ಮಾತು, ಕತೆ….

-ಎಂ ಎಸ್ ಪ್ರಭಾಕರ

ಅವನು: ಲೋ, ಇದೀಯೇನೋ?

ಇವನು: ಯಾರು? ಯಾರಾಚೆ ಕದ ತಟ್ತಿರೋದು?

ಅ: ನಾನ್ಕಣೋ, ಇದೀಯಾ? ಅಂದೆ.

ಇ: ನಾನು ಅಂದ್ರೆ ಯಾರೋ? ಯಾರ್ನೀನು?

ಅ: ನಾನೋ. ನಾನು. ಏಕೆ, ನನ್ಮಾತು ದನಿ ಗುರ್ತು ಸಿಗ್ಲಿಲ್ಲವೇನೋ?

ಇ: ಹೇಗ್ಸಿಗುತ್ತೋ? ಮಖ ಕಾಣ್ಸೊಲ್ಲ, ಮುಚ್ಚಿರೋ ಬಾಗ್ಲಾಚೆ ಇದ್ದಿ. ಯಾರೋ ನೀನು? ಹೆಸ್ರಿಲ್ವೇನೋ?

ಅ: ನಿನ್ತಲೆ, ನಿಂಗ್ನನ್ಹೆಸ್ರು ಹೇಳ್ಬೇಕೇನೊ? ತೆಗ್ಯೋ ಬಾಗ್ಲು!

ಇ: ನೀನ್ಯಾರು ಅಂತ ಗೊತ್ತಾಗ್ದಿದ್ರೆ, ನಿನ್ಹೆಸ್ರು ಹೇಳ್ದಿದ್ರೆ, ಕದ ಹೇಗ್ತೆಗೀಲೋ? ನಿನ್ನ ಹೆಸ್ರ್ಹೇಳೊಕೆ ನಿಂಗೇನ್ಸಿಗ್ಗೇನೋ?

ಅ: ನಿನ್ಮನೆ ಹಾಳಾಗ. ನಿನ್ಹೆಸ್ರೇ ನನ್ಹೆಸ್ರು ಕಣೋ. ಅದ್ನಿಂಗ್ಚೆನ್ನಾಗ್ಗೊತ್ತು. ಇದೇನ್ನಿಂತಮಾಷೆ, ತೆಗಿ, ಬಾಗಿಲ್ತೆಗಿ.

ಇ: ಅಯ್ಯಾ, ನನ್ಹೆಸ್ರು ಈ ಕರ್ನಾಟಕದೇಶ್ದಲ್ಲಿ ಬಹಾಳ ಜನಪ್ರಿಯ. ಹತ್ತಾರುಸಾವಿರ ಮಂದಿ ಈ ಹೆಸ್ರಿಟ್ಕೊಂಡಿದಾರೆ. ಹತ್ತಾರುಸಾವಿರ ಅಮ್ಮಅಪ್ಪಂದ್ರು ತಮ್ಮ ಗಂಡುಮಗ್ವಿಗೆ ಈ ಹೆಸ್ರು ದಿನಂಪ್ರತಿದಿನ ಕೊಡ್ತಾಇದಾರೆ. ಇನ್ಸ್ವಲ್ಪ ಪರಿಚಯ ಕೊಡು. ಹೇಳು, ನೀನು ಯಾರ್ಮಗ ಅಂತ.

ಅ: ಹಾಳಾಗ್ ಹೋಗು. ಏನೋ ಸಮಾಚಾರ ಬಂತು, ಎಷ್ಟೋ ವರ್ಷಗ್ಳು ಪ್ರಪಂಚ ಎಲ್ಲಾ ಅಲೆದು ಈಗ್ನಿನ್ನಪ್ಪ ಕಟ್ಟಿದ್ಮನೇಗೆ ವಾಪ್ಸಾಗಿದ್ದಿ ಅಂತ. ಹೆಂಗಿದ್ದಿ ವಿಚಾರ್ಸಿಕೊಳ್ಳೋಣ ಅಂತ್ಬಂದೆ. ಬೇಡ, ಕದ ತೆಗೀಬೇಡ. ಗೂಬೆಪಿಶಾಚಿ ಹಾಗೆ ಒಬ್ನೇ ಇರು. ನಾನ್ಹೋಗ್ತೀನಿ.

ಇ: ಇರೋ. ತೆಗೀತೀನಿ. ಈಗಿನ್ದಿನಗ್ಳಲ್ಲಿ ಸ್ವಲ್ಪ ಹುಶಾರಾಗಿರ್ಬೇಕು ಅಂತ ಎಲ್ರೂ ಹೇಳ್ತಾರೆ. ಅದಕ್ಕೇ ನೀನ್ಯಾರು ಅಂತ ಸ್ಪಷ್ಟ ಮಾಡ್ಕೊಂಡೇ ಕದ ತೆಗೀಬೇಕಾಯ್ತು. ಬಾ. ಒಳಗ್ಬಾ. ಕೂತ್ಕೊ. ಇಲ್ಲೇ ವರಾಂಡಾಲಿ. ಒಳ್ಗಡೆ ಇನ್ನೂ ಸಾಮಾನು ಸರಂಜಾಮು ಜೋಡಿಸ್ಬೇಕು. ಎಲ್ಲಾ ಏರುಪೇರು.

ಅ: ಯಾಕೋ, ಏನೂ ಅಂಥಾ ಏರುಪೇರಿಲ್ವಲ್ಲಾ. ಒಳ್ಗಡೆ ಹಾಲ್ನಲ್ಲೇ ಕೂತ್ಕೊಳ್ಳೋಣ.

ಇ. ಬೇಡ್ವಯ್ಯಾ, ಇಲ್ಲೇ ವರಾಂಡಾಲ್ಲೇ ಕೂಡೋಣ. ಆ ಮೂಲೇಲಿ ಒಂದ್ರಮೇಲೊಂದಿಟ್ಟಿರೋ ಪ್ಲಾಸ್ಟಿಕ್ ಕುರ್ಚಿ ಎರ್ಡಿಳಿಸಿ ಇಲ್ಲೇ ಕೂಡೋಣ.

ಅ: ಸರಿ, ನೀನ್ಹೇಳ್ದಾಗೇ ಆಗ್ಲಿ. ನಾನ್ಹೀಗೇ ಅಂದ್ಕೊಂಡೆ, ನೀನೊಬ್ಬ ದೊಡ್ಡ ಪ್ರೊಫೆಸರ್ರು, ಇಂಗ್ಲಿಷ್ ಸಾಹಿತ್ಯ, ಭಾಷೆ ಪಂಡಿತ, ಕನ್ನಡಾನೂ ಚೆನ್ನಾಗಿ ಓದ್ಕೊಂಡಿರೋನು, ಇನ್ನೂ ಏನೇನೋ ಭಾಷೆ ಕಲ್ತ್ಕೊಂಡಿದ್ದಿ ಅಂತ ಕೇಳಿದ್ದೀನಿ, ಇಷ್ಟು ರಾಶಿರಾಶಿ ಪುಸ್ತಕಗ್ಳು ಇಟ್ಟಿದ್ದೀಯಲ್ಲಾ ಇಲ್ಲಿಂದ್ಲೇ ಕಾಣೋ ಹಾಗೆ, ಮತ್ತೆ ಒಳಗಿನ ಪಕ್ಕದ ರೂಮ್ನಲ್ಲೂ ಇದೇ ರಾಶಿಗ್ಳು ಕಾಣತ್ವೆ, ಅವನ್ನು ಒಂದ್ಸಲ ನೋಡೋಣ ಅನ್ನಿಸ್ತು.

ಇ. ಅಯ್ಯೋ, ಆ ರದ್ದಿ ನೋಡೋಕ್ಕೆ ಧಂಡಿಯಾಗ್ಸಮಯ ಇದೆ. ಈಗಿಲ್ಲೇ ಕೂಡೋಣ. ಅದಲ್ಲದೆ ಪುಸ್ತಕ ಓದೋಕ್ಕೆ, ನೋಡೋಕ್ಕಲ್ಲ.

ಅ: ಗೊತ್ತೋ. ನಾನೇನೂ ಮುಟ್ಠಾಳ್ನಲ್ಲ. ನಿನ್ಹಾಗೇ ಮತ್ತೆ ನಿಂಗೆ ಗೊತ್ತಿರೋಂತೆ ನಾನೂ ಇಂಗ್ಲಿಷ್ ಮೇಷ್ಟ್ರಾಗಿದ್ದೆ. ಆದ್ರೆ ನಿನ್ನಂತೆ ಪ್ರಪಂಚ್ವೆಲ್ಲ ಸುತ್ದೆ ಇದೇ ಊರ್ನಲ್ಲಿ ಮತ್ತಿದೇ ನಮ್ಕರ್ನಾಟಕ್ದಲ್ಲೇ ಜೀವ್ನ ಎಲ್ಲಾ ಕಳ್ದೆ. ಇರ್ಬೋದು, ನಿನ್ನಷ್ಟು ಓದ್ದೇ ಇರ್ಬೋದು. ಆದ್ರೆ ನಾನೂ ಪುಸ್ತಕ ಓದ್ತೀನಯ್ಯಾ. ಒಂದ್ಮೂರ್ನಾಲ್ಕು ಸಣ್ಣ ಪುಟ್ಟ ಪುಸ್ತಕಗ್ಳನ್ನೂ ಬರ್ದಿದ್ದೇನೆ. ನಿಂಗೊತ್ತಾನೆ, ನಂಗೊಂದ್ಸಣ್ಣ ಅವಾರ್ಡೂ ಬಂದಿತ್ತು. ನನ್ಮನೇಲೂ ಪುಸ್ತಕಗ್ಳಿವೆ. ನಂದೇ ಒಂದು ಪುಟ್ಟ ಲೈಬ್ರರಿ. ಆದ್ರೆ ಇಷ್ಟು ರಾಶಿರಾಶಿ ಪುಸ್ತಕಗ್ಳಿಲ್ಲ. ಮತ್ತೆ ನಾನಂತೂ ನಿನ್ನಂಥಾ ದೊಡ್ಡ ಮಹಾನ್ಬುದ್ಧಿಜೀವಿ ಅಲ್ಲ.

ಇ: ಯಾಕೋ ಇದೆಲ್ಲಾ ವ್ಯಂಗ್ಯ? ಇದೆಲ್ಲಾ ಇರ್ಲಿ ಬಿಡು, ಏನು ಓದ್ತಿದ್ದೀ ಈ ನಡ್ವೆ?

ಅ: ಈಚೆಗೆ ಭಾರತೀಯ ವಿದ್ಯಾಭವನ ಅಳಸಿಂಗರಾಚಾರ್ಯರ ಪೂರ್ತಿ ರಾಮಾಯಣ, ಮಹಾಭಾರತ, ಮತ್ತೆ ಭಾಗವತ ಕನ್ನಡ ಅನುವಾದಗಳು ಇವೆಯಲ್ಲಾ, ಅವನ್ನ ರೀಪ್ರಿಂಟ್ ಮಾಡಿದ್ದಾರೆ. ಮೂರರ್ದೂ ಪೂರ್ತಿ ಸೆಟ್ ಕೊಂಡ್ಕೊಂಡೆನಯ್ಯಾ.

ಇ: ಓ, ಹೌದು, ನೀನ್ಬಹಾಳ ದೇವ್ರುದಿಂಡ್ರಲ್ಲಿ ಭಕ್ತಿ, ನಂಬ್ಕೆ ಇಟ್ಕೊಂಡವ ಅಲ್ವೇನೋ? ರಾಮಾಯಣ, ಭಾರತ, ಭಾಗವತ ಓದ್ಕೊಳ್ಳೇಬೇಕು.

ಅ: ಅಹಹಾ, ನನ್ಮಾತು ವ್ಯಂಗ್ಯ ಅಂತೀಯ? ನಿನ್ನೀಮಾತ್ನಲ್ಲೇನ್ವ್ಯಂಗ್ಯ ಕಮ್ಮೀನಾ? ದೇವ್ರುದಿಂಡ್ರಲ್ಲಿ ನಂಬ್ಕೆ ಇಟ್ಕೊಂಡ್ರೆ ಅದೇನ್ತಪ್ಪೇನೋ? ಪ್ರಪಂಚ್ವೆಲ್ಲಾ ನಿನ್ಹಾಗ್ನಾಸ್ತಿಕ್ರಾಗ್ಬೇಕೇನೋ?

ಇ: ಇಲ್ವೋ, ಖಂಡಿತಾ ಇಲ್ಲ. ನಂಗೇನೂ ಅಂಥ ದುರಭಿಮಾನ ಇಲ್ವೋ. ಅದಲ್ದೆ ನಾನೂ ರಾಮಾಯಣ, ಮಹಾಭಾರತ, ಗೀತೆ, ಪುರಾಣ ಎಲ್ಲಾ ಓದ್ಕೊಂಡಿದೇನೋ.

ಅ. ಹೌದೌದು. ನಿನ್ನಂಥವ್ರೆಲ್ಲ ಅಂಥ ಪುಸ್ತಕ ಓದೋದು ಅವುಗಳ್ನ ಲೇವಡಿ ಮಾಡೋಕ್ಕೆ. ಇರ್ಲಿ ಬಿಡು, ಈ ನಡ್ವೆ ಏನ್ಬರೀತಿದ್ದಿ?

ಇ: ಅರೇ ನನ್ಮಗ್ನೇ, ನಿಂಗ್ಯಾರು ಹೇಳಿದ್ರೋ, ನಾನ್ಬರೀತೀನೀ ಅಂತ!

ಅ. ಯಾಕೋ, ನಾವೆಲ್ರೂ ನಿರಕ್ಷರಕುಕ್ಶಿಗಳೇನೋ? ನೀನ್ಬರೇ ದೇಶವಿದೇಶಗ್ಳಲ್ಲಿ ಪಾಠ ಮಾಡಿರುವ ವಿಖ್ಯಾತ ಪ್ರೊಫೆಸರ್ ಮಾತ್ರ ಅಲ್ಲ, ನೀನ್ಬಹಾಳ ದೊಡ್ಡ ಬರಹಗಾರ ಕೂಡ ಅಂತ ನಮ್ಗೆಲ್ಲಾ ಗೊತ್ತು.

ಇ. ಇಲ್ವೋ, ನಿನ್ಗೂ ಗೊತ್ತಿರ್ಬೇಕು, ನಾನೇನು ಅಂಥ ಬರಹಗಾರ್ನಲ್ಲ, ಅಂತ. ಏನೋ ಒಂದಷ್ಟು ಪುಸ್ತಕಗಳ್ನ ಬರಿದಿದ್ದೀನೆ, ಅಷ್ಟೆ. ಅವುಗ್ಳನ್ನ ಯಾರಾದೂ ಓದಿದ್ದಾರಾ ನನ್ಗೇ ಅನುಮಾನ. ಇರಲಿ, ಈ ಬರವಣಿಗೆ ಕತೆ ಬಿಡು. ನಿನ್ಸಮಾಚಾರ ಏನು? ಮದ್ವೆ ಮಾಡಿಕೊಂಡಿದ್ದಿ ತಾನೇ? ಮಕ್ಕಳೆಷ್ಟು?

ಅ. ಮಾಡ್ಕೊಂಡಿದ್ದೆ. ಆದ್ರೆ ಈಗ ಹೆಂಣ್ತಿ ಇಲ್ಲ. ಇದ್ರು ಮೂವರು ಮಕ್ಳು, ಆದ್ರೆ ಈಗಿರೋವ್ರು ಇಬ್ರು. ಒಬ್ಳು ಮಗ್ಳು, ಒಬ್ಬ ಮಗ. ಕೊನೇವ್ನು ಮಗುವಾಗಿದ್ದಾಗ್ಲೇ ತೀರ್ಕೊಂಡ.

ಇ. ಅಯ್ಯೋ ಪಾಪ. ಮತ್ತೆ ನಿನ್ಹೆಂಣ್ತಿಗೇನಾಯ್ತು? ಏನಾದ್ರೂ ಸೀರಿಯಸ್ ಖಾಯ್ಲೆ ಆಗಿತ್ತಾ? ಯಾವಾಗ ತೀರಿಕೊಂಡ್ಳು?

ಅ. ನಿಂಗೆ ಯಾರೋ ಹೇಳಿದ್ರು ಅವ್ಳು ತೀರಿಕೊಂಡಿದ್ದಾಳೆ ಅಂತ. ಇದ್ದಾಳೆ. ಇನ್ನೂ ಗೂಟ ಹೊಡ್ಕೊಂಡು ಗಟ್ಯಾಗಿದಾಳೆ.

ಇ. ಅಂದ್ರೆ? ನೀವಿಬ್ರೂ ಒಟ್ಟಿಗೆ ಇಲ್ವೇನೋ?

ಅ. ಇಲ್ವೋ. ಇನ್ನೆಷ್ಟು ಸ್ಪಷ್ಟವಾಗಿ ಹೇಳ್ಬೇಕು ನಿಂಗೆ. ಇಲ್ಲ, ನಾವಿಬ್ಬರೂ ಒಟ್ಟ್ಗಿಲ್ಲ.

ಇ. ಅಂದ್ರೆ? ಡೈವೋರ್ಸ್ ಮಾಡ್ಕೊಂಡಿದೀರೇನೋ? ಶಿವಶಿವಾ, ಇದೇನ್ಬಂತು, ನಮ್ಮ ಈ ಊರ್ನಲ್ಲೂ ಡೈವೋರ್ಸಾ?

ಅ. ಏನು, ಡೈವೋರ್ಸ್ ಬರೀ ದೊಡ್ಡ ಊರುಗ್ಳಲ್ಲಿ ಮಾತ್ರ ಆಗೋ ಪ್ರಮಾದಾನೇನೋ? ನೀನೇನು ಪ್ರಪಂಚವೆಲ್ಲಾ ಸುತ್ತಿದ್ದೀ, ನಿನ್ಗೇನು ಕಾಮನ್ಸೆನ್ಸ್ ಇಲ್ವೇನೋ? ಇಂಥ ಸಣ್ಣ ಊರ್ನಲ್ಲೂ ಗಂಡು ಹೆಣ್ಣು ಪ್ರೇಮಿಸ್ತಾರೆ, ಮದ್ವೆ ಮಾಡ್ಕೊಳ್ತಾರೆ, ಇಲ್ಲಾ ಮದ್ವೆ ಮಾಡಿಕೊಳ್ದೇ ಒಟ್ಗೆ ಜೀವ್ನ ನಡೆಸ್ತಾರೆ. ಮದ್ವೆ ಆದಿದ್ದೇ ಆದ್ರೆ ಸಂಸಾರ ಚೆನ್ನಾಗೇ ಇರುತ್ತೆ. ಒಂದೊಂದ್ಸಾರಿ ಎಂಥಾ ಚೆನ್ನಾದ ಮದ್ವೆ ಸಂಸಾರ ಕೂಡ ಕೆಡುತ್ತೆ, ಒಂದ್ಕಾಲದ ಆಸೆ ನಿರಾಸೆ ಆಗುತ್ತೆ.

ಒಂದ್ಕಾಲದ ಉಕ್ಕಿ ಬಂದಿದ್ದ ಪ್ರೀತಿ ದ್ವೇಷ ಆಗುತ್ತೆ. ಅಥ್ವಾ ಅದಕ್ಕಿಂತಾ ಘೋರ, ಅಲಕ್ಷ್ಯ ತಾತ್ಸಾರ ಆಗುತ್ತೆ. ಅಥ್ವಾ ಅವ್ಳಾಗ್ಲೀ ಇವ್ನಾಗ್ಲೀ ಬೇರ್ಯಾವ್ನನ್ನೋ ಅಥ್ವಾ ಬೇರ್ಯಾವ್ಳನ್ನೋ ಮೆಚ್ಕೊಂಡೋ ಅಥ್ವಾ ಮೆಚ್ಕೊಂಡೆ ಅನ್ನೋ ಭ್ರಮೇಲೋ ಒಂಧೊಸ್ಜೀವ್ನ ಶುರುಮಾಡೋಣ ಅಂತ ಹೊಸ್ದಾರಿ ಹುಡುಕ್ತಾರೆ. ಇವುಗ್ಳೆಲ್ಲಾ ಏನ್ದೊಡ್ಮಾತೇನೋ? ನಿನ್ಪ್ರಕಾರ ಇವೆಲ್ಲಾ ನಗ್ರಗ್ಳಲ್ಲಿ ಮಾತ್ರ ಆಗೋ ಘಟ್ನೆಗ್ಳೇನೋ? ನಿನ್ಗೇನು ಇಷ್ಟು ವಯಸ್ಸಾಗಿದೆ, ಇಷ್ಟೆಲ್ಲಾ ಸುತ್ತಿದ್ದಿ, ಜೀವ್ನದ ಅನುಭವಾನೆ ಇಲ್ವೇನೊ?

ಇ. ಹೌದಪ್ಪಾ. ನನ್ಗೆ ಇದೆಲ್ಲಾ ಅನ್ಸಿರಿಲಿಲ್ಲ ಕಣೋ. ಸಾರಿ, ನಿನ್ನ ಮನಸ್ಗೆ ನೋವುಂಟ್ಮಾಡಿದ್ರೆ.

ಅ. ನೋವುಗೀವೇನೂ ಇಲ್ಲವೊ. ಅವ್ಳು ನನ್ಬಿಟ್ಟು ಹೋದಾಗ ನೋವಾಗಿತ್ತು. ಈಗ ಬರೀ ಬೇಜಾರು. ಒಬ್ಬಂಟಿಗತನದ ಬೇಜಾರು. ಅದೂ ಹೆಚ್ಚು ಕಮ್ಮಿ ಅಭ್ಯಾಸ ಆಗಿದೆ.

ಇ. ಇರ್ಲಿ ಬಿಡು. ನಿನ್ಮಕ್ಳು? ಅವ್ರೆಲ್ಲಿದಾರೆ?

ಅ. ಮಗ, ಚಿಕ್ಕೋವ್ನು, ಆಸ್ಟ್ರೇಲಿಯಾದಲ್ಲಿ, ಅಡಿಲೇಡೋ ಮೆಲ್ಬೋರ್ನೋ ಎಲ್ಲೋ. ಅಲ್ಲೇ ಮದ್ವೆ ಮಾಡ್ಕೊಂಡಿದಾನಂತೆ. ನಂಗೆ ತಿಳ್ದಿರೋ ಮಟ್ಟಿಗೆ ಒಂದು ಮಗು. ಗಂಡೊ ಹೆಣ್ಣೋ ಗೊತ್ತಿಲ್ಲ. ಮತ್ತೆ ಮಗ್ಳು, ದೊಡ್ಡವ್ಳು, ಇದಾಳೆ ಇಲ್ಲೇ ಬೆಂಗ್ಳೂರ್ನಲ್ಲಿ. ಮಕ್ಳಿಬ್ರೂ ಹೆಸ್ರಿಗ್ಮಾತ್ರ, ಲೆಕ್ಕಕ್ಕಿಲ್ಲ. ಮಗ್ಳು ಅವ್ಳ ಅಮ್ಮನ್ಜೊತೇಲೇ ಇದಾಳೆ. ಅವ್ಳಮ್ಮ ಯಾವಾಗ್ಲೂ ಕೆಲ್ಸ ಮಾಡ್ತಿದ್ಳು, ನನ್ಮೇಲೆ ಎಂದೂ ನಿರ್ಭರ ಆಗಿರ್ಲಿಲ್ಲ. ಈಗ ಅವ್ರಿಬ್ಬರ್ದೇ ಬೇರೆ ಸಂಸಾರ.

ಇ. ಮತ್ತೆ, ನಿನ್ನ ಅಳಿಯ…

ಅ. ಅಳಿಯ ಗಿಳಿಯ ಯಾರೂ ಇಲ್ವೋ. ನನ್ಮಗ್ಳು ಮದ್ವೆ ಮಾಡ್ಕೊಂಡ್ಳಿಲ್ಲ.

ಇ. ಯಾಕೆ? ಗಂಡು ಸಿಗ್ಲಿಲ್ವೇನೋ?

ಅ. ಎಲ್ಲಿದ್ದೀಯೋ ನೀನು? ನಿಜವಾಗ್ಲೂ ನಿಂಗೆ ಸಂಸಾರ್ದನುಭವಾನೇ ಇಲ್ಲ ಅಂತನ್ಸುತ್ತೆ. ನಾನೇನು ನನ್ನ ಮಗ್ಳಿಗೆ ಗಂಡು ಹುಡುಕ್ಬೇಕೇನೋ? ನನ್ಮಗ್ಳು ಇಷ್ಟು ಚಂದ, ಇಷ್ಟು ಚೂಟಿ ಚುರುಕು, ಯಾರನ್ನ ಬೇಕಿದ್ರೂ ಮದ್ವೆ ಮಾಡ್ಕೊಬೋದಾಗಿತ್ತು. ಏನೋ ಅವಳ ಇಷ್ಟ, ಒಬ್ಬಳೇ ಇರ್ತೇನೆ ಅಂತ.

ಇ. ಅಂತೂ ನಿಂಗೆ ಮಗಳೊಬ್ಳಾದ್ರೂ ಇದಾಳಲ್ಲಾ, ಕೊನೆಗಾಲಕ್ಕೆ.

ಅ. ಇಲ್ವೋ. ಇದ್ಳು ನಾನೂ ನನ್ನ ಹೆಂಣ್ತಿ ಒಟ್ಗಿರೋವರ್ಗೂ. ನಾನ್ಮದ್ವೆ ಮಾಡ್ಕೊಂಡಿದ್ದೇ ಒಬ್ಮಗ್ಳು ಬೇಕು ಅಂತ. ಜೀವನ್ದಲ್ಲಿ ಇನ್ನೇನೂ ಆಸೆ ಇರ್ಲಿಲ್ಲ್ವೋ. ಒಂಧೆಣ್ಮಗು ಆದ್ರೆ ಸಾಕು, ಆ ಮಗ್ವಿಗೇ ನನ್ಪ್ರೀತಿ, ನನ್ವಾತ್ಸಲ್ಯ, ನನ್ವಿದ್ಯೆ, ನನ್ನನುಭವ, ನನ್ತಿಳುವಳಿಕೆ, ನನ್ಜೀವ್ನಾನೇ ಕೊಡ್ತೀನಿ ಅಂತನ್ಕೊಂಡಿದ್ದೆ. ಇವೆಲ್ಲಕ್ಕೂ ಮೀರಿ ಕೊಟ್ಟೆನೋ. ಆದ್ರೆ ಏನೊ ಆ ಕೊನೆ ಗಂಡ್ಮಗು ಹುಟ್ಟಿದ ಕೆಲವೇ ದಿನಗ್ಳಲ್ಲಿ ತೀರ್ಕೊಂಡ್ನಂತ್ರ ನನ್ಹೆಂಡ್ತೀಗೆ ನನ್ಮೇಲೆ ಒಂದ್ರೀತಿ ಬೇಜಾರು, ತಿರಸ್ಕಾರ ಹುಟ್ಕೊಂಡ್ತು.

ನಂಗೇನೂ ಅವ್ಳ ಮೇಲೆ ಕೋಪ ಇಲ್ವೋ. ಹೊಟ್ಟೇಲ್ಹುಟ್ಟಿದ್ಮಗು ತೀರ್ಕೊಂಡ್ರೆ ತಾಯಿಗೇನಾಗುತ್ತೋ ನಾವ್ಗಂಡಸ್ರಿಗೆ ಅದನ್ನರ್ಥ ಮಾಡ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಸಮಾಧಾನ ಹೇಳೋದೂ ಕಷ್ಟ. ಏನ್ತಾನೇ ಹೇಳೋದು. ಹಾಗೇ ಬರ್ತಾ ಬರ್ತಾ ಆ ಹೆಣ್ಮಗೂನೂ ನನ್ನಿಂದ ದೂರ್ವಾದ್ಳು. ಮನೆಮಾತೇ ಕಮ್ಮಿ ಆಗೋಯ್ತೋ. ದಿನಗಟ್ಟಲೆ ಮಾತೇ ಆಡ್ತಿರಲಿಲ್ಲ. ನಾನೇ ಮೈಮೇಲೆ ಬಿದ್ಮಾತಾಡ್ಸಿದ್ರೆ ಒಂದೆರಡಕ್ಷರದುತ್ರ. ಹ್ನೂ ಉಹ್ನೂ ಅಥ್ವಾ ಬಹಾಳ ಅಂದ್ರೆ ಹೌದು ಅಲ್ಲ ಅಂತ ಅಷ್ಟೇ. ಮತ್ತೆ ಅವ್ಳಮ್ಮ ನನ್ನನ್ನ ಬಿಟ್ಠೋದ್ಮೇಲಂತೂ ನಂಗೇ ಅರ್ಥ್ವಾಗ್ದ ತಿರಸ್ಕಾರ ಬೇಸ್ರ ಬಂತೋ, ನನ್ಮೇಲೆ. ಕೆಲ್ವೇ ದಿನಗ್ಳಲ್ಲಿ ಅವ್ಳೂ ಬಿಟ್ಠೋದ್ಲು. ನಾನೇನ್ಮಾಡ್ಲಿ. ಒಂದ್ಮಾತ್ಮಾತ್ರ ಸ್ಪಷ್ಟವಾಯ್ತು. ಮೊದಲ್ನಿಂದ ನನ್ಬಗೆ ಇದ್ಪ್ರೀತಿ ಸುತರಾಂ ಕರಗಿ ಹೋಯ್ತು. ಸಂಸಾರ ಅಂದ್ರೆ ಇದೇ. ಯಾವಾಗೇನಾಗುತ್ತೆ ಅಂಥೇಳೋದು ಸಾಧ್ಯವೇ ಇಲ್ಲ. ಇರ್ಲಿ, ನನ್ಗೋಳು ಇದ್ದೇ ಇದೆ. ನಿನ್ಸಮಾಚಾರ ಏನು? ಇಷ್ಟು ದೊಡ್ಡಮನೇಲಿ ನಿಂದೊಬ್ಬಂದೇನಾ ಸಂಸಾರ?

ಇ. ಹೌದು. ಈಗ ವಾಪ್ಸಾದಮೇಲೆ.

ಅ. ಏನು ಜೀವನ್ವೆಲ್ಲಾ ಒಬ್ನೇನಾ? ನಿಂಗೆ ಗೊತ್ತಲ್ಲಾ, ನಾವುಗ್ಳು ಸಣ್ಣ ಊರಿನವ್ರು, ಅದಕ್ಕೆ ಸರ್ಯಾಗಿ ನಿಮ್ಮಂಥವ್ರು ಅನ್ಕೊಳ್ಳೋ ಹಾಗೆ ನಮ್ಮಗ್ಳ ಮನಸ್ಸೂ ಸಣ್ದು. ಸ್ವಾಭಾವಿಕ್ವಾಗೇ ನಿನ್ನಂಥ ದೊಡ್ಡ್ಮನುಷ್ಯರ ಬಗ್ಗೆ ಬಹಳ ಕುತೂಹಲ. ನಾವುಗ್ಳು ಹೀಗೇ ಕೇಳಿದ್ವಿ, ನೀನು ಮದ್ವೇನೇ ಮಾಡಿಕೊಳ್ಳಲಿಲ್ವಂತೆ. ಹೌದಾ? ನೀನು ಯಾವಾಗ್ಲೂ ಗುಂಡ್ಗೋವೀನಾ? ಅಥ್ವಾ ಮದ್ವೆಗಿದ್ವೆ ಮಾಡಿಕೊಂಡಿದ್ಯಾ?

ಇ. ಮಾಡ್ಕೊಂಡಿದ್ನೆಯ್ಯಾ, ಹೆಚ್ಚುಕಮ್ಮಿ ನಿನ್ಹಾಗೇ. ಆದ್ರೆ ನೀನ್ಹೇಳೋದೂ ನಿಜ ಕಣಯ್ಯಾ.

ಅ. ಅಂದ್ರೆ?

ಇ. ಅಂದ್ರೆ? ಹೆಣ್ತಿ ಇದ್ದಾಗ್ಲೂ ಗುಂಡ್ಗೋವಿ. ಈಗ್ಲೂ ಗುಂಡ್ಗೋವಿ.

ಅ. ನಾನು ಕೇಳ್ಧಾಗೆ ನೀನು ಮದ್ವೇನೇ ಮಾಡ್ಕೊಳ್ಳಿಲ್ಲಾ ಅಂತಾ…

ಇ. ಅಯ್ಯೋ, ಅದೂ ಒಂದ್ಕತೇ ಕಣೋ. ಅದೇಕೋ ನಂಗೇ ಅರ್ಥವಾಗಿಲ್ಲ, ನನ್ಬಗ್ಗೆ ನಾನ್ಕೇಳ್ದೇ ಇರೋ ಕತೆ ಇಲ್ಲ.

ಅ. ಇರ್ಲಿ. ನೆಟ್ಗೆ ಹೇಳು. ನೀನು ಮದ್ವೆ ಮಾಡ್ಕೊಂಡ್ಯೋ, ಅಥ್ವಾ ಗುಂಡ್ಗೋವೀನೋ?

ಇ. ಮದ್ವೆ ಮಾಡಿಕೊಳ್ಳಿಲ್ಲ. ಅದಕ್ಕೇ ಹೇಳಿದ್ದು ಹೆಣ್ತಿ ಇದ್ದಾಗ್ಲೂ ಗುಂಡ್ಗೋವಿ ಅಂತ.

ಅ. ಇದೇನು ಅರ್ಥವಿಲ್ದ ಮಾತಯ್ಯಾ? ಈಗ ಗುಂಡ್ಗೋವಿ ಸರಿ. ಆದ್ರೆ ಹೆಣ್ತಿ ಇದ್ದಾಗ್ಲೂ ಗುಂಡ್ಗೋವಿ ಅಂತಿ. ಅಂದ್ರೆ ಒಂದ್ಕಾಲ್ದಲ್ಲಂತೂ ಹೆಂಣ್ತಿ ಇದ್ಲು ತಾನೇ? ಮದ್ವೆ ಮಾಡ್ಕೊಂಡಿದ್ದೆ ತಾನೇ? ಅಥ್ವಾ ಮದ್ವೆ ಮಾಡ್ಕೊಂಡಾಗ್ಲೂ ಹೆಣ್ತಿ ಜೊತೆ ಸಂಗಮಾಡ್ದೆ ಪರ್ವಟ್ಟಾಗಿದ್ಯೇನೋ?

ಇ. ಇಲ್ವೋ, ನಾನೇನಂಥಾ ಪರ್ವಟ್ಟಲ್ವೋ. ಸಂಸಾರಜೀವನ ನಡಿಸ್ದೆ, ಒಂದ್ಸಲ ಅಲ್ಲ, ಎರ್ಡ್ಸಲ, ಬೇರ್ಬೇರೇವ್ರ ಜೊತೆ. ಆದ್ರೆ ಮದ್ವೆ ಮಾಡ್ಕೊಳ್ಳಿಲ್ಲ. ನಿನ್ನ ಸಂಸಾರದ ಕತೆ ಕೇಳ್ತಿದ್ದಾಗ ನಂಗೆ ಒಂದ್ರೀತಿ ಹೊಟ್ಟೆಕಿಚ್ಚಾಯ್ತೋ. ಎಲಾ ಇವ್ನ, ನೋವು ತಿಂದಿದಾನೆ, ಜೊತೇಗೆ ಕಷ್ಟ ಸುಖಾನೂ ಅನುಭವಿಸಿದಾನೆ. ನಂದು? ನಾನೂ ಕಷ್ಟಸುಖ ಅನ್ಭವಿಸ್ದೆ. ಆದ್ರೆ ಈಗ ಆ ದಿನಗ್ಳ ನೆನ್ಪು ಅನ್ನೋಕೆ ಏನೇನೂ ಇಲ್ಲ. ಒಂದು ದೊಡ್ದ ಸೊನ್ನೆ. ಆದ್ರೆ ನಿಜ ಹೇಳೋಕೆ ಸ್ವಲ್ಪ ಸಂಕೋಚ ಆಯ್ತು. ಅದಕ್ಕೇ ಕಟ್ಟುಕತೆ ಕಟ್ಟೋಣ ಅಂದ್ಕೊಂಡಿದ್ದೆ. ಆದ್ರೆ ಕತೆ ಕಟ್ಟೋದ್ಕೆ ಮುಂಚೇನೇ ನೀನ್ನನ್ಗುಟ್ರಟ್ಮಾಡ್ಬಿಟ್ಟೆ. .

ಅ. ಹೌದೌದು. ಕತೆಕಟ್ಟೋದಲ್ಲಿ ನೀನ್ತುಂಬ ಜಾಣ ಅಲ್ವಾ. ಈಗ್ಲೂ ಕಟ್ಕತೆ ಹೇಳ್ತಿದ್ದೀಯಾ? ಇರ್ಲಿ. ಮದ್ವೆ ಮಾಡ್ಕೊಳ್ಲೇ ಇಲ್ಲ. ಆದ್ರೆ ಈ ಗುಂಡ್ಗೋವಿತನ ಒಂದ್ರೀತಿ ಸುಖ ಕೊಟ್ಟಿರ್ಬೇಕು ಅಲ್ವಾ. ಮದ್ವೆ ಮಾಡ್ಕೊಳ್ದೆ ಹೆಣ್ಣಿನ ಸಂಗ, ಸಂಸಾರ ಸುಖ. ಎಂಥ ಅದೃಷ್ಟವಂತ ಕಣಯ್ಯ ನೀನು. ನಾವ್ಯಾರ್ಸಂಸಾರವಂದಿಗ್ರನ್ನಾದ್ರೂ ಕೇಳು, ನಮ್ದೆಲ್ಲಾ ಒಂದೇ ಗೋಳು, ಮದ್ವೆ ಮಾಡ್ಕೊಳ್ದಿದ್ರೆ ಎಷ್ಟೋ ಸುಖ್ವಾಗಿರ್ತಿದ್ವಿ ಅಂತ. ನನ್ಮಟ್ಟಿಗೆ ಇದೆಲ್ಲಾ ಅರ್ಥವಿಲ್ದ ಗೊಣ್ಗಾಟ. ಆದ್ರೂ ಈರೀತಿ ಗೊಣಗೋದ್ರಲ್ಲಿ ಒಂಥರಾ ಸುಖ ಪಡ್ತಾರೆ. ಅಂಥವ್ರ ಲೆಕ್ಕಾಚಾರ್ದ ಪ್ರಕಾರ ನೀನೇ ಜಾಣ, ಕಣೋ.

ಇ. ಥೂ, ಅವ್ರಮನೆ ಹಾಳಾಗ. ಒಬ್ನೇ ಇರೋದ್ರಲ್ಲಿ ಏನ್ಜಾಣ್ತನ ಇದ್ಯೋ? ನನ್ನನ್ನೋಡು, ಮೊದ್ಲು ಹೆಣ್ಣೊಬ್ಬಳೊಡನೆ ಸಂಸಾರದಂಥಾ ಸಂಬಂಧ ಬೆಳೆಸ್ಕೊಂಡಾಗ ನನ್ವಯಸ್ಸು ಇಪ್ಪತ್ತೇಳು…

ಅ. ಏಯ್ ನಿಲ್ಸೊ, ನಿಲ್ಸು. ಸುಳ್ಹೇಳಿದ್ರೆ ನಂಬೋಂಥಾ ಸುಳ್ಳ್ಹೇಳೋ. ಇಪ್ಪತ್ತೇಳ್ವರ್ಷ…

ಇ. ನಿಂಗ್ಯಾಕ್ಸುಳ್ಹೇಳ್ಬೇಕೋ? ನನ್ಹೇಳಿದ್ದೇನ್ಹೆಮ್ಮೆ ವಿಷ್ಯವೇನೋ? ಇಪ್ಪತ್ತೇಳ್ವರ್ಷಗಳಾಗಿತ್ತೋ ನಾನ್ಮೊದಲ್ನೇ ಬಾರಿ ಹೆಣ್ಣೊಬ್ಬಳೊಡನೆ ಒಂದ್ರೀತಿ ಸಂಸಾರದ ಸಂಬಂಧ ಬೆಳೆಸ್ಕೊಂಡಾಗ. ಸಂಸಾರದ ಸಂಬಂಧ, ಸೆಕ್ಸ್ ಅಲ್ಲ. ಸೆಕ್ಸ್ಗೇನು ಧಂಡ್ಯಾಗಿತ್ತು, ಇದೇ ಊರಿನ ನಮ್ಮ ಸಂತೇಪೇಟೇಲಿ ಮೊದಲ್ಬಾರಿ ಆಗ ನಾವಂದ್ಕೊಂಡಂತೆ ಮಾಡಾಬಾರ್ದ ಕೆಲ್ಸ ಮಾಡಿದಾಗ ನಮ್ಜೊತೇವ್ರಂತೆ ನನ್ವಯಸ್ಸೂ ಹದ್ನೈದೋ ಹದ್ನಾರೋ ಇದ್ದಿರ್ಬೇಕು. ಹೈಸ್ಕೂಲ್ಸ್ಟೂಡೆಂಟು. ನೀನೂ ಇದ್ಯೆಯಲ್ಲಾ ಆ ಗುಂಪ್ನಲ್ಲಿ, ಅದೆಲ್ಲಾ ನಿನ್ಗ್ಚೆನ್ನಾಗಿ ಗೊತ್ತಿರ್ಬೇಕು. ಆದ್ರೆ ನಾನ್ಹೇಳ್ತಿರೋದು ಒಬ್ಬ ಹೆಣ್ಣಿನ್ಜೊತೆ ಸಂಸಾರದ ಸಂಬಂಧ, ಆ ಈಚಲುಚಾಪೆ ತೆಂಗಿನ್ಗರಿ ಗುಡಿಸುಗಳ ಕೆಲವೇ ಕ್ಷಣಗಳ ಹಿಸುಕಾಟ ಮಗಚಾಟಗಳಲ್ಲ. ಆಗ ನನ್ವಯಸ್ಸು ಇಪ್ಪತ್ತೇಳ್ರ ಸುಮಾರು. ಅದಕ್ಕೆ ಮುಂಚೆ ಮೂರ್ವರ್ಷ ವಿಲಾತೀಲಿದ್ದೆ. ಆದರೆ ಆ ದಿನಗಳ ಅಲ್ಲಿನ ಸಂಗಗಳೆಲ್ಲಾ ಅರ್ಥವಿಲ್ಲದ ಸಂಗಗಳು. ಪ್ರೀತಿ ಪ್ರೇಮ ಬಿಡು, ಆಸೇನೂ ಒಂದ್ರಾತ್ರೀಗೂ ಕಮ್ಮಿ ಸಮಯದ ದರಿದ್ರ ಆಸೆ.

ಅ. ನೀನ್ಮಹಾ ಪ್ರಿನ್ಸಿಪಲ್ಡು ಅಂತ ನಿನ್ಬಗ್ಗೆ ಎಲ್ಲಾ ಓದಿದ್ದೀನಿ. ಆದ್ರೆ ಈ ರೀತಿ ಅಲ್ಲಿನ ಹೆಣ್ಮಕ್ಳನ ಎಕ್ಸ್ ಪ್ಲಾಯ್ಟ್ ಮಾಡೊದ್ರಲ್ಲಿ ನಿಂಗೇನ್ಸಂಕೋಚವಿರ್ಲಿಲ್ವೇನೋ?

ಇ. ಏನ್ಗುಗ್ಗೂಹಾಗ್ಮಾತಾಡ್ತೀಯೋ? ವಯಸ್ಸಿಗ್ಬಂಧೆಣ್ಣು ನನ್ಮೈಮೇಲ್ಬಿದ್ಬಂದ್ರೆ ನಾನೇನು ಓಡೋಗ್ಬೇಕೇನೋ? ಅದಲ್ದೆ ನಿಂಗೂ ಗೊತ್ತಿರ್ಬೇಕು. ಈ ನನ್ಸೊಟ್ಗಾಲು ಇಲ್ಲಿ ನಂಗಿಷ್ಟುಕಾಟಕೊಟ್ಟಿದ್ರೂ ಇಂಗ್ಲೆಂಡು ಅಮೇರಿಕಾದ ಹೆಣ್ಣುಮಕ್ಳಿಗೆ ಇದ್ಬಹಾಳ ಸೆಕ್ಸಿ ಅನ್ತನ್ನಿಸ್ತಿತ್ತೋ. ನಾನೂ ಎಲ್ಲೋ ಓದಿದ್ನೆನ್ಪು. ನನ್ಥರಾ ಸಣ್ಣಪುಟ್ಟ ಐಬುಗಳು ಒಂದ್ರೀತಿ ಹುಡ್ಗಿಯರ್ಗೆ ಎಕ್ಸ್ಸೈಟ್ ಮಾಡುತ್ತೆ ಅಂತ. ನಂಗೇನೋ ಅರ್ಥ್ವಾಗ್ಲಿಲ್ಲ. ಆದ್ರೆ ಕೆಲ್ಸಕ್ಕಂತೂ ಬಂತು. ತನಗ್ತಾನೇ ಕೈಲ್ಬಿದ್ದ ಪಳಗಿದ ಹಣ್ಣು ಚಪ್ರಿಕೊಂಡ್ತಿಂದೆ.

ಅ. Proper cynical bastard ನೀನು. ಪಕ್ಕಾ ಆಪರ್ಚ್ಯುನಿಸ್ಟು.

ಇ. ಇರ್ಲಿ ಬಿಡು. ಅದೆಲ್ಲಾ ಹಳೇ ಕತೆ. ಹೇಳ್ತಿದ್ನಲ್ಲಾ, ಅಂದಿನ ದಿನಗ್ಳಲ್ಲಿ ವಿಲಾತಿ ಪ್ರಯಾಣ ಹಡಗ್ನಲ್ಲಿ. ಛಾರ್ಜು ಏರೋಪ್ಲೇನ್ಗಿಂತ ಬಹಳ ಅಗ್ಗ. ಕೊಚ್ಚೀಲಿ ಹಡಗು ಹತ್ತಿ ಜೆನೋಅಲಿ ಇಳಿದು ಅಲ್ಲಿಂದ ರೈಲಿನಲ್ಲಿ ಲಂಡನ್ನು. ಟಿಕೆಟ್ಟು ಏಳ್ನೂರೂಪಾಯೋ ಏನೋ. ವಾಪಸ್ಬರೋವಾಗ ಸ್ವಲ್ಪ ಹಣ ಸಂಪಾದಿಸ್ಕೊಂಡಿದ್ದೆ, so, ನೇಟ್ಗೆ ಮುಂಬೈವರ್ಗೂ ಆರಾಮ್ವಾಗಿ ಹಡಗಿನಲ್ಲಿ ಬಂದೆ, ಕ್ಯಾಬಿನ್ ನಲ್ಲಿ. ಆ ಪಯಣದಲ್ಲಿ ಅವಳ ಪರಿಚಯ ಆಯ್ತೋ, ಬಂಗಾಲಿ ಹುಡ್ಗಿ, ಜರ್ಮನ್ ಟೀಚರ್ರು. ಮದ್ವೆ ಆಗಿ ಅವ್ಳ ಜರ್ಮನ್ ಗಂಡನ್ನ ಬಿಟ್ಬಿಟ್ಟಿದ್ಳು. ಆಮೇಲೆ ಗೊತ್ತಾಯ್ತು, ಏನೋ ಅವ್ರಿಬ್ಬರ ಮಧ್ಯೆ ಒಂದು ಸಣ್ಣ ಮನಸ್ತಾಪ ಆಗಿತ್ತು ಅಷ್ಟೆ. ಮೊದಲು ಅನ್ಸಿದ್ದು ಇದು ಒಂದು ಹಡಗಿನ ಸಂಗ, ಹಡಗಿನ ಸಂಗಗ್ಳಂತೆ ಅದೂ ಕೆಲವು ದಿನಗಳ ಸಂಗ ಅಂದುಕೊಂಡಿದ್ದೆ. ಇಂಥ one night stand ಗಳ ಅನ್ಭವ ಚೆನ್ನಾಗಾಗಿತ್ತಲ್ಲಾ. ಪಯಣ ಮುಗಿಯೊತ್ಲೂ ಅವಳ್ದಾರಿ ಅವಳ್ದು, ನನ್ದಾರಿ ನಂದು ಅನ್ದ್ಕೊಂಡು ಒಬ್ಬರಿಗೊಬ್ಬರು ಗುಡ್ ಬೈ ಹೇಳಿದ್ವಿ. ಆ ದಿನಗ್ಳಲ್ಲಿ ನನ್ನ ಕೆಲ್ಸ ಪುಣೇಲಿ. ಪುಣೆ ಮುಂಬೈಗಳಲ್ಲಿ ಮನೆ ಸಮಸ್ಯೆ ನಿಂಗೆ ಗೊತ್ತಾನೆ. ಮನೆಫ್ಲಾಟ್ ಯಾರ್ಗೂ ಬಾಡ್ಗೇಗೆ ಕೊಡೊಲ್ಲ. ಅದರಲ್ಲೂ ಹತ್ತಿರ್ದ ಸಂಬಂಧಿಗ್ಳಿಗಂತೂ ಎಂದೂ ಕೊಡೊಲ್ಲ. ಮಗ ಅಪ್ಪಂಕೊಡೊಲ್ಲ, ಅಪ್ಪ ಮಗಂಕೊಡೊಲ್ಲ. ಅದೃಷ್ಟ, ನಾನ್ಮುಂಬೈ ತಲುಪ್ದಾಗ ಗೆಳೆಯನೊಬ್ಬನ್ಗೆ ಕೆನ್ಯಾದಲ್ಲಿ ಒಂದ್ಸಕ್ರೇ ಕಾರ್ಖಾನೇಲಿ ಮ್ಯಾನೇಜರ್ ಕೆಲ್ಸ ಆ ಸಮಯದಲ್ಲೇ ಸಿಕ್ಕಿತ್ತು. ಅವಂದೊಂದು ಸ್ವಂತ ಫ್ಲಾಟ್ ಪುಣೇಲಿ. ಅವ್ನಿಗೆ ಎಂಥಾ ರಿಲೀಫ್ ಅಂತಾ, ನಾನು ಅಲ್ಲಿಗೆ ಬಂದೆ, ನಂಗೆ ಒಂದ್ಮನೆ ಬೇಕು ಅಂತ. ನಾನು ಅವನ ಪುಣೇ ಫ್ಲಾಟ್ನ ಕೇರ್ಟೇಕರ್ರು ಆದೆ. ಬಾಡ್ಗೆ ಕೊಡ್ತಾ ಇದ್ದೆ, ಆದ್ರೆ ಕಾಗ್ದ ಪತ್ರ ಏನೂ ಇಲ್ಲ. ಹೆಸರ್ನಲ್ಲಿ ಮಾತ್ರ ಕೇರ್ಟೇಕರ್ರು. ಮೂರ್ತಿಂಗ್ಳು ಮುಗಿಯೋಕ್ಮುಂಚೇನೇ ಬಂದ್ಳು ಅವ್ಳು, ನನ್ನ ಹುಡುಕ್ಕೊಂಡು. ನನ್ಜೊತೆ ತೊಂಭ್ಹತ್ನಾಲ್ಕು ದಿನ ಇದ್ಳು. Wonderul days, wonderful companion, wonderful in bed, ಎಂಥಾ ಚುರುಕು ಹುಡುಗೀ ಅಂತಾ, keen and sharp as a stiletto. ಬಹಾಳ ತಮಾಷೆ ಹುಡ್ಗಿ, ಜೊತೇಗೇ ಒಂದ್ರೀತಿ ಗಾಭೀರ್ಯ ಕೂಡ. ನಂಗಿಂತ ಮೂರ್ವರ್ಷ ಚಿಕ್ಕವ್ಳು, ಆದ್ರೂ ಅವಳ್ದೇ ನನ್ಮೇಲೆ ಕಂಟ್ರೋಲು. ಸಲುಗೆ, ಪ್ರೀತಿ ಧಾರಾಳ. ಸೆಕ್ಸ್ ಮಾತ್ರ ಅವ್ಳಿಗೆ ಬೇಕಾದಾಗ, ಅವ್ಳು ಒಂದು ಸಂಕೇತ ಕೊಟ್ಟಾಗ ಮಾತ್ರ. ಭಾಗ್ಯ, ಅವ್ಳಿಗೆ ಸೆಕ್ಸ್ ಅಂದ್ರೆ ಪ್ರಾಣ. ಹೆಚ್ಚುಕಮ್ಮಿ ಯಾವಾಗ್ಲೂ ಬೇಕಿತ್ತು. ಮದ್ವೆ ಮಾಡ್ಕೊಳ್ಳೋಣ ಅಂದ್ರೆ ಅವ್ಳು ಮದ್ವೆ ಯಾಕೆ, ಹೀಗಿರೋದೇ ಚೆನ್ನ ಅಂತ. ನಾನಾಸೆ ಪಟ್ಟಿದ್ದೆ, ಒಂದ್ಮಗು ಬೇಕು ಅಂತ. ಅವ್ಳು ಸುತರಾಂ ಅದಕ್ಕೆ ಒಪ್ಪಲಿಲ್ಲ. ನಂಗೆ ಆಗ್ಲೇ ಗೊತ್ತಾಯ್ತೊ, ಈ ಹುಡ್ಗಿ ಬೇರೆ ಹುಡ್ಗಿಯರ ಹಾಗಲ್ಲ ಅಂತ.

ಅ. ಅದಕ್ಕೇ ಅವ್ಳು ನಿನ್ಬಿಟ್ಟ್ಹೋಗಿರ್ಬೇಕು. ಯಾಕೆ ಅವ್ಳು ತನಗ್ಮಗು ಬೇಡ ಅಂತಂದ್ಕೊಂಡ್ಳು, ಅದನ್ನ ಅರ್ಥ ಮಾಡ್ಕೊಳ್ಳೋಕೆ ಯತ್ನ ಪಟ್ಟ್ಯಾ? ಅವ್ಳ ಜೊತೆ ಸರಿಯಾಗಿ ನಡಕೊಂಡ್ಯ? ಮಾತಾಡಿದೆಯಾ? ನಿನ್ದೇಹದ ಆಸೆ ಪೂರೈಸಿಕೊಳ್ಳೋ ಜೊತೆ ಮಾತುಕತೆ ಇತ್ತಾ? ಅಥ್ವಾ ಯಥಾಪ್ರಕಾರ ನಿನ್ನ ಒರಟುಮುಂಡೇಗಂಡತನ ಮಾತ್ರಾನೋ? ಹಂಗಾಗಿದ್ರೆ ಯಾರ್ತಾನೇ ನಿನ್ನನ್ಸಹಿಸ್ತಾರೆ?

ಇ. ಇಲ್ವೋ. ನಾನೇನೂ ಜುಲ್ಮ್ ಮಾಡ್ಲಿಲ್ಲ. ಅದಲ್ಲದೆ ಆಗ್ತಾನೇ ಬೆಳೆಸಿಕೊಂಡ ಸಂಬಂಧ ಅಲ್ವಾ. ಕೆಲ್ವುತಿಂಗ್ಳುಗಳ್ನಂತ್ರ, ಅಥ್ವಾ ಕೆಲ್ವುವರ್ಷಗ್ಳನಂತ್ರ ಮದ್ವೆಗೆ ಒಪ್ಕೊಳ್ತಾಳೆ ಅಂತ ನಂಬಿ ಏನೇನೂ ಒತ್ತಡ ಕೊಡದೆ ಕಾಯೋದಕ್ಕೆ ನಾನು ತಯಾರಾಗಿದ್ದೆ. ಆದ್ರೆ..

ಅ. ಏನಾಯ್ತು?

ಇ. ಹೇಗ್ ಹೇಳ್ಳೋ? ಒಂದಿನ ಬೆಳಿಗ್ಗೆ, ಅಂದು ಮಂಗಳ್ವಾರ, ದಿನಾನೂ ಚೆನ್ನಾಗಿ ನೆನಪಿನಲ್ಲಿದೆ, ನಾವಿಬ್ರೂ ಇನ್ನೂ ಹಾಸಿಗೆ ಬಿಟ್ಟೆದ್ದಿರ್ಲಿಲ್ಲ. ಅದೊಂದ್ಸುಖ, ಹಾಸ್ಗೇಲಿ ಬೆಳಿಗ್ಗೆ ಒಟ್ಗೇ ನಿದ್ದೆಯಿಂದೆದ್ದು ಮಲಗಿರೋದು. ಮಾತಿನಗತ್ಯ ಇಲ್ಲ. ಒಬ್ಬ್ರನ್ನೊಬ್ರು ಮುಟ್ಟೋ ಅಗತ್ಯಾನೂ ಇಲ್ಲ. ನಮ್ಮಿಬ್ರ ದೇಹಗ್ಳ ಬೆಚ್ಚನೇ ಬಿಸೀನೇ ಸುಖ ಕೊಡೋ ತೆಗೊಳ್ಳೋ ಆನಂದ. ಅದೊಂದ್ರೀತಿ ಅಧ್ಭುತ್ವಾದ ಪ್ರೀತಿ ಕಣೋ, ಒಟ್ಟಾರೆತನ. ಇದ್ದಕ್ಕಿಧಾಗೇ ನನ್ಕಡೆ ಮೈನ ಮೇಲ್ಚಾಗ ತಿರ್ಗಿಸಿ ಅವ್ಳ ಮುಖ ನನ್ಮುಖಧತ್ರ ತಂದು ’ನೀನ್ಯಾರು’ ಅಂದ್ಳು. ಅಂದ್ಳು ಅವ್ಳ ಭಾಷೆ ಬಂಗಾಲೀಲಿ. ಅಷ್ಟು ಮಟ್ಗೆ ನಂಗೆ ಬಂಗಾಲಿ ಬರ್ತಿತ್ತು. ಇದೊಂದ್ರೀತಿ ಅವ್ಳ ತಮಾಷೆ ಅಂದ್ಕೊಂಡು ನಾನ್ಯಾರು ಅಂತ ನಿಂಗೆ ಈಗ್ಲೆ ಗೊತ್ತಾಗುತ್ತೆ ಅಂದು ಅವ್ಳನ್ನ ನನ್ನ್ಮೇಲೆ ಏರ್ಸಿಕೊಳ್ಳೋಣ ಅಂತ ಎಳ್ದೆ. ಊಹೂ. No percentage to such he-man stuff my boy. ಸಹಜ್ವಾಗೇ ನನ್ಕೈ ಬಿಡಿಸ್ಕೊಂಡು ಹಾಸ್ಗೆ ಬಿಟ್ಟೆದ್ಳು. ನಂತರ ಆ ಬಗ್ಗೆ ಮಾತೇ ಇಲ್ಲ. ಎಂದಿನಂತೆ ಬೆಳಿಗ್ಗೆ ದೈನಂದಿನ ದಿನಚರಿ. ನಾಷ್ಟಾ ಮಾಡಿ ಯೂನಿವರ್ಸಿಟಿಗೆ ಹೋದೆ. ಅವ್ಳು ಎಂದಿನಂತೆ ಮನೇಲೇ ಇದ್ಳು. ವಾರಕ್ಕೆ ಮೂರ್ದಿನ ಜರ್ಮನ್ ಪಾಠ ಮಾಡ್ತಿದ್ಳು, ಸೋಮ, ಬುಧ ಮತ್ತೆ ಶುಕ್ರವಾರ ಮಾತ್ರ. ಮನೇಗೇ ಮೂರ್ನಾಲ್ಕು ಸ್ಟೂಡೆಂಟ್ ಗಳು ಬರ್ತಿದ್ರು. ಅಂದು ಅವ್ಳಿಗೆ ಕ್ಲಾಸು ಇರ್ಲಿಲ್ಲ. ಎಂದಿನಂತೆ ಪ್ರೀತಿಪೂರ್ವಕ ಟಾಟಾ, ಸೀ ಯು ಲೇಟರ್, a peck on the cheek. ಸಂಜೆ ಫ್ಲಾಟಿಗೆ ವಾಪಸಾದಾಗ ಅವ್ಳಿಲ್ಲ, ಅವ್ಳ ಸಾಮಾನು, ಬಟ್ಟೆಬರೆ, ಟೂತ್ ಪೇಸ್ಟ್ ಟೂತ್ ಬ್ರಷ್ ಪರ್ಯಂತ ಗುರ್ತಿಗೂ ಅವಳ್ದು ಅಂತ ಹೇಳೋಕೆ ಒಂದು ವಸ್ತು ಇಲ್ಲ. ನನ್ವಸ್ತುಗಳೆಲ್ಲಾ ಎಂದಿನಂತೆ. ಒಂದು ಪತ್ರ, ಒಂದು ಸಣ್ಣ ನೋಟು, ಏನೂ ಇಲ್ಲ. ನಿಂಗೆ ಹೇಗೆ ಹೇಳೋದು, ಆ ಘಳಿಗೆ ನನಗೇನಾಯ್ತು ಅಂತ. ಇಗ್ಲೂ ಅನ್ಸುತ್ತೆ, ಚೂರಿ ಹಾಕಿ ತಿವ್ದ್ ಸಾಯಿಸಿಬಿಟ್ಟಿದ್ರೆ ಒಂದ್ರೀತಿ ದಯಾಮಯಿ ಆಗಿರ್ತಿದ್ಳು. ಎಲ್ಲಿಂದ್ಳೋ ಬಂದ್ಳು, ಎಲ್ಲೀಗೋ ಹೋದ್ಳು. ನನ್ಜೊತೆ ಮೂರ್ತಿಂಗ್ಳಿಗೂ ಜಾಸ್ತಿ ಹೆಂಣ್ತಿ ಹಾಗೆ ಇದ್ಳು ಅನ್ನೋದಕ್ಕೆ ನನ್ಹತ್ತಿರ ಒಂದು ತೃಣ ಮಾತ್ರ ಪ್ರಮಾಣ ಇಲ್ವಯ್ಯಾ. ಎಲ್ಲೋ ಒಂದ್ಕತೇಲಿ ಓದಿದ್ದೆ, ಮುಚ್ಕೊಂಡ್ ಕೈ ತೆರೆದ್ರೆ ಆ ಮುಷ್ಟಿ ಮಾಯ ಆಗೋ ಹಾಗೆ ಮಾಯವಾಗ್ಬಿಟ್ಳು. ಸ್ವರ್ಗ ನರಕ ಎರಡು ಅನುಭವಿಸೆದನಯ್ಯಾ, ತೊಂಭತ್ನಾಲ್ಕು ದಿನದ ಸ್ವರ್ಗ, ನಂತರ ಕೊನೆಯಿಲ್ಲದ ನರಕ.

ಅ. ಏನೋ ಬಹಳ ಡ್ರಾಮ ಮಾಡ್ತಿದೀಯೇನೋ? ನಿಜವಾಗ್ಲೂ ಇದೆಲ್ಲಾ ಆಯ್ತೇನೋ?

ಇ. ಯಾಕೋ, ನಿಂಗ್ಯಾಕೆ ಸುಳ್ಹೇಳ್ಬೇಕೋ? ನನ್ನೋವು ನಿಂಗೆ ಹೇಗೆ ಅರ್ಥಆಗುತ್ತೋ? ನಿನ್ಸಂಸಾರ್ದ ಕತೆ ಹೇಳ್ತಿದಾಗ ಅದೆಲ್ಲಾ ನಿಜವಾಗ್ಲೂ ಅಯ್ತೇನೋ ಅಂತ ಕೇಳಿದ್ನೇನೋ?

ಅ. ಇರ್ಲಿ, ಇದೆಲ್ಲಾ ಮುಂದಿನ್ಮಾತು. ಮತ್ತೆ ನಿನ್ನ ಎರಡ್ನೇ ಸಂಸಾರದ ಕತೆ ಏನು?

ಇ. ಎರೆಡನೇವ್ಳು? ಅದು ದಿಲ್ಲೀ ಕತೆ. ಮೊದಲ್ನೇವ್ಳು ಬಿಟ್ಠೋದ ಏಳೆಂಟು ವರುಷಗ್ಳನಂತ್ರ. ನನ್ಜೊತೇಲೇ ಕೆಲ್ಸ ಮಾಡ್ತಿದ್ಳು. ಡಿಪಾರ್ಟ್ಮೆಂಟು ಬೇರೆ. ಹದ್ನೇಳ್ದಿನ ಜೊತೇಲಿದ್ವಿ. ಆದ್ರೆ ಅವ್ಳು ನನ್ಜೊತೆ ಸಂಸಾರ ಸಾಧ್ಯವಿಲ್ಲ ಅನ್ತ ಮನ್ದಟ್ಟಾದ್ಮೇಲೆ ಬಿಟ್ಟು ಹೋದ್ಳು. ಅವ್ಳೂ ಒಳ್ಳೇ ಹುಡ್ಗಿ. ಒಟ್ಗಿದ್ವಿ, ನನಗ್ಮುಂಚೆ ಬೇರೇವ್ರೊಡ್ನೆ ಸಂಬಂಧ ಬೆಳ್ಸಿಕೊಂಡಿದ್ಳು. ಸೆಕ್ಸ್ ಬಗ್ಗೆ ಏನೂ ಸಂಕೋಚ, ಇನ್ಹಿಬಿಷನ್ ಇರ್ಲಿಲ್ಲ. ಆದ್ರೂ ನಮ್ಮಿಬ್ರಿಗೂ ಖಾತರಿ ಅಯ್ತು, ಒಟ್ಗೆ ಸಂಸಾರ ಸಾಧ್ಯವಿಲ್ಲ ಅಂತ. So, ಸಂಬಂಧ ನಿಲ್ಸಿದ್ವಿ. ಕೆಲವು ತಿಂಗ್ಳನಂತ್ರ ಬೇರೆ ಪರಿಚಯಸ್ಥನೊಬ್ಬನ ಜೊತೆ ಮದ್ವೆ ಮಾಡಿಕೊಂಡ್ಳು. ಕೆಲವು ವರ್ಷ ಕ್ರಿಸಮಸ್ ಗ್ರೀಟಿಂಗ್ ಕಾರ್ಡ್ ಕಳಿಸ್ತಿದ್ಳು. ಆಮೇಲೆ ಅದು ನಿಂಥೋಯ್ತು.

ಅ. ಮತ್ತೆ ಯಾಕೆ ನಿನ್ಗೋಳು? ಜೀವ್ನ ನಿಂಗೆ ಒಳ್ಳೆ ಡೀಲೇ ಕೊಟ್ಟಿದೆ. ಎಲ್ಲಾ ಸುಖ ಅನುಭವಿಸ್ದಿ, ಏನೂ ಜವಾಬ್ದಾರಿ ಇಲ್ಲ. ಯಾಕೆ ನಿನ್ಗೋಳು?

ಇ: ಇಲ್ವೋ. ಜೀವ್ನದಲ್ಲಿ ಎರ್ಡೂ ಬೇಕೋ. ಅದಕ್ಕೂ ಸಾಧಿಸ್ದೆ ತಾನೇ ಏನು? ಏನೇನೂ ಇಲ್ಲ. ಇಬ್ರೂ ಅವ್ರಪಾಟಿಗೆ ಬಂದ್ರು. ಅವ್ರಪಾಟಿಗೆ ಬಿಟ್ಠೋದ್ರು. ಪುಸ್ತಕಗ್ಳನ್ನ ಬರ್ದೆ, ಹಣ ಸಂಪಾದಿಸ್ಕೊಂಡೆ, ಕೆಲ್ಸಕ್ಕೆಬಾರ್ದ ಹೆಸ್ರುಕೀರ್ತೀನೂ ಸಂಪಾದಿಸ್ಕೊಂಡೆ, ಹೇಳ್ತಾರಲ್ಲಾ ಆ ಅರ್ಥವಿಲ್ದ ಶಬ್ದಗ್ಳು, ಪಂಡಿತ, ಬುದ್ಧಿಜೀವಿ ಅಂತ. ದುರ್ಬುದ್ಧಿಜೀವಿ ಅನ್ಬೇಕು. ಇದೆಲ್ಲಾ ಏನ್ಪ್ರಯೋಜ್ನ? ಈ ಮುದಿವಸ್ಸ್ಸಲ್ಲಿ ನೀನೇ ಹೇಳೋ ಹಾಗೆ ಒಂದ್ಗೂಬೆ ಹಾಗೆ ಒಬ್ನೇ ಕಾಲಕಳೀತಿದ್ದೀನಿ.

ಅ. ಅದೆಲ್ಲಾಇರ್ಲಿ. ಇಷ್ಟು ವರ್ಷ ಒಬ್ನೇ ಜೀವ್ನ ಕಳ್ದೆ, ಸರಿ. ಆದ್ರೆ ಈ ಒಬ್ಬಂಟಿಗ್ತನ್ದಲ್ಲಿ ಸೆಕ್ಸ್ ಲೈಫ್ ಹೇಗ್ನಿಭಾಯ್ಸ್ತಿದ್ದಿ?

ಇ. ನಂಗೆ ಕಾಮನ್ಸೆನ್ ಇಲ್ಲ ಅಂದೆ, ನಿಂಗೂ ಇಲ್ಲ ಅಂತನ್ಸುತ್ತೆ. ಈ ದಿನಗ್ಳಲ್ಲಿ ಇದೇನ್ದೊಡ್ಮಾತೇನೋ? ಅದಲ್ದೆ ನನ್ವಯಸ್ಸು ನಿನ್ನಷ್ಟೇ ಅಲ್ವಾ? ಎಪ್ಪತ್ತಾಗಿದೆ ಇಬ್ಬರ್ಗೂ. ಈ ವಯಸ್ನಲ್ಲಿ ಅಂಥ ಕಾಟ ಕಮ್ಮಿ ಅಲ್ವೇನೋ? ನನಗಂತೂ ಪ್ರಜಾಪತಿ ಏಳೋದೇ ಅಪರೂಪ. ಅಕಸ್ಮಾತೆದ್ದಾಗ ಅವ್ನಿಗೆ ಸಮಾಧಾನ ಸಿಗ್ದಿದ್ರೆ ಅವ್ನೇ ಬೇಜಾರ್ಪಟ್ಕೊಂಡು ಮತ್ತೆ ಮಲಗ್ಬಿಡ್ತಾನೆ. ಯಾಕ್ಬೇಜಾರ್ಪಟ್ಕೋಬೇಕು ಆ ಕಳ್ನನನ್ಮಗ? ಅವ್ನ್ಗೇನು ಕಮ್ಮಿ ಸುಖ ದೊರ್ಕಿಸ್ಕೊಡ್ಲಿಲ್ಲಾ? ಇರ್ಲಿ ಬಿಡು. ನಿಂದೇನು ಕತೆ? ನಿನ್ಸೆಕ್ಸ್ಲೈಫು ಹೇಗಿದೆ? ನೀನೂ ನಮ್ಮಿಬ್ಬ್ರಿಗೂ ಚೆನ್ನಾಗಿ ಗೊತ್ತಿರೋ ಕೆಲ್ವು ದೊಡ್ಡಮನುಷ್ಯ್ರಂತೆ ಕೊಚ್ಚ್ಕೊಳ್ತೀಯಾ, ದಿನಾ ಪ್ರಜಾಪತಿ ಕಾಟ ಕೊಡ್ತಾನೆ ಅಂತ? ನಾನ್ಕೇಳೋ ಹಾಗೆ ನಂಜೊತೇಲೇ ಓದಿದ್ನಲ್ಲಾ ನಮ್ಮೆಲ್ರಿಗಿಂತಾ ದೊಡ್ಡಬುರುಡೇಕಾರ ಅವ್ನು ಈರೀತಿ ಕೊಚ್ಕೋತಾನಂತೆ.

ಅ. ಇರ್ಬೋದು, ಅದೆಲ್ಲಾ ನಂಗೊತ್ತಿಲ್ಲ, ಅದೆಲ್ಲಾ ನಿನ್ನಂಥಾ ಮಹಾಬುದ್ಧಿಜೀವಿಗ್ಳ ಕಲ್ಪನಾಸಾಮ್ರಾಜ್ಯದ ಫ್ಯಾಂಟಸೀಗ್ಳು. ನನ್ಕತೆ ನನ್ನ ಕ್ಯಾನ್ಸರ್ ಆಪರೇಷನ್ ಆದಾಗಲೇ ಮುಗಿಧೋಯ್ತು. ಈಗ ಬರೇ ಮಾತು, ಕತೆ. ಈಗ್ನಾವ್ಮಾತಾಡ್ತಿದ್ದೀವಲ್ಲಾ ಹಾಗೆ. ಕತೆ, ಮಾತು. ನಿಂದೂ ಅಷ್ಟೆ. ನೆನಪುಗಳೇ ನಮ್ಜೀವನ. ಅಂಥ ನೆನಪುಗಳಿಲ್ದಿದ್ರೆ ನಾವೇ ಸೃಷ್ಟಿ ಮಾಡಿಕೊಳ್ಬೋದಲ್ಲಾ. ಗೊತ್ತಾನೆ ಜೋಕು, you always meet a fantastically sexy girl in your fantasies, and much nicer, too, than girls in real life. ಈಗ ನಂಗರ್ಥವಾಗುತ್ತೆ, ಯಾಕೆ ನಮ್ಹೆಂಡ್ರು ನಮ್ಮನ್ಬಿಟ್ಠೋದ್ರು ಅಂತ.

ನಂಗಿಂಥ ನೀನೇ ಹೆಚ್ಚು ಓದಿರೋನು, ನೀನ್ಚೆನ್ನಾಗಿ ತಿಳ್ಕೊಂಡಿರ್ಬೇಕು, ಆ ಇಲಿಯಟ್ ನ Hollow Man ಪದ್ಯ. ನಾವೂ ಹಂಗೇನೋ, ಟೊಳ್ಳು ಮಾನವರು. ಮದುವೆ ಜೀವನದ ಬೆಡ್ರೂಮಿನ ಬೆತ್ತಲೇಲಿ ನಮ್ಮಗ್ಳ ಒಳಗಿನೊಳಗಿನ ಬೆತ್ತಲೇನೂ ಬಯಲಾಗ್ಬಿಡ್ತೋ. ನನ್ಗನ್ಸೋ ಹಾಗೆ ಈ ಒಂದು ಭಯಂಕರ ಸತ್ಯ ನಮ್ಹೆಂಡ್ರುಗಳಿಗೆ ಮಂದಟ್ಟಾಯ್ತು. ನಿನ್ಹೆಂಡ್ತಿನೋ, ನಿನ್ಗರ್ಲ್ಫ್ರೆಂಡೋ, ಇದ್ಳು ಅಂತ ನೀನ್ಹೇಳ್ತೀಯಲ್ಲ, ಅವ್ಳು ನಿನ್ಕಣ್ನಲ್ಖಣ್ಣಿಟ್ಟು ಕೇಳಿದ್ಳು ಅಂತೀಯಲ್ಲಾ, ನೀನ್ಯಾರು? ಅಂತ, ಅವ್ಳು ಯಾಕೆ ಹೀಗೆ ಕೇಳಿದ್ಳು ಅಂತ ಯಾವಾಗ್ಲಾದ್ರೂ ಯೋಚಿಸಿದ್ದೀಯಾ?

ಇ. ಆ ಕ್ಷಣದಿಂದ ಇನ್ನೇನೂ ಯೋಚಿಸಿಲ್ಲ ಕಣೋ

ಅ. ಸುಮ್ನೆ ಯೋಚಿಸಿದ್ರೆ ಏನ್ಲಾಭ? ಯಾಕೆ ಅವ್ಳು ಆ ರೀತಿ ಪ್ರಶ್ನಿಸಿದ್ಲು ಅಂತ ತಿಳಿಯೋಕೆ ಯತ್ನ ಮಾಡಿದ್ಯಾ?

ಇ. ನಂಗೆ ಅಂದೂ ಅರ್ಥವಾಗ್ಲಿಲ್ಲ, ಇಂದೂ ಅರ್ಥವಾಗ್ತಿಲ್ಲ.

ಅ. ನಾನ್ಹೇಳ್ತೀನಿ ಕೇಳು. ಅವ್ಳಿಗೆ ಅರ್ಥವಾಯ್ತೋ, ನೀನು ಗಂಡಸ್ತನ, ಹೆಣ್ಣೊಬ್ಬಳ ಜೊತೇಲಿ ಸುಖ ಕೊಡೊತೆಗೊಳ್ಳೊ ನಿನ್ ಕ್ಷಮತೆ, ತುಟಿನಾಲ್ಗೆತೊಡೆಕೈಕೌಶಲ್ಯ, ಇರ್ಬೋದು ನಿನ್ನ ಹೃದಯಾಂತರಾಳದ ಪ್ರೀತಿ, ಆಸೆ, ಇವೆಲ್ಲದರ ಹಿಂದಿನ ನಿಜವಾದ ಅಸಲು ಮಾನವ ಯಾರು, ಇವ್ಗಳ ಬಗ್ಗೆ ಅವ್ಳಿಗೆ ಒನ್ಥರಾ ಅವ್ಳಿಗೇ ಅರ್ಥವಾಗ್ದ ಡೌಟ್ ಬಂದ್ಬಿಟ್ಟಿರ್ಬೇಕು.

ಅಂದ್ರೆ ಇದರರ್ಥ ಅಲ್ಲ, ಅವಳಿಗೆ ನಿನ್ಬಗ್ಗೆ ಏನಾದ್ರೂ ಮಾಹಿತಿಬೇಕು ಅನ್ತಲ್ಲ, ನೀನು ಯಾರು, ನಿನ್ಹೆಸ್ರು, ಕುಲಗೋತ್ರ, ದಿಪ್ಲೊಮ ಸರ್ಟಿಫಿಕೇಟ್ಗ್ಳು, ನಿನ್ಸಂಬ್ಳ, ಬೇರೆ ಆದಾಯ, ಇವೆಲ್ಲಾ ಅಲ್ಲ. ಇವೆಲ್ಲಾ ಆ ನೀನಿದ್ದ ಫ್ಲ್ಯಾಟಿನಂತೆ, ನಿಂದಲ್ಲ, ಸಮಯಕ್ಕೆಮಾತ್ರ್ ನಿಂದು. ಅದ್ರೆ ಅವ್ಳನುಮಾನ ಹೀಗಿದ್ದಿರ್ಬಹುದು: ಇವೆಲ್ಲಾ ಬರೇ ಅವ್ಳಿಗೋಸ್ಕರ, ಅವ್ಳಿಂದ ಸುಖ ಪಡ್ಯೋ ಆಸೆಗೋಸ್ಕರ ಸೇರ್ಸಿಟ್ಟ ವಸ್ತು ವಿಷೇಷಗ್ಳೊ, ಅಥವಾ ನಿಜ್ವಾದ ಪ್ರೀತಿ, ಸ್ನೇಹ, ಆಸೆಗ್ಳ ದಾಹಾನಾ. ಇವೆಲ್ಲ ತ್ರಾಸಿನ ಒಂದು ತಟ್ಟೇಲಿ ಇಟ್ಟು ಇನ್ನೊಂದ್ತಟ್ಟೇಲಿ ನೀನ್ಕೊಚ್ಚಿಕೊಳ್ಳೋ ಪ್ರೀತಿವಾತ್ಸಲ್ಯ ಇಟ್ಟು ತೂಕಮಾಡಿದ್ರೆ ಯಾವ್ದರ್ದು ತೂಕ ಜಾಸ್ತಿ ಇರುತ್ತೆ ಈ ಬಗೆ ಏನಾದರೂ ಯೋಚ್ನೆ ಮಾಡಿದ್ಯಾ?

ಇ. ಅಲ್ವೋ, ನನ್ಗೇನಾಯ್ತು ಅಂತ ಇಷ್ತು ಸ್ಪಷ್ಟ, ಇದ್ರ ಬಗ್ಗೆ ಇಷ್ಟೇನು ಕಾಂಪ್ಲೆಕ್ಸ್ ಕತೆ ಕಟ್ತೀಯಲ್ಲೋ?

ಅ. ನಾನ್ಕತೇ ಕಟ್ಟಿಲ್ವೋ, ನೀನೇ ಕಟ್ಕೊಂಡಿದ್ದಿ. ನೀನೇ ಹೇಳೋ ಹಾಗೆ ನಿನ್ಗಾಗಿದ್ದು ಏಕ್ದಂ ಸ್ಪಷ್ಟ, ಆದ್ರೆ ಮತ್ತೆ ನೀನೇ ಹೇಳ್ತಿ, ನಿನ್ಗಾಗಿದ್ನ ಅರ್ಥಮಾಡ್ಕೊಳ್ಳಾಗ್ತಿಲ್ಲ ಅಂತ. ನಮ್ಗೇನಾದ್ರೂ ಅದಕ್ನಾವೇ ಕಾರಣ. ಬೇರೆ ಯಾರೂ ಅಲ್ಲ. ಈಗೇನ್ನಿನ್ಗೆ ಧಂಡ್ಯಾಗಿ ಸಮ್ಯ ಇದ್ಯೆಲ್ಲಾ, ಯೋಚಿಸು, ಈ ಮಾತುಕತೆ ಒಳಗಿನ ಅರ್ಥ ಮಂದಟ್ಟಾಗುತ್ತೆ.

ಇ. ಸರಿ, ಯಥಾಪ್ರಕಾರ ಇದ್ನಿನ್ನ ಗೊಡ್ಡು ವೇದಾಂತ. ದೇವ್ರು ದಿಂಡ್ರಲ್ಲಿ ಇರೋ ನಂಬಿಕೆಗೂ ಮೀರಿದ ವೇದಾಂತ. ಇದೆಲ್ಲಾ ನಿನ್ನ ಕ್ಯಾನ್ಸರ್ ಆಪರೇಷನ್ ಆದಮೇಲಿನ ಸಮಸ್ಯೆಗ್ಳಿಗೆ ನಿಂಗೆ ಸಮಾಧಾನ ಕೊಟ್ಟಿರ್ಬೋದು. ಆದ್ರೆ ನನ್ಸಮಸ್ಯೆಗೆ ವೇದಾಂತ ಎಂದೂ ಸಮಾಧಾನ ಕೊಡ್ಲಾರ್ದು. ನಿನ್ದಾರಿ ನಿಂದು, ನನ್ದಾರಿ ನಂದು.

ಅ. ಹೌದೋ, ನಿಂದಾರಿ ನಿನ್ದು, ನಂದಾರಿ ನನ್ದು. ಬರ್ತೀನೋ. ಹರ್ಟೆ ಬಹಳ ಹೊತ್ತಾಯ್ತು ಅಲ್ವಾ.

ಇ. ಬರ್ತೀಯಾ? ನೀನೇನ್ಮತ್ತೆ ಬರ್ದಿದ್ರೂ ನಾನೇನ್ಬೇಜಾರ್ಪಟ್ಕೊಳ್ಳೊಲ್ವೋ.

ಅ. ಅರ್ಥವಾಯ್ತು. ನಿನ್ನೀ ಕೊನೇ ಮಾತು ಚೆನ್ನಾಗಿ ಅರ್ಥ್ವಾಯ್ತು. ಬಾಗ್ಲು ಭದ್ರವಾಗಿ ಮುಚ್ಕೋ. ಮೇಲೆ ಕೆಳ್ಗೆ ಮಧ್ಯ ಗೆಡೆ ಚಿಲಕ ಹಾಕ್ಕೊ. ಬೇಕು ಅಂದ್ರೆ ಬೀಗಾನೂ ಹಾಕ್ಕೊ. ಹೋಗ್ತೀನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: