-ಜಿ ಎನ್ ಮೋಹನ್
ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ ಒಬ್ಬ. ನನಗೆ ಅವರ ಪರಿಚಯ ಇರಲಿಲ್ಲ. ಅವರಿಗೂ. ನವಕರ್ನಾಟಕ ಆಗ ತಾನೆ ನಾನು ಮಾಧ್ಯಮವನ್ನು ಡಂಕೆಲ್ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ನೋಡಿದ ೨ ಪುಸ್ತಕಗಳನ್ನು ಪ್ರಕಟಿಸಿತ್ತು. ಚನ್ನಬಸವಣ್ಣ ಅವರಿಗೆ ಇಷ್ಟೇ ಸಾಕು. ಅವರು ಕೃತಿ ಓದಿ ಲೇಖಕರ ಬೆನ್ನತ್ತುವವರೇ ಹೊರತು ಲೇಖಕರ ಮುಖ ನೋಡಿ ಕೃತಿ ಪ್ರಕಟಿಸುವವರು ಅಲ್ಲ . ಅವರು ಇಂದು ಪ್ರಕಟಿಸಿರುವ ಅಷ್ಟೊಂದು ಪುಸ್ತಕಗಳಲ್ಲಿ ಶೇಕಡಾ ೮೦ ಕ್ಕೂ ಹೆಚ್ಚು ಲೇಖಕರು ಅವರಿಗೆ ಪುಸ್ತಕ ಪ್ರಕಟಿಸಲು ಕೈಗೆತ್ತಿಕೊಳ್ಳುವ ಮುನ್ನ ಅವರಿಗೆ ಗೊತ್ತಿರಲಿಲ್ಲ ಮತ್ತು ಪ್ರಕಟಿಸಿದ ನಂತರ ಆ ಲೇಖಕರು ಯಾರೂ ಅಣ್ಣನಿಂದ ಕಳಚಿಕೊಂಡಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ.
ನನ್ನ ಒಂದು ಪುಸ್ತಕ ಪ್ರಕಟಿಸಲೇಬೇಕು ಎಂದು ಅವರು ನನ್ನ ಬೆನ್ನ ಹಿಂದೆ ಬಿದ್ದ ರೀತಿ ಬಹುಶಃ ನನ್ನ ಬದುಕಿನಲ್ಲಿ ಮರೆಯಲಾಗದ ಘಟನೆ. ಪುಸ್ತಕ ಪ್ರಕಟಿಸುತ್ತೇವೆ ಕೊಡಿ ಎಂದು ಯಾರಾದರೂ ಗಂಟು ಬೀಳಲು ಸಾದ್ಯವೇ. ಅದು ಸಾಧ್ಯವಾಗುವುದು ಚೆನ್ನಬಸವಣ್ಣ ಅವರಿಗೆ ಮಾತ್ರ.
ನನ್ನ ಬಳಿ ಯಾವುದೂ ಪುಸ್ತಕ ಇಲ್ಲ. ನೀವು ರಾಜಶೇಖರ ಹತಗುಂದಿಯ ಪುಸ್ತಕ ಪ್ರಕಟಿಸಬಹುದೇನೋ ಎಂದೆ. ಅದಕ್ಕೇನಂತೆ ಕಳಿಸ್ರಿ ಎಂದರು. ಅಷ್ಟೇ ಬರೀ ಹತಗುಂದಿ ಮಾತ್ರವಲ್ಲ, ಇಡೀ ಹೈದರಾಬಾದ್ ಕರ್ನಾಟಕದ ಸಾಲು ಸಾಲು ಹುಡುಗರು ನೋಡು ನೋಡುತ್ತಿದ್ದಂತೆಯೇ ಬರಹಗಾರರಾಗಿ ಬೆಳೆದು ಬಿಟ್ಟರು. ಅಣ್ಣ ತುಂಬುವ ವಿಶ್ವಾಸವೇ ಅಂತಹದ್ದು.
ನಾನು ಕ್ಯೂಬಾ ಪ್ರವಾಸ ಕಥನ ಬರೆದಾಗ ಅದು ಲೋಹಿಯಾದಿಂದಲೇ ಪ್ರಕಟವಾಗಬೇಕು ಎಂದು ಅಲಿಖಿತ ಒಪ್ಪಂದ ಆಗಿಹೋಗಿತ್ತು . ಆ ಪುಸ್ತಕ ಪ್ರಕಟಿಸುವಾಗ ಅಪ್ಪನ ಬೆರಳು ಹಿಡಿದು ಕಾಣದ ರೋಡ್ ಗಳನ್ನೂ ಬೆರಗು ಕಣ್ಣಿಂದ, ಆತಂಕದಿಂದ ಮಕ್ಕಳು ದಾಟುತ್ತಾವಲ್ಲಾ ಹಾಗೆ ಅವರ ಹಿಂದೆ ತಿರುಗಿಬಿಟ್ಟೆ.
ಆಮೇಲೆ ಚೆನ್ನಬಸವನ್ನನವರ ಹಣಕಾಸಿನ ಕಷ್ಟ ಗೊತ್ತಾಗತೊಡಗಿತು. ಅವರೂ ಆಗೀಗ ನನ್ನ ಬಳಿ ಪುಸ್ತಕ ಉದ್ಯಮದ ನಿಟ್ಟುಸಿರುಗಳ ಬಗ್ಗೆ ಮಾತಾಡುತ್ತಿದ್ದರು. ಹಾಗಾಗಿ ನನಗೆ ಯಾಕೋ ಅದರ ಎರಡನೆ ಆವೃತ್ತಿ ತನ್ನಿ ಎನ್ನಲು ದೈರ್ಯವಾಗಲಿಲ್ಲ. ಅಥವಾ ಒಳೊಗೊಳಗೆ ದುರಾಸೆ ಇತ್ತೇನೋ. ನವಕರ್ನಾಟಕದ ರಾಜಾರಾಂ ಅವರನ್ನು ಪ್ರಕಟಿಸಿ ಎಂದು ಕೇಳಿದೆ. ಅವರಿಗೂ ಅಷ್ಟೇ ಚೆನ್ನಬಸವಣ್ಣನವರ ಬಗ್ಗೆ ಅಪಾರ ಗೌರವ. ಒಂದು ಮಾತು ಅವರ ಕಿವಿಗೆ ಹಾಕುವುದು ಒಳ್ಳೆಯದೇನೋ ಎಂದರು. ನಾನು ಅಣ್ಣನಿಗೆ ಫೋನ್ ಮಾಡಿದೆ. ಚೆನ್ನಬಸವಣ್ಣನವರು ಹೇಗೆ ನೊಂದುಕೊಂಡು ಬಿಟ್ಟರೂ ಎಂದರೆ ಅದು ನನ್ನ ಕಿವಿಯಲ್ಲಿ ಇನ್ನೂ ಗುಂಯ್ ಗುಡುತ್ತಲೇ ಇದೆ. ಕ್ಯೂಬಾ ನಮ್ಮ ಪ್ರಕಾಶನದ ಕೂಸು ಎಂದರು. ಪಶ್ಚಾತ್ತಾಪವಾಯಿತು. ಮೌನದ ಮೊರೆ ಹೋದೆ. ನಂತರ ಮತ್ತೆ ಅವರು ಕ್ಯೂಬಾ ಪುಸ್ತಕಕ್ಕಾಗಿ ಓಡಾಡಿದ ಪರಿ, ಆ ಸಂಭ್ರಮ ನಿಜಕ್ಕೂ ನನ್ನ ಮನಸ್ಸು ತಟ್ಟಿದೆ.
ಪುಸ್ತಕ ಮಾತ್ರ ಅಲ್ಲ, ಅಣ್ಣ ಕೊಟ್ಟ ಧೈರ್ಯ ದೊಡ್ಡದು. ಅದಕ್ಕೇ ನಾನು ಅವರನ್ನು ‘ನೆಲ ಹಸಿರು ಮುಕ್ಕಳಿಸಲು ಕಾರಣವಾಗುವ ಸೋನೆ ಹನಿ’ ಎಂದು ನನ್ನ ಪುಸ್ತಕದಲ್ಲಿ ಬಣ್ಣಿಸಿದ್ದೇನೆ.
ಚೆನ್ನಬಸವಣ್ಣ ಎಂದರೆ ಪುಸ್ತಕ, ಚೆನ್ನಬಸವಣ್ಣ ಎಂದರೆ ಪ್ರೀತಿ, ಚೆನ್ನಬಸವಣ್ಣ ಎಂದರೆ ಹುಗ್ಗಿ, ಚೆನ್ನಬಸವಣ್ಣ ಎಂದರೆ ತುಂಬು ನಗೆ. ಚೆನ್ನಬಸವಣ್ಣ ಎಂದರೆ ….
ನವೆಂ 23, 2010 @ 14:12:41
Channabasavanna the great….!