ನಾರಾಯಣನಿಗೆ ವಿಚಿತ್ರ ಕುತೂಹಲ.
ಚಿಕ್ಕಂದಿನಿಂದಲೂ ಅವನು ಹಾಗೆಯೇ. ವರ್ತಮಾನದಲ್ಲಿ ಬದುಕಿದ್ದು ಕಡಿಮೆ. ಏನು ಹೇಳಿದರೂ ಏನು ನೋಡಿದರೂ ಮುಂದೇನು’ ಎಂದೇ ಯೋಚಿಸುತ್ತಿದ್ದ. ಕಾದಂಬರಿ ಓದುವ ಹೊತ್ತಿಗೂ ಆರಂಭದ ಮೂವತ್ತು ಪುಟ ಓದಿ ಅವನು ಜಿಗಿಯುತ್ತಿದ್ದದ್ದು ಕೊನೆಯ ಪುಟಕ್ಕೆ. ಕೊನೆಯಲ್ಲಿ ಕಥಾನಾಯಕನಿಗೆ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ. ಅವನ ಜೀವನದ ವಿವರಗಳನ್ನೆಲ್ಲ ಆಮೇಲೆ ಓದಿಕೊಂಡರಾಯಿತು.
ಕೊನೆಗೇನಾಯಿತು ಅನ್ನೋದು ಮುಖ್ಯ ಎಂಬ ಅವನ ಕುತೂಹಲ ಎಷ್ಟರಮಟ್ಟಿಗೆ ಅವನನ್ನು ಆವರಿಸಿಕೊಂಡಿತ್ತು ಎಂದರೆ ಎಷ್ಟೋ ಕತೆಗಳ ಅಂತ್ಯ ಮಾತ್ರ ಅವನಿಗೆ ಗೊತ್ತಿರುತ್ತಿತ್ತು. ಸಂಸ್ಕಾರ’ ಕಾದಂಬರಿಯಲ್ಲಿ ಪ್ರಾಣೇಶಾಚಾರ್ಯರು ಊರು ಬಿಟ್ಟು ಕಣ್ಮರೆಯಾಗಿ ಹೋದದ್ದು, ಪತ್ತೇದಾರ ಪುರುಷೋತ್ತಮ ೧೫೦ನೇ ಸಾಹಸದಲ್ಲಿ ಕೊಲೆಗಾರ ಯಾರು ಎನ್ನುವುದು, ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯಲ್ಲಿ ಅವನೂ ಅವಳೂ ಗುಡ್ಡದಿಂದ ಬಿದ್ದು ಪ್ರಾಣಕಳಕೊಳ್ಳುವುದು- ಇವಿಷ್ಟು ಮಾತ್ರ ಅವನಿಗೆ ನೆನಪಿರುತ್ತಿತ್ತು. ಅದಕ್ಕೆ ಕಾರಣವಾದ ಘಟನೆಗಳೂ ಸನ್ನಿವೇಶಗಳೂ ಅವನ ಆಸಕ್ತಿಯ ಹರವಿನಲ್ಲೇ ಇರುತ್ತಿರಲಿಲ್ಲ.
ಹೀಗಾಗಿ ಅವನಿಗೆ ಕತೆ ಹೇಳುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು. ನಾಲ್ಕು ಮಂದಿ ಕೂತಾಗ ಪ್ರಸ್ತಾಪಕ್ಕೆ ಬರುತ್ತಿದ್ದ ವಿಚಾರಗಳು ಅವನನ್ನು ಯಾವತ್ತೂ ಹಿಡಿದಿಟ್ಟದ್ದೇ ಇಲ್ಲ. ಎಷ್ಟು ಹೊತ್ತು ಹೇಳಿದ್ದನ್ನೇ ಹೇಳ್ತೀರಿ, ಕೊನೆಗೇನಾಯ್ತು ಹೇಳಿ ಎಂದು ಭೀಕರ ಜಗಳವನ್ನೂ ರೋಚಕ ಪ್ರಣಯ ಪ್ರಸಂಗಗಳನ್ನೂ ಆತ ಇದ್ದಕ್ಕಿದ್ದ ಹಾಗೆ ಕ್ಲೈಮ್ಯಾಕ್ಸಿಗೆ ಒಯ್ಯುತ್ತಿದ್ದ.
ಅವನ ಈ ಚಾಳಿಯನ್ನು ತಪ್ಪಿಸಲು ಅವನ ಅಪ್ಪ ಅನೇಕಾನೇಕ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಜೀವನದಲ್ಲಿ ಏನೇನು ನಡೆಯುತ್ತೆ ಅನ್ನೋದು ಮುಖ್ಯ. ಅದನ್ನೇ ಜೀವನ ಅನ್ನೋದು. ಅಂತ್ಯ ಮುಖ್ಯವಲ್ಲ ಎಂದು ಅವನಿಗೆ ತಿಳಿಹೇಳಲು ಅವನ ಅಪ್ಪ ಸಾಕಷ್ಟು ಶಕ್ತಿ ಮತ್ತು ಸಮಯ ವ್ಯಯ ಮಾಡಿದ್ದರು.
ಅವರು ಮಾತು ಶುರುಮಾಡಿದಾಗಲೂ ನಾರಾಯಣ ಅರ್ಥ ಆಯ್ತು.. ಆಮೇಲೇನು ಹೇಳಿ’ ಅಂತ ಪದೇ ಪದೇ ಪೀಡಿಸಿ ಅವರೂ ಬೇಸತ್ತು ಹೋಗುವಂತೆ ಮಾಡಿದ್ದ. ಆಮೇಲೆ ನಿನ್ನ ಪಿಂಡ, ಮುಂಡೇಮಗನೇ. ನೀನು ಉದ್ಧಾರ ಆಗೋಲ್ಲ ಕಣೋ.. ಜೀವನದಲ್ಲಿ’ ಎಂದು ಅವರು ಒಮ್ಮೆ ರೇಗಾಡಿ ಹೊರಟು ಹೋಗಿದ್ದರು. ಆಮೇಲೆ ಯಾವತ್ತೂ ಅವರು ಅವನಿಗೆ ಬುದ್ಧಿ ಹೇಳುವ ಸಾಹಸಕ್ಕೆ ಕೈ ಹಾಕಿರಲಿಲ್ಲ.
ನಾರಾಯಣನ ಈ ಪ್ರವೃತ್ತಿಯಿಂದಾಗಿ ಹರಿಕಥಾ ವಿದ್ವಾಂಸ ಶೇಷಗಿರಿದಾಸರು ದೊಡ್ಡ ಅವಮಾನ ಎದುರಿಸಬೇಕಾಗಿ ಬಂದಿತ್ತು. ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಿಯಲ್ಲಿ ಹರಿಕಥಾ ಪ್ರವಚನ ನಡೆಸುತ್ತಿದ್ದರು.
ಆ ವರ್ಷ ನಾರಾಯಣನನ್ನೂ ಒತ್ತಾಯ ಮಾಡಿ ಅವನ ಅಪ್ಪ ಕರೆದುಕೊಂಡು ಹೋಗಿದ್ದರು. ಜಾತ್ರೆ ಹೇಗೆ ನಡೆಯುತ್ತೆ, ಏನೇನು ಆಗುತ್ತೆ ಎನ್ನುವುದನ್ನು ಅಪ್ಪ ಉತ್ಸಾಹದಿಂದ ವಿವರಿಸುತ್ತಾ ಇರಬೇಕಾದರೆ, ನಾರಾಯಣ ಅದೆಲ್ಲ ಸರಿ, ಆಮೇಲೆ ಏನಾಗುತ್ತೆ ಹೇಳಿ’ ಎಂದು ಪ್ರಶ್ನೆ ಹಾಕಿ ಅವರ ಬಾಯಿ ಮುಚ್ಚಿಸಿದ್ದ. ಅವರಿಗೆ ಇವನು ರಿಪೇರಿಯಾಗುವ ಪೈಕಿ ಅಲ್ಲ ಎನ್ನುವುದು ಖಾತ್ರಿಯಾಗಿತ್ತು.
ಶೇಷಗಿರಿದಾಸರು ಆವತ್ತು ಪ್ರಹ್ಲಾದನ ಕತೆಯನ್ನು ಕೈಗೆತ್ತಿಕೊಂಡಿದ್ದರು. ಕಯಾದುವಿಗೆ ಪ್ರಹ್ಲಾದ ಹುಟ್ಟಿದ್ದು, ಅವನು ಬೆಳೆಯುವ ಹೊತ್ತಿಗೆ ನಾರಾಯಣ ಸ್ಮರಣೆ ಮಾಡತೊಡಗಿದ್ದು, ಹಿರಣ್ಯಕಶಿಪು ಅದರಿಂದ ಸಿಟ್ಟಾಗಿ ಅವನನ್ನು ಕೊಲ್ಲು ಹೇಳಿದ್ದು, ತಾಯಿಯ ಕೈಲೇ ವಿಷ ಕುಡಿಸಿದ್ದು ಇದನ್ನೆಲ್ಲ ಶೇಷಗಿರಿದಾಸರು ಕಣ್ಣೀರು ಹರಿಯುವಷ್ಟು ಭಾವುಕವಾಗಿ ವಿವರಿಸುತ್ತಿದ್ದರು. ಅದನ್ನು ಕೇಳುವುದೇ ಒಂದು ಚಂದ ಎಂದು ಊರಿನ ಸಮಸ್ತರೆಲ್ಲ ಸೇರಿದ್ದರು.
ಶೇಷಗಿರಿದಾಸರು ಹರಿಕಥೆ ಶುರುಮಾಡಿ ಪ್ರಹ್ಲಾದನ ಹರಿನಾಮಸ್ಮರಣೆ, ಹಿರಣ್ಯ ಕಶಿಪುವಿನ ಸಿಟ್ಟು ಇವನ್ನು ಭಕ್ತಿರೌದ್ರರಸ ಸಮೇತ ಹೇಳುತ್ತಿದ್ದರೆ ನಾರಾಯಣ ಎದ್ದು ನಿಂತ. ಅವನ ಅಪ್ಪ ಅವನ ಶರಟಿನ ತುದಿ ಹಿಡಿದು ಕೂತ್ಕೊಳ್ಳೋ ಎಂದು ಮೆತ್ತಗೆ ಕುಳ್ಳಿರಿಸಲು ಯತ್ನಿಸಿದ್ದು ಸಫಲವಾಗಲಿಲ್ಲ. ಮಾತಿನ ಮಧ್ಯೆ ಶೇಷಗಿರಿದಾಸರು ಕೇಳುಗರಿಗೆ ಕಣ್ಣೀರು ಹಾಕುವುದಕ್ಕೆಂದು ಒಂದು ಕ್ಷಣ ಅವಕಾಶಕೊಟ್ಟದ್ದೇ ಅನಾಹುತವಾಯಿತು. ನಾರಾಯಣ ಎತ್ತರದ ದನಿಯಲ್ಲಿ ಅವರೇನಾರೂ ಮಾಡ್ಕೊಂಡು ಹಾಳಾಗಿ ಹೋಗ್ಲಿ, ಕೊನೇಗೆ ಏನಾಯ್ತು ಹೇಳ್ರೀ’ ಎಂದು ಕಿರುಚಿದ. ಶೇಷಗಿರಿದಾಸರು ಇದನ್ನು ನಿರೀಕ್ಷಿಸಿರಲಿಲ್ಲ.
ಅವನ ಪ್ರಶ್ನೆಯಿಂದ ಅವರು ಕಂಗಾಲಾಗಿ ಅವನನ್ನೇ ದಿಟ್ಟಿಸಿ ನೋಡಿದರು. ಏನು ಕೇಳಿದೆ ಮಗೂ’ ಅಂತ ಅತ್ಯಂತ ಅಕ್ಕರೆಯಿಂದ ಕೇಳುತ್ತಾ, ತಮಗಾದ ಹಿನ್ನೆಡೆಯನ್ನು ಮುಚ್ಚಿಡಲು ಯತ್ನಿಸಿದರು. ಅವರ ಹುನ್ನಾರ ಅರ್ಥವಾಗದೇ ನಾರಾಯಣ ಮತ್ತೂ ಎತ್ತರದ ದನಿಯಲ್ಲಿ ಮಗ ಹೀಗೆ ಮಾಡ್ದ, ಅಪ್ಪ ಹಾಗೆ ಮಾಡ್ದ ಅಂತ ಹೇಳ್ತಾ ಇದ್ದೀರಲ್ಲ. ಕೊನೇಗೇನಾಯ್ತು ಹೇಳಿ ಮೊದ್ಳು’ ಎಂದು ಪಟ್ಟುಬಿಡದವನಂತೆ ಕೇಳಿದ. ಶೇಷಗಿರಿದಾಸರು ಕೊನೆಗೆ ಏನಾಯ್ತು ಅಂತ ಎಲ್ಲರಿಗೂ ಗೊತ್ತು. ನಾರಾಯಣ ನರಸಿಂಹನ ರೂಪದಲ್ಲಿ ಬಂದು ಹಿರಣ್ಯಕಶಿಪುವಿನ ಸಂಹಾರ ಮಾಡಿದ.
ಪ್ರಹ್ಲಾದನಿಗೆ ಅಭಯವನ್ನು ಕರುಣಿಸಿದ’ ಎಂದರು. ಅಷ್ಟು ಹೇಳಕ್ಕೆ ಇಡೀ ರಾತ್ರಿ ಹರಿಕಥೆ ಮಾಡ್ತಾರೆ. ಎಲ್ಲರಿಗೂ ಗೊತ್ತಿರೋ ಕತೇನೇ ಅದು. ನೀವೇನೋ ಬೇರೆ ಹೇಳ್ತೀರಾ ಅಂದ್ಕೊಂಡ್ರೆ ನಿಮ್ಮದೂ ಅದೇ ಕತೆ’ ಎಂದು ನಾರಾಯಣ ಅಲ್ಲಿಂದ ನಿರ್ಗಮಿಸಿದ. ಆವತ್ತು ಶೇಷಗಿರಿದಾಸರು ಹರಿಕತೆ ಮುಂದುವರಿಸಲೇ ಇಲ್ಲ. ಇನ್ನು ಮೇಲೆ ನಿಮ್ಮೂರಿಗೆ ಕಾಲಿಟ್ಟರೆ ನರಸಿಂಹದೇವರ ಆಣೆ ಎಂದು ಶಪಥ ಮಾಡಿಯೇ ಹೊರಟು ಹೋಗಿದ್ದರು.
ಬಾಲ್ಯದ ಹವ್ಯಾಸವನ್ನು ನಾರಾಯಣ ದೊಡ್ಡವನಾದ ಮೇಲೂ ಬಿಡಲಿಲ್ಲ. ಗಣಿತದ ಸೂತ್ರಗಳನ್ನು ಲೆಕ್ಕದ ಮೇಷ್ಟ್ರು ಬಿಡಿಸುವ ಹೊತ್ತಿಗೂ ಅವನಿಗೆ ಕಿರಿಕಿರಿಯಾಗುತ್ತಿತ್ತು. ಬೀಜಗಣಿತದ ಸಮಸ್ಯೆಗಳನ್ನು ಅವರು ಕ್ರಮಕ್ರಮವಾಗಿ ಬಿಡಿಸುವ ಹೊತ್ತಿಗಂತೂ ನಾರಾಯಣ ಕಾದ ಹೆಂಚಿನ ಮೇಲೆ ಕೂತವನಂತೆ ಚಡಪಡಿಸುತ್ತಿದ್ದ. ಕೊನೆಕೊನೆಗೆ ಅದು ಎಷ್ಟು ರೇಜಿಗೆಯ ಸಂಗತಿಯಾಯಿತೆಂದರೆ ಅವನು ಗಣಿತ ಕ್ಲಾಸಿಗೆ ಹೋಗುವುದನ್ನೇ ಬಿಟ್ಟುಬಿಟ್ಟ. ಷೇಕ್ಸ್ಪಿಯರ್ ನಾಟಕ, ಶೆಲ್ಲಿ ಪದ್ಯ, ಮಾಸ್ತಿ ಕತೆ ಎಲ್ಲವನ್ನೂ ಮೇಷ್ಟ್ರು ಹೇಳಿಕೊಡುವ ಮೊದಲೇ ಓದಿಬಿಡುತ್ತಿದ್ದ.
ಜುಗಾರಿ ಕ್ರಾಸ್’ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ದಿನಗಳಲ್ಲಿ ಪತ್ರಿಕೆಯ ಆಫೀಸಿಗೇ ಹೋಗಿ ಕೊನೆಯ ಕಂತು ಕೊಡುವಂತೆ ಸಂಪಾದಕರನ್ನು ಪೀಡಿಸಿದ್ದ ಖ್ಯಾತಿಯೂ ನಾರಾಯಣನ ಪಾಲಿಗಿದೆ. ಅವನ ದುರದೃಷ್ಟಕ್ಕೆ ಸಂಪಾದಕರ ಅದೃಷ್ಟಕ್ಕೆ ಪೂರ್ಣಚಂದ್ರ ತೇಜಸ್ವಿ ಕಾದಂಬರಿಯ ಕಂತನ್ನು ತಿಂಗಳು ತಿಂಗಳು ಇಷ್ಟಿಷ್ಟೇ ಬರೆಯುತ್ತಿದ್ದರು. ಅವರ ಮನೆಗೂ ಹೋಗಿ ನಾರಾಯಣ ಕಾದಂಬರಿಯ ಕೊನೆಯಲ್ಲಿ ಏನಾಗುತ್ತೆ’ ಎಂದು ಕೇಳಿ ಬೈಸಿಕೊಂಡು ಬಂದಿದ್ದ. ಕೊನೇಲಿ ಏನಾಗುತ್ತೆ ಅಂತ ಗೊತ್ತಿದ್ದರೆ ನಾನ್ಯಾಕೆ ಕಾದಂಬರಿ ಬರೀತಿದ್ದೆ’ ಎಂದು ತೇಜಸ್ವಿ ರೇಗಿದ್ದರಂತೆ.
ಇದೆಲ್ಲ ನಡೆದು ಸುಮಾರು ವರ್ಷಗಳೇ ಆಗಿವೆ. ನಾರಾಯಣ ಮದುವೆ ಆಗಿದ್ದಾನೆ. ಆದರೂ ಅವನ ಜನ್ಮಕ್ಕಂಟಿದ ಚಟ ಮಾತ್ರ ಅವನನ್ನು ಬಿಟ್ಟಿಲ್ಲ. ಅವನನ್ನು ಮದುವೆಯಾದ ಪುಣ್ಯಾತಗಿತ್ತಿ ರುಕ್ಮಿಣಿ ಏನಾದರೂ ಹೇಳುವುದಕ್ಕೆ ಬಂದರೆ ಆಮೇಲೇನಾಯ್ತು ಹೇಳು ಎಂದು ಒಂದೇ ಮಾತಲ್ಲಿ ಅವಳ ಕತೆಗಳನ್ನೂ ಮಾತುಗಳನ್ನೂ ಕತ್ತರಿಸಿ ಎಸೆಯುತ್ತಿದ್ದ.
ರುಕ್ಮಿಣಿ ಅವನ ಸ್ವಭಾವಕ್ಕೆ ತದ್ವಿರುದ್ದ. ಅವಳಿಗೆ ಎಲ್ಲವೂ ನಿಧಾನವಾಗಿ ನಡೆಯಬೇಕು. ಎಲ್ಲವನ್ನೂ ಇಷ್ಟಿಷ್ಟೇ ಸವಿಯುತ್ತಾ ಹೋಗಬೇಕು. ಸಿನಿಮಾ ನೋಡುತ್ತಿದ್ದರೆ ಅದರ ಪ್ರತಿಯೊಂದು ಕ್ಷಣವನ್ನೂ ಸವಿಯುತ್ತಾ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ನಿಂಗೆ ನೆನಪಿದ್ಯೇನೇ, ಮೊದಲನೇ ಸಲ ಅವನು ಅವಳನ್ನು ನೋಡಿದಾಗ ಅವಳು ಒಂಥರಾ ನಗ್ತಾಳಲ್ಲ, ನಂಗಿಷ್ಟ ಅದು’ ಎನ್ನುವ ಸ್ವಭಾವದಾಕೆ. ಅವಳಿಗೆ ಕೊನೆಯಲ್ಲಿ ಏನಾಗುತ್ತದೆ ಅನ್ನುವುದರಲ್ಲಿ
ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಕೊನೆ ಏನಾದ್ರೇನು, ಮಧ್ಯೆ ನಡೆಯೋದೇ ಮಜವಾಗಿರೋದು. ಕೊನೆಗೇನಾಗುತ್ತೆ ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬಾರದು ಅಂತ ನಾರಾಯಣನಿಗೂ ಹೇಳಲು ಯತ್ನಿಸಿದ್ದು ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಪ್ರಯಾಣ ಮುಖ್ಯವೇ ಹೊರತು ಪಯಣದ ಕೊನೆಯಲ್ಲ. ಜೀವನದ ಪ್ರತಿ ಕ್ಷಣವನ್ನೂ ಸವಿಯೋದನ್ನು ಕಲೀರಿ. ಅದೇರಿ ಜೀವನ ಎಂದು ಅವಳು ಹೇಳಿದ್ದು ನಾರಾಯಣವನ್ನು ತಾಕಲೇ ಇಲ್ಲ.
**************
ನಾರಾಯಣ ಕಾಯುತ್ತಾ ಕೂತಿದ್ದ. ಅವನೊಳಗೆ ಗಾಢ ವಿಷಾದ ಮಡುಗಟ್ಟಿತ್ತು. ರುಕ್ಮಿಣಿ ನಿಮ್ಮ ಜೊತೆ ಸಂಸಾರ ಮಾಡೋಕ್ಕಾಗಲ್ಲ ಎಂದು ದುಡುದುಡು ಹೊರಟು ಹೋಗಿದ್ದಳು. ಅದರ ಹಿಂದಿನ ರಾತ್ರಿ ಅವರಿಬ್ಬರಿಗೂ ಜಗಳ ಆಗಿತ್ತು. ರುಕ್ಮಿಣಿ ಸದಾ ಫೋನಿನಲ್ಲಿ ಮಾತಾಡುತ್ತಿರುತ್ತಾಳೆ. ಅಷ್ಟು ಹೊತ್ತು ಮಾತಾಡುವಂಥದ್ದೇನಿದೆ, ಜೊತೆಗೆ ಓದಿದ ಹುಡುಗರ ಜೊತೆ ಯಾಕೆ ಮಾತಾಡಬೇಕು ಎಂದು ನಾರಾಯಣ ರೇಗಾಡಿದ್ದ.
ನೀವಂತೂ ಮಾತಾಡಲ್ಲ. ನಾನು ಯಾರ ಜೊತೆ ಮಾತಾಡ್ಲಿ’ ಎಂದು ಅವಳೂ ಕೂಗಾಡಿದ್ದಳು. ನೀವೊಂದು ಕಲ್ಲುಬಂಡೆ. ನಿಮಗೆ ಹೆಂಡ್ತಿ ಬೇಕಾಗಿಲ್ಲ. ಯಾವಾಗ್ಲೂ ಮುಂದೇನು ಅಂತ ಕೇಳ್ತಿರ್ತೀರಿ. ಹೋಗಿ ಯಾವುದಾರೂ ಜ್ಯೋತಿಷೀನ ಕಟ್ಕೊಳ್ಳಿ. ನಿಮ್ಮದೂ ಒಂದು ಜನ್ಮವಾ ಎಂದು ಹರಿಹಾಯ್ದಿದ್ದಳು. ಸರಿ ಮುಂದೇನು ಅಂತ ನಾರಾಯಣ ನಾಲಗೆ ತುದಿಗೆ ಬಂದಿದ್ದನ್ನು ಹೇಗೋ ತಡೆದುಕೊಂಡಿದ್ದ.
ಅವಳು ಮಾರನೆಯ ಬೆಳಗ್ಗೆಯೇ ಅವಳ ಜೊತೆಗೆ ಓದುತ್ತಿದ್ದ ಕೃಷ್ಣಪ್ರಸಾದನನ್ನು ಕರೆದು, ಅವನ ಜೊತೆ ಹೊರಟು ನಿಂತಿದ್ದಳು. ಇವನ ಜೊತೆ ಓಡಿ ಹೋಗ್ತೀನಿ ಅಂದ್ಕೋಬೇಡಿ. ನನ್ನ ತವರು ಮನೆಗೆ ಹೋಗ್ತಿದ್ದೀನಿ. ಬಸ್ಸಲ್ಲಿ ಅಳ್ತಾ ಹೋಗೋಕೆ ಇಷ್ಟ ಇಲ್ಲ. ಅದಕ್ಕೇ ಇವನ ಹತ್ರ ಬಿಟ್ಟು ಬರೋಕೆ ಹೇಳಿದ್ದೀನಿ ಎಂದು ಹೇಳಿ ಅವನ ಮಾತಿಗೂ ಕಾಯದೇ ಮನೆಯಿಂದ ಹೊರಬಿದ್ದಿದ್ದಳು.
ಇವರೆಲ್ಲ ಯಾಕೆ ಹೀಗೆ ಆಡುತ್ತಾರೆ ಅಂತ ನಾರಾಯಣನಿಗೆ ಅರ್ಥವೇ ಆಗಲಿಲ್ಲ. ಎಲ್ಲರಿಗೂ ಮಾತು ಬೆಳೆಸುವ ಚಟ. ಎಲ್ಲವನ್ನೂ ವಿವರಿಸುವ ಚಟ. ಯಾಕೆ ಅಷ್ಟೆಲ್ಲ ವಿವರವಾಗಿ ಹೇಳಬೇಕು. ಯಾಕೆ ವಿವರಣೆ, ವಿಶ್ಲೇಷಣೆ ಬೇಕು. ಯಾಕೆ ಯಾರೂ ಹೇಳಬೇಕಾದ್ದನ್ನು ಥಟ್ಟನೆ ಹೇಳಿ ಮುಗಿಸುವುದಿಲ್ಲ. ಇವಳಂತೂ ಮೊದಲನೇ ದಿನದಿಂದ ಅದನ್ನೇ ಮಾಡುತ್ತಾ ಬಂದಳು. ಅಥವಾ ನಾನೇ ಹಾಗೆ ಮಾಡುತ್ತಾ ಬಂದಿದ್ದೆನಾ? ತಪ್ಪು ನಂದಾ ಅವಳದ್ದಾ?
ಇವತ್ತು ತೀರ್ಮಾನ ಆಗಿಬಿಡಬೇಕು. ನಂದೇ ತಪ್ಪು ಅಂತಾದರೆ ಒಪ್ಪಿಕೊಂಡು ಬಿಡುತ್ತೇನೆ. ನಾನು ಬದಲಾಯಿಸಿಕೊಳ್ಳುತ್ತೇನೆ. ಶಿವರಾಮ ಬರಲಿ, ಎಲ್ಲವನ್ನೂ ವಿವರವಾಗಿ ಹೇಳ್ತೇನೆ. ಅವನು ಏನು ಹೇಳುತ್ತಾನೋ ಹಾಗೆ ಕೇಳುತ್ತೇನೆ. ಜೀವನ ಕಷ್ಟ. ನಮಗೆ ಬೇಕಾದಂತೆ ಬದುಕೋದು ಇಲ್ಲಿ ಸಾಧ್ಯವಿಲ್ಲ. ನಮ್ಮದು ಅನ್ನುವುದನ್ನು ಬಲಿಗೊಟ್ಟಾದರೂ ಬೇರೆಯವರಿಗೆ ಇಷ್ಟವಾಗುವಂತೆ ಬದುಕೋಣ. ಇವತ್ತು ತೀರ್ಮಾನವಾಗಲಿ ಎಂದು ನಾರಾಯಣ ಖಿನ್ನನಾಗಿ ಕಾಯುತ್ತಾ ಕೂತ.
ಶಿವರಾಮ ಬಂದ. ನಾರಾಯಣ ಅವನೆದುರು ಕೂತು ತನ್ನ ಮನಸ್ಸಿನ ಸಂಕಟವನ್ನೆಲ್ಲ ತೋಡಿಕೊಳ್ಳುವವನಂತೆ ಮಾತು ಶುರುಮಾಡಿದ. ನಾರಾಯಣ ಅತ್ಯಂತ ವಿಷಾದದಿಂದ ತನಗೂ ರುಕ್ಮಿಣಿಗೂ ಜಗಳ ಆಯ್ತು ಎನ್ನುತ್ತಿದ್ದಂತೆ ಶಿವರಾಮ ಅಸಹನೆಯಿಂದ ಅದೆಲ್ಲ ಸರಿ, ಆಮೇಲೆ ಏನಾಯ್ತು ಹೇಳೋ’ ಎಂದು ನಿರ್ವಿಕಾರವಾಗಿ ಹೇಳಿ, ಅಂತ್ಯಕ್ಕಾಗಿ ಕಾಯುತ್ತಾ ಕೂತ. ನಾರಾಯಣನಿಗೆ ಅಂತ್ಯದ ಬಗ್ಗೆ ಆಸಕ್ತಿ ಹೊರಟುಹೋಗಿತ್ತು.
ಡಿಸೆ 22, 2010 @ 18:15:45
aamele enaaytu helree….
ಡಿಸೆ 20, 2010 @ 11:50:27
Wonderful story with connection to real people 🙂
ಡಿಸೆ 19, 2010 @ 17:29:56
ನಿರಂಜನ ಈ ಕತೆ ಓದಲು ಶುರು ಮಾಡುತ್ತಿದ್ದಂತೆ ಇದು ತನ್ನದೇ ಕತೆ, ತನ್ನ ಹೆಸರನ್ನು ಬದಲಿಸಿದ್ದಾರೆ ಅಷ್ಟೇ ಅನಿಸುವುದರೋಳಗಾಗಿ ಪೇಜ್ ಎಂಡ್ ಕೀಲಿಯನ್ನು ಅಮುಕಿ ಕೊನೆ ಸಾಲನ್ನು ಓದಿ ಅಳುತ್ತ ಕೂತಿದ್ದಾನೆ. ಅವನಿಗೆ ಇನ್ನು ಹದಿನಾರರ ಹರೆಯ.:)
ಡಿಸೆ 17, 2010 @ 16:55:25
Thumbha chenagide
ಡಿಸೆ 16, 2010 @ 12:12:18
life istene
ಡಿಸೆ 10, 2010 @ 01:29:17
ಅಂತ್ಯ ನಿಜಕ್ಕೂ ಕುತೂಹಲ
ಡಿಸೆ 08, 2010 @ 23:46:02
ಕಥೆ ಚೆನ್ನಾಗಿದೆ. ಇದು ಧಾವಂತದಲ್ಲಿ ಬದುಕ್ತಿರೋ ಪ್ರತಿಯೊಬ್ಬರ ಕಥೆಯೇ.. ಕೊನೆಗೆನಾಯ್ತು ಹೇಳು ಅನ್ನೋ ನಾರಾಯಣನಿಗೂ ಕೊನೆಗೆ ಷಾಕ್ ಆಗುವಂತೆ ಕಥೆ ಮುಕ್ತಾಯ ಆಗಿರೋದು ಸ್ವಾರಸ್ಯವಾಗಿದೆ
ಡಿಸೆ 08, 2010 @ 21:20:57
ನಿಮ್ಮ ಬರಹ ಬಹಳ ಚೆನ್ನಾಗಿದೆ ಕಥೆಗಳು
ಚುಟುಕಾಗಿಯು ಅರ್ಥಪೂರ್ಣವಾಗಿರುತ್ತದೆ
ಡಿಸೆ 08, 2010 @ 11:02:34
ತುಂಬಾ ಚನ್ನಾಗಿದೆ ಸರ್.
ಡಿಸೆ 08, 2010 @ 09:47:45
ನಾಟಕದ ವಿದ್ಯಾರ್ಥಿಗಳಿಗೆ ’ ಪ್ರದರ್ಶನಕ್ಕಿಂತ ಪ್ರೋಸೆಸ್ ಮುಖ್ಯ ’ ಎಂದು ಹೇಳುವುದು ನೆನಪಾಯಿತು.
ಡಿಸೆ 07, 2010 @ 23:42:15
very good story- srinivas deshpande
ಡಿಸೆ 07, 2010 @ 22:52:46
” Beda” annvudara mele bareda katheyade ontha thara modi. ” Aamele”
katheyade ondu anda. aparopada kalpane.
ಡಿಸೆ 07, 2010 @ 21:50:17
ತುಂಬ ಸುಂದರವಾದ ಬರಹ ಜೋಗಿಯವರೇ…
ಕೊನೆಗೂ ಹೊರಟು ಹೊಗುವ ಆಸಕ್ತಿಯನ್ನು
ಉಳಿಸಿ,ಬೆಳೆಸಿದ್ದು ಅದ್ಭುತವಾಗಿ ಬಂದಿದೆ.
ಡಿಸೆ 07, 2010 @ 17:08:03
Sir entha chandada baraha. Narayanana koneya nireeksheya bagge odutta hodantella avana katheya kone hegagabahudu emba kutoohala mathra yava oduganannu bidadu annisitu. Nijavagiyu Narayananantavaru samajakkondu ketta hore.
ಡಿಸೆ 07, 2010 @ 16:11:44
ಇಷ್ಟೇನಾ? ಆಮೇಲೇನಾಯ್ತು? 🙂
ಡಿಸೆ 07, 2010 @ 16:10:30
ಆಮೇಲೆ??