ನಾರಾಯಣನಿಗೆ ವಿಚಿತ್ರ ಕುತೂಹಲ.
ಚಿಕ್ಕಂದಿನಿಂದಲೂ ಅವನು ಹಾಗೆಯೇ. ವರ್ತಮಾನದಲ್ಲಿ ಬದುಕಿದ್ದು ಕಡಿಮೆ. ಏನು ಹೇಳಿದರೂ ಏನು ನೋಡಿದರೂ ಮುಂದೇನು’ ಎಂದೇ ಯೋಚಿಸುತ್ತಿದ್ದ. ಕಾದಂಬರಿ ಓದುವ ಹೊತ್ತಿಗೂ ಆರಂಭದ ಮೂವತ್ತು ಪುಟ ಓದಿ ಅವನು ಜಿಗಿಯುತ್ತಿದ್ದದ್ದು ಕೊನೆಯ ಪುಟಕ್ಕೆ. ಕೊನೆಯಲ್ಲಿ ಕಥಾನಾಯಕನಿಗೆ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ. ಅವನ ಜೀವನದ ವಿವರಗಳನ್ನೆಲ್ಲ ಆಮೇಲೆ ಓದಿಕೊಂಡರಾಯಿತು.
ಕೊನೆಗೇನಾಯಿತು ಅನ್ನೋದು ಮುಖ್ಯ ಎಂಬ ಅವನ ಕುತೂಹಲ ಎಷ್ಟರಮಟ್ಟಿಗೆ ಅವನನ್ನು ಆವರಿಸಿಕೊಂಡಿತ್ತು ಎಂದರೆ ಎಷ್ಟೋ ಕತೆಗಳ ಅಂತ್ಯ ಮಾತ್ರ ಅವನಿಗೆ ಗೊತ್ತಿರುತ್ತಿತ್ತು. ಸಂಸ್ಕಾರ’ ಕಾದಂಬರಿಯಲ್ಲಿ ಪ್ರಾಣೇಶಾಚಾರ್ಯರು ಊರು ಬಿಟ್ಟು ಕಣ್ಮರೆಯಾಗಿ ಹೋದದ್ದು, ಪತ್ತೇದಾರ ಪುರುಷೋತ್ತಮ ೧೫೦ನೇ ಸಾಹಸದಲ್ಲಿ ಕೊಲೆಗಾರ ಯಾರು ಎನ್ನುವುದು, ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯಲ್ಲಿ ಅವನೂ ಅವಳೂ ಗುಡ್ಡದಿಂದ ಬಿದ್ದು ಪ್ರಾಣಕಳಕೊಳ್ಳುವುದು- ಇವಿಷ್ಟು ಮಾತ್ರ ಅವನಿಗೆ ನೆನಪಿರುತ್ತಿತ್ತು. ಅದಕ್ಕೆ ಕಾರಣವಾದ ಘಟನೆಗಳೂ ಸನ್ನಿವೇಶಗಳೂ ಅವನ ಆಸಕ್ತಿಯ ಹರವಿನಲ್ಲೇ ಇರುತ್ತಿರಲಿಲ್ಲ.
ಹೀಗಾಗಿ ಅವನಿಗೆ ಕತೆ ಹೇಳುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು. ನಾಲ್ಕು ಮಂದಿ ಕೂತಾಗ ಪ್ರಸ್ತಾಪಕ್ಕೆ ಬರುತ್ತಿದ್ದ ವಿಚಾರಗಳು ಅವನನ್ನು ಯಾವತ್ತೂ ಹಿಡಿದಿಟ್ಟದ್ದೇ ಇಲ್ಲ. ಎಷ್ಟು ಹೊತ್ತು ಹೇಳಿದ್ದನ್ನೇ ಹೇಳ್ತೀರಿ, ಕೊನೆಗೇನಾಯ್ತು ಹೇಳಿ ಎಂದು ಭೀಕರ ಜಗಳವನ್ನೂ ರೋಚಕ ಪ್ರಣಯ ಪ್ರಸಂಗಗಳನ್ನೂ ಆತ ಇದ್ದಕ್ಕಿದ್ದ ಹಾಗೆ ಕ್ಲೈಮ್ಯಾಕ್ಸಿಗೆ ಒಯ್ಯುತ್ತಿದ್ದ.
ಅವನ ಈ ಚಾಳಿಯನ್ನು ತಪ್ಪಿಸಲು ಅವನ ಅಪ್ಪ ಅನೇಕಾನೇಕ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಜೀವನದಲ್ಲಿ ಏನೇನು ನಡೆಯುತ್ತೆ ಅನ್ನೋದು ಮುಖ್ಯ. ಅದನ್ನೇ ಜೀವನ ಅನ್ನೋದು. ಅಂತ್ಯ ಮುಖ್ಯವಲ್ಲ ಎಂದು ಅವನಿಗೆ ತಿಳಿಹೇಳಲು ಅವನ ಅಪ್ಪ ಸಾಕಷ್ಟು ಶಕ್ತಿ ಮತ್ತು ಸಮಯ ವ್ಯಯ ಮಾಡಿದ್ದರು.
ಇತ್ತೀಚಿನ ಟಿಪ್ಪಣಿಗಳು