ಶ್ರೀಕೃಷ್ಣ ಆಲನಹಳ್ಳಿ ಬಗ್ಗೆ ವಿವೇಕ ಶಾನಭಾಗ

ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಗೆ ಅದರ ಸಂಪಾದಕ

ವಿವೇಕ ಶಾನಭಾಗ ಬರೆದ ಮಾತು ಇಲ್ಲಿದೆ

ಚಿತ್ರ: ಹರಿಪ್ರಸಾದ್ ನಾಡಿಗ್

ಪುಸ್ತಕದ ಮುಖಪುಟ ವಿನ್ಯಾಸ: ಅಪಾರ

ನಮ್ಮ ಮಹತ್ವದ ಲೇಖಕರ ಮರು ಓದು ನಮ್ಮ ಗ್ರಹಿಕೆಗಳನ್ನು ಮರುಪರಿಶೀಲಿಸಲಿಕ್ಕೆ ಅನುವು ಮಾಡಿಕೊಡುತ್ತದೆ. ಅಂತೆಯೇ ಇಂಥ ಕೃತಿಗಳನ್ನು ಆಗಾಗ ಚಚರ್ೆಯ ಮುಂಚೂಣಿಗೆ ತರುವುದು ಸಾಹಿತ್ಯ ವಾತಾವರಣದ ಒಟ್ಟಾರೆಯಾದ ಆರೋಗ್ಯಕ್ಕೆ ಕೂಡ ಬಹಳ ಅಗತ್ಯವೆಂದು ಈಗ, ಆಲನಹಳ್ಳಿಯವರ ಎಲ್ಲ ಕೃತಿಗಳನ್ನು ಮತ್ತೊಮ್ಮೆ ಓದುವ ಈ ಸಂದರ್ಭದಲ್ಲಿ ನನಗೆ ಪದೇಪದೇ ಅನಿಸಿತು. ಶ್ರೀಕೃಷ್ಣ ಆಲನಹಳ್ಳಿಯವರನ್ನು ನಾನು ಮೊದಲ ಬಾರಿಗೆ ಓದುವ ಸಮಯದಲ್ಲಿ ಅವರು ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಅವರ ಕಾಡು ಮತ್ತು ಗೆಂಡೆತಿಮ್ಮ ಚಲನಚಿತ್ರಗಳಾಗಿ ಯಶಸ್ಸನ್ನು ಪಡೆದಿದ್ದವು. ಅವರ ಸಾಹಿತ್ಯದ ಕುರಿತ ಚಚರ್ೆ ನಡೆಯುತ್ತಿದ್ದ ದಿನಗಳವು. ಹಾಗಾಗಿ ನನ್ನ ಆ ಮೊದಲನೆಯ ಓದು ಆಗ ಚಚರ್ೆಯಲ್ಲಿದ್ದ ಹಲವು ಸಂಗತಿಗಳಿಂದ ಪ್ರಭಾವಿತವಾಗಿತ್ತು. ಈಗ ಕಾಲದಲ್ಲಿ ದೂರ ನಿಂತು, ನಮ್ಮ ಸಾಹಿತ್ಯ ಮತ್ತು ಸಮಾಜ ಈವರೆಗೆ ಹಾದು ಬಂದ ದಾರಿಯನ್ನೂ ಗಮನದಲ್ಲಿಟ್ಟುಕೊಂಡು ನೋಡಿದಾಗ ಕೃಷ್ಣರ ಬರವಣಿಗೆಯು ಹೊಸ ಬೆಳಕಿನಲ್ಲಿ ಕಾಣತೊಡಗಿತು. ಈ ವಾಚಿಕೆಯ ಬರಹಗಳನ್ನು ಆರಿಸುವಾಗ ನಾನು ಈವತ್ತಿನ ಕಣ್ಣಿನಿಂದ ಕೃಷ್ಣರ ಬರವಣಿಗೆಯನ್ನು ನೋಡಲು ಪ್ರಯತ್ನಿಸಿದ್ದೇನೆ. ಇಂದಿನ ಹೊಸ ಓದುಗರಿಗೆ ಕೃಷ್ಣರ ಸಾಹಿತ್ಯದ ಒಂದು ನೋಟ ಕೊಡುವುದು ಹಾಗೂ ಅದರಲ್ಲಿ ಆಸಕ್ತಿ ಹುಟ್ಟಿಸುವುದು ನನ್ನ ಮುಖ್ಯ ಉದ್ದೇಶ.

ಆಧುನಿಕತೆಯ ಮೂಲಕ ಪ್ರಕಟವಾಗುವ ನಾಗರೀಕತೆಯ ಕೆಲವು ಅನಿವಾರ್ಯತೆಗಳು, ಮನುಷ್ಯನ ಮುಗ್ಧತೆ ಮತ್ತು ನೈತಿಕತೆಗಳ ನಡುವಿನ ಸೂಕ್ಷ್ಮ ಸಂಬಂಧ – ಇವೆರಡೂ ಕೃಷ್ಣರನ್ನು ಆಳವಾಗಿ ಕಾಡಿದ ವಸ್ತುಗಳು. ಅವರ ಗದ್ಯಬರಹಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾದಂಬರಿಗಳಲ್ಲಿ ಇವು ಪದೇಪದೇ ಮುನ್ನೆಲೆಗೆ ಬರುತ್ತವೆ. ಅಭಿವೃದ್ಧಿಯ ಕುರಿತ ನಮ್ಮ ವಿಚಾರಗಳನ್ನೇ ನಾವು ಪರೀಕ್ಷೆಗೊಳಪಡಿಸುವ ಅಗತ್ಯವಿರುವ ಇಂದಿನ ದಿನಗಳಲ್ಲಿ ಈ ವಸ್ತುಗಳು ಅತ್ಯಂತ ಪ್ರಸ್ತುತವಾಗಿ ಕಾಣುವುದು ಸಹಜವಾಗಿದೆ. ಸಮುದಾಯಗಳು ತಮ್ಮ ಉಳಿವಿಗಾಗಿ ನಂಬಿಕೆ, ಶ್ರದ್ಧೆ ಮತ್ತು ನಿಯಮಗಳನ್ನು ರೂಪಿಸಿಕೊಳ್ಳುವುದನ್ನು ಮತ್ತು ಇಂಥ ವ್ಯವಸ್ಥೆಯ ಒಡಲಿನಿಂದಲೇ ಅವುಗಳನ್ನು ಪ್ರಶ್ನಿಸುವ, ಮೀರುವ ಶಕ್ತಿಗಳು ಹುಟ್ಟುವ ಪ್ರಕ್ರಿಯೆಯನ್ನು ಕೃಷ್ಣ ತಮ್ಮ ಕಾದಂಬರಿಗಳಲ್ಲಿ ಬಹಳ ಸೂಕ್ಷ್ಮಜ್ಞತೆಯಿಂದ ಚಿತ್ರಿಸಿದ್ದಾರೆ. ಬದಲಾವಣೆಯೆಂಬುದು ಮನುಷ್ಯನ ಒಳಗಿನದೇ, ಅಥವಾ ಹೊರಗಿನಿಂದ ಬಂದು ಅಪ್ಪಳಿಸುವುದೇ ಎಂಬ ಪ್ರಶ್ನೆಗಳನ್ನೆತ್ತಿಕೊಂಡು ಇದರ ಹಿಂದಿರುವ ವ್ಯಕ್ತಿಕೇಂದ್ರಿತ ತುಡಿತಗಳನ್ನೂ ಪರೀಕ್ಷಿಸಿದ್ದಾರೆ. ಪೇಟೆಯ ಯಾವುದೋ ಒಂದು ವಸ್ತುವೋ, ಆಚಾರವೋ ಇನ್ನೊಂದೋ ಬಂದು ಹಳ್ಳಿಗಳನ್ನು ಕಲಕುವುದಿಲ್ಲ; ಬದಲಿಗೆ ಬದಲಾವಣೆಗೆ ತುಡಿಯುವ ಮನಸ್ಸುಗಳಿಗೆ ಅವೆಲ್ಲ ವೇಗವರ್ಧಕವಾಗುತ್ತವೆ ಎಂಬುದು ಅವರ ಬರಹಗಳಲ್ಲಿ ಸೂಚಿತವಾಗಿದೆ. ಹಾಗಾಗಿ ಯಾವುದೇ ಬದಲಾವಣೆಯನ್ನು ಚಿತ್ರಿಸುವಾಗ ಕೃಷ್ಣ ಯಾರೊಬ್ಬರ ಪರವಾಗಿಯೋ ವಿರೋಧವಾಗಿಯೋ ನಿಂತು ಎಲ್ಲವನ್ನೂ ನೋಡುತ್ತಿದ್ದಾರೆ ಅನಿಸುವುದಿಲ್ಲ. ಇದು ಅವರ ಗದ್ಯ ಬರಹಗಳಲ್ಲಿ, ಮುಖ್ಯವಾಗಿ ಕಾದಂಬರಿಗಳಲ್ಲಿ, ಕಂಡುಬರುವ ನಿಲುವು. ಇದು ಅತ್ಯುತ್ತಮವಾಗಿ ಸಾಧ್ಯವಾಗಿರುವುದು `ಪರಸಂಗದ ಗೆಂಡೆತಿಮ್ಮ ಕಾದಂಬರಿಯಲ್ಲಿ. ಈ ಕೃತಿ ಅವರ ಬರವಣಿಗೆಯ ಅತ್ಯುತ್ತಮ ಮಾದರಿಯೆಂದು ನನಗೆ ತೋರುತ್ತದೆ.

ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ಬಂಡಾಯ ಎರಡೂ ಚಳುವಳಿಗಳು ಉತ್ತುಂಗದಲ್ಲಿರುವಾಗಲೇ ಕೃಷ್ಣ ತಮ್ಮ ಬರವಣಿಗೆಯಲ್ಲಿ ಕ್ರಿಯಾಶೀಲವಾಗಿದ್ದರು ಮತ್ತು ತಮ್ಮ ಉತ್ತಮ ಕೃತಿಗಳನ್ನು ರಚಿಸಿದರು. ವೈಯಕ್ತಿಕವಾಗಿ ಎರಡೂ ಚಳುವಳಿಗಳ ಜೊತೆ ಅವರಿಗೆ ಗಾಢವಾದ ಸಂಪರ್ಕವಿತ್ತು. ಆದರೆ ಅವರ ಬರವಣಿಗೆ ಮಾತ್ರ ಈ ಯಾವೊಂದೂ ಚಳುವಳಿಯ ಪ್ರಾತಿನಿಧಿಕ ಗುಣಗಳನ್ನು ಪಡೆದಿರಲಿಲ್ಲ. ಸಾಹಿತ್ಯಕೃತಿಯೊಂದು ವೈಚಾರಿಕವಾದ ಅನುಭವವೂ ಕೂಡ ಆಗಿ ನಿಜವಾಗಬೇಕೆಂಬುದರತ್ತ ನವ್ಯದ ಮುಖ್ಯ ಬರಹಗಾರರು ದೃಷ್ಟಿ ಇಟ್ಟಿದ್ದರು. ಬರಿದೇ ಒಂದು ಕತೆಯನ್ನೋ ಕವಿತೆಯನ್ನೋ ಇಷ್ಟಪಟ್ಟರೆ ಸಾಲದು; ಯಾಕೆ ಇಷ್ಟವಾಯಿತು ಅನ್ನುವ ಪ್ರಶ್ನೆಯನ್ನು ಕೂಡ ಓದುಗ ಕೇಳಿಕೊಳ್ಳಬೇಕೆಂಬುದು ಆ ಕಾಲದ ಒಂದು ಸುಪ್ತ ಒತ್ತಾಯವಾಗಿದ್ದರಿಂದಲೇ, ಕೃತಿಯ ವೈಚಾರಿಕ ಅನುಭವದತ್ತ ವಿಮಶರ್ಾವಲಯ ಲಕ್ಷ್ಯ ಕೊಡತೊಡಗಿತು. ನಂತರದ ಬಂಡಾಯ ಚಳುವಳಿಯು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿದ್ದರಿಂದ, ಸಾಮಾಜಿಕ ಪ್ರಸ್ತುತತೆಯ ಪ್ರಶ್ನೆಗಳು ಸಾಹಿತ್ಯಕೃತಿಯ ವೈಚಾರಿಕ ಅನುಭವದ ಭಾಗವಾದವು. ಅಂದರೆ, ಬಂಡಾಯ ಚಳುವಳಿಯಿಂದಾಗಿ ಹೊಸ ಅನುಭವಲೋಕ, ಹೊಸ ಬಗೆಯ ಬರವಣಿಗೆ ಬರತೊಡಗಿತೇ ಹೊರತು ಮೂಲಭೂತವಾಗಿ ಸೃಜನಶೀಲ ಬರವಣಿಗೆಯನ್ನು ನೋಡುವ ಕ್ರಮ ನವ್ಯಕ್ಕಿಂತ ಬೇರೆಯಾಗಿರಲಿಲ್ಲ. ಆದರೆ ಕೃಷ್ಣ ಮಾತ್ರ ಇದರಿಂದ ಭಿನ್ನವಾಗಿ, ಎದೆಯಿಂದ ಎದೆಗೆ ಅನುಭವವನ್ನು ದಾಟಿಸುವಲ್ಲಿ ನಂಬಿಕೆಯಿಟ್ಟವರು. ಅನುಭವಗಳ ಅರ್ಥಶೋಧನೆಗಿಂತ ಹೆಚ್ಚಾಗಿ, ಬೌದ್ಧಿಕ ಠರಾವುಗಳನ್ನು ಕೃತಿಯಾಗಿಸುವುದಕ್ಕಿಂತ ಹೆಚ್ಚಾಗಿ ಅನುಭವಗಳನ್ನು ಅದರ ಸಂಪೂರ್ಣ, ಸಂಕೀರ್ಣ ಸ್ವರೂಪದಲ್ಲಿ ಓದುಗರಿಗೆ ದಾಟಿಸುವುದರತ್ತ ಅವರ ಲಕ್ಷ್ಯವಿದೆ. ವಿಶ್ಲೇಷಣೆಯ ಒತ್ತಾಯವನ್ನು ಅವರು ಓದುಗರ ಮೇಲೆ ಹೇರುವವರಲ್ಲ. ಈ ಗುಣದಿಂದಾಗಿ ಬಹುಶಃ ಅವರನ್ನು ನವ್ಯಕ್ಕಾಗಲೀ ಬಂಡಾಯಕ್ಕಾಗಲೀ ಪೂರ್ಣವಾಗಿ ಸೇರಿಸುವುದು ಸಾಧ್ಯವಾಗಲಿಲ್ಲ. ಆದರೆ ಸಾಹಿತ್ಯ ಸಲಕರಣೆಗಳ ಮಟ್ಟಿಗೆ ಹೇಳುವದಾದರೆ, ಅವರು ನವ್ಯಮಾರ್ಗದಿಂದ ಪ್ರಭಾವಿತರಾದರು ಹಾಗೂ ಎಲ್ಲ ಮುಖ್ಯಧಾರೆಗಳಿಂದಲೂ ತಮಗೆ ಅಗತ್ಯವಾದ ಕೌಶಲ್ಯವನ್ನು ಪಡೆದರು. ಆದ್ದರಿಂದಲೇ ವಾಸ್ತವವಾದಿ ಮಾರ್ಗವನ್ನು ತುಳಿದಾಗಲೂ ಅವರು ಭಾವೋದ್ವೇಗದ ಬರವಣಿಗೆಯನ್ನು ಮಾಡಲಿಲ್ಲ. ಹಳ್ಳಿಗಳ ಪ್ರಪಂಚವನ್ನು ಬಿಚ್ಚಿಟ್ಟಾಗಲೂ ಘೋಷಣೆಗಳ ನೆರಳಿನಲ್ಲಿ ನಿಲ್ಲಲಿಲ್ಲ. ಇದು ಅವರ ಎಲ್ಲ ಕಾದಂಬರಿಗಳ ಮಟ್ಟಿಗೆ ಹೇಳಬಹುದಾದ ಮಾತು. ಆದರೆ ಕೆಲವು ಕತೆಗಳಲ್ಲಿ ಮಾತ್ರ ಅವರು ವೈಚಾರಿಕ ಅನುಭವವನ್ನೂ ಸೃಷ್ಟಿಸಲು ಪ್ರಯತ್ನಿಸಿ ಸೋತಿದ್ದಾರೆ. ಆದ್ದರಿಂದ ಅದು ಅವರ ಚೇತನಕ್ಕೆ ಸಹಜವಾದುದಲ್ಲವೆಂದೇ ತೋರುತ್ತದೆ.

ಕತೆ, ಕವಿತೆ ಹಾಗೂ ಕಾದಂಬರಿ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಕೃಷ್ಣ ಈ ಮೂರರಲ್ಲೂ ವಿಭಿನ್ನವಾದ ಅನ್ವೇಷಣೆಗಳನ್ನು ಮಾಡಿದ್ದಾರೆ. ಪ್ರತಿ ಪ್ರಕಾರದ ಶಕ್ತಿಮಿತಿಗಳನ್ನು ಅರಿತು ಅವುಗಳ ಮೂಲಕ ತಮ್ಮ ಅನುಭವಗಳನ್ನು ಓದುಗನಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ. ಅವರ ಮುಖ್ಯ ಕಾಳಜಿಗಳು ತೀರಾ ಭಿನ್ನವಾಗಿರದಿದ್ದರೂ ಈ ಒಂದೊಂದು ಪ್ರಕಾರಗಳಲ್ಲಿಯೂ ಅವರು ವಸ್ತುಗಳನ್ನು ಕಾಣುವ ತೀವ್ರತೆ ಬೇರೆಬೇರೆಯಾಗಿರುವಂತೆ ತೋರುತ್ತದೆ.

*

*

*

ಕೃಷ್ಣರ ಕಾಡು ಕಾದಂಬರಿಯು ಅದರ ಕಥಾನಾಯಕ ಕಿಟ್ಟಿಯೆಂಬ ಸಣ್ಣ ಹುಡುಗನ ಮೂಲಕ ನಿರೂಪಿತವಾಗಿದೆ. ತನ್ನ ಸುತ್ತಲಿನ ಪ್ರಪಂಚದಲ್ಲಿ ನಡೆಯುವ ಕ್ರೌರ್ಯ ಕಿಟ್ಟಿಯ ಅನುಭವಲೋಕವನ್ನು ಪ್ರವೇಶಿಸುವ ಬಗೆ, ಇದರಿಂದಾಗಿ ಅವನ ಅರಿವಲ್ಲಿ ಮೂಡುವ ಸಮಾಜ-ವ್ಯಕ್ತಿಗಳ ನಡುವಿನ ಸಂಬಂಧದ ತೊಡಕುಗಳು ಅತ್ಯಂತ ಚಿತ್ರವತ್ತಾಗಿ ನಿರುದ್ವೇಗದಿಂದ ಇಲ್ಲಿ ಚಿತ್ರಿತವಾಗಿವೆ. ಕಿಟ್ಟಿಯ ಮುಗ್ಧತೆಯು ಲೇಖಕರಿಗೆ ಹಲವು ಸವಲತ್ತುಗಳನ್ನು ಕೊಟ್ಟಿದೆ. ಮುಖ್ಯವಾಗಿ, ವಸ್ತುಸ್ಥಿತಿಯ ನಿರೂಪಣೆಯ ಆಚೆ ಹೋಗಿ ಯಾವುದನ್ನೂ ಪ್ರಶ್ನಿಸುವ ಅಥವಾ ವಿಶ್ಲೇಷಿಸುವ ತುತರ್ು ನಿರೂಪಕನಿಗಿಲ್ಲ. ಇರುವುದನ್ನು ತೋರಿಸುವುದರ ಹೊರತು ಅದನ್ನು ಸಂಘರ್ಷದಲ್ಲಿ ಎದುರಾಗುವ ಅಗತ್ಯ ಅದರ ನಿರೂಪಣೆಯ ಕ್ರಮದಲ್ಲಿಯೇ ಇಲ್ಲ. ಹಾಗಾಗಿ ಯಾವುದೇ ಒಂದು ನಿಲುವು ತೆಗೆದುಕೊಂಡು ಘಟನೆಗಳನ್ನು ನೋಡಬೇಕಾದ ಒತ್ತಾಯವಿಲ್ಲ. ಉದಾಹರಣೆಗೆ, ಈ ವಾಚಿಕೆಯಲ್ಲಿ ಆರಿಸಲಾಗಿರುವ ಭಾಗದಲ್ಲಿ ಚಿತ್ರಿತವಾಗಿರುವ ಊರಿನ ಚಾವಡಿನ್ಯಾಯದ ಘಟನೆಯನ್ನು ನೋಡಬಹುದು. ಇಲ್ಲಿ ಚಂದ್ರೇಗೌಡರ ವಿರುದ್ಧ ದನಿ ಎತ್ತಿದ ಕೆಂಚನನ್ನು ಹಣಿಯುವುದು, ಒಳಗೆ ಹುಳುಕು ಇಟ್ಟುಕೊಂಡ ಜನ ಊರಿಗೆ ಉಪದೇಶ ಕೊಡುವುದು ಇತ್ಯಾದಿಗಳ ಬಗ್ಗೆ ಯಾವ ಖಂಡಿತ ನಿಲುವುಗಳನ್ನೂ ನಿರೂಪಕ ತಳೆಯುವುದಿಲ್ಲ. ಇಡೀ ಕಾದಂಬರಿಯನ್ನು ಕಿಟ್ಟಿಯ ಕಣ್ಣಿನಿಂದ ನೋಡಿದ್ದರಿಂದಲೇ ಇದು ಸಾಧ್ಯವಾಗಿದೆ. ಇಂಥ ಸಂರಚನೆ ಮತ್ತು ದೃಷ್ಟಿಕೋನವು ಅರವತ್ತರ ದಶಕದಲ್ಲಿ ಪ್ರಕಟವಾದ ಯು.ಆರ್.ಅನಂತಮೂತರ್ಿಯವರ `ಘಟಶ್ರಾದ್ಧ ಕತೆಯನ್ನು ನೆನಪಿಸುತ್ತದೆ. ಈ ಎರಡು ಕೃತಿಗಳ ಹೋಲಿಕೆಯ ಅಧ್ಯಯನವು ಹೊಸ ಒಳನೋಟಗಳನ್ನು ಕೊಡಬಲ್ಲದು.

ಗೋಡೆ ಕೃಷ್ಣರ ಕಾದಂಬರಿಗಳಲ್ಲಿ ಕೊನೆಯದು. ತನ್ನಷ್ಟಕ್ಕೇ ಸ್ವತಂತ್ರವಾದ ಕೃತಿಯಾಗಿದ್ದರೂ ಇದನ್ನು ಕಾಡು ಕಾದಂಬರಿಯ ಮುಂದುವರಿದ ಭಾಗವೆಂದೂ ಸಹ ನೋಡಬಹುದು. `ಕಾಡು ಕೃತಿಯ ಪಾತ್ರಗಳು ಮತ್ತು ಕಥೆ ಇಲ್ಲಿ ಮುಂದುವರಿದಿದೆ. ಇಲ್ಲಿಯೂ ಕತೆ ಕಿಟ್ಟಿಯ ದೃಷ್ಟಿಯಿಂದಲೇ ನಿರೂಪಿತವಾಗಿದೆ. ಒಟ್ಟಾರೆಯಾಗಿ ನೋಡಿದರೆ ಅನುಭವದ ನಿರೂಪಣೆಯಲ್ಲಾಗಲೀ, ಕಿಟ್ಟಿಯ ಅರಿವಿನಲ್ಲಿ ಜಗತ್ತು ಮೂಡುವ ಬಗೆಯಲ್ಲಾಗಲೀ ಈ ಕೃತಿ ಕಾಡುಗಿಂತ ತುಂಬ ಭಿನ್ನವಾಗಿಲ್ಲ. ಆದರೆ ಇದಕ್ಕೆ ಕಾಡು ಕೃತಿಗೆ ದೊರೆತ ಓದುಗರ ಮನ್ನಣೆ, ವಿಮಶರ್ೆ ದೊರಕಲಿಲ್ಲ. `ಗೋಡೆ ಪ್ರಕಟವಾಗುವ ವೇಳೆಗೆ ಬದಲಾದ ಸಾಮಾಜಿಕ ಸ್ಥಿತಿಗತಿಗಳು ಕೂಡ ಈ ಬಗೆಯ ತಣ್ಣನೆಯ ಪ್ರತಿಕ್ರಿಯೆಗೆ ಕಾರಣವಿರಬಹುದು. ಪ್ರಸ್ತುತ ಪುಸ್ತಕದಲ್ಲಿ ಸೇರಿಸಲಾಗಿರುವ ಭಾಗದಲ್ಲಿ ಕಿಟ್ಟಿಯು ಕಾಣುವ ಕನಸಿದೆ. ಸರಳವೂ ಸುಂದರವೂ ಆದ ಕನಸಿನಲ್ಲಿ ಕಿಟ್ಟಿಯ ಇಂಗಿತವೆಂದರೆ ಆದಷ್ಟು ಬೇಗ ಬೆಳೆದು ದೊಡ್ಡವರ ಜಗತ್ತಿನಲ್ಲಿ ಸೇರಬೇಕೆನ್ನುವುದು. ಇದೇ ಅಧ್ಯಾಯದ ಎರಡನೆಯ ಭಾಗದಲ್ಲಿ ಕಿಟ್ಟಿ ಮೇಷ್ಟ್ರ ಮನೆಗೆ ಹೋಗುವ ದೃಶ್ಯವಿದೆ. ಇಲ್ಲಿ ಪ್ರಕಟವಾಗಿರುವ ಕೆಲವು ಸೂಕ್ಷ್ಮಗಳು ಲಂಕೇಶರ `ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆಯನ್ನು ನೆನಪಿಗೆ ತರುತ್ತವೆ.

ಕೃಷ್ಣರ ಸೃಜನಶೀಲತೆಯ ಅತ್ಯುತ್ತಮ ಉದಾಹರಣೆಯಂತಿರುವ `ಪರಸಂಗದ ಗೆಂಡೆತಿಮ್ಮ ಕೂಡ ಗೆಂಡೆತಿಮ್ಮನ ಮುಗ್ಧ ಕಣ್ಣಿನಿಂದ ನಿರೂಪಿತವಾಗಿದೆ. ಗೆಂಡೆತಿಮ್ಮ ಆಧುನಿಕತೆಯ ವಾಹಕವಾಗಿ ಕಂಡುಬಂದರೂ ಸಹ ಅವನು ಆಧುನಿಕನಲ್ಲ. ಪೇಟೆಯವನಲ್ಲ. ಹಾಗಾಗಿ ಅವನ ಸಂಕಟಗಳನ್ನು ಅವನೇ ಮುಗ್ಧನಾಗಿ ಸೋಜಿಗದಿಂದ ನೋಡಬಲ್ಲ. ಹೀಗೆ ಈ ಕಾದಂಬರಿಯು ಆಧುನಿಕತೆಯನ್ನು ನೋಡುವ ಕ್ರಮವೇ ವಿಶಿಷ್ಟವಾಗಿದೆ. ಮರಂಕಿ, ಅವಳ ಅತ್ತೆ ಬೇದಿಯಮ್ಮ, ಗೆಂಡೆತಿಮ್ಮ – ಎಲ್ಲರೂ ಅವರವರ ಲೋಕದ ಮಟ್ಟಿಗೆ ಸರಿಯೇ. ಇಲ್ಲಿ ಮನಕಲಕುವ ದುರಂತವಿದ್ದಾಗಲೂ ಯಾರನ್ನೂ ಅದಕ್ಕೆ ದೂಷಿಸುವುದು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಕೃಷ್ಣ ಸಮತೂಕದಿಂದ ಈ ಬದುಕನ್ನು ಚಿತ್ರಿಸಿದ್ದಾರೆ. ಯಾವುದೇ ಬದಲಾವಣೆಯ ಕಾಲದಲ್ಲಿ ಹುಟ್ಟುವ ನೈತಿಕ ಬಿಕ್ಕಟ್ಟುಗಳು ಇಲ್ಲಿಯ ದುರಂತಕ್ಕೆ ಕಾರಣವಾಗಿವೆ. ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡದೇ ಇರುವುದರ ಮೂಲಕ ಬದಲಾವಣೆಯ ಅನಿವಾರ್ಯತೆಯನ್ನು ಕೃಷ್ಣ ಒತ್ತಿ ಹೇಳುತ್ತಿದ್ದಾರೆ. ಕಾಲಾತೀತವಾದ ಇಂಥ ನೈತಿಕ ಬಿಕ್ಕಟ್ಟನ್ನು ಕೇಂದ್ರದಲ್ಲಿರಿಸಿಕೊಂಡಿರುವುದರಿಂದಲೇ, ಒಂದು ಕುಗ್ರಾಮದಲ್ಲಿ ದಶಕಗಳ ಹಿಂದೆ ಘಟಿಸುವ ಕಥಾವಸ್ತುವನ್ನು ಹೊಂದಿದ್ದರೂ ಸಹ, ಈ ಕಾದಂಬರಿಯು ಈವತ್ತಿಗೂ ಅತ್ಯಂತ ಪ್ರಸ್ತುತವೆನಿಸುತ್ತದೆ. ಈ ಕಾದಂಬರಿಯ ಯಶಸ್ಸಿಗೆ, ಜನಪ್ರಿಯತೆಗೆ, ಕನ್ನಡದಲ್ಲಿ ಮಾತ್ರವಲ್ಲ ಇತರ ಭಾರತೀಯ ಭಾಷೆಗಳಲ್ಲಿಯೂ ಅನುವಾದ ಹೊಂದಿ ಪಡೆದ ಪ್ರಖ್ಯಾತಿಗೆ, ನಗರಪ್ರಜ್ಞೆಯ ಓದುಗವರ್ಗವನ್ನೂ ಆಕಷರ್ಿಸಿರುವುದಕ್ಕೆ ಈ ಗುಣವೂ ಕಾರಣವಾಗಿದೆ. ನಗರದೊಳಗಿನ ಬದುಕೂ ಸಹ ಬದಲಾವಣೆಯನ್ನು ಸತತವಾಗಿ ನಿರ್ವಹಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ಮನಸ್ಸಿನ ಸಂಕಟಗಳು ಹಾಗೂ ಸಂಬಂಧಗಳಲ್ಲಿ ಹುಟ್ಟುವ ಒತ್ತಡಗಳು ಹಳ್ಳಿಗಳಿಗಿಂತ ಭಿನ್ನವಲ್ಲ. ಹಾಗಾಗಿ ಗೆಂಡೆತಿಮ್ಮ ಕಾದಂಬರಿಯು ಯಾವದೇ ಕಾಲದ, ಯಾವುದೇ ಸಮಾಜದ ಓದುಗನನ್ನಾದರೂ ತಕ್ಷಣ ಆಕಷರ್ಿಸುತ್ತದೆ. ಈ ವಾಚಿಕೆಯಲ್ಲಿ ಸೇರಿಸಿರುವ ಭಾಗವು ಚಾವಡಿನ್ಯಾಯದ ಸಂದರ್ಭವನ್ನು ಕುರಿತಾಗಿದೆ. ಇಲ್ಲಿ ವಿರೋಧಾಭಾಸಗಳು, ನೈತಿಕ ಗೊಂದಲಗಳು ಮತ್ತು ವಸ್ತುಪ್ರಪಂಚದ ಆಧುನಿಕತೆಯು ಮನೋರಂಗದಲ್ಲಿ ಎಬ್ಬಿಸುವ ಕೋಲಾಹಲಗಳು, ಸಮೂಹ ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳು ಬಹು ಶಕ್ತಿಶಾಲಿಯಾಗಿ ಚಿತ್ರಿಸಲ್ಪಟ್ಟಿವೆ. ಇದನ್ನು ಅವರ ಅತ್ಯುತ್ತಮ ಸೃಜನಶೀಲ ಕೃತಿಯೆನ್ನಬಹುದು.

ಕೃಷ್ಣರ ಮಹತ್ವಾಕಾಂಕ್ಷಿ ಕೃತಿಯಾದ `ಭುಜಂಗಯ್ಯನ ದಶಾವತಾರಗಳು ವ್ಯಕ್ತಿ-ಸಮಾಜ-ನೈತಿಕತೆಗಳ ನಡುವಿನ ಸಂಬಂಧವನ್ನು ಆಧುನಿಕತೆಯ ಪ್ರವೇಶದ ಹಿನ್ನೆಲೆಯಲ್ಲಿ ಪರೀಕ್ಷಿಸುತ್ತದೆ. ಇದು ಹೊಸ ಮೌಲ್ಯಗಳ ಸ್ವೀಕಾರದಲ್ಲಿ ಪರಸಂಗದ ಗೆಂಡೆತಿಮ್ಮ ಕಾದಂಬರಿಗಿಂತ ಕಾಲದಲ್ಲಿ ಮುಂದೆ ಇರುವ ಕೃತಿ. ಹೊಸದನ್ನು ಸ್ವೀಕರಿಸುವ ಆದರೆ ನೈತಿಕ ಎಚ್ಚರವನ್ನು ಕಳೆದುಕೊಳ್ಳದೇ ಹೊಸದನ್ನು ನಿಭಾಯಿಸುವ ಭುಜಂಗಯ್ಯ ಹಲವು ಸಂದಿಗ್ಧಗಳನ್ನು ಪ್ರತಿನಿಧಿಸುತ್ತಾನೆ. ಅವನ ಜೀವನದ ಕೊನೆಯ ದಿನಗಳು ತುಸು ಅತಿಭಾವುಕವಾಗಿ ಚಿತ್ರಿತವಾಗಿರುವುದರಿಂದ ಕಾದಂಬರಿಯ ಒಟ್ಟೂ ಅನುಭವಕ್ಕೆ ಕುಂದುಂಟಾಗುತ್ತದೆ. ಈ ವಾಚಿಕೆಯಲ್ಲಿರುವ ಭಾಗವು ಭುಜಂಗಯ್ಯನು ಹೊಸ ಅವಕಾಶಗಳನ್ನು ಕಂಡುಕೊಳ್ಳುವ ಬಗೆಯನ್ನು, ಅವನ ಸಾಹಸೀ ಪ್ರವೃತ್ತಿಯನ್ನು ಸೂಚಿಸುವ ಪಠ್ಯವಾಗಿದೆ.

ಮುಗ್ಧತೆಯ ಹಲವು ಆಯಾಮಗಳನ್ನು ಕೃಷ್ಣ ತಮ್ಮೆಲ್ಲ ಕಾದಂಬರಿಗಳಲ್ಲೂ ನಿರ್ವಹಿಸಿದ್ದಾರೆ. ಅದು ನಿರೂಪಕನ ದೃಷ್ಟಿಕೋನವಿರಬಹುದು ಅಥವಾ ಪಾತ್ರಗಳ ಸಂವೇದನೆಯಲ್ಲಿರಬಹುದು – ಅವರಿಗೆ ಈ ಮುಗ್ಧತೆ ಮತ್ತು ನೈತಿಕತೆಗಳ ನಡುವಿನ ಸಂಬಂಧ ಬಹು ಮುಖ್ಯವಾಗಿ ಕಂಡಿದೆ. ಬದುಕಿನಲ್ಲಿ ಆಧುನಿಕತೆಯ ಪ್ರವೇಶವನ್ನು ಮುಖ್ಯ ಕಥಾವಸ್ತುವಾಗಿ ನಿರ್ವಹಿಸುವ ಬರಹಗಾರ ಈ ಸಂಬಂಧವನ್ನು ನಿರ್ಲಕ್ಷಿಸಲಾರ. ಭಾರತದ ಗ್ರಾಮಸಮಾಜವು ಆಧುನಿಕತೆಯ ಉದಯಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣರ ಕಾದಂಬರಿಗಳನ್ನು ಅಭ್ಯಾಸ ಮಾಡುವುದು ಈ ನಿಟ್ಟಿನ ಚಿಂತನೆಗೆ ಹೊಸ ಆಯಾಮಗಳನ್ನು ಕೊಟ್ಟೀತು.

*

*

*

ಕೃಷ್ಣರ ಆರಂಭದ ಕವಿತೆಗಳು ಅವುಗಳ ರಭಸ, ಭಾಷೆಯ ಸೊಕ್ಕು ಮತ್ತು ಅನುಭವಗಳ ದಿಟ್ಟ ನಿರೂಪಣೆಯಿಂದ ಗಮನ ಸೆಳೆದವು. ಆದರೆ ಇದೇ ಬಗೆಯ ಅನುಭವಗಳ ಅನ್ವೇಷಣೆ ಆ ಕಾಲದ ಗದ್ಯದಲ್ಲಿ ಹೆಚ್ಚು ಪ್ರಭಾವಿಯೂ ನೇರವೂ ಆಗಿದ್ದರಿಂದ ಅವರ ಕಾವ್ಯ ಮೊದಲ ಸಂಕಲನದ ನಂತರ ಅಂಥ ವಿಶೇಷ ಪರಿಣಾಮ ಬೀರಲಿಲ್ಲ. ಮೊದಲ ಸಂಕಲನದಲ್ಲಿ ಅವರ ಕಾವ್ಯಭಾಷೆಗಿರುವ ಲವಲವಿಕೆ ಮತ್ತು ಕೆಲವು ರೂಪಕಗಳ ಹೊಸತನ ಅವರ ಮುಂದಿನ ಸಂಕಲನಗಳಲ್ಲಿ ಅಷ್ಟು ಢಾಳಾಗಿ ಕಾಣಲಿಲ್ಲ. ತಾರುಣ್ಯದ ಚಿತ್ರಗಳನ್ನೂ ರಭಸವನ್ನೂ ಹಿಡಿದಿಡಲು ಯೋಗ್ಯವಾದಂಥ ನುಡಿಗಟ್ಟು ಅವರಿಗೆ ಅನಾಯಾಸವಾಗಿ ಒದಗಿ ಬಂದಂತೆ, ನಂತರದ ಅನುಭವಗಳ ಬಗ್ಗೆ ಬರೆಯುವಾಗ ಈ ಅದೃಷ್ಟ ಒಲಿದಿಲ್ಲ ಅನಿಸುತ್ತದೆ. ಬಹುಶಃ ಈ ಕೆಲವು ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲೆಂಬಂತೆ ಅವರು ಡೋಗ್ರಾಪಹಾಡಿ ಪ್ರೇಮಗೀತೆಗಳನ್ನು ಅನುವಾದಿಸಿದರು. ಅನುವಾದವು ಲೇಖಕನಿಗೆ ಕೊಡುವ ತರಬೇತಿಯು ಬಹಳ ಮಹತ್ವದ್ದು. ಅದರಲ್ಲೂ ಅನುಭವಗಳಲ್ಲಿ, ಲೋಕದೃಷ್ಟಿಯಲ್ಲಿ ಸಾಮ್ಯವಿರುವ ಬರಹಗಳ ಅನುವಾದವು ಅನುವಾದಕನಿಗೆ ತನ್ನ ಭಾಷೆಯಲ್ಲಿಯೇ ಹೊಸ ಪ್ರವೇಶವನ್ನು ಕೊಡುತ್ತದೆ. ಕಾಶ್ಮೀರ ಗಿರಿಕೊಳ್ಳದ ಜನರ ಗೀತೆಗಳ ಅನುವಾದಗಳನ್ನು ಮಾಡಿದಾಗ ಕೃಷ್ಣರ ಮನಸ್ಸಿನಲ್ಲಿ ಈ ಎಲ್ಲವೂ ಕೆಲಸ ಮಾಡಿರಬಹುದು. ಆದರೆ ಇದರ ಫಲ ಸ್ಪಷ್ಟವಾಗಿ ಕಾಣುವ ಮುನ್ನವೇ ಕೃಷ್ಣ ನಮ್ಮನ್ನು ಅಗಲಿದರು. ಇಲ್ಲಿ ಆಯ್ಕೆಯಾಗಿರುವ ಕವಿತೆಗಳು ಅವರ ಕಾವ್ಯಜೀವನದ ಹಲವು ಮಜಲುಗಳನ್ನು ಸೂಚಿಸುತ್ತವೆ.

*

*

*

ಗಂಡು-ಹೆಣ್ಣಿನ ಸಂಬಂಧಗಳ ಅನ್ವೇಷಣೆಯು ಕೃಷ್ಣರ ಕತೆಗಳ ಪ್ರಧಾನ ಧಾರೆಯೆಂದು ಗುರುತಿಸಲ್ಪಟ್ಟಿದೆ. ಆದರೆ ಇದನ್ನು ಹಳ್ಳಿಯಿಂದ ನಗರಕ್ಕೆ ಬಂದ ಕಥಾನಾಯಕನ ತಳಮಳಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡೇ ನೋಡಬೇಕು. ಅವರ ಬಹುತೇಕ ಕಥೆಗಳ ನಾಯಕರು ಈ ಬಗೆಯ ತೊಳಲಾಟಗಳನ್ನು ಹೊಂದಿದವರು. ಸಂಬಂಧಗಳಲ್ಲಿ ಹುಟ್ಟುವ ಆಯ್ಕೆಯ ಪ್ರಶ್ನೆಯು ನಗರಕ್ಕೆ ವಲಸೆ ಬಂದುದರಿಂದ ದೊರಕಿದ ಹೊಸ ಅನುಭವ, ಶಿಕ್ಷಣ ಇತ್ಯಾದಿಗಳಿಂದ ಹುಟ್ಟಿರುವುದು. ಆಧುನಿಕತೆಯು ಹಳ್ಳಿಗಳನ್ನು ಪ್ರವೇಶಿಸಿದಾಗ ಉಂಟುಮಾಡುವ ಪಲ್ಲಟಗಳನ್ನು ಅವರು ಕಾದಂಬರಿಗಳಲ್ಲಿ ಶೋಧಿಸಿದರೆ, ಕಥೆಗಳಲ್ಲಿ ಹಳ್ಳಿಯ ಹಿನ್ನೆಲೆಯ ಕಥಾನಾಯಕನು ನಗರದ ಬದುಕಿನ ಜೊತೆ ಮಾಡಬೇಕಾದ ಹೋರಾಟಗಳನ್ನು, ತಳಮಳಗಳನ್ನು ಶೋಧಿಸುತ್ತಾರೆ. ಇವೆರಡೂ ಒಳನೋಟಗಳು ಒಂದಕ್ಕೊಂದು ಪೂರಕವಾದವುಗಳೇ. ಆಧುನಿಕತೆಯ ಮೂಲಕ ನಗರದ ಮೌಲ್ಯಗಳು ಹಳ್ಳಿಗಳನ್ನು ಪ್ರವೇಶಿಸಿದ ಹಾಗೆಯೇ, ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರು ತಮ್ಮ ಜೊತೆ ಹಳ್ಳಿಯ ಬದುಕಿನ ತುಣುಕನ್ನೂ ತಂದಿರುತ್ತಾರೆ. ಇವೆರಡನ್ನೂ ಕೃಷ್ಣ ಜೊತೆಯಾಗಿ ಗ್ರಹಿಸಿರುವುದರಿಂದ ಅವರ ಮುಖ್ಯ ಕಾಳಜಿಯಾದ ಆಧುನಿಕತೆಯ ಅನಿವಾರ್ಯತೆಯು ಅವರ ಬರಹಗಳಲ್ಲಿ ಸಮಗ್ರವಾಗಿ ಮೂಡಿಬಂದಿದೆ.

ಅವರ ತಪ್ತ ಮತ್ತು ತೊರೆ ಕತೆಗಳು ಹಳ್ಳಿಯ ಮತ್ತು ನಗರದ ಹೆಣ್ಣುಗಳ ನಡುವೆ ತುಯ್ದಾಡುವ ನಾಯಕನ ಮನಃಸ್ಥಿತಿಯನ್ನು ಬಿಂಬಿಸುತ್ತವೆ. ಈ ಮೂಲಕ ಅದು ಎರಡು ಬಗೆಯ ಆಯ್ಕೆಗಳನ್ನು ನಾಯಕನ ಮುಂದಿಡುತ್ತದೆ. ಅವನು ಪಡೆದ ಹೊಸ ಅನುಭವಗಳು, ಶಿಕ್ಷಣ ಇತ್ಯಾದಿಗಳೇ ಶಾಪದಂತೆ ಅವನನ್ನು ಕಾಡಿ ಹಳ್ಳಿಯ ಜೀವನದ ಯಾವುದನ್ನೂ ಸುಲಭವಾಗಿ ಆನಂದಿಸಲಾರದ ಹಾಗೆ ಮಾಡಿಬಿಟ್ಟಿವೆ. ಅದೇ ಕಾಲಕ್ಕೆ ನಗರದಲ್ಲಿಯೂ ಅವನು ಪೂತರ್ಿಯಾಗಿ ಸಲ್ಲಲಾರ. ಈ ಎರಡೂ ಕಡೆಯ ಹೋರಾಟವೇ ಅವನನ್ನು ಹಣ್ಣಾಗಿಸಿಬಿಟ್ಟಿದೆ. ಸಂಬಂಧ ಕತೆಯ ನಾಯಕನ ತುಮುಲ ತುಸು ಬೇರೆ ಬಗೆಯದು. ಲಲಿತ ಊರಿನಲ್ಲಿದ್ದಾಗ ಬ್ರಾಹ್ಮಣರ ಮನೆಯ ಹುಡುಗಿಯೆಂದು ತುಸು ಮೇಲಿನ ಸ್ತರದಲ್ಲಿರುತ್ತಾಳೆ. ಅದೇ ಲಲಿತಳನ್ನು ವರ್ಷಗಳ ತರುವಾಯ ಶಹರದ ಸಂದರ್ಭದಲ್ಲಿ ಭೇಟಿಯಾದ ಕಥಾನಾಯಕನು ಬದಲಾಗ ನಗರದ ಸನ್ನಿವೇಶದಲ್ಲಿ ವರ್ಗದ ಬಲದ ಕಾರಣದಿಂದ ತುಸು ಮೇಲಿನ ಹಂತದಲ್ಲಿ ಇದ್ದಾನೆ. ಜಾತಿ ಮತ್ತು ವರ್ಗ ಎರಡರ ಹಿನ್ನೆಲೆಯಲ್ಲಿ ಈ ಕತೆ ಅವರಿಬ್ಬರ ಸಂಬಂಧವನ್ನು ನೋಡುತ್ತದೆ. ಯಾವುದು ಹಳ್ಳಿಯಲ್ಲಿದ್ದಾಗ ಸಮಸ್ಯೆಯೇ ಅಲ್ಲವೋ ಅದು ಪಟ್ಟಣದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಣುವುದೂ, ಇದೇ ಬಗೆಯಲ್ಲಿ ಹಳ್ಳಿಯ ಸಮಸ್ಯೆಯು ಪಟ್ಟಣದಲ್ಲಿ ಕ್ಷುಲ್ಲಕವಾಗಿ ಕಾಣುವುದೂ ಕತೆಯಲ್ಲಿ ಸೂಕ್ಷ್ಮವಾಗಿ ಮೂಡಿಬಂದಿದೆ.

ಕೇವಲ ಕಲಾತ್ಮಕತೆಯೊಂದನ್ನೇ ಗಮನದಲ್ಲಿಟ್ಟು ನೋಡಿದಾಗ ನಲವತ್ತು ವರ್ಷಗಳ ಹಿಂದೆ, ಪ್ರಕಟವಾದ ಹೊಸದರಲ್ಲಿ `ಆಗಂತುಕ ಕಥೆಯು ಗಮನ ಸೆಳೆದಿತ್ತು ಮತ್ತು ಕೃಷ್ಣರ ಅತ್ಯುತ್ತಮ ಕಥೆಗಳಲ್ಲೊಂದೆಂದು ಪರಿಗಣಿಸಲ್ಪಟ್ಟಿತ್ತು. ಕನ್ನಡ ಸಣ್ಣ ಕತೆಯ ವ್ಯಾಪ್ತಿ ಮತ್ತು ಸಾಧನೆಗಳನ್ನು ಈವತ್ತಿನ ಸಂದರ್ಭದಲ್ಲಿ ನಿಂತು ಗಮನಿಸಿದಾಗ `ಆಗಂತುಕ ಕತೆಯ ರಚನೆಯ ಕೌಶಲವು ಬಹಳ ವಿಶೇಷವೆಂದು ಅನಿಸುವುದಿಲ್ಲ. ಬದಲಿಗೆ ಅನುಭವಗಳನ್ನು ಮುಖಾಮುಖಿಯಾಗಿ ಕಾಣುವ ಇತರ ಕತೆಗಳೇ ಹೆಚ್ಚು ಆಸಕ್ತಿಪೂರ್ಣವೆನಿಸುತ್ತವೆ. ಆದರೆ ಕೃಷ್ಣರ ಕತೆಗಳ ಸಂದರ್ಭದಲ್ಲಿ ಈ ಕತೆಗೆ ವಿಶೇಷ ಸ್ಥಾನವಿರುವುದರಿಂದ ಇದನ್ನು ಪ್ರಸ್ತುತ ಸಂಕಲನದಲ್ಲಿ ಸೇರಿಸಲಾಗಿದೆ.

ಕೃಷ್ಣರ ಕತೆಗಳಲ್ಲಿ ಪೇಟೆಗೆ ಬರುವ ನಾಯಕನು ಸ್ವಾತಂತ್ರ್ಯವನ್ನು ಕಾಣುವುದು ದೈಹಿಕ ಸಂಬಂಧಗಳ ಸ್ವೇಚ್ಛೆಯಲ್ಲಿ. ಇದು `ಗೀಜಗನ ಗೂಡು ಕತೆಯಲ್ಲಿ ಹಲವು ಅತಿರೇಕಗಳಲ್ಲಿ ವ್ಯಕ್ತವಾಗಿದೆ. ಇಲ್ಲಿ ಬರುವ ವಿದೇಶೀಯ ಪಾತ್ರಗಳು ಕೂಡ ಪಾಶ್ಚಿಮಾತ್ಯ ಸಂಸ್ಕೃತಿಯ ಬಗೆಗಿನ ಜನಪ್ರಿಯ ತಪ್ಪು ಕಲ್ಪನೆಗಳಿಂದ ಹುಟ್ಟಿಬಂದಿವೆ. ಆದರೂ ಈ ಕತೆಯನ್ನು ಸೇರಿಸಿರುವ ಕಾರಣವೆಂದರೆ ಕೃಷ್ಣ ಪರೀಕ್ಷಿಸಲು ಬಯಸುವ ಆಧುನಿಕತೆಯ ಜೊತೆಯ ಗುದ್ದಾಟಗಳನ್ನು ಸೂಚಿಸಬಯಸುವುದೇ ಆಗಿದೆ.

ಕೃಷ್ಣರ ಕತೆಗಳಲ್ಲಿಯೇ ವಿಶಿಷ್ಟವಾದದ್ದು `ಸುಟ್ಟ ತಿಕದ ದೇವರು. ಬಹುಕಾಲದ ನಂತರ ಊರಿಗೆ ಮರಳುವ ನಾಯಕ, ಅಲ್ಲಿ ಬಿಟ್ಟುಹೋದ ನೆನಪುಗಳಿಗೆ ಮತ್ತೆ ಮುಖಾಮುಖಿಯಾಗುವ ಕತೆಯಿದು. ಕೃಷ್ಣರ ಬೇರೆ ಯಾವ ಕತೆಗಳಲ್ಲಿಯೂ ಕಾಣದ ಸಂಕೀರ್ಣತೆ ಇಲ್ಲಿದೆ. ಅವರ ನಗರಕೇಂದ್ರಿತ ಕತೆಗಳ ನಾಯಕರು ದೈಹಿಕ ಸಂಬಂಧದ ಅತಿಗಳನ್ನು ಪರೀಕ್ಷೆ ಮಾಡಲೆಳಸುತ್ತಿದ್ದರೆ, ಈ ಕತೆಯಲ್ಲಿ ಮರಳಿ ಊರಿಗೆ ಬಂದ ನಾಯಕನು ಕಾಣುವ ಅತಿಯ ಇನ್ನೊಂದು ದರ್ಶನವು ಅವರ ಕಥಾಸಾಹಿತ್ಯದ ಸಂದರ್ಭದಲ್ಲಿ ವಿಶೇಷವಾದುದಾಗಿದೆ.

*

*

*

ತಮ್ಮ ಸಾಹಿತ್ಯದಿಂದ ಮಾತ್ರವಲ್ಲ ವಿಶಿಷ್ಟವಾದ ವ್ಯಕ್ತಿತ್ವದಿಂದಲೂ ಶ್ರೀಕೃಷ್ಣ ಆಲನಹಳ್ಳಿ ತಮ್ಮ ಕಾಲದ ಸಾಹಿತ್ಯ ವಾತಾವರಣದ ಮೇಲೆ ಪ್ರಭಾವ ಬೀರಿದವರು. ತಮ್ಮ ಉತ್ಸಾಹ, ಮಹತ್ವಾಕಾಂಕ್ಷೆ, ಜಗಳಗಳು ಮತ್ತು ಜೀವನಪ್ರೀತಿಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದಂತಕಥೆಯಾದವರು. ದುದರ್ೈವದಿಂದ ನಡುವಯಸ್ಸಿನಲ್ಲಿಯೇ ವಿಧಿವಶರಾದರು. ಕೃಷ್ಣರ ಸಾಧನೆಯನ್ನು ನೆನೆಸಿಕೊಳ್ಳದೇ ಎಪ್ಪತ್ತು-ಎಂಬತ್ತರ ದಶಕದ ಸಾಹಿತ್ಯ ಸಂದರ್ಭವನ್ನು ಚಚರ್ಿಸುವುದು ಸಾಧ್ಯವಿಲ್ಲ. ಈ ವಾಚಿಕೆಯು ಅವರ ಸಮಗ್ರ ಬರಹಗಳತ್ತ ಮತ್ತೆ ಹೊರಳಲು ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಲಿ ಎಂಬುದು ನನ್ನ ಹಾರೈಕೆ.

ಈ ಪುಸ್ತಕದಲ್ಲಿ ಅಗ್ರಹಾರ ಕೃಷ್ಣಮೂತರ್ಿಯವರು ಬರೆದ ಲೇಖನದ ಆಯ್ದ ಭಾಗ ಹಾಗೂ ಪ್ರತಿಭಾ ನಂದಕುಮಾರ ಅವರ ಒಂದು ಕವಿತೆಯನ್ನೂ ಸಹ ಸೇರಿಸಲಾಗಿದೆ. ಇವೆರಡೂ ಕೃಷ್ಣರ ಸೃಜನಶೀಲ ಪ್ರೇರಣೆ ಮತ್ತು ವ್ಯಕ್ತಿತ್ವದ ಕುರಿತ ಆಸಕ್ತಿಪೂರ್ಣ ಗ್ರಹಿಕೆಗಳನ್ನು ಒಳಗೊಂಡಿವೆ. ಇವುಗಳನ್ನು ಇಲ್ಲಿ ಸೇರಿಸಲು ಅನುಮತಿಯಿತ್ತ ಈ ಇಬ್ಬರೂ ಲೇಖಕರಿಗೆ ಕೃತಜ್ಞತೆಗಳು.

 

 

 

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: