“ನೆರೆ ಬಂದ್ರೂ ಗೊರ್ಕೆ ಹೊಡೀತಾ ಮಲ್ಕಂಡಿದ್ದವ ದುಡ್ಡು ಅಂದದ್ದಕ್ಕೆ ಧಡಕ್ಕಂತಾ ಎದ್ದು ಕೂತಿದ್ದ”. “ದುಡ್ಡು ದುಡ್ಡು ಅಂತ ಹೇಳ್ಕೊಂಡು ಹೋಗ್ತಾ ಇದ್ರೆ, ಹಿಂದೆ ನಿಮ್ಮ ನೆರಳಿಲ್ಲದೇ ಇದ್ರೂ ಇಂವ ಮಾತ್ರ ಇರ್ತ”.
ಇಂತಾ ಮಾತುಗಳು ಊರೊಳಗೆ ಕೇಳಿಸಿದವೆಂದರೆ, ಅವು ಹೊನ್ನೆ ರುಕ್ಕುವಿನ ಕುರಿತ ಕಾಮೆಂಟುಗಳಾಗಿರುತ್ತವೆ. ಹೊನ್ನ ಎಂಬವನು ಈ ರುಕ್ಕುವಿನ ತಾತನೋ ಮುತ್ತಾತನೋ ಆಗಿದ್ದನಂತೆ. ಹಾಗಾಗಿ ಹೊನ್ನೆ ಎಂಬುದು ಮನೆತನದ ಹೆಸರೇ ಆಗಿ ರುಕ್ಕುವಿನ ಹಿಂದೆ ಅಂಟಿಕೊಂಡಿದೆ ಎಂದು ಸ್ಥಳೀಯರ ರೆಕಾರ್ಡುಗಳು ಹೇಳುತ್ತವೆ. ಅವನ ಕುರಿತಾಗಿ ಆಗೀಗ ಮಗ್ಗಲು ಮರಿಯುವ ಇಂಥ ಟೀಕೆಗಳಿಗೆ ಏನು ಕಾರಣ ಎಂಬುದು ಮುಂದಕ್ಕೆ ನಿಮಗೇ ಗೊತ್ತಾಗುತ್ತದೆ.
ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಬಲು ಆಸಕ್ತಿ ಹೊನ್ನೆ ರುಕ್ಕುವಿಗೆ. ಅವನ ಪ್ರಕಾರ, ಸಾರ್ವಜನಿಕ ಹಿತಾಸಕ್ತಿ ವಿಚಾರಗಳೆಂದರೆ ಗಣೇಶನ ಹಬ್ಬಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವುದು, ದೇವಸ್ಥಾನ ಕಟ್ಟುತ್ತೇವೆಂದು ಹೇಳಿ ಹಣ ಸಂಗ್ರಹಕ್ಕೆ ಮುಂದಾಗುವುದು ಇತ್ಯಾದಿ ಇತ್ಯಾದಿಗಳು. ಇಂತಾ ಸಾರ್ವಜನಿಕ ಹಿತಾಸಕ್ತಿ ಕೆಲಸಗಳಲ್ಲಿ ಸದಾ ತೊಡಗಿರುವವನಾದ್ದರಿಂದಲೇ ಹೊನ್ನೆ ರುಕ್ಕು ಊರೊಳಗೆ ಮಾತ್ರವಲ್ಲ, ಸುತ್ತಲ ಹತ್ತು ಹಳ್ಳಿಗಳಲ್ಲೂ ಖ್ಯಾತನಾಗಿರುವನು.
ಹೊನ್ನೆ ರುಕ್ಕುವಿಗೆ ಒಂದು ಒಳ್ಳೆಯ ಅಭ್ಯಾಸವಿದೆ. ಕೆಲವರು ಅದನ್ನು ದುರಭ್ಯಾಸ ಅಂತಲೂ ಹೇಳುತ್ತಾರೆ. ಆ ಅಭ್ಯಾಸವೆಂದರೆ ಅವನ ಫ್ರಾಂಕ್ನೆಸ್ಸು. ಯಾರಿಗಾದರೂ ಒಂದು ರೂಪಾಯಿ ಕೊಡಬೇಕಾಗಿದ್ದರೂ ಅವನು ತನ್ನ ಬಲ ಹೆಗಲಿನಲ್ಲಿ ತೂಗಿಕೊಂಡಿರುವ ಚೀಲದ ಬಾಯನ್ನು ಕೆಳಮುಖ ಮಾಡಿ ಅದರಲ್ಲಿದ್ದುದನ್ನೆಲ್ಲಾ ನೆಲಕ್ಕೆ ಸುರುವುತ್ತಾನೆ. ಝಣಝಣಾಂತ ಒಂದಿಷ್ಟು ಚಿಲ್ಲರೆಗಳು ಅದರಿಂದ ಉದುರುತ್ತವೆ.
ಮಡಿಸಿ ಮಡಿಸಿ ಮುದ್ದೆ ಮಾಡಿಟ್ಟ ಎಷ್ಟೆಂದು ಅಂದಾಜಿಗೆ ಸಿಗದಂತಾ ದುರವಸ್ಥೆಯಲ್ಲಿರುವ ನೋಟುಗಳೂ ಆಗೀಗ ಕಾಣಿಸುವುದುಂಟು. ಅದು ಬಿಟ್ಟರೆ ಒಂದರ್ಧ ಕಟ್ಟು ಬೀಡಿ, ಕಡ್ಡಿಪೆಟ್ಟಿಗೆ, ಸಣ್ಣದೊಂದು ಚಾಕು, ಒಂದು ಸಣ್ಣ ಟಿಪ್ಪಣಿ ಪುಸ್ತಕ, ಒಂದು ಪೆನ್ಸಿಲ್ಲು – ಇವೆಲ್ಲವೂ ಆ ಚೀಲದಿಂದ ಉದುರಿಕೊಂಡು, ತೀರಾ ನಿರ್ಗತಿಕ ಸ್ಥಿತಿಯಲ್ಲಿ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನಮ್ಮನ್ನು ನೋಡತೊಡಗಿದಂತೆ ಅನ್ನಿಸುತ್ತದೆ.
ಚೀಲದಲ್ಲಿ ಇದ್ದಬದ್ದದ್ದನ್ನೆಲ್ಲ ಹೀಗೆ ಸುರುವಿ, ಕೊಡಬೇಕಾದವರಿಗೆ ಕೊಟ್ಟು ಮುಗಿಸಿ ಮತ್ತೆ ಅವನ್ನೆಲ್ಲ ಚೀಲದೊಳಕ್ಕೆ ತುಂಬುವ ರುಕ್ಕು ಮತ್ತೆರಡೇ ನಿಮಿಷದಲ್ಲಿ ಇನ್ನಾರಾದರೂ ಇನ್ನೇನನ್ನಾದರೂ ಕೇಳಿದರೆ ಯಥಾಪ್ರಕಾರ ಚೀಲವನ್ನು ತಲೆ ಕೆಳಗೆ ಮಾಡಿಯೇಬಿಡುತ್ತಾನೆ. ಅವನ ಪರಿಯಿಂದಾಗಿ, ಚೀಲದೊಳಗಿರುವ ವಸ್ತುಗಳೆಲ್ಲ ಎಷ್ಟು ರೋಸಿ ಹೋಗಿವೆಯೋ ಗೊತ್ತಿಲ್ಲ; ಆದರೆ ಅದನ್ನು ನೋಡುತ್ತಿರುವವರಿಗೇ ಬೇಸರ ಹುಟ್ಟುವಷ್ಟು ಸಲ ಅವನು ಹೀಗೆ ಚೀಲ ತಲೆ ಕೆಳಗಾಗಿಸುವುದಿದೆ. ಅವನಿಗೆ ಮಾತ್ರ ಚೀಲದಲ್ಲಿದ್ದುದನ್ನು ನೆಲಕ್ಕೆ ಸುರುವುದಾಗಲಿ, ಅದನ್ನು ಪುನಃ ತುಂಬಿಕೊಳ್ಳುವುದಾಗಲಿ ಯಾವತ್ತೂ ಬೇಸರದ ಸಂಗತಿಯೆನ್ನಿಸಿಯೇ ಇಲ್ಲ.
ಕೆಲವರಿಗೆ ಮಾತ್ರ ಇದೊಂದು ತೀರಾ ಮೋಜಿನ ವಿಚಾರ. ಅಂಥವರು ಅವನನ್ನು ಸತಾಯಿಸಿ ಮಜಾ ತೆಗೆದುಕೊಳ್ಳಲೆಂದೇ “ರುಕ್ಕು, ಒಂದು ಬೀಡಿ ಕೊಡು”, “ರುಕ್ಕು, ಒಂದ್ರುಪಾಯಿಗೆ ಚಿಲ್ಲರೆ ಕೊಡು” ಎಂದು ಒಬ್ಬರಾದ ಮೇಲೊಬ್ಬರು ಬಲು ಗಂಭೀರವದನರಾಗಿ ಕೇಳುತ್ತಾರೆ.
ಅವನು ಚೀಲ ತಲೆ ಕೆಳಗಾಗಿಸುತ್ತ, ಮತ್ತೆ ತುಂಬಿಕೊಳ್ಳುತ್ತಾ, ಮತ್ತೆ ತಲೆ ಕೆಳಗಾಗಿಸಿ ಪುನಃ ತುಂಬಿಕೊಳ್ಳುತ್ತ ಯಾವ ಬೇಸರವೂ ಇಲ್ಲದೆ ಒದ್ದಾಡುವುದನ್ನು ನೋಡಿ ಮುಸಿಮುಸಿ ನಗುತ್ತಾರೆ. ರುಕ್ಕು ಮಾತ್ರ ಅದು ತನ್ನ ಭಾಗದ ಕರ್ತವ್ಯವೇ ಆಗಿದೆಯೇನೋ ಎಂಬಷ್ಟು ಶ್ರದ್ಧೆಯಿಂದ ಯಾರು ಕೇಳಿದರೂ ದಿನವಿಡೀ ಬೇಕಾದರೂ ಅಮಾಯಕನಂತೆ ಅದರಲ್ಲೇ ಮಗ್ನನಾಗಿರುತ್ತಾನೆ.
ರುಕ್ಕುವಿಗೆ ಹೀಗೆ ಚೀಲದೊಂದಿಗೆ ಒಂದು ಬಗೆಯ ಅವಿನಾಭಾವವೆಂಬಂತಾ ಸಂಬಂಧ ಬೆಳೆಯುವುದಕ್ಕೆ ಕಾರಣರಾದ ಹೆಗ್ಡೆ ಮಾಸ್ತರು ಈಗ ಇಲ್ಲ. ಅವರೂ ಹೀಗೇ ಹೆಗಲಲ್ಲಿ ಚೀಲ ತೂಗಿಕೊಂಡು ಓಡಾಡುತ್ತಿದ್ದರು. ಅವರು ಊರ ಶಾಲೆಗೆ ಬರುವ ಮುಂಚೆ ಈ ಪರಿ ಹೆಗಲಲ್ಲೊಂದು ಚೀಲ ತೂಗು ಹಾಕಿಕೊಂಡು ಓಡಾಡುವವರಾರೂ ಊರೊಳಗೆ ಇದ್ದಿರಲೇ ಇಲ್ಲ. ಹೆಗ್ಡೆ ಮಾಸ್ತರು ವರ್ಗವಾಗಿ ಹೋದ ಮೇಲೆ ಕೂಡ ಯಾರೂ ಹಾಗೊಂದು ಚೀಲ ಹೆಗಲಲ್ಲಿ ತೂಗಿಕೊಂಡು ಓಡಾಡುವುದಕ್ಕೆ ಮುಂದಾಗುತ್ತಿರಲಿಲ್ಲ. ಆದರೆ ರುಕ್ಕು ಮಾತ್ರ ಅದನ್ನು ಮಾಡಿಯೇ ಬಿಟ್ಟ.
ಮೊದಲ ದಿನ ರುಕ್ಕು ಬಿಳಿ ಅಂಗಿ ತೊಟ್ಟು ಬಿಳಿ ಲುಂಗಿಯನ್ನು ಪಾದದವರೆಗೂ ಬಿಟ್ಟುಕೊಂಡು ಬಲ ಹೆಗಲಲ್ಲಿ ಹೆಗ್ಡೆ ಮಾಸ್ತರರ ಚೀಲದಂತದೇ ಚೀಲವನ್ನು ಇಳಿಬಿಟ್ಟುಕೊಂಡು ಕಾಣಿಸಿಕೊಂಡಾಗ ಊರಿಗೆಲ್ಲ ಅವನು ಹಗರಣದವನ ಹಾಗೆಯೇ ಕಂಡಿದ್ದ. ಅವನನ್ನು ಆ ವೇಷದಲ್ಲಿ ನೋಡಿದವರೆಲ್ಲ ಅದನ್ನೊಂದು ಭಾರೀ ಸುದ್ದಿಯನ್ನಾಗಿ ಬಿತ್ತರಿಸಿದ್ದರು. “ಇವತ್ತು ನೀವು ರುಕ್ಕು ಯಾಸ ನೋಡ್ಬೇಕಿತ್ತು” ಎನ್ನುತ್ತಾ, ಅವನನ್ನು ಆ ದಿನ ನೋಡಿರದವರ ಹೊಟ್ಟೆಯುರಿಸಿದ್ದರು. ಆದರೆ ರುಕ್ಕು ಮಾತ್ರ ಮಾರನೆಯ ದಿನವೂ ಹಾಗೆಯೇ ಕಾಣಿಸಿಕೊಂಡ. ನಿನ್ನೆ ನೋಡಿರದೆ ಚಡಪಡಿಸಿದವರ ಹೊಟ್ಟೆ ತಣ್ಣಗಾಗಿಸಿದ. ಕೆಲವರು “ರುಕ್ಕುಗೆ ತಲೆ ಕೆಟ್ಟಿದೆ” ಎಂದರು. ಮತ್ತೆ ಕೆಲವರು “ಷೋಕಿ ನೋಡ್ರೋ ಅಂವಂದ” ಎಂದರು.
ರುಕ್ಕು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಕಡೆಕಡೆಗೆ ಊರಿಗೇ ಅವನ ಈ ಹೊಸ ವೇಷ ಅಭ್ಯಾಸವಾಗಿ ಹೋಯಿತು. ಬಲ ಹೆಗಲಲ್ಲಿ ಚೀಲವಿಲ್ಲದೇ ರುಕ್ಕು ಇಲ್ಲವೇ ಇಲ್ಲ. ತಿಂಗಳಿಗೊಂದು ಸಲ ಆತ ಆ ಚೀಲವನ್ನು ಚೆನ್ನಾಗಿ ಸೋಪು ಹಾಕಿ ಒಗೆಯುತ್ತಾನೆ ಎಂದು ಪ್ರತೀತಿಯಿದೆ. ಅವತ್ತು ಅವನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ. ರುಕ್ಕು ಕಾಣಿಸಲಿಲ್ಲವೆಂದರೆ ಸಾಕು, ಚೀಲ ಒಗೆದು ಒಣಗಲು ಹಾಕಿದ್ದಾನೆ ಎಂದು ಊರು ಭಾವಿಸುತ್ತದೆ.
ಸಾರ್ವಜನಿಕ ಹಿತಾಸಕ್ತಿಯಿಂದ ಗಣೇಶನ ಹಬ್ಬಕ್ಕೆ, ದೇವಸ್ಥಾನದ ಹೆಸರಿನಲ್ಲಿ ಹಣ ಸೇರಿಸಲು ತಂಡ ಕಟ್ಟಿಕೊಂಡು ಹೋಗುವ ರುಕ್ಕು, ಹಾಗೆ ಸಂಗ್ರಹವಾಗುವ ದುಡ್ಡಲ್ಲಿ ನಯಾ ಪೈಸೆಯಷ್ಟನ್ನೂ ತನ್ನ ಲೆಕ್ಕಕ್ಕೆ ಬಳಸಿಕೊಳ್ಳುವುದಿಲ್ಲ. ಆದರೆ ಉಳಿದವರು ಮಾತ್ರ ಆ ಕೆಲಸವನ್ನು ಅತ್ಯಂತ ಮುತುವರ್ಜಿಯಿಂದಲೇ ಮಾಡಿ, ಅಪವಾದವನ್ನು ಮಾತ್ರ ರುಕ್ಕುವಿನ ತಲೆಗೇ ಕಟ್ಟುತ್ತಾರೆ. ಹೀಗಾಗಿ, “ದುಡ್ಡು ಅಂದ್ರೆ ಸಾಕು, ಎಂಥಾದಕ್ಕೂ ತಯಾರೇ” ಎಂಬ ಆಪಾದನೆಯನ್ನು ಹೊತ್ತುಕೊಂಡೇ ಮುದುಕನಾಗುತ್ತಿದ್ದಾನೆ ರುಕ್ಕು.
ಇಂತಾ ರುಕ್ಕು ಒಂದು ಸರ್ತಿ ತನ್ನ ಎಂದಿನ ರೀತಿಯಲ್ಲೇ ಚೀಲವನ್ನು ತಲೆ ಕೆಳಗೆ ಮಾಡಿದಾಗ ಚಿಲ್ಲರೆಗಳು ಬೀಳುವ ಸದ್ದನ್ನೆಲ್ಲ ಅಡಗಿಸಿ ಬುಡಕ್ಕನೆ ಒಂದು ತಲೆಬುರುಡೆ ಬಿತ್ತು. ಬೆಳ್ಳಗೆ ಕಣ್ಣು ಬಾಯಿ ತೆರೆದುಕೊಂಡಿದ್ದ ಆ ಅಸ್ಥಿಪಂಜರ ನೋಡುತ್ತಲೇ ಸುತ್ತಲಿದ್ದವರೆಲ್ಲ ಹೌಹಾರಿಬಿಟ್ಟಿದ್ದರು. ಸ್ವತಃ ರುಕ್ಕುವೂ ದಿಗಿಲುಗೊಂಡು ಕದಲದಂತಾಗಿ ಬಿಟ್ಟ. ಅದು ಹೇಗೆ ತನ್ನ ಚೀಲದಲ್ಲಿ ಬಂದು ಸೇರಿಕೊಂಡಿತೆಂಬುದೇ ಅವನಿಗೆ ಗೊತ್ತಾಗಲಿಲ್ಲ.
ಯಂಕನ ಹೆಂಡದಂಗಡಿಯ ಮುಂದೆ ರುಕ್ಕುವಿನ ಚೀಲದಿಂದ ಹಾಗೆ ತಲೆಬುರುಡೆ ಬಿದ್ದದ್ದು ಸರೀ ಮಧ್ಯಾಹ್ನದ ಹೊತ್ತಿನಲ್ಲಿ. ಇಡೀ ಊರಿಗೇ ಅದೊಂದು ತಾಜಾ ಖಬರ್ ಆಗಿ, ವಿಚಾರ ಬರೀ ಅರ್ಧ ತಾಸಿನಲ್ಲಿ ಊರ ತುಂಬಾ ಗೋಳ್ ಗುಟ್ಟಿತು. ರುಕ್ಕು ಎಲ್ಲಿಂದಲೋ ಮಾಟ ಕಲಿತುಕೊಂಡು ಬಂದಿದ್ದಾನೆ ಎಂಬ ತನಿಖಾ ವರದಿ ಥರದ ಗುಲ್ಲು ಎದ್ದಿತು. ಅವತ್ತು ಸಂಜೆಯಾಗುತ್ತಿರುವ ಹೊತ್ತಿಗೆ ಊರು ರುಕ್ಕುವನ್ನು ನೋಡುವ ರೀತಿಯೇ ಒಂದು ನಮೂನೆಯದ್ದಾಗಿ ಬದಲಾಗಿತ್ತು.
ತಮಾಷೆಯೆಂದರೆ ಊರು ತನ್ನ ಬಗ್ಗೆ ಹೀಗೆಲ್ಲಾ ಅಂದುಕೊಂಡಿದೆ ಎಂಬುದು ರುಕ್ಕುವಿಗೆ ಮಾತ್ರ ಗೊತ್ತಾಗಿರಲೇ ಇಲ್ಲ. ಯಾವತ್ತಿನಂತೆ ತಾನಾಯಿತು, ತನ್ನ ಚೀಲವಾಯಿತು ಎಂಬಂತೆಯೇ ಇದ್ದ ರುಕ್ಕುವಿಗೆ ಮಧ್ಯಾಹ್ನ ಇಷ್ಟು ಸುಳಿವನ್ನೂ ನೀಡದೆ ತನ್ನ ಚೀಲದಿಂದ ತಲೆಬುರುಡೆ ಬಿದ್ದ ವಿಚಾರವೇ ಬೃಹತ್ತಾಗಿ ಕಾಡತೊಡಗಿತ್ತು. ನಿಜ ಹೇಳಬೇಕೆಂದರೆ ಆ ಕ್ಷಣದಿಂದಲೇ ಅವನ ಮನಸ್ಸು ಕೆಟ್ಟಿತ್ತು.
ಅದು ಅವನ ದೇಹದ ಮೇಲೂ ಆಗಲೇ ತನ್ನ ಕರಾಮತಿ ತೋರಿಸಿಯಾಗಿತ್ತು. ಮೈಯಿಡೀ ಸುಡು ಜ್ವರ ಏರಿತ್ತು. ಒಂದೆಡೆ ಊರು ರುಕ್ಕು ಮಾಟ ಕಲಿತು ಬಂದಿದ್ದಾನೆ ಎಂಬ ಮಾತುಗಳಿಗೆ ಕಣ್ಣು, ಮೂಗು, ಕೈಕಾಲು, ರೆಕ್ಕೆಪುಕ್ಕ ಬಾಲಗಳನ್ನೆಲ್ಲಾ ಅಂಟಿಸುತ್ತಿರಬೇಕಾದರೆ, ರುಕ್ಕು ಮಾತ್ರ ತನ್ನಷ್ಟಕ್ಕೆ ತಾನೇ ಬಳಲಿ ಬೆಂಡಾಗತೊಡಗಿದ್ದ. ಆಮೇಲೆ ಸರಿಯಾಗಿ ಇಪ್ಪತ್ತು ದಿನ ಜ್ವರ ಬಂದು ಹಾಸಿಗೆ ಮೇಲೇ ಬಿದ್ದಿದ್ದ. ಸ್ವತಃ ರುಕ್ಕುವೇ ಜ್ವರ ಬಂದು ಮಲಗಿದ್ದಾನೆ ಎಂದು ಗೊತ್ತಾದ ಮೇಲೆಯೇ ಊರು ತಾನು ಅಂದುಕೊಂಡದ್ದಕ್ಕೆ ತಿದ್ದುಪಡಿ ತರಲು ಮುಂದಾದದ್ದು. ಯಾರೋ ರುಕ್ಕುವಿನ ಚೀಲದಲ್ಲಿ ಆ ತಲೆಬುರುಡೆಯನ್ನು ಹಾಕಿದ್ದಾರೆ ಎಂಬ ಅನುಮಾನಗಳು ಬೆಳೆಯತೊಡಗಿದ ನಂತರ, ರುಕ್ಕುವಿನ ಮೇಲೆ ಸ್ಥಾಪಿತಗೊಂಡಿದ್ದ ಊರಿನ ಅನುಮಾನ ಹನ್ನೆರಡಾಣೆಯಷ್ಟು ಕಮ್ಮಿಯಾಯಿತು.
ಅದು ಹೇಗೋ ಅವನ ಚೀಲದೊಳಕ್ಕೆ ಆ ತಲೆಬುರುಡೆ ಸೇರಿಸಿದ ಕಿಡಿಗೇಡಿಗಳು ಯಾರೆಂಬುದು ಕಡೆಗೂ ಗುಟ್ಟಾಗಿಯೇ ಉಳಿಯಿತು. ಹಾಗೆ ನೋಡಿದರೆ ರುಕ್ಕು ಮಾಟ ಮಂತ್ರ ಕಲಿಯುವುದಕ್ಕೆ ತಾನಾಗಿಯೇ ಒಂದು ಛಾನ್ಸು ಬಂದಿತ್ತು ಎಂಬುದೂ ಸುಳ್ಳಲ್ಲ. ಬಹುಶಃ ಊರು ಆತನ ಬಗ್ಗೆ ಏಕ್ ದಂ ಈ ಥರದ ಅನುಮಾನ ತೋರಿಸುವುದಕ್ಕೆ ಅದೊಂದು ಸಂಗತಿಯೂ ಪುಷ್ಠಿ ನೀಡಿರಲೂ ಸಾಕು. ಅದೇನೇ ಇರಲಿ, ರುಕ್ಕು ಮಾತ್ರ ಅಂಥದೊಂದು ಛಾನ್ಸು ಬಂದಾಗಲೂ ಅದರ ಉಸಾಬರಿಯೇ ಬೇಡವೆಂದು ತಳ್ಳಿ ಹಾಕಿ ತನಗೆ ನಿಲುಕಿದ ಬದುಕನ್ನಷ್ಟೇ ಬಾಳಲು ಆಸೆಪಟ್ಟವನಾಗಿದ್ದ.
ರುಕ್ಕುವಿಗೆ ಈಗ ತುಂಬಾನೇ ವಯಸ್ಸಾಗಿದೆ. ಚೀಲ ಮಾತ್ರ ಅವನ ಜೊತೆಗೇ ಇದೆ. ಯಾರೂ ಈಗ ಅವನನ್ನು ಅದು ತೆಗಿ, ಇದು ತೆಗಿ ಎಂದು ಅಷ್ಟಾಗಿ ಕಾಡುವುದಿಲ್ಲ. ಆದರೆ ಅವನು ಮಾತ್ರ ಬೀಡಿ ಕಟ್ಟಿನಿಂದ ಒಂದು ಬೀಡಿ ತೆಗೆದುಕೊಳ್ಳಬೇಕಾದರೂ ಚೀಲದಿಂದ ಎಲ್ಲವನ್ನು ಸುರುವುತ್ತಾನೆ. ಅವನದೆಂತಾ ಅಮಾಯಕತೆಯೊ. ಆದರೆ ಅವನನ್ನು ಎಂಥದೋ ಒಂದು ಅನುಮಾನದಿಂದಲೇ ನೋಡುತ್ತಾ ಬಂದಿರುವ ಊರು, ಅವನು ಈ ಚೀಲವನ್ನು ಇಷ್ಟೊಂದು ಬಹಿರಂಗಕ್ಕೆ ಇಡದೇ ಹೋಗಿದ್ದಿದ್ದರೆ ಇನ್ನೆಷ್ಟು ಗುಮಾನಿಯಿಂದ ನೋಡುತ್ತಿತ್ತೋ
ಇತ್ತೀಚಿನ ಟಿಪ್ಪಣಿಗಳು