स्कीम, स्काम, मार्केट और हम…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-34

एक रहन ईर , एक रहन भीर

एक रहन फ़ते और एक रहन हम !!……..

Once there was Eer, Once there was Bheer

Once there was phatte and Once there was Me !!  . . . .

ಕಳೆದ ವಾರ ಹೌಸಿಂಗ್ ಲೋನ್ ಸ್ಕಾಮಿನ ಹೆಸರಿನಲ್ಲಿ ಮಾರುಕಟ್ಟೆ ಬಿತ್ತು. ಅದರ ಮೊದಲಿನ ವಾರ ೨ಜಿ ಸ್ಕಾಮಿನಲ್ಲಿ ಮಾರುಕಟ್ಟೆ ಬಿದ್ದಿತ್ತು. ೨೧,೦೦೦ ಕ್ಕಿಂತ ಮೀರಿ ಸೂಚ್ಯಂಕ ದಾಟುವ ಕನಸು ನೀಡಿದ ಗೂಳಿ ಪಂಚಾಂಗದ ಜೋಯಿಷರು ಸುಮ್ಮನಾಗಿದ್ದಾರೆ. ಈಗ ೧೭೦೦೦ ಕ್ಕೆ ಇಳಿಯುತ್ತದೆ ಈಗ ಮಾರಿಬಿಡಿ ಎಂದು ಹೇಳುವ ಕರಡಿ ಪಂಚಾಂಗದ ಜೋಯಿಷರು ತಮ್ಮ ವೋಲ್ಯೂಮ್ ಇಂಕ್ರೀಸ್ ಮಾಡಿದ್ದಾರೆ. ಇವುಗಳ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಅಗತ್ಯವಿಲ್ಲ.

ದಿನಪತ್ರಿಕೆಗಳಲ್ಲಿ ದಿನಾ ಬರುತ್ತಿದೆ. ಚೆನ್ನಾಗಿ ನಡೆಯುತ್ತಿರುವ ಪಾರ್ಟಿಯನ್ನು ಹಾಳುಮಾಡಲು ಧುತ್ತೆಂದು ಎಲ್ಲಿಂದಲೋ ಅಚಾನಕ್ಕಾಗಿ ಪ್ರತ್ಯಕ್ಷವಾಗುವ ಈ ಸ್ಕಾಮು-ಗೀಮುಗಳು ಯಾವ ಫಂಡಮೆಂಟಲ್ ವಿಶ್ಲೇಷಣೆಯಲ್ಲೂ ಬರುವುದಿಲ್ಲ ಹಾಗೂ  ಯಾವ ಟೆಕ್ನಿಕಲ್ ಕುಂಡಲಿಗಳಲ್ಲೂ ಗೋಚರಿಸಿರುವುದಿಲ್ಲ. ಹೂಡಿಕೆದಾರರಾದ ನಾವು ಇವನ್ನು ಹೆಚ್ಚಾಗಿ ನಿರೀಕ್ಷಿಸಿಯೇ ಇರುವುದಿಲ್ಲ. ಆದರೆ ಏರುತ್ತಿರುವ ಶೇರುಗಳಲ್ಲಿ ಹಣ ಹೂಡಿ ದುಡ್ಡು ಕಳೆದುಕೊಳ್ಳುವುದಂತೂ ಸತ್ಯ. ಇದು ಶೇರು ಹೂಡಿಕೆಯಲ್ಲಿ ಇರುವ ರಿಸ್ಕ್‌ಗಳ ಒಂದು ಅತ್ಯಂತ ಮಹತ್ತರವಾದ ಮಜಲು.

ಇಂತಹ ರಿಸ್ಕ್‌ಗಳಿಗೆ ಏನು ಮಾಡೋಣ? ಭಾರತೀಯ ಮಾರುಕಟ್ಟೆಯಲ್ಲಿ ಹರ್ಷದ್ ಮೆಹ್ತಾ ಅತಿದೊಡ್ಡ ವಂಚಕ ಅಥವ ಸ್ಕಾಮ್‌ಸ್ಟರ್ ಎಂಬ ಮಾತನ್ನು ನಾನು ಒಪ್ಪುವುದೇ ಇಲ್ಲ – ಅದು ಯಾಕೆಂದರೆ ಆತ ಸಿಕ್ಕಿ ಬಿದ್ದಿದ್ದಾನೆ! ಆತನಿಂದಲೂ ದೊಡ್ಡ ಸೈಜಿನ ತಿಮಿಂಗಿಲಗಳೂ ಇನ್ನೂ ಸಿಕ್ಕಿ ಬೀಳದೆ ಮಾರುಕಟ್ಟೆಯಲ್ಲಿ ಹಾಯಾಗಿ ಈಜಾಡುತ್ತಲೇ ಇದ್ದಾವೆ. ಮಾರುಕಟ್ಟೆಯಲ್ಲಿ ಹೀಗೆ ಸ್ಕಾಮುಗಳು ನಡೆಯುತ್ತಲೇ ಇರುತ್ತವೆ. ಸ್ಕೀಮುಗಳು ಇದ್ದಲ್ಲೆಲ್ಲಾ ಸ್ಕಾಮುಗಳೂ ಇರುತ್ತವೆ- ಸಮುದ್ರಗಳಿದ್ದಲ್ಲೆಲ್ಲಾ ಅಲೆಗಳಿದ್ದಂತೆ.
ಸ್ಕಾಮುಗಳಲ್ಲಿ ವಿಶೇಷವೇನೂ ಇಲ್ಲ. ಇದು ಕೇವಲ ಶೇರು ಮಾರುಕಟ್ಟೆಯಲ್ಲಿ ಅಥವ ಅತ್ಯಾಕರ್ಷಕ ವಿತ್ತೀಯ ಸ್ಕೀಮುಗಳಲ್ಲಿ ಮಾತ್ರ ಸ್ಪೆಶಲ್ ಆಗಿ ನಡೆಯುವಂತಹ ವಿಚಾರವೇನೂ ಅಲ್ಲ. ನಿಜವಾಗಿ ನೋಡುವುದಾದರೆ ಶೇರುಕಟ್ಟೆ ಸಮಾಜದ ಒಂದು ಅಂಗ- ಅದರ ಪ್ರತಿಫಲನ. ಹಾಗಾಗಿ ಇದರಲ್ಲಿ ಕೂಡಾ ನಮ್ಮ ಸಮಾಜ, ಸರಕಾರ, ರಾಜಕೀಯಗಳಲ್ಲಿ ಇರುವಂತೆಯೇ ಧೂರ್ತರಿದ್ದಾರೆ.

ಕಲಿಯುಗದಲ್ಲಿ ಧರ್ಮ ಒಂದು ಕಾಲಿನಲ್ಲಿ ನಿಲ್ಲುತ್ತದೆ ಅಂತ ಪುರಾಣದಲ್ಲಿಯೇ ಹೇಳಲಿಲ್ಲವೇ? ಸಮಾಜದ ಎಲ್ಲೆಡೆಗಳಲ್ಲಿ ಇಂದು ಭ್ರಷ್ಟಾಚಾರ ಬ್ರೇಕ್‌ಡಾನ್ಸ್ ಮಾಡುತ್ತಿದೆ. ದಿನಾ ಬೆಳಗ್ಗೆ ಎದ್ದು ಪೇಪರ್ ಓದಿದರೆ ಒಂದಲ್ಲ ಒಂದು ಹಗರಣಗಳ ಬಗ್ಗೆ ಸುದ್ದಿ ಹೆಡ್‌ಲೈನ್ಸ್‌ನಲ್ಲಿ ಸಿಗುವುದು ಗ್ಯಾರಂಟಿ. ಅದೂ ನೂರಾರು ಕೋಟಿ. ೫-೧೦ ಕೋಟಿ ಹಗರಣಗಳು ಇತ್ತೀಚೆಗೆ ಪೇಪರಿನ ಒಂದು ಮೂಲೆಯಲ್ಲಿ  ಪೆನ್ಸಿಲಿನಲ್ಲಿ ಕೂಡಾ ಬರೆಯಲು ಯೋಗ್ಯವಾಗಿರುವುದಿಲ್ಲ.

ಇಡೀ ಸಮಾಜವೇ ಇಂದು ಹಾಗಿರುವಾಗ ಶೇರುಕಟ್ಟೆ ಯಾಕೆ ಅದಕ್ಕೆ ಹೊರತಾಗಿರಬೇಕು? ನಾವು ಆ ರೀತಿಯ ನಿರೀಕ್ಷೆಂiiನ್ನು ಯಾಕೆ ಇಟ್ಟು ಕೊಳ್ಳಬೇಕು? ಶೇರುಕಟ್ಟೆಯಲ್ಲಿ ಕೂಡಾ ನಮ್ಮ ಸಮಾಜದ ಬೇರೆ ಎಲ್ಲೆಡೆಗಳಲ್ಲಿ ಇರುವಂತೆಯೇ ಗಣ್ಯಾತಿಗಣ್ಯ ಖದೀಮರಿದ್ದಾರೆ. ಇಂತಹ ಶಾರ್ಕ್‌ಗಳ ಜೊತೆಗೆ ಅಮಾಯಕರಾದ ನಾವುಗಳು ಇದ್ದೇವೆ.
ಇದರ ಅರ್ಥ ಸ್ಕಾಮುಗಳನ್ನು ನಾನು ಸಮರ್ಥಿಸುತ್ತೇನೆ ಎಂದಲ್ಲ. ನಾನು ಅವುಗಳನ್ನು ಖಂಡಿತವಾಗಿಯೂ ಖಂಡಿಸುತ್ತೇನೆ. ಆದರೆ ಸಮಸ್ಯೆ ಏನೆಂದರೆ ನಾನು ಖಂಡಿಸಿದಾಕ್ಷಣ ಅವುಗಳು ನಿಲ್ಲುವುದಿಲ್ಲವಲ್ಲ? ಅದಕ್ಕೇ ನಮ್ಮ ಜಾಗ್ರತೆಗಳನ್ನು ನಾವು ಮಾಡಬೇಕು ಎಂಬುದು ನನ್ನ ಮುಖ್ಯ ವಿಚಾರ. ಮಾರುಕಟ್ಟೆಯ ಅಪಾಯಗಳನ್ನು ಅರಿತು ಅವುಗಳನ್ನು ಎದುರಿಸಲು ಇರುವ ಪೂರ್ವ ಸಿದ್ಧತೆಗಳನ್ನು ಮಾಡಿಯೇ ಜಾಗರೂಕತೆಯಿಂದ ಈ ಪ್ರಪಂಚಕ್ಕೆ ಕಾಲಿಡಬೇಕು. ಅದರ ಬೇಸಿಕ್ ವಿವರಗಳನ್ನು ಮನಗತ ಮಾಡದ ಹೊರತು ಮಾರುಕಟ್ಟೆಯಂತಹ ಡೇಂಜರ್ ಝೋನ್ ಅನ್ನು ಪ್ರವೇಶಿಸಲೇ ಬಾರದು. ಇದು ಶೇರುಕಟ್ಟೆಯ ಮೊತ್ತ ಮೊದಲನೆಯ ಪಾಠ.
ಅಷ್ಟೂ ಹೇಳಿದರೂ ಜನರು ನನ್ನಲ್ಲಿ ಈ ಜಾಗ್ರತೆಯಾಗಿ ಹೂಡುವುದು ಎಂದರೆ ಏನು ಮೊಳೆಯಾರ್ರೇ ಎಂದು ಕೇಳುತ್ತಾರೆ. ಬೇರೆಲ್ಲಾ ವಿಶಯಗಳಲ್ಲಿ ಜಾಗ್ರತೆ ಅರ್ಥವಾಗುತ್ತದೆ ಆದರೆ ಹೂಡುವಿಕೆಯಲ್ಲಿ ಜಾಗ್ರತೆ ಅರ್ಥವಾಗುವುದಿಲ್ಲ. ಒಂದೋ ದುಡ್ಡು ಹೂಡುತ್ತೇವೆ. ಇಲ್ಲಾ ಹೂಡುವುದಿಲ್ಲ. ಆದರೆ ಜಾಗ್ರತೆಯಾಗಿ ಹೂಡುವುದು ಎಂದರೇನು? ಎಂಬ ಗೊಂದಲ ಮೂಡುತ್ತದೆ.
ಅಪಾಯಗಳ ಅರಿವೇ ಜಾಗ್ರತೆ. ಅಪಾಯಗಳ ಬಗ್ಗೆ ಸರಿಯಾಗಿ ಓದಿ ಅಧ್ಯಯನ ಮಾಡಿ ಚರ್ಚಿಸಿ ಅದರ ಬಗ್ಗೆ ಅರಿವು ಮೂಡಿಸಿಕೊಂಡಾಕ್ಷಣ ಜಾಗರೂಕತೆ ತನ್ನಷ್ಟಕ್ಕೇ ಜಾಗೃತವಾಗುತ್ತದೆ. ಅದಕ್ಕೆ ಬೇರೆ ಯಾವ ಸಿದ್ಧತೆಗಳೂ ಬೇಕಾಗಿಲ್ಲ. ಹೂಡಿಕೆಯ ಬಗ್ಗೆ ಮತ್ತು ಮಾರುಕಟ್ಟೆಯ ಬಗ್ಗೆ Awareness ಅಥವ ಅರಿವು ಗಳಿಸಿದರೆ ಸಾಕು. ಮಿಕ್ಕದ್ದು ನಮ್ಮ ಸಿಸ್ಟಂನಲ್ಲಿ ಅದರಷ್ಟಕ್ಕೇ ಬರುತ್ತದೆ. ಇದು ಕಾಮನ್ ಸೆನ್ಸ್. ಇದಕ್ಕೆ ಯಾವುದೇ ಸಿದ್ಧ ಫಾರ್ಮ್ಯುಲಾ ಇಲ್ಲ.

ನಮ್ಮ ಮನೆಯನ್ನು ಸರಿಯಾಗಿ ಬೀಗ ಹಾಕಿ ಹೋಗುವಂತೆ, ಇದ್ದ ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಬಚ್ಚಿಡುವಂತೆ, ಮಕ್ಕಳನ್ನು ರೋಡಿನಲ್ಲಿ ಒಬ್ಬರೇ ಬಿಡದಂತೆ, ರಾತ್ರಿ ಹೊತ್ತು ಹೆಣ್ಮಕ್ಕಳಿಗೆ ಜಾಗ್ರತೆಯಾಗಿ ಹೋಗಮ್ಮಾ ಎಂದು ಹೇಳುವಂತೆ ಶೇರುಕಟ್ಟೆಯಲ್ಲೂ ಜಾಗ್ರತೆಯಾಗಿ ದುಡ್ಡು ಹೂಡಬೇಕು.  ಆದರೆ ಮನುಷ್ಯ ಪೆಟ್ಟು ತಿನ್ನದೆ ಕಲಿಯುವುದಿಲ್ಲ. ಎಂಬ ಜಾಣ್ನುಡಿಯನ್ನು ನಾವೆಲ್ಲ ಕೇಳಿದ್ದೇವೆ. ನನ್ನ ಅನುಭವದಲ್ಲಿ ಕೂಡಾ ನಾನು ಇದನ್ನು ಸತ್ಯ ಎಂದು ನಂಬಿದ್ದೇನೆ.

ಒಂದೆರಡು ಬಾರಿ ಭಾರೀ ಹೊಡೆತಗಳನ್ನು ತಿನ್ನದೆ ಒಂದೆರಡು ಲಕ್ಷ ಶೇರುಹೋಮದಲ್ಲಿ ಆಹುತಿ ನೀಡಿ ಶೇರಾಗ್ನಿಯಲ್ಲಿ ಕೈಸುಟ್ಟುಕೊಳ್ಳದೆ ನಾನು ಹೇಳುವ ಈ ಅರಿವಿನ ಬಗ್ಗೆಗಿನ ಅರಿವು ಕೂಡಾ ಮೂಡುವುದಿಲ್ಲ. ಇದು ನಾನು ಕಂಡಂತೆ ಬಹುತೇಕ ಜನರ ಮಟ್ಟಿಗೆ ಸತ್ಯ. ಆದರೆ ಎಲ್ಲರೂ ಪೆಟ್ಟು ತಿನ್ನಲು ಕಾಯಬೇಕಾಗಿಲ್ಲ. ಇನ್ನೊಬ್ಬ ಪೆಟ್ಟು ತಿಂದವನನ್ನು ಕಂಡು ಕಲಿಯುವುದು ಯಾವ ಕಾಲಕ್ಕೂ ಚೀಪ್ ಐಂಡ್ ಬೆಸ್ಟ್! ಈ ರೀತಿ ಸ್ವಂತ ಬಂಡವಾಳ ಇಲ್ಲದೆ ಇನ್ನೊಬ್ಬರ ಬಂಡವಾಳದಲ್ಲಿ ಕಲಿಯುವುದು ಕೂಡಾ ಬಳಿಕ ಉಪಯೋಗಕ್ಕೆ ಬರುವ ಹೂಡಿಕಾ ಜಾಣ್ಮೆಯನ್ನು ತೋರಿಸುತ್ತದೆ.
ನಾನು ಕಾಸು-ಕುಡಿಕೆಯನ್ನು ಆರಂಭಿಸಿದ ಉದ್ಧೇಶವೂ ಇದೇ. ಪ್ರತಿಯೊಬ್ಬ ವ್ಯಕ್ತಿಗೂ ಮಾಹಿತಿಯ ಮತ್ತು ಜ್ಞಾನದ ಹಕ್ಕು ಇದೆ. ಅದಕ್ಕೆ ಸರಿಯಾದ ಮಾರ್ಗಗಳು ಮಾತ್ರ ಇಲ್ಲ. ಅಮಾಯಕರು ದುಡ್ಡಿನ ವಿಷಯಗಳಲ್ಲಿ ಮೋಸಹೋಗುವುದು, ಜಾರಿಬೀಳುವುದು ಇತ್ಯಾದಿಗಳನ್ನು ನೋಡಿದರೆ ಬೇಸರವಾಗುತ್ತದೆ. ಇದನ್ನು ನಿವಾರಿಸಲು ಇರುವ ಏಕೈಕ ಮಾರ್ಗ ಎಂದರೆ ಎಜುಕೇಶನ್.

ಸರಕಾರ ಕೂಡಾ ಇಂದು ಸಾಕಷ್ಟು ಹೂಡಿಕೆದಾರರ ಎಜುಕೇಶನ್ ಬಗ್ಗೆ ಮಾತನಾಡುತ್ತದೆ. ಇನ್ನು ಮುಂದೆಯೂ ಮಾತನಾಡುತ್ತಲೇ ಇರುತ್ತದೆ. ಅವರು ಮಾತನಾಡುತ್ತಲೇ ಇರಲಿ, ಬಿಡಿ. ನಾವು ಮಾತ್ರ ಕಳೆದ ಒಂದು ವರ್ಷದಿಂದ ಈ ಸೋಮಾರಿ ಕಟ್ಟೆ. . . , ಓ ಸ್ಸಾರಿ, . . .  ಈ ಸೋಮವಾರ ಕಟ್ಟೆಯಲ್ಲಿ ಕುಳಿತು ಹೂಡಿಕೆಯ ಬೇಸಿಕ್ ಜ್ಞಾನದ ಬಗ್ಗೆ ಚರ್ಚೆ ನಡೆಸುತ್ತಾ ಇದ್ದೇವೆ.
ಮೊದಮೊದಲು ನಾನು ಸ್ಕಾಮು ಸ್ಕೀಮುಗಳ ಬಗ್ಗೆ ಬರೆದಾಗ ನನಗೆ ಜನರು ಸಿಕ್ಕೆದೆಡೆಯಲ್ಲೆಲ್ಲಾ ನೀವು ಹೆದರಿಸ್ತೀರಿ ಮಾರಾಯ್ರೇ ಅಂತ ಹೇಳ್ತಿದ್ರು. ಈಗಲೂ ಕೆಲವರು ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಶೇರುಕಟ್ಟೆಯ ಒಳ್ಳೆಯ ನಡೆಗಳನ್ನು ಮಾತ್ರ ಕಂಡು ಗೊತ್ತಿರುವ ಅವರು ಅದೊಂದು ಸ್ವರ್ಗಲೋಕ ಎಂಬ ಭ್ರಮಾಲೋಕದಲ್ಲಿ ಇನ್ನೂ ಇರುತ್ತಾರೆ. ಮಾರುಕಟ್ಟೆ ತಿರುಗಿಮೆಟ್ಟಿದ ಅನುಭವ ಇನ್ನೂ ಆಗಿರುವುದಿಲ್ಲ. ಮಾರುಕಟ್ಟೆಯಲ್ಲಿ ಇರುವ ಅಪಾಯಗಳನ್ನು ಎಲ್ಲೆಲ್ಲಿ ಜಾರುಜಾಗಗಳಿವೆ ಎಂದು ಎತ್ತಿ ತೋರಿಸಿ ಅರಿವು ಮೂಡಿಸುವುದೇ ನನ್ನ ಉದ್ಧೇಶ. ಅದು ಬಿಟ್ಟು ಹೆದರಿಸುವುದು ಅಲ್ಲ.

ಇರಬೇಕಾದ ಅರಿವಿನ ಬಗ್ಗೆಯೇ ಅರಿವಿಲ್ಲವಾದರೆ ಎಚ್ಚರಿಕೆಗಳು ಹೆದರಿಕೆಗಳಾಗಿ ಕಂಡೀತು; ಅನುಭವದ ಮಾತುಗಳು ಕಿರಿಕಿರಿಯೆನಿಸೀತು. ಆದರೆ ಪೆಟ್ಟು ತಿಂದು ಅನುಭವ ಇದ್ದವರು ಇವೆಲ್ಲವನ್ನು ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಅಪಾಯಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳಲು ಇನ್ನೂ ಹೇಳಿ, ಇನ್ನೂ ಹೇಳಿ ಎಂದು ಹುರಿದುಂಬಿಸುತ್ತಾರೆ.
ಅಲೆಗಳಿವೆ ಎಂದು ಸಮುದ್ರಕ್ಕೆ ನಾವು ಹೋಗದಿರುವುದಿಲ್ಲ. ಜಾಗರೂಕರಾಗಿ ದೋಣಿಯಿಳಿಸುತ್ತೇವೆ. ಹಾಗೆಯೇ ಶೇರುಕಟ್ಟೆಗೆ ಹೋಗದಿರಬೇಕಾಗಿಲ್ಲ. ಹೋಗಲೇ ಬೇಕೆಂದೇನೂ ಇಲ್ಲವಾದರೂ ಹೋಗಲೇ ಬಾರದು ಎಂದೂ ಇಲ್ಲವಲ್ಲ. ಈ ಆಯ್ಕೆ ಅವರವರ ವೈಯಕ್ತಿಕ ಮನೋಧರ್ಮವನ್ನು ಹೊಂದಿಕೊಂಡಿದೆ. ಅದು ಅವರವರ ಇಷ್ಟ.

ಎಫ್.ಡಿಯಲ್ಲಿ ದುಡ್ಡಿಟ್ಟು ಹೊದ್ದುಕೊಂಡು ಮಲಗುವುದರಲ್ಲಿ ತಪ್ಪೇನೂ ಇಲ್ಲ. ಸೇಫ್ಟಿ ಇರುತ್ತದೆ. ಆದರೆ ರಿಟರ್ನ್ ತೀರಾ ಕಡಿಮೆ ಇರುತ್ತದೆ. ಹಣದುಬ್ಬರವನ್ನೂ ಕೂಡಾ ಭರಿಸುವುದಿಲ್ಲ. ಅದರಲ್ಲಿ ಸಂತುಷ್ಟರು ಹೊದ್ದು ಮಲಗುತ್ತಾರಾದರೆ ಆಸಕ್ತರು ಇನ್ನಷ್ಟು ಕುಡಿಕೆ ಕಾಸು ಜಾಸ್ತಿ ಕಮಾಯಿಸಲು ಮಾರುಕಟ್ಟೆಯಲ್ಲಿ ತೊಡಗುತ್ತಾರೆ. ಅಂತಹವರಿಗೆ ಇಂತಹ Investors’ education ಮತ್ತು ಎಚ್ಚರಿಕಾ ಲೇಖನಗಳು ಸಹಾಯ ನೀಡೀತು.
********************
ಅಟ್ಯಾಚ್‌ಮೆಂಟ್
Actually, ನನಗೆ ಕಾಸು-ಕುಡಿಕೆಯ ಆರಂಭದ ಹಂತದಲ್ಲಿ ಒಂದೆರಡು ವಿಷಯಗಳ ಬಗ್ಗೆ ತುಸು ಅಳುಕಿತ್ತು. ಶೇರುಕಟ್ಟೆಯ,  ಮ್ಯೂಚುವಲ್ ಫಂಡ್ ಮತ್ತು ವಿಮಾ ಉದ್ಯಮವನ್ನು ಕಣ್ಣುಮುಚ್ಚಿ ಅಂಧಶ್ರದ್ಧೆಯಿಂದ ಫಾಲೋ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಎಳೆ ಎಳೆಯಾಗಿ ಎತ್ತಿ ಹೇಳುದರಿಂದ ಗ್ರಾಹಕರಿಗೆ ಸಹಾಯವಾಗುತ್ತದೋ ಇಲ್ಲವೋ ಅದರೆ ಈ ಉದ್ಯಮದ ಬ್ರೋಕರ್/ಏಜೆಂಟರಿಗಂತೂ ಖಂಡಿತಾ ನನ್ನ ಮೇಲೆ ಅಸಮಧಾನ ಮೂಡುತ್ತದೆ ಎಂಬ ಅನುಮಾನ ಇತ್ತು.

ನನ್ನ ಹಲವಾರು ಬಂಧು ಮಿತ್ರರು ಈ ಉದ್ಯಮದಲ್ಲಿ ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾರೆ. ಇನ್ನು ಅವರೆಲ್ಲ ಹೇಗೆ ಫೀಲ್ ಮಾಡುತ್ತಾರೋ ಎಂಬ ಅಳುಕಿತ್ತು. ಯಾರನ್ನೋ ಉದ್ಧಾರ ಮಾಡಲು ಹೋಗಿ, ಆಗಬೇಕಾದವರು ಹೇಗೂ ಉದ್ಧಾರ ಆಗುವುದಿಲ್ಲ, ಇರುವ ಬಂಧು ಮಿತ್ರರನ್ನೂ ಕಳೆದುಕೊಂಡೇನೋ ಎಂಬ ಭಯ ಕಾಡುತ್ತಿತ್ತು. ಆದರೆ ಆಗಿದ್ದೇ ಬೇರೆ. ನನಗೆ ಈಗ ಬರುತ್ತಿರುವ ಅತ್ಯಂತ ಪ್ರೋತ್ಸಾಹಕ ಪ್ರತಿಕ್ರಿಯೆಗಳು ಬ್ರೋಕರ್/ಏಜೆಂಟ್ ಸಮುದಾಯದಿಂದಲೇ. ಇದು ನನಗೆ ತೀರಾ ಅನಿರೀಕ್ಷಿತವಾಗಿತ್ತು.
ಅವರಲ್ಲಿ ಹೆಚ್ಚಿನವರು ಹೇಳುವುದು ಏನೆಂದರೆ – ಒಳ್ಳೆ ಸ್ಕೀಮುಗಳೂ ಕೆಟ್ಟ ಸ್ಕೀಮುಗಳೂ ಎಲ್ಲೆಡೆ ಇದ್ದದ್ದೇ. ಒಳ್ಳೆ ಏಜೆಂಟರೂ ಕೆಟ್ಟ ಏಜೆಂಟರೂ ಕೂಡಾ ಎಲ್ಲೆಡೆ ಇರುವುದೇ. ಅದರ ಬಗ್ಗೆ ಜನರಲ್ಲಿ ಅರಿವು ಮುಖ್ಯ. ಹಂಸ-ಕ್ಷೀರ ನ್ಯಾಯಕ್ಕೆ ಜ್ಞಾನ ಮುಖ್ಯ. ಆರು ತಿಂಗಳಲ್ಲಿ ದುಡ್ಡು ಡಬಲ್ ಮಾಡಿ ಕೊಡಿ ಎಂದು ದುಂಬಾಲಿ ಬೀಳುತ್ತಾರೆ. ಆಗುವುದಿಲ್ಲ ಎಂದರೆ ಬೇರೆಡೆ ಹೋಗಿ ಮೋಸಕ್ಕೊಳಗಾಗುತ್ತಾರೆ. ಡೇ ಟ್ರೇಡಿಂಗ್‌ನ ರಿಸ್ಕ್ ಬಗ್ಗೆ ಎಷ್ಟು ಹೇಳಿದರೂ ಕಿವಿಗೆ ಹಾಕಿಸಿಕೊಳ್ಳುವುದಿಲ್ಲ.

ಮಿತಿಮೀರಿ ಜೂಜಾಟವಾಡಿ ಎಲ್ಲಾ ಕಳೆದುಕೊಳ್ಳುತ್ತಾರೆ. ನಾವು ಎಂದಿಗೂ ನಮ್ಮ ಗ್ರಾಹಕರು ಮೋಸಹೋಗಬೇಕು, ದುಡ್ಡು ಕಳೆದುಕೊಳ್ಳಬೇಕು ಎಂದು ಆಶಿಸುವುದಿಲ್ಲ. ನಾವು ಕೊಟ್ಟ ಸ್ಕೀಮುಗಳಲ್ಲಿ ಹಾನಿ ಉಂಟಾದರೆ ಕಡೆಗೆ ಅವರು ಬಂದು ಹಿಡಿಯುವುದು ನಮ್ಮನ್ನೇ. ಗ್ರಾಹಕರು ಅವರು ವಹಿಸಬೇಕಾದ ಜಾಗ್ರತೆ ವಹಿಸದೆ ಎಲ್ಲೋ ಹೋಗಿ ಮೋಸಹೋಗಿ ದುಡ್ಡು ಕಳೆದುಕೊಂಡು ಇಡೀ ಇಂಡಸ್ಟ್ರಿಯನ್ನೇ ಹಳಿಯುತ್ತಾರೆ. ಕ್ಷಣಿಕ one-time ಬಿಸಿನೆಸ್‌ನಿಂದ ನಮಗೂ ಯಾವುದೇ ಲಾಭವಿಲ್ಲ. ಎಲ್ಲರೂ ಮೋಸ ಮಾಡಲು ಕುಳಿತಿದ್ದಾರೆ ಎಂಬ ಭಾವನೆ ಯಾರಿಗೂ ಇರಬಾರದು.

ಅದ್ದರಿಂದ ನಾವೂ ಕೂಡಾ ನಮ್ಮ ಗ್ರಾಹಕರು ಸದಾಕಾಲ ಸೂಕ್ತ ರೀತಿಯಲ್ಲಿ ದುಡ್ಡು ಹೂಡುತ್ತಾ ದುಡ್ಡು ಮಾಡುತ್ತಾ ಬೆಳೆಯುತ್ತಾ ಇರಲಿ, ಹಾಗಾದರೆ ನಮಗೂ ಒಳ್ಳೆಯದು ಎಂಬ ಧೋರಣೆಯವರೇ ಆಗಿರುತ್ತೇವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಕನ್ವಿನ್ಸ್ ಮಾಡಲು ನಿಮ್ಮ ಲೇಖನಗಳು ಅತ್ಯಂತ ಫಲಕಾರಿಯಾಗಿದೆ. ಕಾಸು-ಕುಡಿಕೆಯಲ್ಲಿ ಅತ್ಯಂತ ಬ್ಯಾಲನ್ಸ್ಡ್ ಆಗಿ ಯಾವುದೇ ಬಯಾಸ್ ಇಲ್ಲದೆ ವಿಷಯಗಳನ್ನು ತುಲನಾತ್ಮಕವಾಗಿ ಬರೆಯಲಾಗುತ್ತದೆ. ನಾಣ್ಯದ ಎರಡೂ ಬದಿಗಳ ಪರಿಚಯ ಚೆನ್ನಾಗಿ ಮೂಡಿಬರುತ್ತದೆ. ಅದು ನಮಗೂ ಸಹಾಯಕಾರಿ. ಎಂದು. ಹೀಗೆ ಹಲವಾರು ಬ್ರೋಕರ್/ಏಜೆಂಟರು, ಫಂಡ್ ಹೌಸ್ ಬ್ರಾಂಚ್ ಮ್ಯಾನೇಜರರು ನನ್ನೊಡನೆ ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ಹಳೆಯ ಯುಲಿಪ್‌ನಂತಹ ಸ್ಕೀಮುಗಳಲ್ಲಿ ದುಡ್ಡು ಕಳೆದುಕೊಂಡ ಗ್ರಾಹಕರಿಂದ ಹೊಡೆತ ತಿಂದ, ಅವಾಚ್ಯ ಶಬ್ದಗಳಿಂದ ನಿಂದಿಸಲ್ಪಟ್ಟ ಹಾಗೂ ಅಂತಹ ಘಟನೆಗಳಿಂದ ನೊಂದು ಕೆಲಸವನ್ನೇ ಬಿಟ್ಟುಬಿಟ್ಟ – ಇಂತಹ ಕೆಲವರೂ ಇದ್ದಾರೆ.
*******************

4 ಟಿಪ್ಪಣಿಗಳು (+add yours?)

 1. hari
  ಡಿಸೆ 05, 2010 @ 14:30:57

  1 like!

  ಉತ್ತರ

 2. vikas
  ನವೆಂ 30, 2010 @ 12:58:51

  ಇದೇನು ಯಾವ್ದ್ಯಾವ್ದೋ ಭಾಷೆಲ್ಲಿ ಬರೆದಿದ್ದಾರೆ.
  ಬೇರೆ ಭಾಷೆ ಬಳಸೋದಿದ್ರೂ ಲಿಪಿ ಕನ್ನಡವನ್ನೇ ಬಳಸಿ ಸ್ವಾಮಿ.

  ಉತ್ತರ

 3. srinivasdeshpande
  ನವೆಂ 29, 2010 @ 22:29:19

  Dear Sir,
  Kasu Kudike chendavaada chitragalinda koodi, chandmamada kathegala taraha rochakavaagi odisikondu hoguttade. economics yemba kabbinada kadaleyannu “raja special” nelagadaleyanagisiddeeri. Dhanyavaadagalu- Srinivas Deshpande

  ಉತ್ತರ

 4. RJ
  ನವೆಂ 29, 2010 @ 13:09:42

  ಪ್ರಿಯರೆ,
  ಶೇರು ಮಾರುಕಟ್ಟೆಗೆ ಸಂಬಂಧಿಸಿದಂತೆ “ಟ್ರಿಪಲ್ ಪಿ” (PPP-Private Placement Programme) ಅಂತ ಒಂದಿದೆ. ಇದರ ಬಗ್ಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಅಭಿಪ್ರಾಯ ಹೇಳುತ್ತಾರೆ.ಹಲವರಿಗೆ ಇದು scam ಥರ ಕಂಡರೆ ಇನ್ನು ಕೆಲವರಿಗೆ purely legal ಅಂತನಿಸುತ್ತದೆ.ಒಟ್ಟಾರೆ ಇದರ ಬಗ್ಗೆ ಬೆಳಕು ಚೆಲ್ಲಲು ಆದೀತಾ?
  ಧನ್ಯವಾದ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: