ದೇಶಪಾಂಡೆಯವರ ಒಂದು ಕೋಟಿ ರುಪಾಯಿ…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-31

Remember, Stocks are bought on expectation, not on  facts. . . Gerald Loeb

ನೆನಪಿಡಿ, ಶೇರುಗಳನ್ನು ನಿರೀಕ್ಷೆಯ ಮೇರೆಗೆ ಕೊಳ್ಳಲಾಗುತ್ತದೆ, ವಾಸ್ತವದ ಮೇರೆಗೆ ಅಲ್ಲ. . . . . .  ಜೆರಾಲ್ಡ್ ಲೋಬ್

ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ಮೀನ್‌ಚಟ್ನಿ ಬಿಸಿನೆಸ್ಸಿನ ಲೆಕ್ಕಾಚಾರದಲ್ಲಿ ಮುಳುಗಿರಬೇಕಾದರೆ ಎಲ್ಲೋ ಯಾರದೋ ಮೊಬೈಲ್ ರಿಂಗ್ ಆಗುವ ಧ್ವನಿ ಕೇಳಿಸಿ ಕಿರಿಕಿರಿಯೆನಿಸಿತು. ಅರೇ ಯಾರದಪ್ಪಾ ಇದು? ಅಂತ ಸಿಂಡರೆಲ್ಲಾಳಂತೆ ಮುಖ ಸಿಂಡರಿಸ ಬೇಕಾದರೆ ಅರೆ, ನನ್ನದೇ ಫೋನ್ ಅಲ್ವಾ ಎಂಬ ಜ್ಞಾನೋದಯವೂ ಆಯಿತು.

ಪ್ರತೀ ಬಾರಿ ಹೊಸ ಮೊಬೈಲ್ ಕೊಂಡಾಗಲೂ ಹೀಗೇ ಆಗುತ್ತದೆ. ಹೊಸ ರಿಂಗ್ ಟೋನಿನ ಪರಿಚಯ ಆಗುವವರೆಗೂ ದೂರದಲ್ಲಿ ಯಾರದ್ದೋ ಫೋನ್ ಅರಚುತ್ತದೆ ಎಂಬ ಭಾವನೆಯೇ ಮೊತ್ತಮೊದಲು ಬರುತ್ತದೆ. ಆಮೇಲೆ ನಿದಾನವಾಗಿ ನಮ್ಮದೇ ಫೋನ್ ಇದು ಎಂಬ ಅರಿವು ಮೂಡುತ್ತದೆ.

ಕೋಣನಿಗೆ ಬಾರುಕೋಲಿನಿಂದ ಜೋರಾಗಿ  ಹೊಡೆದರೂ ಅದಕ್ಕೂ ಹಾಗೆಯೇ ಆಗುತ್ತದಂತೆ. ದೂರದಲ್ಲಿ ಯಾರಿಗೋ ಹೊಡೆಯುತ್ತಾ ಇದ್ದಾರೆ ಅಂತ. ಇದೆಲ್ಲಾ ದಪ್ಪ ಚರ್ಮದ ಎಡ್ವಾಂಟೇಜಸ್, ಸಾರ್! ಅದೆಲ್ಲ ಹಾಗೇ ಇರಲಿ ಬಿಡಿ, ಮುಖ್ಯವಾಗಿ, ಈಗ ನಿಮಗೆ ಆ ಫೋನ್ ಕಾಲ್ ಮಾಡಿದ  ಶ್ರೀನಿವಾಸ ದೇಶಪಾಂಡೆಯವರ ಪರಿಚಯ ಮಾಡಿಸಿಕೊಡುತ್ತೇನೆ.

ದೇಶಪಾಂಡೆಯವರು ಮಂಗಳೂರಿನ ಬಿಜೈ ನಿವಾಸಿ. ಪಂಪ್‌ವೆಲ್ ಬಳಿಯ ಕರ್ನಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಸೀನಿಯರ್ ಮ್ಯಾನೇಜರ್ – ಇಂಜಿನಿಯರ್ ಹಾಗೂ ಬ್ಯಾಂಕಿನ ಇಂಟೀರಿಯರ್ ಡೆಕೋರೇಶನ್ ತಜ್ಞ. ಒಬ್ಬ ಸಹೃದಯಿ, ಸಾಹಿತ್ಯಾಸಕ್ತ ಮತ್ತು ಅ ನೈಸ್ ಜಂಟಲ್‌ಮನ್. ನನಗೂ ಅವರಿಗೂ ಪರಿಚಯವಾದದ್ದೇ ಈ ಕಾಸು-ಕುಡಿಕೆ ಕಾಲಂನ ಮೂಲಕ. ನಾವು ಪರಸ್ಪರ ಭೇಟಿಯಾಗಿರದಿದ್ದರೂ ಫೋನಿನಲ್ಲಿ ಬಹಳಷ್ಟು ಬಾರಿ ಕಾಸು-ಕುಡಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದು ಇದೆ. ಕಳೆದ ವಾರದ ‘FII ಮಹಾತ್ಮೆ ಎಂಬ ಅಧಿಕ ಪ್ರಸಂಗವನ್ನು  ಓದಿದ ದೇಶಪಾಂಡೆಯವರು ಫೋನಾಯಿಸಿದ್ದರು.

After ಉಭಯ ಕುಶಲೋಪರಿ and a review of ‘FII ಮಹಾತ್ಮೆ, ದೇಶಪಾಂಡೆಯವರು ಮೊಳೆಯಾರ್ರೇ, ಈಗ ನಿಮ್ಮತ್ರ ೧ ಕೋಟಿ ಇದೆ ಅಂತ ಇಟ್ಟುಕೊಳ್ಳಿ. . . . ಅಂತ ಅಚಾನಕ್ಕಾಗಿ ನುಡಿದರು.

ಎಷ್ಟು, ಒಂದು ಕೋಟಿಯಾ? ನನ್ನ ಬಾಯಿ ದೊಡ್ಡದಾಗಿ ತೆರೆಯಿತು. ಹಾರ್ಟ್ ಒಮ್ಮಗೇ ಛಕ್ ಅಂತ ಫ್ರೀಜ್ ಆದ ಅನುಭವ ಆಯಿತು.
ಹೌದು; ಒಂದು ಕೋಟಿ- ಅ ಸಮ್ ಆಫ್  ರುಪೀಸ್ ವನ್ ಕ್ರೋರ್ ಒನ್ಲೀ ಅಂತ ಅಪ್ಪಟ ಬ್ಯಾಂಕ್ ಶೈಲಿಯಲ್ಲಿ ಅದನ್ನು ಇನ್ ವರ್ಡ್ಸ್ ದೃಡೀಕರಿಸಿದರು. ಬಳಿಕ, ಆ ವನ್ ಕ್ರೋರ್ ಅನ್ನು ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಇನ್ವೆಸ್ಟ್ ಮಾಡ್ತೀರಾ? ಅಂತ ಅದರ ಬೆನ್ನಿಗೇ ಒಂದು ದೂಸ್ರಾ ಎಸೆದು ಸುಮ್ಮನಾದರು.
ಅರೆ, ಈ ಸ್ಟೈಲ್ ಎಲ್ಲೋ ಕೇಳಿದಂತಿದೆಯಲ್ಲಾ ಎಂದು ತಲೆ ಕೆರೆದು ಹೊಟ್ಟು ಉದುರಿಸುತ್ತಿರಬೇಕಾದರೆ KBC ಯಲ್ಲಿ ಬಿಳಿ ಗಡ್ಡ ಕಪ್ಪು ಕೂದಲಿನ ಅಮಿತಾಬ್ ಕೂಡಾ ಆಗೊಮ್ಮೆ ಈಗೊಮ್ಮೆ ಈ ರೀತಿ ಅಗರ್ ಆಪ್ಕೋ ಏಕ್ ಕರೋಡ್ ಮಿಲ್‌ಗಯಾ ತೋ ಆಪ್ ಉಸ್ಕೋ ಲೇಕೇ ಕ್ಯಾ ಕರೇಂಗೇ? ಎಂಬ ಹೃದಯಾಘಾತಕ ಪ್ರಶ್ನೆಯನ್ನು ಹಾಟ್‌ಸೀಟ್‌ನಲ್ಲಿ ಕುಳಿತು already ಬೆವರ್ಪ ಸ್ಪರ್ಧಿಯತ್ತ ಎಸೆದು ತಮಾಷೆ ನೋಡುವುದು ನೆನಪಾಯ್ತು.
ಈ ಬ್ಯಾಂಕಿನವರ ಸಹವಾಸ ಕಷ್ಟ ಮಾರಾಯ್ರೇ. ಇವರಿಂದ ಗುರುಗುಂಟಿರಾಯರೇ ವಾಸಿ. ಇವರ ಲೆಕ್ಕ ಶುರುವಾಗುವುದೇ ಕೋಟಿಯಿಂದ. ನನಗಾದರೋ ಒಂದು ಕೋಟಿ ಬರೆಯುವಾಗ ಎಷ್ಟು ಬಾರಿ ಶೂನ್ಯ ಶೂನ್ಯ. . . .  ಶೂನ್ಯ ಶೂನ್ಯ. . . . ಶೂನ್ಯ ಶೂನ್ಯ. . . .  ಬರೆಯಬೇಕು ಅಂತಲೇ ಗೊತ್ತಾಗುವುದಿಲ್ಲ. ಹಲವೊಮ್ಮೆ ಅಷ್ಟೂ ಗೊತ್ತಾಗದೆ ಬ್ರೇಕ್ ಫೈಲ್ ಗಾಡಿಯಂತೆ ನೂರಾರು ಕೋಟಿ ಬರೆದದ್ದೂ ಇದೆ! ಅಂತದ್ದರಲ್ಲಿ, ಇಲ್ಲದ ಒಂದು ಕೋಟಿ ರೂಪಾಯಿಯನ್ನು ಇದೆ ಎಂದು ಅಷ್ಟು ಸುಲಭವಾಗಿ ಇಟ್ಟುಕೊಳ್ಳುವುದು ಹೇಗೆ ಸ್ವಾಮೀ? ನೀವೇ ಹೇಳಿ.
ತುಸು ತಡೆದು, ಸುಧಾರಿಸಿಕೊಂಡು, ದೇಶ್‌ಪಾಂಡೆಯವರೆ, ಒಂದು ನೂರು ರುಪಾಯಿ ಇಟ್ಟುಕೊಂಡ್ರೆ ಸಾಕಾ. . . .  ಅಂತ ಒಂದು ಸ್ಮಾಲ್ ಕಾಂಪ್ರೊಮೈಸ್ ಪ್ರಶ್ನೆ ಕೇಳಿದೆ.
ಸಧ್ಯ! ದೇಶ್‌ಪಾಂಡೆಯವರು ಬೇರೆ ಯಾವುದೇ ಹೆಚ್ಚುವರಿ ಚೌಕಾಶಿ ಮಾಡದೆ ನೂರು ರುಪಾಯಿಗೆ ಒಪ್ಪಿಕೊಂಡರು. (ನಾನು ಮೊದ್ಲೇ ಹೇಳ್ಲಿಲ್ವಾ ಅವ್ರು ಅ ನೈಸ್ ಜೆಂಟಲ್ ಮ್ಯಾನ್ ಅಂತ).
ಒಂದು ಕೋಟಿ ರುಪಾಯಿಯ ಭಾರೀ ಭರ್ಜರಿ ಶಾಕ್‌ನಿಂದ ನಿದಾನವಾಗಿ ಹೊರಬಂದ ನನ್ನ ಮೆದುಳು ಈಗ ಯೋಚಿಸಲಾರಂಭಿಸಿತು. .
****************
೧. ನಿಮ್ಮಲ್ಲಿ ನೂರು ರುಪಾಯಿ ಇದ್ದರೆ ಮೊತ್ತ ಮೊದಲು ಅದನ್ನು ಖರ್ಚು ಮಾಡಿ.!!
ಕಾಕುಗೆ ೫೦ ಆಯಿತಷ್ಟೆ. ಮರುಳು ಅರಳುವ ಅರವತ್ತು ಇನ್ನೂ ಆಗಿಲ್ಲ. ಆದಾಗ್ಯೂ ಈ ಮಾತನ್ನು ಹೇಳುತ್ತಿದ್ದೇನೆ. ಕಾರಣ ಇನ್ಫ್ಲೇಷನ್- ಬೆಲೆಯೇರಿಕೆ! ಈಗಿನ ಓಡುವ, ದೌಡಾಯಿಸುವ, ಹಾರುವ, ಡಿಸ್ಕೋ ಹೊಡೆಯುವ ಬೆಲೆಯೇರಿಕೆಯ ಕಾಲದಲ್ಲಿ ಅಗತ್ಯವಿರುವ ಕೆಲಸಕ್ಕಾಗಿ ಇಂದು ಖರ್ಚು ಮಾಡದೆ ನಾಳೆ ಮಾಡೋಣ ಎಂದು ಮುಂದೂಡುತ್ತಾ ಹೋದರೆ ನಾಳೆ ಅದಕ್ಕೆ ತಗಲುವ ವೆಚ್ಚ ಹೂಡಿಕೆಗಳಿಂದ ಬರುವ ಪ್ರತಿಫಲಕ್ಕಿಂತಲೂ ಜಾಸ್ತಿಯಾದೀತು.

ಇಂದು ನೂರು ರುಪಾಯಿಯಲ್ಲಿ ಆಗುವ ಕೆಲಸಕ್ಕೆ ನಾಳೆ ನೂರಾಹತ್ತು ತಗಲೀತು. ಹೆಚ್ಚಿನ ನಿಗದಿತ ಆದಾಯದ ಭದ್ರ ಠೇವಣಿಗಳಲ್ಲಿ ಪ್ರತಿಫಲ ಕಡಿಮೆ. ಬೆಲೆಯೇರಿಕೆಯನ್ನು ಮೀರುವ ಆದಾಯ ಇಂದು ಭದ್ರ ಠೇವಣಿಗಳಲ್ಲಿ ಬರುತ್ತಿಲ್ಲ. ಭಾರತದ ಜನಸಾಮಾನ್ಯರಿಗೆ ಅತ್ಯಂತ ಪ್ರಿಯವಾದ ಎಫ್.ಡಿ ಗಳಲ್ಲಿ ಇಂದು ಆ ಬ್ಯಾಂಕಿನ ಉದ್ಯೋಗಿಗಳೇ ದುಡ್ಡು ಹೂಡುತ್ತಿಲ್ಲ. ಯಾಕೆಂದರೆ ಇನ್ಫ್ಲೇಶನ್ ಕಳೆದು ಬರುವ ಬಡ್ಡಿಯ ದರ ಮೈನಸ್. ಇನ್ನು ಎಸ್.ಬಿ ಯಲ್ಲಿ ದುಡ್ಡಿಟ್ಟುಕೊಂಡು ಖರ್ಚನ್ನು ಪೋಸ್ಟ್ ಪೋನ್ ಮಾಡುವವರ ಕತೆ ಕೈ-Loss-a ವೇ ಸರಿ.

(ಶೇರು-ಗೀರು ಅಂತ ಹೆಚ್ಚಿನ ಆದಾಯದ ಹೂಡಿಕೆಗೆ ಹೋದರೆ ಅದಕ್ಕೆ ಅದರದ್ದೇ ಆದ ರಿಸ್ಕ್ ಇದೆ) ಹಾಗಿರುವ ಸಂದರ್ಭಗಳಲ್ಲಿ ಖರ್ಚು ಮಾಡುವುದು ಕೂಡಾ ಉಳಿತಾಯಕ್ಕಿಂತಲೂ ಹೆಚ್ಚಿನ ಉಳಿತಾಯವೇ!! ಒಂದು ರೀತಿಯಲ್ಲಿ ವಿರೋಧಾಭಾಸವಾಗಿ ಕಂಡು ಬಂದರೂ ಇದು ಸತ್ಯ!
ಆದ್ದರಿಂದ ಜಾಸ್ತಿ ಹಣದುಬ್ಬರದ ಯುಗದಲ್ಲಿ ಅಣ್ಣಾವ್ರು ಹೇಳಿದಂತೆ ನೀನು ನಾಳೆ ಮಾಡುವ ಕೆಸ ಇಂದೇ ಮಾಡು; ಆ ನಾಳೆ ಎಂಬ ಮಾತ ಮುಂದೇ ದೂಡು. ಹಾಗಂತ ನಾಳೆ ಮಾಡುವ ಊಟ ಇಂದೇ ಮಾಡಲಾಗುವುದಿಲ್ಲವಾದರೂ ನಾಳೆ ಕಟ್ಟುವ ಮನೆಯನ್ನು ಇಂದೇ ಕಟ್ಟ ಬಹುದಲ್ಲವೆ?

೨. ಹಣದುಬ್ಬರವನ್ನು ಮೀರಿ ನಿಲ್ಲುವ ಹೂಡಿಕೆಗೆ ರಿಸ್ಕ್-ರಿಟರ್ನ್ ನೋಡಿಕೊಂಡು ಆದ್ಯತೆ ಕೊಡಿ.
ಭಾರತ ಪ್ರಗತಿಯ ಪಥದಲ್ಲಿದೆ, ಸರಿ. ಆದರೆ, ನಮ್ಮ NH 17 ರಂತೆ ಆ ಪಥದಲ್ಲಿ ಕೂಡಾ ಸಾಕಷ್ಟು ಹೊಂಡಗಳಿವೆ. ಪ್ರಗತಿಯೊಂದಿಗೆ ಬೆಲೆಯರಿಕೆ ಬರಲೇ ಬೇಕು ಎಂದೇನೂ ಇಲ್ಲ ಎಂದು ನಮ್ಮ ಪ್ರಧಾನಿಯವರು ಹೇಳಿದ್ದನ್ನು ನಾನು ಟಿವಿಯಲ್ಲಿ ಕಣ್ಣಾರೆ ಕಂಡು ಕಿವಿಯಾರೆ ಕೇಳಿದ್ದೇನೆ. ಆದರೆ ಅದನ್ನು ಅವರು ಮಾಡಿತೋರಿಸಿದ್ದನ್ನು ಮಾತ್ರ ಈವರೆಗೆ ನಾನು ಕಂಡಿಲ್ಲ.

ಇಲ್ಲಿ ಬರುವ ಸಮಸ್ಯೆ ಏನೆಂದರೆ ಪ್ರಗತಿಯಲ್ಲಿ ಭಾಗವಹಿಸಲಾರದ ನಿರುದ್ಯೋಗಿ, ನಿವೃತ್ತ, ಇತರ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಬೆಲೆಯೇರಿಕೆ ಹಿಂಡದೆ ಬಿಡುವುದಿಲ್ಲ. ಬೇರೆ ಹೊಸ ಆದಾಯವಿಲ್ಲದ ಅಂತಹವರಿಗೆ ಇರುವ ಹೂಡಿಕೆಯನ್ನೇ ಆ ನಿಟ್ಟಿನಲ್ಲಿ ತೊಡಗಿಸಿಕೊಂಡು ಹೋಗುವುದೊಂದೇ ದಾರಿ.
ಶೇರು, ಭೂಮಿ, ಚಿನ್ನ ಇತ್ಯಾದಿ ಹೂಡಿಕೆಗಳು ಸುಮಾರಾಗಿ ಬೆಲೆಯೇರಿಕೆಯನ್ನು ಮೀರಿ ಪ್ರತಿಫಲ ಕೊಡಬಲ್ಲುದು. ಡೆಟ್ ಅಥವ ಸಾಲಪತ್ರಗಳು, ಪಿ.ಎಫ್, ಪೋಸ್ಟಲ್ ಮತ್ತು ಬ್ಯಾಂಕು ಠೇವಣಿಗಳು ಬೆಲೆಯೇರಿಕೆಯಷ್ಟೂ ರಿಟರ್ನ್ ಕೊಡಲಾರದೆ ಒದ್ದಾಡುತ್ತಿವೆ. ಆದರೆ ಎಲ್ಲಾ ದುಡ್ಡನ್ನು ಶೇರುಗಳಲ್ಲಿ, ಭೂಮಿ, ಚಿನ್ನದಲ್ಲಿ ಹಾಕಲಾಗುವುದಿಲ್ಲ. ಅವಕ್ಕೆ ಅವುಗಳದ್ದೇ ಆದ ರಿಸ್ಕ್ ಕೂಡಾ ಇದೆ.

ರಿಸ್ಕ್ ನೋಡಿಕೊಂಡು ಇರುವ ದುಡ್ಡನ್ನು ಇವುಗಳಲ್ಲಿ ವಿಂಗಡಿಸಿಹಾಕಬೇಕು. ಶೇರು/ಮ್ಯೂಚುವಲ್ ಫಂಡುಗಳಲ್ಲಿ ೧೦-೨೦%, ಭೂಮಿಯಲ್ಲಿ ೧೦-೨೦% ಚಿನ್ನದಲ್ಲಿ ಇನ್ನೊಂದು ೧೦%, ಪಿ.ಎಫ್, ಇನ್ಶ್ಯೂರನ್ಸ್, ಪೆನ್ಷನ್, ಎಫ್.ಡಿಗಳಲ್ಲಿ ಉಳಿದ ಉಳಿತಾಯದ ಹಣವನ್ನು ಹೂಡಬಹುದು. ಇಲ್ಲಿ ಕೊಟ್ಟ ಶೇಕಡಾಗಳು ಕೇವಲ ಒಂದು ಅಭಿಪ್ರಾಯ ಮಾತ್ರವಷ್ಟೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಸರಿಯಾಗಿ ರಿಸ್ಕ್-ರಿಟರ್ನ್ ನೋಡಿಕೊಂಡು ಇದನ್ನು ನಿಶ್ಚಯಿಸಬಹುದು.

೩. ಕಪ್ಪು ಹಣದ ಮಹಾತ್ಮೆಯನ್ನು ಅರಿತುಕೊಳ್ಳಿ.
ರಿಸೆಶನ್ ಗರವನ್ನು ಮೀರಿ ಭಾರತ ಬದುಕಿ ಉಳಿದದ್ದನ್ನು ಯಾವತ್ತಿಗೂ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಖಃI ನಿಯಂತ್ರಣಗಳಿಂದಾಗಿ ಎಂದು ಹೇಳಲಾಗುತ್ತದೆ. ಆದರೆ ಅದರಷ್ಟೇ ಸತ್ಯವಾದ ಇನ್ನೊಂದು ಕಾರಣವೇನೆಂದರೆ ನಮ್ಮ ದೇಶದ ಆರ್ಥಿಕತೆಯಲ್ಲಿ ಕಪ್ಪು ಹಣಕ್ಕಿರುವ ಮಹಾನ್ ಪಾತ್ರ. ಕಪ್ಪು ಹಣದ ಇಕಾನಮಿ ಬಿಳಿಹಣದ ಇಕಾನಮಿಗಿಂತಲೂ ದೃಡ ಮತ್ತು ಸಶಕ್ತವಾಗಿದೆ ಎಂಬ ಮಾತು ಖಾಸಗಿ ಬಿಸಿನೆಸ್ ಮಾತುಕತೆಗಳಲ್ಲಿ ಬಹಳಷ್ಟು ಕೇಳಿ ಬರುತ್ತದೆ.

ನಮ್ಮಲ್ಲಿ ಕಪ್ಪು ಹಣ ಎಲ್ಲಿಂದ ಬರುತ್ತದೆ, ಯಾರ ಯಾರ ಕೈಯಲ್ಲಿ ಇದು ಇರುತ್ತದೆ ಮತ್ತು ಎಲ್ಲೆಲ್ಲಿಗೆ ಅದು ಹೋಗುತ್ತದೆ ಎಂಬುದರ ಬಗ್ಗೆ ಸ್ವಲ್ಪ ಸ್ಟಡಿ ಮಾಡುವುದು ಒಳ್ಳೆಯದು. ಇಂದು ಶೇರು, ಭೂಮಿ ಮತ್ತು ಚಿನ್ನ – ಈ ವರ್ಗಗಳಲ್ಲಿ ಬಿಳಿಯಲ್ಲದೆ ಸಾಕಷ್ಟು ಕಪ್ಪು ಹಣ ಕೂಡಾ ಹರಿದಾಡುತ್ತಿದೆ. ಆದ್ದರಿಂದ ಈ ಬ್ಲಾಕ್ & ವೈಟ್ ಯುಗದಲ್ಲಿ ಅಲ್ಪಸ್ವಲ್ಪ ಹೂಡಿಕೆ ಅದರಲ್ಲಿ ಎಲ್ಲರದ್ದೂ ಇರಲೇ ಬೇಕಾಗುತ್ತದೆ.

೪. ಇನ್ಶ್ಯೂರನ್ಸ್ ಮಾಡಿಸಿಕೊಳ್ಳಿ.
ಒಂದು ಹೂಡಿಕೆಯ ದೃಷ್ಟಿಯಿಂದ ವಿಮೆಯಲ್ಲಿ ಲಾಭ ಕಡಿಮೆಯಾದರೂ ಹೂಡಿಕೆಯಲ್ಲಿ ಲಾಭ ಕೊಡಿಸುವುದು ವಿಮೆಯ ಮುಖ್ಯ ಉದ್ಧೇಶವೂ ಅಲ್ಲ. ಕುಟುಂಬದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ನೋಡುವಾಗ ಸಾಕಷ್ಟು ಆಸ್ತಿ-ಪಾಸ್ತಿ ಬಿಸಿನೆಸ್ ಇಲ್ಲದೆ ಸಂಬಳವನ್ನೇ ನೆಚ್ಚಿ ಬದುಕುವವರಿಗೆ ಇದರ ಅಗತ್ಯ ಜಾಸ್ತಿ ಇರುತ್ತದೆ.

೫. ಇರುವ ಹೂಡಿಕೆಯ ಲಾಲನೆ-ಪೋಷಣೆ, ಬದಲಾವಣೆ ಅಗತ್ಯ.
ನಮ್ಮ ಹೂಡಿಕೆಯನ್ನು ಆಗಾಗ್ಗೆ ಪರಿಶೀಲಿಸಿ ದೇಶದ ಆರ್ಥಿಕತೆ ಮತ್ತು ಬಡ್ಡಿದರಗಳ ಚಲನೆಯನ್ನು ಹೊಂದಿಕೊಂಡು ಬದಲಿಸುತ್ತಾ ಹೋಗಬೇಕಾಗುತ್ತದೆ. ದೀರ್ಘಾವದಿಗೆಂದು ಕೊಂಡದ್ದಾದರೂ ಶೇರುಗಳನ್ನೂ, ಮ್ಯೂಚುವಲ್ ಫಂಡುಗಳನ್ನೂ ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಬೇಕು. ಈಗ ಕತ್ತೆಯಾದ ಮಾಜಿ ಕುದುರೆಗಳಿದ್ದರೆ ಅವನ್ನು ಒದ್ದೋಡಿಸಬೇಕಾಗುತ್ತದೆ. ಇಕ್ವಿಟಿ, ಡೆಟ್ ಮತ್ತು ಸಾಲ – ಈ ತರಗತಿಗಳ ಒಳಗೆ ಹಾಗು ಇವುಗಳ ನಡುವೆ ಸಾಕಷ್ಟು ಮೆದುಳಿನ ಕಸರತ್ತು ಮಾಡುತ್ತಾ ಇರಬೇಕಾಗುತ್ತದೆ.  ಎಲ್ಲಿ ಕಡಿಮೆ ಪ್ರತಿಫಲ ಬರುತ್ತದೆ ಎಂದು ನೋಡಿಕೊಂಡು ಜಾಸ್ತಿ ಪ್ರತಿಫಲ ಸಿಗುವೆಡೆಗೆ ಹೋಗಬೇಕಾಗುತ್ತದೆ. ಕಡಿಮೆ ಬಡ್ಡಿದರದ ಹೂಡಿಕೆ ಇಟ್ಟುಕೊಂಡು ಜಾಸ್ತಿ ಬಡ್ಡಿಯ ಸಾಲ ಕೊಳ್ಳಬಾರದು. ಸಾಲಗಳಲ್ಲೂ ಬೇರೆ ಬೇರೆ ತರಗತಿಗಳಾನುಸಾರ ಬಡ್ಡಿದರಗಳಲ್ಲಿ ವ್ಯತ್ಯಾಸವಿದೆ. ಇರುವ ಹೂಡಿಕೆಯಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುವುದಿದ್ದರೆ ಹೂಡಿಕೆಯನ್ನು ಇಟ್ಟುಕೊಂಡೇ ಸಾಲವನ್ನು ಕೊಳ್ಳುವುದು ಒಳಿತು.

೬. ಇನ್‌ಕಂ ಟಾಕ್ಸನ್ನು ಮರೆಯಬೇಡಿ
ಹೂಡಿಕೆಯಾಗಲಿ, ಸಾಲವಾಗಲಿ ಪ್ರತಿಯೊಂದು ವಿಷಯದಲ್ಲೂ ಆದಾಯ ತೆರಿಗೆಯ ಹಸ್ತ ಇದ್ದೇ ಇದೆ. ತೆರಿಗೆಯಾರ್ಹ ಮಂದಿ ಎಲ್ಲಾ ಚಟುವಟಿಕೆಗಳಲ್ಲೂ ಆದಾಯ  ತೆರಿಗೆಯ ಪ್ರಭಾವವನ್ನು ಪರಿಗಣಿಸಿಯೇ ಮುಂದುವರಿಯಬೇಕು. ಬರೇ ಕೂಪನ್ ರೇಟ್ ನೋಡಿದರೆ ಸಾಲದು. ಜಾಹೀರಾತುಗಳಲ್ಲಿ ತೆರಿಗೆಯ ಬೆನಿಫಿಟ್ ಬಗ್ಗೆ ಮಾತ್ರ ಉಲ್ಲೇಖ ಬರುತ್ತದೆಯೇ ಹೊರತು ತೆರಿಗೆ ಕಟ್ಟುವ ಬಗ್ಗೆ ಜಾಣ ಮೌನ ಮಾತ್ರ ಕಂಡು ಬರುತ್ತದೆ.
*****************************
ಟಿಪ್ಸ್:
ಕಳೆದವಾರ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದಂತೆ ತನ್ನ ಬಡ್ಡಿದರಗಳನ್ನು ೦.೨೫% ದಷ್ಟರ ಮಟ್ಟಿಗೆ ಏರಿಸಿತು. ನಿದಾನವಾಗಿಯಾದರೂ ಈ ದರಗಳು ಠೇವಣಿ ಮತ್ತು ಸಾಲದ ದರಗಳಲ್ಲಿ ಕಾಣಿಸೀತು. ಅಲ್ಲದೆ ಜನವರಿಯಲ್ಲಿ ಇನ್ನೊಂದು ೦.೨೫% ದರಯೇರಿಕೆಯ ಸಾಧ್ಯತೆ ಇದೆ. ಹಾಗಾಗಿ ೧೦ ವರ್ಷಗಳ ದೀರ್ಘಾವಧಿಯ ಕರವಿನಾಯತಿ ಸೌಲಭ್ಯವುಳ್ಳ (‘ ೨೦,೦೦೦ ದವರೆಗೆ u/s CCF of income Tax Act) ಇನ್ಫ್ರಾಸ್ಟ್ರಕ್ಚರ್ ಬಾಂಡ್‌ಗಳಲ್ಲಿ ಹಣ ಹೂಡಲು ಇಚ್ಛುಕರಾದವರುIDFC, L&Tಬಸ್ ಮಿಸ್ಸಾದವರು ಇನ್ನು ಸ್ವಲ್ಪ ಕಾಲ ಕಾಯಿರಿ. LICಮತ್ತಿತರ ಸಂಸ್ಥೆಗಳ ಬಾಂಡುಗಳು ಬರಲು ಬಾಕಿ ಇವೆ. ಸ್ವಲ್ಪ ಹೆಚ್ಚಿನ ದರದ ಲಾಭವೂ ದೊರಕೀತು.

ಅಟ್ಯಾಚ್‌ಮೆಂಟ್:
ಗುರುಗುಂಟಿರಾಯರ ಪಂಡ್‌ದ್ ಸುಖ ಇಜ್ಜಿ ಚಿತ್ರಣದ ಫಜೀತಿಗಳನ್ನು ಓದಿದ ಶ್ರೀನಿವಾಸ ಉಪಾಧ್ಯಾಯರಿಗೆ ಸ್ವಲ್ಪ ಬೇಸರವಾಗಿದೆಯಂತೆ. ಯಾವತ್ತೂ ಅವರ ವಕಾಲತ್ತು ಮಾಡುವ ರಾಯರ ದೂರದ ಸಂಬಂದಿಯಾದ ಉಪಾಧ್ಯಾಯರು ಮೊನ್ನೆ ಕು.ಗೋ ಮನೆಯಲ್ಲಿ ನನಗೆ ಸಿಕ್ಕಿದರೂ ಸರಿಯಾಗಿ ಮತನಾಡಲಿಲ್ಲ. ರಾಯರ ಮನೆಯ ವೆರೈಟಿ ಎಂಟರ್‌ಟೈನ್‌ಮೆಂಟ್ ದೃಶ್ಯವನ್ನು ಪಬ್ಲಿಕ್ ಆಗಿ ಹರಾಜು ಹಾಕಿದ್ದಕ್ಕೆ ಅವರಿಗೆ ಅಸಮಧಾನ ಇದೆಯೆನ್ನುವುದು ಮುಖದಲ್ಲಿ ಸ್ಪಷ್ಟವಾಗಿ ತೋರುತ್ತಿತ್ತು.
ಉಡುಪಿಯ ಸಂಧ್ಯಾ ಶೆಣೈಯವರಂತೂ ಭಾರ್ರೀ ಚಂದ ಆಗಿದೆ ಮೊಳೆಯಾರ್ರೇ. ಹಾಗೇ ಬರಿತಾ ಇರಿ. ನಾಗಾನಾಥ್‌ರ ಚಿತ್ರ ಅಂತೂ ಭಾರೀ ಚಂದ ಬಂದಿದೆ, ಆಯ್ತಾ. ಆ ಹುಡುಗ ಹಾಕಿದ ಬಾಲ್ ಡೊಯ್ ಅಂತ ಡೈರೆಕ್ಟ್ ಅವರ ಹಣೇಗೇ ಬಿದ್ದಿದೆ. ಲಾಯಕ್ಕಾಗಿದೆ ಮಾರಾಯ್ರೇ ಅಂತ ಎಸ್ಸೆಮ್ಮೆಸ್ ಮಾಡಿದರು.
ಈಗ ಈ ಶ್ರೀನಿವಾಸರನ್ನು ಹ್ಯಾಗಪ್ಪಾ ಸಮಾಧಾನ ಮಾಡುವುದು??
+++++++++++++++++++++++

3 ಟಿಪ್ಪಣಿಗಳು (+add yours?)

  1. sughosh s. nigale
    ನವೆಂ 11, 2010 @ 11:53:25

    ಜಯದೇವ ಸರ್, ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಲೇಖನ. ಹಣಕಾಸಿನ ವಿಷಯವನ್ನು ಇಷ್ಟು ಸುಲಲಿಲಿಲಿಲಿಲಿತವಾಗಿ ಬರೆದಿದ್ದಕ್ಕೆ ಥ್ಯಾಂಕ್ಸ್…. ಹೀಗೇ ಲೇಖನಗಳು ಬರುತ್ತಿರಲಿ. ನನ್ನ ತಲೆಯೊಳಗಿನ ಟ್ಯೂಬ್ ಹತ್ತುತ್ತಿರಲಿ… 🙂

    ಉತ್ತರ

  2. ಸಂದೀಪ್ ಕಾಮತ್
    ನವೆಂ 10, 2010 @ 22:00:50

    Sooper!!!

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: