ಸೂರಿ -3: ತಹಸೀಲ್ದಾರ್ ವೆಂಕಟಕೃಷ್ಣರಾವ್…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 3

ಪಾತ್ರ ಮೂರು. ತಹಸೀಲ್ದಾರ್ ವೆಂಕಟಕೃಷ್ಣರಾವ್.

(ಪೂರ್ಣ ಓದಿಗೆ ಯು ಆರ್ ಅನಂತಮೂರ್ತಿಯವರ ಕಥೆ: ’ಸಂಯೋಗ’) ದಾವಣಗೆರೆಗೆ ತಹಸೀಲ್ದಾರರಾಗಿ ನಾಲ್ಕು ವರ್ಷಗಳ ಹಿಂದೆ ಬಂದ ವೆಂಕಟಕೃಷ್ಣರಾವ್ ತುಂಬಾ ಬದಲಾಗಿದ್ದಾರಂತೆ, ಹಾಗಂತ ಅವರನ್ನು ಮೊದಲಿನಿಂದಲೂ ಬಲ್ಲವರು ಹೇಳುತ್ತಾರೆ. ಅವರು ಎಷ್ಟೇ ಬದಲಾಗಲಿ ಅವರು ತಲೆಗೆ ಹಚ್ಚುವ ಕ್ಯಾಂಥಡ್ರಿನ್ ಎಣ್ಣೆ, ಮುಖಕ್ಕೆ ಹಚ್ಚುವ ಆಫ್ಗಾನ್ ಸ್ನೋ, ಮತ್ತು ಸದಾ ತೊಡುವ ಗರಿಗರಿ ಬಟ್ಟೆ ಮಾತ್ರ ಬದಲಾಗಿಲ್ಲ.

ಬದಲಾಗಿರೋದು ಏನೂ ಅಂದರೆ, ಮೊದಲು ಮುಖದ ಮೇಲೆ ಸದಾ ಅಂಟಿಸಿಕೊಂಡೇ ಇರುತ್ತಿದ್ದ ಒಂದು ಸಾದಾ ನಗು ಈಗಿಲ್ಲ. ಮುಖದ ಮೇಲೆ ಶಿಲ್ಪಿಯೊಬ್ಬ ಉಳಿಯಲ್ಲಿ ಕೆತ್ತಿದಂತೆ ನೇರವಾದ, ಬಿಗಿದ ಗೆರೆಗಳು. (ತರಹೇವಾರಿ ತಹಸೀಲ್ದಾರರನ್ನು ಇಲ್ಲೀವರೆಗೆ ಕಂಡಿರುವ ಆಫೀಸಿನ ಸಿಬ್ಬಂದಿಗೆ ಮಾತ್ರ ಈ ಬಿಗಿದ, ನಿರ್ಭಾವುಕತೆಯನ್ನೇ ಸ್ಧಾಯೀ ಭಾವವನ್ನಾಗಿರಿಸಿಕೊಂಡ ಮುಖ ಯಾವ ಅಚ್ಚರಿಯನ್ನೂ ತಂದಿಲ್ಲ. ಈ ಹಿಂದಿನ ತಹಸೀಲ್ದಾರರೊಬ್ಬರು ತಾವು ಬರುವ ಸಮಯಕ್ಕೆ ಸರಿಯಾಗಿ ಆಫೀಸಿನ ಸಿಬ್ಬಂದಿಯೆಲ್ಲಾ ಗೇಟಿನ ಎರಡೂ ಬದಿಗಳಲ್ಲಿ ಎರಡು ಸಾಲು ಮಾಡಿ ನಿಂತಿರಬೇಕು, ತಾವು ಆ ಸಾಲಿನ ನಡುವೆ ಬರತಕ್ಕವರು ಎಂದು ಫರ್ಮಾನು ಹೊರಡಿಸಿದ್ದರು.

ಇನ್ನೊಬರು ಛಾರ್ಜ್ ಕೈಗೆತ್ತಿಕೊಂಡ ಕೂಡಲೇ ಆಫೀಸಿನ ಬಲ ಗೋಡೆಯನ್ನು ಒಡೆದು ಅದಕ್ಕೊಂದು ಬಾಗಿಲು ಹಾಕಿಸಿ ಆಚೆ ಎಂಟಡಿ-ಆರಡಿ ಒಂದು ಚೇಂಬರ್ (ಜಾಗ ಸಿಕ್ಕಿದ್ದೇ ಅಷ್ಟು) ಕಟ್ಟಿಸಿ, ಅಲ್ಲಿ  ಸಾರ್ವಜನಿಕರಿಗೆ ದರ್ಶನ ಭಾಗ್ಯವನ್ನು ಕರುಣಿಸಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಆ ಪ್ರೈವೇಟ್ ಚೇಂಬರ್ ಇನ್ನೂ ಇದೆ.

ಆದರೀಗ ಅದು ತಹಸೀಲ್ದಾರರ ಪ್ರೈವೇಟ್ ಚೇಂಬರ್ ಆಗಿದೆ. ವೆಂಕಟಕೃಷ್ಣರಾಯರ ಮಧ್ಯಾಹ್ನದ ಭೋಜನ, ನಂತರದ ಒಂದರ್ಧ ತಾಸಿನ ಶಯನ ಎರಡೂ ಅಲ್ಲೇ. ಯಾರಾದರೂ ತೀರಾ ಆಪ್ತರು ಬಂದರೆ ಅವರೊಂದಿಗಿನ ಭೇಟಿ ಕೂಡಾ ಅಲ್ಲೇ. ಮಾತು ಎಲ್ಲಿಗೋ ಹೋಯಿತು. ಮತ್ತೆ ವೆಂಕಟಕೃಷ್ಣರಾಯರ ವಿಷಯಕ್ಕೆ ಬರುತ್ತೇನೆ.) ಗೆಳೆಯರೊಂದಿಗೋ, ಮನೆಮಂದಿಯ ಜೊತೆಗೋ ಕುಶಲೋಪರಿಯಲ್ಲಿ ಮುಳುಗಿರುವಾಗ ನಳನಳಿಸುವ ಮುಖಸಮೀಪದಲ್ಲೆಲ್ಲಾದರೂ ಸಿಬ್ಬಂದಿಯ ವಾಸನೆ ಸಿಕ್ಕಿದೊಡನೇ ಅಡ್ಡ ಮಲಗಿದ ಳಕಾರಕ್ಕೆ ತಿರುಗಿಬಿಡುತ್ತದೆ.

ಹಗುರವಾದ ದನಿ ಗಟ್ಟಿಯಾಗಿ ಕರ್ಕಶವಾಗುತ್ತದೆ. ತಹಸೀಲ್ದಾರ್ ವೆಂಕಟಕೃಷ್ಣರಾಯರ ದೇಹ ಕೂಡಾ ಆ ಪದವಿಯ ಘನತೆಗೆ ಹೇಗೆ ಹೊಂದಿಕೊಂಡಿದೆ ಎಂದರೆ, ಅಲ್ಲೀವರೆಗೂ ಹಗುರಾಗಿ, ಬಳಕುವ ದೇಹ, ಆಫೀಸಿನ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೇ ನೆಟ್ಟಗಾಗುತ್ತದೆ. ಅದಕ್ಕೊಂದು ದರ್ಪ ಮೆತ್ತಿಕೊಳ್ಳುತ್ತದೆ. ತಹಸೀಲ್ದಾರ್ ಸಾಬೇಬರು ಆಫೀಸಿನ ಮುಂದಿನ ನಾಕು ಮೆಟ್ಟಿಲುಗಳನ್ನು ಟಕಟಕ ಸದ್ದಿನೊಂದಿಗೆ ಏರುತ್ತಿದ್ದಂತೇ, ಇಡೀ ಸಿಬ್ಬಂದಿ ಎದ್ದು ನಿಲ್ಲುತ್ತದೆ.

ಅವರು ತಮ್ಮ ಛೇಂಬರ್‌ಅನ್ನು ಪ್ರವೇಶಿಸುವವರೆಗೂ ಸಿಬ್ಬಂದಿ ನಿಂತೇಯಿದ್ದು, ಅವರ ಬೆನ್ನು ಬಾಗಿಲ ಹಿಂದೆ ಮರೆಯಾಯಿತೋ, ಒಂದು ನಿಟ್ಟುಸಿರನ್ನು ಅಂದಿನ ಖರ್ಚಿನ ಲೆಕ್ಕದಲ್ಲಿ ಆ ಕಡೆಗೆ ಒಗೆದು ಅವತ್ತಿನ ದಿನಚರಿಗೆ ಅಣಿಯಾಗುತ್ತದೆ. ಆ ಕ್ಷಣದಿಂದ ಸಂಜೆಯ ಐದೂವರೆಯವರೆಗೂ ಆಫೀಸಿನಲ್ಲಿ ಪಕ್ಕೆ ಮುರಿದು ಬಿದ್ದ ಮೌನ ಕಿವಿಗಡಚಿಕ್ಕುತ್ತದೆ. ಯಾರಾದರೂ ಬಂದಲ್ಲಿ ಯಾವುದೋ ಪ್ರೈಮರಿ ಶಾಲೆಯ ತರಗತಿಯೊಂದಕ್ಕೆ ಬಂದ ಅನುಭವವಾಗುತ್ತದೆ.

ವೆಂಕಟಕೃಷ್ಣರಾಯರು ತುಂಬಾ ಸ್ಟ್ರಿಕ್ಟು. ಹಾಗಂತ ಇಡೀ ಜಗತ್ತೇ ಹೇಳತ್ತೆ. ಕಾನೂನಿನ ಚೌಕಟ್ಟು ಬಿಟ್ಟು ಒಂದು ನೂಲು ಆಚೀಚೆ ಕದಲುವ ಜಾಯಮಾನವಲ್ಲ ಅವರದ್ದು. ಅದು ಎಲ್ಲರಿಗೂ ಗೊತ್ತು. ಆದರೂ ಒಮ್ಮೊಮ್ಮೆ ಅದು ವಿಪರೀತವಾಗಿ ಬಿಡುತ್ತದೆ. ಯಾರೇ ಯಾವುದೇ ಫೈಲು ಒಯ್ದರೂ ವೆಂಕಟಕೃಷ್ಣರಾಯರು ಕೇಳುವ ಮೊದಲ ಪ್ರಶ್ನೆ, ‘ಪ್ರೊಸೀಜರ್ ಫಾಲೋ ಮಾಡಿದೀರೇನ್ರೀ? ನಾನು ತುಂಬಾ ಸ್ಟ್ರಿಕ್ಟು. ಪ್ರಾಪರ್ ಚಾನೆಲ್‌ನಿಂದ ಬಂದಿದ್ರೆ ಇಲ್ಲಿಡಿ. ಇಲ್ಲಾಂದ್ರೆ ವಾಪಸ್ಸು ತಗಂಡು ಹೋಗಿ.‘ ಪ್ರೊಸೀಜರ್‌ಅನ್ನು ಸರಿಯಾಗಿ ಫಾಲೋ ಮಾಡಿದ, ಸದರೀ ಫೈಲು ಪ್ರಾಪರ್ ಚಾನೆಲ್‌ನಿಂದಾನೇ ಬಂದಿರುವ ಬಗ್ಗೆ ಪುರಾವೆಗಳನ್ನು ಒದಗಿಸುವ ಜವಾಬ್ದಾರಿ ಫೈಲನ್ನು ತಹಸೀಲ್ದಾರರ ಮುಂದಿಟ್ಟವರದ್ದು.

ಎಲ್ಲವೂ ಸರಿಯಾಗಿದೆ ಎಂದು ಖಾತ್ರಿಯಾದ ಮೇಲೇ ವೆಂಕಟಕೃಷ್ಣರಾಯರು ಫೈಲನ್ನು ತೆಗೆದು ನೋಡುವ ಉಸಾಬರಿಗೆ ಹೋಗುತ್ತಿದ್ದರು. ಒಂದು ವೇಳೆ ಎಲ್ಲಾದರೂ ಎಡವಟ್ಟಾಗಿದ್ದಲ್ಲಿ ಫೈಲು ತಂದವರ ಕಥೆ ಮುಗೀತು. ಅದು ಯಾರೇ ಆಗಿರಬಹುದು. ಅವರವರ ಅಂದಂದಿನ ಗ್ರಹಚಾರಕ್ಕೆ ತಕ್ಕಂತೆ ಅಷ್ಟಷ್ಟು ಪ್ರಸಾದ ಗ್ಯಾರಂಟಿ. ‘ಬುದ್ಧಿಯಿದೆಯೇನ್ರೀ ನಿಮಗೆ? ಇದಕ್ಕೆ ಸೈನ್ ಮಾಡೀ ಅಂತೀರಲ್ಲಾ, ಯಾರ ಹತ್ರ ಮಾತಾಡ್ತಾಯಿದೀರಾ ಗೊತ್ತೇನ್ರೀ ನಿಮಗೆ? ಯಾರ ಮುಂದೆ ನಿಂತಿದೀರಾ ಅಂತನಾದ್ರೂ ಗೊತ್ತಾ? ವಾಪಸ್ಸು ತಗಂಡು ಹೋಗಿ. ಸರಿ ಮಾಡಿ ತನ್ನಿ. ಇನ್ನೊನ್ಸಲ ಇಂಥಾ ತಪ್ಪು ಮಾಡಿದ್ರೆ ಐ ಶಲ್ ಸಸ್ಪೆಂಡ್ ಯೂ. ತಲೆಹರಟೆ ಮಾಡಬೇಡಿ‘ ಇತ್ಯಾದಿ ಅಬ್ಬರದೊಂದಿಗೆ ಎದೆಗೋ, ಮುಖಕ್ಕೋ ಅಪ್ಪಳಿಸಿದ ಕಂತೆಯನ್ನು ಹಿಡಿದು ಬಂದವರು ಮಾತಿಲ್ಲದೇ ವಾಪಸ್ಸಾಗುತ್ತಾರೆ.
ಹಾಗಂತ ವೆಂಕಟೃಷ್ಣರಾಯರು ದುಷ್ಟರೇನಲ್ಲ. ಕನಸಿನಲ್ಲೂ ಯಾರಿಗೂ ಕೆಡಕು ಬಯಸುವ ಅಸಾಮಿಯಲ್ಲ. ಬದಲಿಗೆ ಯಾರಾದರೂ ಸಹಾಯಕ್ಕೆ ಕೈಯ್ಯೊಡಿದಲ್ಲಿ ಕೈಲಾದಷ್ಟು ಸಹಾಯ ಮಾಡುತ್ತಾರೆ. ಸುಮಾರು ಜನಕ್ಕೆ ಪ್ರಮೋಶನ್‌ಗೋ, ಪೆನ್ಷನ್ನಿಗೋ ಮುಂದಾಗಿಯೇ ಸಹಾಯ ಮಾಡಿದ್ದಾರೆ. ಎಲ್ಲರೊಂದಿಗೂ ನಗುನಗುತ್ತಾ ಮೊದಲಿನಂತೇ ಇರಬೇಕೆಂಬ ತಹತಹದಲ್ಲಿ ಅವರ ಜೀವ ಸದಾ ಬೇಯುತ್ತದೆ.

ಒಮ್ಮೊಮ್ಮೆ ಸಿಬ್ಬಂದಿಯ ಜೊತೆಗೆ, ತಮ್ಮ ಕೆಳಗಿನ ಅಧಿಕಾರಿಗಳ ಜೊತೆಗೆ ಎಚ್ಚರ ತಪ್ಪಿ ನಕ್ಕುಬಿಡುತ್ತಾರೆ. ಅವರ ಬೆನ್ನು ಚಪ್ಪರಿಸುತ್ತಾರೆ. ಆದರೆ ಯಾವಾಗ ತಾನು ತಹಸೀಲ್ದಾರ್ ಎನ್ನುವ ಮುಳ್ಳು ಮನಸ್ಸಿಗೆ ಚುಚ್ಚುತ್ತೋ ಅವಾಗ ಅವರ ಬೆನ್ನಹುರಿ ನೆಟ್ಟಗಾಗುತ್ತದೆ. ದನಿ ಗಟ್ಟಿಯಾಗುತ್ತದೆ. ಪ್ರಸನ್ನ ಮುಖಮುದ್ರೆಯಲ್ಲಿ ಅಡ್ಡ ಮಲಗಿದ ಳಕಾರವೊಂದು ಮೂಡುತ್ತದೆ.

ತಾನು ಹೀಗೆ ಕಂಡಕಂಡವರ ಜೊತೆಗೆ ಚೆಲ್ಲುಚೆಲ್ಲಾಗಿ ಬಿಹೇವ್ ಮಾಡಿದಲ್ಲಿ ಅದು ತನ್ನ ಅಧಿಕಾರವನ್ನೇ ತುಚ್ಛೀಕರಿಸಿದಂತಾಗುವುದಿಲ್ಲವೇನು, ಕಂಡ ಕಂಡವರಿಗೆಲ್ಲಾ ತೀರಾ ಸಲುಗೆ ಕೊಟ್ಟಂತೆ ಆಗುವುದಿಲ್ಲವೇನು, ತಮ್ಮ ವರ್ಚಸ್ಸಿನ ಕಿಮ್ಮತ್ತು ಕಮ್ಮಿಯಾಗುವುದಿಲ್ಲವೇನು…ಇತ್ಯಾದಿ ಪ್ರಶ್ನೆಗಳು ತಹಸೀಲ್ದಾರ್ ವೆಂಕಟಕೃಷ್ಣರಾಯರನ್ನು ಕಾಡುತ್ತವೆ.  ಸಿಬ್ಬಂದಿಯೊಡನೆ ಹಾರ್ದಿಕವಾಗಿ ನಗುನಗುತ್ತಾ ಮಾತನಾಡಿದ ಕನಸು ಬಿದ್ದು, ಬೆಚ್ಚಿ ಬೆವೆತು ಎಚ್ಚರವಾದ ರಾತ್ರಿಗಳನ್ನೂ ತಹಸೀಲ್ದಾರ್ ವೆಂಕಟಕೃಷ್ಣರಾಯರ ಹಣೇಬರಹ ಕಂಡಿದೆ.

ಮುಂದುವರೆಯುವುದು….


1 ಟಿಪ್ಪಣಿ (+add yours?)

  1. ಜೋಗಿ
    ನವೆಂ 21, 2010 @ 12:42:25

    ಸೂರಿ ಕತೆಯ ಆತ್ಮವಿರುವುದು ಅವರು ವ್ಯಕ್ತಿಗಳನ್ನು ಕಣ್ಮುಂದೆ ತರುವಲ್ಲಿ. ಇಲ್ಲಿನ ಪಾತ್ರಗಳಲ್ಲಿ ಒಂದು ವಿಶೇಷವಿದೆ. ನಾವು ಓದಿದ ನಮಗೆ ಗೊತ್ತಿರುವ ತುಕ್ಕೋಜಿಯನ್ನು ಅವರು ವರ್ತಮಾನಕ್ಕೆ ತರುತ್ತಾರೆ. ಅವನನ್ನು ವಿಸ್ತರಿಸುತ್ತಾರೆ. ಹಾಗೆ ವಿಸ್ತರಿಸುವ ಹೊತ್ತಿಗೆ ನಮಗೆ ಹಳೆಯ ತುಕ್ಕೋಜಿಯ ನೆನಪೂ ಉಳಿಯುವಂತೆ ಮಾಡುತ್ತಾರೆ. ಸಾಹಿತ್ಯ ಪರಂಪರೆಯನ್ನು ಹೀಗೂ ಮುಂದುವರಿಸಿಕೊಂಡು ಹೋಗಬಹುದಲ್ಲ ಎಂದು ನೆನೆದು ಖುಷಿಯಾಗುತ್ತದೆ.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: