ಉಮಾ ರಾವ್ ಅವರ ಹೊಸ ಕಥಾ ಸಂಕಲನ ‘ಸಿಲೋನ್ ಸುಶೀಲ’ ಬಿಡುಗಡೆಯಾಗುತ್ತಿದೆ. ‘ನುಡಿ ಪುಸ್ತಕ’ ಚಂದವಾಗಿ ಪ್ರಕಟಿಸಿರುವ ಈ ಸಂಕಲನ ಬಿಡುಗಡೆ ಈ ಭಾನುವಾರ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬೆಳಗ್ಗೆ ೧೦-೧೫ಕ್ಕೆ. ಬನ್ನಿ.
ಈ ಸಂದರ್ಭಕ್ಕಾಗಿ ಅವರ ‘ಹಾತೂನಿಕಾ ಎಂಬ ಕನಸು’ ನಿಮಗಾಗಿ –
ಹಾತೂನಿಕಾ ಎಂಬ ಕನಸು
– ಉಮಾ ರಾವ್
ಅವನ ಹೆಸರು ಮೂರ್ತಿ. ಕೇಶವ ಮೂರ್ತಿ. ನಿವೃತ್ತ. ತೃಪ್ತ. ಬೆಚ್ಚಗಿನ ಮನೆ, ಉಚ್ಛ ಹುದ್ದೆಯಲ್ಲಿದ್ದ ಮಕ್ಕಳು,ಮುದ್ದು ಮುದ್ದಾದ ಮೊಮ್ಮಕ್ಕಳು. ಬ್ಯಾಂಕಿನ ತುಂಬಾ ಹಣ. ಹೆಂಡತಿ ಹೋಗಿ ಎರಡು ವರ್ಷಗಳಾಗಿವೆ. ಅದನ್ನೂ ಒಪ್ಪಿಕೊಂಡಿದ್ದಾನೆ. ಅವನು ಆಗಾಗ ನೋಡುವ ‘ಅಸ್ಥಾ’ ಚ್ಯಾನೆಲ್ಲಿನಲ್ಲಿ ಹೇಳುವಂತೆ ಹೋಗಲೇ ಬೇಕಲ್ಲಾ ಒಬ್ಬರು ಮೊದಲು. ದಿನ ಹೇಗೋ ಸಾಗುತ್ತಿತ್ತು. ಒಂದು ಮಧ್ಯಮವರ್ಗೀಯ ಮನಸ್ಸಿನಲ್ಲಿ ಪರಿಪೂರ್ಣವಾದ ಜೀವನವನ್ನು ಅರ್ಥೈಸುವ ವ್ಯಾಕರಣಕ್ಕೆ ತಕ್ಕಂತಿದ್ದ ತನ್ನ ಬದುಕಿನ ಬಗ್ಗೆ ಅವನಿಗೆ ಸಂತೃಪ್ತಿಯಿತ್ತು. ಹಾಗಾಗಿ ಈ ಕ್ಷಣವೇ ತನಗೆ ಸಾವಿನ ಕರೆ ಬಂದರೂ ತನಗೇನೂ ಪಶ್ಚಾತ್ತಾಪವಿಲ್ಲ ಎಂದು ದಿನಾ ಒಮ್ಮೆ ಗಟ್ಟಿ ಮಾಡಿಕೊಳ್ಳುತ್ತಲೂ ಇದ್ದ.
ಆದರೂ ಸಂಜೆಗಳು ಮುಳುಗುತ್ತಿದ್ದಾಗ ಎಲ್ಲೋ ಆಳದಲ್ಲಿ ಮಿಡಿಯುವ ಒಂಟಿತನ. ಅರಿವಿಗೆ ಬರದ ನೋವು. ಅದನ್ನು ಹಿಮ್ಮೆಟ್ಟಿಸಲು ಒಂದೋ ಎರಡೊ ಪೆಗ್ಗು ಸ್ಕಾಚ್. ಜೊತೆಗೆ ಜಸ್ರಾಜ್ ಸಂಗೀತ.
ಕತ್ತಲ ಸೀಳಿಕೊಂಡು ಯಾತ್ರೆ ಸಾಗಿದಂತೆ ಬದುಕು ಹೆಚ್ಚು ಸಹ್ಯವೆನಿಸತೊಡಗಿ ನೆನೆಪಿನ ಮೈಲುಗಲ್ಲುಗಳು ಹಾದುಹೋಗುತ್ತಿದ್ದವು. ಯಾವಾಗಲೂ ಒಂದೆಡೆ ನಿಲುಗಡೆ.
ರಾಶಿ ರಾಶಿ ಹಿಮದ ನಡುವಿಂದ. ಎಲೆ ಉದುರಿದ ಬೋಳು ಮರಗಳ ಆಚೆಯಿಂದ, ಇಳಿಜಾರು ಛಾವಣಿಯ ಮನೆಯ ತಿರುವಿನಿಂದ ಅವಳು ನಡೆದು ಬರುತ್ತಿದ್ದಳು. ಸ್ವಪ್ನಕನ್ನಿಕೆ. ಭುಜದವರೆಗೂ ಇಳಿಬಿದ್ದಿದ್ದ ನುಣುಪಾದ ಕಪ್ಪು ಕೂದಲು. ಉದ್ದ ಮುಖ. ತುಂಬಿದ ಕೆಂಪು ತುಟಿಗಳು. ಕಂದು ಕಣ್ಣುಗಳು. ಕಟ್ಟುಮಸ್ತಾದ ಮೈಮಾಟ. ನೀಲಿ ಡೆನಿಮ್ ಶಾರ್ಟ್ಸ್, ಬಿಳೀ ಶರಟು. ಮೇಲೆರಡು ಗುಂಡಿಗಳು ತೆರೆದೇ ಇರುತ್ತಿದ್ದುವು.
‘ನನ್ನ ಹೆಸರು ಜೆನ್ನಿ. ನಾನು ಗ್ರೀಕ್’ ಎಂದಿದ್ದಳು ಮೊದಲ ಬಾರಿ ಭೇಟಿಯಾದಾಗ.
‘ನೀವು ಮರ್ಟಿ’ ?
‘ಅಲ್ಲ ಮೂರ್ತಿ ‘ ಎಂದು ಅವನು ಎಷ್ಟು ಸಲ ಹೇಳಿದ್ದರೂ ಅವಳಿಗೆ ಅವನು ಮರ್ಟಿಯೇ.
ಅವಳ ನಿಜವಾದ ಹೆಸರು ಹಾತೂನಿಕಾ ಅಡ್ಜಿಮಿಯನ್. ಅರ್ಮೇನಿಯಾ ದೇಶದವಳು. ಆಗಿನ ಕಾಲದಲ್ಲಿ ರಶ್ಯಾ ತುಳಿದು ತುಳಿದು ಹಣ್ಣು ಮಾಡಿದ್ದ ಅರ್ಮೇನಿಯಾ ತುಂಬಾ ಅಶಕ್ತ ದೇಶವೆಂದು ಜನರು ತಿಳಿದಿದ್ದರಿಂದ, ಅವಳು ತಾನು ಗ್ರೀಸಿನವಳು ಎಂದು ಹೇಳಿಕೊಳ್ಳುತ್ತಾಳೆ ಎಂದು ಎಲ್ಲರಿಗೂ ಗೊತ್ತಿತ್ತು. ಹಾತೂನಿಕಾ ಎನ್ನಲು ಅಮೆರಿಕನ್ನರಿಗೆ ನಾಲಿಗೆ ತಿರುಗೊಲ್ಲ, ಅದಕ್ಕೇ ನನ್ನ ಹೆಸರು ಜೆನ್ನಿ ಎಂದು ಹೇಳುತ್ತೇನೆ ಎಂದು ಅವಳು ಹೇಳಿದರೂ ಅದಕ್ಕೆ ಕಾರಣವೂ ತನ್ನ ಮೂಲವನ್ನು ಮುಚ್ಚಿಡುವುದೇ ಆಗಿತ್ತೆಂದೂ ಗೊತ್ತಿತ್ತು. ಅದು ಹೇಗೋ ಅವಳ ಜೊತೆ ತನ್ನ ರೂಮ್ಮೇಟನ್ನು ಭೇಟಿಯಾಗಲು ಬರುತ್ತಿದ್ದ ಅವಳ ಕರಿ ಗಡ್ಡ ಕರಿ ಕೂದಲಿನ ಗೆಳೆಯನ ಮೂಲಕ ಅವಳ ಪರಿಚಯವಾಯಿತು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಅವಳು ಒಬ್ಬೊಬ್ಬಳೆಯೂ ಬರತೊಡಗಿದ್ದಳು.
ಮರ್ಟಿ, ನಿನ್ನ ಫ್ರಿಡ್ಜ್ ನಲ್ಲಿ ಬಿಯರ್ ಇದೆಯಾ?
ಮರ್ಟಿ, ನನ್ನ ಇಸ್ತ್ರಿ ಪೆಟ್ಟಿಗೆ ಕೆಟ್ಟು ಹೋಗಿದೆ. ಇಲ್ಲಿ ಮಾಡಿಕೊಳ್ಳಲಾ?
ಮರ್ಟಿ, ಇವತ್ತು ಸಾರು ಮಾಡಿದೀಯಾ? ನಿನ್ನ ಸಾರು, ಅನ್ನ ತಿಂದು ತುಂಬಾ ದಿನವಾಯಿತು
ಒಂದು ದಿನ ಇದ್ದಕ್ಕಿದ್ದಂತೆ ನನ್ನ ಗೆಳೆಯ ನನಗೆ ಕೈ ಕೊಟ್ಟ ಎಂದು ಅವನನ್ನು ಬೇರೊಂದು ಹುಡುಗಿಯೊಡನೆ ಯೂನಿವರ್ಸಿಟಿ ಕ್ಯಾಂಪಸ್ ನ ಪಬ್ ನಲ್ಲಿ ಕಂಡು ಕಂಗಾಲಾಗಿ ಓಡಿ ಬಂದು ಕಣ್ಣೀರು ಸುರಿಸಿದ್ದಳು. ಸ್ವಲ್ಪ ದಿನ ಒಂಟಿಯಾಗೇ ಓಡಾಡುತ್ತಿದ್ದಳು. ಪ್ರತಿ ಸಂಜೆ ಅವನ ರೂಮಿಗೆ ಬಂದು ಹರಟುತ್ತಿದ್ದಳು.
ಮರ್ಟಿ, ನಿನಗೆ ಮಾತ್ರ ಅಧೇಗೆ ಗರ್ಲ್ ಫ್ರೆಂಡ್ ಇಲ್ಲ
ನಾವು ಇಂಡಿಯನ್ಸ್ ಬೇರೆ ಥರಾನನಗೆ ಮದುವೆಯಾಗಿದೆ. ವರ್ಷವೂ ಆಗಿಲ್ಲ, ನನ್ನ ಹೆಂಡತಿ ಊರಲ್ಲಿ ನನಗಾಗಿ ಕಾಯುತ್ತಿದ್ದಾಳೆ ಪಾಪ ಎಂಬ ವಿವರಣೆಗೂ ಅವಳಲ್ಲಿ ಪ್ರಶ್ನೆಯಿತ್ತು.
ಆದರೆ ಮರ್ಟಿ ನಿನ್ನ ರೂಮ್ಮೇಟ್ ಚೋಪ್ರಾಗೂ ಮದುವೆಯಾಗಿದೆಅವನಿಗೆ ದಿನಕ್ಕೆ ಒಬ್ಬ ಗರ್ಲ್ ಫ್ರೆಂಡ್ !
ಹಾಗೇ ಅವಳ ದೃಷ್ಟಿ ಟೇಬಲ್ ಮೆಲಿದ್ದ ಅವನ ಹೆಂಡತಿಯ ಪುಟ್ಟ ಫೋಟೋದತ್ತ ಹರಿದು ವಾವ್! ಎಷ್ಟು ಬ್ಯೂಟಿಫುಲ್ ಆಗಿದಾಳೆಅವ್ಳಿಗೆ ಬಾಯ್ ಫ್ರೆಂಡ್ಸ್ ಇಲ್ಲಾಂತ ನಿನಗೆ ಹೇಗೆ ಗೊತ್ತು? ನೀನಿಲ್ಲಿ ತಪಸ್ಸು ಮಾಡ್ತಿರು ಅವಳಲ್ಲಿ ಎಷ್ಟು ಹುಡುಗರೊಂದಿಗ ಓಡಾಡಿಕೊಂಡಿದ್ದಾಳೋ ಎಂಬ ತುಂಟ ಪ್ರಶ್ನೆ.
ಇಂಡಿಯಾದಲ್ಲಿ ಇಲ್ಲಿನ ಹಾಗಲ್ಲಎಷ್ಟು ವರ್ಷವಾದರೂ ನನಗಾಗಿ ಅವಳು ಕಾಯ್ತಾಳೆ.. ಎಂದು ತಾನಂದಿದ್ದು ಅವಳಿಗೆ ಅಷ್ಟೇನು ತೃಪ್ತಿ ತಂದಿರಲಿಲ್ಲ.
ಅವನು ಊರಿಗೆ ಹೊರಡುವ ಮೊದಲು ಏರ್ ಪೋರ್ಟ್ ಗೆ ಬಂದು ಬೀಳ್ಕೊಟ್ಟಿದ್ದಳು. ಜೊತೆಗೆ ಅವರೂರಿನ ಹಸ್ತಕಲೆಯಂದು ಮಣ್ಣಿನ ಮೇಲೆ ಕೊರೆದ ನಗ್ನ ಯೋಧನೊಬ್ಬನ ಚಿತ್ರವನ್ನು ನೆನಪಾಗಿ ಕೊಟ್ಟಿದ್ದಳು. ಅವಳ ಕಣ್ಣುಗಳು ಹನಿಗೂಡಿದ್ದುವು.
ಯೂ ಆರ್ ಅ ವೆರಿ ಗುಡ್ ಮ್ಯಾನ್ ಮರ್ಟಿ ಎಂದು ಅವಳು ಹತ್ತಿರ ಬಂದು ಬೆನ್ನು ತಟ್ಟಿದಾಗ ಅವಳ ಬಿಸಿಯುಸಿರು ತಟ್ಟಿ ಕಸಿವಿಸಿಯಾದರೂ ಅವನನ್ನೇನೋ ಕಟ್ಟಿ ಹಾಕಿತ್ತು. ಕೈ ಬೀಸುತ್ತಲೇ ಕಣ್ಮರೆ ಯಾಗಿದ್ದಳು. ಇದೆಲ್ಲಾ ನಲವತ್ತು ವರ್ಷಗಳ ಹಿಂದೆ ನಡೆದದ್ದು.
ಆದರೆ ಇಂದಿಗೂ ಸಂಜೆಯ ಮಬ್ಬಿನ ಕ್ಷಣಗಳಲ್ಲಿ ಅಂದು.ತಾನಷ್ಟು ಒಳ್ಳೆಯವನಾಗಿರಬೇಕಾದ ಅವಶ್ಯಕತೆಯಿತ್ತೇ ಇದ್ದಿದ್ದರಿಂದಲೇ ಅವಳ ನೆನಪು ಇಂದಿಗೂ ತನ್ನಲ್ಲಿ ನಿಂತು ವಿಚಿತ್ರವಾಗಿ ಕಾಡುತ್ತಿದೆಯೇ ಎಂದೆಲ್ಲ ಪ್ರಶ್ನೆಗಳು ಎದ್ದು ಕೊಂಚ ಹೊತ್ತು ಅವನ ಮನಸ್ಸು ತಲ್ಲಣಗೊಳ್ಳುತ್ತದೆ.
ಇತ್ತೀಚಿನ ಟಿಪ್ಪಣಿಗಳು