-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 17
ನಾಗಭೂಷಣ ಹಳೇಬೀಡು ಸುಂದರರಾಯರನ್ನೇ ನೋಡಿದ, ದುರುಗುಟ್ಟಿ. ಯಜಮಾನ್ರು ನಿಂಗೆ ಕೇಸು ಕೊಡದು. ಅದುನ್ನ ನೀನು ಗೆಲ್ಲದು. ಮುಂದೆ ನೀನು ಸ್ವಂತ ಕೆಪಾಸಿಟೀ ಮ್ಯಾಲೆ ಕೇಸು ಹಿಡ್ಕೆಂಡು ಅದುನ್ನ ಗೆಲ್ಲದು. ಅದ್ರಿಂದ ನಿಂಗೆ ರೊಕ್ಕ ಬರದು. ಅದ್ರಿಂದ ನನ್ನ ಸಾಲ ತೀರ್ಸದು. ಯಾವನಾರ ತಲೆಯಿರ ಸೂಳೇಮಗ ನಂಬಾ ಮಾತಾಯಿದೂ. ಗಾಂಚಲಿ ಅಂದ್ರೆ ಇದು. ನಾನು ಕೊಟ್ಟೆ, ನೀನು ಯಿಸ್ಗಂಡಿ.
ಆದರೆ ನಾಗಭೂಷಣ ಬಾಯಿ ಬಿಟ್ಟು ಹೇಳಿದ್ದೇ ಬೇರೆ. ’ನಂದೇ ಯೀ ತಿಂಗಳೂ ಹರೀತಾಯಿದೆ. ಯಿಪ್ಪತ್ತೆಂಟಕ್ಕೆ ಅಪ್ಪನ ತಿಥಿ. ಹಿರೇಮಗ ನಾನು. ಕರ್ಚೆಲ್ಲಾ ನಂದೇ. ಇಬ್ರು ಅಕ್ಕಂದ್ರು ಬರ್ತರೆ. ಮನ್ತುಂಬಾ ಜನ ಜಾತ್ರೆ ಯಿರ್ತತೆ. ನನ್ನ ಕೈನೂ ಕಟ್ಟಾಕ್ದಂಗಾಗಿದೆ. ಯೇನು ಮಾಡ್ಲಿ. ಯಿಲ್ಲಾಂದ್ರೆ ಒಂದಿಪ್ಪತ್ತೋ ಮೂವತ್ತೋ ಗ್ಯಾರಂಟಿ ಕೊಟ್ಟಿರೋನು ನಾನು. ನಿಮಗೆ ಯಿಲ್ಲಾ ಅನ್ನಕ್ಕಾಗ್ತತಾ. ಅಷ್ಟಿಲ್ಲ ನನತ್ರ ಯೀಗ.’
ಹಳೇಬೀಡು ಸುಂದರರಾಯರಿಗೆ ಪಿಚ್ಚೆನಿಸಿತು. ಈ ತಂದೆಗಳಿಗೆ ವರ್ಷಾ ವರ್ಷ ತಿಥಿ ಮಾಡಿಸಿಕೊಳ್ಳೋದೇ ಒಂದು ಪ್ರೆಸ್ಟೀಜೇನು? ತಿಥಿ ಮಾಡುಸ್ಕೆಳ್ಳೇ ಬೇಕು ಅನ್ನಾ ಹಠ ಯಾಕೆ? ಈ ತಂದೆಗಳು ಮಕ್ಕಳನ್ನು ಹುಟ್ಸದೇ ವರ್ಷಾ ವರ್ಷಾ ತಿಥಿ ಮಾಡಿಸ್ಕೆಳ್ಳೀ ಅಂತೇನು? ಈ ತಿಥಿಗಳು ತನ್ನ ವಕೀಲಿ ವೃತ್ತಿಗೇ ಯಾಕೆ ಕೊಡಲಿ ಹೆಟ್ಟಬೇಕು? ಈಗ ನಾಗಭೂಷಣ ಕೈಬಿಟ್ಟರೆ ತಮ್ಮ ವಕೀಲಿ ವೃತ್ತಿ ಪೂರ್ತಿ ಮಣ್ಣು ಸೇರಿದಂತೆ. ಯೋಚನೆಗೇ ಗಾಬರಿಬಿದ್ದರು.
