ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

‘ನುಡಿ ಪುಸ್ತಕ’ ಹಲವು ವಾಚಿಕೆಗಳನ್ನೂ, ಉಮಾರಾವ್ ಅವರ ಕಥಾ ಸಂಕಲನವನ್ನೂ ಹೊರತರುತ್ತಿದೆ. ಇದರೊಂದಿಗೆ ಬಿಡುಗಡೆಯಾಗುತ್ತಿರುವ ಇನ್ನೊಂದು ಆತ್ಮೀಯ ಪುಸ್ತಕ ಅಬ್ದುಲ್ ರಶೀದ್ ಅವರ ‘ಮೈಸೂರ್ ಪೋಸ್ಟ್’.

‘ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ’ ಎನ್ನುವ ಈ ಬರಹ ಆ ಪುಸ್ತಕದಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಶೀದರ ‘ಮೈಸೂರು ಪೋಸ್ಟ್’ ಬ್ಲಾಗ್ ನಲ್ಲಂತೂ ಇತ್ತು. ೧೯೯೫ ರಲ್ಲಿ ಬರೆದ ಈ ಲೇಖನ ಕೃತಿ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ನಿಮಗಾಗಿ.

ಪುಸ್ತಕ ಬಿಡುಗಡೆ ನಾಳೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್  ನಲ್ಲಿ ಬೆಳಗ್ಗೆ ೧೦ ಗಂಟೆಗೆ . ಬನ್ನಿ ಎನ್ನುತ್ತಾರೆ ರಂಗನಾಥ್

-ಅಬ್ದುಲ್ ರಶೀದ್

ಆಗ ನಾವು ಹುಡುಗರು.

ಹೈಸ್ಕೂಲಿನ ನಡುವಿನ ಕಾಲ.

ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.

ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗಿ ಪ್ಯಾಂಟಿಗೋ, ಪಂಚೆಗೋ ಮೊರೆ ಹೋಗುತ್ತಿದ್ದ ದಿನಗಳು.

ಆಗ ಪೇಟೆ ಪಟ್ಟಣಗಳಿಂದ ಕಾಲೇಜಿನ್ನೋ, ಕೆಲಸವನ್ನೋ ಮುಗಿಸಿಕೊಂಡು ಊರಿಗೆ ಸಂಜೆ ಬರುತ್ತಿದ್ದ ನಮ್ಮ ಹಿರಿಯ ಯುವಕ ಗೆಳೆಯರ ಕೈಯಲ್ಲಿ ನಾಲ್ಕು ಪುಟಗಳ ಕಪ್ಪು ಬಿಳಿ ಅಕ್ಷರಗಳ ಪತ್ರಿಕೆಯೊಂದು ಕಂಗೊಳಿಸುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದಲೂ ಮುಜುಗರದಿಂದಲೂ ಓದುತ್ತಾ ಕೆಲವು ಪುಟಗಳತ್ತ ಮರೆಯಾಗಿ ಕಣ್ಣಾಡಿಸುತ್ತಾ ನಮ್ಮಲ್ಲಿ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಲಂಕೇಶ್ ಪತ್ರಿಕೆ ಆರಂಭಿಸಿದ್ದರು. ನಮ್ಮ ಊರಿನ ಕಡೆಗೆ ಲಂಕೇಶ್ ಅನ್ನುವುದು ಕೊಂಚ ವಿಚಿತ್ರ. ತಮಿಳಿನ ಹಾಗೆ ಕಾಣಿಸುವ ಹೆಸರು. ಆದರೂ ಇರುವವರ ಕೈಯಿಂದ ಲಂಕೇಶ್ ಪತ್ರಿಕೆಯನ್ನು ಕಸಿದು ಓದುತ್ತ ಹೋದಂತೆ ನಮ್ಮ ಅದುವರೆಗೆ ಕಲಿತ ಭಾಷೆಗೆ ,ನಮ್ಮ ಅದುವರೆಗಿನ ಯೋಚನೆಗಳಿಗೆ, ನಮ್ಮ ತುಂಟು ತುಂಟು ಬುದ್ಧಿಗಳಿಗೆ, ಎಲ್ಲದಕ್ಕೂ ರೇಗಿ ಮನೆಯಿಂದಲೂ ಶಾಲೆಯಿಂದಲೂ ಉಗಿಸಿಕೊಳ್ಳುತ್ತಿದ್ದ ನಮ್ಮ ರೇಜಿಗೆಳಿಗೆ ಅರ್ಥವಿರುವಂತೆ ಕಾಣಿಸುತ್ತಿತ್ತು.

ನಮ್ಮ ವಾರಗೆಯ ಹುಡುಗ ಹುಡುಗಿಯರಿಗೆ ಈಗ ವಯಸ್ಸು ಮೂವತ್ತಾಗುತ್ತಾ ಬಂದಿದೆ. ಲಂಕೇಶ್ ಗೆ ಅರವತ್ತಾಗುತ್ತಾ ಬಂದಿದೆ. ಪತ್ರಿಕೆಗೆ 15 ವರ್ಷ ತುಂಬಿದೆ. ನಮಗೆ ಮೂವತ್ತಾಗಿ ಲಂಕೇಶ್ ಗೆ ಅರವತ್ತಾಗಿ, ಪತ್ರಿಕೆಗೆ ಹದಿನೈದಾಗಿ ನಮ್ಮ ಮೈಮನಸುಗಳು ಸಂಸಾರ, ಬ್ರಹ್ಮಚರ್ಯ, ವಿರಹ, ಸಂಬಳ, ಸಾರಿಗೆ ಹೀಗೆ ನೂರಾರು ತಾಪತ್ರಯ, ಆನಂದ ಅತಿರೇಕಗಳಲ್ಲಿ ಮುಳುಗಿ ಹೋಗುತ್ತಿದ್ದರೂ ಕೂಡಾ ಈಗಲೂ ಲಂಕೇಶ್ ಓದಲು ಎರಡು ದಿನ ತಡವಾದರೆ ಸ್ನಾನ ಮಾಡದೆ ಎರಡು ದಿನಗಳಾದ ಹಾಗೆ ಅನಿಸುತ್ತದೆ. ನನ್ನ ತೀರಾ ಬಡತನವನ್ನು ವರ್ಣಿಸಬೇಕಾದರೆ ನನ್ನ ಗೆಳೆಯರಲ್ಲಿ ‘ಅಯ್ಯೋ ಮಾರಾಯ ಲಂಕೇಶ್ ತೆಗೆದು ಕೊಳ್ಳಲೂ ಕಾಸಿಲ್ಲ’ ಅಂದು ಬಿಡುತ್ತೇನೆ. ಅದು ಸುಳ್ಳಾಗಿದ್ದರೂ ಕೂಡಾ.

* *

ಹಲವು ವರ್ಷಗಳ ಹಿಂದೆ ಹೀಗೇ ಚಿರಿಚಿರಿ ಮಳೆ ಬಿಡದೆ ಹೊಡೆದು ಕೊಳ್ಳುತ್ತಾ ಕಾಲಿಡುವಲ್ಲೆಲ್ಲ ಕೆಸರು ಅಂಟಿಕೊಳ್ಳುತ್ತಾ ತೀರಾ ಬಡಹುಡುಗನಂತೆ ತೀರಾ ಒಂಟಿಯಂತೆ ಎಲ್ಲವೂ ಇದ್ದು ಯಾರೂ ಇಲ್ಲದಂತೆ ನಮ್ಮ ಪುಟ್ಟ ಪೇಟೆಯ ಒಂದೇ ಒಂದು ಬೀದಿಯಲ್ಲಿ ತಲೆ ತಗ್ಗಿಸಿ ಚಿರವಿರಹಿಯಂತೆ ಓಡಾಡುತ್ತಿದ್ದೆ. ಕನಸುಗಳು, ಹೆದರಿಕೆಗಳು, ಹುಡುಗಾಟದ ಪ್ರೇಮ. ಮನೆಯಲ್ಲಿ ಅಪ್ಪ ಅಮ್ಮ, ತಮ್ಮ ತಂಗಿಯರು, ಅಪ್ಪನಿಗೆ ವಯಸ್ಸಾಗುತ್ತಿದೆ ಅನಿಸುತ್ತಿತ್ತು. ಓದಿ ಕಡಿದು ಹಾಕಿದ್ದು ಸಾಕು ಎಂದು ಮನೆಯವರಿಗೆ ಅನ್ನಿಸಿ ನನಗೂ ಅನ್ನಿಸಿ, ವಾರಕೊಮ್ಮೆ ಬರುವ ಸಂತೆಯಲ್ಲಿ ಭಾನುವಾರದ ದಿನಗಳಲ್ಲಿ ಎಣ್ಣೆ ವ್ಯಾಪಾರ ಮಾಡಲು ಹೊರಟಿದ್ದೆ. ತೆಂಗಿನೆಣ್ಣೆ ,ಕಡಲೆಎಣ್ಣೆ ,ಜೊತೆಗೆ ಸೀಮೆಎಣ್ಣೆ ಯಾವ ಟಿನ್ನಿನಲ್ಲಿ ಯಾವ ಎಣ್ಣೆ ಯಾವ ಎಣ್ಣೆಗೆ ಯಾವ ಅಳತೆಯ ಪಾತ್ರೆ ಎಂದು ಗೊತ್ತಾಗದೆ ಎಣ್ಣೆ ಚೆಲ್ಲಿಕೊಂಡು ಎಣ್ಣೆಗೆ ಎಣ್ಣೆ ಸೇರಿಕೊಂಡು ಸಂತೆ ಮುಗಿಯುವಾಗ ಕೊಳ್ಳುವವರು ಬಾರದೆ ಮೈಮುಖವೆಲ್ಲ ಎಣ್ಣೆ-ಎಣ್ಣೆಯಾಗಿ ಅಳುಬರುತ್ತಿತ್ತು. ಮನೆಗೆ ಹೋಗಲು ಹೆದರಿಕೆಯಾಗುತ್ತಿತ್ತು. ಎಲ್ಲವೂ ರೇಜಿಗೆಯಾಗಿ ಬಿಟ್ಟಿತ್ತು.

ಊರಿನ ನನ್ನ ಹಾಗಿನ ಹುಡುಗರು ಮಾಡುವಂತೆ ನಾನೂ ಮನೆಯವರಿಗೆ ಹೇಳಿ ಬೆಂಗಳೂರು ಸೇರಿದ್ದೆ. ಎಲ್ಲರನ್ನೂ ಎಲ್ಲವನ್ನೂ ದುಡಿದು ಸಾಕಬಹುದು ಎನ್ನುವ ಹುಚ್ಚು ಆಸೆ! ಬೆಂಗಳೂರೆಂಬ ಆ ಮಹಾ ಪಟ್ಟಣದ ಮಹಾ ಬೀದಿಯೊಂದರಲ್ಲಿ ಒಂದು ಮಹಾ ಬಟ್ಟೆ ಅಂಗಡಿ .ನನ್ನ ಹಾಗೇ ಚಿರದುಃಖಿಗಳಾದ ಚಿರವಿರಹಿಗಳಾದ ಹುಡಗರ ಜೊತೆ ಸೇರಿ ನಮಗಿಂತಲೂ ಉದ್ದವಿರುವ ಬಟ್ಟೆಯ ಥಾನುಗಳನ್ನು ಬಿಡಿಸುತ್ತ, ಮಡಚುತ್ತ, ಹರಿದುಕೊಡುತ್ತ ಅಂಗಡಿಗೆ ಬರುವ ಮಿಣಿ ಮಿಣಿ ಬಟ್ಟೆ ತೊಟ್ಟುಕೊಂಡ ಹೆಂಗಸರನ್ನೂ ಗಂಡಸರನ್ನೂ ಹುಡುಗಿಯರನ್ನೂ ನೋಡಿ ಬೆಳಗಿನಿಂದ ರಾತ್ರಿಯವರೆಗೆ ಇಂತಹ ನಾನಾ ಮುಖಗಳನ್ನು ಕಂಡು ಹಸಿವಾಗಿ ರಾತ್ರಿ ನಮ್ಮ ಗೂಡನ್ನು ಸೇರುತ್ತಿದ್ದೆವು. ಆ ಗೂಡಲ್ಲಿ ಕುಳಿತು ಮಡಿಚಿಟ್ಟ ನಮ್ಮ ಹಾಸಿಗೆಯನ್ನು ಬಿಡಿಸಿ ,ಹಾಸಿಗೆಯೊಳಗೆ ಮಡಿಚಿಟ್ಟ ನಮ್ಮ ನಮ್ಮ ಮನೆಯವರ ಪತ್ರಗಳನ್ನೂ, ಚಿತ್ರಗಳನ್ನೂ ನೋಡುತ್ತ ಅಂಗಡಿಯಲ್ಲಿ ಕಂಡ ಮುಖಗಳು ಕೊಂಡು ಹೋದ ತರಹದ್ದೇ ಬಟ್ಟೆಗಳಲ್ಲಿ ಅವರನ್ನು ಊಹಿಸಿಕೊಳ್ಳುತ್ತ ಕೂತಿರುತ್ತಿದ್ದೆವು. ಅಳು ಬರುತ್ತಿತ್ತು. ನನಗೆ ಹುಚ್ಚಾಸ್ಪತ್ರೆಯಲ್ಲಿ ಇರುವಂತೆ ಅನಿಸುತ್ತಿತ್ತು. ಆಗ ನನ್ನ ಜೊಗೆಗೆ ಇರುತ್ತಿದ್ದದು ಕೆಲವು ಪುಸ್ತಕಗಳು ಮತ್ತು ಲಂಕೇಶ್ ಪತ್ರಿಕೆ. ಲಂಕೇಶ್ ಪತ್ರಿಕೆ ಮಾತ್ರ ಊರಲ್ಲಿಯೂ ಇಲ್ಲಿಯೂ ಇದ್ದು ನನಗೆ ಸಮಾಧಾನ ಹೇಳುತ್ತಿತ್ತು. ಆಗ ಆ ಪತ್ರಿಕೆಯ ಕೆಳಗಿದ್ದ ಲಂಕೇಶರ ವಿಳಾಸ ಹುಡುಕಿ ಅಂತರ್ದೇಶೀ ಪತ್ರದಲ್ಲಿ ಅವರಿಗೆ ಬರೆದಿದ್ದೆ, ನನ್ನ ಸಂಕಟಗಳನ್ನೂ, ವಿರಹಗಳನ್ನೂ ಅವರಿಗೆ ಹೇಳಿಕೊಂಡು ನಿಮ್ಮಲ್ಲಿ ಬಂದು ಬರೆದುಕೊಂಡಿರಲಾ ಕೆಲಸ ಕೊಡುತ್ತೀರಾ’ ಎಂದು ಕೇಳಿದ್ದೆ.

ಈಗ ನಗು ಬರುತ್ತದೆ, ಪತ್ರಿಕೆಯೊಂದಕ್ಕೆ ಬರುವ ನಾನಾ ಪತ್ರಗಳಲ್ಲಿ ನನ್ನದೂ ಒಂದು ಪತ್ರ. ಸೊಟ್ಟ ಸೊಟ್ಟ ಅಕ್ಷರಗಳಲ್ಲಿ ಹಾಸಿಗೆಯ ಮೇಲಿಂದ ಕುಕ್ಕುರುಗಾಲ್ಲಲ್ಲಿ ಬರೆದ ಪತ್ರ. ಅದು ಅವರಿಗೆ ತಲುಪಿತೋ ಅವರು ಓದಿದರೋ, ಬಿಸಾಕಿದರೋ ಒಂದೂ ಗೊತ್ತಿಲ್ಲ. ನನಗೆ ಮಾತ್ರ ಸಮಾಧಾನ ಸಿಕ್ಕಿತ್ತು. ಲಂಕೇಶ್ ಉತ್ತರಿಸಲಿಲ್ಲ. ಯಾಕೆಂದರೆ ನಾನು ನನ್ನ ವಿಳಾಸ ಬರೆದಿರಲಿಲ್ಲ! ನಂತರದ ವಾರದಲ್ಲಿ ಎಂದಿನಂತೆ ಪತ್ರಿಕೆ ಓದುತ್ತಾ ಹಾಗೇ ನೀಲುವಿನ ಪದ್ಯವೊಂದನ್ನು ಓದಿದೆ.

ಆ ಕವಿತೆಯನ್ನು ಓದಿದ ವರ್ಷವೂ ತಿಂಗಳೂ, ವಾರವೂ ದಿನಾಂಕವೂ ನನಗೆ ಇನ್ನೂ ನೆನಪಿದೆ. ಯಾಕೆಂದರೆ ಆ ರಾತ್ರಿಯೇ ನಾನು ನನ್ನ ಹಾಸಿಗೆಯನ್ನೂ ಮನೆಯವರ ಪತ್ರಗಳನ್ನೂ ಚಿತ್ರಗಳನ್ನೂ ಜೊತೆಗೆ ಪತ್ರಿಕೆಯನ್ನೂ ಕಟ್ಟಿಕೊಂಡು ಬೆಂಗಳೂರೆಂಬ ಮಹಾ ನಗರವನ್ನು ಬಿಟ್ಟು ಊರು ಸೇರಿಕೊಂಡೆ. ಆಮೇಲೆ ಕಾಲೇಜಿಗೆ ಸೇರಿಕೊಂಡೆ.

ನನ್ನ ಕೆಲಸ ನನಗೆ

ನನ್ನ ಹೃದಯದ ಪ್ರೀತಿಯಂತೆ

ಹರ್ಷ ಕೊಡದಿದ್ದರೆ

ಅದು ಜೀತ ಎಂದು ನೀಲು ಬರೆದಿದ್ದರು.

* * *

ಈಗ ಲಂಕೇಶರಿಗೆ ಅರವತ್ತಾಗುತ್ತಿದೆಯೆಂದೂ, ಅವರು ಸಾವಿನ ಬಳಿ ಒಮ್ಮೆ ಹೋಗಿ ಬಂದಿದ್ದರೆಂದೂ, ಈಗ ಸಾವಿನ ಕುರಿತು ಯೋಚಿಸುತ್ತಿರುವರೆಂದೂ, ಸಾವು ಅವರನ್ನು ಕಾಡುತ್ತಿದೆಯೆಂದೂ ಬಲ್ಲವರು ಹೇಳಿಕೊಂಡು ಒಂದು ತರಹದ ಅಂತರಂಗದ ಅಂತಕನ ಧೂತರಂತೆ ತಿರುಗಾಡುವಾಗ ಬೇಜಾರಾಗುತ್ತದೆ. ಅವರ ಅಂತರಂಗದ ಬಳಿ ಹೋಗದೆ ಹೀಗೆ ದೂರವೇ ಇದ್ದು ಅವರನ್ನು ಮೆಚ್ಚಿಕೊಂಡು ಪತ್ರಿಕೆ ಕೆಟ್ಟದಾಗಿ ಬಂದಾಗ ನನ್ನಷ್ಟಕ್ಕೆ ಸಿಟ್ಟು ಮಾಡಿಕೊಂಡು ಆದರೂ ಓದುವುದ ಬಿಡದೆ ಮತ್ತೆ ಪತ್ರಿಕೆ ಅದ್ಭುತವಾಗಿ ಬಂದಾಗ ಖುಷಿಯಿಂದ ನಕ್ಕು ಕಚಗುಳಿ ಪಟ್ಟುಕೊಂಡು ಇರುವ ಈ ಅವಸ್ಥೆಯೇ ಒಳ್ಳೆಯದು ಅನಿಸುತ್ತದೆ. ಹುಟ್ಟುವಾಗಲೆ ಮೊಂಡು ಹಿಡಿಯುತ್ತಾ, ಪ್ರೀತಿ ಬೇಡುತ್ತ ಬೆಳೆದು, ದೊಡ್ಡವನಾದ ಮೇಲೂ ಮೊಂಡು ಮಾಡುತ್ತಾ, ಪ್ರೀತಿಯಿಂದ ಬರೆಯುತ್ತ ಮುದುಕನಾಗುತ್ತಿರುವ ಲಂಕೇಶ್ ಈಗ ಕಾಯಿಲೆಯನ್ನೂ, ಸಾವನ್ನೂ ಊಹಿಸಿಕೊಂಡು ಖುಷಿಪಡುತ್ತಾ ಖಿನ್ನನಾಗುತ್ತ stefi ಎಂಬ ಮುದ್ದಿನ ನಾಯಿಯ ಮೈಸವರುತ್ತಾ ,ಪ್ರತಿವಾರ ಅಷ್ಟೊಂದು ಬರೆಯುತ್ತಿರುವುದು ಹುಟ್ಟು ಮತ್ತು ಸಾವಿನ ನಡುವೆ ನಡೆಯುವ ಮೊಂಡಾಟವೇ ಆಗಿದೆ. ಹಾಗೆ ನೋಡಿದರೆ ಪ್ರತಿ ನಿಮಿಷ ಹುಟ್ಟುವ ಬರಹಗಾರರನ್ನು ಸಾವು ಹೀಗೆ ಗುಮ್ಮನ ಹಾಗೆ ಕಾಡುವುದು ಎಂತಹ ಮೋಸ.

ಬೋದಿಲೇರ್ ಎಂಬ ಕವಿಯ ಕವಿತೆಗಳನ್ನು ಅನುವಾತಿಸುತ್ತಾ ಲಂಕೇಶ್ ಮೂಲಕ್ಕಿಂತ ಒಳ್ಳೆಯ ಕವಿತೆಗಳನ್ನು ನೀಡಿದರು ಕನ್ನಡಕ್ಕೆ. ಅದರಲ್ಲಿ ಎರಡು ಸಾಲುಗಳು ಬರುತ್ತವೆ.`

ಬದುಕು ಮತ್ತು ಕಲೆಯನ್ನು ಕೊಲ್ಲುವ ಕಡು ಕೊಲೆಗಾರಕಾಲನೇ, ನನ್ನ ಸುಖ, ಸಂಪತ್ತಿನಂಥ ಅವಳ ನೆನಪನ್ನು ನೀನು ಸಾಯಿಸಲಾರೆ.’

* * *

for whom the bell tolls [ಚರ್ಚ್ ನ ಈ ಗಂಟೆ ಯಾರಿಗಾಗಿ ಹೊಡೆದುಕೊಳ್ಳುತ್ತಿದೆ] ಎಂಬ ಇಂಗ್ಲೀಷಿನ ಜಾನ್ ಡನ್ನ್ ಎಂಬ ಕವಿಯ ಸಾಲುಗಳನ್ನು ಆಗಾಗ ನೆನಪಿಸುತ್ತಲೇ ಬರೆಯುತ್ತಿರುವ ಲಂಕೇಶ್ ಅದು ಹೇಗೆ ಈ ತೀರಾ ಒಂಟಿತನದ ಖಾಸಗೀ ಹೆದರಿಕೆಗಳ ನಡುವೆಯೂ ಗಾಂಧಿಯ ಕುರಿತು, ಗುಲಾಬಿಗಳ ಕುರಿತು ಜೂಜು ಕುದರೆಗಳ ಕುರಿತು, ಮರ, ಗ್ರಾಮ, ಅರಣ್ಯ, ಬೈಸಿಕಲ್ನ ಕುರಿತು ಹೀಗೆ ನಿರರ್ಗಳವಾಗಿ ಬರೆಯುತ್ತಾರೆ? ಇದಕ್ಕೆ ಏನೇನೆಲ್ಲಾ ಉತ್ತರಗಳು ಸಿಗಬಹುದು. ಲಂಕೇಶರೂ ಉತ್ತರಿಸಯೋ ಉತ್ತರಿಸದೆಯೋ ಇರಬಹುದು. ಅಥವಾ ಅವರ ಎಂದಿನ ಪ್ರಸಿದ್ಧ ಶೈಲಿಯ ಮುಗುಳ್ನಗೆಯನ್ನೋ, ಸಿಡುಕನ್ನೋ ತೋರಿಸಿ ಸುಮ್ಮನಿರಬಹುದು. ಆದರೆ ನಮಗಂತು ಇದು ಕೊನಗವಳ್ಳಿ ಎಂಬ ಹಳ್ಳಿಯೊಂದರಲ್ಲಿ ಹುಟ್ಟಿ ಓದಿ ಬೆಳೆದು ಮೇಷ್ಟರಾಗಿ, ಸಿನಿಮಾ ನಿರ್ದೇಶ ಕನಾಗಿ, ಪತ್ರಕರ್ತನಾಗಿ ಎಲ್ಲಕ್ಕಿಂತ ಮುಖ್ಯವಾಗಿ ಜೀವ ಸೆಲೆಯ ಬರಹಗಾರನಾಗಿ ಇನ್ನೂ ಹುಡುಗನಾಗಿಯೇ ಉಳಿದಿರುವ ಲಂಕೇಶರ ದುಃಖದ ವಿರುದ್ಧ ದ ನೋವಿನ ಕಾಯಿಲೆಯ ಮತ್ತು ಸಾವಿನ ವಿರುದ್ಧದ ಗೊಣಗಾಟದಂತೆ ಕಾಣಿಸುತ್ತದೆ.

* * *

ಈ ಹದಿನೈದು ವರ್ಷಗಳಲ್ಲಿ ನಾವು ಓದಿದ ಸಾರಾ, ವೈದೇಹಿ ನೀಲು, ನಿಮ್ಮಿ. ತೇಜಸ್ವಿ, ಮೊಗಳ್ಳಿ ಲಂಕೇಶ್ ಪತ್ರಿಕೆ ಇರದಿದ್ದರೆ ಇಷ್ಟೆಲ್ಲಾ ಬರೆಯುತ್ತಿರಲಿಲ್ಲ. ಈ ಹದಿನೈದು ವರ್ಷಗಳಲ್ಲಿ ನಾವು ಓದಿದ ಗ್ರಾಮಗಳು ಮಂಡಲಗಳು, ಜಿಲ್ಲೆಗಳು ಮತ್ತು ರಾಜ್ಯಗಳು ಅಲ್ಲಿಯ ನಾಯಕರು ಜೋಕರುಗಳು ಹಾಗೇ ಅಲ್ಲಿನ ಹೆಣ್ಣು ಮಕ್ಕಳು, ಗಂಡಸರು, ಯಾವುದೇ ಪತ್ರಿಕೆಗಳಲ್ಲಿ ಬರದ ಅವರ ಭಾವ ಚಿತ್ರಗಳು ಇವು ಎಲ್ಲವೂ ಲಂಕೇಶರ ವಿಶೇಷತೆ. ಈ ತುಂಟಾಟ, ಈ ಕಣ್ಣಾಮುಚ್ಚಾಲೆ, ಈ ನಿಮ್ಮಿ ಈ ನೀಲು ಈ ಇವರೆಲ್ಲರೂ ಲಂಕೇಶ್ ಎಂಬ ಈ ಹತ್ತು ತಲೆಯ ಬುದ್ಧಿವಂತನ ಒಂದೊಂದು ತಲೆಗಳಾಗಿ ಅಥವಾ ಕಣ್ಣು ಕಿವಿ ಇಂದ್ರಿಯಗಳಾಗಿ ಈ ಹದಿನೈದು ವರ್ಷಗಳಲ್ಲೂ ಹಾಗೂ ಇನ್ನು ಮುಂದೂ ನಮ್ಮನ್ನು ಕಾಡುವುದು ಗೋಳು ಹುಯ್ಯಿಸುವುದು ಅಥವಾ ಬೋರ್ ಹೊಡೆಸುವುದೂ ಕೂಡ ಈ ಲಂಕೇಶರ ಸ್ಪಷಾಲಿಟಿಯೇ.

ನನ್ನ ಗೆಳೆಯನೊಬ್ಬನಿದ್ದಾನೆ ಆತ ಎಂ.ಏ. ಮಗಿಸಿ ಬೇಜಾರಾಗಿ ಊರಿಗೆ ತಿರುಗಿ ಹೋಗಿ ಬೇಜಾರಾಗಿ ಹೊಲ ಉತ್ತು ಹತ್ತಿ ಬೆಳೆದು ಬೇಜಾರಾಗಿ ಪುನಃ ಊರು ಊರು ತಿರುಗಿ ಬೇಜಾರಾಗಿ ತಿರುಗಿ ಊರಿಗೆ ಹೋಗಿ ಹೊಲದಲ್ಲಿ ಕೆಲಸಕ್ಕಿಳಿಯುತ್ತಾನೆ. ಆತನ ಈ ಬೇಜಾರಿನಲ್ಲೂ ಒಂದು ತರಹಾ ಚೆಂದವಿದೆ ಯಾಕೆಂದರೆ ಆತನ ಕೈಯಲ್ಲಿ ಸ್ನೇಹಿತರಿಂದ ಕದ್ದ ಲಂಕೇಶರ ಪುಸ್ತಕಗಳೂ, ಲಂಕೇಶ್ ಪತ್ರಿಕೆಯೂ ಇರುತ್ತದೆ. ಆತ ಹೊಲದ ಬದಿಯಲ್ಲಿ ಕುಳಿತರೂ ಮನೆಯಲ್ಲಿ ಇದ್ದರೂ ಊರೂರು ತಿರುಗುತ್ತಿದ್ದರೂ ಲಂಕೇಶನ್ನು ಓದಿ, ಲಂಕೇಶನನ್ನೆ ಉಂಡು ಅವರನ್ನೇ ಹಾಸಿ ಹೊದ್ದು ಮಲಗಿ ನಿದ್ದೆ ಹೋಗುತ್ತಾನೆ.ಅನಿರೀಕ್ಷಿತವಾಗಿ ಉಲ್ಲಾಸ ಬಂದರೆ ಊರಿನ ಅಕ್ಷರ ಬಾರದವರಿಗೆ ಲಂಕೇಶ ಪತ್ರಿಕೆಯನ್ನು ಓದಿ ಹೇಳುತ್ತಾನೆ. ಹೀಗೆ ಊರು ಊರಿನ ನಡುವೆ ಅವಧೂತನಂತೆ ಒಮ್ಮೊಮ್ಮೆ ಕಾಣಬರುವ ಈತನನ್ನು ನಾವೂ, ನಮ್ಮನ್ನು ಈತನೂ ಕೇಳುವ ಮೊದಲ ಪ್ರಶ್ನೆ ‘ಲಂಕೇಶ್ ಏನು ಬರೆದಿದ್ದಾರೆ’? ಇಲ್ಲಿ ಲಂಕೇಶರು ಸಲುಗೆಗಾಗಿಯೂ ತಮಾಷೆಗಾಗಿಯೂ ನಮಸ್ಕಾರದಂತೆಯೂ ಬಳಸಲ್ಪಡುತ್ತಾರೆ.

* * *

ಲಂಕೇಶ್ ಬರೆಯುತ್ತಾರೆ.

ಮತ್ತು….. ಏನು ಹೇಳಲಿ ಕಳೆದುಕೊಂಡ ಅಥವಾ ಪಡೆದುಕೊಂಡ ಈ….. ವರ್ಷಗಳ ಬಗ್ಗೆ ನನ್ನನ್ನು ಬರೆಯುವ ಬದುಕುವ ಹುಮ್ಮಸ್ಸಿನಲ್ಲಿಟ್ಟ ನನ್ನ ಓದುಗರ ಬಗ್ಗೆ? ಅಥವಾ ಇಲ್ಲಿಯ ಸೂರ್ಯ, ಚಂದ್ರ, ಖನಿಜ, ಒಳ್ಳೆಯವರು, ಖದೀಮರು, ಮೂರ್ಖರು, ನ್ಯಾಯವಂತರು ಧೀರರ ಬಗ್ಗೆ ಅಥವಾ ನಾನು ಇವನ್ನೆಲ್ಲ ಬರೆಯದಿರದಿದ್ದರೆ ರೂಪಿಸಬಹುದಾಗಿದ್ದ ಕತೆ ಕವನ ಇತ್ಯಾದಿಗಳ ಬಗ್ಗೆ. ಅದೆಲ್ಲ ಈಗ ಬೇಡ…. ಮಸಲಾ ಮಾತುಗಳು ಹಾಗಾಗಿದ್ದರೆ ಹೀಗಾಗುತ್ತಿತ್ತು ಎಂಬ ಹೈಪಾಥಟಿಕಲ್ ಬೊಗಳೆಗಳು ವ್ಯರ್ಥ. ಹೀಗಾದದ್ದೇ ಸರಿ.’

 

ಲಂಕೇಶ್ ಪತ್ರಿಕೆಯ ಒಳ್ಳೆಯದು ಕೆಟ್ಟದರ ಬಗ್ಗೆ ಚರ್ಚಿಸುತ್ತಾ, ಗುಣ ದೋಷಗಳ ತಕ್ಕಡಿಯಲ್ಲಿಟ್ಟು ತೂಗಿ ನಾವು ಜಾಣರಾಗಿ ಬಿಡುವುದಕ್ಕಿಂತ ಹೀಗಾದದ್ದೆ ಸರಿ ಎಂದು ಪತ್ರಿಕೆ ನಮ್ಮಲ್ಲಿ ಇದುವರೆಗೆ ಮೂಡಿಸಿದ ಆನಂದ, ವಿಷಾದ, ರೋಮಾಂಚನ, ಕಚಗುಳಿಗಾಗಿ ಇನ್ನೂ ಕಾಯುತ್ತಿರುವುದು, ಓದುತ್ತಿರುವುದು ನಾವು ಲಂಕೇಶರಿಗೆ ತೋರಿಸಬಹುದಾದ ಮೆಚ್ಚುಗೆ ಮತ್ತು ಕೃತಜ್ಞತೆಯ ಕಣ್ಣೀರು. ಇದುವೇ ನಾವು ಅವರಿಗೆ ತೋರಿಸುವ ಶುಭ ಮತ್ತು ಮಂಗಳ.

 

 

5 ಟಿಪ್ಪಣಿಗಳು (+add yours?)

 1. armanikanth
  ಡಿಸೆ 04, 2010 @ 19:41:37

  ondu talemaarina huduga hudugiyarannu patrikeya jote jotege belesiddu lankeshara hechhugaarike.avarige preetiya namaskaara.onudu aahlaada dantha baraha kotta rashid avarigooo…

  ಉತ್ತರ

 2. kumara raitha
  ಡಿಸೆ 04, 2010 @ 13:40:02

  ತಳಮಳದ ದಿನಗಳು, ಗುರಿ-ಆದರ್ಶ ಹುಡುಕುವ ಯತ್ನ, ಲಂಕೇಶ್ ಪತ್ರಿಕೆ ಪ್ರಭಾವ ತನ್ಮೂಲಕ ಲಂಕೇಶರ ನೆನಪು, ಇವುಗಳನ್ನೆಲ್ಲ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ರಶೀದ್

  ಉತ್ತರ

 3. ಶಾಮ್
  ಡಿಸೆ 04, 2010 @ 09:32:24

  ಚೆನ್ನಾಗಿದೆ. ಇಷ್ಟ ಆಯ್ತು. ಒಂದು ಪೆಗ್ ರಮ್ ಕಡಿಮೆ ಕುಡಿದರೆ ಆಯ್ತು, ಅದಕ್ಕೇನಂತೆ, ಒಂದು ಲಂಕೇಶ್ ಪತ್ರಿಕೆ ಬರತ್ತೆ ಎಂದು ಕೊಳ್ಳುತ್ತಿದ್ದೆವು. ಹಾಗೆ ಅಂದುಕೊಳ್ಳುತ್ತಿದುದು ಮಂಗಳವಾರಗಳಂದು ಮಾತ್ರ. ಮಂಗಳವಾಗಲಿ.

  ಉತ್ತರ

 4. lokesh p.
  ಡಿಸೆ 04, 2010 @ 08:33:10

  ಪ್ರೀತಿಯ ಅಬ್ದುಲ್ ರಶೀದ್ ಅವರಿಗೆ ನಮಸ್ಕಾರಗಳು.

  ನಾನು ನಿಮ್ಮ ಕೆಂಡ ಸಂಪಿಗೆ ಅಂತರ್ಜಾಲದ ಖಾಯಂ ಗಂಭೀರ ಓದುಗರಲ್ಲೊಬ್ಬ.
  ನಿಮ್ಮ ಬರಹಗಳಿಂದ ನಾನು ಪ್ರಭಾವಿತನಾಗಿದ್ದೇನೆ.ಅಂದರೆ ನಿಮ್ಮ ಬರಹಕ್ಕಿರುವ ಮಹತ್ವ ಅದು.

  ಕೃತಜ್ಞತೆಗಳೊಂದಿಗೆ….
  ಲೋಕೇಶ್ ಪಿ.

  ಉತ್ತರ

 5. subhanuraravi
  ಡಿಸೆ 04, 2010 @ 08:28:28

  ಪ್ರೀತಿಯ ಅಬ್ದುಲ್ ರಶೀದ್ ಅವರಿಗೆ ನಮಸ್ಕಾರಗಳು.
  ತಾವು ಬರೆದ ಲಂಕೇಶ ಬಗೆಗಿನ ಬರಹ ನನಗೆ ಪಸಂದಾಯಿತು.
  ಲಂಕೇಶ್ ಎಂಬ ಕನ್ನಡ ಅಕ್ಷರಲೋಕದ ದಂತಕತೆ ಬಗ್ಗೆ ಯಾರೇ ಏನೇ, ಎಷ್ಟೇ ಬರೆದರೂ
  ಒಂದೂ ಅಕ್ಷರ ಬಿಡದೇ ಓದುವವನು ನಾನು.

  ಕೃತಜ್ಞತೆಗಳೊಂದಿಗೆ….
  ಸುಭಾನು ರಾರಾವಿ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: