ಅಂಗೈಯಲ್ಲಿ ಮಾರುಕಟ್ಟೆ- ಮೊಬೈಲ್ ಟ್ರೇಡಿಂಗ್ !!

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-32

It is a myth that profits are higher in fast growing Industries. . John Kay

ಕ್ಷಿಪ್ರ ಪ್ರಗತಿಯ ಉದ್ಯಮಗಳಲ್ಲಿ ಲಾಭಾಂಶ ಜಾಸ್ತಿಯೆನ್ನುವುದು ಒಂದು ಮಿಥ್ಯೆ. . . . . . ಜಾನ್ ಕೇ.

ಎಂಬತ್ತರ ದಶಕ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ BFSc ಡಿಗ್ರಿ ಓದುತ್ತಿದ್ದ ಕಾಲ. ಅದು ಹೇಗೋ ಏನೋ, ನನಗೂ ನನ್ನ ಗೆಳೆಯ ನಾಗೇಂದ್ರನಿಗೂ ಈ ಶೇರು ಎಂಬ ಹುಚ್ಚು ಕುದುರೆಯ ಪರಿಚಯ ಮಾಡಿಕೊಳ್ಳಬೇಕು ಎಂಬ ಹುಚ್ಚು ಹತ್ತಿತು. ದಿನಾ ಪೇಪರಿನಲ್ಲಿ ಬರುತ್ತಿದ್ದ ಶೇರುಬಜಾರಿನ ಏರಿಳಿತದ ಬಗ್ಗೆ ಇನ್ನಿಲ್ಲದ ಕುತೂಹಲ ಹತ್ತಿತ್ತು. ಸರಿ. ಹೇಗೋ ಮಾಡಿ ಕಾಲೇಜಿನ ಒಂದಿಬ್ಬರು ಉಪನ್ಯಾಸಕರನ್ನು ಕಾಡಿಸಿ ಪೀಡಿಸಿ ಅದರ ಬಗ್ಗೆ ಪ್ರಾಥಮಿಕ ಕಲಿಯುವಿಕೆಯನ್ನು ಆರಂಭಿಸಿದೆವು.


ಆರಂಭದಲ್ಲಿ ಒಂದೆರಡು ಶೇರುಗಳನ್ನು ಆ ಗುರುಗಳ ಸಹಾಯದಿಂದಲೇ ಕೊಂಡೆವು. ನಾನು ಕೊಂಡ ಮೊದಲ ಶೇರು First Growth Fund of India ಆಗಿದ್ದರೆ ನಾಗೇಂದ್ರ ಕೊಂಡ ಮೊದಲ ಶೇರು Indian Hotels ಆಗಿತ್ತು. ಮ್ಯೂಚುವಲ್ ಫಂಡುಗಳು ಇನ್ನೂ UTI  ಮೂಲಕ ಸರಕಾರೀ ಕೈಯಲ್ಲೇ ಇದ್ದ ಆ ಕಾಲದಲ್ಲಿಯೂ ಈ FGF ಒಂದು ಮ್ಯೂಚುವಲ್ ಫಂಡಿನಂತೆಯೇ ಕೆಲಸ ಮಾಡುತ್ತಿತ್ತು.

ದಿನಾ ಅವುಗಳ ಬೆಲೆ ಮೇಲೆ ಹೋಗುವುದನ್ನು ಪೇಪರಿನಲ್ಲಿ ನೋಡುತ್ತಾ ಆನಂದಿಸುತ್ತಿದ್ದೆವು. ಕೆಳಕ್ಕೆ ಇಳಿದಾಗ ಗಾಬರಿಗೊಂಡು ನಿದ್ದೆ ಕೆಡುತ್ತಿದ್ದೆವು.
ಮೀನು ವ್ಯವಸಾಯಕ್ಕಿಂತ ಜಾಸ್ತಿ ನಡೆಯುತ್ತಿತ್ತು ನಮ್ಮ ಶೇರು ವ್ಯವಹಾರ. ಪರೀಕ್ಷಾ ಮುಂಚಿನ ದಿನಗಳಲ್ಲಿ ಜೋರಾಗಿ ನಡೆಯುತ್ತಿತ್ತು ನಮ್ಮ ಶೇರು ಅಧ್ಯಯನ. Feed conversion ratio ಬದಲು Price Earnings Ratio ಜಾಸ್ತಿ ಕರಗತವಾಗಿತ್ತು. ಒಮ್ಮೆ ನಾಗೇಂದ್ರ ಪರೀಕ್ಷೆಯೊಂದರಲ್ಲಿ ಮೀನಿನ BV (Book Value) ಎಂದು ಬರೆಯುವುದರ ಬದಲಾಗಿ PV (Peroxide Value) ಎಂದು ಬರೆದು ಬಂದಿದ್ದನಂತೆ. ಹೀಗೆ ಆಗಿತ್ತು ಶೇರು ಲೋಕಕ್ಕೆ ನಮ್ಮ ಆರಂಗೇಟ್ರಂ.


ಕೇವಲ ಲಾಟರಿ ಪದ್ಧತಿಯಲ್ಲಿಯೇ ಮುಖಬೆಲೆಯಲ್ಲಿಯೇ ಅಲಾಟ್ ಆಗುತ್ತಿದ್ದ ಆಗಿನ ಕಾಲದ IPO ಗಳಲ್ಲೂ ಕೈಹಚ್ಚಿ ಸಿಫ್ಕೋ ಫೈನಾನ್ಸ್ನಂತಹ ಬಳಿಕ ಕುಪ್ರಸಿದ್ಧವಾದ ಕಂಪೆನಿಗಳ ಶೇರುಗಳನ್ನೂ ಕೂಡಾ ಕೊಂಡಿದ್ದೆವು. ಕೆಲ ಸಮಯ ಡಿವಿಡೆಂಡ್ ನೀಡುತ್ತಾ ಇದ್ದು ಈಗ ಹೇಳ ಹೆಸರಿಲ್ಲದೆ ನಿರ್ನಾಮವಾದ FGF ಕಂಪೆನಿಯ ಶೇರು ಸರ್ಟಿಫಿಕೇಟ್ ಇಂದಿಗೂ ನನ್ನ ಬಳಿ ಸವೆನಿಯರ್ ಆಗಿ ಉಳಿದಿದೆ. ಹರ್ಷದ್ ಮೆಹ್ತಾ ನಾಟಕ ಮಂಡಳಿಯ ಸಿಫ್ಕೋ ಫೈನಾನ್ಸ್ ಶೇರು ಪತ್ರಗಳು ಮಾಜಿ ಪ್ರೇಯಸಿಯ ಲವ್ ಲೆಟರುಗಳಂತೆ ಇಂದಿಗೂ ನನ್ನ ಬಳಿ ಭದ್ರವಾಗಿ ಕುಳಿತು ಕಾಡುತ್ತಿವೆ.
ಅಂತೂ ಇಂತೂ BFSc ಡಿಗ್ರಿಯೊಂದಿಗೆ ಕಾಲೇಜಿನಿಂದ ಹೊರಬಿದ್ದೆವು. ಸರ್ಟಿಫಿಕೇಟ್ ನೋಡಿ Bachelor of Fisheries and Share certification ಎಂದು ಕುಹಕವಾಡಿದ್ದು ಇಂದಿಗೂ ನೆನಪಿದೆ. ಬಳಿಕ ನಾನು MBA ಮಾಡಲು ಊರು ಬಿಟ್ಟುಹೋದೆ. ನಾಗೇಂದ್ರ ಮಂಗಳೂರಿನಲ್ಲಿಯೇ ಶೇರುಜಗತ್ತಿನಲ್ಲಿ ಭದ್ರವಾಗಿ ತಳವೂರಿದ. ಆತ ಆಮೇಲೆ ತನ್ನ Indian Hotels ಶೇರುಗಳನ್ನು ಏನು ಮಾಡಿದನೋ ನನಗೆ ಗೊತ್ತಾಗಲಿಲ್ಲ. ಆದರೆ, ಸಧ್ಯಕ್ಕೆ ಅವನು ಮಂಗಳೂರಿನ ಬಲ್ಲಾಳ್ ಭಾಗ್ ಬಳಿಯಲ್ಲಿ ಕೋಟಕ್ ಸೆಕ್ಯೂರಿಟೀಸ್ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾನೆ.
ಆ ಕಾಲದಲ್ಲಿ ಶೇರು ಕೊಳ್ಳ ಬೇಕಾದರೆ ಬ್ರೋಕರ್ ಆಫೀಸಿಗೆ ಹೋಗಿಯೋ ಫೋನ್ ಮೂಲಕ ಸಂಪರ್ಕಿಸಿಯೋ ಆರ್ಡರ್ ನೀಡಬೇಕಾಗುತ್ತಿತ್ತು. ಅಲ್ಲಿಂದ ಅವರುಗಳು ಮುಂಬೈನ ತಮ್ಮ ಮುಖ್ಯ ಬ್ರೋಕರ್‌ಗಳಿಗೆ ಫೋನಾಯಿಸಿ ಅಥವ ಟೆಲೆಕ್ಸ್ ಮೂಲಕ ಆರ್ಡರ್ ವರ್ಗಾಯಿಸುತ್ತಿದ್ದರು. ದಿನದ ಟ್ರೇಡಿಂಗ್ ಕಳೆದು ಸಾಯಂಕಾಲ ಮಾತ್ರವೇ ನಾವು ಆರ್ಡರ್ ಕೊಟ್ಟ ಶೇರು ಖರೀದಿ ಆಗಿದೆಯೇ, ಆಗಿದ್ದರೆ ಎಷ್ಟು ಬೆಲೆಗೆ ಇತ್ಯಾದಿ ವಿವರಗಳು ಸಿಗುತ್ತಿದ್ದವು. ಕೊಂಡ ಶೇರನ್ನು ವಾರಗಟ್ಟಲೆ ಬದ್ಲಾ ಸಿಸ್ಟಂ ಮೂಲಕ ಕ್ಯಾರ್ರಿ ಮಾಡಬಹುದಿತ್ತು.

ಸ್ಕ್ರಿಪ್ ಡೆಲಿವರಿ ಬೇಕು ಎಂದಾದರೆ  ಒಂದೆರಡು ವಾರ ಕಾಯಬೇಕಿತ್ತು. ಬಾಂಬೆಯಿಂದ ರಿಜಿಸ್ಟರ್ಡ್ ಪೋಸ್ಟ್ ನಲ್ಲಿ ಬರುತ್ತಿದ್ದು-ಟ್ರಾನ್ಸ್ಫರ್ ಡೀಡ್ ಸಮೇತ. ಮತ್ತೆ ಅದನ್ನು ಟ್ರಾನ್ಸ್ಫರ್ ಮಾಡಲು ಕಂಪೆನಿಯ ರಿಜಿಸ್ಟ್ರಾರ್‌ಗೆ ಕಳುಹಿಸಿ ಇನ್ನೂ ಒಂದು ತಿಂಗಳು ಕಾಯಬೇಕಿತ್ತು.
ಅದು ಅಂದಿನ ಕಾಲ. ಇಂದಿಗೆ ಎಲ್ಲವೂ e-ಮಯವಾಗಿದೆ. ಎಲ್ಲವೂ ನಮ್ಮ ಐಟಿಯ ಕೊಡುಗೆ. ಆನ್ ಲೈನ್ ಟ್ರೇಡಿಂಗ್ ಬಂದಿದೆ. ಡಿ-ಮ್ಯಾಟ್ ಬಂದಿದೆ. ಸೆಬಿ ಬಂದಿದೆ. FII  ಎಂಬ ಭೂತ್‌ನಾಥ್‌ಗಳೂ ಬಂದಿದ್ದಾವೆ. ಜಾಗತಿಕ ಮಾರುಕಟ್ಟೆಯ ಪರಿಕಲ್ಪನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ. ಮನೆಯಲ್ಲಿ ಕುಳಿತುಕೊಂಡು ಕಂಪ್ಯೂಟರ್/ಇಂಟರ್‌ನೆಟ್ ಮೂಲಕ ನಿಮಿಷಾರ್ಧದಲ್ಲಿ ಯಾವ ಶೇರು ಬೇಕಾದರೂ ಕೊಂಡು ಕೊಳ್ಳ ಬಲ್ಲೆವು. ಎಲ್ಲವೂ ಅಮಿತಾಭ್ ಹೇಳುವಂತೆ’ यह रहा आपके कम्पुटर स्क्रीन पर’

ಈಗ ಅದೂ ಕೂಡಾ ಹಳೆಯದಾಯಿತು. ಈಗಿನ ಲೇಟೆಸ್ಟ್ ಗರಂ ಮಸಾಲೆ ಏನೆಂದರೆ ಇದೇ ಅಕ್ಟೋಬರ್‌ನಿಂದ ಮೊದಲ್ಗೊಂಡಂತೆ ಮೊಬೈಲ್ ಮೂಲಕ ನಡೆಸಬಹುದಾದ ಶೇರು ವ್ಯವಹಾರ. ಇದಕ್ಕೆ ಕಂಪ್ಯೂಟರ್/ಇಂಟರ್ನೆಟ್ ಕೂಡಾ ಬೇಡ. ಬರೇ ಮೊಬೈಲ್ ಫೋನಿನ ಸ್ಕ್ರೀನಿನಲ್ಲಿ ಶೇರುಗಳ ವ್ಯವಹಾರ ನಡೆಸಬಹುದಾಗಿದೆ. ಮನೆಯಲ್ಲೇ ಕುಳಿತು ಯಾಕೆ, ಬೀದಿಯಲ್ಲಿ, ಬಸ್‌ಸ್ಟಾಂಡಿನಲ್ಲಿ, ಆಫೀಸಿನಲ್ಲಿ, ಪ್ರಯಾಣದಲ್ಲಿ ಎಲ್ಲೆಂದರಲ್ಲಿ ಮೊಬೈಲ್ ಕೈಯಲ್ಲಿ ಕುಟು ಕುಟು ಕುಟ್ಟುತ್ತಾ ಟಾಟ ಬಿರ್ಲಾ ಅಂಬಾನಿಗಳನ್ನು ಆಚೀಚೆ ಮಾಡಬಹುದು. ಕಂಪ್ಯೂಟರ್/ಇಂಟರ್ನೆಟ್ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲೂ ಕೂಡಾ ಇದರ ಪ್ರಯೋಜನ ಪಡೆಯಬಹುದು.

ಇದರಿಂದಾಗಿ ಶೇರುಕಟ್ಟೆ ಅತಿಸುಲಭವಾಗಿ ಹಳ್ಳಿ ಹಳ್ಳಿಗಳಿಗೂ ಪಸರಿಸುವ ಅವಕಾಶ ಇದೆ. ಪ್ರಬುದ್ಧವಾಗಿ ಉಪಯೋಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿಗೆ ಹಾದಿಯಾದೀತು. ಸಟ್ಟಾ ವ್ಯವಹಾರದ ಹೊಸ ಪಿಡುಗಾಗಿ ಉಪಯೋಗಿಸಿ ಕೊಂಡರೆ ಹೆಮ್ಮಾರಿಯಾದೀತು.

ಯಾವ ರೀತಿ ಆರಂಭ?
ಮೊಬೈಲ್ ಟ್ರೇಡಿಂಗ್ ಎಂಬುದು ಆನ್-ಲೈನ್ ಟ್ರೇಡಿಂಗ್‌ನ ಮುಂಚಾಚು. ಆದ್ದರಿಂದ ಮೊತ್ತ ಮೊದಲನೆಯದಾಗಿ ಮೊಬೈಲ್ ಟ್ರೇಡಿಂಗ್ ಸೇವೆಯನ್ನೂ ಆರಂಭಿಸಿದ ಆನ್‌ಲೈನ್ ಟ್ರೇಡಿಂಗ್ ಸೇವೆ ನೀಡುವ ಒಬ್ಬ ಬ್ರೋಕಿಂಗ್ ಕಂಪೆನಿಯನ್ನು ಸಂಪರ್ಕಿಸಬೇಕು.Angel, Sharekhan, Geojit, Motilal, ICICI Bank, HDFC Bank, Reliance Money, Kotak ಇತ್ಯಾದಿ ಯಾವುದಾದರೂ ಶೇರುಕಟ್ಟೆಯ ಬ್ರೋಕರ್‌ಗಳು ಇದಕ್ಕೆ ಆದೀತು. ಆ ಕಂಪೆನಿಗಳಲ್ಲಿ ಕಾಗದ ಪತ್ರಗಳನ್ನು ತುಂಬಿ ಒಂದು ಆನ್-ಲೈನ್ ಟ್ರೇಡಿಂಗ್ ಅಕೌಂಟ್ ತೆರೆಯಬೇಕು. ಅ ಅಕೌಂಟ್‌ಗೆ ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ಡಿ-ಮ್ಯಾಟ್ ಅಕೌಂಟ್‌ಗಳು ಕೊಂಡಿಯಾಗಿರಬೇಕು. ಈ ರೀತಿ ೩ ಅಕೌಂಟುಗಳುಳ್ಳ ಒಂದು ಆನ್-ಲೈನ್ ಟ್ರೇಡಿಂಗ್ ಅಕೌಂಟ್ ತೆರೆದ ಕೂಡಲೇ ನಿಮಗೆ ಅದನ್ನು ಚಲಾಯಿಸಲು ಲಾಗ್-ಇನ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ.

ಅದರ ಜೊತೆ ಜೊತೆಗೆ ಮೊಬೈಲ್ ಟ್ರೇಡಿಂಗ್‌ಗೂ ರಿಜಿಸ್ಟರ್ ಮಾಡಿಕೊಳ್ಳಬೇಕು. ಈಗಾಗಲೇ ಆನ್-ಲೈನ್ ಅಕೌಂಟ್ ಇರುವವರು ಮೊಬೈಲ್ ಸೌಲಭ್ಯಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು.
ನಿಮ್ಮಲ್ಲಿ ಒಂದು GPRS ಕನೆಕ್ಷನ್ ಹಾಗೂ Java MIDP 2.0 / CLDC 1.1 ಸೌಲಭ್ಯವುಳ್ಳ ಒಂದು ಮೊಬೈಲ್ ಫೋನ್ ಇರಬೇಕಾಗುತ್ತದೆ. ಇದರಲ್ಲಿ ಅಗತ್ಯವಿರುವ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅಥವ ಫೋನ್ ಬ್ರೌಸರ್ ಅನ್ನೇ ಉಪಯೋಗಿಸಿ ಶೇರು ವ್ಯವಹಾರ ಮಾಡಬಹುದು.

ಬ್ರೋಕಿಂಗ್ ಹೌಸಿನವರುBSE ಯ FASTRADE ಅಥವ NSE ಯ NOW – ಈ ಸಿದ್ಧ ತಂತ್ರಾಂಶಗಳನ್ನು ಅಥವ ಮೊಬೈಲ್ ಶೇರು ವ್ಯವಹಾರ ನಡೆಸಲು ಸಾಧ್ಯವಾಗುವಂತೆ ಅದಕ್ಕಾಗಿಯೇ  ತಾವೇ ಸಿದ್ಧ ಪಡಿಸಿದ ತಂತ್ರಾಂಶವನ್ನು ನಿಮ್ಮ ಫೋನಿನಲ್ಲಿ ಅಳವಡಿಸಿ ಕೊಡುತ್ತಾರೆ. ಬ್ರೋಕರ್ ನೀಡುವ ಮೊಬೈಲ್ ಲಾಗ್-ಇನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಉಪಯೋಗಿಸಿ ಟ್ರೇಡಿಂಗ್ ಆರಂಭಿಸಬಹುದು. ನಿಮ್ಮ ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಈಗ ಕಂಪ್ಯೂಟರ್‌ನಲ್ಲಿ ಕಾಣುವಂತೆ ಟ್ರೇಡಿಂಗ್ ಟರ್ಮಿನಲ್ ಕಾಣಬಹುದು.

ಸೌಲಭ್ಯ:
BSE, NSE ಎರಡೂ ಮಾರುಕಟ್ಟೆಗಳಲ್ಲಿ ನಡೆಸಬಹುದಾದ ಈ ಮೊಬೈಲ್ ಟ್ರೇಡಿಂಗ್‌ನಲ್ಲಿ ಪ್ರಚಲಿತ ಬೆಲೆಗಳನ್ನು ನೋಡುವುದು, ಉತ್ತಮ ಬಿಡ್‌ಗಳನ್ನು ನೋಡುವುದು, ಮಾರ್ಜಿನ್ ಪೊಸಿಶನ್ ನೋಡುವುದು, ದುಡ್ಡಿನ ಮೊತ್ತವನ್ನು ನೋಡುವುದು, ಶೇರು ಆರ್ಡರ್ ಮಾಡುವುದು, ಆರ್ಡರ್ ಬುಕ್ ನೋಡುವುದು, ಅದರಲ್ಲಿ ಬದಲಾವಣೆಗಳನ್ನು ಮಾಡುವುದು, ಫಂಡ್ ವರ್ಗಾವಣೆ, ಶೇರು ಇಂಡೆಕ್ಸ್‌ಗಳ ವಿವರಗಳು, ಡಿರೈವೇಟಿವ್ ಟ್ರೇಡಿಂಗ್, ಕಮಾಡಿಟಿ, ಕರೆನ್ಸಿ ಟ್ರೇಡಿಂಗ್ ಇತ್ಯಾದಿ ಶೇರು ವ್ಯವಹಾರ ಸಂಬಂದಿ ಎಲ್ಲಾ ಚಟುವಟಿಕೆಗಳನ್ನೂ ಮಾಡಬಹುದಾಗಿದೆ. ದೈನಂದಿನ ಚಾರ್ಟುಗಳು, ದಿನ ಭವಿಷ್ಯಕ್ಕೆ ಸಂಬಂಧಪಟ್ಟಂತಹ ಶೇರು ಕುಂಡಲಿಗಳು ಇತ್ಯಾದಿ ಕೆಲ ಸಂಶೋಧನಾತ್ಮಕ ವರದಿಗಳೂ ಲಭ್ಯ. ಸುಮಾರಾಗಿ ನೀವೀಗ ಆನ್-ಲೈನ್ ಟ್ರೇಡಿಂಗ್‌ನಲ್ಲಿ ನಡೆಸುವ ಎಲ್ಲಾ ಕಾರ್ಯಗಳನ್ನೂ ಇಲ್ಲಿ ನಡೆಸಬಹುದಾಗಿದೆ. ಅಕಸ್ಮಾತ್ತಾಗಿ ಎಲ್ಲಾದರು ಕನೆಕ್ಷನ್ ಕಡಿದುಹೋದಲ್ಲಿ ಕಾಲ್ ಸೆಂಟರ್‌ಗೆ ಕಾಲ್ ಮಾಡಿ ವ್ಯಾಪಾರ ಮುಂದುವರಿಸಬಹುದಾಗಿದೆ.

ಭದ್ರತೆ:
ಈ ಮೊಬೈಲ್ ವೇದಿಕೆಯಲ್ಲಿ ಅತ್ಯಂತ ಜಾಸ್ತಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರುಕಟ್ಟೆಯ ವತಿಯಿಂದ ಬ್ರೋಕರುಗಳು ನಿರ್ವಹಿಸುವ ವೆಬ್ ಸೌಕರ್ಯವನ್ನು ಆಡಿಟ್ ಮಾಡಲಾಗುತ್ತದೆ. ಪಾಸ್‌ವರ್ಡ್‌ಗಳನ್ನು ೧೨೮ ಬಿಟ್ ಎನ್ಕ್ರಿಪ್ಷನ್ ಪದ್ಧತಿಯಾನುಸಾರ ಮಾಡಿ ಅತ್ಯಂತ ಜಾಸ್ತಿ ಭದ್ರತೆಯನ್ನು ಒದಗಿಸಲಾಗಿದೆ. ೧೫ ದಿನಕ್ಕೊಮ್ಮೆ ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕು. ಅಲ್ಲದೆ, ಭದ್ರತಾ ದೃಷ್ಟಿಯಿಂದ ಪಾಸ್‌ವರ್ಡ್‌ಗಳನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿಲ್ಲ. ಮೊಬೈಲ್ ಕಳೆದುಹೋದಲ್ಲಿ ಬ್ರೋಕರ್‌ಗೆ ಕೂಡಲೇ ತಿಳಿಸಿ ಸೌಲಭ್ಯವನ್ನು ಸೂಕ್ತವಾಗಿ ಕಡಿಸಿಕೊಳ್ಳಬೇಕು.
ವೆಚ್ಚ:
ಮೊಬೈಲ್ ಟ್ರೇಡಿಂಗ್ ಎಂಬುದು ಆನ್-ಲೈನ್ ಟ್ರೇಡಿಂಗ್‌ನ ಮುಂಚಾಚು ಆದ್ದರಿಂದ ಫೀ ಕೊಟ್ಟು ಆನ್ ಲೈನ್ ಅಕೌಂಟ್ ತೆರೆದುಕೊಂಡರೆ ಸಾಕು; ಬ್ರೋಕರ್‌ಗಳು ಈ ಸೌಲಭ್ಯಕ್ಕೆ ಏನೇನೂ ಹೆಚ್ಚುವರಿ ವೆಚ್ಚವನ್ನು ಚಾರ್ಜ್ ಮಾಡುವುದಿಲ್ಲ. ಆದರೂ  ಮೊಬೈಲ್ ಕಂಪೆನಿಗಳ ಬ್ರಾಡ್ ಬಾಂಡ್/ಇಂಟರ್‌ನೆಟ್ ಚಾರ್ಜ್ ಹೆಚ್ಚುವರಿಯಾಗಿ ಬರುತ್ತದೆ. ಇದಕ್ಕೆ ನಿಮ್ಮ ನಿಮ್ಮ ಮೊಬೈಲ್ ಕಂಪೆನಿಗಳ GPRS ಚಾರ್ಜ್‌ಗಳು ಎಷ್ಟೆಂದು ತಿಳಿದುಕೊಳ್ಳಬೇಕು.
ಟಿಪ್ಸ್:
ತಮ್ಮ ದುಡ್ಡಿಗೆ ರಿಟರ್ನ್‌ಗಿಂತ ಸೇಫ್ಟಿಯ ಬಗ್ಗೆ ಜಾಸ್ತಿ ಕಾಳಜಿ ವಹಿಸಿ ಬರೇ ಸರಕಾರಿ ಗಿಲ್ಟ್/ಬಾಂಡ್ ಫಂಡುಗಳಲ್ಲಿ ದೀರ್ಘಕಾಲಕ್ಕೆ (ಅಲ್ಪಕಾಲಕ್ಕೆ ಅಲ್ಲ) ದುಡ್ಡು ಹೂಡುವ ಸೇಫ್ಟಿ ಪ್ರಿಯರು ಮ್ಯೂಚುವಲ್ ಫಂಡ್ ಮೂಲಕ ಹೋಗಬೇಕಾಗಿಲ್ಲ. ಒಂದು ಮ್ಯೂಚುವಲ್ ಫಂಡಿನಂತೆಯೇ ನಡೆಯುವ ನ್ಯೂ ಪೆನ್ಷನ್ ಸ್ಕೀಮಿನ ಆಪ್ಷನ್ G ಯಲ್ಲಿ ದೀರ್ಘಕಾಲಕ್ಕೆ ದುಡ್ಡು ತೊಡಗಿಸಬಹುದು. ಸ್ವಲ್ಪ ರಿಸ್ಕ್‌ನೊಂದಿಗೆ ಹೆಚ್ಚಿನ ಪ್ರತಿಫಲ ಬೇಕೆನಿಸುವವರು ಆಪ್ಷನ್ C ಯಲ್ಲೂ, ನಿಫ್ಟಿ-೫೦ ಯಂತಹ ಇಂಡೆಕ್ಸ್ ಫಂಡುಗಳಲ್ಲಿ ದುಡ್ಡು ಹೂಡಲಿಚ್ಚಿಸುವವರು ಆಪ್ಷನ್  E ಯಲ್ಲೂ ತೊಡಗಿಸಿಕೊಳ್ಳಬಹುದು.  ಜಗತ್ತಿನಲ್ಲೇ ಅತ್ಯಂತ ಕಡಿಮೆ ಫಂಡ್ ನಿರ್ವಹಣಾ ಶುಲ್ಕವುಳ್ಳ (೦.೦೦೯%) ನ್ಯೂ ಪೆನ್ಷನ್ ಸ್ಕೀಂ ತತ್ಸಮ ಕೆಲಸ ಮಾಡುವ, ಸುಮಾರು ೧-೧.೫% ವೆಚ್ಚ ಹೇರುವ ಯಾವುದೇ ಮ್ಯೂಚುವಲ್ ಫಂಡುಗಳಿಗಿಂತ ಅತ್ಯಂತ ಅಗ್ಗ. ಜೊತೆಗೆ ಕರ ವಿನಾಯತಿಗಳು ಬೇರೆ. ಪ್ರಚಾರದ ಕೊರತೆಯಿಂದ ಸೊರಗುತ್ತಿರುವ NPS ಬಗ್ಗೆ ಜಾಸ್ತಿ ಕೇಳಿ ತಿಳಿದುಕೊಳ್ಳಿ.

ಅಟ್ಯಾಚ್‌ಮೆಂಟ್:
ಗುರುಗುಂಟಿರಾಯರ ಸುದ್ದಿಯೇ ಇಲ್ಲ. ನನಗೂ ಹೆಚ್ಚು ಅತ್ತ ಕಡೆ ತಲೆಹಾಕಲು ಪುರುಸೊತ್ತು ಸಿಕ್ಕಿಲ್ಲ. ಶ್ರೀನಿವಾಸ ಮೇಸ್ಟ್ರು ಕೂಡಾ ಮೊದಲಿನಂತಿಲ್ಲ. ಸ್ವಲ್ಪ ಮುನಿಸಿಕೊಂಡೇ ಇದ್ದಾರೆ. ಅವರನ್ನು ಸಮಾಧಾನಿಸುವ ಸಂಧಾನಕ್ಕೆ ಹೊರಟ ಸಂಧ್ಯಾ ಶೆಣೈಯವರ ಪ್ರಯತ್ನಗಳು ಏನಾದವೋ ಗೊತ್ತಿಲ್ಲ. ಅವರು, ಅವರ ಹಾಸ್ಯ ಭಾಷಣಗಳಲ್ಲಿ ಬಿಜ಼ಿಯಾಗಿ ಇದ್ದರೆ ಶ್ರೀನಿವಾಸರೂ ತಮ್ಮ ಓoಟಿ Non Convertible Debenture (NCD) ರಿಸರ್ಚ್‌ನ ತಲೆಬಿಸಿಯಲ್ಲಿ ತಿರುಗಾಡುತ್ತಾ ಇದ್ದಾರಂತೆ. ಇರಲಿ ಬಿಡಿ, ನಾಳೆ ಶೇರುಗಳು ಬಿದ್ದರೆ ಕಣ್ಣೀರೊರಸಲು ಬರುವ ಕೈಗಳು NCD ಗಳು ತಾನೆ? ಬೇಕಾಗುತ್ತಾವೆ! ಬೇಕಾಗುತ್ತಾವೆ!!
ಮುಂದಿನ ವಾರವಾದರೂ ಘುರ್ಗುಂಟಿರಾಯರ ಸಂಪರ್ಕ ಸಾಧ್ಯವೇ ನೋಡೋಣ.
xxxxxxxxxxxxxxxxxxxxx

1 ಟಿಪ್ಪಣಿ (+add yours?)

  1. MDS
    ನವೆಂ 16, 2010 @ 22:07:33

    ಒಳ್ಳೇ ಲೇಖನ.
    ಆದರೆ ರಿಲಯನ್ಸ್ ಮನಿ ಯವರು ಮೊಬೈಲ್ ಟ್ರೇಡಿಂಗ್ ಅವಕಾಶ ಕೊಡುತ್ತಿದ್ದಾರಾ? ಮೊನ್ನೆ ಫೋನ್ ಮಾಡಿದಾಗ ಇನ್ನೂ ಇಲ್ಲ ಎಂದು ಹೇಳಿದ ನೆನಪು.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: