ಜೋಗಿ ಬರೆಯುತ್ತಾರೆ: ಶೂದ್ರ ಎಂಬ ಶ್ರೀನಿವಾಸ

-ಜೋಗಿ

ಹಳೆಯ ಪುಸ್ತಕಗಳನ್ನು ತಿರುವಿಹಾಕುತ್ತಿದ್ದರೆ ಕೈಗೆ ಸಿಕ್ಕಿದ್ದು ಯಾವುದೋ ತಿಂಗಳ ಶೂದ್ರ. ಅದರೊಳಗೆ ಕಿ. ರಂ. ನಾಗರಾಜ್ ಕುರಿತು ಶೂದ್ರ ಬರೆದ ಬರಹ. ಕಿ.ರಂ. ಮತ್ತು ಶೂದ್ರ ಜೊತೆಜೊತೆಗೇ ನೆನಪಾದರು.

ಶೂದ್ರ ನಮ್ಮೆಲ್ಲರಿಗಿಂತ ಹಿರಿಯರು. ನಾವು ಓದಲು ಶುರು ಮಾಡುವ ಹೊತ್ತಿಗೆಲ್ಲ ಅವರು ಬರೆಯುವುದಕ್ಕೆ ಆರಂಭಿಸಿದ್ದರು. ಜೊತೆಗೇ ಒಂದು ಪತ್ರಿಕೆಯನ್ನೂ ಶುರು ಮಾಡಿದ್ದರು. ಸುದ್ದಗುಂಟೇಪಾಳ್ಯ ಎಂಬ ವಿಚಿತ್ರ ಹೆಸರಿನ ಬಡಾವಣೆಯಲ್ಲಿ ಅವರ ಮನೆಯಿತ್ತು. ಅದೇ ಅವರ ಕಾರ್ಯಕ್ಷೇತ್ರವೂ ಆಗಿತ್ತು.

ಶೂದ್ರ ಓದಿ ನಾನು ಮತ್ತು ಶ್ರೀನಿವಾಸ ಜೋಕಟ್ಟೆ ಅವರಿಗೆ ಫೋನ್ ಮಾಡಿದಾಗ ಶೂದ್ರ ಅಸ್ಪಷ್ಟ ಕನ್ನಡದಲ್ಲಿ ಮನೆಗೆ ಬಂದುಬಿಡಿ ಎಂದು ಧರ್ಮಾರಾಮ್ ಕಾಲೇಜು, ಹಿಂಭಾಗದ ರಸ್ತೆ, ಸುದ್ದಗುಂಟೆಪಾಳ್ಯ ಎಂದಲ್ಲ ವಿಳಾಸ ಹೇಳಿದ್ದರು. ನಾವು ಕಷ್ಟಪಟ್ಟು ಆ ವಿಳಾಸ ಹುಡುಕಿಕೊಂಡು ಹೋಗಿ ಬುಲ್ಗೇನಿಯನ್ ಗಡ್ಡದ ಶೂದ್ರ ಶ್ರೀನಿವಾಸರನ್ನು ಭೇಟಿಯಾಗಿ ಅವರು ಕೊಟ್ಟ ಟೀ ಕುಡಿದು, ಹಳೆಯ ಶೂದ್ರ’ ಪ್ರತಿಗಳನ್ನು ಹೊತ್ತುಕೊಂಡು ಬಂದಿದ್ದೆವು.

ಮೊದಲ ಭೇಟಿಗೇ ಶೂದ್ರ ಇಷ್ಟವಾಗಿದ್ದರು. ಅವರಿಗೆ ಎಷ್ಟು ಗೊತ್ತು ಅನ್ನುವುದು ನಮಗೆ ಗೊತ್ತಿರಲಿಲ್ಲ. ಆದರೆ ತುಂಬ ತಿಳಿದುಕೊಂಡಿದ್ದಾರೆ ಎಂಬ ಕೀಳರಿಮೆಯನ್ನೇನೂ ಅವರು ನಮ್ಮಲ್ಲಿ ಹುಟ್ಟಿಸಲಿಲ್ಲ. ನಮ್ಮ ಮಾತುಗಳನ್ನು ಕೇಳುವ ತಾಳ್ಮೆ, ವ್ಯವಧಾನ ಅವರಲ್ಲಿತ್ತು. ಅದಾದ ನಂತರವೂ ನಾನು ನಾಲ್ಕೈದು ಸಲ ಶೂದ್ರ ಶ್ರೀನಿವಾಸರ ಮನೆಗೆ ಹೋಗಿರಬಹುದು. ಇನ್ನೂ ಅರಳದ ಬೆಂಗಳೂರಿನ ಯಾವುದೋ ಬಡಾವಣೆಯೊಂದರಲ್ಲಿ ಸಲ್ಲಾಪ’ ಎಂಬ ಮತ್ತೊಂದು ಪತ್ರಿಕೆಯ ಬಿಡುಗಡೆಯ ನಂತರ ಒಂದು ನೂನ್ಪಾರ್ಟಿಯನ್ನೂ ಶೂದ್ರ ಇಟ್ಟುಕೊಂಡಿದ್ದರು. ಅಲ್ಲಿಗೆ ರಾಮಚಂದ್ರ ಶರ್ಮರೂ ಬಂದಿದ್ದರು.

ಆವತ್ತು ಮಧ್ಯಾಹ್ನವೇ ಬಿಯರ್ ಸಮಾರಾಧನೆಯಿತ್ತು. ಕನ್ನಡದ ಕವಯಿತ್ರಿಯರೂ ಕವಿಗಳೂ ಅಲ್ಲಿ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಓದಿ ಪತ್ರಿಕೆ ಹೇಗೆ ಬರಬೇಕೆಂದು ಅಮೂಲ್ಯ ಸಲಹೆಗಳನ್ನು ಕೊಟ್ಟರೆಂದು ನೆನಪು. ಅವನ್ನು ಪಾಲಿಸದೇ ಇದ್ದದ್ದರಿಂದ  ಸಲ್ಲಾಪ’ ಕೆಲವು ತಿಂಗಳ ಕಾಲ ಸುಗಮವಾಗಿ ನಡೆಯಿತು. ಆಮೇಲೆ ಶೂದ್ರ ಶ್ರೀನಿವಾಸರ ಅಸಂಖ್ಯಾತ ಯೋಜನೆಗಳಂತೆ ಅದೂ ಕಣ್ಮರೆಯಾಯಿತು.

ಆಮೇಲೆ ನಾನು ಅವರನ್ನು ಭೇಟಿಯಾದ್ದು ಮತ್ತೊಂದು ಸೆರೆರಾತ್ರಿ. ನಾನು ತಲೆನೋವಿನಿಂದ ನರಳುತ್ತಿದ್ದರೆ ಶೂದ್ರ ಶ್ರೀನಿವಾಸ್ ಪ್ರತ್ಯಕ್ಷರಾದರು. ತಲೆನೋವಿಗೆ ಎರಡು ಔಷಧಿಯಿದೆ. ಮೊದಲನೆಯದು ಈರುಳ್ಳಿ. ಗುಂಡು ಹಾಕುವ ಮುಂಚೆ ಈರುಳ್ಳಿ ತಿನ್ನಿರಿ. ಹಾಗೂ ತಲೆನೋವು ಬಂದರೆ ಕುರ್ಚಿಯಲ್ಲಿ ಕುಳಿತು, ಎರಡೂ ಕೈಯನ್ನು ಮೇಜಿನ ಮೇಲಿಟ್ಟು ಅದರ ಮೇಲೆ ತಲೆಯನ್ನು ಆನಿಸಿ ಕುಳಿತುಕೊಳ್ಳಿರಿ. ತಲೆನೋವು ತಕ್ಷಣ ಮಾಯವಾಗುತ್ತದೆ ಎಂದು ಪ್ರಾತ್ಯಕ್ಷಿತೆ ಮಾಡಿ ತೋರಿಸಿದ್ದರು ಶೂದ್ರ. ಆಮೇಲೆ ನಾನು ಈರುಳ್ಳಿ ತಿಂದು ಅನೇಕರಿಂದ ಬೈಸಿಕೊಂಡೆ.

ಶೂದ್ರ ಅತ್ಯಂತ ನಿರಪಾಯಕಾರಿ ವ್ಯಕ್ತಿ ಎಂಬುದು ನನ್ನ ನಂಬಿಕೆ. ಅವರು ಮೂರು ನಾಲ್ಕು ತಲೆಮಾರುಗಳಿಗೆ ಸೇರಿದವರಾಗಿರಬೇಕು. ಈಗಲೂ ಹೊಸಬರ ಪುಸ್ತಕ ಬಿಡುಗಡೆಯಾದರೂ ಸಹಿತ ಶೂದ್ರ ಶ್ರೀನಿವಾಸ್ ಬಂದು ಮೊದಲ ಸಾಲಲ್ಲೇ ಕೂತಿರುತ್ತಾರೆ. ಪುಸ್ತಕದ ಒಂದು ಪ್ರತಿ ಕೊಂಡುಕೊಳ್ಳುತ್ತಾರೆ. ಶೂದ್ರ ವಿಶೇಷ ಸಂಚಿಕೆ ಇಷ್ಚರಲ್ಲೇ ಹೊರಬರಲಿದೆ ಎನ್ನುತ್ತಾರೆ.

ಅದರ ಪ್ರತಿಯನ್ನೂ ತಲುಪಿಸುತ್ತಾರೆ. ಕಳೆದ ಮೂವತ್ತೋ ನಲವತ್ತೋ ವರ್ಷಗಳಲ್ಲಿ ಅವರ ಆಸಕ್ತಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಈಗಲೂ ಎಲ್ಲಾ ಪತ್ರಿಕೆಗಳನ್ನೂ ಓದುತ್ತಾರೆ. ಕನಸಿಗೊಂದು ಕಣ್ಣು ಬರೆಯುತ್ತಾರೆ. ಅದನ್ನು ಒಂದೇ ಕಣ್ಣಲ್ಲಿ ಕಂಡ ಕನಸು ಎಂದು ಅವರ ಗೆಳೆಯರು ತಮಾಷೆ ಮಾಡುತ್ತಾರೆ. ಅದನ್ನು ಕೂಡ ಪ್ರೀತಿಯಿಂದಲೇ ಒಪ್ಪಿಕೊಂಡವರಂತೆ ಶೂದ್ರ ನಟಿಸುತ್ತಾರೆ.

ಶೂದ್ರ ಶ್ರೀನಿವಾಸ್ ಗೊತ್ತಾ ಎಂದು ಕೆಲವು ತರುಣ ಮಿತ್ರರನ್ನು ಕೇಳಿದೆ. ಅವರಿಗೆ ಗೊತ್ತಿರಲಿಲ್ಲ. ಅವರ ಕೆಲವು ಪದ್ಯಗಳನ್ನು ಓದಿದ್ದೆ. ಅಷ್ಟೇನೂ ಇಷ್ಟವಾಗಲಿಲ್ಲ ಎಂದು ಕೆಲವರು ಮಾತು ಮುಗಿಸಿದರು. ಅವರ ಸಾಧನೆ ಕವಿಗಿಂತ ಹೆಚ್ಚಾಗಿ ಬೇರೆ ಥರದ್ದೇ ಇದೆ ಅಂದ್ಕೋತೀನಿ. ಅವರೊಂದು ಚಳವಳಿ ಕಟ್ಟಿದವರಲ್ವಾ ಎಂದು ಮತ್ತೊಂದಷ್ಟು ಮಂದಿ ನೆನಪಿನ ಓಣಿಯಲ್ಲಿ ಅಡ್ಡಾಡಿದರು.

ಶೂದ್ರ ಶ್ರೀನಿವಾಸ್ ಅರಂಭದ ದಿನಗಳಲ್ಲಿ ಶ್ರೀನಿವಾಸ ರೆಡ್ಡಿ ಎಂಬ ಹೆಸರಲ್ಲಿ ಪ್ರಕಟಿಸಿದ್ದ ಕವನ ಸಂಕಲನವೊಂದು ಪುಸ್ತಕದ ಕಪಾಟು ಹುಡುಕುವಾಗ ಕೈಗೆ ಸಿಕ್ಕಿತು. ಅವರನ್ನು ಹಿರಿಯ ಲೇಖಕರು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನುವುದಕ್ಕೂ ಸಾಕ್ಷಿ ಸಿಗುತ್ತವೆ.

ಲಂಕೇಶರಂತೂ ಪದೇ ಪದೇ ಅವರನ್ನು ಅಂಕಣದಲ್ಲಿ ಎಳೆತಂದು ಕಾಲೆಳೆಯುವುದನ್ನು ಕೊನೆಯ ದಿನಗಳ ತನಕವೂ ಮುಂದುವರಿಸಿದ್ದರು. ಶೂದ್ರ ಕುರಿತು ಅನೇಕ ದಂತಕತೆಗಳಿದ್ದವು. ಅವರು ಶೂದ್ರ ಪತ್ರಿಕೆಗೆ ಚಂದಾದಾರರನ್ನು ಹುಡುಕುತ್ತಾ ಹೊರಟಾಗ ಅವರನ್ನು ಚಂದಾಮಾಮ’ ಎಂದು ತಮಾಷೆಯಾಗಿ ಕರೆಯಲಾಗುತ್ತಿತ್ತು.

ಇವ್ಯಾವುದರಿಂದಲೂ ಶೂದ್ರ ವಿಚಲಿತರಾದಂತೆ ಕಾಣಿಸುತ್ತಿರಲಿಲ್ಲ. ಅಪರೂಪದ ಸಂದರ್ಭಗಳಲ್ಲಿ ಸಿಟ್ಟಿಗೆದ್ದು ಕೂಗಾಡಿದ್ದು ಬಿಟ್ಟರೆ ಶೂದ್ರ ಸಂಯಮದ ಸಮಚಿತ್ತದ ವ್ಯಕ್ತಿ. ಮೊನ್ನೆ ಮೊನ್ನೆ ಲೇಖಕರ ತಲ್ಲಣಗಳ ಕುರಿತು ಒಂದು ಚೆಂದದ ಪುಸ್ತಕ ಸಂಪಾದಿಸಿ ಪ್ರಕಟಿಸಿದ್ದರು. ಅದರಲ್ಲಿ ಅವರ ಕುರಿತು ಮತ್ಯಾರೋ ಬರೆದ ಲೇಖನವೂ ಅದಕ್ಕೆ ಅವರ ಪ್ರತಿಕ್ರಿಯೆಯೂ ಪ್ರಕಟವಾಗಿತ್ತು.

ನನ್ನ ಅಭಿಪ್ರಾಯ ಇದು ಎಂದು ಹಠ ಹಿಡಿದು ಕೂರದ, ತಪ್ಪಾಗಿದ್ದರೆ ತಿದ್ದಿಕೊಳ್ಳುವ, ತಾನು ಸರಿ ಅನ್ನಿಸಿದಾಗ ಅದನ್ನೇ ಪ್ರತಿಪಾದಿಸುವ, ಪ್ರಕಾಶನ ಸಂಸ್ಥೆ, ಸಾಹಿತ್ಯ ಪತ್ರಿಕೆ ಮಾಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವ ಶೂದ್ರ, ಸಾಹಿತ್ಯ ಜಗತ್ತನ್ನು ಬೆರಗಿನಿಂದ ನೋಡುವ ಮುಗ್ಧನಂತೆ ಗೋಚರಿಸುತ್ತಾರೆ. ಇವತ್ತಿಗೂ ಆ ಮುಗ್ಧತೆ ಉಳಿದುಕೊಂಡಿದೆ ಎಂದು ಹೇಳುವ ಆಸೆಯಾಗುತ್ತದೆ. ಆ ಹೇಳಿಕೆಯನ್ನು ನಿರಾಕರಿಸಲು ಅನೇಕರು ಕಾದು ಕುಳಿತಿದ್ದಾರೆ ಅನ್ನುವುದೂ ನಿಜ.

ತನ್ನನ್ನು ಎಂದೂ ಸಿಂಹಾಸನದಲ್ಲಿ ಕೂರಿಸಿಕೊಳ್ಳಲು ಇಷ್ಟಪಡದವರು ಶೂದ್ರ. ಅವರ ಕನಸಿಗೊಂದು ಕಣ್ಣು’ ಸಂಗ್ರಹ ತೆರೆದರೆ ಶೂದ್ರರ ಬಹುಮುಖ ಪ್ರತಿಭೆಯ ಪರಿಚಯವಾಗುತ್ತದೆ. ಇವತ್ತಿಗೂ ಶೂದ್ರ ಶ್ರೀನಿವಾಸರಿಗೆ ಎಲ್ಲರೂ ಗೊತ್ತು. ಸಾಹಿತ್ಯ ಚಳವಳಿ ಬೆಳೆದುಬಂದ ದಾರಿ ಗೊತ್ತು. ಎಲ್ಲರ ಮುಖ ಮತ್ತು ಮುಖವಾಡಗಳು ಅವರಿಗೆ ಚೆನ್ನಾಗಿಯೇ ಪರಿಚಿತ. ಸಾಹಿತಿಗಳ ವಿಳಾಸಗಳನ್ನು ಚಂಪಾ ಪ್ರಕಟಿಸಿದ ಹಾಗೇ, ಸಾಹಿತಿಗಳ ವಿಲಾಸಗಳ ಕುರಿತು ಶೂದ್ರ ಸೊಗಸಾಗಿ ಬರೆಯಬಹುದು.

ಆದರೆ ಅಷ್ಟು ಸುಲಭಕ್ಕೆ ಶೂದ್ರ ಗುಟ್ಟು ಬಿಟ್ಟುಕೊಡುವವರಲ್ಲ. ಅವರು ಯಾರ ಕುರಿತೂ ತಮಾಷೆಯಾಗಿ ಬರೆದದ್ದು ನೆನಪಿಲ್ಲ. ಎಷ್ಟೋ ಸಲ  ಸಾಧಾರಣ ಲೇಖಕರ ಕುರಿತು ಬರೆಯುವಾಗಲೂ, ಸುಮ್ಮಸುಮ್ಮನೆ ಶ್ರೇಷ್ಠ ಪಾಶ್ಚಾತ್ಯ ಲೇಖಕರ ಹೆಸರನ್ನು ಶೂದ್ರ ಉಲ್ಲೇಖಿಸುವುದಿದೆ. ಅದರಿಂದ ಶೂದ್ರರ ಓದಿನ ವಿಸ್ತಾರ ಗೊತ್ತಾಗುತ್ತಿತ್ತೇ ವಿನಾ, ಅವರು ಬರೆಯುತ್ತಿದ್ದ ಲೇಖಕರ ಖ್ಯಾತಿ ಹೆಚ್ಚುತ್ತಿರಲಿಲ್ಲ.

ಶೂದ್ರ ವಯಸ್ಸೆಷ್ಟು ಎಂದು ಯೋಚಿಸುತ್ತೇನೆ. ಅವರು ಸಾಹಿತ್ಯಲೋಕದಲ್ಲಿ ಎಷ್ಟೋ ಶತಮಾನಗಳಿಂದ ಇದ್ದಾರೇನೋ ಎಂಬಷ್ಟು ಫೆಮಿಲಿಯರ್ ಆಗಿದ್ದಾರೆ. ಅವರನ್ನು ದ್ವೇಷಿಸುವುದಕ್ಕೆ ಸಕಾರಣಗಳಿಲ್ಲ, ಅಕಾರಣವಾಗಿ ಪ್ರೀತಿಸುವವರೂ ಸಿಗುವುದಿಲ್ಲ.

ಶೂದ್ರರಂಥ ಮತ್ತೊಬ್ಬರು ಸಾಹಿತ್ಯ ಲೋಕದಲ್ಲಿ ಕಾಣಿಸುವುದಿಲ್ಲ. ನಿಸ್ವಾರ್ಥಿಯಂತೆ ಓಡಾಡುತ್ತಾ, ಇದ್ದಕ್ಕಿದ್ದಂತೆ ಹೊಸ ಯೋಜನೆಯೊಂದನ್ನು ಹಾಕಿಕೊಳ್ಳುತ್ತಾ, ಎಲ್ಲೋ ಧರಣಿ ಕೂರುತ್ತಾ, ಮತ್ತೆಲ್ಲೋ ಉಪವಾಸ ಬೀಳುತ್ತಾ, ಶೂದ್ರ’ ಇಷ್ಟರಲ್ಲೇ ಬರಲಿದೆ ಎಂದು ಹೆದರಿಸುತ್ತಾ ಶೂದ್ರ ಒಂದು ಕಾಲಘಟ್ಟದಲ್ಲಿ ಮಿಂಚಿನಂತೆ ಸಂಚರಿಸಿದವರು.

ಮೊನ್ನೆ ಅವರು ಬರೆದ ಲೇಖನ ಓದುತ್ತಿದ್ದೆ. ಕಿರಂ ರೂಮಿನ ತುಂಬ ಏನೇನೋ ತುಂಬಿಕೊಂಡಿದ್ದವು. ಕುರುಕಲು ತಿಂಡಿ, ಪುಸ್ತಕ, ಚಾಕಲೇಟು, ಪುಸ್ತಕ, ಬಟ್ಟೆಬರೆ, ಓದಿ ಮರೆತ ಪುಸ್ತಕ, ಅರೆತೆರೆದ ಬ್ಯಾಗು, ಒಣಗಿದ ಹೂವು, ಒಂದು ರಾಶಿ ಬೆಂಕಿಪೊಟ್ಟಣ.. ಹೀಗೆ ಶೂದ್ರರ ಪಟ್ಟಿ ಸಾಗುತ್ತಿತ್ತು. ಅದನ್ನು ಓದಿ ಮುಗಿಸುತ್ತಿದ್ದಂತೆ ಆ ಪಟ್ಟಿಗೆ ಶೂದ್ರರ ಹೆಸರೂ ಸೇರಬೇಕಿತ್ತು ಅನ್ನಿಸಿತು.

ಶೂದ್ರ ಕೂಡ ಹಾಗೆಯೇ, ಪ್ರತಿಭಾವಂತರ ಜೊತೆ ಸುಮ್ಮನೆ ಇದ್ದವರು. ಅನೇಕರ ಪ್ರತಿಭಾವಂತರು ಅವರನ್ನು ಸಮರ್ಥವಾಗಿ ಬಳಸಿಕೊಂಡದ್ದೂ ಇದೆ. ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಹೇಳಿದ ಮೇಲೆ ಶೂದ್ರ ಇದ್ದಕ್ಕಿದ್ದ ಹಾಗೆ ಜಾಗೃತರಾಗುತ್ತಿದ್ದರು.

ಸುಮಾರು ವರ್ಷದ ಹಿಂದೆ ಶೂದ್ರ ಬೋಧಿವೃಕ್ಷ ಎಂಬ ಹೆಸರಿನ ಚಿಂತನ ಚಾವಡಿಯೊಂದನ್ನು ಆರಂಭಿಸಿದ್ದರು. ಆ ಕಾಲಕ್ಕೆ ಅದು ನಮ್ಮಲ್ಲಿ ಬೆರಗನ್ನುಂಟುಮಾಡಿತ್ತು. ಕೆಲವು ತಿಂಗಳುಗಳ ನಂತರ ಶೂದ್ರರ ಅಸಂಖ್ಯಾತ ಯೋಜನೆಗಳಂತೆ ಭೋಧಿವೃಕ್ಷವೂ ಒಣಗಿ ಒರಗಿತು. ಶೂದ್ರ ಮತ್ತೊಂದು ಹೊಸ ಆಲೋಚನೆಯೊಂದಿಗೆ ಗಾಂಧೀಬಜಾರಿನಲ್ಲಿ ಅಡ್ಡಾಡತೊಡಗಿದ್ದರು.

ಸುಮ್ಮನೆ ನೋಡುತ್ತಿದ್ದರೆ ಶೂದ್ರ ಒಂದು ಸಾಹಿತ್ಯ ಜಗತ್ತಿನ ಚೈತನ್ಯ. ಅಕಾರಣ ಖುಷಿಗೆ, ನೆಪವಿಲ್ಲದ ವಿಷಾದಕ್ಕೆ, ಬುಡವಿಲ್ಲದ ತಾತ್ವಿಕತೆಗೆ, ಬೇರಿಲ್ಲದ ಚಿಂತನೆಗೆ ಹೇಗೋ ಸಕಾರಣ ತರ್ಕಕ್ಕೂ ದಕ್ಕುವ ಹೆಸರು. ಬಹುಶಃ ಎಲ್ಲಾ ಭಾಷೆಗಳಲ್ಲೂ ಒಬ್ಬ ಶೂದ್ರ ಇರಬಹುದು. ಇಲ್ಲದೇ ಹೋದರೆ ಅದು ಅಪೂರ್ಣ ಸಾಹಿತ್ಯ ಚರಿತ್ಕೆ ಎನ್ನಿಸಿಕೊಳ್ಳುತ್ತದೆ.

5 ಟಿಪ್ಪಣಿಗಳು (+add yours?)

 1. Jogan Shankar
  ಜನ 05, 2011 @ 17:17:53

  Thanks for a very good article about Shudra Srinivas. Jogan Shankar

  ಉತ್ತರ

 2. srinivasdeshpande
  ಡಿಸೆ 01, 2010 @ 23:35:26

  Dear Mr. Jogi,

  Tumbaa sogasaad nudi haaravannu kattuttha, aapthavada bareha baredu Shoodrarannu aptharannagisidiri. Sahityada sogase yellarannu apthavaagisuvudu. chendada lekhanakke tumba thanks – Srinivas Deshpande

  ಉತ್ತರ

 3. B T Jahnavi
  ಡಿಸೆ 01, 2010 @ 18:19:02

  ನಿಜ. ಶೂದ್ರ ಎಲ್ಲಾ ಭಾಷೆಯಲ್ಲೂ ಇರಲೇಬೇಕು. ಮಗೂ ಅನ್ನುತ್ತಿದ್ದ ಆ ಕರೆ ಇದೀಗ ಕೇಳಿದಂತಾಯ್ತು. ತುಂಬಾ ಥ್ಯಾಂಕ್ಸ್ ಅವರ ಬಗ್ಗೆ ಬರೆದದ್ದಕ್ಕೆ.

  ಉತ್ತರ

 4. kanam nagaraju
  ಡಿಸೆ 01, 2010 @ 15:58:38

  nanage kudure baayindale tilidubanda maahiti prakaara innaynu shudra ishtaralle baralide! sangeeta vimarshege sambandapatta ondu shibira nadesuva yojane haakikondiddare hushaar?

  ಉತ್ತರ

 5. MADHU
  ಡಿಸೆ 01, 2010 @ 13:07:42

  thank u sir for gud informations on SHUDRA literature

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: