ಚಿನ್ನ ಚಿನ್ನ ಆಸೆ. . . .

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-35

Gold has Value because we think it has value !!! .. .        Anon

ಚಿನ್ನಕ್ಕೆ ಬೆಲೆಯಿದೆ ಏಕೆಂದರೆ ನಾವದಕ್ಕೆ ಬೆಲೆಯಿದೆ ಎಂದು ತಿಳಿದುಕೊಂಡಿದ್ದೇವೆ !!! . . . . ಅನಾಮಿಕ.

ಗುರುಗುಂಟಿರಾಯರೊಡನೆ ಕು.ಗೋ ಮನೆಯಲ್ಲಿ ನಡೆಯ ಬೇಕಾಗಿದ್ದ ಶಾಂತಿ ಸಭೆ ಮತ್ತೆ ನಡೆಯಲೇ ಇಲ್ಲ. ನನ್ನ ತಿರುಗಾಟವೇ ಅದಕ್ಕೆ ಮುಖ್ಯ ಕಾರಣ. ಹಾಗಾಗಿ ಕಳೆದ ಕೆಲ ಕಾಕುಗಳಲ್ಲಿ ರಾಯರ ಗೈರುಹಾಜರಿ ಢಾಳಾಗಿ ಎದ್ದು ಕಾಣುತ್ತಿತ್ತು.

ಶೇರುಕಟ್ಟೆಯ ಬಗ್ಗೆ ಏನೇನೂ ಅಸಂಬದ್ಧ ಭಾಷಣ ಕುಟ್ಟಿ ಇಷ್ಟು ದಿನ ದೂಡಿದ್ದಾಯಿತು. ಗುರುಗುಂಟಿರಾಯರನ್ನು ಕಾಣದೆ ಅವರ ಬಗ್ಗೆ ಕೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂತು. ಶ್ರೀಮಾನ್ ಅಮಿತಾಬ್ ಬಚ್ಚನರೇ ಬಂದರೂ ನಮ್ಮ ಕಳ ಏನೂ ರೈಸಲಿಲ್ಲ. ಇನ್ನು ರಾಯುರನ್ನು ಹೇಗಪ್ಪಾ ಇಲ್ಲಿಗೆ ಕರೆತರುವುದು ಎಂದು ಅಲೋಚಿಸುತ್ತಾ ಇರಬೇಕಾದರೆ ಅವರ ಫೋನ್ ಬಂದಿತು.

ರಾಯರು ಸ್ವಲ್ಪ ಕಳವಳಕ್ಕೆ ತುತ್ತಾದವರಂತೆ ಕೇಳಿಸುತ್ತಿದ್ದರು. ಸ್ವರದಲ್ಲಿ ಏನೋ ಗಂಭೀರವಾದ ಸಮಸ್ಯೆ ಅವರನ್ನು ಕಾಡುತ್ತಿದ್ದಂತಿತ್ತು.

ಏನು ರಾಯರೆ, ಏನು ಸಮಾಚಾರ? ಅಂತ ವಿಚಾರಿಸಿದೆ.

ಇಲ್ಲಿ ಈಗ ಕುರುಕ್ಷೇತ್ರ ಆರಂಭವಾದಂತಿದೆ ಎಂದು ಕಂದಿದ ಸ್ವರದಲ್ಲಿ ಹೇಳಿದರು. ನನ್ನ ಮಗ ಮತ್ತು ಸೊಸೆ ನಡುವೆ ಸಾಮರಸ್ಯ ಅಷ್ಟೇನೂ ಚೆನ್ನಾಗಿಲ್ಲ ಯಾಕೆ ಏನಾಯ್ತು, ಸಾರ್ ರಾಯರು ಇದ್ದಕ್ಕಿದ್ದ ಹಾಗೆ ಇಂತಹ ವಿಷಯ ಎತ್ತಿದ್ದು ನನಗೂ ಅಚ್ಚರಿಯಾಯಿತು.

ಅಯ್ಯೋ ಅದೊಂದು ದೊಡ್ಡ ಕತೆ. ಎಲ್ಲಾ ಚಿನ್ನದ ಮಹಾತ್ಮೆ. ಏನಂತ ಹೇಳುವುದು? ನನ್ನ ಸೊಸೆ ಯಾವತ್ತೂ ಚಿನ್ನ, ಚಿನ್ನ ಅಂತ ಮಗನತ್ರ ಹೇಳ್ತಾ ಇರ್ತಿದ್ಲು. ಅವನ್ನು ಅದನ್ನೆಲ್ಲ ಅಷ್ಟಾಗಿ ಕಿವಿಗೆ ಹಾಕಿಸಿಕೊಳ್ಳದೆ ಪಿ.ಪಿ.ಎಫ್, ಎಫ್.ಡಿ, ಮ್ಯೂಚುವಲ್ ಫಂಡು ಇತ್ಯಾದಿಗಳಲ್ಲಿ ಅಗಾಗ್ಗೆ ಇನ್ವೆಸ್ಟ್ ಮಾಡ್ತಾ ಇದ್ದ. ಈಗ ಎರಡು ವರ್ಷಗಳಿಂದ ಚಿನ್ನದ ಬೆಲೆ ಸಿಕ್ಕಬಟ್ಟೆ ಮೇಲೇರಿದ್ದರಿಂದ ಸೊಸೆ ತುಂಬಾ ಅಪ್ಸೆಟ್ ಆಗಿದ್ದಾಳೆ. ನನ್ನ ಮಾತು ಎಲ್ಲಿ ಕೇಳ್ತೀರಿ ನೀವು? ಇನ್ನು ನಮಗೆ ಚಿನ್ನ ಪರ್ಚೇಸ್ ಮಾಡ್ಲಿಕ್ಕೆ ಸಾಧ್ಯವೇ ಇಲ್ಲ. ಮೊದ್ಲೇ ಮಾಡ್ತಿದ್ರೆ ಆಗ್ತಿತ್ತು.

ಸುಮ್ನೆ ಎಫ್.ಡಿ, ಗಿಫ್‌ಡಿ ಅಂತ ದುಡ್ಡು ದಂಡ. ಅಂತೆಲ್ಲ ದಿನಾ ಜಗಳ ತೆಗೀತಾಳೆ. ಮೊನ್ನೆ ಚಿನ್ನಕ್ಕೆ ೨೦,೦೦೦ ದಾಡಿದ ಮೇಲಂತೂ ಚಿನ್ನದ ಬೆಲೆಯಂತೆ ಅವಳ ಸ್ವರವೂ ಗಗನಕ್ಕೇರಿದೆ. ಈಗ್ಲಾದ್ರೂ ತೆಗೀರಿ ಚಿನ್ನ ಅಂತ ದಿನಾ ಗಲಾಟೆ. ನನಗಂತೂ ಎರಡೆಳೆ ಸರ ನೀವು ಮಾಡಿಸ್ಲಿಲ್ಲ. ನನ್ನ ಹಣೆಯಲ್ಲಿ ಬರಿಲಿಲ್ಲ ಬಿಡಿ, ಮಗಳಿಗಾದ್ರೂ ಎರಡು ಕಿವಿದ್ದು ಮಾಡ್ಸಿ ಅಂತ ದಿನಾ ಗಲಾಟೆ. ಹಾಗೆ ನಿಮ್ಗೆ ಫೋನ್ ಮಾಡಿದೆ. ಈ ಚಿನ್ನದ ಪರ್ಚೇಸ್ ಈಗ ಮಾಡಬಹುದಾ? ಅದರ ಬೆಲೆ ಯಾಕೆ ಈ ರೀತಿ ಏರಿದೆ? ಏನಿದೆ ಇದರ ಹಿಂದೆ? ಇನ್ನೂ ಎರುತ್ತಾ? ಏನ್ ಕತೆ? ಸ್ವಲ್ಪ ಹೇಳ್ತೀರಾ ಮೊಳೆಯಾರ್ರೇ? ಅಂತ ರಾಯರು ವಿವರವಾಗಿ ಹೇಳಿದರು.

ಆರ್ಥಿಕತೆಯಲ್ಲಿ ಎಲ್ಲದಕ್ಕೂ ಕೇಂದ್ರಬಿಂದು ಪ್ರಗತಿ – ಒಂದು ಕಾರ್ಖಾನೆಯ ಅಥವ ಒಂದು ಕೃಷಿ ಭೂಮಿಯಲ್ಲಿ ಅಥವ ಸೇವಾ ಕ್ಷೇತ್ರದಲ್ಲಿ ನಡೆಯುವ ಮೌಲ್ಯ ವರ್ಧನೆಯೇ (Value addition) ಎಲ್ಲದಕ್ಕೂ ಮೂಲ. ಬೇರೆಲ್ಲಾ ಆರ್ಥಿಕ ಚಟುವಟಿಕೆಗಳೂ ಇದರ ಸುತ್ತಲೂ ಬೆಳೆಯುತ್ತವೆ.

ಆರ್ಥಿಕ ಪ್ರಗತಿ ಮೊದಲಿಗಿಂತ ಜಾಸ್ತಿಯಾಗುತ್ತದೆ ಎಂದಾದರೆ ಅದಕ್ಕೆ ತಳಕುಹಾಕಿಕೊಂಡು ಕೆಲವು ವಿಷಯಗಳ ಬೇಡಿಕೆ ಏರುತ್ತದೆ. ಆ ಪ್ರಗತಿಗೆ ಅಗತ್ಯವಾದ ಕಚ್ಚಾವಸ್ತು, ಇಂಧನ, ಬಂಡವಾಳ ಎಲ್ಲದರ ಬೇಡಿಕೆಗಳೂ ಏರುತ್ತವೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆಗಳು ಆಟೋಮ್ಯಾಟಿಕ್ ಆಗಿ ಏರಲಾರದ ಕಾರಣ ಅವುಗಳ ಬೆಲೆಗಳೂ ಏರುತ್ತವೆ.

ಜಾಗತಿಕ ನೆಲೆಯಲ್ಲಿ ಇದನ್ನು ಸ್ಥೂಲವಾಗಿ ನೋಡಿದರೆ ವಿಶ್ವದ ಆರ್ಥಿಕ ಪ್ರಗತಿಯ ಕಾಲದಲ್ಲಿ ಅದಕ್ಕೆ ತಗಲುವ ಕಮಾಡಿಟಿ ಪ್ರೈಸಸ್, ಕ್ರೂಡ್ ಆಯಿಲ್, ಬೇಸ್ ಮೆಟಲ್ಸ್, ಇತ್ಯಾದಿಗಳ ಬೆಲೆ ಏರುತ್ತವೆ. ಬಂಡವಾಳದ ಬೇಡಿಕೆ ಏರಿ ಬಡ್ಡಿದರಗಳು ಏರುತ್ತವೆ. ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಕಂಪೆನಿಗಳ ಶೇರುದರಗಳು ಏರುತ್ತವೆ. ಆರ್ಥಿಕತೆಯ ಪ್ರತೀಕವಾದ ಕರೆನ್ಸಿಗಳ ಮೌಲ್ಯ ಜಾಸ್ತಿಯಾಗುತ್ತವೆ. ಎಲ್ಲರೂ ತಮ್ಮದ್ದ ಹಣವನ್ನು ಈ ಎಲ್ಲಾ ಅಸೆಟ್ ಕ್ಲಾಸ್‌ಗಳಲ್ಲಿ ಹೂಡುತ್ತಾರೆ. ಇದು ಪ್ರಗತಿಯ ಕಾಲ.

ಈಗ ಇದನ್ನು ಸ್ವಲ್ಪ ಉಲ್ಟಾ ರೀತಿಯಲ್ಲಿ ನೋಡೋಣ. ಆರ್ಥಿಕ ಹಿಂಜರಿಕೆಯ ಕಾಲ. ಸರಕುಗಳ ಬೇಡಿಕೆಗಳು ಮಂದವಾದ ಕಾಲ. ಆರ್ಥಿಕತೆಯು ಆಲಸ್ಯದಿಂದ ಆಕಳಿಸುವ ದಿನಗಳು. ಕಮಾಡಿಟಿ, ಕ್ರೂಡ್ ಆಯಿಲ್, ಬೇಸ್ ಮೆಟಲ್ಸ್, ಬಡ್ಡಿ ದರ, ಶೇರುಗಳು, ಅಲ್ಲದೆ ಕರೆನ್ಸಿಗಳು- ಎಲ್ಲವೂ ನೆಲಕಚ್ಚಿದ ಕಾಲ. ಅಥವಾ ವಿಪರೀತ ರಾಜಕೀಯ ಬಿಕ್ಕಟ್ಟಿನಿಂದಾಗಿ ಆರ್ಥಿಕತೆ ಕುಸಿದೀತೆಂಬ ಭೀತಿಯ ಕಾಲ.

ಆಗ ಇದ್ದ ಹಣವನ್ನು ಎಲ್ಲಿ ಹೂಡುವುದು ಎಂಬ ಪ್ರಶ್ನೆ ಬರುತ್ತದೆ. ಆರ್ಥಿಕತೆಗೆ ಸಂಬಂಧಪಟ್ಟ ಯಾವುದರಲ್ಲಿ ಹೂಡಿದರೂ ಸುಖವಿಲ್ಲ. ನಾಳೆಗೆ ಇನ್ನಷ್ಟೂ ಇಳಿದರೆ ಎಂಬ ಭಯ. ಇದು ಆರ್ಥಿಕ ಹಿಂಜರಿತದ ಈ ಕಾಲದಲ್ಲಿ ಇದ್ದ ದುಡ್ಡನ್ನು ಆರ್ಥಿಕತೆಗೆ ಸಂಬಂಧಪಡದ ಯಾವುದಾದರೂ ಒಂದು ವಸ್ತುವಿನಲ್ಲಿ ಕೂಡಿಡುವುದೇ ಜಾಣತನ.

ಈ ಜಾಣತನದ ಹೆಸರು ಹೆಜ್ಜಿಂಗ್. Hedge ಎಂದರೆ ಬೇಲಿ. ಕುಸಿಯುತ್ತಿರುವ ಹೂಡಿಕೆಗೆ ಇನ್ನೊಂದು ಕುಸಿಯದ ಕಡೆಯಲ್ಲಿ ಹೂಡಿ ಬೇಲಿಕಟ್ಟಿ ಭದ್ರಪಡಿಸುವ ಈ ತಂತ್ರಕ್ಕೆ ಹೆಜ್ಜಿಂಗ್ ಎನ್ನುತ್ತಾರೆ. ಹೂಡಿಕಾ ಲೋಕದಲ್ಲಿ ಈ ಶಬ್ದ ಬಹಳವಾಗಿ ಉಪಯೋಗಿಸಲ್ಪಡುತ್ತದೆ. ಚಿನ್ನವು ತೈಲ, ಶೇರು ಮತ್ತಿತರ ಅಸೆಟ್ ಕ್ಲಾಸುಗಳಿಗೆ ಉತ್ತಮ ಹೆಜ್ ಆಗಿ ಉಪಯೋಗಿಸಲ್ಪಡುತ್ತದೆ.

ಇಂತಹ ಕಾಲದಲ್ಲಿ ಗಂಡಸರಿಗೂ ನೆನಪಾಗುವುದು ಚಿನ್ನ! ಇದುವೇ ವಿಶ್ವದ ಆಪದ್ಧನ! ಇದ್ದ ಹಣವನ್ನು ಚಿನ್ನದಲ್ಲಿ ಹಾಕಿ ಇಟ್ಟರೆ ಅದು ಸೇಫ್ ಎಂಬ ನಂಬಿಕೆ. ವಾಸ್ತವದಲ್ಲಿ ಆರ್ಥಿಕ ಪ್ರಗತಿ ಅಥವ ಮೌಲ್ಯ ವರ್ಧನೆಯಲ್ಲಿ ಕಾಸಿನ ಉಪಯೋಗಕ್ಕೂ ಬಾರದ ಈ ಲೋಹದ ತುಂಡಿಗೆ ವಿಶ್ವದಾದ್ಯಂತ ಬೇಡಿಕೆಯಿದೆ.

ಪ್ರೆಶಿಯಸ್ ಮೆಟಲ್ ಎಂಬ ಹಣೆಪಟ್ಟಿ ಬೇರೆ. ಅನಾದಿಕಾಲದಿಂದಲೂ ಒಂದು ವಿನಿಮಯದ ಮಾಧ್ಯಮ. ಇದು ಬಹುತೇಕ ಒಂದು ಕರೆನ್ಸಿಯಂತೆಯೇ ಇಂದಿಗೂ ಕಾರ್ಯ ನಿರ್ವಹಿಸ ಬಲ್ಲುದು. ಹೀಗೆ ಆರ್ಥಿಕ ಹಿಂಜರಿತದ ಕಾಲದಲ್ಲಿ ಎಲ್ಲರ ಗಮನವೂ ಚಿನ್ನದತ್ತ ಹರಿಯುತ್ತದೆ. ಚಿನ್ನದ ಬೇಡಿಕೆ ಏರಿ ಜಾಗತಿಕ ಚಿನ್ನದ ಬೆಲೆಗಳು ಏರುತ್ತವೆ. ಸಧ್ಯ ನಾವು ಈ ಏರುಗತಿಯ ಕಾಲಘಟ್ಟದಲ್ಲಿ ಇದ್ದೇವೆ.

ಇದು ರಿವರ್ಸ್ ಕೂಡಾ ಆಗುತ್ತದೆ. ಯಾವಾಗ ಆಗುತ್ತದೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂದು ನಿಮಗೆ ಯಾರೂ ಹೇಳಲಾರರು. ಅಥವ ಬೆಲೆ ಇಳಿಯದಿದ್ದರೂ ಏರುವಿಕೆ ಮಂದವಾಗಿ ಬೆಲೆಗಳು ನಿಂತಲ್ಲೇ ನಿಲ್ಲಲೂ ಬಹುದು. ಜಾಗತಿಕ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಕಂಡಾಕ್ಷಣ ಹೂಡಿಕೆದಾರರು ಚಿನ್ನವನ್ನು ಮಾರಿ ಅದರಲ್ಲಿ ಕೂಡಿಟ್ಟ ಹಣವನ್ನು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ತೈಲ, ಕಮಾಡಿಟಿ, ಕರೆನ್ಸಿ, ಬೇಸ್ ಮೆಟಲ್ ಇತ್ಯಾದಿ ಹೂಡಿಕಾ ತರಗತಿಗಳಲ್ಲಿ ತೊಡಗಿಸುವರು. ಆವಾಗ ಚಿನ್ನದ ಬೆಲೆಯೇರಿಕೆ ನಿಂತೀತು ಅಥವ ಕೆಳಕ್ಕೆ ಬೀಳಲೂ ಬಹುದು.

ಇನ್ನೊಮ್ಮೆ ಚಿನ್ನದ ಬೆಲೆಯೇರಿಕೆಯ ನಶೆಯಲ್ಲಿ ಮೈಮರೆಯುವ ಮೊದಲು ಬೆಲೆಯ ಪೂರ್ವಾಪರಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಕಾರಣಕ್ಕೆ ಚಿನ್ನದ ಬೆಲೆಯೇರುತ್ತದೆ ಮತ್ತು ಯಾವಕಾರಣಕ್ಕೆ ಇಳಿಯುತ್ತದೆ. ಇತ್ಯಾದಿ. ಈಗಲೂ ಅಮೆರಿಕದ ಆರ್ಥಿಕ ಸ್ಥಿತಿಯಲ್ಲಿ ತುಸು ಚೇತರಿಕೆ ಕಂಡರೂ ಅಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಯುತ್ತದೆ.

ಪ್ರತಿವಾರ ಬಿಡುಗಡೆಯಾಗುವ ಅಮೆರಿಕದ ರಿಟೈಲ್ ಬಿಕರಿಯ ಅಂಕಿಗಳು, ನಿರುದ್ಯೋಗಿಗಳ ಅಂಕಿಗಳಲ್ಲಿ ತುಸು ಸುಧಾರಣೆ ಕಂಡರೂ ಚಿನ್ನದ ಬೆಲೆ ಇಳಿಯುತ್ತದೆ. ಮತ್ತು ಆರ್ಥಿಕತೆಗೆ ಸಂಬಂಧಿತ ಅಸೆಟ್ ಕ್ಲಾಸುಗಳ ಬೆಲೆಗಳು ಏರತೊಡಗುತ್ತವೆ. ಮರುದಿನ ಐರ್‌ಲಾಂಡ್ ಅಥವ ಗ್ರೀಸಿನ ಸರಕಾರ ದಿವಾಳಿಯೆದ್ದು ಹೋಗುವ ಭೀತಿ ಆವರಿಸಿದರೆ ತತ್ಕ್ಷಣ ಅವುಗಳ ಬೆಲೆಗಳು ಕುಸಿದು ಚಿನ್ನದ ಬೆಲೆ ಏರುತ್ತದೆ. ಈ ರೀತಿ ಜಾಗತಿಕ ಆರ್ಥಿಕ ಸ್ಥಿತಿಯನ್ನು ಹೊಂದಿಕೊಂಡು ಅಂತರಾಷ್ಟ್ರೀಯ ಚಿನ್ನದ ಬೆಲೆ ಬದಲಾಗುತ್ತಾ ಇರುತ್ತದೆ. ರಾಜಕೀಯ ಬಿಕ್ಕಟ್ಟು, ಯುದ್ಧದ ಭೀತಿ, ಭಯೋತ್ಪಾದನೆ, ಸರಕಾರ ಹೊರ ತರುವ ಹೊಸ ಹೊಸ ಕಾನೂನುಗಳು – ಇವೆಲ್ಲವೂ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಭೀತಿ ಇದ್ದರೆ ಚಿನ್ನದ ಬೆಲೆ ಏರೀತು. ಇಲ್ಲದಿದ್ದರೆ ಚಿನ್ನದ ಬೆಲೆ ಇಳಿದೀತು.

ಇದೀಗ ಭಾರತೀಯ ಮಾರುಕಟ್ಟೆಯ ಚಿನ್ನದ ಬೆಲೆಗೆ ಬರೋಣ.

ಭಾರತೀಯ ಮಾರುಕಟ್ಟೆಯಲ್ಲಿ ೩ ರೀತಿಯ ಚಿನ್ನದ ಬೆಲೆಗಳು ಪ್ರಚಲಿತವಾಗಿವೆ

೧. ೨೪ ಕ್ಯಾರಟ್ ಬುಲಿಯನ್ (ಅಪರಂಜಿ) ೯೯.೯% ಶುದ್ಧ ಚಿನ್ನ, ‘/ಗ್ರಾಮ್

೨. ೨೪ ಕ್ಯಾರಟ್ ಸ್ಟಾಂಡರ್ಡ್ ೯೯.೫% ಶುದ್ಧ ಚಿನ್ನ, ‘/ಗ್ರಾಮ್

೩. ೨೨ ಕ್ಯಾರಟ್ ಆಭರಣದ ಚಿನ್ನ, ‘/ಗ್ರಾಮ್

ಶುದ್ಧತೆಗನುಸಾರ ಇವುಗಳ ಬೆಲೆಗಳಲ್ಲೂ ವ್ಯತ್ಯಾಸವಿರುತ್ತವೆ. ಇರಲೇ ಬೇಕಲ್ಲವೇ? ಚಿನ್ನಕ್ಕೆ ತಾಮ್ರ ಸೇರಿಸಿದಷ್ಟೂ ಅದರ ಬೆಲೆ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತಾ ಹೋಗುತ್ತದೆ.

ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಬುಲಿಯನ್ ಚಿನ್ನದ ಬೆಲೆ, ಡಾಲರ್ ಪ್ರತಿ ಔನ್ಸಿಗೆ ಎಂದು ನಿಗಧಿಯಾಗುತ್ತದೆ. ಅ ಬೆಲೆ ತತ್ಕ್ಷಣವೇ ರೂಪಾಯಿ ಪ್ರತಿ ಗ್ರಾಮಿನ ರೂಪಕ್ಕೆ ಮಾಡಲು ಪ್ರಚಲಿತ ವಿನಿಮಯ ದರದಿಂದ ಗುಣಿಸಿ, ೩೧.೧೦೩೪೭೬೮ ನಿಂದ ಭಾಗಿಸಿ, ಡಾಲರ್ ಪ್ರತಿ ಔನ್ಸಿನಿಂದ ರೂಪಾಯಿ ಪ್ರತಿ ಗ್ರಾಮಿಗೆ ಪರಿವರ್ತಿಸಿಕೊಳ್ಳಬೇಕು. ಹಾಗಾಗಿ ಈ ರೂಪಾಯಿ ದರದ ಭಾರತೀಯ ಚಿನ್ನದ ಬೆಲೆ ಅಂತರಾಷ್ಟ್ರೀಯ ಚಿನ್ನದ ಡಾಲರ್ ದರವಲ್ಲದೆ ಅದರ ಡಾಲರ್-ರುಪಿ ವಿನಿಮಯ ದರದಿಂದ ಕೂಡಾ ಬಹಳವಾಗಿ ಪ್ರಭಾವಿತವಾಗುತ್ತದೆ. ವಿನಿಮಯ ದರವನ್ನು ಭಾದಿಸುವವ ಎಲ್ಲಾ ಕಾರಣಗಳೂ ಚಿನ್ನದ ದರವನ್ನೂ ಭಾದಿಸುತ್ತವೆ.

ಉದಾಹರಣೆಗೆ, FII ಗಳು ಯಾವುದೇ ಕಾರಣಕ್ಕೆ ಭಾರತೀಯ ಶೇರುಗಳನ್ನು ಮಾರತೊಡಗಿದರೆ ಹಾಗೆ ಮಾರಿಬಂದ ದುಡ್ಡು ರೂಪಾಯಿಯಿಂದ ಡಾಲರಿಗೆ ಪರಿವರ್ತನೆಗೊಂಡು ಅವರ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ. ಅವರು ನೇರವಾಗಿ ರುಪಾಯಿಯನ್ನು ಭಾರತದಿಂದ ಕೊಂಡೊಯ್ಯುವಂತೆ ಇಲ್ಲ. ಹೀಗೆ ಕನ್ವರ್ಟ್ ಆಗುವಾಗ ರುಪಾಯಿಯ ಬೇಡಿಕೆ ಕಡಿಮೆಯಾಗಿ ಡಾಲರ್‌ನ ಬೇಡಿಕೆ ಜಾಸ್ತಿಯಾಗುತ್ತದೆ.

ಅಂದರೆ, ರುಪಾಯಿ ಮೌಲ್ಯದಲ್ಲಿ ಕುಸಿತ. ಆವಾಗ ವಿನಿಮಯದರದಲ್ಲಿ ಏರಿಕೆ ಉಂಟಾದ ಕಾರಣಕ್ಕೆ ಚಿನ್ನದ ದರದಲ್ಲಿ ಏರಿಕೆ ಉಂಟಾಗುತ್ತದೆ. ಇಂಟರ್ನೆಟ್ಟಿಗೆ ಹೋಗಿ ಶೇರುಮಾರುಕಟ್ಟೆಯನ್ನೂ ಚಿನ್ನದ ದರವನ್ನೂ ಏಕಕಾಲದಲ್ಲಿ ಗಮನಿಸುತ್ತಾ ಕೂತರೆ ಈ ವಿರುದ್ಧಮುಖಿ ಚಲನವನ್ನು ಆಪ್ಕಾ ಕಂಪ್ಯೂಟರ್ ಸ್ಕ್ರೀನ್ ಪರ್ ನೋಡಿ ಆನಂದಿಸಬಹುದು. ಬೋರ್ ಎನಿಸಿದರೆ ಇನ್ನೊಂದು ದಿನ ಮಾರುಕಟ್ಟೆ ಏರುವುದನ್ನೂ ಒಟ್ಟೊಟ್ಟಿಗೇ ಚಿನ್ನದ ಬೆಲೆ ಇಳಿಯುವುದನ್ನೂ ನೋಡಿ ನಲಿಯಬಹುದು. ಇವೆರಡೂ ಕ್ಷಣ ಕ್ಷಣಕ್ಕೂ ಬದಲಾಗುವ ಮಾರುಕಟ್ಟೆ.

ಹೀಗೆ ಹೇಳುವಾಗ ಕೆಲವು ಜಾಣರು ಆಹಾ, ಅಂಚಾಂಡ, ಮುಲ್ಪ ಕೊರ್ದು ಅಲ್ಪ ದೆಪ್ಪೊಡು ಎಂಬ ಲಾಜಿಕ್ ಹಿಡಿದುಕೊಂಡು ಇಲ್ಲಿ ಕೊಟ್ಟು ಅಲ್ಲಿ ತೆಗೆದುಕೊಳ್ಳಲು ಹೊರಡುತ್ತಾರೆ. ದುಡ್ಡು ಮಾಡುವ ಸುಲಭ ಫಾರ್ಮ್ಯುಲಾದ ತಲಾಶ್‌ನಲ್ಲಿ ಅರ್ಧ ಆಯುಷ್ಯವನ್ನು ಈಗಾಗಲೇ ಕಳೆದುಕೊಂಡ ಮಂದಿ ಆನಂದತುಂದಿಲರಾಗುತ್ತಾರೆ.

ಅಂತಹವರು ಸ್ವಲ್ಪ ತಡೆದು ಒಂದು ಹತ್ತು ಡಮ್ಮಿ ಟ್ರೇಡ್ ಮಾಡಿ ಯಾವ ಯಾವ ಸಂದರ್ಭಗಳಲ್ಲಿ ಈ ಸಮೀಕರಣವನ್ನು ಮೀರಿಸುವ ಬೇರಾವುದೋ ಕಾರಣಗಳು ಮಾರುಕಟ್ಟೆಯಲ್ಲಿ ಹುಟ್ಟಿಕೊಂಡು ನಿಮ್ಮ ನಿರೀಕ್ಷೆಯನ್ನು ಹುಸಿಯಾಗಿಸಬಹುದು, ಮತ್ತು ಅದರ ರಿಸ್ಕ್ ಏನು ಎಂಬುದನ್ನು ಒಂದು ಬಾರಿ ಅನುಭವಿಸಿಕೊಳ್ಳುವುದು ಒಳ್ಳೆಯದು.

ಮಾರುಕಟ್ಟೆಯ ಗತಿ ವಿರುದ್ಧ ದಿಕ್ಕಿಗೆ ತಿರುಗಬಹುದು, ಜಾಗತಿಕ ಮಾರುಕಟ್ಟೆಯಲ್ಲಿ ಏನಾದರೂ ಸಂಭವಿಸಿ ಚಿನ್ನದ ಬೆಲೆ ತಿರುಗಬಹುದು, ನಮ್ಮ ಲೋಕಲ್ ಕಾರಣಗಳಿಗೆ ಮೀರಿದ ಯಾವುದೇ ಜಾಗತಿಕ ಸಮಸ್ಯೆ ಡಾಲರ್ ಮೌಲ್ಯವನ್ನು ಬದಲಾಯಿಸೀತು. . . ಏನೂ ಆಗಬಹುದು. ಈ ರೀತಿಯ ಸಿದ್ಧ ಫಾರ್ಮ್ಯುಲಾದ ಹಿಂದೆ ಹೋಗುವಾಗ ತುಂಬಾ ಎಚ್ಚರಿಕೆ ಬೇಕು.

ವಾಪಾಸು ಚಿನ್ನದ ಬೆಲೆಗೆ ಬರೋಣ. ಕಳೆದೆರಡು ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಲು ಜಾಗತಿಕ ಹಿಂಜರಿತವೇ ಕಾರಣ. ಹೂಡಲು ಯಾವುದೇ ಸಮರ್ಥವಾದ ದಾರಿಗಳಿಲ್ಲದೆ ಚಿನ್ನವೆಂಬ ಆಪದ್ಧನದಲ್ಲಿ ಹಣದ ಒಳಹರಿವು ಕಂಡುಬಂದಿದೆ. ಇದಕ್ಕೆ ಕಿರೀಟವಿಟ್ಟಂತೆ ಅಮೆರಿಕದ ಶೂನ್ಯ-ಸನಿಹ ಬಡ್ಡಿದರದ ಸುಲಭ ಸಾಲವೂ ಚಿನ್ನದ ಬೆನ್ನು ಹತ್ತಿ ಅದರ ಬೆಲೆಯೇರಿಕೆಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿದೆ.

ಡಾಲರ್‌ನಲ್ಲಿ ಅತಿಕಡಿಮೆ ಬಡ್ಡಿದರಕ್ಕೆ ಸಾಲ ತೆಗೆದು ಏರುತ್ತಿರುವ ಹೂಡಿಕೆಗಳಲ್ಲಿ ಹೂಡುವ ಡಾಲರ್ ಕಾರ್ರೀ ಟ್ರೇಡ್ ಉದಯೋನ್ಮುಖ ಶೇರುಮಾರುಕಟ್ಟೆಗಳಲ್ಲಿ ನಡೆಯುವಂತೆಯೇ ಚಿನ್ನದಲ್ಲಿಯೂ ನಡೆಯುತ್ತಿದೆ. ಈ ರೀತಿಯ ಚಿನ್ನದ ಬೃಹತ್ ಬೆಲೆಯೇರಿಕೆಗೆ ಬೇರೆ ಯಾವುದೇ ಮಣ್ಣಂಗಟ್ಟಿ ಕಾರಣಗಳಿಲ್ಲ. ಬೇರೆ ಇರಬಹುದಾದ, ಹೇಳಲ್ಪಡಬಹುದಾದ ಕಾರಣಗಳೆಲ್ಲವೂ ಸಧ್ಯದ ವರ್ತಮಾನದಲ್ಲಿ ಗೌಣ!

ಅಟ್ಯಾಚ್‌ಮೆಂಟ್:

ಇಷ್ಟೆಲ್ಲ ಭಾಷಣ ಕುಟ್ಟಿದರೂ ಈ ಬಾರಿ ರಾಯರ ಗೊರಕೆ ಸದ್ದು ಫೋನಿನಲ್ಲಿ ಕೇಳಿಸಲಿಲ್ಲ. ಈ ಬಾರಿ ತೀರ್ಥಯಾತ್ರೆಗೆ ಹೋಗಿ ಬಂದಿರಲಿಲ್ಲ ಎಂದು ಕಾಣುತ್ತದೆ. ಅಥವ ಮನೆಯಲ್ಲಿ ನಡೆಯುವ ಕುರುಕ್ಷೇತ್ರದ ಕಾರಣವಾಗಿ ಅತ್ಯಂತ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರೋ ಏನೋ. ಪರವಾಗಿಲ್ಲ. ಖುಷಿಯಾಯಿತು. ರಾಯರಿಂದ ಬರುವ ಮುಂದಿನ ಪ್ರಶ್ನೆಗೆ ಕಾತರದಿಂದ ಕಾಯತೊಡಗಿದಾಗ ಈ ಏಕ್ ಕರೋಡ್ ರುಪಯ್ ಕಾ ಅಗ್ಲಾ ಪ್ರಶ್ಣ್ ಬಂದೇ ಬಿಟ್ಟಿತು.

ಅದೆಲ್ಲ ಬೆಲೆಯ ಮಾತಾಯಿತು. ಈಗ ಹೂಡಿಕೆಯ ಬಗ್ಗೆ ಹೇಳಿ. . .ಟುಣ್. . .

ಉಫ್, ಸಮಯ್ ಸಮಾಪ್ತಿ ಕೀ ಘೋಷಣಾ! ದೇವಿಯೋ ಔರ್ ಸಜ್ಜನೋ, ಇಸ್ಕಾ ಉತ್ತರ್ ತೋ ಹಮ್ ಆಪ್ಕೋ ಅಗ್ಲೇ ಹಫ್ತೆ ಬತಾಯೇಂಗೇ. ಆಜ್ ಕಾ ಕಾರ್ಯಕ್ರಮ್ ಇದರ್ ಹೀ ಸಮಾಪ್ತ್ ಹೋತಾ ಹೈ. ನಮಷ್ಕಾರ್, ಶುಕ್ರಿಯಾ, ಆದಾಬ್, ಶಬ್ಬಾ ಖೈರ್. ಆಪ್ಕಾ ದಿನ್ ಶುಬ್ ಹೋ, ಸಮಯ್ ಮಂಗಲ್ ಹೋ ಔರ್ ಜೀವನ್ ಕುಶಲ್ ಹೋ.

************************************

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: