ಮೊಹರಂ ಹಬ್ಬದ ಕಡೆಯ ದಿನ …

-ಹಣಮಂತ ಹಳಿಗೇರಿ

ಹಣಮಂತ ಹಳಿಗೇರಿ  ಮೂಲತಃ  ಬಾಗಲಕೋಟ ಜಿಲ್ಲೆಯ ತುಳಸಿಗೇರಿ ಹಳ್ಳಿಯವರು .   ಧಾರವಾಡ ಕರ್ನಾಟಕ ವಿವಿಯಿಂದ ilrd ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂದಿಸಿದ ಪದವಿಯನ್ನು ಪಡೆದುಕೊಂಡು ಗಾಂದೀಜಿಯ ನೇರ ಅನುಯಾಯಿ ಮಣಿಬಾಯಿ ದೇಸಾಯಿಯವರ “ಭೈಫ್” ಎನ್.ಜಿ.ಒ.ದಲ್ಲಿ ಕೆಲಸ ಮಾಡಿದ್ದಾರೆ . ಮುಂದೆ ಬರವಣಿಗೆ ಮತ್ತು ಪತ್ರಿಕೋದ್ಯಮದತ್ತ ಆಕರ್ಷಿತರಾದ ಇವರು  ಎಮ್.ಎ.ಪತ್ರಿಕೋದ್ಯಮ ಮುಗಿಸಿ ಬೆಂಗಳೂರಿನ ವಾರ್ತಾಭಾರತಿಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ .ಇವರ ಒಂದು ನಾಟಕ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಸಹಾಯ ಧನವನ್ನು ಪಡೆದುಕೊಂಡು ಪ್ರದರ್ಶನಗೊಂಡಿದೆ. ಇವರ  ಒಂದು ಕತೆ ವಿಕ್ರಾಂತ್ ಕರ್ನಾಟಕ ಪತ್ರಿಕೆಯ ಗಾಂಧೀ  ಕಥಾ ಸ್ಫರ್ದೆಗೆ ಆಯ್ಕೆಯಾಗಿ ಪ್ರಕಟಗೊಂಡಿದೆ ಆ ಕತೆ ನಿಮಗಾಗಿ

ಮೊಹರಂ ಹಬ್ಬದ ಕಡೆಯ ದಿನ

ಆಗತಾನೆ ಏಳನೆಯ ತರಗತಿಯ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿದ್ದರಿಂದ ನಾವು ಹುಡುಗರೆಲ್ಲ ಖುಷಿಯಾಗಿದ್ದೆವು. ನಮ್ಮ ರಜೆಯನ್ನು ಮಜಾವಾಗಿಸಲೆಂಬಂತೆ ಮೋಹರಂ ಹಬ್ಬ ಆಗಮಿಸಿತ್ತು. ನಾನು ನನ್ನೆಲ್ಲ ಗೆಳೆಯರೊಂದಿಗೆ ಫಕೀರನ ವೇಷ ಹಾಕಿ ಊರಲ್ಲೆಲ್ಲ ಭಿಕ್ಷೆ ಎತ್ತಿ ವಿವಿಧಾಕಾರದ ವಿವಿಧ ರುಚಿಯ ಜೋಳದ ರೊಟ್ಟಿ ಪಲ್ಯವನ್ನು ತಿಂದುಂಡು ಸಂತೋಷವಾಗಿದ್ದೆ.

ಅಂದು ಮೋಹರಂನ ಕಡೆಯ ರಾತ್ರಿಯಾದುದರಿಂದ ಮಸೀದಿಗೆ ಮಾದ್ಲಿ ನೈವೇದ್ಯವನ್ನು ಅರ್ಪಿಸುವುದು ಸಂಪ್ರದಾಯ. ಮಾರ್ಚ್ ತಿಂಗಳಿನ ಆ ಸಂಜೆಯಲ್ಲಿ ಹಿತವಾದ ಬಿಸಿ ಗಾಳಿ ಬೀಸುತ್ತಿತ್ತು. ಚಂದ್ರ ತನ್ನ ಪೂರ್ಣಾಕಾರ ತೋರಲು ಇನ್ನೂ ನಾಲ್ಕು ದಿನವಷ್ಟೆ ಬಾಕಿ ಇತ್ತು.

ಅಡುಗೆ ಮನೆಯಲ್ಲಿ ಹಬ್ಬದ ಸೊಗಸು. ನನ್ನವ್ವ ಆಗ ತಾನೆ ಹೊಲದಿಂದ ಬಂದಿದ್ದ ಅಪ್ಪನನ್ನು ಬಚ್ಚಲಲ್ಲಿ ಕೂಡ್ರಿಸಿ ಆತನಿಗೆ ಬಚ್ಚಲ ಹಂಡೆಯಿಂದ ಬಿಸಿ ನೀರು ಹೊಯ್ಯುತಿದ್ದುದು ಮತ್ತು ಅಪ್ಪ ಬಿಸಿ ತಾಳದೆ ಬುಸುಗುಡುತಿದ್ದುದು ಅಡಿಗೆ ಮನೆಯಲ್ಲಿದ್ದ ನನಗೆ ನಿಚ್ಚಳವಾಗಿ ಕೇಳುತ್ತಿತ್ತು. ನನ್ನಕ್ಕ ಮಸೀದಿಯ ದೇವರಿಗೆ ಒಯ್ಯಲಿಕ್ಕಿರುವ ಎಡೆಯನ್ನು ಸಿದ್ಧಗೊಳಿಸುತ್ತಿದ್ದಳು. ನಾನು ಆ ನೈವೇದ್ಯದ ಎಡೆಯನ್ನೇ ಆಸೆಗಣ್ಣಿನಿಂದ ನೋಡುತ್ತ ಕುಳಿತು ಬಿಟ್ಟಿದ್ದೆ. ಆಗ ಯಾಕೋ ನನಗೆ ಅಜ್ಜಿಯ ನೆನಪು ಒತ್ತರಿಸಿ ಬಂತು.

ಅಜ್ಜಿ ಇದ್ದರೆ ‘ಕೊಡು ಹನುಮಕ್ಕ, ಮಗs ಆಸೆ ಕಣ್ಣಿಂದ ನೋಡತೈತಿ. ಮಕ್ಕಳು ಅಂದ್ರ ದೇವರಿದ್ದಂಗ’ ಎಂದು ನೈವೇದ್ಯ ದೇವರಿಗೆ ಅರ್ಪಣೆಯಾಗುವ ಮುನ್ನವೇ ಅಜ್ಜಿ ನನಗೆ ಅರ್ಪಿಸಿಬಿಡುತ್ತಿದ್ದಳು. ಅಜ್ಜಿ ತೀರಿಕೊಂಡಂದಿನಿಂದ ಆ ಭಾಗ್ಯವೇ ನನಗಿರಲಿಲ್ಲ.

ನಮ್ಮ ಮನೆಯ ಪರಿವಾರ ಮಸೀದಿಯ ದರ್ಶನಕ್ಕೆ ಹೊರಟಿತು. ಅಪ್ಪ ಹೆಗಲ ಮೇಲೊಂದು ಕಟ್ಟಿಗೆಯ ಕೊಡ್ಡವನ್ನು ಹೊತ್ತು ಮುಂದೆ ಸಾಗುತ್ತಿದ್ದರೆ, ನಾನು, ಅವ್ವ ಮತ್ತು ಅಕ್ಕ ಅಪ್ಪನ ಹಿಂದೆ ಹೊರಟಿದ್ದೆವು. ಅಪ್ಪ ‘ಬಾಂಬ್ರಲಾಯಿಂಬೋದೀನ’ ಎಂದು ಜೋರಾಗಿ ಕೂಗುತ್ತಿದ್ದರೆ ನಾನು, ನನ್ನಕ್ಕ ಅದನ್ನೇ ಪ್ರತಿಧ್ವನಿಸುತ್ತಿದ್ದೆವು. ಭಯ ಭಕ್ತಿಯಿಂದ ನಮ್ಮ ಪರಿವಾರ ಯಾತ್ರೆ ಸಾಗಿರುವಾಗಲೇ ಸಾಕಷ್ಟು ಕುಟುಂಬ ಪರಿವಾರಗಳು ನಮಗೆ ಇದೆ ಸ್ಥಿತಿಯಲ್ಲೇ ಜೊತೆಗೂಡಿದವು. ಹೀಗೆ ಸಂಖ್ಯೆ ದೊಡ್ಡದಾಗುತ್ತ ಆಗುತ್ತ ಮಸೀದಿಯನ್ನು ತಲುಪಿತು.

ಮಸೀದಿಯಲ್ಲಿ ಜನಸಾಗರವೆ ತುಂಬಿತ್ತು. ಆ ಗದ್ದಲದಲ್ಲಿಯೇ ಹೇಗೋ ದಾರಿಮಾಡಿಕೊಂಡು ಮಸೀದಿಯ ಮುಂಭಾಗಕ್ಕೆ ಬಂದು ಅಗ್ನಿ ಕುಂಡಕ್ಕೆ ಐದು ಪ್ರದಕ್ಷಿಣೆ ಹಾಕಿದೆವು. ಕೊನೆಯ ಸುತ್ತಿನಲ್ಲಿ ಕಟ್ಟಿಗೆಯ ಕೊಡ್ಡವನ್ನು ಕುಂಡದಲ್ಲಿ ಭಕ್ತಿಯಿಂದ ಹಾಕಿ ಮಸೀದಿಯ ಒಳ ಹೊಕ್ಕೆವು. ಒಳಗೆ ವೈಭವೋಪೇತದ ಅಲಂಕಾರದಲ್ಲಿ ಕೆಲವು ಮುಸ್ಲಿಂ ದೇವರುಗಳು ಕುಳಿತಿದ್ದರೆ, ಕೆಲವು ಸಿಂಗರಿಸಿದ ಡೋಲಿಯಲ್ಲಿ ಮಲಗಿದ್ದವು. ಮಸೀದಿಯ ಮೌಲ್ವಿ ನಮ್ಮ ಬೆನ್ನುಗಳಿಗೆಲ್ಲ ನವಿಲುಗರಿಯಿಂದ ಚಪ್ಪರಿಸಿ ಏನೇನೋ ಮಂತ್ರ ಪಠಿಸಿ ಆಶೀರ್ವಾದ ಮಾಡಿದ. ನಮ್ಮ ತಂದೆ ‘ಮಳೆ ಬೆಳೆ ಚೆನ್ನಾಗಿ ಕೊಡಪ್ಪ’ ಎಂದು ಬೇಡಿಕೊಂಡ. ಅಲ್ಲಿಯೇ ಪಕ್ಕದಲ್ಲಿ ದೇವರುಗಳನ್ನು ಮೈಯೊಳಗೆ ಆಹ್ವಾನಿಸಿಕೊಳ್ಳುವ ಮಾಬುಸಾಬಣ್ಣ ಮತ್ತು ಕುರುಬರ ಬಸಪ್ಪ ಕುಳಿತಿದ್ದರು.

ಅವರು ಕಾಣಿಸುತಿದ್ದಂತೆಯೇ ತಂದೆ ಅವರಿಗೂ ಅಡ್ಡ ಬಿದ್ದ. ಅವರಿಬ್ಬರು ಈ ಐದು ದಿನಗಳಿಂದ ಉಪವಾಸ ವ್ರತ ಮತ್ತು ಮೌನ ವ್ರತದಲ್ಲಿದ್ದರು. ಅವರು ಮಾತನಾಡುವುದೇನೆ ಇದ್ದರೂ ಅದು ದೇವರು ಮೈಮೇಲೆ ಬಂದಾಗ ಮಾತ್ರ. ಅವರಿಬ್ಬರನ್ನೂ ನೋಡುತ್ತಿದ್ದರೆ ನನಗೆ ಏನೋ ಕುತೂಹಲ ಮತ್ತು ಮರುಕ. ಈ ಐದು ದಿನಗಳಲ್ಲಿ ಉಪವಾಸವಿದ್ದುದರಿಂದ ಅವರು ದೈಹಿಕವಾಗಿ ಸಾಕಷ್ಟು ಕುಗ್ಗಿಹೋಗಿದ್ದರು. ಮೈಯಲ್ಲಿನ ಸತುವೆಲ್ಲ ಬಸಿದು ಹೋಗಿ ಕಣ್ಣುಗಳು ನಿಸ್ತೇಜವಾಗಿದ್ದವು. ಇಂತಹ ದುರ್ಬಲರ ಮೈ ಮೇಲೆ ದೇವರು ಬಂದರೆ ಅವರ ಪರಿಸ್ಥಿತಿ ಏನಾಗಬೇಡ ಎಂಬುದು ನನ್ನ ಮರುಕಿಗೆ ಕಾರಣವಾಗಿತ್ತು.

ದೂರದಲ್ಲಿ ಹೆಜ್ಜೆಮೇಳಗಳ ತಮಟೆ, ಹಲಗೆಯ ಶಬ್ದ ಕೇಳತೊಡಗಿತು. ಆ ಗದ್ದಲದಲ್ಲಿ ನಾನು ಅಕ್ಕ, ಅಪ್ಪ ಅವ್ವನಿಂದ ಬೇರ್ಪಟ್ಟೆವು. ಆ ಗದ್ದಲದಲ್ಲಿಯೇ ನಮ್ಮ ಮನೆಯ ಪಕ್ಕದ ನನ್ನಕ್ಕನ ಗೆಳತಿ ದೇವೇಂದ್ರಪ್ಪ ಪೂಜಾರಿಯ ಮಗಳು ರೇವತಿ ಸಿಕ್ಕಳು. ನಾವು ಒಂದು ಮನೆಯ ಛಾವಣಿ ಏರಿ, ಇನ್ನೇನು ಪ್ರಾರಂಭವಾಗಲಿರುವ ಕುಣಿತ ನೋಡಲು ಕಾತುರರಾಗಿ ಕುಳಿತೆವು. ದೂರದಲ್ಲಿ ಇಲಾಲ್‌ನ ಪಂಜುಗಳ ಬೆಳಕಿನಲ್ಲಿ ಕುರುಬರ ಓಣಿಯ ಯುವಕರು ಹೆಜ್ಜೆಯಾಡುತ್ತ ಬರುತ್ತಿದ್ದರು.

ಬಿಳಿಯ ಬಣ್ಣದ ಬಿಗಿಯಾದ ಮಂಡಂಗಿ, ಅಲಂಕಾರವಾಗಿ ಹುಬ್ಬಿನ ಮೇಲೆ ಬೀಗಿದ ಹಸಿರು ಟಾವೆಲ್, ಕೆಳಗೆ ಕಾಲಲ್ಲಿ ಸಿಗಬಾರದೆಂಬಂತೆ ಎತ್ತಿ ಕಟ್ಟಿದ ಉಟ್ಟ ದೋತರ, ಇವು ಆ ಯುವಕರನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದವು. ಹೆಜ್ಜೆ ಕುಣಿತವನ್ನು ನೋಡುವುದೇ ಒಂದು ಆನಂದ. ಆ ತಾಳ, ತಾಳಕ್ಕೆ ತಕ್ಕಂತೆ ಕುಣಿತ, ಕುಣಿತಕ್ಕೆ ತಕ್ಕಂತೆ ಹಾಡು, ಆಗಾಗ ಕೇಳಿಬರುವ ಕೇಕೆ. ಅಬ್ಬ! ನೋಡುತ್ತಿದ್ದರೇ ಖುಷಿಯೋ ಖುಷಿ.
ಆ ಯುವಕರು ಅಗ್ನಿಕುಂಡದ ಸುತ್ತ ಇನ್ನೂ ಮೂರು ಸುತ್ತು ಮುಗಿಸಿರಲಿಲ್ಲ. ಆಗ ಮತ್ತೆ ದೂರದಲ್ಲಿ ಇಲಾಲ್ ಪಂಜಿನ ಮಿಂಚು ಮತ್ತು ತಮಟೆ ಸದ್ದು. ಅದು ಬೇಡರ ಓಣಿಯ ಹೆಜ್ಜೆ ಮೇಳ. ಇವರದು ಸ್ವಲ್ಪ ತಾಳಕ್ಕೆ ಮೇಳ ಇರಲಿಲ್ಲವೆಂದೇ ಹೇಳಬೇಕು. ಕೆಲವರು ಕುಡಿದಿದ್ದರೆಂದು ಕಾಣುತ್ತದೆ.

ಜೋಲಿ ಹೊಡೆಯುತ್ತಿದ್ದಕ್ಕೆ ಕೆಲವರು ಕೈ ಮೇಲೆ ಎತ್ತಿದಾಗ ಕೆಲವರು ಕೈ ಕೆಳಗಿಳಿಸಿರುತ್ತಿದ್ದರು. ಅಂತೂ ಹೇಗೋ ಮೂರು ಸುತ್ತು ಮುಗಿಸಿದರು. ಕುಣಿತ ತಾಳಬದ್ಧವಾಗಿರಲಿಲ್ಲ, ಆದರೆ ಮಜವಾಗಿತ್ತು. ಹೀಗೆ ಆ ಬಯಲಲ್ಲಿ ನಾಲ್ಕು ಮೇಳಗಳು ಬಂದು ಒಂದರ ನಂತರ ಒಂದು ತಮ್ಮ ಕುಣಿತವನ್ನು ಪ್ರದರ್ಶಿಸಿದ್ದವು. ಯುವಕರು ತಮ್ಮ ಕುಣಿತದ ಮಧ್ಯೆ ಮಧ್ಯೆ ಮುಗಿಲಿನತ್ತ ದೃಷ್ಟಿ ಹರಿಸುತ್ತಿದ್ದರು. ಅದು ದೇವರ ಕೃಪೆಗೋಸ್ಕರ ಎಂದು ನಾನಾಗ ತಿಳಿದಿದ್ದೆ. ಆದರೆ ಅವರು ಮೇಲಕ್ಕೆ ನೋಡುತ್ತಿದ್ದುದು ಛಾವಣಿ ಮೇಲೆ ಕುಳಿತ ತಮ್ಮ ಮನದನ್ನೆಯರನ್ನು ಕಣ್ತುಂಬಿಸಿಕೊಳ್ಳಲು ಎಂದು ನನಗೆ ಈಗೀಗ ಅರ್ಥವಾಗುತ್ತಿದೆ.

ಒಬ್ಬ ಯುವಕ ನನ್ನಕ್ಕಳನ್ನೇ ನೋಡುತ್ತಿದ್ದುದು ನನಗೇಕೊ ಇರಿಸುಮುರುಸಾಯಿತು. ನಾನು ಅಕ್ಕಳ ಮುಖ ನೋಡಿದಾಗ ತಿಳಿಯಿತು, ಆತ ನನ್ನಕ್ಕಳನ್ನಲ್ಲ ಅಕ್ಕಳ ಗೆಳತಿ ರೇವತಿಯನ್ನು ನೋಡುತ್ತಿದ್ದ. ಆತ ಕೆಳಗೆ, ರೇವತಿ ಚಾವಣಿಯ ಮೇಲೆ. ಇಬ್ಬರ ನಡುವೆ ಸಾಕಷ್ಟು ಅಂತರ. ಆದರೆ ಅವರಿಬ್ಬರ ಕಣ್ಣುಗಳಲ್ಲಿ ಏನನ್ನೂ ಮಾತನಾಡಿಕೊಳ್ಳುವ ಹೊಳಪಿತ್ತು. ದೃಷ್ಟಿಸಿ ನೋಡಿದಾಗ ತಿಳಿಯಿತು. ಆತ ನಮ್ಮ ಮನೆಗೆ ಹಾಲು ಹಾಕುವ ಹಸನಪ್ಪ ಎಂದು. ನಮ್ಮ ಮನೆಯ ಹಿತ್ತಲಲ್ಲಿ ಒಂದೆರಡು ಬಾರಿ ನಾನು ಒಂದಕ್ಕೆ ಮಾಡಲು ಮನೆಯ ಹಿತ್ತಲಿಗೆ ಹೋದಾಗ ಅಲ್ಲಿ ಕಟ್ಟೆಯ ಮೇಲೆ ರೇವತಿ ಮತ್ತು ಹಸನಪ್ಪ ಒಬ್ಬರ ತೆಕ್ಕೆಯೊಳಗೊಬ್ಬರು ಇರುವುದನ್ನು ನಾನು ನೋಡಿದ್ದೆ. ಆಗ ಅವರು ಯಾಕೆ ಹಾಗೆ ತೆಕ್ಕೆಯೊಳಗಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಆಗ ನಾನು ಅವರ ಹತ್ತಿರ ಹೋಗಿ ಕೂಗಿ, ಅವರನ್ನು ಬೆಚ್ಚುವಂತೆ ಮಾಡುತಿದ್ದೆ ಅಷ್ಟೇ.

ಬೆವರು ಬಸಿಯುವ ಹಾಗೆ ಯುವಕರು ಕುಣಿ ಕುಣಿದು ಸುಸ್ತಾದರು. ಹೆಜ್ಜೆಮೇಳದ ನಂತರದ ಸರದಿ ಮೋಹರಂ ಹಾಡುಗಳ ಕಾರ್ಯಕ್ರಮ. ಕುಣಿದು ಕುಪ್ಪಳಿಸಿದವರು ಅಲ್ಲಿಯೆ ಕುಳಿತರು. ಮೊದಲಿನ ತಂಡದವರು ಎತ್ತರದ ಧ್ವನಿಯಲ್ಲಿ ಮೋಹರಂ ಹಿನ್ನೆಲೆಯ ಕಥೆ ಹೇಳಿದರೆ, ಎರಡನೆ ತಂಡದವರದು ಮಹಾಭಾರತದ ಕೃಷ್ಣಪರ್ವದ ಕಥೆ ಹಾಡಿದರು.
ಸರ್ವ ಜನಕೆ ಸಲಾಂ ಲೆಕೋ…ಕುಂತ ಕೇಳಿರಿ ಜಾಣ, ಹೇಳ್ತಿವ್ರಿ ಕಥೆ ಒಂದಸಾಧುವೇಷದಿ ಅರ್ಜುನ ಬಂದ…ಕೃಷ್ಣನ ಅರಮನೆಗೆ, ಕೃಷ್ಣನ ತಂಗಿಯ ಅಂತಪುರಕೆ
ಅರ್ಜುನ, ಕೃಷ್ಣನ ತಂಗಿ ಸುಭದ್ರೆಯ ಪ್ರಣಯದ ಕಥೆಯಲ್ಲಿ ನಾವೆಲ್ಲ ಮುಳುಗಿಹೋಗಿದ್ದೆವು. ಆಗ ಹಿಂದಿನಿಂದ ಸಣ್ಣದಾಗಿ ನಮಗಷ್ಟೆ ಕೇಳುವ ಹಾಗೆ ಶಿಳ್ಳು ಕೇಳಿಬಂತು. ಹಿಂದಕ್ಕೆ ತಿರುಗಿ ನೋಡಿದರೆ ಕೂಗಳತೆಯ ದೂರದಲ್ಲಿ ವ್ಯಕ್ತಿಯ ಆಕೃತಿಯೊಂದು ನಿಂತಿತ್ತು. ನಾನು ಇನ್ನೇನು ಹೆದರಿಕೆಯಿಂದ ಕೂಗಬೇಕು, ಅಷ್ಟರಲ್ಲಿ ಅಕ್ಕ ನನ್ನ ಬಾಯನ್ನು ಗಟ್ಟಿಯಾಗಿ ಮುಚ್ಚಿದಳು. ಆ ಕ್ಷಣದಲ್ಲಿ ಅವನತ್ತ ನೋಡಿ ಜಿಂಕೆಯಂತೆ ಓಡಿ ಹೋದ ರೇವತಿಯ ಕಣ್ಣುಗಳಲ್ಲಿ ದಿಗಿಲು, ಭಯ, ಆರ್ದ್ರತೆ, ಹೊಳಪು ಎಲ್ಲವೂ ಇದ್ದವು. ಅಕ್ಕ ಮತ್ತು ನಾನು ನಿಧಾನಕ್ಕೆ ಅವರನ್ನು ಸಮೀಪಿಸಿದೆವು.

ಬಂದವನು ಹಸನಪ್ಪ, ಆತನ ಕಣ್ಣಲ್ಲೂ ರೇವತಿಯ ಕಣ್ಣುಗಳಲ್ಲಿನ ಭಾವನೆಗಳೇ. ಆತ ರೇವತಿ ಕೈಗಳನ್ನು ಗಟ್ಟಿಯಾಗಿ ಹಿಡಿದು ಚಾವಣೆಯಿಂದ ನಿಧಾನಕ್ಕೆ ಕೆಳಗಿಳಿದ, ಸೈಕಲ್ಲಿನಲ್ಲಿ ಅವನ ಗೆಳೆಯರಿಬ್ಬರು ಕಾಯುತ್ತಿದ್ದರು. ನೋಡು ನೋಡುತ್ತಿದ್ದಂತೆಯೇ ಸೈಕಲ್ ಏರಿದ ಅವರು ಆ ಬೆಳದಿಂಗಳಲ್ಲಿ ಕಣ್ಮರೆಯಾದರು. ಅಲ್ಲಿ ನಾವಿಬ್ಬರೆ, ಅಕ್ಕ ಮತ್ತು ನಾನು. ಇದು ಕನಸಾ? ಗೊತ್ತಾಗಲಿಲ್ಲ. ಚಂದ್ರ ಇದು ನನ್ನದೆ ಮಂಗನಾಟವೆಂದು ಬೆಳದಿಂಗಳ ಚೆಲ್ಲಿ ನಗುತ್ತಲಿದ್ದ.

ಕೊಟ್ಟಳು ಸುಭದ್ರೆ ಮನವನು ಸಾಧುಗೆಸಾಧು ಸುಭದ್ರೆ ಓಡಿದರು ಕಾಡಿಗೆ
ಎಂಬ ಮೋಹರಂನ ಪದದ ಕೊನೆಯ ಸಾಲುಗಳು ಇಂಪಾಗಿದ್ದರೂ ಕೂಡ ಅವು ಅಕ್ಕನ ಕಿವಿಗೆ ತಂಪನ್ನೀಯಲಿಲ್ಲ. ಅಲ್ಲಿ ಮುಂದಿನ ಕ್ಷಣಗಳನ್ನು ಕಳೆಯುವುದು ಅಕ್ಕನಿಗೆ ಕಷ್ಟವಾದಂತೆ ಕಾಣುತ್ತದೆ. ನಾವು ಮನೆಗೆ ಬಂದು ಮಲಗಿಬಿಟ್ಟೆವು.
ಮರುದಿನ ಬೆಳಗ್ಗೆ ಕಣ್ಣುಜ್ಜಿಕೊಳ್ಳುತ್ತಾ ನಾನೆದ್ದಾಗ ೮ ಗಂಟೆ ಇರಬೇಕು. ಮನೆಯ ಹಿಂದಿನ ಮೋರಿಗೆ ಒಂದಕ್ಕೆ ಮಾಡಲು ಅಂತ ಬಂದೆ. ರೇವತಿಯ ಮನೆಯಿಂದ ಅಳುವಿನ ಧ್ವನಿ ಕೇಳಿಬರುತ್ತಿತ್ತು. ನಾನು ಗಡಿಬಿಡಿಯಿಂದ ಚಡ್ಡಿಯಲ್ಲಿಯೆ ಒಂದಕ್ಕೆ ಮಾಡಿಕೊಂಡು ರೇವತಿಯ ಮನೆಯತ್ತ ಧಾವಿಸಿದೆ. ಮನೆಯ ಮುಂದೆ ಕೆಲವರು ಮಾತನಾಡಿಕೊಳ್ಳುತ್ತ ನಿಂತಿದ್ದರು. ಆಗಲೇ ಸುದ್ದಿ ಊರ ತುಂಬ ಗುಲ್ಲಾಗಿತ್ತು. ರೇವತಿಯ ಸಂಬಂಧಿ ಪೂಜಾರಿ ಹುಡುಗರು ಊರೆಲ್ಲ ಹುಡುಕಿದರು ರೇವತಿ ಮತ್ತು ಹಸನಪ್ಪನ ದರ್ಶನವಾಗಲಿಲ್ಲವಂತೆ. ಬೇಸತ್ತ ಯುವಕರು ಮಸೀದಿಗೆ ಬಂದರೆ, ಅಲ್ಲಿ ದೇವರು ಮೈಮೇಲೆ ಬಂದವರು ಆರ್ಭಟದಿಂದ ಅಗ್ನಿಕುಂಡವನ್ನು ಹಾಯುತ್ತಿದ್ದರಂತೆ. ಜನರೆಲ್ಲ ಭಯ ಭಕ್ತಿಯಿಂದಿರುವಾಗ ಈ ಯುವಕರ ತಂಡ ಮೈ ತುಂಬಿದವರ ಹತ್ತಿರ ಹೋಗಿ ‘ನಿಮ್ಮ ಹಸನಪ್ಪ ಎಲ್ಲಿ ಅದಾನ’ ಎಂದು ಕೇಳಿದ್ದಾರೆ. ಪಾಪ ದೇವರಿಗೆ ಹಸನಪ್ಪ ಮತ್ತು ರೇವತಿಯ ಪ್ರೇಮ ಪ್ರಸಂಗ ಗೊತ್ತೇ ಇರಲಿಲ್ಲವೆಂದು ಕಾಣುತ್ತದೆ.

ದೇವರು ಗಾಬರಿಯಾಗಿ ‘ಆಂವ ಉತ್ತರ ದಿಕ್ಕಿನ್ಯಾಗ ದೇವರ ಸನ್ನಿದಾನದೊಳಗೆ ಅದಾನ’ ಎಂದಿತಂತೆ. ಯುವಕರು ‘ಸರಿ, ಅಂವನ್ನ ಇಲ್ಲಿಗೆ ಕರೆಸು’ ಎಂದಿದ್ದಾರೆ. ದೇವರು ಏನೋ ಹೇಳಲು ಹೋದಾಗ ಕೋಪಗೊಂಡ ಯುವಕರು ‘ನಿನ್ನೊಳಗಿನ ಆ ದೇವರನ್ನು ಬಿಟ್ಟೋಡಿಸುತೀವಿ ಮಗನ’ ಎಂದು ಆ ದೇವರನ್ನು ಅಗ್ನಿ ಕುಂಡದಲ್ಲಿಯೇ ಗಟ್ಟಿಯಾಗಿ ಸ್ವಲ್ಪಹೊತ್ತು ನಿಲ್ಲಿಸಿದರಂತೆ. ಆಗ ‘ಬಿಡ್ರಲೇ ನನ್ನ ಮೈಯಾಗಿನ ದೇವರು ಬಿಟ್ಹೋಗೈತಿ’ ಎಂದು ಜೋರಾಗಿ ಅರಚಿಕೊಂಡು ಅವರ ಕೈ ಕಚ್ಚಿ ಓಡಿ ಹೋದನಂತೆ ಮಾಬುಸಾಬ. ಆಗ ಯುವಕರು ಡೋಲಿ ಹಾಳು ಮಾಡುವ ಉದ್ದೇಶದಿಂದ ಮಸೀದಿಯ ಹತ್ತಿರ ಹೋದರೆ ಊರ ಹಿರಿಯರು ಅಡ್ಡ ಬಂದು ಬೇಡಿಕೊಂಡು ತಡೆದರಂತೆ. ಅಲ್ಲಿಂದ ‘ಗೋವಿಂದ… ಗೋವಿಂದ… ಗೋವಿಂದ…’ ಎನ್ನುತ ಓಡಿ ಹೋದ ಯುವಕರ ಗುಂಪು ಊರ ಹೊರಗಿನ ಮುಸ್ಲಿಂರ ಸಮಾಧಿಯೊಂದನ್ನು ಸಂಪೂರ್ಣ ಹಾಳು ಮಾಡಿ ಸಮಾಧಾನಪಟ್ಟಿತಂತೆ.
ಅದೇ ಸಮಯಕ್ಕೆ ಅಲ್ಲಿಗೆ ರೇವತಿಯ ಜಾತಿಯವರೇ ಆದ ಸತೀಶ್ ಭಟ್ಟರು ಮತ್ತು ಗಂಗಣ್ಣ ಭಟ್ಟರು ಕೆಲ ತಮ್ಮ ಹಿಂಬಾಲಕರೊಂದಿಗೆ ಆಗಮಿಸಿದರು. ರೇವತಿಯ ತಾಯಿಗೆ ಸಮಾಧಾನಿಸುವ ಎರಡು ಮಾತುಗಳನ್ನಾಡಿದ ನಂತರ ಗಂಗಣ್ಣಭಟ್ಟ ‘ಈ ಮುಸಲರದು ಅತಿಯಾತು. ಈ ಮಕ್ಕಳಿಗೆ ಬುದ್ಧಿ ಕಲಿಸಬೇಕು’ ಎಂದು ಹಲ್ಲು ಕಡಿದ. ‘ಇದರಾಗ ಮುಸಲರದೇನ್ ತಪ್ಪಿಲ್ಲ, ಊರ ಚೇರ್‍ಮನ್ ಆಗ್ಯಾನಲ್ಲ, ಕುರುಬರ ಮೊಣಪ್ಪ. ಅಂವ ಈ ಮುಸಲರ ಹಿಂದ ನಿಂತ ಆಟ ಆಡ್ಸಾಕ ಹತ್ಯಾನ. ಅವರಪ್ಪ ಸೋಮಜ್ಜ ಗಾಂಧಿ ಅಜ್ಜನ ಕಾಲ್ದಾಗ ಜೈಲ್‌ಗೆ ಹೋಗಿ ಬಂದಿದ್ದನಂತ ಈ ಊರವರು ಮೋನಪ್ಪಗೆ ಓಟು ಹಾಕ್ಯಾರ.

ಅದಕ ಅಂವ ಆಡಾಕ ಹತ್ಯಾನ. ಈ ನನ್ನ ಮಕ್ಕಳಿಗೆ ಸರಿಯಾದ ಬುದ್ಧಿ ಕಲಿಸ್ತೀನಿ. ಇವತ್ತು ದೇವರು ಎದ್ದು ಕೆರಿ ಹ್ಯಾಂಗ ಸೇರ್‍ತಾವ ನೋಡ್ತೀನಿ’ ಎಂದು ಬುಸುಗುಡುತ್ತಾ ತನ್ನ ಹಿಂಬಾಲಕರೊಂದಿಗೆ ಹೋಗಿಬಿಟ್ಟ.
ಅವತ್ತು ‘ಊರಲ್ಲಿ’ ಎರಡು ಕಡೆ ಮೀಟಿಂಗ್‌ಗಳು ನಡೆದವು. ಒಂದರ ನೇತೃತ್ವವನ್ನು ಸತೀಶ್ ಭಟ್ ವಹಿಸಿಕೊಂಡಿದ್ದರೆ, ಮತ್ತೊಂದರ ನೇತೃತ್ವವನ್ನು ಚೇರ್‍ಮನ್ ಮೋನಪ್ಪ ವಹಿಸಿಕೊಂಡಿದ್ದ. ಸತೀಶ್‌ಭಟ್ಟರ ಮೀಟಿಂಗಿಗೆ ಜಿಲ್ಲಾ ಘಟಕದ ಭಜರಂಗಿಗಳ ಕೇಸರಿ ಪಡೆಯೊಂದು ಸೇರ್ಪಡೆಗೊಂಡಿತ್ತು. ಪೂಜಾರಿ ಓಣಿಯ ಯುವಕರ ಮುಖದಲ್ಲಿ ಆಕ್ರೋಶ ಮಡುವುಗಟ್ಟಿತ್ತು. ಸಭೆಯಲ್ಲಿ ಮುಸಲರಿಗೆ ಬುದ್ಧಿ ಕಲಿಸುವ ಕುರಿತು ಒಕ್ಕೊರಲಿನ ಶಪಥಗಳಾದವು.
ಆದರೆ ಮೋನಪ್ಪನ ಸಭೆ ವಿಫಲವಾಯಿತೆಂದೇ ಹೇಳಬೇಕು. ಸೋಮಜ್ಜ ಗಾಂಧಿ ತಾತನ ನೆನಪಿಗಾಗಿ ಮೋಹನಗಾಂಧಿ ಎಂದು ಹೆಸರಿಟ್ಟಿದ್ದನಾದರೂ ಮೋಹನಗಾಂಧಿ ಆಡುಭಾಷೆಯಲ್ಲಿ ಮೋನಪ್ಪ ಆಗಿದ್ದ. ಮೋನಪ್ಪ ಹುಟ್ಟಿನಿಂದ ಗಾಂಧಿಯಂತೆ ಶಾಂತಿಪ್ರಿಯ. ಆತ ಮುಸ್ಲಿಂರ ಓಣಿಗೆ ಬಂದು, ನಾ ನಿಮ್ಮ ಬೆನ್ನಿಗಿದ್ದೀನಿ. ನೀವು ಹೆದರಬ್ಯಾಡ್ರಿ. ಹೆಚ್ಚು ಕಮ್ಮಿ ಆದ್ರ ಪೊಲೀಸರನ್ನು ಕರೆಸೋಣಂತ’ ಎಂದು ಧೈರ್ಯ ಹೇಳಿದನಾದರೂ ಮುಸ್ಲಿಮರು ಸಂಪೂರ್ಣ ಹೆದರಿದ್ದರು.
ಅವತ್ತು ಸೂರ್ಯ ಸಂಭವಿಸಲಿರುವ ಅನಾಹುತಕ್ಕೆ ಹೆದರಿ ನೆತ್ತಿಯಿಂದ ಪಶ್ಚಿಮಕ್ಕೆ ಇಳಿಯಲೋ ಬೇಡವೋ ಎಂಬಂತೆ ಇಳಿಯುತ್ತಿದ್ದ. ಮೋನಪ್ಪ ಪೊಲೀಸರನ್ನು ಕರೆದುಕೊಂಡು ಬರುತ್ತೇನೆಂದು ಹೇಳಿ ಹೋದವ, ಇಳಿ ಹೊತ್ತಾದರೂ ಬಂದಿರಲಿಲ್ಲ. ಮುಸ್ಲಿಮರು ಮೋನಪ್ಪ ಮತ್ತು ಪೊಲೀಸರ ದಾರಿ ಕಾಯ್ದು ಕಾಯ್ದು ಕೊನೆಗೆ ದೇವರ ಮೇಲೆ ಭಾರ ಹಾಕಿ ಡೋಲಿ ಎಬ್ಬಿಸಲು ನಿರ್ಧರಿಸಿದರು. ಕುಣಿತದೊಂದಿಗೆ ದೇವರನ್ನು ಬೀಳ್ಕೊಡುವುದು ಸಂಪ್ರದಾಯ. ಅವತ್ತು ಇಳಿ ಸಂಜೆ ನಾಲ್ಕು ಗಂಟೆಗೆ ಮತ್ತೆ ಹೆಜ್ಜೆಮೇಳಗಳೆಲ್ಲ ಒಂದರ ನಂತರ ಒಂದು ಆಗಮಿಸಿ ಅಗ್ನಿ ಕುಂಡದ ಸುತ್ತ ತಮ್ಮ ಪ್ರದರ್ಶನ ನೀಡಿದವು. ಆದರೆ ಅವುಗಳಲ್ಲಿ ನಿನ್ನೆ ರಾತ್ರಿಯ ಕುಣಿತದ ಗತ್ತು ಇರಲಿಲ್ಲ. ಅಗ್ನಿಕುಂಡ ಆರಿದಂತೆ ಕಂಡು ಬಂದಿತಾದರೂ, ಬೂದಿ ಮುಚ್ಚಿದ ಕೆಂಡದೊಳಗಿನ ಬೆಂಕಿ ಆರಿರಲೇ ಇಲ್ಲ!
ಈ ಹೆಜ್ಜೆ ಮೇಳಗಳ ನಡುವೆ ವಿಶಿಷ್ಟ ಅಲಂಕಾರಿಕ ದೇವರುಗಳು ತಮ್ಮವರ ಮೈತುಂಬಿ ಹೆಜ್ಜೆ ಕುಣಿತವರ ಮಧ್ಯೆಯೇ ಕುಣಿಯತೊಡಗಿದವು. ದೇವರಗಳ ಆರ್ಭಟದಲ್ಲೂ ಈ ಹಿಂದಿನ ಖದರರಿರಲಿಲ್ಲ. ಪಾಪ ನಿನ್ನೆ ರಾತ್ರಿಯ ದುರ್ಘಟನೆಯ ನೆನಪಾಗಿರಬೇಕು ಅವುಕ್ಕೆ. ದೇವರು ತಮ್ಮ ಭಕ್ತರ ಮನೆಮನೆಗೆ ತೆರಳಿ ತಮಗೆ ಬೇಕಾದುದನ್ನು ಪಡೆಯುವುದು ಪ್ರತಿ ವರ್ಷದ ರೂಢಿ. ಆ ರೂಢಿಯನ್ನು ದೇವರುಗಳು ಕೂಡ ಈ ಹಿಂದಿನ ವರ್ಷದಂತೆ ಖುಷಿಯಿಂದ ಮಾಡಲಿಲ್ಲ. ಜೊತೆಗೆ ಈ ವರ್ಷದ ಮಳೆ-ಬೆಳೆ, ಕೆಡುಕು-ಒಳಿತುಗಳ ಕುರಿತು ದೇವರನ್ನು ಕೇಳುವುದು ಸಾಂಗೋಪವಾಗಿ ನಡೆಯಲಿಲ್ಲ.
ಡೋಲಿಯೂ ಎದ್ದು ಹೊರಬರುತ್ತಿರುವಂತೆ ಭಕ್ತರಿಂದ ಉತ್ತತ್ತಿಗಳ ಸುರಿಮಳೆ ಪ್ರಾರಂಭವಾಯಿತು. ಮುಂದೆ ಕೊರವರ ಸನಾದಿಯವರು ಮತ್ತು ಹೊಲೆ ಮಕ್ಕಳ ತಮಟೆ ಮೇಳ, ಅದರ ಹಿಂದೆ ಹೆಜ್ಜೆ ಮೇಳಗಳು, ಅದಕ್ಕೆ ಬಾಲಂಗೋಚಿಯಾಗಿ ಡೋಲಿ ಮತ್ತು ದೇವರುಗಳು. ಹೀಗೆ ಈ ಡೋಲಿಯಾತ್ರೆ ಅಗ್ನಿಕುಂಡದ ಸುತ್ತ ಐದು ಸುತ್ತು ಹಾಕಿ ಪೂರ್ವಕ್ಕೆ ಮುಖ ಮಾಡಿ ಮಾದಿಗರ ಓಣಿಯತ್ತ ಅತ್ಯವಸರದಿಂದ ಹೊರಟಿತು. ಮಾದಿಗರು ಹೈದ ಹೈಕಳಾದಿಯಾಗಿ ಅಡ್ಡಬಿದ್ದರು. ಡೋಲಿ ಮತ್ತು ದೇವರುಗಳು ಅಡ್ಡಬಿದ್ದವರನ್ನು ದಾಟಿಕೊಂಡು ಮುನ್ನಡೆದವು. ಹೀಗೆ ಕುರುಬರ ಓಣಿ, ಬೇಡರ ಓಣಿಯನ್ನು ದಾಟಿಕೊಂಡು ಡೋಲಿಯಾತ್ರೆ ಪೂಜಾರಿಗಳ ಓಣಿಗೆ ಕಾಲಿಟ್ಟೊಡನೆ ಇನ್ನಿಲ್ಲದಂತೆ ಅವಸರಿಸಿತು.

ಆದರೆ ಪೂಜಾರಿ ಹೈದಗಳು ಮುಂಚೆಯೆ ನಿರ್ಧರಿಸಿದಂತೆ ಕಾಣುತ್ತದೆ. ಪೂಜಾರಿ ಓಣಿಯ ಮಧ್ಯದ ಹನುಮಂತನ ದೇವಸ್ಥಾನದ ಆವರಣದವರೆಗೆ ಬರುವವರೆಗೆ ಅವಕಾಶ ಮಾಡಿಕೊಟ್ಟರು. ಪಾಪ ಮುಸಲರ ದೇವರುಗಳು ಹನುಮಂತನಿಗೆ ಬಗ್ಗಿ ಸಲಾಮು ಸಲ್ಲಿಸಿ ಇನ್ನೇನು ಅಲ್ಲಿಂದ ಕಾಲ್ಕೀಳಬೇಕು ಎನ್ನುವಷ್ಟರಲ್ಲಿ ಹೈದರ ಗುಂಪೊಂದು ಡೋಲಿಯ ಮುಂದೆ ಬಂದು ‘ನಮ್ಮ ಹುಡುಗಿ ಎಲ್ಯದಾಳ ಅಂತ ಹೇಳಿನ ನೀವು ಮುಂದಕ್ಕ ಹೋಗಬೇಕು ಅಲ್ಲಿಯವರೆಗೆ ನಾವು ದಾರಿ ಬಿಡೋದಿಲ್ಲ’ ಎಂದು ಅಡ್ಡಲಾಗಿ ಸಾಲುಗಟ್ಟಿತು.
ದೇವರುಗಳು ಮುಖ ಮುಖ ನೋಡಿಕೊಂಡವು.

ಅದರಲ್ಲೊಂದು ಹುಂಬ ದೇವರು ಹೈದರ ಗುಂಪನ್ನು ದಾಟಲು ಪ್ರಯತ್ನಿಸಿತು. ಹೈದರ ಗುಂಪು ಆ ದೇವರನ್ನು ಹಿಡಿದು ಚಚ್ಚತೊಡಗಿತು. ಮುಂದೆ ಹೋದ ದೇವರುಗಳಿಗೆ ಏಟು ಬೀಳುತ್ತಿದ್ದರೆ, ಹಿಂದೆ ಇದ್ದ ದೇವರುಗಳು ಗಾಬರಿಯಾಗಿ ಮೈ ತುಂಬಿದವರ ಮೈ ಇಳಿದು ತಪ್ಪಿಸಿಕೊಂಡಿರಬೇಕು.

ಆಗ ಅವರಿಗೆ ಎಚ್ಚರವಾಗಿ ನಿಜ ಸ್ಥಿತಿ ಗೊತ್ತಾಗಿ, ದೇವರನ್ನು ಅಲ್ಲಿಯೇ ಬಿಸಾಡಿ ಓಟ ಕಿತ್ತರು. ಡೋಲಿ ಹೊತ್ತವರಿಗೆ ಆ ಕ್ಷಣ ಏನು ಮಾಡಬೇಕೆಂದು ತಿಳಿಯದೇ ಡೋಲಿಯನ್ನು ನೆಲಕ್ಕೆ ಕುಕ್ಕಿ ಓಡಿಬಿಟ್ಟರು. ಕೊನೆಯಲ್ಲಿ ಉಳಿದವರೆಂದರೆ ಮಾದಿಗರ ತಮಟೆ ಮೇಳ ಮಾತ್ರ. ಅವರನ್ನು ಯಾರೂ ಮುಟ್ಟಲಿಲ್ಲವಾದ್ದರಿಂದ ಅವರ ಅಸ್ಪೃಶ್ಯತೆ ಈ ಸಮಯದಲ್ಲಿ ಅವರಿಗೆ ಉಪಯೋಗಕ್ಕೆ ಬಂತು.
ಅಂದು ರಾತ್ರಿ ಮೋನಪ್ಪ ಇಬ್ಬರು ಪೇದೆಗಳನ್ನು ಕರೆದುಕೊಂಡು ಊರಿಗೆ ಬಂದ. ಆದರೆ ಆ ಇಬ್ಬರು ಪೇದೆಗಳು ಪೂಜಾರ ಓಣಿಯಲ್ಲಿ ಕಾಲಿಡಲು ಹೆದರಿದರು. ಆವತ್ತು ರಾತ್ರಿ ಮೋನಪ್ಪನ ಹಿತ್ತಲಲ್ಲಿ ಸ್ವಲ್ಪ ಧೈರ್ಯವಂತ ಮುಸ್ಲಿಮರು ಪೇದೆಗಳ ರಕ್ಷಣೆಯಲ್ಲಿ ಸಭೆ ಸೇರಿದರು. ಇದು ಅವರ ದೇವರಿಗೆ ಧರ್ಮಕ್ಕೆ ಆದ ಅವಮಾನವಾಗಿದ್ದರಿಂದ ಅವರಿಗೆ ನಿಜಕ್ಕೂ ಸಿಟ್ಟು ಬಂದಿತ್ತು. ಪೇದೆಗಳು ಮುಸ್ಲಿಂರಿಗಾದ ಅನ್ಯಾಯವನ್ನು ಬರೆದುಕೊಂಡರು. ರಾತ್ರಿ ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಡೋಲಿಯ ಪಕ್ಕದಲ್ಲಿ ಮಲಗಿ ವಿಶ್ರಾಂತಿ ಪಡೆದರು.
ಮರುದಿನ ಸೂರ್ಯನಿನ್ನೂ ಭುಜದ ನೇರಕೆ ಬಂದಿರಲಿಲ್ಲ, ಪೊಲೀಸ್ ವಾಹನವೊಂದು ಊರ ಅಗಸಿ ಬಾಗಿಲಿನಲ್ಲಿ ನಿಂತಿತ್ತು.

ಪೊಲೀಸರು ಪೂಜಾರಿ ಹೈದರ ಮನೆಗಳಿಗೆ ನುಗ್ಗಿ ೨೮ ಯುವಕರನ್ನು ಬಂಧಿಸಿದರು. ಪಿಎಸ್‌ಐ ಸಾಹೇಬರು ಮುಸ್ಲಿಂ ಸಮಾಜದ ಹಿರಿಯರೊಂದಿಗೆ ಮಾತುಕತೆ ನಡೆಸಿ ಸಂತೈಸುವಲ್ಲಿ ಯಶಸ್ವಿಯಾದರು. ಮುಸ್ಲಿಂರು ಪೊಲೀಸರ ಕಾವಲಿನಲ್ಲಿ ಒಂದೆರಡು ಬಕೇಟ್ ನೀರು ತಂದು ದಾರಿಯಲ್ಲಿ ಬಿದ್ದಿದ್ದ ದೇವರುಗಳ ಮುಖವಾಡವನ್ನು ಬಕೇಟ್‌ನಲ್ಲಿ ಅದ್ದಿ ತೊಳೆದು ಅಂತಿಮ ಸಂಸ್ಕಾರದ ಶಾಸ್ತ್ರ ಮುಗಿಸಿದರು. ತುಂಬಿ ಹರಿಯುತ್ತಿದ್ದ ಕೆರೆಗೆ ಹೋಗಿ ಸಂಸ್ಕಾರ ಕಾಣಬೇಕಿದ್ದ ದೇವರುಗಳು ಅನಾಥರಂತೆ ದಾರಿಯಲ್ಲಿಯೆ ಸಂಸ್ಕಾರ ಕಂಡವು. ಬಂಧಿಸಲ್ಪಟ್ಟ ೨೮ ಯುವಕರನ್ನು ತುಂಬಿಕೊಂಡ ಪೊಲೀಸ್ ವಾಹನ ಹೊಗೆಯುಗುಳುತ್ತ ಕಣ್ಮರೆಯಾಯಿತು.
ಸಂಜೆಯೇ ಸೂರ್ಯ ಆಗಿನ್ನೂ ನೆತ್ತಿಯಿಂದ ಕೆಳಕ್ಕಿಳಿದಿರಲಿಲ್ಲ. ಪೊಲೀಸರು ಹಿಡಿದುಕೊಂಡು ಹೋಗಿದ್ದ ಯುವಕರು ಆಗಲೆ ಊರಲ್ಲಿ ತಮ್ಮ ಚಿಗುರು ಮೀಸೆಯ ಮೇಲೆ ಕೈಯಿಟ್ಟುಕೊಂಡು ಊರಲ್ಲಿ ತಿರುಗಾಡುತ್ತಿದ್ದಾರೆ. ಸತೀಶ್‌ಶೆಟ್ಟಿ ತನ್ನ ರಾಜಕೀಯ ಪ್ರಭಾವ ಬಳಸಿ ಅವರನ್ನೆಲ್ಲ ಬಿಡಿಸಿಕೊಂಡು ಬಂದಿದ್ದ. ನಿನ್ನೆಯ ಸಂಘರ್ಷದಲ್ಲಿ ಆತನೇ ಗೆದ್ದಿದ್ದನಾದರೂ ಚೇರ್‍ಮನ್ ಮೋನಪ್ಪನ ಕುಮ್ಮಕ್ಕಿನಿಂದ ಪೊಲೀಸರು ಆತನ ಹುಡುಗರನ್ನು ಬಂಧಿಸಿದ್ದರಿಂದ ಆತನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು.
ಸೂರ್ಯ ಪಡುವಣದ ಕೆಂಧೂಳಿಯಲ್ಲಿ ಮರೆಯಾಗುತ್ತಲಿದ್ದ. ಪೂಜಾರಿ ಹೈದರು ದೇವರು ಮೈಮೇಲೆ ಬಂದಂತಾಗಿ ಮಸೀದಿಗೆ ನುಗ್ಗಿ ಬೆಂಕಿ ಇಟ್ಟುಬಿಟ್ಟರು. ತಡೆಯಲು ಬಂದ ಮುಸ್ಲಿಂ ಮೌಲ್ವಿಯ ಮೈಮೇಲೆ ಬಾಸುಂಡೆಗಳೆದ್ದವು. ತೋಟಕ್ಕೆ ಹೋಗಿದ್ದ ಮೋನಪ್ಪ ಸಂಜೆ ಊರಿಗೆ ಬಂದರೆ ಇಡೀ ಊರಲ್ಲಿ ಸ್ಮಶಾನ ಮೌನ. ಮೋನಪ್ಪ ಸಮಾಧಾನಿಸುವ ದೃಷ್ಟಿಯಿಂದ ಮುಸ್ಲಿಂರ ಹಟ್ಟಿಗೆ ಹೋದ. ಮೋನಪ್ಪನನ್ನು ನೋಡಿದ ಮುಸ್ಲಿಂರು ದೆವ್ವ ಕಂಡವರಂತೆ ದಡ್‌ಬಡ್ ಎಂದು ಬಾಗಿಲು ಹಾಕಿಕೊಂಡರು.
ಈ ಘಟನೆ ಸಂಭವಿಸಿ ಸುಮಾರು ೧೩ ವರ್ಷಗಳಾಗಿವೆ. ನಾನು ಏಳನೆಯ ತರಗತಿಯ ನಂತರ ಹೈಸ್ಕೂಲು ವಿದ್ಯಭ್ಯಾಸಕ್ಕಾಗಿ ಊರ ಬಿಟ್ಟವನು, ಇಂದಿಗೂ ಹೊಟ್ಟೆಪಾಡಿಗಾಗಿ ಕಾಲಲ್ಲಿ ಚಕ್ರ ಕಟ್ಟಿಕೊಂಡವನಂತೆ ತಿರುಗುತ್ತಲೇ ಇದ್ದೇನೆ. ನನ್ನೂರಲ್ಲಿ ನನ್ನವರೆನಿಸಿಕೊಂಡ ಅಣ್ಣನೊಬ್ಬನಿದ್ದಾನಾದರೂ ನಾನು ಊರಿಗೆ ಹೋಗಿ ಬಂದು ಮಾಡುವುದು ಬಹಳ ಕಡಿಮೆ. ಅಂದ ಹಾಗೆ ಮೊನ್ನೆ ಮೋಹರಂ ಹಬ್ಬದ ಸಮಯದಲ್ಲಿ ಊರಿಗೆ ಹೋಗಿದ್ದೆ. ಆದರೆ ಊರಲ್ಲಿ ಹಬ್ಬದ ಕಳೆಯೇ ಇಲ್ಲ. ಹಬ್ಬ ಇದ್ದುದು ಇವತ್ತೇನಾ ಎಂದು ನನಗೆ ಅಚ್ಚರಿ. ಸಮಾಧಾನವಾಗದೇ ಮಸೀದಿಯ ಕಡೆ ಹೊರಟೆ.

ಸುಮಾರು ೩೦ ಜನ ಮುಸ್ಲಿಂ ಬಾಂಧವರು ಡೋಲಿ ಮತ್ತು ದೇವರುಗಳನ್ನು ಹೊತ್ತುಕೊಂಡು ಮೌನವಾಗಿ ಅಗ್ನಿಕುಂಡವನ್ನು ಸುತ್ತುತ್ತಿದ್ದರು. ಅಲ್ಲಿ ಮುಸ್ಲಿಂರನ್ನು ಹೊರತುಪಡಿಸಿ ಅನ್ಯ ಧರ್ಮದ ಒಂದು ನರಪಿಳ್ಳೆಯೂ ಇರಲಿಲ್ಲ. ಐದು ಸುತ್ತ ಮುಗಿದ ಮೇಲೆ ಡೋಲಿಯನ್ನು ಅಲ್ಲಿಯೇ ಕೆಳಗಿಳಿಸಿ ಬಕೆಟ್‌ನಲ್ಲಿ ನೀರು ತಂದು ದೇವರ ಮುಖವಾಡಗಳನ್ನು ತೊಳೆದು ಮತ್ತೆ ಮಸೀದಿಯ ಮೂಲೆ ಸೇರಿಸಿದರು.

ಎಲ್ಲಿ ಹೋದವು ಆ ಹೆಜ್ಜೆ ಮೇಳ, ತಮಟೆ, ಹಲಗೆ, ಮೋಹರಂ ಪದಗಳು ಮತ್ತು ಅಂದಿನ ರೇವತಿಯಂತಹ ದಾವಣಿ ಲಂಗದ ಹುಡುಗಿಯರ ಗುಂಪು?
ತಲೆ ದಿಮ್ಮೆನ್ನುತ್ತಿತ್ತು. ಮನೆಗೆ ಬಂದು ಡೋಲಿಯನ್ನು ಕೆರೆಗೆ ಯಾಕೆ ಒಯ್ಯುತ್ತಿಲ್ಲ ಎಂದು ಅಣ್ಣನನ್ನು ಕೇಳಿದೆ. ‘ಕೆರೆಯಾಗ ನೀರೆಲ್ಲೈತಿ. ಆವತ್ತು ದೇವರುಗಳು ದಾರ್‍ಯಾಗ ಬಿದ್ದುವಲ್ಲ. ಅವತ್ತಿನಿಂದ ಕೆರೆ ತುಂಬೇ ಇಲ್ಲ’ ಎಂದ ಅಣ್ಣ ವಿಷಾದದ ನಗು ನಕ್ಕ. ಆ ನಗೆಯಲ್ಲಿ ದೇವರು ಈ ಊರಿಗೆ ತಕ್ಕ ಶಾಸ್ತಿಯೇ ಮಾಡಿದ್ದಾನೆ ಎಂಬ ಭಾವವಿತ್ತೇ, ಗೊತ್ತಿಲ್ಲ.

3 ಟಿಪ್ಪಣಿಗಳು (+add yours?)

 1. Vithal Dalawai
  ನವೆಂ 18, 2010 @ 17:18:39

  A good story.

  ಉತ್ತರ

 2. naasomeswara
  ನವೆಂ 17, 2010 @ 16:06:50

  Yes……. Its like my child hood’s experinece…
  Good story
  -ns

  ಉತ್ತರ

 3. shashi
  ನವೆಂ 17, 2010 @ 14:16:26

  nice story.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: