುತ್ತಾ ಕೂತೆ. ನನ್ನ ಕಾಯುವಿಕೆ ನನಗೂ ಅರಿವಾಗದಂತೆ ಇತ್ತು.
ನಾನು ಕಾಯುತ್ತಿದ್ದೇನೆ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದವರೆ ಗೊತ್ತಾಗುವಂತಿತ್ತು. ನಾನು ಬರೆಯುತ್ತಿರಲಿಲ್ಲ. ಪ್ರವಾಸ ಹೋಗುತ್ತಿರಲಿಲ್ಲ, ಗೆಳೆಯರನ್ನು ಭೇಟಿಯಾಗುತ್ತಿರಲಿಲ್ಲ. ಹೊಸದೇನನ್ನೂ ಓದುತ್ತಿರಲಿಲ್ಲ. ಸಿನಿಮಾ ನೋಡುವುದನ್ನು, ನಗುವುದನ್ನು ಪೂರ್ತಿ ನಿಲ್ಲಿಸಿದ್ದೆ. ಹೊರಜಗತ್ತಿನ ಜೊತೆ ಯಾವುದೇ ಸಂಬಂಧ ಇಲ್ಲದವನಂತೆ ಇದ್ದುಬಿಟ್ಟಿದ್ದೆ. ನನ್ನ ಬಗ್ಗೆ ಆಸಕ್ತಿ ಹೊರಟುಹೋಗಿದ್ದು. ಅಷ್ಟು ದಿನಗಳಲ್ಲಿ ಗಡ್ಡ ಅಷ್ಟುದ್ದ ಬೆಳೆದು, ಕೂದಲು ಅಸ್ತವ್ಯಸ್ತ ಹಬ್ಬಿ ನಾನು ವಿಚಿತ್ರವಾಗಿ ಕಾಣಿಸುತ್ತಿದ್ದೆ.
ಈ ಮಧ್ಯೆ ಅವನು ಮತ್ತೊಮ್ಮೆ ಅಂಗಳದಲ್ಲಿ ಕಾಣಿಸಿಕೊಂಡ. ನಾನು ಮಹಡಿಯ ನನ್ನ ಕೋಣೆಯ ಕಿಟಕಿಯಿಂದ ನೋಡುತ್ತಿದ್ದೆ. ಅವನು ಮನೆಯೊಳಗೇ ಬಂದಂತಾಯಿತು. ನನ್ನ ಕೋಣೆಯ ಬಾಗಿಲು ತಟ್ಟುತ್ತಾನೆ ಎಂದು ಎಚ್ಚರದಿಂದ ಕಾದೆ.
ಕೋಣೆಯ ಬಾಗಿಲು ತಟ್ಟಿದ ಸದ್ದಾಯಿತು. ಬಾಗಿಲು ತೆರೆದರೆ ಸಂದೀಪ ನಿಂತಿದ್ದ. ನನ್ನನ್ನು ನೋಡಿ ಅವನಿಗೆ ಎಷ್ಟು ಸಿಟ್ಟು ಬಂದಿತೆಂದರೆ ಹಿಗ್ಗಾಮುಗ್ಗಾ ರೇಗತೊಡಗಿದ. ಏನಾಗಿದೆ ನಿಂಗೆ. ಯಾಕೆ ಹೀಗೆ ಹೆಣದ ಥರ ಆಗಿಹೋಗಿದ್ದೀಯಾ, ಹೀಗೆ ಬದುಕೋದಕ್ಕಿಂತ ಸಾಯೋದೇ ಮೇಲು. ಹೋಗಿ ಯಾವುದಾದರೂ ಬಾವಿಗೆ ಬೀಳು. ಏನಾಯ್ತು ನಿನ್ನ ಕ್ರಿಯಾಶೀಲತೆ, ಯಾಕೆ ನಾಲ್ಕು ಗೋಡೆ ಮಧ್ಯೆ ಸೇರಿಕೊಂಡಿದ್ದೀಯಾ. ಅತ್ತಿಗೆ ಎಷ್ಟು ಬೇಜಾರು ಮಾಡಿಕೊಂಡಿದ್ದಾರೆ ಗೊತ್ತಾ. ಏನಾಯ್ತು ಹೇಳು, ಯಾರ ಮೇಲಿನ ಸಿಟ್ಟಿಗೆ ಹೀಗೆ ಮಾಡ್ತಿದ್ದೀಯಾ ಎಂದು ಒಂದೇ ಸಮ ಪ್ರಶ್ನೆಗಳ ಮೊಳೆಹೊಡೆದ. ನೋಡು ಹೇಗೆ ಕಾಣಿಸ್ತಿದ್ದೀಯಾ ಎಂದು ಎಳೆದುಕೊಂಡು ಹೋಗಿ ಕನ್ನಡಿ ಮುಂದೆ ನಿಲ್ಲಿಸಿದ.
ನನಗೇ ನನ್ನ ಗುರುತು ಹತ್ತಲಿಲ್ಲ. ಸೊರಗಿಹೋಗಿದ್ದೆ, ವಿಚಿತ್ರವಾಗಿ ಕಾಣಿಸುತ್ತಿದ್ದೆ. ಸಂದೀಪ ಮತ್ತೆ ಅದನ್ನೇ ಕೇಳುತ್ತಿದ್ದ. ನಾನು ಅವನು ಬಂದಿರುವ ಸಂಗತಿ ಹೇಳಲೋ ಬೇಡವೋ ಎಂದು ದ್ವಂದ್ವದಲ್ಲಿರಬೇಕಾದರೆ ಸಂದೀಪ ಹೇಳಿದ:
ನೋಡೋ, ನಾವೆಲ್ಲ ಇನ್ನು ನೂರಾರು ವರ್ಷ ಬದುಕೋದಿಲ್ಲ. ಇವತ್ತು ಸಾಯ್ತೀವೋ ನಾಳೆ ಸಾಯ್ತೀವೋ. ಸಾಯೋ ಮುಂಚೆ ಮಾಡಬೇಕಾದ್ದೆಲ್ಲ ಮಾಡಿ ಮುಗಿಸೋಣ. ನೀನು ನಿನ್ನ ಕಾದಂಬರಿ ಮುಗಿಸು, ನಾಳೆ ಕೊಪ್ಪಕ್ಕೆ ಹೋಗಿ ಬರೋಣ. ಸೀತಾಪತೀನೂ ಕರಕೊಂಡು ಟಿಬೆಟ್ಟಿಗೆ ಹೋಗೋಣ. ಹೊರಡು ಎಂದು ಅವಸರಪಡಿಸಿದ.
ನಾನು ಬೇರೆ ದಾರಿ ತೋಚದೆ ತಲೆಯಾಡಿಸಿದೆ. ಕಿಟಕಿಯಿಂದ ಹೊರಗೆ ನೋಡಿದರೆ ಅವನು ಅಲ್ಲೆಲ್ಲೂ ಕಾಣಿಸಲಿಲ್ಲ. ಹೊರಟುಹೋಗಿರಬೇಕು ಅಂದುಕೊಂಡು ಕೋಣೆಯಿಂದ ಹೊರಗೆ ಬಂದೆ. ನಾನು ಹೊರಗೆ ಬರುತ್ತಿದ್ದಂತೆ ಯಾರೋ ನನ್ನ ಕೋಣೆಯೊಳಗೆ ನುಸುಳಿದಂತಾಯಿತು. ಅದೂ ಭ್ರಮೆ ಇರಬೇಕು ಎಂದುಕೊಂಡು ನಾನು ಸ್ನಾನಕ್ಕೆ ಹೊರಟೆ.
ಸ್ನಾನ ಮುಗಿಸಿ ಕೋಣೆಗೆ ಬಂದರೆ ಸಂದೀಪ ಕುಳಿತ ಭಂಗಿಯಲ್ಲೇ ಕೂತಿದ್ದ. ಅವನು ಆ ಕ್ಷಣಕ್ಕೆ ನನಗೆ ಅವನ ಹಾಗೆಯೇ ಕಾಣಿಸಿದ. ಸಂದೀಪ ಹೊರಡೋಣ ಅಂದೆ. ಅವನು ಮಾತಾಡಲಿಲ್ಲ.
ಡಿಸೆ 15, 2010 @ 12:29:28
it is not fair. it is not yours right age to get such thought or fear. `He’ follows every living thing. i also heaving same feelings like you. Dont lose yours Creativity. Be happy, Be bold.
Our world is waitng for ours Creations. you are a creater.
Be joyfull
ಡಿಸೆ 15, 2010 @ 08:12:34
ಸೂಪರ್….
ಡಿಸೆ 14, 2010 @ 20:03:00
ಸಾವು ; ಇದರ ಹಿಂಬಾಲಿಸುವಿಕೆ ಬಗ್ಗೆ ತಣ್ಣನೆಯ ಶೈಲಿಯಲ್ಲಿ ಅದ್ಬುತವಾಗಿ ಬರೆದಿದ್ದೀರಿ ಜೋಗಿ….
ಡಿಸೆ 14, 2010 @ 19:38:01
Dear Jogi,
Adbhutavaada kathe.
Estu kathegalive maaraayre nimma joligeyalli?
Srinivas Deshpande
ಡಿಸೆ 14, 2010 @ 14:03:19
ಬದುಕಿನ ಅನಿಶ್ಚಿತತೆ ಮಾರ್ಮಿಕವಾಗಿದೆ. ಅವನ ಬರುವು ನಿಶ್ಚಿತ ಬಿಟ್ಟರೆ ಅವನ ಹೊಳಹು, ಸುಳುಹು ಎಲ್ಲವೂ ಅನಿಶ್ಚಿತ ಮತ್ತು ನಿಗೂಢ ಅನ್ನುವುದು ಮನಮುಟ್ಟತ್ತದೆ.