ಕವರೆಂಬ ವನ ರಂಗ ಪ್ರವೇಶವು
-ವೆಂಕಟ್ರಮಣ ಗೌಡ
ಕವರ.ಹಾಗೆಂಬುದು ನಮ್ಮ ಈ ಕಥಾನಾಯಕನ ಹೆಸರಾಗಿ ಪ್ರಚಲಿತದಲ್ಲಿತ್ತು. ಅವನ ನಿಜವಾದ ಹೆಸರು ಬೇರೆಯೇ ಏನೋ ಇದೆ ಎಂದೇ ಊರಲ್ಲಿ ಕೆಲವು ತಲೆಗಳು ವಾದಿಸುತ್ತಿದ್ದವು. ಆದರೆ ಆ ಹೆಸರು ಏನೆಂಬುದು ಅವಕ್ಕೂ ಗೊತ್ತಿರಲಿಲ್ಲ. ಹಾಗಾಗಿ ಆ ತಲೆಗಳ ಬಗ್ಗೆ, “ಅವು ತಲೆಗಳಲ್ಲ, ತರಲೆಗಳು” ಎಂಬ ವಿಶೇಷವಾದ್ದೊಂದು ಕಾಮೆಂಟೂ ಹುಟ್ಟಿಕೊಂಡಿತ್ತು. ಅದೇನಾದರೂ ಇದ್ದುಕೊಂಡು ಹೋಗಲಿ. ನಮ್ಮ ಕವರನದು ಮಾತ್ರ ಕೆಸುವಿನೆಲೆ ಮೇಲಿನ ನೀರಿನ ಹನಿಯಂತಾ ವ್ಯಕ್ತಿತ್ವವೆಂಬುದು ಊರಿಗೇ ಗೊತ್ತಿದ್ದ ಸಂಗತಿ.
ಎದುರಲ್ಲೇ ತನ್ನನ್ನು ಯಾರಾದರೂ ಏನಾದರೂ ಅಂದರೂ ಹ್ಹೆಹ್ಹೆ ಎಂದು ನಕ್ಕು ಬಿಟ್ಟು ಹೋಗುತ್ತಿದ್ದಂತಹ ಮನುಷ್ಯ. ಒಂದು ಹೊಡೆತ ಹೊಡೆದರೂ ಮರಳಿ ಕೈಯೆತ್ತುವ ಪೈಕಿಯಲ್ಲ. ಹಾಗೆಂದು ಸಣಕಲೇನೂ ಅಲ್ಲ. ತಾನೊಮ್ಮೆ ಕೈಯೆತ್ತಿ ಇಕ್ಕಿದರೆ ಹಾಗೆ ಇಕ್ಕಿಸಿಕೊಂಡವನು ಎಲ್ಲಿ ಸತ್ತೇ ಹೋಗುತ್ತಾನೋ ಎಂಬ ಭಯವೇ ಕವರನನ್ನು ತಡೆಯುತ್ತಿತ್ತೋ ಏನೋ? ಅಂಥ ಧಾಂಡಿಗ ಪರ್ಸನಾಲಿಟಿಯವನು ಆತ. ಹೀಗಿದ್ದೂ ಅವನ ವಿಷಯದಲ್ಲಿ ಎಲ್ಲರೂ ಸಲುಗೆ ವಹಿಸಲು ಕಾರಣವಾದದ್ದೇನು ಅಂತ ಕೇಳುತ್ತೀರಾ?
ಇತ್ತೀಚಿನ ಟಿಪ್ಪಣಿಗಳು