ಮೈ ಬಣ್ಣಗಳು ಬದಲಾಗುತ್ತಿರುತ್ತವೆ… ನನ್ನಂಥಹ ಕಾಂಟ್ರಾಕ್ಟರುಗಳ ಮೈ ಬಣ್ಣ ನೋಡಿ ಕೆಲಸದ ಬಗೆಗೆ ಹೇಳ
ಬಹುದು..
ಹೇಗೆ ಅಂತೀರಾ? ಬಣ್ಣ ಬಿಳಿದಾಗಿ, ಫ್ರೆಶ್ ಆಗಿದ್ದರೆ..
ಇನ್ನೂ ಹೊಸ ಕೆಲಸ ಶುರುವಾಗಿಲ್ಲ ಅಂತ ಅರ್ಥ…
ನಾವು ಕಟ್ಟುತ್ತಿರುವ ಮನೆಯ ಗೃಹಪ್ರವೇಶ ಹತ್ತಿರ ಬಂದಿದೆ ಅಂತಲೂ ಆಗಬಹುದು.. ಸ್ವಲ್ಪ ಕಪ್ಪಾಗಿ .. ಸುಟ್ಟ ಹಾಗೆ ಕಾಣಿಸಿದರೆ ಹೊಸ ಕೆಲಸ ಶುರುವಾಗಿದೆ ಅಂತ ..
ನಮ್ಮ ಮೈ ಬಣ್ಣಗಳಿಗೂ…..
ನಮಗೆ ಹೊಸ ಕೆಲಸ..
ಹೊಸ ಪ್ರಾಜೆಕ್ಟ್ ಸಿಕ್ಕ ಸಂತೋಷಕ್ಕೂ ಸಂಬಂಧವೇ ಇರುವದಿಲ್ಲ…!
ನಮಗೆ ಹೊಸ ಕೆಲಸ ಶುರುವಾದ ಸಂಭ್ರಮದಲ್ಲಿ “ಕಪ್ಪಾಗಿ” ಬಿಡ್ತಿವಿ…
ನಮ್ಮ ಹೊಸ ಕೆಲಸಗಳು ಶುರುವಾಗುವದು ನೆರಳಿನ ಅಡಿಯಲ್ಲಿ ಅಲ್ಲವಲ್ಲ…
ಸುಡು ಬಿಸಿಲಿನಲ್ಲಿ….
ಹಿಂದಿನ ದಿನವಿಡಿ ಹೊಸ ಕೆಲಸದ ಮಾರ್ಕಿಂಗ್ ಮಾಡಿ ಸಿಕ್ಕಾಪಟ್ಟೆ ದಣಿದಿದ್ದೆ..
ಕೆಟ್ಟ ರಣ ಬಿಸಿಲಿನ ಝಳ, ಸೆಖೆಯಿಂದ ಸುಟ್ಟು ಕರಕಲಾಗಿದ್ದೆ..
ಬೆಳಿಗ್ಗೆ ಆರು ಗಂಟೆಯಾಗಿದ್ದರೂ ಇನ್ನೂ ಎದ್ದಿರಲಿಲ್ಲ..
ಮೊಬೈಲ್ ರಿಂಗಾಯಿತು..
ಯಾರಪ್ಪ ಇದು ಅಂತ ಕಣ್ಣೊರಿಸಿಕೊಳ್ಳುತ್ತ ನೋಡಿದೆ…
ಹೊಸ ಮನೆ ಮಾಲಿಕರು !!
ಲಗುಬಗೆಯಿಂದ ಕಾಲ್ ತೆಗೆದು ಕೊಂಡೆ..
“ಸರ್.. ನಮಸ್ಕಾರ..”
“ನಿಮ್ಮ ನಮಸ್ಕಾರಕ್ಕಿಷ್ಟು ಬೆಂಕಿ ಹಾಕ… !
ಏನ್ರಿ.. ನೀವು..?
ಏನು ತಿಂತೀರಾ?
ಅನ್ನ ತಿಂತಿರೋ..?
ಹೊಲಸು ತಿಂತಿರೋ?…”
ನಾನು ಗಡಬಡೆಯಿಂದ ಕಂಗಾಲಾಗಿ ಹೋದೆ..
“ಏನ್ ಸಾರ್ ಏನಾಯ್ತು..!!..? “
ಕೇವಲ ಮಾರ್ಕಿಂಗ್ ಮಾಡಿ…
ಮಣ್ಣು ಕೆಲಸದವರಿಗೆ ಕೆಲಸ ಮಾಡಲು ಹೇಳಿ ಬಂದಿದ್ದೆ…
ಫೌಂಡೇಷನ್ ಅಗೆಯುತ್ತಿದ್ದರು…
ಇದರಲ್ಲಿ ಏನು ತಪ್ಪಾಗಲಿಕ್ಕೆ ಸಾಧ್ಯ?
” ಏನಾ…ಯ್ತಾ…? ?
ನೀವು ಸೈಟಿಗೆ ಬರ್ರಿ…
ಇದೇ ಥರಹ ಮನೆ ಕಟ್ಟಿದ್ರೆ ದೇವ್ರೇ.. ಗತಿ…!
ಯಾರ್ರಿ ನಿಮಗೆ ಕೆಲಸ ಹೇಳಿ ಕೊಟ್ಟಿದ್ದು…?
ನೀವು…. ಏನು ತಿಂತ್ತೀರ್ರಿ..?.. ಮಾರಾಯ್ರೇ..? “
ನನಗೆ ಏನು ಹೇಳಬೇಕೆಂದು ತಿಳಿಯದೆ ಬಾಯಿ ಒಣಗಿತು…
ಮಾತನಾಡಲು ತಡವರಿಸಿದೆ..
“ಸರ್.. ನಾನು ಸೈಟಿಗೆ ಬರ್ತಾ ಇದಿನಿ .. ಬಂದು ನೋಡ್ತೀನಿ..”
“ಆಯ್ತು.. ಜಲ್ದಿ ಬನ್ರೀ…
ಏನು ಕಾಂಟ್ರಾಕ್ಟರ್ರೋ.. ಏನು ತಿಂತ್ತಾರ್ರೋ…?”
ಗೊಣಗುತ್ತ ಫೋನ್ ಇಟ್ಟರು…
ನನಗೆ ಕೈಕಾಲು ಆಡದಂತಾಯಿತು…
ಏನು ತಪ್ಪಾಗಿರ ಬಹುದು…?
ಲಗುಬಗೆಯಿಂದ ಸ್ನಾನ ಮಾಡಿ..
ತಿಂಡಿ ತಿನ್ನದೆ.. ಸೈಟಿಗೆ ಓಡಿದೆ…
ಅವರು ನನಗಾಗಿಯೇ ಕಾಯುತ್ತಾ ಇದ್ದರು..
ನನ್ನನ್ನು ಕಂಡವರೇ.. ದೊಡ್ಡ ಧ್ವನಿಯಿಂದ ಕೂಗಾಡಲು ಶುರು ಮಾಡಿದರು…
“ಏನ್ರೀ.. ನೀವು…?
ಇಂಥಾ ಕೆಲಸ ಮಾಡ್ತಿರೇನ್ರಿ…?
ನೀವು ಕಟ್ಟೋ ಬಿಲ್ಡಿಂಗಿಗೆ ಕ್ವಾಲಿಟಿ ಬೇಡ್ವಾ?”
ನನಗೆ ಅವರ ಧ್ವನಿಕೇಳಿ ಒಂಥರಾ ಆಯಿತು..
ನಾನು ಯಾರ ಬಳಿಯೂ ಕೂಗಾಡುವವನಲ್ಲ…
ನನ್ನ ಕೆಲಸಗಾರರ ಬಳಿಯೂ ಸಹ…
ಅವರ ಕೆಲಸ ಇಷ್ಟವಾಗದಿದ್ದರೆ..
ಅವರು ತಪ್ಪು ಮಾಡಿದ್ದರೆ… ಅವರ ಲೆಕ್ಕಾಚಾರ ಮಾಡಿ ಕಳಿಸಿ ಬಿಡುತ್ತೇನೆ…
“ಏನಾಗಿದೆ.. ಸರ್… ಏನಾಯ್ತು..?”
ಅವರು ನನ್ನನ್ನು ಕರೆದು ಮಾರ್ಕಿಂಗ್ ಪಿಲ್ಲರ್ ತೋರಿಸಿದರು…
ಅದನ್ನು ಮಣ್ಣಿನಿಂದ ಕಟ್ಟಿದ್ದೇವು…
ಅದರ ಟಾಪ್ ನಲ್ಲಿ ಸಿಮೆಂಟು ಹಾಕಿ ಮಾರ್ಕಿಂಗ್ ಮಾಡಿದ್ದೇವು…
“ಸರ್.. ಇದು ಮಾರ್ಕಿಂಗ್ ಪಿಲ್ಲರ್… ಇದರಲ್ಲಿ ಏನಾಗಿದೆ..?”
“ಹೆಗಡೆಯವರೆ..
ಏನಾಯ್ತು ಅಂತ ಕೇಳ್ತೀರಲ್ರಿ…!
ಮಣ್ಣಲ್ಲಿ ಕಟ್ಟಿದ್ದಲ್ದೆ.. ಅದರ ಮೇಲೆ ಸಿಮೆಂಟು ಒರೆಸಿ ಕಣ್ಣು ಕಡ್ತೀರಲ್ರಿ…
ಯಾಕ್ರೀ.. ಇಂಥಹ ಕೆಲಸ…?
ನೀವು ಏನು ತಿಂತ್ತೀರ್ರಿ…?”
“ಸರ್..
ಇದು ತಾತ್ಕಾಲಿಕವಾಗಿ ಬೇಕಾಗುತ್ತದೆ…
ಅದಕ್ಕಾಗಿ ಮಣ್ಣಲ್ಲೇ ಕಡ್ತೀವಿ…”
“ನೀವು ಬಿಲ್ಡಿಂಗೂ.. ಹೀಗೆ ಕಡ್ತೀರೇನ್ರಿ…?
ನಮಗೆ ಮೋಸ ಆಗೋಯ್ತು…
ಎಂಥಾ ಜನ ನೀವು…?
ತಪ್ಪು ಮಾಡೋದಲ್ದೆ… ಸಮರ್ಥನೆ ಮಾಡಿಕೊಳ್ತೀರಲ್ರಿ…
ಲಜ್ಜೆಗೆಟ್ಟ ರಾಜಕೀಯದವರ ಥರ..”
ಅವರ ಕೂಗಾಟ ಕೇಳಿ …
ಅಕ್ಕ ಪಕ್ಕದ ಮನೆಯವರು ಹೊರಗೆ ಬಂದು ಕೈಕಟ್ಟಿಕೊಂಡು ಆನಂದಿಸುತ್ತಿದ್ದರು…..
ಕೆಲವು ಜನ ಕಿಡಕಿಯಿಂದ ಮಜಾ ತೆಗೆದು ಕೊಳ್ಳುತ್ತಿದ್ದರು..
ನನಗೆ ಅವಮಾನವಾದಂತಾಯಿತು..
ಇವರಿಗೆ ಹೇಗೆ ತಿಳಿಸಿ ಹೇಳುವದು…?
ಕೆಲಸ ಈಗ ತಾನೆ ಶುರುವಾಗಿದೆ… ಇನ್ನು ಮುಂದೆ ಹೇಗೆ…?
ಹಣಕಾಸಿನ ವಿಚಾರ ಹೇಗೆ…?
ನನಗೆ ತಲೆ ಕೆಟ್ಟು ಹೋದಂತಾಯಿತು…
ಅವರು ಒಂದೇ ಸವನೆ ಕೂಗಾಡುತ್ತಿದ್ದರು…
ನನಗೂ… ರೇಗಿ ಹೋಯಿತು…
ಏನಾಗ್ತದೊ ಅದು ಇವತ್ತೇ ಆಗಲಿ….
ಹೆಚ್ಚೆಂದರೆ.. ಈ ಕೆಲಸ ಕೈ ತಪ್ಪಿ ಹೋಗ ಬಹುದು…
ಆದರೆ ಈ ಅವಮಾನ ಹೇಗೆ ಸಹಿಸುವದು..?
ನಾನೂ.. ಕೂಗಾಡಿದೆ….
“ಏನ್ರೀ ನೀವು.. ?
ಅರ್ಥಾನೆ ಮಾಡಿಕೊಳ್ಳೋದಿಲ್ಲವಲ್ರೀ…
ಹಿರಿಯರು… ವಯಸ್ಸಲ್ಲಿ ದೊಡ್ಡವರು ಅಂತ ಸುಮ್ನೆ ಇದ್ರೆ…
ಒಂದೇ ಸವನೆ ಕೂಗ್ತೀರಲ್ರಿ…?
ನೋಡ್ರಿ….
ಆ ಪಿಲ್ಲರ್ ಮತ್ತೆ ಬೇಕಾಗೋದಿಲ್ಲ…
ಎರಡು ದಿನ ಬಿಟ್ಟು ನಾವೇ ಅದನ್ನ ಒಡೆದು ಹಾಕ್ತೇವೆ…
ಅದಕ್ಕೆ ಯಾಕೆ ಕ್ವಾಲಿಟಿ…?
ಅರ್ಥಾನೆ ಮಾಡ್ಕೋತಾ ಇಲ್ಲವಲ್ಲ…”
ಏರಿದ ಧ್ವನಿ ಕೇಳಿ.. ಅವರು ಸ್ವಲ್ಪ ತಣ್ಣಗಾದರು..
“ಓಹೋ…
ಹೀಗೋ .. ವಿಷಯ…!
ಈ ವಿಷಯ ಹೀಗೆ ಹೇಳಲೇ ಇಲ್ಲ ನೀವು…
ನೀವು ಹೀಗೆ ಹೇಳಿದ್ರೆ ನನಗೂ ಅರ್ಥ ಆಗಿರೋದು….
ಓಕೆ.. ಓಕೆ..
ನಾನು ಈ ಥರಹ ಹೇಳ್ದೆ ಅಂತ ಬೇಸರ ಮಾಡ್ಕೊ ಬೇಡಿ..
ಬನ್ನಿ ಇಲ್ಲೇ ಟೀ.. ಕುಡಿದು ಬರುವ…”
ಅಂತ ನನ್ನ ಕೈ ಹಿಡಿದು ಕರೆದು ಕೊಂಡು ಹೊರಟರು.. ಅಕ್ಕಪಕ್ಕದ ಮನೆಯವರೂ ಒಳಕ್ಕೆ ಹೋದರು… ನನಗೆ ಸೋಜಿಗವಾಯಿತು…
ಇಲ್ಲಿಯವರೆಗೆ ಕೂಗಾಡಿದ ಮನುಷ್ಯ ಇವರೇನಾ…?
ಎಂಥಹ ಜನ ಇವರು…? ಇವರೊಡನೆ ವ್ಯವಹಾರ ಮಾಡ ಬಹುದಾ..?
ಕೊನೆಯಲ್ಲಿ ಸರಿಯಾಗಿ ಲೆಕ್ಕಾಚಾರ ಮಾಡಿ ಹಣ ಕೊಡ ಬಹುದಾ…?
ಇವರ ಕೆಲಸ ಈಗಲೇ…. ನಿಲ್ಲಿಸಿ ಬಿಡಲಾ…? ಇವರೊಡನೆ ವ್ಯವಹಾರ ಮಾಡ ಬಹುದಾ..?
ಬೇಡವಾ ?….ಮನುಷ್ಯರನ್ನು ಹೇಗೆ ಅರ್ಥ ಮಾಡಿಕೊಳ್ಳ ಬೇಕು…?ತಲೆ ಕೆರೆದುಕೊಳ್ಳುತ್ತ… ಅವರ ಸಂಗಡ ಹೆಜ್ಜೆ ಹಾಕಿದೆ… ಮನುಷ್ಯರನ್ನು…
ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಯಂತ್ರಗಳು ಅವಶ್ಯವಾಗಿ ಬೇಕಿದೆ….
ನವೆಂ 05, 2010 @ 12:10:44
There is a saying in English. ” Don’t argue with fools. they take you to their
level and defeat you with experience”.
ನವೆಂ 05, 2010 @ 13:57:52
ಸುನಿತರವರೆ…
ನಿಜ ..
ಏರಿದ ಧ್ವನಿಯಲ್ಲಿ ಮಾತನಾಡುವವರ ಸಂಗಡ ಮಾತನಾಡುವಾಗ ನಮ್ಮ ಧ್ವನಿಯನ್ನೂ ಅವರ ಮಟ್ಟಕ್ಕೆ ಏರಿಸಿಕೊಳ್ಳಲೇ ಬೇಕಾಗುತ್ತದೆ..
ಅದು ನಮ್ಮ ಸ್ವಭಾವ ಅಲ್ಲದಿದ್ದಿದ್ದರೂ ಸಹ..
ಬಹುಷಃ ಅವರು ವಿಷಯವನ್ನು ಗ್ರಹಿಸುವ ಮಟ್ಟವೇ ಅದಾಗಿರುತ್ತದೆ..
ಇದರ ಮುಂದಿನ ಭಾಗ ಕುತೂಹಲಪೂರ್ಣವಾಗಿದೆ..
ದಯವಿಟ್ಟು ಓದಿ..
ಧನ್ಯವಾದಗಳು…
ನವೆಂ 04, 2010 @ 14:39:31
ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಯಂತ್ರಗಳು ಬೇಕಾದರೆ, ಯಂತ್ರಗಳನ್ನು ಅರ್ಥ ಮಾಡಿಕೊಳ್ಳಲು ಮತ್ತೆ ಯಂತ್ರಗಳೇ ಬೇಕಾಗಬಹುದು. ನಿಮ್ಮ ಪರಿಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ
ನವೆಂ 05, 2010 @ 08:00:41
ಮಹೇಶ್ ಅವರೇ…
ಮುಖನೋಡಿದರೆ…
ಮಾತುಕೇಳಿದರೆ.. ಅವರ ಮನಸ್ಸುಗೊತ್ತಾಗುವದಿಲ್ಲ…
ನಮ್ಮ ಬದುಕಿನ ಪ್ರತಿಕ್ಷಣ ನಮ್ಮ “ಪಕ್ಕದವರನ್ನು ಅರಿಯಲು ಪ್ರಯತ್ನಿಸುತ್ತಲೇ ಇರುತ್ತೇವೆ…”
ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವದೇ ದೊಡ್ಡ ಸಮಸ್ಯೆ… ಅಲ್ಲವಾ?
ಬೆಳಿಗ್ಗೆ ಆರುಗಂಟೆಯಿಂದ ಎಂಟು ಗಂಟೆಯವರೆಗೆ ನಾನು ಹೇಗೆ ಕಳೆದಿದ್ದೇನೆಂದೆರೆ ನನಗೇ ಗೊತ್ತು…
ಫೋನಿನಲ್ಲಿ ಕೂಗಾಡಿದ್ದಲ್ಲದೆ.. ಮನೆಕಟ್ಟುವ ಜಾಗದಲ್ಲೂ ಕೂಗಾಡಿ..
ನಂತರ ಏನೂ ನಡೆದಿಲ್ಲವೆಂಬಂತೆ ಹೆಗಲ ಮೇಲೆ ಕೈ ಹಾಕಿ “ಬನ್ನಿ ಟೀ.. ಕುಡಿಯೋಣ” ಅಂದರೆ ನನಗೆ ಹೇಗಾಗಿರ ಬೇಡ..?
ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ಯಂತ್ರ ಹುಡುಕ ಬೇಕಾಗಿದೆ.. ಅಲ್ಲವೆ?
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು…
ನವೆಂ 04, 2010 @ 14:31:23
Adakke swamy baayi iddavanu badukaballa endu helodu. Samajave heege…!poorthi helovargu keluva sahaneye iralla.
ನವೆಂ 05, 2010 @ 08:04:24
ಪ್ರಕಾಶ್ ಚಂದ್ರ..
ಏರಿದ ಧ್ವನಿಯಲ್ಲಿ… ಕೂಗಾಡುವದರಿಂದ ಬಹಳ ಲಾಭವಂತೂ ಇದೆ..
ಅವರ ಬಳಿ ವಾದ ಮಾಡುವದಕ್ಕೆ ಹೆಚ್ಚಿನ ಜನ ಹೆದರುತ್ತಾರೆ…
ದೊಡ್ಡ ಧ್ವನಿಗೆ ಹೆದರಿ… ಬೇಸರದಿಂದ ಅವರಿಗೆ ಎದುರಾಡದೆ ಸುಮ್ಮನಿರುವವರೇ ಜಾಸ್ತಿ…
ಹೆಚ್ಚಿನ ಮನೆಗಳಲ್ಲಿ ಆಗುವದು ಹೀಗೇ ಅಲ್ಲವೆ?
ಧನ್ಯವಾದಗಳು…