’ಹಂಗನ್ನಬೇಡಿ. ಕೇಸು ಶುರಾಗೋಕೆ ಮದ್ಲೇ ಕೋಟು ಹೊಲುಸ್ಗೆಂಬೇಕು. ಹೊಲ್ಸಕೆ ಒಂದಿಷ್ಟು ಕರ್ಚಾಗ್ತತೆ.’
’ಕೋಟು ರಿಪೇರಿಗೆ ನೂರಿಪ್ಪತ್ಯಾಕೆ ಬೇಕು. ಒಂದು ಹತ್ತೋ ಹದಿನೈದೋ ಯಿದ್ರೆ ಸಾಕಪಾ. ಯದಕ್ಕೂ ಒಂದೈದು ಇರಬೇಕೇನೋ ನನತ್ರ ಈಗ. ಕೊಟ್ಟಿರ್ತೀನಿ. ನಿಮಗೆ ರೊಕ್ಕ ಬರತ್ಲೂ ಕೊಡಿ.’ ಜೇಬಿನಿಂದ ಒಂದಿಷ್ಟು ಪುಡಿ ನೋಟುಗಳನ್ನು ಹಿರಿದು, ಅದರಿಂದ ಒಂದು ಐದು ರೂಪಾಯಿ ನೋಟನ್ನು ಹಿರಿದು ನೀಡಿದ.
ಹಳೇಬೀಡು ಸುಂದರರಾಯರು ಮುಗಿದ ಕೈಗಳನ್ನು ಎದೆಗವಚಿಯೇ ನಿಂತಿದ್ದರು. ಕೈ ನೀಡಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿತ್ತು. ಅಸಹಾಯಕತೆಯೇ ಹಳೇಬೀಡು ಸುಂದರರಾಯರ ವೇಶದಲ್ಲಿ ಬಂದು ನಿಂತಂತಿತ್ತು.
’ಇಲ್ಲಾನ್ನ ಬೇಡಪಾ. ನೀನು ನನ್ನ ಪಾಲಿನ ದೇವ್ರಿದ್ದಂಗೆ.’
ನಾಗಭೂಷಣಂಗೆ ಮುಂದೇನು ಮಾಡಬೇಕೂ ತೋಚಲಿಲ್ಲ. ಕೈ ತುಂಬಿದ್ದ ಒಂದಿಷ್ಟು ನೋಟುಗಳಿಂದ ನಲವತ್ತು ರೂಪಾಯಿಗಳನ್ನು ಎಣಿಸಿ ಹಳೇಬೀಡು ಸುಂದರರಾಯರ ಕಡೆ ಚಾಚಿದ. ಹಳೇಬೀಡು ಸುಂದರರಾಯರು ಮುಂದೆ ಮಾಡಿದ ಬೊಗಸೆಯಲ್ಲಿ ಹಾಕಿ ತರ್ಪಣ ಬಿಟ್ಟ. ರೂಪಾಯಿಗಳನ್ನು ಕೈಲಿ ಬಿಗಿ ಹಿಡಿದ ಹಳೇಬೀಡು ಸುಂದರರಾಯರು ಒಮ್ಮೆಲೇ ನಾಗಭೂಷಣನ ಕಾಲಿಗೆ ಬಿದ್ದರು. ಇದನ್ನು ನಾಗಭೂಷಣ ನಿರೀಕ್ಷಿಸಿರಲಿಲ್ಲ. ತಡಬಡಾಯಿಸಿ ಕುರ್ಚಿ ಬಿಟ್ಟು ಎದ್ದು ಬಿಟ್ಟ. ಹಳೇಬೀಡು ಸುಂದರರಾಯರು ತಂದೆಯ ಕಾಲಿಗೆ ಬಿದ್ದು ಏಳುವಷ್ಟೇ ಸಹಜವಾಗಿ ಎದ್ದು ಏನೂ ಆಗಿಲ್ಲ ಎನ್ನುವಂತೆ ಹೊರಗೆ ನಡೆದರು.
ಹಳೇಬೀಡು ಸುಂದರರಾಯರು ತುಕ್ಕೋಜಿ ಅಂಗಡಿ ಹೊಸಿಲು ತುಳಿದಾಗ ಮಟಮಟ ಮಧ್ಯಾಹ್ನ. ಕುದಿಯುವ ಧಗೆಗೆ ಕ್ಯಾರೇ ಎನ್ನದೇ ತುಕ್ಕೋಜಿ ಯಾವುದೋ ಮಹ್ಮದ್ ರಫಿ ಹಾಡನ್ನು ಗುಣುಗುತ್ತಾ ಯಂತ್ರದ ಪೆಡಲ್ ತುಳಿಯುತ್ತಿದ್ದ. ಸರೋಜ ತನ್ನ ದೂರದ ಸಮ್ಮಂದಿಕರ ಮದುವೆಗೆ ಹೋಗುವುದನ್ನು ರದ್ದು ಮಾಡಿದ್ದಳು. ಅಲ್ಲೇ ಒಂದು ಕಡೆ ಕೂತು, ಆಗಾಗ್ಗೆ ಸೆರಗಿನಿಂದ ಗಾಳಿ ಹಾಕಿಕೊಳ್ಳುತ್ತ ಎದುರಿದ್ದ ರಾಶಿಯಲ್ಲಿನ ಒಂದು ಅಂಗಿಯನ್ನು ಕೈಗೆತ್ತಿಕೊಂಡು ಅದಕ್ಕೆ ಗುಂಡಿ ಹಾಕುತ್ತಿದ್ದಳು.
ಈ ಸಾರಿ ಹಳೇಬೀಡು ಸುಂದರರಾಯರು ಹೊಸಿಲಲ್ಲಿ ನಿಂತು ಕೆಮ್ಮಲಿಲ್ಲ. ಕಾಯಲಿಲ್ಲ. ನೇರ ನಡೆದು ತುಕ್ಕೋಜಿ ಯಂತ್ರದ ಮುಂದೆ ನಿಂತರು. ಪೆಡಲ್ ತುಳಿಯುವುದನ್ನು ತುಕ್ಕೋಜಿ ನಿಲ್ಲಿಸಿದ. ಗುಂಡಿಯನ್ನು ಹಾಕುವುದನ್ನು ಸರೋಜ ನಿಲ್ಲಿಸಿದಳು.
ಹಳೇಬೀಡು ಸುಂದರರಾಯರನ್ನೇ ನೋಡಿದರು. ಹಳೇಬೀಡು ಸುಂದರರಾಯರು ಮುಷ್ಠಿಯಲ್ಲಿದ್ದ ರೂಪಾಯಿ ನೋಟುಗಳನ್ನೂ, ಚಿಲ್ಲರೆ ಹಣವನ್ನೂ ಯಂತ್ರದ ಮೇಲೆ ಸುರಿದು, ತುಕ್ಕೋಜಿಯ ಮುಂದೆ ಕೈ ಮುಗಿದು ನಿಂತರು. ತುಕ್ಕೋಜಿ ಏನೂ ಅರ್ಥವಾಗದೇ ಹಳೇಬೀಡು ಸುಂದರರಾಯರನ್ನು ನೋಡಿದ. ಹಳೇಬೀಡು ಸುಂದರರಾಯರ ಕಣ್ಣುಗಳಲ್ಲಿ ನೀರಿತ್ತು.
’ಅಷ್ಟೇ ಯಿರದು ನನತ್ರ. ನೂರಾ ಹದ್ನೈದು. ಬಾಕೀನ್ನ ತೀರುಸ್ತೀನಿ. ಸಾಲ ಅಂತಿಟ್ಕಳಿ. ದಾನಕ್ಕೆ ಬೇಡ. ಹೆಂಗರ ಮಾಡಿ ತೀರುಸ್ತೀನಿ. ಒಂದು ಕೋಟು ಹೊಲಕೊಟ್ರೆ ನಿಮ್ ಹೆಸರ್ನಗೆ ಒಂದೊತ್ತು ಊಟ ಮಾಡ್ತೀನಿ. ಇಲ್ಲಾ ಅನಬೇಡಿ. ಒಬ್ಬ ಬ್ರಾಮಣಂಗೆ ಊಟ ಹಾಕಿದ ಪುಣ್ಯ-’ ಮುಂದೆ ಮಾತು ಬರಲಿಲ್ಲ ಹಳೇಬೀಡು ಸುಂದರರಾಯರಿಗೆ. ಅಳು ಉಮ್ಮಳಿಸಿ ಬಂತು. ಮೂಗು ಒದ್ದೆಯಾಯಿತು. ಹೊರಗೆ ಜೋತಾಡಿಕೊಂಡಿದ್ದ ಕೂದಲುಗಳು ಸಳಸಳ ಹೊಯ್ದಾಡಿದವು. ಬ್ರಾಕೇಟಿನೋಪಾದಿಯಲ್ಲಿ ನಿಂತಿದ್ದ ಹಳೇಬೀಡು ಸುಂದರರಾಯರನ್ನು ನೋಡಿದ ತುಕ್ಕೋಜಿಗೆ ಏನೂ ತೋಚಲಿಲ್ಲ.
’ಹಂಗೇ ಆಗ್ಲಿ. ಹೋಗಿ ಬರ್ರಿ. ಒನ್ನಾಕು ದಿಸ ಬಿಟ್ಟು ಬರ್ರಿ. ಹೊಲ್ದಿಟ್ಟಿರ್ತೀನಿ.’
ಹಳೇಬೀಡು ಸುಂದರರಾಯರು ಧುಡಮ್ಮನೆ ತುಕ್ಕೋಜಿಯ ಕಾಲಿಗೆ ಬಿದ್ದರು. ತುಕ್ಕೋಜೀಯೂ ಇದನ್ನು ನಿರೀಕ್ಷಿಸಿರಲಿಲ್ಲ. ತಡಬಡಾಯಿಸಿ ಎದ್ದು ನಿಂತ. ’ಅಯ್ಯೋ ಹಂಗೆಲ್ಲಾ ಮಾಡಬೇಡಿ.’ ಆದರೆ ಹಳೇಬೀಡು ಸುಂದರರಾಯರು ದೇವರಿಗೆ ನಮಸ್ಕಾರ ಮಾಡಿದ ಮೇಲೆ ಏಳುವಷ್ಟು ಸಹಜವಾಗಿ ಎದ್ದು, ’ನನ್ನ ಕೈನಗಾದಾಗ ಉಳಿದಿದ್ದು ಕೊಡ್ತೀನಿ. ಮೋಸ ಮಾಡಲ್ಲ. ಈಗ ನನ್ ಕೈನಗಿಲ್ಲ ಅಷ್ಟೇ ಎಂದು ಹೇಳಿ ಹೋಗೇ ಬಿಟ್ಟರು. ತುಕ್ಕೋಜಿ ಸರೋಜನ ಮುಖ ನೋಡಿದ.
ಕೇವಲ ಒಂದು ತಂಬಿಗೆ ನೀರು ಕುಡಿದು ತಾರಸಿಯನ್ನೇ ನೋಡುತ್ತಾ ನೆಲದ ಮೇಲೆ ಮಲಗಿದ ಹಳೇಬೀಡು ಸುಂದರರಾಯರ ತಲೆಯಲ್ಲಿ ರಾತ್ರಿಯಿಡೀ ನಾಗಭೂಷಣನ ಸಾಲ, ತುಕ್ಕೋಜಿಯ ಉದ್ರಿ ವ್ಯಾಪಾರ ಮೆರೆವಣಿಗೆ ನಡೆಸಿದ್ದವು. ತಲೆಯಲ್ಲಿ ಜಮಾಕರ್ಚಿನ ಲೆಕ್ಕ ತಯಾರಾಗ್ತಾಯಿತ್ತು. ನೂರಾ ಎಪ್ಪತ್ತೈದು ರೂಪಾಯಿ. ತೀರ್ಸದು ಹೆಂಗೆ. ತಾವಿನ್ನು ಈ ವರ್ಷ ಏನೆಲ್ಲಾ ತ್ಯಜಿಸಬೇಕು, ಏನೆಲ್ಲಾ ತ್ಯಾಗ ಮಾಡಬೇಕು ಎನ್ನುವ ಪಟ್ಟಿಗೆ ತಯಾರಾದರು. ಯೀಗ್ಲೇ ರಾತ್ರೀ ಒಂದೊತ್ತು ಊಟ ಬಿಟ್ಟಾಗಿದೆ. ಯಿನ್ನು ಬೆಳಿಗ್ಗೆ ತಿನ್ನಾ ಅವಲಕ್ಕೀ-ಮಜ್ಜಿಗೆ ಬಿಡಬೇಕು. ಒಂದಿಷ್ಟು ಉಳೀತದೆ. ಮದ್ಲೇ ಮನೆನಗೆ ಕರೆಂಟ್ ಇಲ್ಲ. ಯಿರದು ಒಂದು ಲಾಟೀನು. ಅದ್ನ ಯಿನ್ನ ಯಷ್ಟು ಬೇಕೋ ಅಷ್ಟು ಬಳುಸ್ಬೇಕು, ಸಾದ್ಯವಾದಷ್ಟೂ ಆ ಲಾಟೀನ್ನ ಹಚ್ಚಕೇ ಹೋಗಬಾರ್ದು.
ಹಂಗೇ ಒಂದೊರ್ಷ ಕತ್ಲಗೇ ಅಡ್ಡಾಡ್ಕೆಂಡಿದ್ರೆ ಯೇನು ನುಕ್ಸಾನಾಗ್ತದೆ ಅಂತ. ಒಂದಿಷ್ಟು ಸೀಮೆಯಣ್ಣೆ ಉಳೀತದೆ. ದಿಸಾ ಸಾಯಂಕಾಲ ಐದೂವರೆ ಆರಕ್ಕೆ ಆ ಕೋಚಿಂಗ್ ಸ್ಕೂಲತ್ರ ತಿನ್ನ ಶೇಂಗಾ ಮತ್ತೆ ರವಿ ಹೋಟ್ಲಿನ ಕಾಪಿ ಬಿಡಬೇಕು. ದಿಸಕ್ಕೆ ಯೇನಿಲ್ಲಾಂದ್ರೂ ಒನ್ನಾಕಾಣೆ ಉಳೀತದೆ. ಬಟ್ಟೇನ್ನ ಯಿನ್ನು ಮೇಲೆ ಹದಿನೈದು ದಿಸಕ್ಕೊನ್ಸಲ ವಗೀ ಬೇಕು. ತಡ್ತ ಬರ್ತದೆ. ಸೋಪೂ ಉಳೀತದೆ. ಸ್ನಾನ ಮಾಡೋ ಹೊತ್ನೆಗೆ ಸೋಪು ಯಾಕೆ ಬೇಕು. ಯೇನು ಯಲ್ರೂ ಸೋಪೇ ಹಾಕ್ಕೆಂತಾರೇನು. ಒಂದು ಬೆಣಚು ಕಲ್ಲಿಟ್ಗಂಡ್ರಾಯ್ತು.
ರಸ್ತೆನಗೆ ನಡಿಯೋ ಹೊತ್ನೆಗೆ ಮೆತ್ತಗೆ ನಡೀಬೇಕು. ಹಗೂರಕ್ಕೆ ನಡೀಬೇಕು. ಹಂಗೇ ಮುಂಗಾಲಿನ ಮೇಲೇ ನಡೀಬೇಕು. ಮೆಟ್ಟಿನ ಹಿಮ್ಮಡಿ ಸವಿಯಂಗಿಲ್ಲ. ಹುಶಾರಾಗಿ ನಡುದ್ರೆ ರಿಪೇರೀ ಕರ್ಚೂಯಿರಂಗಿಲ್ಲ, ಮೆಟ್ಟೂ ಒನ್ನಾಕು ದಿಸ ಹೆಚ್ಗೆ ಬಾಳ್ತವೆ. ರಿಪೇರಿ ಅಂತೇನರ ಮೈಮೇಲೆ ಬಂದ್ರೆ ಅದಕ್ಕೊಂದು ಮೂರೋ ನಾಕೋ ಕರ್ಚು.
ಹಂಗೂ ಹಿಂಗೂ ತಿಂಗಳಿಗೆ ಒಂದಿಪ್ಪತ್ತಾರ ಉಳುಸ್ಬೋದು. ಅಂದ್ರೆ ಒಂದಾರು ತಿಂಗಳೂ ವರ್ಶಾ ಹೊಟ್ಟೇ ಬಟ್ಟೆ ಕಟ್ಟಿದ್ರೆ ಕೊಡಬೇಕಾದೋರಿಗೆಲ್ಲಾ ಕೊಡದು ಮುಗಿತದೆ. ಕೇಸೇನರ ಕೈಗೆ ಹತ್ತತೂ ಅಂದ್ರೆ, ಶ್ರೀರಾಮ ಯೇನರ ಕಣ್ಣು ಬಿಟ್ನಪಾ ಅಂದ್ರೆ ವಾರ ವಪ್ಪೊತ್ನಗೇ ಸಾಲ ಮುಗೀತದೆ. ವಕೀಲ್ ನಾಗ್ರಾಜರಾಯ್ರು ಯಷ್ಟು ಕೊಡಬಹುದು, ಒಂದೈವತ್ತು ಕೊಟ್ಟಾರೆನೋ. ಫಸ್ಟ್ ಕೇಸು, ಯಿಪ್ಪತ್ತೇ ಕೊಡ್ಲಿ, ಪರವಾಗಿಲ್ಲ.
ಗೆದ್ರೆ ಮುಂದಿದ್ದೇಯಿದ್ಯಲ್ಲಾ. ಸಾಲದ ಭಾರ ಮನಸ್ಸನ್ನು ತುಂಬಿದ್ದರೂ, ಮನಸ್ಸು ಯಾಕೋ ಹೆಚ್ಚು ಉಲ್ಲಾಸದಿಂದ ಪುಟಿಯುತ್ತಿತ್ತು. ಹೊಸ ಕೋಟು ತನ್ನ ಹೆಸರಲ್ಲಿ ತಯಾರಾಗುತ್ತಿದೆ ಎನ್ನುವುದನ್ನೇ ಮನಸ್ಸು ಮತ್ತೆ ಮತ್ತೆ ಮೆಲುಕು ಹಾಕಿ ಪುಟಿಯುತ್ತಿತ್ತು. ಈ ಲೆಕ್ಕ, ಈ ಪುಳಕದಲ್ಲಿ ನಿಧಾನವಾಗಿ ಕಣ್ಣುಗಳು ಭಾರವಾಗುತ್ತಿದ್ದವು. ಆದರೆ ನಿದ್ದೆ ಪೂರ್ತಿ ಮೈಮೇಲೆ ಎರಗುವುದರಲ್ಲಿ ದಿನಾ ಮುಖಕ್ಕೆ ಬಳಿದು ಕೊಳ್ಳುತ್ತಿದ್ದ ಕುಟಿಕುರಾ ಪೌಡರ್ ಲೆಕ್ಕ ಮಾತ್ರ ಹೇಗೋ ತಪ್ಪಿಸಿಕೊಂಡಿತ್ತು.
ಮುಂದುವರೆಯುವುದು…
ಇತ್ತೀಚಿನ ಟಿಪ್ಪಣಿಗಳು