ಸೂರಿ -16: ಒಂದು ನೂರಿಪ್ಪತ್ತಿದ್ರೆ ಬೇಕಿತ್ತೂ…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 16

ಎದುರು ನಿಂದು ಏಕ ಮಾತ್ರ ಪುತ್ರನ ಕರ ಪಿಡಿದು ‘ವತ್ಸಾ ಕೈ ಬಿಡಬೇಡ‘ ಎಂದುಸುರಿದಂತಾಯ್ತು. ಅದು ಅಪ್ಪಣೆಯಂತೇ ಕೇಳಿತು. ವಿಧಿಯಿಲ್ಲದೇ ತಲೆಯಾಡಿಸಿ, ಕೈಲಿದ್ದ ಪುಡಿ ನೋಟುಗಳಲ್ಲಿ ಹತ್ತು ರೂಪಾಯಿಗಳನ್ನು ಎಣಿಸಿ ತಂಬಿಗೆಗೆ ತುಂಬಿದರು.

‘ರಾಮದೇವರ ಗುಡಿನಗೆ ನನ್ ಕೈಲಾದಂಗೆ ಮಾಡ್ತೀನಿ. ಯೋಚನೆ ಮಾಡಬೇಡಿ. ನಿಮ್ ಕೈ ಬಿಡಂಗಿಲ್ಲ‘ ಎಂದು ದೇವರ ಮುಂದೆ ಸಾಷ್ಟಾಂಗ ಮಾಡಿ, ಉಳಿದ ದುಡ್ಡನ್ನು ಮುಷ್ಠಿಯಲ್ಲಿ ಬಿಗಿ ಹಿಡಿದು ದೇವರ ಮನೆಯಿಂದ ಹೊರಬಿದ್ದರು. ಕೋಟಿನ ಬಾಬತ್ತಿನಲ್ಲಿ ಸುಮಾರು ಎಪ್ಪತ್ತಾರು ರೂಪಾಯಿ ಜಮೆಯಾಗಿತ್ತು.

ಅರ್ಧ ಶರಧಿಯನ್ನು ದಾಟಿದ ಹನುಮಂತ ಒಮ್ಮೆ ಆಗಸದಲ್ಲಿ ನಿಂತು ಮುಂದಿನ ರಸ್ತೆಯನ್ನು ಅವಲೋಕಿಸಿದ. ದಾಟಬೇಕಾದದ್ದು ಇನ್ನೂ ಅರ್ಧದಷ್ಟಿದೆ. ಮುಂದಿನ ಆಳವೆಂತೋ, ವಿಸ್ತಾರವೆಂತೋ ತಿಳಿಯದು. ನಿಟ್ಟುಸಿರಿಟ್ಟು ಅರೆ ಬರೆ ಒಣಗಿದ ನೀರುಪಂಚೆಯಲ್ಲಿ ಮುಂದಿನರ್ಧದ ಶರಧಿಯನ್ನು ದಾಟುವ ಬಗ್ಗೆ ಯೋಚಿಸಿದ.

ತಾನು ಬರ್ರಿ ಅಂದಿರಲಿಲ್ಲ. ಅಂದರೂ ಎದುರು ಬಂದು ನಿಂತ ಹಳೇಬೀಡು ಸುಂದರರಾಯರನ್ನು ಕಂಡು ನಾಗಭೂಷಣ ಹುಬ್ಬೇರಿಸಿದ. ಹಳೇಬೀಡು ಸುಂದರರಾಯರು ಮಾತನಾಡಲಿಲ್ಲ. ನಾಗಭೂಷಣನೆದುರು ಹಿಡಿಯಾಗಿ ನಿಂತರು.

’ಅಲ್ಲ, ಮುಂದಿನ ವಾರ ಬನ್ನೀಂತಂದ್ರೆ ಯಲ್ಡೇ ದಿಸಕ್ಕೆ ಬಂದೀರಲ್ಲ. ಯಜಮಾನ್ರು ಯಿನ್ನೂ ಕೇಸುನ್ನ ನೋಡೇಯಿಲ್ಲ. ನಾನೇ ಹೇಳಿ ಕಳುಸ್ತೀನಿ. ಆವಾಗ ಬರ್ರಿ.’ ಯಾವುದೋ ಒಂದು ಫೈಲನ್ನು ಕಂಕುಳಿನಲ್ಲಿ ಸಿಗಿಸಿಕೊಂಡು ಯಾವ ದಿಕ್ಕಿಗೋ ಓಡಿದ. ಸುಮಾರು ಹದಿನೈದು ನಿಮಿಷ ಬಿಟ್ಟು ವಾಪಸ್ಸು ಬಂದ. ಹಳೇಬೀಡು ಸುಂದರರಾಯರು ತಮ್ಮ ಜಾಗವನ್ನಾಗಲೀ, ನಿಂತ ಭಂಗಿಯನ್ನಾಗಲೀ ಬದಲಿಸಿರಲಿಲ್ಲ. ಅದು ಹೋಗಲಿ ಮುಖದ ಮೇಲಿದ್ದ ಒಂದು ಅಪೇಶಿ ನಗೆ ಕೂಡಾ ಇಂಚೂ ಬದಲಾಗಿರಲಿಲ್ಲ.

ನಾಗಭೂಷಣ ತನ್ನ ಕುರ್ಚಿಯಲ್ಲಿ ಕೂತು ಹಳೇಬೀಡು ಸುಂದರರಾಯರನ್ನು ನೋಡಿದ. ಮತ್ತೆ ಹುಬ್ಬೇರಿಸಿದ. ಅದೇನೋ ನೆನಪಾದವನಂತೆ ’ಅಲ್ರೀ, ಕೋಟು ಕೊಡೀ ಕೋಟು ಕೊಡೀ ಅಂತ ಕೋರ್ಟನಗೆ ಯಲ್ರನ್ನೂ ಕೇಳ್ತಿದ್ರಂತೆ. ಶಿವರಾಮ ಹೇಳ್ದ ನಿನ್ನೆ.

ಯೇನು ಕೋಟಿಲ್ವಾ ನಿಮತ್ರ? ಕೋಟಿಲ್ದೇ ಕೋರ್ಟಿಗೆಂಗೋಗ್ತೀರಾ? ಯಜಮಾನ್ರಿಗೆ ಒನ್ಮಾತು ಹೇಳಬೇಕಿತ್ತೋ ಬೇಡ್ವೋ ನೀವು ಕೋಟಿಲ್ಲಾಂತ. ಈಗ್ಲಾದ್ರೂ ಹೇಳಿ. ಬೇರೆ ಯಾರಿಗಾದ್ರೂ ಕೇಸು ಕೊಡ್ತರೆ. ನಿಮಗೆ ಕೇಸು ಕೊಡದು, ನೀವು ಕೋಟಿಲ್ಲಾಂತ ಕೋರ್ಟಿಗೆ ಹೋಗ್ದೇಯಿರದು. ಯಜಮಾನ್ರು ಪ್ರೆಸ್ಟೀಜು ಮಣ್ಣಾಗದು. ಇಲ್ಲೀತನ ಒನ್ಕೇಸು ಸೋತಿಲ್ಲ ಯಜಮಾನ್ರು. ನಿಮ್ಮಿಂದ ಆ ಹೆಸ್ರು ಬರದು ಬೇಡ.’

ಹಳೇಬೀಡು ಸುಂದರರಾಯರಿಗೆ ಕಿಬ್ಬೊಟ್ಟೆಯಲ್ಲಿ ಝುಳ್ಳ್ ಅಂದಿತು. ಇಡೀ ಶರೀರ ಬೆಚ್ಚಗಾಯಿತು. ತನ್ನ ಕೋಟು ವಿಷಯ ಇಲ್ಲೀತಂಕ ಬಂತೇ, ನನ್ನ ಕರ್ಮ ಎಂದು ತಮ್ಮ ಹಣೇಬರಕ್ಕೆ ಶಾಪ ಹಾಕಿ, ಒಂದು ಸಾರಿ ಘಟ್ಟಿಯಾಗಿ ಉಸಿರನ್ನು ಎಳೆದುಕೊಂಡು, ಜೀವವನ್ನು ಅಂಗೈಗೆ ತಂದುಕೊಂಡು, ಹಳೇಬೀಡು ಸುಂದರರಾಯರು ತೊದಲಿದರು, ’ಒಂದು ಕೋಟಿದೆ. ಇಲ್ಲಂತಿಲ್ಲ. ಸೊಲೂಪ ಹರ‍್ದಿದೆ. ಹೊಲ್ಸಿದ್ರೆ ಸರಿಯಾಕ್ತದೆ. ಅಲ್ಲೀತಂಕ ಟೈಮಿದ್ಯೋ ಯಿಲ್ವೋ ಅಂತ ಬಸವರಾಜಪ್ಪನ್ನ ಕೇಳಿದ್ದು. ಅಷ್ಟೇ.’

ಮಾತು ಕಣ್ಣೀರಾಗಿ, ಜೀವ ನೀಡುವ ಎಂಜಲಾಗಿ ಹರಿಯುತ್ತಿತ್ತು. ನಾಗಭೂಷಣ ಎಷ್ಟು ಕೇಳುಸ್ಕೊಂಡನೋ ಎಷ್ಟು ಬಿಟ್ನೋ, ಅದ್ಯಾವುದೋ ಪುಸ್ತಕದಲ್ಲಿ ಮೂಗು ತೂರಿಸಿ ಕೂತಿದ್ದ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೇನೆ ಎನ್ನುವಂತೆ ತಲೆ ಹಾಕುತ್ತಿದ್ದ. ಸುಂದರರಾಯರು ಅದೇ ಉಸಿರಿನಲ್ಲಿ ಮುಂದುವರೆಸಿದರು. ಈಗಂತೂ ಮಾತು ಬಾಯಿಯಿಂದ ಹೊರಡಬೇಕೋ ಬೇಡವೋ ಎಂಬಂತೆ ತುಟಿಗಳ ಒಳಗೇ ಮುಗ್ಗರಿಸಿ ಬೀಳುತ್ತಿದ್ದವು.

’ಒಂದು ನೂರಿಪ್ಪತ್ತಿದ್ರೆ ಬೇಕಿತ್ತೂ-’

ತಲೆ ಹಾಕುತ್ತಿದ್ದ ನಾಗಭೂಷಣಂಗೆ ಒಮ್ಮೆಲೇ ಜೀವ ಬಂದಿತು. ಕೇಳಬಾರದ್ದನ್ನು ಕೇಳಿದವನಂತೆ ಚೀರಿದ. ’ಯೇನೂ, ನೂರಿಪ್ಪತ್ತಾ? ಯಿನ್ನೂ ಕೇಸೇ ಶುರಾಗಿಲ್ಲ ಆಗ್ಲೇ ಅಡ್ವಾನ್ಸೂ ಅಂತಂದ್ರೆ ಹೆಂಗಪಾ ಮತೇ-’

’ಅಡ್ವಾನ್ಸಲ್ಲ. ಸಾಲ. ದುಡ್ಡು ಬರತ್ಲೇ ತೀರಿಸಿಬಿಡ್ತೀನಿ.’

ಮುಂದುವರೆಯುವುದು…

1 ಟಿಪ್ಪಣಿ (+add yours?)

  1. prakashchandra
    ಡಿಸೆ 04, 2010 @ 13:04:51

    Dear suri, Kotaleyembaru….kathe chennagi odisikondu hoguthide. Nijakkoo nimma shaili katheya highlight. bada sundararayara paathravannu manamuttuvanthe chitrisiddeeri. prati sanchikegai kaayuvanthe agide.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: