ಚಿನ್ನಾ ನಿನ್ನಾ ಮುದ್ದಾಡುವೆ …

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-36

All that glitters is not Gold. . . . All that is Gold does not glitter!!!

ಹೊಳೆಯುವುದೆಲ್ಲಾ ಚಿನ್ನವಲ್ಲ. . . . ಚಿನ್ನವಾದದ್ದೆಲ್ಲ ಹೊಳೆಯುವುದೂ ಇಲ್ಲ!!!

ಕಳೆದ ವಾರ ಗುರುಗುಂಟಿರಾಯರು ಫೋನ್ ಮಾಡಿ ಅವರ ಮನೆಯಲ್ಲಿ ನಡೆಯುತ್ತಿರುವ ಕುರುಕ್ಷೇತ್ರದ ಚಿತ್ರಣವನ್ನು ಸಂಜಯ ದೃತರಾಷ್ಟ್ರನಿಗೆ ನೀಡಿದಂತೆ ಬಹಳ ಸಮರ್ಥವಾಗಿ ನಮಗೆ ನೀಡಿದ್ದರು. ಅಷ್ಟೇ ಸಮರ್ಥವಾಗಿ ಕಾಕುವಿನ ಆಸ್ಥಾನದ ಕಲಾವಿದರಾದ ನಾಗಾನಾಥ್ ಅವರು ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಕೊಟ್ಟು ಪಕ್ಕವಾದ್ಯದಲ್ಲಿ ಸಹಕರಿಸಿದ್ದರು.

ಅವರು ಮಾಡಿದ ಮಹಿಳೆಯ ಚಿತ್ರವನ್ನು ನೋಡದ ಮೇಲಂತೂ ಹಲವಾರು ಜನರು ನಾಗನಾಥ್‌ಗೆ ಫೋನ್ ಮಾಡಿ ತಮ್ಮ ತಮ್ಮ ಪತ್ನಿಯ ಚಿತ್ರವನ್ನು ಅವರನ್ನು ನೋಡದೆಯೇ ಅದು ಹೇಗೆ ಅಷ್ಟು ಪರ್ಫೆಕ್ಟ್ ಆಗಿ ಚಿತ್ರಿಸಿದ್ದಾರೆ ಎಂದು ಕೇಳಿದ್ದಾರಂತೆ.

ಅದಿರಲಿ, ಅದರಲ್ಲಿ ಕೊನೆಗೆ ಗುರುಗುಂಟಿರಾಯರು ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಡೆಯುತ್ತಿರುವ ಯದ್ವಾತದ್ವಾ ಏರಿಕೆಯ ಕಾರಣವನ್ನು ಕೇಳಿದ್ದರು. ಅದಕ್ಕೆ ಉತ್ತರವಾಗಿ ನಾನು ಕುಟ್ಟಿದ ಮಹಾ ಬೋರಿನ ಲೆಕ್ಚರನ್ನು ನೀವೆಲ್ಲರೂ ಓದಿ ಆಕಳಿಸಿ ನಿದ್ದೆ ಹೋಗಿದ್ದೀರೆಂದು ನಾನು ಅಚಲವಾಗಿ ನಂಬಿದ್ದೇನೆ.

ಅಂತಹ ಕುಂಬಕರ್ಣ ಬ್ರಾಂಡಿನ ಜಬರ್ದಸ್ತ್ ಲೆಕ್ಚರಿನ ಕೊನೆಗೆ ರಾಯರು, ಈಗ ಚಿನ್ನದಲ್ಲಿ ಹೂಡಿಕೆ ಮಾಡಬಹುದೇ? ಎಂಬ ಪ್ರಶ್ನೆ ಕೇಳಿ ಇನ್ನೊಂದು ತಾಸು ಕೊರೆಯಲು ನನಗೆ ಅನುವು ಮಾಡಿಕೊಟ್ಟಿದ್ದರು. ನಾನು ನನ್ನ ಎರಡನೆಯ ಭಾಷಣ ಆರಂಭಿಸಬೇಕೆನ್ನುವಷ್ಟರಲ್ಲಿಯೇ ಅಂತಹ ಸಂದರ್ಭಗಳಲ್ಲೆಲ್ಲಾ ಕೇಬೀಸಿಯಲ್ಲಿ ಆಗುವಂತೆಯೇ ಸಮಯ್ ಸಮಾಪ್ತಿ ಕೀ ಘೋಷಣ ವಾಯಿತು. ಹಾಗೆ ಅಂದಿನ ದಿನ ಅಲ್ಲಿಗೇ ನಾವು ನಮ್ಮ ಅಂಕಣವನ್ನು ಕೊನೆಗೊಳಿಸಬೇಕಾಗಿ ಬಂದಿತ್ತು.

ಈಗ ಮತ್ತೆ ಸೋಮವಾರ ಬಂದಿದೆ. ಮತ್ತೊಮ್ಮೆ ನಾವು ಮತ್ತು ನೀವು ಉದಯವಾಣಿಯ ಈ ಆರನೇ ಪುಟದ ಕಾಕು ಚಾವಡಿಯಲ್ಲಿ ಕುಳಿತುಕೊಂಡು ಮಾತುಕತೆಗೆ ಹೊರಟಿದ್ದೇವೆ. ಎಲ್ಲರಿಗೂ ಸ್ವಾಗತ, ನಮಷ್ಕಾರ್, ಆದಾಬ್ ನಮ್ಮ ವತಿಯಿಂದ ಹಾರ್ದಿಕ ಶುಭ ಕಾಮ್ನಾಯೇ.

ಓಕೇ, ನವ್, ಲೆಟ್ ಅಸ್ ಮೂವ್ ಅಹೆಡ್. . . .

****************

ಮೊತ್ತ ಮೊದಲನೆಯದಾಗಿ ಎಲ್ಲರೂ ಕೇಳುವ ಪ್ರಶ್ನೆ ಈಗ ಚಿನ್ನದಲ್ಲಿ ಹೂಡಬಹುದಾ? ಬೆಲೆ ಇನ್ನೂ ಏರಬಹುದಾ?? ಎಂದು.

ಎಲ್ಲಾ ಕಮಾಡಿಟಿ, ಶೇರು ಇತ್ಯಾದಿಗಳಂತೆ ಚಿನ್ನ ಕೂಡಾ ರಿಸ್ಕಿಯೇ. ಭದ್ರವಾದ ಖಚಿತವಾದ ಪ್ರತಿಫಲ ಇದರಲ್ಲಿ ಸಿಕ್ಕುವುದಿಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಚಿನ್ನ ನೀಡಿದ ೨೮% ವಾರ್ಷಿಕ ಪ್ರತಿಫಲವನ್ನು ಬಿಟ್ಟರೆ ಹೆಚ್ಚಿನ ಕಾಲದಲ್ಲಿ ಚಿನ್ನದ ಹೂಡಿಕೆಯಲ್ಲಿ ಪ್ರತಿಫಲ ಅಷ್ಟೇನೂ ಚೆನ್ನಾಗಿರಲಿಲ್ಲ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಹೂಡಿಕೆಗಳು ಉತ್ತಮವಾಗಿ ತೋರಿಬರುತ್ತದೆ. ಕೈಗಾರೀಕರಣ ಮಂಚೂಣಿಗೆ ಬಂದ ನಂತರದ ಈ ಯುಗದಲ್ಲಿ ಕೈಗಾರಿಕೆ ಸಂಬಂಧಪಟ್ಟ ಕಮಾಡಿಟಿಗಳ ಹೂಡಿಕೆಗಳೇ ಅತ್ಯಂತ ಆಕರ್ಷಕವಾಗಿವೆ.

ಉದಾಹರಣೆಗೆ ಶೇರು, ಭೂಮಿ, ತೈಲ, ಕಮಾಡಿಟಿ, ಬೇಸ್ ಮೆಟಲ್ ಇತ್ಯಾದಿ. ಯಾಕೆಂದರೆ ಇವುಗಳು ಕೈಗಾರಿಕಾ ಅಭಿವೃದ್ಧಿಯನ್ನು ಪ್ರತಿಫಲಿಸುತ್ತವೆ. ಚಿನ್ನಕ್ಕೆ ಯಾವುದೇ ಕೈಗಾರಿಕಾ ಉಪಯುಕ್ತತೆ ಇಲ್ಲದ ಕಾರಣ ಹಾಗೂ ಅದು ಬರೇ ಒಂದು ಹೂಡಿಕೆಯ ದೃಷ್ಟಿಯಲ್ಲಿ ನೋಡುವಾಗ ಬರೇ ಒಂದು ಹೆಜ್ ಆಗಿ ಉಪಯೋಗಿಸಲ್ಪಡುವ ಕಾರಣ ಚಿನ್ನದ ದರದಲ್ಲಿ ಭಾರೀ ಏರಿಕೆ ಬರೇ ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಮಾತ್ರ ಉಂಟಾಗುತ್ತದೆ. ಆದ್ದರಿಂದ ಇದು ಪ್ರತಿಫಲದ ದೃಷ್ತಿಯಿಂದ ಅತ್ಯಾಕರ್ಷಕ ಎಂದು ಹೇಳಲಾರೆ.

ಆದರೆ ಭದ್ರತೆಯ ಮಟ್ಟಿಗೆ, ಒಂದು ಆಪದ್ಧನವಾಗಿ, ಕೆಟ್ಟಕಾಲದಲ್ಲಿ ಸಹಾಯವಾಗುವಂತಹ ಸರಿಸುಮಾರು ಎವರೇಜ್ ಪ್ರತಿಫಲ ನೀಡುವ ಒಂದು ಉತ್ತಮ ಹೂಡಿಕೆಯಾಗಿದೆ. ಸಧ್ಯದ ಯದ್ವಾತದ್ವಾ ಬೆಲೆಯೇರಿಕೆ ಕೆಳಕ್ಕೆ ಇಳಿಯಲೂ ಬಹುದು. ಜಾಗತಿಕ ಆರ್ಥಿಕತೆಯಲ್ಲಿ ಸುಧಾರಣೆ ಕಂಡ ಮರುಕ್ಷಣ ಚಿನ್ನದ ಬೆಲೆ ಅಲ್ಪ ಸ್ವಲ್ಪ ಕುಸಿಯಲೂ ಬಹುದು. ಈ ರೀತಿ ಏರಿಳಿತಗಳು ಚಿನ್ನದಲ್ಲಿ ನಡೆಯುವ ಸಾಧ್ಯತೆಗಳು ಇಲ್ಲದಿಲ್ಲ.

ಇದರ ಅರಿವು ಜನರಲ್ಲಿ ಇರಬೇಕು. ಂನ್ನ ಅತ್ಯಂತ ಭದ್ರ ಹಾಗೂ ಏಕಮುಖವಾಗಿ ಸದಾ ಗಗನದತ್ತ ಏರುತ್ತಲೇ ಹೋಗುತ್ತದೆ; ಇದರಲ್ಲಿ ಇಳಿಕೆ ಸಾಧ್ಯವೇ ಇಲ್ಲ ಎಂಬ ಭಾವನೆ ತಪ್ಪು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚಿನ್ನದಲ್ಲಿ ಅಗಿಂದಾಗ್ಗೆ ದೀರ್ಘಕಾಲಕ್ಕೆ ಹೂಡುತ್ತಾ ಹೋಗಬಹುದು. ಒಂದು ಉತ್ತಮ ಶೇರಿನಷ್ಟು ಪ್ರತಿಫಲ ಸಿಕ್ಕದಿದ್ದರೂ ಒಂದು ಕೆಟ್ಟ ಶೇರಿನಷ್ಟು ನಷ್ಟವನ್ನೂ ಉಂಟು ಮಾಡಲಾರದು.

ಚಿನ್ನ ಮತ್ತು ಭೂಮಿಯಲ್ಲಿ ಹೂಡಿಕೆಯ ಪ್ರಶ್ನೆ ಬಂದಾಗ ಒಂದು ಮಾತನ್ನು ಹೇಳಲೇ ಬೇಕಾಗುತ್ತದೆ. ಅದೇನೆಂದರೆ ಈ ಎರಡು ಅಸೆಟ್ ಕ್ಲಾಸುಗಳಲ್ಲಿ ಅಗಾಧ ಪ್ರಮಾಣದ ಕಪ್ಪುಹಣ ಸಂಚಯವಾಗುತ್ತದೆ. ಅದರಲ್ಲೂ ತೆರಿಗೆಯ ಕಣ್ಣು ತಪ್ಪಿಸುವ ಕಪ್ಪು ಹಣದ ಅತ್ಯಂತ ಪ್ರಶಸ್ತವಾದ ಶೇಖರಣೆ ಚಿನ್ನದಲ್ಲಿಯೇ ನಡೆಯುತ್ತಿರುವುದು ಎಲ್ಲರೂ ತಿಳಿದಿರುವ ಪರಮ ಸತ್ಯ. ಧನವನ್ನು ಅತಿಸುಲಭವಾಗಿ ಬಚ್ಚಿಡಬಹುದಾದ ಮಾಧ್ಯಮ ಇದೊಂದೇ. ಈ ನಿಟ್ಟಿನಿಂದ ನೋಡಿದರೆ ತೆರಿಗೆವಂಚಿದ ಧನರಾಶಿಗೆ ಅತ್ಯಂತ ಉತ್ತಮ ಹೂಡಿಕೆ ಚಿನ್ನ ಮತ್ತು ಭೂಮಿಯೇ ಆಗಿದೆ.

ಈ ಕಾರಣಕ್ಕಾಗಿ ಚಿನ್ನ ಮತ್ತು ಭೂಮಿಯನ್ನು ಅತ್ಯುತ್ತಮ ಹೂಡಿಕೆ ಎಂದು ಎಲ್ಲೆಡೆಯಲ್ಲಿ ಹಾಡಿಹೊಗಳಲಾಗುತ್ತದೆ. ಪಕ್ಕಾ ವೈಟ್ ಆದಾಯ ಮಾತ್ರವಿರುವ ನಾಗರಿಕರಿಕೆ ಈ ಮಾತು ಸತ್ಯವಾಗಿ ತೋರಬೇಕೆಂದೇನೂ ಇಲ್ಲ. ಹೂಡಿಕಾ ಮಾರ್ಗಗಳನ್ನು ಅವರವರ ಪರಿಸ್ಥಿತಿಯನ್ನು ಹೊಂದಿಕೊಂಡು ಅರ್ಥೈಸಬೇಕೇ ಹೊರತು ಪಕ್ಕದ ಮನೆಯವನು ಬಿದ್ದ ಬಾವಿಗೇ ನಾವೂ ಬೀಳಬೇಕಾಗಿಲ್ಲ. ಪ್ರಜಾಪ್ರಭುತ್ವದಲ್ಲಿ, ಪ್ರತಿಯೊಬ್ಬರಿಗೂ ಅವರಿಗೆ ಬೀಳಲು ಸೂಕ್ತವಾದ ಬಾವಿಯನ್ನು ಅವರವರೇ ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ಅಲ್ಲವೇ?

ಚಿನ್ನದಲ್ಲಿ ಹೂಡಿಕೆ ಮಾಡಬಹುದು ಅಥವ ಮಾಡಬೇಕು ಎಂದು ನೀವು ನಿಶ್ಚೈಸಿರುವವರಾಗಿದ್ದರೆ ಎಲ್ಲಿ ಮತ್ತು ಹೇಗೆ ಎಂಬ ಅಗ್ಲಾ ಸವಾಲ್ ಬರುತ್ತದೆ.

Well, ಚಿನ್ನದಲ್ಲಿ ಹೂಡಲು ಮೂರು ದಾರಿಗಳಿವೆ.

ಆಭರಣ:

ಸ್ತ್ರೀಯರಿಗೆ ಅತ್ಯಂತ ಅಪ್ಯಾಯಮಾನವಾದ, ಸಮಾಜದಲ್ಲಿ ನಿಮ್ಮ ಆರ್ಥಿಕ ಮಟ್ಟವನ್ನು ಗುರುತಿಸುವ, ನಿಮಗೆ ಸಿಗುವ ನಮಸ್ಕಾರದ ಟೋನ್ ಅನ್ನು ನಿgsರಿಸುವ, ಮದುವೆ ಮುಂಜಿಗಳಲ್ಲಿ ಪ್ರದರ್ಶನಕ್ಕಾಗಿ ಉಪಯೋಗಿಸಲ್ಪಡುವ, ಉಳಿದಕಾಲದಲ್ಲಿ ಲಾಕರ್ ಅಲಂಕರಿಸುವ, ಬೈಕಿನಲ್ಲಿ ಬಂದು ಎಳೆದೋಡುವ ಸರಕಳ್ಳರಿಗೂ ಪ್ರಿಯವಾದ ಆಭರಣಗಳೇ ಚಿನ್ನದಲ್ಲಿ ಹೂಡುವ ಮೊತ್ತ ಮೊದಲನೆಯ ಮತ್ತು ಅತ್ಯಂತ ಪುರಾತನ ಮಾರ್ಗ.

ಅನುಭೋಗದ ದೃಷ್ಟಿಯಿಂದ ಚಿನ್ನಾಭರಣಗಳನ್ನು ಖರೀದಿಸಿಡುವುದು ಒಂದು ಉಪಯುಕ್ತ ಮಾರ್ಗವೆಂಬುದೇನೋ ಸರಿ. ಆದರೆ ಅದೊಂದು ಉತ್ತಮ ಹೂಡಿಕೆಯಾಗಲಾರದು. ಯಾಕೆಂದರೆ ಸಿದ್ಧ ಸೆಕೆಂಡ್ ಹ್ಯಾಂಡ್ ಆಭರಣಕ್ಕೆ ಮೂಲ ಆಭರಣದ ಬೆಲೆ ಇಲ್ಲ. ಒಮ್ಮೆ ಅಭಾರಣವಾಗಿಸಿದ ಚಿನ್ನವನ್ನು ಮರು ಮಾರಾಟ ಮಾಡಹೊರಟರೆ ತಯಾರಿ ಶುಲ್ಕ (ಮೇಕಿಂಗ್ ಚಾರ್ಜಸ್) ಮತ್ತು ತೇಮಾನು (ಕನ್ವರ್ಶನ್ ಲಾಸ್) ಎರಡೂ ನಮ್ಮನ್ನು ಹಿಂಡುತ್ತವೆ.

ಪ್ರತಿಬಾರಿ ಆಭರಣವಾಗಿಸುವಾಗಲೂ ಈ ರೀತಿ ೧೦-೨೫% ಮೌಲ್ಯವನ್ನು ಕಳೆದುಕೊಳ್ಳುತ್ತೇವೆ. ಇದು ಹೂಡಿಕೆಯ ದೃಷ್ಟಿಯಿಂದ ಖಂಡಿತವಾಗಿಯೂ ಒಳ್ಳೆಯದಲ್ಲ. ಅದ್ದರಿಂದ ಹೂಡಿಕೆಯಲ್ಲಿ ಆಸಕ್ತರು ಆಭರಣವನ್ನು ಕೊಂಡು ಇರಿಸುವ ಹವ್ಯಾಸ ನಷ್ಟಕಾರಕ. ಅನುಭೋಗ ಅಥವ ಕನ್ಸಂಪ್ಶನ್ ದೃಷ್ಟಿಯಿಂದ ಇದನ್ನು ಮಾಡುವುದಾದರೆ ನನ್ನ ಅಭ್ಯಂತರವಿಲ್ಲ. ದುಡ್ಡಿದ್ದವರು ತ್‌ಮ್ಮ ಮನಬಂದಂತೆ ಖರ್ಚು ಮಾಡುತ್ತಾರೆ. ಉಳ್ಳವರು ಆಭರಣ ಮಾಡುವರಯ್ಯ. ಆದರೆ ಅದೊಂದು ಖರ್ಚು, ಉತ್ತಮ ಹೂಡಿಕೆ ಅಲ್ಲ ಎಂಬುದು ನೆನಪಿರಲಿ.

ಚಿನ್ನದ ನಾಣ್ಯಗಳು:

ಚಿನ್ನದ ನಾಣ್ಯಗಳಲ್ಲಿ ಹೂಡುವುದು ಇತ್ತೀಚೆಗೆ ಪಾಪ್ಯುಲರ್ ಆಗುತ್ತಿದೆ. ವಿದೇಶದಿಂದ ಬರುವವರು ತರುವ ನಾಣ್ಯ ಅಥವ ಮನೆಪಕ್ಕದ ಆಭರಣದ ಅಂಗಡಿಯಲ್ಲಿ ಸಿಗುವ ನಾಣ್ಯಗಳು ಅಥವ ಬ್ಯಾಂಕುಗಳು ತಮ್ಮ ಶುದ್ಧತೆಯ ಗ್ಯಾರಂಟಿ ಜೊತೆಗೆ ಮಾರುವ ನಾಣ್ಯಗಳು/ಬಿಸ್ಕೂಟುಗಳು ಹೂಡಿಕೆಯ ಇನ್ನೊಂದು ಮಾರ್ಗ. ಇದು ಹೂಡಿಕೆಯ ದೃಷ್ಟಿಯಿಂದ ಉತ್ತಮ. ಆಭರಣಗಳಂತೆ ಉಪಯುಕ್ತತೆ ಇಲ್ಲವಾದರೂ ಆಭರಣಗಳಲ್ಲಿ ಬರುವಂತಹ ನಷ್ಟಗಳೂ ಇರದು. ಚಿನ್ನದಲ್ಲಿ ಹೂಡಿಕೆಯ ಸಂಪೂರ್ಣ ಬೆನಿಫಿಟ್ ಇದರಲ್ಲಿ ಸಿಗುತ್ತದೆ. ಆದ್ದರಿಂದ ಈ ನಾಣ್ಯಗಳನ್ನು ಆಗಾಗ್ಗೆ ಖರೀದಿಸುತ್ತಾ ಹೋಗುವುದು ಉತ್ತಮ.

ಆದರೆ, ನಾಣ್ಯ ಎಂದಾಕ್ಷಣ ಕೋಯಿನ್ ಕಲೆಕ್ಷನ್ ಸ್ಪರ್ಧೆಗೆ ಇಳಿಯದಿರಿ. ಕೋಯಿನ್‌ಗಳನ್ನು ಎಲ್ಲಿಂದ ಮತ್ತು ಎಷ್ಟು ಬೆಲೆಗೆ ಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ನೆಚ್ಚಿನ ಚಿನ್ನಾಭರಣದ ಅಂಗಡಿ ಹಲವಾರು ರೀತಿಯ ಶುದ್ಧತೆಯ ಸರ್ಟಿಫಿಕೇಟ್ ಅಥವ ಬೈ-ಬ್ಯಾಕ್ ಗ್ಯಾರಂಟಿಯೊಡನೆ ಕೋಯಿನ್ ಮಾರುತ್ತಿರಬಹುದು. ಅಥವ ನಂಬಿಗಸ್ತ ಅಕ್ಕಸಾಲಿ ನಿಮಗಾಗಿ ಸ್ಪೆಶಲ್ ಆಗಿ ಎಲ್ಲಿಂದಲೋ ತರಿಸಿಕೊಡಬಹುದು. ಸರಿಯಾದ ನಂಬಿಗಸ್ತ ಮೂಲದಿಂದ ಖರೀದಿಸುವುದು ಉತ್ತಮ.

ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕುಗಳು ಚಿನ್ನದ ನಾಣ್ಯಗಳನ್ನು ನಮ್ಮಿಂದಲೇ ಖರೀದಿಸಿ ಎಂದು ಜಾಹೀರಾತು ನೀಡುತ್ತಾರೆ. ಶುದ್ಧತೆಯ ಪ್ರಮಾಣವೇ ಅವರ ತುರ್ಪು ಚೀಟಿ. ೯೯.೯೯% ಶುದ್ಧತೆಯ ಸೀಲ್‌ನೊಡನೆ ಬರುವ ಈ ಚಿನ್ನಕ್ಕೆ ಮಾರುಕಟ್ಟೆಯಲ್ಲಿ ಅಂಗಡಿಗಳಲ್ಲಿ ಸಿಗುವ ಇತರ ೯೯.೯೯% ಶುದ್ಧ ಚಿನ್ನಕ್ಕಿಂತ ವ್ಯಾಟ್ ಗೀಟ್ ಸೇರಿಸಿ ೫-೧೫% ದಷ್ಟು ಬೆಲೆ ಜಾಸ್ತಿ!! ಅಂಗಡಿಗಳು ಮೋಸಮಾಡುತ್ತಾರೆ ಎಂದು ಪ್ರಚಾರ ನೀಡಿ ಜಾಸ್ತಿ ಚಾರ್ಜ್ ಮಾಡುವ ಈ ಬ್ಯಾಂಕುಗಳು ಅವರೇ ಮಾರಿದ ಚಿನ್ನವನ್ನು ಅವರೇ ವಾಪಾಸು ಖರೀದಿಸುವುದಿಲ್ಲ.

ಅಷ್ಟು ಮಾತ್ರವಲ್ಲ, ಅದರ ಮೇಲೆ ಒಂದು ಪುಟ್ಟ ಲೋನ್ ಅದ್ರೂ ಕೊಡಿ, ಸಾರ್ ಅಂದರೆ ಅದನ್ನೂ ನೀಡುವುದಿಲ್ಲ. ನೀವು ಹೂಡಿದ ದುಡ್ಡು ನಿಮಗೆ ವಾಪಾಸು ಬರಬೇಕಿದ್ದರೆ ಮೋಸಮಾಡುತ್ತಾರೆ ಎಂದು ಅವರು ಹೇಳುವ ಅದೇ ಅಂಗಡಿಗಳ ಬಾಗಿಲು ತಟ್ಟುವಂತೆ ಮಾಡುವುದು ಒಂದು ವಿಪರ್ಯಾಸವೇ ಸರಿ.

ಅಂಗಡಿಗಳಲ್ಲಿ ನಿಮಗೆ ಸಿಗುವುದು ಮಾರುಕಟ್ಟೆಯ ಬೆಲೆ. ನೀವು ಶುದ್ಧತೆಗೆ ನೀಡಿದ ಪ್ರೀಮಿಯಂ ಮೊತ್ತ ಯಾವುದೇ ಪ್ರಯೋಜನಕ್ಕೂ ಬಾರದು. ಅಥವ ಅವನ್ನು ಆಭರಣವಾಗಿಸ ಹೊರಟರೂ ಇದೇ ಪಾಡು. ಆದ್ದರಿಂದ ಬ್ಯಾಂಕುಗಳಿಂದ ಹೆಚ್ಚಿನ ಬೆಲೆ ಕೊಟ್ಟು ಚಿನ್ನವನ್ನು ಖರೀದಿಸಬಹುದು ಆದರೆ ಹೆಚ್ಚಿನ ಬೆಲೆಗೆ ಮಾರಲಾರಿರಿ- ಇದೊಂದು ರೀತಿಯ ಚಕ್ರವ್ಯೂಹ. ಒಳಹೊಕ್ಕುವ ಮೊದಲು ಯೋಚಿಸಿ.

ಚಿನ್ನದ ಇ.ಟಿ.ಎಫ್:

ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಅಥವ ಇ.ಟಿ.ಎಫ್ ಎಂದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಒಂದು ಮ್ಯೂಚುವಲ್ ಫಂಡ್. ಬರೇ ಚಿನ್ನದಲ್ಲಿ ಹೂಡಿಕೆ ನಡೆಸುವ ಈ ಫಂಡ್ ಶೇರು ಮಾರುಕಟ್ಟೆಯಲ್ಲಿ ಟ್ರೇಡ್ ಆಗುತ್ತದೆ. ಈ ಪೇಪರ್ ಚಿನ್ನವನ್ನು ಬೇಕಾದಾಗ ಕೊಳ್ಳಬಹುದು, ಬೇಡವಾದಾಗ ಕೊಡಬಹುದು- ಎಲ್ಲವೂ ಕ್ಷಣಾರ್ಧದಲ್ಲಿ ಮೌಸ್ ಕ್ಲಿಕ್ ಮಾಡಿ ಮಾಡಬಹುದಾದ ಕಾರ್ಯ.

ಅಂಗಡಿ ಅಂಗಡಿ ಅಲೆಯುವ ಪ್ರಶ್ನೆ ಇಲ್ಲ. ಭದ್ರತೆಯ ಕಾಳಜಿ ಇಲ್ಲ. ಎಲ್ಲವೂ ಫಂಡ್ ಹೌಸಿನವರದ್ದೇ ನಿರ್ವಹಣೆ. ೧ ಗ್ರಾಮ್ ಚಿನ್ನವನ್ನು ೧ ಯುನಿಟ್ ಆಗಿ ಪರಿಗಣಿಸುವ ಈ ಫಂಡುಗಳ ವಾರ್ಷಿಕ ನಿರ್ವಹಣಾ ಶುಲ್ಕ ಸುಮಾರು ೧% ದಷ್ಟು ಇರುತ್ತದೆ. ಇದರ ಕನ್ವೀನಿಯನ್ಸ್ ಮತ್ತು ಸ್ಪೀಡ್ ಕಾರಣಕ್ಕಾಗಿ ಇವು ಇತ್ತೀಚೆಗೆ ಬಹಳ ಜನಪ್ರಿಯವಾಗಿವೆ. ರಿಲಯನ್ಸ್, ಕೊಟಕ್, ಮುಂತಾದ ಎಲ್ಲಾ ಜನಪ್ರಿಯ ಫಂಡ್ ಹೌಸ್‌ಗಳು ಈ ರೀತಿಯ ಇ.ಟಿ.ಎಫ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಇವುಗಳಲ್ಲಿ ಹೂಡುವುದು ಒಂದು ಒಳ್ಳೆಯ ಐಡಿಯಾ. ಇತ್ತೀಚೆಗಂತೂ ಇ.ಟಿ.ಎಫ್‌ಗಳು ಅತ್ಯಂತ ಜನಪ್ರಿಯವಾಗುತ್ತಿವೆ.

ಆದರೆ ಕಟ್ಟೆಯಲ್ಲಿ ಇರುವ ಎಲ್ಲಾ ಫಂಡುಗಳೂ ಒಂದೇ ರೀತಿಯ ಪ್ರತಿಫಲವನ್ನು ನೀಡುವುದಿಲ್ಲ. ಆಡಳಿತಾತ್ಮಕ ಖರ್ಚುಗಳು ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಅವುಗಳಲ್ಲಿ ಅಸಲಿ ಚಿನ್ನದ ಪ್ರತಿಫಲಕ್ಕಿಂತ ತುಸು ಕಡಿಮೆ ಪ್ರತಿಫಲ ಬರುತ್ತದೆ. ಈ ವ್ಯತ್ಯಾಸಕ್ಕೆ ಟ್ರಾಕಿಂಗ್ ಎರ್ರರ್ ಎಂದು ಹೆಸರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಇ.ಟಿ.ಎಫ್‌ಗಳಲ್ಲಿ ಅತ್ಯಂತ ಕಡಿಮೆ ಟ್ರಾಕಿಂಗ್ ಎರ್ರರ್ ಇರುವ ಫಂಡ್ ನೋಡಿ ಹೂಡುವುದು ಉತ್ತಮ.

ಅಟ್ಯಾಚ್‌ಮೆಂಟ್:

ಗುರುಗುಂಟಿರಾಯರ ಸೊಸೆಯಮ್ಮ ತಮ್ಮ ಮನೆಯಲ್ಲಿ ನಡೆಯುವ ಯಾವುದೇ ವಿತ್ತೀಯ ನಿರ್ಧಾರಗಳಲ್ಲೂ ಭಾಗವಹಿಸುವುದಿಲ್ಲ. ಅವಳಿಗೆ ಅದ್ಯಾವ ಹೂಡಿಕೆಗಳ ಬಗ್ಗೆ ತಲೆಬುಡ ಕೂಡಾ ಅರ್ಥವಾಗುವುದಿಲ್ಲ. ಆದರೂ ಚಿನ್ನದಲ್ಲಿ ಹೂಡಿಕೆ ಉತ್ತಮ ಎಂಬ ವೇದವಾಕ್ಯವನ್ನು ಅಗಾಗ್ಗೆ ಉಚ್ಚರಿಸುತ್ತಾ ತನ್ನ ಹೂಡಿಕೆಯ ವಿತ್ತಪಾಂಡಿತ್ಯವನ್ನು ಮೆರೆಯುತ್ತಾಳೆ. ಇದು ಪ್ರತಿಯೊಂದು ಮನೆಯಲ್ಲಿ ಇದ್ದದ್ದೇ. ನನ್ನ ಪ್ರಕಾರ ಇದು ಒಂದು ರೀತಿಯ ಲೇಡೀಸ್ ಮಾಫಿಯಾ. ಈ ಮಾತನ್ನು ISI ಪ್ರಮಾಣಿತ ಡಬಲ್ ಹೆಲ್ಮೆಟ್ ಧರಿಸಿಕೊಂಡೇ ನನ್ನ ಸಂಪೂರ್ಣ ಜೋಷ್ ಔರ್ ಆವಾಷ್ ಕೇ ಸಾಥ್ ಹೇಳುತ್ತಿದ್ದೇನೆ.The valiant dies only once!

ಚಿನ್ನದ ಹೂಡಿಕೆ ಉತ್ತಮ ಎಂದು ಹೇಳುವ ನಿಮ್ಮ ಮನೆಯಾಕೆಯತ್ರ ಹೌದಾ?? ಹಾಗಾದ್ರೆ ಮೊದ್ಲು ಅಮ್ಮನಿಗೆ ಒಂದು ಬಳೆ ಮಾಡ್ಸೋಣ ಎಂದು ಒಂದೇ ಒಂದು ಬಾರಿ ಹೇಳಿನೋಡಿ. ಪ್ರಾಯಶಃ ಮತ್ತಿನ್ನೆಂದೂ ಆ ಮಾತನ್ನು ಹೇಳಲಾರಿರಿ! ಅಥವ ಅದರ ಬದಲಿಗೆ ಹೌದಾ? ಹಾಗಾದ್ರೆ ಚಿನ್ನದ ಇ.ಟಿ.ಎಫ್‌ನಲ್ಲಿ ದುಡ್ಡು ಹೂಡುತ್ತೇನೆ, ಸರಳ ಮತ್ತು ಸುಲಭ ಎಂಬ ಉತ್ತರ ಕೊಟ್ಟು ನೋಡಿ. ಆವಾಗ ಗೊತ್ತಾಗುತ್ತದೆ ಚಿನ್ನದಲ್ಲಿ ಹೂಡಿಕೆ ಎಷ್ಟು ಉತ್ತಮ ಅಂತ; ಕೂಡಲೇ ನಿಮ್ಮಾಕೆಯ ಪ್ಲೇಟ್ ಚೇಂಜ್ ಆಗುತ್ತದೆ.

***************************

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: