Life ಇಷ್ಟೇನೇ. . . . !?

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-33

ಸಾಲಾ ಸೋಲ ಮಾಡಿಕೊಂಡು, ಮಾರ್ಕೆಟ್ನಲ್ಲಿ ಶೇರನ್ ಕೊಂಡುಫಾರಿನ್ ದುಡ್ನಲ್ ಹೊಡೆತಾ ತಿನ್ನು Life ಇಷ್ಟೇನೇ !! ಟಂಟನಾಟನ್ ಟಂಟನ್. . .  . .  Life ಇಷ್ಟೇನೇ !! . . . . . . . . . . . . . . . . . . . . . . . . ಯೋಗರಾಜ್ ಭಟ್.

ಏನ್ ಗೊತ್ತಾ?
ನೀವು ಒಂದು ಮಾವಿನ ಸಸಿಯನ್ನು ನೆಟ್ಟು ನೀರು, ಗೊಬ್ಬರ, ಕೀಟನಾಶಕ ಎಲ್ಲಾ ಹಾಕಿ ಬೆಳೆಸುತ್ತೀರಿ ಅಂತ ಇಟ್ಟುಕೊಳ್ಳಿ. ಅದು ಬೆಳೆದು ದೊಡ್ಡದಾಗಿ ಅದರಲ್ಲಿ ಹೂ ಆಗಿ ಕ್ರಮೇಣ ಅಪರೂಪಕ್ಕೆ ಒಂದು ಮಿಡಿ ಬಿಡುತ್ತದೆ. ಇನ್ನೂ ಸ್ವಲ್ಪ ಸಮಯದ ನಂತರ ಆ ಮಿಡಿ ಬೆಳೆದು ಹಣ್ಣಾಗತೊಡಗುತ್ತದೆ. ಇನ್ನು ಸ್ವಲ್ಪ ದಿನ ಆಗಲಿ; ಹುಳಿ ಕಡಿಮೆಯಾಗಿ ಒಳ್ಳೆಯ ಸಿಹಿ ಹಣ್ಣು ಸವಿಯಬಹುದು ಅಂತ ಹಾಗೇ ಅದನ್ನು ಮರದಲ್ಲೇ ಬಿಟ್ಟಿರುತ್ತೀರಿ.


ದಿನಾ ಬೆಳಗ್ಗೆ ಎದ್ದು ಬಾಗಿಲು ತೆರೆದು ಹೊರಬಂದು ಇವತ್ತು ಕೊಯ್ಯಬಹುದೇ ಅಂತ ಖಾತ್ರಿ ಪಡಿಸಿಕೊಳ್ಳಲು ಹಣ್ಣನ್ನು ನೋಡುತ್ತೀರಿ. ಇಲ್ಲ. ಇನ್ನೊಂದು ದಿನ ಇರಲಿ. ನಳೆ ನೋಡೋಣ ಅಂತ ಗಡ್ಡ ಕೆರೆದುಕೊಂಡೂ ಬಚ್ಚಲುಮನೆ ಕಡೆ ಕಾಲೆಳೆಯುತ್ತೀರಿ.

ಅಷ್ಟರಲ್ಲಿ ಒಂದು ದಿನ ಬೆಳಗ್ಗೆ ಎದ್ದು ಬಾಗಿಲು ತೆರೆದು ಮಾವಿನ ಹಣ್ಣಿನ ಪರಿಶೀಲನೆಗೆ ಹೊರಡಬೇಕಾದರೆ ಹಣ್ಣೂ ಇಲ್ಲ, ಮಣ್ಣೂ ಇಲ್ಲ – ಎದುರಿಗೆ ಕಾಣಿಸುವುದು ನಿಮ್ಮನ್ನು ನೋಡಿ ಹಲ್ಲು ಕಿಸಿದು ಅಣಕಿಸುವಂತೆ ಕಾಣುವ ಖಾಲಿ ಗೆಲ್ಲು ಮಾತ್ರ! ಸಾಲದ್ದಕ್ಕೆ, ಅದರ ಮೇಲೆ ಮೊದಲಿಂದಲೇ ಕಣ್ಣಿಟ್ಟಿದ್ದ ಪಕ್ಕದ ಬೀದಿಯ ಪೋಲಿ ಹುಡುಗ ಅದನ್ನು ಎತ್ತಿಕೊಂಡು ಓಡುತ್ತಾ ಇರುವ ಸೀನ್ ನಿಮ್ಮ ಕಣ್ಣೆದುರಿಗೇ ಕಾಣಿಸುತ್ತದೆ. ಅಷ್ಟೆಲ್ಲಾ ಕಷ್ಟ ಪಟ್ಟಿದ್ದು, ಖರ್ಚು ಮಾಡಿದ್ದು, ಶ್ರಮವಹಿಸಿದ್ದು ಎಲ್ಲವೂ ವ್ಯರ್ಥ.


ಶೇರು ಮಾರ್ಕೆಟ್ ಕೂಡಾ ಹಾಗೇನೇ. ಬಹಳ ಮುತುವರ್ಜಿ ವಹಿಸಿಕೊಂಡು ರಿಸರ್ಚ್ ಮಾಡಿ ಸ್ನೇಹಿತರ, ಬ್ರೋಕರ್‌ಗಳ ಸಲಹೆ ಪಡೆದು, ಎನಲಿಸ್ಟ್‌ಗಳು ಕೊಟ್ಟ ತೀರ್ಥ ಕುಡಿದು, ಕಷ್ಟದ ದುಡ್ಡು ತೆತ್ತು ಖರೀದಿಸಿದ ಶೇರು ಮೇಲೇರುತ್ತಾ ಹೋಗುತ್ತದೆ. ದಿನಾ ಏರುತ್ತಿರುವ ಶೇರುಬೆಲೆಯನ್ನು ನೋಡುವುದರಲ್ಲಿಯೇ ಒಂದು ಖುಶಿ ಇದೆ. ಅದನ್ನು ಒಂದಿನ ಮಾರಿ ಅದರಿಂದ ಮುದ್ದಿನ ಮಡದಿಗೆ ಸರ್ಪ್ರೈಸ್ ಆಗಿ ತರಲಿರುವ ನೆಕ್ಲೇಸ್‌ನ ಕನಸು ಕಾಣುವುದರಲ್ಲಿ ಜೀವನದ ಮಧುರ ಕ್ಷಣಗಳಿವೆ.

ಅಂತಹ ಕನಸಿನ ಲೋಕದಲ್ಲಿ ವಿಹರಿಸುತ್ತಾ ಇರುತ್ತೀರಿ. ಅಚಾನಕ್ಕಾಗಿ ಒಂದು ಶುಭ ಗಳಿಗೆಯಲ್ಲಿ ಅಮೆರಿಕಾದಲ್ಲಿ ವಿತ್ತೀಯ ಸುನಾಮಿ ಹೊಡೆದು ಶೇರು ಬೆಲೆ ಬೀಳತೊಡಗುತ್ತದೆ. ನಿಮ್ಮ ಕಣ್ಣೆದುರಿಗೇ ಮಾರುಕಟ್ಟೆ ಕುಸಿಯುತ್ತದೆ. ಯಾರ್ಯಾರೋ ನಿಮ್ಮ ದುಡ್ಡನ್ನು ಕಸಿದುಕೊಂಡು ಪರಾರಿಯಾಗ್ತಾರೆ.

ಎಲ್ಲಾ ಕನಸುಗಳೂ ಮಾಯ; ಆ ಹೊತ್ತಿಗೆ ನಿಮಗೆ ಕಾಣಿಸುವುದು ಟೀವಿಯ ಕೆಳಬದಿಯಲ್ಲಿ, ಕೆಂಪು ಕೆಂಪು ಅಕ್ಷರಗಳಲ್ಲಿ ಬರುತ್ತಿರುವ, ಕೆಳಕ್ಕೆ ಬೊಟ್ಟು ಮಾಡುತ್ತಿರುವ ಕೆಂಪು ಬಾಣಗಳುಳ್ಳ  ಪಾತಾಳಕ್ಕಿಳಿದ ಶೇರು ಬೆಲೆಗಳ ಭಯಾನಕ ಚಿತ್ರ ಮಾತ್ರ.
ಅಷ್ಟೇ ಅಲ್ಲದೆ, ಇಷ್ಟು ದಿನ – ಅಷ್ಟೇ ಏಕೆ – ಅರ್‌ಕ್ಷಣ ಮೊದಲೂ ಕೂಡಾ ’Buy Buy’ ಎಂದು ಹುರಿದುಂಬಿಸುತ್ತಿದ್ದ ಜೋಯಿಷರೂ ಕೂಡಾ ಈಗ ‘Sell Sell’ ಎಂದು ಟಿವಿಯಲ್ಲಿ ಕುಣಿದಾಡುವುದು ಕಾಣಿಸುತ್ತದೆ. ಮರುಕ್ಷಣದಲ್ಲಿಯೇ ಕೆಲವು ಶೇರು ಪರಿಣಿತರು ಸ್ಟುಡಿಯೋದಲ್ಲಿ ಕುಳಿತು ಜಾಗತಿಕ ಮಾರುಕಟ್ಟೆಗೆ ಬಡಿದ ಅತಿ ಭೀಕರ ಗರದ ಬಗ್ಗೆ ಗಂಟೆಗಟ್ಟಲೆ ಕೊರೆಯುತ್ತಾರೆ.
ಮೊದಲೇ ಹಣ್ಣು-ವಂಚಿತರಾಗಿ ಕುಪಿತರಾದ ನಿಮಗೆ ಈ ಗೊರಟಿನ ಬಗ್ಗೆ ನಡೆಯುವ ನಾರು ನಾರಿನ ವಿಶ್ಲೇಷಣೆ ಇನ್ನಷ್ಟು ಇರಿಟೇಶನ್ ನೀಡುತ್ತದೆ. ಯಾಕೆಂದರೆ ಅಲ್ಲಿ ನಡೆಯುವ ಹರಿಕತೆಯಲ್ಲಿ ಹೊಸತು ಏನೇನೂ ಇರುವುದಿಲ್ಲ. ಎಲ್ಲಾ ಅದೇ, ಹಲವಾರು ವಾರಗಳಿಂದ ಕೇಳುತ್ತಾ ಬರುತ್ತಿರುವ ಐರ್‌ಲ್ಯಾಂಡ್ ಕ್ರೈಸಿಸ್, ಚೈನಾ ಬಡ್ಡಿ ದರ ಇತ್ಯಾದಿ.

ओउर यार , ಇವೆಲ್ಲಾ ನಾನು ಶೇರು ಕೊಳ್ಳುವಾಗಲೂ ಇದ್ದ ಸಮಸ್ಯೆಗಳಲ್ಲವೆ? ಆಗ ಯಾಕೆ ಮಾರ್ಕೆಟ್ ಮೇಲೆ ಹೋಯಿತು? ಮತ್ತೆ ಈಗ ಯಾಕೆ ಕೆಳಗೆ ಬೀಳುತ್ತಿದೆ? ಅಲ್ಲದೆ ಇವತ್ತು ಬೆಳಗ್ಗಿನವರೆಗೆ ಯಾಕೆ ಯಾರೂ ಈ ಮಾತು ಹೇಳಿಲ್ಲ? ಈ ಶೇರುಗಳ ಏರಿಳಿತಗಳನ್ನು ಹೇಗಪ್ಪಾ ಅರ್ಥ ಮಾಡಿಕೊಳ್ಳುವುದು? ಇತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತವೆ.

ಟಿವಿಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಹೃದಯ ಹಿಂಡಿ ಜ್ಯೂಸ್ ತೆಗೆಯುವಂತಹ ಗೊರಟು ಮಹಾತ್ಮೆಯನ್ನು ಆಫ್ ಮಾಡುತ್ತೀರಿ. ನೆಕ್ಲೇಸಿನ ಮಧುರ ಯಾತನೆಯನ್ನು ಸವಿಯುವುದು ಬಿಡಿ, ಇದ್ದ ಗಂಟನ್ನೂ ಕಳೆದುಕೊಂಡ ನಿಮ್ಮ ಯೋಗ್ಯತೆಯ ಬಗ್ಗೆ ಇನ್ನು ಮುದ್ದಿನ ಮಡದಿ ಮಾಡಲಿರುವ ೨೬/೧೧ ಅನ್ನು ನೆನೆಸಿಯೇ ಬೆವರುತ್ತೀರಿ.
*****************
ಅದಿರಲಿ, ಈಗ ಶೇರು ಬೆಲೆಗಳು ಕಡಿಮೆಯಿದ್ದ ಒಂದು ಕಾಲದಿಂದ ಆರಂಭ ಮಾಡೋಣ. ಜಾಗತಿಕ ಆರ್ಥಿಕ ಸ್ಥಿತಿ, ಭಾರತದ ಪ್ರಗತಿ, ಕಂಪೆನಿಗಳ ಸಾಧನೆ- ಹೀಗೆ ಶೇರುಬೆಲೆಗಳ ಮಟ್ಟ ಕೆಳಗಿರುವಾಗ Lifeನಲ್ಲಿ ಒಳ್ಳೆಯದು ಮಾತ್ರ ಕಾಣಿಸುತ್ತದೆ.

ಚೀನಾದ ಪ್ರಗತಿ ಕಾಣಿಸುತ್ತದೆ, ಅವರ ಹಣದುಬ್ಬರ ಕಾಣಿಸುವುದಿಲ್ಲ. ಡಾಲರ್‌ನ ಸುಲಭ ಬಡ್ಡಿದರ ಮಾತ್ರ ಕಾಣಿಸುತ್ತದೆ ಅದರ ಇಳಿಯುತ್ತಿರುವ ಮೌಲ್ಯ ಕಾಣಿಸುವುದಿಲ್ಲ. ಯಾಕೆಂದರೆ ಶೇರುಗಳು ಚೀಪ್ ಆಗಿ ಸಿಗುತ್ತಿವೆ. ಎಲ್ಲವೂ ರಿಲೆಟಿವ್- ಇರುವ ಶೇರು ಬೆಲೆಗೆ ಜಾಗತಿಕ ಪರಿಸ್ಥಿತಿಯು ಅನುಕೂಲಕರವಾಗಿಯೇ ಕಾಣಿಸುತ್ತವೆ. ಎಲ್ಲರೂ ಕೊಳ್ಳತೊಡಗುತ್ತಾರೆ. ಬೆಲೆಗಳು ಏರುತ್ತಾ ಹೋಗುತ್ತವೆ. Market is in a Bull run
ಹೀಗೆ ಶೇರು ಬೆಲೆಗಳು ಏರುತ್ತಾ ಏರುತ್ತಾ ಹೋದ ಹಾಗೆ ಒಂದು ಹಂತದಲ್ಲಿ ಅದೇ ಜಾಗತಿಕ ಸ್ಥಿತಿಗತಿಗಳಿಗೆ ಹೋಲಿಕೆಯಲ್ಲಿ ದುಬಾರಿಯೆಂದು ಕಾಣಿಸತೊಡಗುತ್ತದೆ. ಇನ್ನೂ ಜಾಸ್ತಿ ಏರಲಾರದ Overstretched ಮಟ್ಟವನ್ನು ತಲುಪುತ್ತದೆ. ಮೊದಲೇ ದುಡ್ಡು ಹೂಡಿದ ದೊಡ್ಡ ದೊಡ್ಡ ಕುಳವಾರುಗಳಿಗೆ ಇನ್ನು ಕಾದು ಪ್ರಯೋಜನವಿಲ್ಲ ಎಂದನಿಸುತ್ತದೆ.

ಶೇರುಗಳನ್ನು ಮಾರಿ ಲಾಭಾಂಶವನ್ನು ಕಿಸೆಗೇರಿಸುವ ಮನಸ್ಸುಂಟಾಗುತ್ತದೆ. ಶೇರನ್ನು ಮಾರದೆ ದುಡ್ಡು ನಿಜವಾಗುವುದಿಲ್ಲವಲ್ಲ? ಹಾಗೆ, ಶೇರುಗಳು ಇನ್ನಷ್ಟೂ ಮೇಲಕ್ಕೆ ಏರಲು ಕಾರಣಗಳು/ನೆಪಗಳು ಇಲ್ಲ ಎಂದು ಕಾಣತೊಡಗಿದಾಗ ಜನರು ಶೇರುಗಳನ್ನು ಮಾರಲು ತೊಡಗುತ್ತಾರೆ. ಕೆಲವರು ಇನ್ನೂ ಭವಿಷ್ಯದ ಭರವಸೆಯಲ್ಲಿ ಖರೀದಿಸುತ್ತಾ ಇರುತ್ತಾರೆ.

ಈವಾಗ ಸಣ್ಣ ಪುಟ್ಟ ಏರಿಳಿತಗಳು  ಕಾಣಿಸುತ್ತವೆ. ಒಂದು ರೀತಿಯ ಪೂರ್ತಿ ಮೇಲೇರಲೂ ಆಗದ ಪೂರ್ತಿ ಕೆಳಕ್ಕೆ ಇಳಿಯಲೂ ಆರದ ತ್ರಿಶಂಕು ಸ್ಥಿತಿಯನ್ನು ತಲಪುತ್ತದೆ. ಭೌತ ಶಾಸ್ತ್ರದ Dynamic Equilibrium ಥರ ನಿಂತಲ್ಲೇ ಅಲ್ಪ ಸ್ವಲ್ಪ ಏರಿಳಿಯುತ್ತಾ ಮತ್ತದೇ ಹಂತಕ್ಕೆ ಬರುತ್ತದೆ. ಈಗ market is Range bound. ಇದರಲ್ಲಿ ಮಾರ್ಜಿನ್/ಡೇ ಟ್ರೇಡಿಂಗ್ ನವರದ್ದೂ ಸಾಕಷ್ಟು ಕೈ ಇರುತ್ತದೆ.
ಆದರೆ ಇವೆಲ್ಲಾ ನಿಮಗೆ ಮಾಮೂಲು ಎನಿಸಬಹುದು. ಈ ರೀತಿಯ ಏರಿಳಿತದ ಬಗ್ಗೆ ಯಾರಿಗೂ ಸೀರಿಯಸ್ಸಾದ ಆಕ್ಷೇಪ ಇರದಿರಬಹುದು. ಸಮಸ್ಯೆ ಬರುವುದು ದೊಡ್ಡ ಕುಸಿತಗಳ ಬಗ್ಗೆ ಮಾತ್ರ. ಅದು ಹೇಗೆ ನಡೆಯುತ್ತದೆ? ಮತ್ತು ಯಾಕೆ ನಡೆಯುತ್ತದೆ?
ಯಾವುದೇ ಮಾರುಕಟ್ಟೆಯಲ್ಲಿ ಯಾರದ್ದೋ ನಿಯಂತ್ರಣ ಇರಲೇ ಬೇಕಲ್ಲ? ಯಾರದ್ದು ಸಿಂಹಪಾಲು ಇದೆಯೋ ಅವರ ನಿಯಂತ್ರಣ ಜಾಸ್ತಿ ಇರುತ್ತವೆ. ನಮ್ಮ ಸಂದರ್ಭದಲ್ಲಿ ನೋಡಿದರೆ ವಿದೇಶಿ ಮತ್ತು ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರ ಕೈ ಪ್ರಬಲವಾಗಿದೆ. ಅದರಲ್ಲೂ ಪರದೇಶಿಗಳದ್ದೇ ಜಾಸ್ತಿ.

ಅಲ್ಲದೆ ಅವರುಗಳು ಯಾವತ್ತೂ ಬೇರೆ ದೇಶದ ಮಾರುಕಟ್ಟೆ, ಚಿನ್ನ, ತೈಲ ಅಂತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಇಲ್ಲಿಂದಲ್ಲಿಗೆ ಓಡಿಹೋಗುವುದು ಅವರುಗಳಿಗೆ ಅತ್ಯಂತ ಸುಲಭ ಹಾಗೂ ಕ್ಷಣಾರ್ಧದ ಕೆಲಸ. ಇಂತಹ ಯಾವುದೋ ಒಂದು ಕ್ಷಣದಲ್ಲಿ ಯಾವುದೇ ಒಂದು ಬಲಿಷ್ಟ ಕೈ  ಭಾರೀ ಪ್ರಮಾಣದಲ್ಲಿ ಮಾರತೊಡಗಿದರೆ ಮಾರುಕಟ್ಟೆಯಲ್ಲಿ ಸಪ್ಲೈ ಜಾಸ್ತಿಯಾಗಿ ಶೇರು ಬೆಲೆ ಕುಸಿಯತೊಡಗುತ್ತದೆ. ಈ ಸಂದರ್ಭದಿಂದ ಮಾರುಕಟ್ಟೆಯಲ್ಲಿ ಎಲ್ಲರಿಗೂ ಎಲ್ಲಾ ಕೆಟ್ಟದ್ದೇ ಕಾಣಿಸತೊಡಗುತ್ತದೆ.

ಮೊದಲು ಕಂಡರೂ ಕಾಣಿಸದ ಚೀನಾದ ಹಣದುಬ್ಬರ, ಐರ್‌ಲ್ಯಾಂಡಿನ ದಿವಾಳಿತನ ಎಲ್ಲವೂ ಸಡನ್ನಾಗಿ ಕಾಣಿಸತೊಡಗುತ್ತದೆ. ಎಲ್ಲೆಡೆಗಳಲ್ಲೂ ಅದರದ್ದೇ ಮಾತು.
ಈಗ ಜಾರುಬಂಡಿ. ಒಬ್ಬ ಶೇರು ಮಾರಿ ಬೆಲೆ ಇಳಿಯತೊಡಗಿದ ಕೂಡಲೇ ಇನ್ನು ಇಟ್ಟುಕೊಂಡರೆ ಪ್ರಯೋಜನವಿಲ್ಲ ಅಂತ ಬೇರೆಯವರೂ ಸೆಲ್ ಮಾಡಲು ಶುರು ಮಾಡುತ್ತಾರೆ. ಬೆಲೆ ಇನ್ನಷ್ಟೂ ಇಳಿಯುತ್ತದೆ. ಇನ್ನಷ್ಟು ಜನ ಮಾರಲು ತೊಡಗುತ್ತಾರೆ. ಶೇರು ಬೆಲೆ ಜಾರುಬಂಡಿಯಲ್ಲಿ ಕೆಳಕ್ಕಿಳಿಯತೊಡಗುತ್ತದೆ.
ಇದೇ ಸಮಯಕ್ಕಾಗಿ ಕಾಯುತ್ತಿರುವ ಬೇರ್ ಅಥವ ಕರಡಿ ಆಪರೇಟರ್‌ಗಳು ತಮ್ಮಲ್ಲಿ ’ಇಲ್ಲದ’ ಶೇರುಗಳನ್ನು ಮಾರಲು ಹೊರಡುತ್ತಾರೆ. ಅಂದರೆ ಶಾರ್ಟ್ ಸೆಲ್ ಅಥವ ಶಾರ್ಟಿಂಗ್ ಮಾಡತೊಡಗುತ್ತಾರೆ. ಮಾರ್ಜಿನ್/ಡೇ ಮತ್ತು ಫ್ಯೂಚರ್ಸ್ ಮಾರುಕಟ್ಟೆಗಳಲ್ಲಿ ’ದಬಕ್ ದಬಾ . . .  ಐಸಾ’ ಅನ್ನುತ್ತಾ ಶಕ್ತಿ ಮೀರಿ ಶೇರುಗಳಲ್ಲು ಕೆಳಕ್ಕೆ ತಳ್ಳುತ್ತಾರೆ.

ಶೇರುಬೆಲೆ ಕೆಳಕ್ಕಿಳಿದ ಮೆಲೆ ಕಡಿಮೆ ಬೆಲೆಗೆ ವಾಪಾಸು ಖರೀದಿಸಿ ದುಡ್ಡು ಮಾಡುವುದು ಅವರ ರಣತಂತ್ರ. ಮೊದಲೇ ಬಳಲಿ bend-ಆಗಿದ್ದ ಬುಲ್ ಗಳಿಗೆ ಇವರ ಬಲಿಷ್ಟ ಬಾಹುಗಳಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. Market comes under Bear grip.

ಇಷ್ಟೆಲ್ಲ ಆದ ಮೇಲೆ ಇನ್ನು ಆರಂಭವಾಗುವುದು ಪ್ಯಾನಿಕ್. ನಮ್ಮ ನಿಮ್ಮಂತಹ ಸಣ್ಣ ಪುಟ್ಟ ಚಿಲ್ರೆ ಹೂಡಿಕೆದಾರರು ಗಾಬರಿ ಬೀಳುತ್ತಾರೆ. ನಷ್ಟ ಆದರೆ ನಷ್ಟ ಇನ್ನು ಕಾದರೆ ಎಲ್ಲಾ ಮುಳುಗೀತು ಎಂಬ ಭೀತಿಯಲ್ಲಿ ಇದ್ದದ್ದನ್ನು ಸಿಕ್ಕ ಬೆಲೆಗೆ ಮಾರಿಬಿಡುತ್ತಾರೆ.
ಇದು ಶೇರು ಮರ ಹೂ ಬಿಟ್ಟು , ಕಾಯಿ ಆಗಿ ಹಣ್ಣಾಗಿ ದೊಪ್ಪನೆ ಕೆಳಕ್ಕೆ ಬೀಳುವ ಕತೆ- ಒಂದು ಸರಳೀಕೃತ ಮಾದರಿ. ವಾಸ್ತವದಲ್ಲಿ ತಂಬೂರದ ಅಲೆಗಳಂತೆ ಕ್ರಮಬದ್ಧವಾಗಿ ಸುಶ್ರಾವ್ಯವಾಗಿ ಸುಲಲಿತವಾಗಿ ಶೇರು ಬೆಲೆಗಳು ಏರಿಳಿಯುವುದಿಲ್ಲ.

ಆಗಾಗ್ಗೆ ಮಾರುಕಟ್ಟೆ ಬೇರೆ ಬಂದೊದಗುವ ಯಾವ್ಯಾವುದೋ ಕಾರಣಕ್ಕೆ ಇಲೆಕ್ಟ್ರಿಕ್ ಗಿಟಾರ್‌ನಿಂದ ಶಾಕ್ ಹೊಡೆಸಿಕೊಂಡವನಂತೆ ಕರ್ಕಶ ದನಿಯಲ್ಲಿ ಕೂಗಾಡುವುದೂ ಇದೆ. ಕಡಿಮೆ ಬೆಲೆಮಟ್ಟದಿಂದ ಮಾರುಕಟ್ಟೆ ಏರುವ ಸಮಯದಲ್ಲಿ ಎಲ್ಲಾ ನ್ಯೂಸೂ ಗುಡ್ ನ್ಯೂಸೇ. ಬಿರುಗಾಳಿಯನ್ನೂ ಡಿಸ್ಕೌಂಟ್ ಮಾಡಿ ಮುಂದೋಡುತ್ತದೆ. ಬೆಲೆಗಳು ಅತಿಯಾಗಿ ಮಾರುಕಟ್ಟೆ ಬೀಳುವ ಸಮಯ ಬಂದಾಗ ಯಾವುದೇ ಸಣ್ಣ ಗಾಳಿ ತಾಗಿದರೂ ಸಾಕು ಬಿದ್ದೇ ಬಿಡುತ್ತದೆ. ಮಾರುಕಟ್ಟೆಯಲ್ಲಿ ಆಡ ಹೋಗುವವರಿಗೆ ಆ ಸಮಯ ಸಂದರ್ಭಗಳ ಅರಿವು ಬಹು ಮುಖ್ಯ.
ಶೇರುಗಳ ಮೂಲಭೂತಗಳು/Fundamentals- ಇತರ ದೇಶಗಳೊಡನೆ ಸಾಪೇಕ್ಷವಾಗಿ ಕಾಣಿಸುವ ದೇಶದ ಅರ್ಥಿಕ ಪ್ರಗತಿ, ಕಂಪೆನಿಗಳ ಸಾಧನೆಗಳು- ತ್ರೈಮಾಸಿಕ ಫಲಿತಾಂಶಗಳು. ಭವಿಷ್ಯದ ನಿರೀಕ್ಷೆಗಳು. ಜಾಗತಿಕ ಆರ್ಥಿಕ ವ್ಯವಸ್ಥೆ/ಮಾರುಕಟ್ಟೆಗಳ ಆಗುಹೋಗುಗಳು, ವಿದೇಶಿ ದುಡ್ಡಿನ ಒಳ/ಹೊರ ಹರಿವು- ಡಾಲರ್ ಕ್ಯಾರಿ ಟ್ರೇಡ್, ಚಿನ್ನ,ತೈಲ ಇತ್ಯಾದಿ ಕಮಾಡಿಟಿಗಳ ಏರಿಳಿತಗಳು, ಏರಿಳಿಯುವ ವಿನಿಮಯ ದರಗಳು- ಎಲ್ಲವೂ ಶೇರು ಬೆಲೆ ನಿರ್ಣಯಿಸುವುದು ಸತ್ಯ. ಎಲ್ಲವೂ ಒಂದು ದೀರ್ಘಕಾಲಿಕ ನೆಲೆಯಿಂದ ಶೇರು ಮೌಲ್ಯವನ್ನು ಭಾದಿಸುತ್ತದೆ. ಆದರೆ ಅಷ್ಟೇ ಸತ್ಯವೇನೆಂದರೆ ಅಗಾಗ್ಗೆ ಮಾರುಕಟೆಯಲ್ಲಿ ಈ ಫಂಡಮೆಂಟಲ್ಸ್‌ಗಳನ್ನು ಮೀರಿ ಹರಿಯುವ ಸೆಂಟಿಮೆಂಟ್ಸ್ ಅಥವ ಭಾವನೆಗಳ ಮಹಾಪೂರ.
ಮಾರುಕಟ್ಟೆಯಲ್ಲಿ ಹರಿಯುವ ’ಗ್ರೀಡ್ ಐಂಡ್ ಫಿಯರ್’ ಶೇರುಗಳ ಏರಿಳಿತವನ್ನು ಸಾಕಷ್ಟು ಮಟ್ಟಿಗೆ ನಿರ್ಧರಿಸುತ್ತದೆ.

ಎಷ್ಟರ ಮಟ್ಟಿಗೆ ಎಂದರೆ ಒಮ್ಮೊಮ್ಮೆ ನಮ್ಮಲ್ಲಿ ಕೆಲವರು ಸೆಂಟಿಮೇಂಟೇ ಅತಿಮುಖ್ಯವೋ ಮತ್ತು ಫಂಡಮೆಂಟಲ್ಸ್‌ಗಳನ್ನು ಬರೇ ನೆಪ ಮಾತ್ರಕ್ಕೆ ಬಳಸಿಕೊಳ್ಳಲಾಗುತ್ತವೆಯೋ ಎಂಬ ತೀವ್ರ ಕಳವಳಕ್ಕೆ ತುತ್ತಾಗುತ್ತೇವೆ.
ಓ ದೇವರೇ, ಹಾಗಾಗದಿರಲಿ!
***************

ಟಿಪ್ಸ್:
ಯಾವುದೇ ಕಾರಣಕ್ಕೂ SB ಖಾತೆಯಲ್ಲಿ ದುಡ್ಡು ಇಟ್ಟುಕೊಂಡಿದ್ದರೆ ಅದಕ್ಕೆ ಬರುವ ಬಡ್ಡಿ ಮೊತ್ತವನ್ನು ಸಂಪೂರ್ಣವಾಗಿ ಆದಾಯಕ್ಕೆ ಸೇರಿಸಿ ಅನ್ವಯ ದರದಲ್ಲಿ ಕರ ತೆರಬೇಕಾಗುತ್ತದೆ. (ಮೊದಲು ಇದಕ್ಕೆ ಇದ್ದ ಕರವಿನಾಯತಿಯ ಸೆಕ್ಷನ್ ೮೦ ಎಲ್ ಈಗ ಇಲ್ಲ) ಆದರೆ ಪೋಸ್ಟಲ್ ಸೇವಿಂಗ್ಸ್‌ನ SB ಬಡ್ಡಿದರದ ಮೇಲೆ ಸೆಕ್ಷನ್ ೧೦ ಅನುಸಾರ ಆದಾಯ ಕರ ಇರುವುದಿಲ್ಲ. ಬಡ್ಡಿ ದರ ೩.೫% ಮತ್ತು ಇದರಲ್ಲಿ ಕನಿಷ್ಟ ಬ್ಯಾಲನ್ಸ್ ೫೦ ಹಾಗೂ ಗರಿಷ್ಟ ೧ ಲಕ್ಷ ರೂಪಾಯಿ ಇರಿಸಬಹುದಾಗಿದೆ. ಚೆಕ್ ಸೌಲಭ್ಯ ಇದೆ.

ಅಟ್ಯಾಚ್‌ಮೆಂಟ್:
ಕಾಸು-ಕುಡಿಕೆಯಲ್ಲಿ ಭಿನ್ನ ಮತೀಯರ ಹಾವಳಿ ಜೋರಾಗುತ್ತಿದೆ. ಗುರುಗುಂಟಿರಾಯರು ಹಾಗೂ ಅವರ ಲಾಯರ್ ಶ್ರೀನಿವಾಸ ಉಪಾಧ್ಯಾಯರು ಉಡುಪಿಯ ಸಾಹಿತಿ ಕು.ಗೋ ಬಳಿ ಹೋಗಿ ಏನೇನೂ ಗುಸುಗುಸು ಅವರ ಕಿವಿ ತುಂಬಿಸಿದ್ದಾರಂತೆ. ಕು.ಗೋ ನನಗೆ ಶೋಕಾಸ್ ನೋಟೀಸ್ ಕಳಿಸಿದ್ದಾರೆ. ಸಧ್ಯಕ್ಕೆ ದೀಪ್ತಿಯ ನಾಡಿನಲ್ಲಿ ಫಿಶ್ ಚಟ್ನಿ ಅರೆಯುವ ಕೆಲಸದಲ್ಲಿ ಬಿಜಿಯಾಗಿರುವ ನಾನು ಸ್ವಲ್ಪ ಟೈಮ್ ಕೇಳಿದ್ದೇನೆ. ವಾಪಾಸು ಉಡುಪಿಗೆ ಹೋದ ಬಳಿಕ ಕು.ಗೋ ಮನೆಯಲ್ಲಿ ನಡೆಯುವ ಶಾಂತಿ ಸಭೆಗೆ ಹೋಗಬೇಕು; ಏನಿಲ್ಲದಿದ್ದರೂ ಅವರ ಮಗಳು ಆಶಾ ಟೀಚರ್ ಮಾಡಿ ಕೊಡುವ ಬಿಸಿ ಬಿಸಿ ದೋಸೆಯನ್ನು ಸವಿಯಲಾದರೂ ಹೋಗಲೇಬೇಕು.

========================

1 ಟಿಪ್ಪಣಿ (+add yours?)

  1. prakashchandra
    ನವೆಂ 22, 2010 @ 12:32:03

    Duddu- blooddu onde kade iravaaradanthe, haage share kooda onde kade iddare kondavanige lossey…!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: