FII ಮಹಾತ್ಮೆ ಎಂಬ ಅಧಿಕಪ್ರಸಂಗ!

-ಜಯದೇವ ಪ್ರಸಾದ ಮೊಳೆಯಾರ


ಕಾಸು ಕುಡಿಕೆ-30

Market correction- The day after you buy stocks!!- Anon

ಮಾರ್-ಕೆಟ್ಟು ಕರೆಕ್ಷನ್- ನೀವು ಶೇರು ಕೊಂಡ ಮರುದಿನ ನಡೆಯುವಂತದ್ದು!!- ಅನಾಮಿಕ.

ಬಲ್ಲಿರೇನಯ್ಯ?
ಹ್ಹೂಂ
ಈ ಭರತ ಖಂಡದಲ್ಲಿ. . .
ಹ್ಹೂಂ
. . .ಈ ಜಂಬೂ ದ್ವೀಪದಲ್ಲಿ. . .
ಹ್ಹೂಂ
. . . ಈ ಶೇರುಕಟ್ಟೆಯೆಂಬ ಮಾಯಾನಗರಿಗೆ. . .
ಹ್ಹೂಂ
. . .  ಒಡೆಯನು ಯಾರೆಂದು ಕೇಳಿ ಬಲ್ಲಿರಿ??
FII ಎಂಬುದಾಗಿ ಕೇಳಿ ಬಲ್ಲೆವು
ಓಹೋ, G.K ಯಲ್ಲಿ ನಿಮ್ಮ ಪರಿಣಿತಿಯನ್ನು ನೋಡಿ ನಮಗೆ ಬಹಳ ಸಂತೋಷವಾಗುತ್ತಿದೆ. ಸರಿಯಾದ ಉತ್ತರವನ್ನೇ ಕೊಟ್ಟಿದ್ದೀರಿ. ಭಲೇ, ಭೇಷ್, ಭೇಷ್!!
ಆಮೇಲೆ, ನಾವು ಈ ಮಾಯಾನಗರಿಗೆ ಬಂದದ್ದಾಯಿತು, ನಿಮ್ಮೊಡನೆ ಮಾತನಾಡಿದ್ದಾಯಿತು, ಮತ್ತೆ ಈಗ ಕಾರ್ಯಕ್ಕೆ ಬರೋಣ. ಈ FII ಯ ಮಹಾತ್ಮೆಯನ್ನು ನಾನೇನೆಂದು ಬಣ್ಣಿಸಲಿ? ಅದನ್ನು ಬಣ್ಣಿಸಲು ನೂರು ನಾಲಗೆ ಸಾಲದು,. ಆದರೂ ಹೇಳುವೆ, ಕೇಳುವಂತವರಾಗಿ. . . . .

************
೧೯೯೧ ರ ನರಸಿಂಹ ರಾವ್ ಕೃಪಾಪೋಷಿತ ಉದಾರೀಕರಣ ನೀತಿಯ ಪೂರ್ವದಲ್ಲಿ ಭಾರತೀಯ ಮಾರುಕಟ್ಟೆ ನಮ್ಮ ಜಂಬೂ ದ್ವೀಪದಂತೆ ಒಂದು ದ್ವೀಪವಾಗಿಯೇ ಅಸ್ತಿತ್ವದಲ್ಲಿತ್ತು. ವಿದೇಶದ ಯಾವುದೇ ದುಷ್ಟ-ಶಿಷ್ಟ ಶಕ್ತಿಗಳ ಕ್ಷುದ್ರ ನೋಟವೂ ನಮ್ಮ ಮಾರುಕಟ್ಟೆಯನ್ನು ತಟ್ಟಿದ್ದಿಲ್ಲ. ತಪ್ಪೋ ಸರಿಯೋ ನಮಗೆ ಗೊತ್ತಿದ್ದಂತೆಯೇ ಮಾರುಕಟ್ಟೆಯನ್ನು ನಾವು ಆಡುತ್ತಿದ್ದೆವು.

ಈಗ ವೈಜ್ಞಾನಿಕ, ಪ್ರೊಫೆಶನಲ್ ಎಂದೆಲ್ಲ ಕರೆಯಲ್ಪಡುವ ಯಾವುದೇ ವಾಲ್ಯುಯೇಶನ್ ತಕ್ನಿಕ್ಕುಗಳು ಆವಾಗ ಇರಲಿಲ್ಲ. ಶೇರು ಕುಂಡಲಿ ಬರೆದು ಅವುಗಳ ಗರ್ಭಕ್ಕೆ ದೃಷ್ಟಿ ಬೀರಿ ಶೇರುಗಳ ಗೋಚರ ಫಲ-ಗ್ರಹಚಾರ ಫಲ ನೀಡುವ ಪರಿಪಾಠ ಇದ್ದಿರಲೇ ಇಲ್ಲ. ಒಟ್ಟಿನಲ್ಲಿ, ಒಂದು ರೀತಿಯ ಫ್ರೀ ಫಾರ್ ಆಲ್ ರೀತಿಯ ಕುಸ್ತಿ ಪಂದ್ಯಾಟದಂತೆ ನಮ್ಮ ದಲಾಲ್ ಸ್ಟೀಟ್ ದೇಶದ ಜನತೆಗೆ ಮನೋರಂಜನೆ ನೀಡುತ್ತಿತ್ತು. ಜೊತೆಗೆ ಅಲ್ಪ ಸ್ವಲ್ಪ ಕಾಸು ಕೂಡಾ.

ಅದಾಗಿ, ಆ ಕಾಲದಲ್ಲಿ ಭಾರೀ ಉದ್ರಿಯಲ್ಲಿ ಮುಳುಗಿದ ಭಾರತ ಸರಕಾರದ ಉದ್ರಿಕರಣದಿಂದ  ಉದಾರೀಕರಣ ಎಂಬ ಡೆಸ್ಪರೇಟ್ ನೀತಿಯ ಫಲವೆಂಬಂತೆ ೧೯೯೨ ರಲ್ಲಿ ವಿದೇಶೀ ಹಣಕ್ಕೆ ಭಾರತದ ಬಂಡವಾಳ ಮಾರುಕಟ್ಟೆಯನ್ನು ತೆರೆಯಿತು. ಅದರೊಂದಿಗೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಬ್ಯಾಂಕು, ಮೂಚುವಲ್ ಫಂಡ್, ಹೆಜ್ ಫಂಡ್)  ಅಥವ Foreign Instittional Investors (FII)ಎಂಬ ಹೆಸರಿನಲ್ಲಿ ವರ್ಗೀಕೃತಗೊಂಡ ಈ ಹೂಡಿಕೆದಾರರು ಭಾರತದಲ್ಲಿ ನೋಂದಾಯಿಸಿ ನಮ್ಮ ಮಾರುಕಟ್ಟೆಯಲ್ಲಿ ಕೊಡಕೊಳ್ಳುವ ವ್ಯವಹಾರವನ್ನು ನಡೆಸತೊಡಗಿದರು.

ಇದರೊಂದಿಗೆ ಮೊತ್ತ ಮೊದಲ ಬಾರಿಗೆ ನಮ್ಮ ದೇಸೀ ಕಾಗದಗಳಿಗೆ ಡಾಲರ್ ನೋಟಿನ ರುಚಿ ಹತ್ತಿತು. FII ಗಳು ಭಾರತದ ಕಂಪೆನಿಗಳನ್ನು ತಮ್ಮದೇ ಆದ ಸಿದ್ಧ ಲೆಕ್ಕಾಚಾರಗಳಿಂದ ತುಲನೆಮಾಡತೊಡಗಿದರು. EPS, PE, GDP ಇತ್ಯಾದಿ ಬೀಜಾಕ್ಷರಗಳಿಗೆ ಮೊದಲಿಲ್ಲದ ಮರ್ಯಾದಿ ದೊರೆಯತೊಡಗಿತು. ಮೂಲಭೂತವಾಗಿ ಭಾರತದ ಶೇರುಗಳು ಗೋಡ್ಡಾಮ್ ಚೀಪ್, ಮ್ಯಾನ್! ಲೆಟ್ಸ್ ಪಿಕ್ ಇಟ್ ಅಪ್ ಎಂಬ ಮಾತು ಎಲ್ಲೆಡೆ ಕೇಳತೊಡಗಿತು. ನಮ್ಮ ಶೇರುಗಳ ಬೆಲೆಯೇರತೊಡಗಿದವು.

ನಿರಂತರವಾಗಿ ನಡೆಯುತ್ತಾ ಬಂದ ಉದಾರೀಕರಣ ಮತ್ತು ಸಡಿಲೀಕರಣ ನೀತಿಗಳು, , ‘The India Growth story’ಯ ಜೊತೆಜೊತೆಗೆ ಇನ್ನಷ್ಟೂ ವಿದೇಶಿ ಹೂಡಿಕೆಯನ್ನು ಆಕರ್ಷಿಸತೊಡಗಿದವು. ಆ ರೀತಿ ಕಳೆದ ೨ ದಶಕಗಳಲ್ಲಿ ವಿದೇಶಿ ಹಣವು ನಮ್ಮ ದೇಶಕ್ಕೆ ಸಾಕಷ್ಟು ಹರಿದು ಬಂದಿದೆ. ೨೦೦೭ ರಿಂದ ಈಚೆಗೆ ವಾರ್ಷಿಕ ನಿವ್ವಳ ಒಳಹರಿವು ೧೭ ಬಿಲಿಯನ್ ಡಾಲರ್ ರೇಖೆಯನ್ನು ಮೀರಿ ನಿಂತಿದೆ.

ಆದರೆ, ೨೦೦೮ ರಲ್ಲಿ ರಿಸೆಶನ್ ಸಲುವಾಗಿ ಸುಮಾರು ೧೨ ಬಿಲಿಯನ್ ಡಾಲರ್‌ಗಳಷ್ಟು ಹಿಂಪಡೆದು ನಮ್ಮ ಮಾರುಕಟ್ಟೆ ಕುಸಿಯುವುದಕ್ಕೂ ಕಾರಣರಾಗಿದ್ದಾರೆ. ಈ ವರ್ಷ ಈವರೆಗೆ ಸುಮಾರು ೨೫ ಬಿಲಿಯನ್ ಡಾಲರ್‌ಗಳಷ್ಟು ಅಂದರೆ ‘ ೧ ಟ್ರಿಲ್ಲಿಯನ್ ಅಥವ ೧ ಲಕ್ಷ ಕೋಟಿ ರುಪಾಯಿಗಳಷ್ಟು ವಿದೇಶಿ ದುಡ್ಡು ನಮ್ಮ ಮಾರುಕಟ್ಟೆಗೆ ಅವರು ಪಂಪ್ ಮಾಡಿದ್ದಾರೆ. ಇಂದಿಗೆ ಮಾರುಕಟ್ಟೆಯಲ್ಲಿ ಈ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾತ್ರ ಬಹಳ ಮಹತ್ತರವಾದದ್ದು. ಸಧ್ಯಕ್ಕೆ ನಮ್ಮ ಮಾರುಕಟ್ಟೆ ಬಹುತೇಕ ಅವರ ನಿಯಂತ್ರಣದಲ್ಲಿದೆ.

ಅದು ಹೇಗೆ ಇಷ್ಟು ದುಡ್ಡು ಬರುತ್ತದೆ? ಅದೆಲ್ಲಿಂದ ಬರುತ್ತದೆ?

ಗ್ಲೋಬಲ್ ವಿಲೇಜ್ ಅಥವ ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿ ಎಂಬ ಪರಿಕಲ್ಪನೆ ಬಂದ ಮೇಲೆ ವಿದೇಶೀಯರು- ಮುಖ್ಯವಾಗಿ ಅಮೇರಿಕನ್ನರು ತಮ್ಮ ಹೂಡಿಕೆಯನ್ನು ಅತ್ಯಂತ ಜಾಸ್ತಿ ಪ್ರತಿಫಲ ಇರುವ ಯಾವುದೇ ಹೂಡಿಕೆಯಲ್ಲಾದರೂ ಸುಲಭವಾಗಿ ಹಾಕುತ್ತಾರೆ.

ಮತ್ತು ಬೇಕಾದಂತೆ ಸಂದರ್ಭಾನುಸಾರ ಅದನ್ನು ಬದಲಾಯಿಸುತ್ತಾರೆ ಕೂಡಾ. ಕಳೆದೆರಡು ದಶಕಗಳಿಂದ ಅಮೆರಿಕ, ಯುರೋಪ್,ಜಪಾನ್ ಇತ್ಯಾದಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಗತಿ ತೀರಾ ಕಡಿಮೆ. ಒಂದೆರಡೂ ಶೇಕಡಾ ಜಿ.ಡಿ.ಪಿ ಗ್ರೋಥ್ ಬಂದರೆ ಅದೇ ಭಾಗ್ಯ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ (ಇವನ್ನು BRIC Countries ಎಂದು ಕರೆಯುತ್ತಾರೆ) ಗಳಲ್ಲಿ ೬-೧೦% ಅಥವಾ ಇನ್ನೂ ಸ್ವಲ್ಪ ಹೆಚ್ಚು ಪ್ರಗತಿ ಕಾಣಿಸುತ್ತಿದೆ.

ಹಾಗಾಗಿ ಆ ಊರಿನವರು ಸಾಧ್ಯವಾದಷ್ಟು ಮಟ್ಟಿಗೆ ಲೋಕಲ್ ದುಡ್ಡನ್ನು ಎತ್ತಿ ಇಂತಹ ಹೈ ಗ್ರೋಥ್ ಮಾರುಕಟ್ಟೆಗಳಲ್ಲಿ ಬಿತ್ತುತ್ತಾರೆ. ಸಧ್ಯಕ್ಕೆ ಭಾರತ ತನ್ನ ೯% ಜಿ.ಡಿ.ಪಿ ಪ್ರಗತಿಯೊಂದಿಗೆ ಒಂದು ಅತ್ಯಾಕರ್ಷಕ ಮಾರುಕಟ್ಟೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಹಾಗಾಗಿ ಜಗತ್ತಿನ ಎಲ್ಲೆಡೆಗಳಿಂದಲೂ ದುಡ್ಡು ಇಂದು ಭಾರತವನ್ನು ಅರಸಿ ಬರುತ್ತಿದೆ.

ಇದು ಒಂದು ಸಾದಾರಣವಾದ ಜನರಲ್ ಮಾತಾಯಿತು. ಇನ್ನೂ ಕೂಲಂಕುಶವಾಗಿ ಹೋದರೆ ಇದರ ಇನ್ನೊಂದು ಮಜಲು ಗೋಚರಿಸತೊಡಗುತ್ತದೆ. ಭಾರತದ ಶೇರುಗಳಲ್ಲಿ ಹೂಡಿದಾಗ ಭಾರತದ ತೀವ್ರ ಪ್ರಗತಿಯ ಲಾಭ ಶೇರುಬೆಲೆ ವೃದ್ಧಿಯಲ್ಲಿ ದೊರೆಯುವುದಲ್ಲದೆ ತೆರೆಯ ಮರೆಯಲ್ಲಿ ನಡೆಯುವ ಇನ್ನೊಂದು ಭಾರೀ ಲಾಭ ಕೂಡಾ ಇವರುಗಳಿಗೆ ದಕ್ಕುತ್ತದೆ.

ಆ ಲಾಭ  ರುಪಾಯಿಯ ವಿನಿಮಯ ದರದಿಂದ ಬರುವಂತದ್ದು.  ಹೂಡಿಕೆಗಾಗಿ ಡಾಲರ್‌ನ ಮಹಾಪೂರ ಬರತೊಡಗಿದಾಕ್ಷಣ ರುಪಾಯಿಗೆ ಬೇಡಿಕೆ ಜಾಸ್ತಿಯಾಗಿ ಅದರ ಬೆಲೆವೃದ್ಧಿಯಾಗುತ್ತದೆ ಹಾಗೂ ಡಾಲರ್‌ಗೆ ಬೇಡಿಕೆ ಕಡಿಮೆಯಾಗಿ ಅದರ ಬೆಲೆ ಕಡಿಮೆಯಾಗುತ್ತದೆ. ಹಾಗಾಗಿ FII ಯವರು ಭಾರತಕ್ಕೆ ಹೂಡಿಕೆ ತರುವಾಗ ಇದ್ದ ವಿನಿಮಯ ದರಕ್ಕಿಂತ ಆಕರ್ಷಕ ವಿನಿಮಯ ದರ ಹೂಡಿಕೆ ಹಿಂತೆಗೆಯುವಾಗ ಅವರಿಗೆ ದಕ್ಕುತ್ತದೆ. ಹೀಗೆ ಭಾರತದಲ್ಲಿ ಅಥವ ಇನ್ನಾವುದೇ ಅಭಿವೃದ್ಧಿಶೀಲ ದೇಶದಲ್ಲಿ ಹೂಡಿದಾಗ ಶೇರುಗಳಲ್ಲಿ ಗಳಿಕೆ ಮತ್ತು ವಿನಿಮಯದರದಲ್ಲಿ ಗಳಿಕೆ ಹೀಗೆ ಡಬಲ್ ಬೆನಿಫಿಟ್ ಸಿಗುತ್ತದೆ.

ರಿಸೆಶನ್ ಸಮಯದಲ್ಲಿ ಅಮೆರಿಕಾ ಸರಕಾರ ಘೋಷಿಸಿದ ಸನಿಹ-ಶೂನ್ಯ ಬಡ್ಡಿಯ ಸಾಲದ ಬಹುತೇಕ ದುಡ್ಡು ಈ ರೀತಿ ಡಬಲ್ ಬೆನಿಫಿಟ್‌ಗೋಸ್ಕರ ನಮ್ಮೂರು ಪ್ರವೇಶಿಸಿದೆ. ಇದನ್ನು ಡಾಲರ್ ಕಾರ್ರೀ ಟ್ರೇಡ್ ಎಂದು ಜ್ಞಾನಿಗಳು ಕರೆಯುತ್ತಾರೆ.

ಈ ಎಲ್ಲಾ ಪರಿಸ್ಥಿತಿಯಿಂದ ಉಂಟಾಗುವ ಪರಿಣಾಮವೇನೆಂದರೆ ಮಾರುಕಟ್ಟೆ ಇಂದು ಬಹುತೇಕ ಜಾಗತಿಕ ಕೈಗಳಲ್ಲಿ ಸೇರಿಹೋಗಿದೆ. ಮಾರುಕಟ್ಟೆ ಇಂದಿಗೆ ಪ್ರತಿಯೊಂದು ವಿಷಯಕ್ಕೂ ಅವರ ಕೈಸನ್ನೆಯಂತೆ ನೃತ್ಯ ಮಾಡುತ್ತಿದೆ. ವಿದೇಶೀ ಹಣ ಬರುವಾಗ-೨೦೦೭ ರಲ್ಲಿ ಬಂದಂತೆ- ಮಾರುಕಟ್ಟೆ ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ. ಅದರೆ ೨೦೦೮ ರಲ್ಲಿ ಆದಂತೆ ಹಣ ವಾಪಾಸು ಹೋಗುವಾಗ ಆಗುವುದು ಎಲ್ಲಾ ತಟಪಟ.

ಜಗತ್ತಿನ ಯಾವ ಮೂಲೆಯಲ್ಲೂ ನಡೆಯಬಹುದಾದ ಯಾವುದೇ ಆಪಘಾತಕ್ಕೆ ಇಂದು ನಾವು ದಂಡ ತೆರಲು ಸಿದ್ಧವಾಗಿರಬೇಕು. ಜಾಗತಿಕ ದುಡ್ಡಿನ ಮಜಾ ಮಾತ್ರ ಸವಿಯುತ್ತೇವೆ ಎಂದರೆ ಆಗದು. ಅಮೆರಿಕ, ಜಪಾನ್, ದುಬೈ, ಗ್ರೀಸ್ – ಹೀಗೆ ಎಲ್ಲೇ ಆರ್ಥಿಕ ಬಿಕ್ಕಟ್ಟು ಬಂದರೂ ಅದನ್ನು ರಿಪೇರಿ ಮಾಡಲು ನಮ್ಮಲ್ಲಿ ಹೂಡಿದ್ದ ಶೇರುಗಳನ್ನು ಮಾರಿ ದುಡ್ಡನ್ನು ಅಲ್ಲಿಗೆ ನಿರ್ದಾಕ್ಷಿಣ್ಯವಾಗಿ ಕೊಂಡೊಯ್ಯುತ್ತಾರೆ.

ಅಷ್ಟೇ ಏಕೆ? FII ಯವರು ದಿನಾ ಎಂಬಂತೆ ಜಗತ್ತಿನ ಎಲ್ಲಾ ಮಾರುಕಟ್ಟೆಗಳನ್ನೂ ತುಲನೆ ಮಾಡುತ್ತಾ ಇರುತ್ತಾರೆ. ಯಾವುದೇ ಸಮಯದಲ್ಲಿ ಯಾವುದೇ ಮಾರುಕಟ್ಟೆ ಜಾಸ್ತಿ ಆಕರ್ಷಕವಾಗಿ ಕಂಡುಬಂದರೂ ಸ್ವಲ್ಪ ದುಬಾರಿ ಎನಿಸಿದ ಮಾರುಕಟ್ಟೆಯಲ್ಲಿ ಶೇರು ಮಾರಿ ಆಕರ್ಷಕ ಬೆಲೆಗಳಿರುವ ಮಾರುಕಟ್ಟೆಗೆ ಕೊಂಡು ಹೋಗಿ ಅಲ್ಲಿ ದುಡ್ಡು ಸುರಿಯುತ್ತಾರೆ. ಮತ್ತದು ಸಾಕಷ್ಟು ಏರಿದ ನಂತರ ನಿರ್ಭಾವುಕರಾಗಿ ಅವನ್ನು ಅಲ್ಲಿ ಮಾರಿ ಲಾಭ ಕಿಸಿಗೇರಿಸಿ ಅಲ್ಲಿಂದ ಇನ್ನೊಂದು ಮಾರುಕಟ್ಟೆಯತ್ತ ಹೋಗುತ್ತಾರೆ. ಲಕ್ಷ್ಮಿ ಚಂಚಲೆ ಎನ್ನುವುದನ್ನು ಬಿಳಿಬಣ್ಣದವರೂ ಸಾಧಿಸಿ ತೋರಿಸುತ್ತಾರೆ. ಅಲ್ಲವೇ?

ಬೇರೆ ಬೇರೆ ದೇಶಗಳ ಶೇರು ಮಾರುಕಟ್ಟೆಗಳನ್ನು ಮಾತ್ರವೇ ಅಲ್ಲ; ರಿಯಲ್ ಎಸ್ಟೇಟ್, ಚಿನ್ನ, ತೈಲ, ಮೆಟಲ್‌ಗಳು, ಕರೆನ್ಸಿ ಮಾರುಕಟ್ಟೆ ಇತ್ಯಾದಿ ಬೇರೆ ಬೇರೆ ಪರ್ಯಾಯ ಹೂಡಿಕಾ ಆಯ್ಕೆಗಳನ್ನು ಈ ವಿದೇಶೀ ಹೂಡಿಕೆದಾರರು ಸದಾ ತುಲನೆ ಮಾಡುತ್ತಾ ಇರುತ್ತಾರೆ. ನಾಳೆ ಎಲ್ಲಾದರು ಕ್ರೂಡ್ ತೈಲದ ಬೆಲೆ ಸಕತ್ ಏರತೊಡಗಿದರೆ ಭಾರತದಲ್ಲಿ ಹೂಡಿದ್ದ ಶೇರುಗಳನ್ನು ಮಾರಿ ತೈಲದ ಹಿಂದೆ ಹೋದಾರು. ದುಬೈನಲ್ಲಿ ರಿಯಲ್ ಎಸ್ಟೇಟ್ ಪುನಃ ಓಡತೊಡಗಿದರೆ ಚಿನ್ನದ ಮೋಹ ಬಿಟ್ಟು ಅದರ ಹಿಂದೆ ಓಡಿಯಾರು.

ಈ ರೀತಿ ಬೇರೆ ಬೇರೆ ಮಾರುಕಟ್ಟೆಗಳ ಏರಿಳಿತದ ರಿಸ್ಕಿಗೆ ಇಂದು ಭಾರತೀಯ ಶೇರು ಬಜಾರು ತನ್ನನ್ನು ತಾನೇ ತೆರೆದಿಟ್ಟುಕೊಂಡಿದೆ. ಇಂದಿನ ತಾರೀಖಿನಲ್ಲಿ ಭಾರತೀಯ ಶೇರುಕಟ್ಟೆಯಲ್ಲಿ ದುಡ್ಡು ಹಾಕುವ ಯಾವುದೇ ಬಡಪಾಯಿ ಜಾಗತಿಕ ಮಟ್ಟದಲ್ಲಿ ಶೇರು, ತೈಲ, ಚಿನ್ನ, ಮೆmಲ್, ಕರೆನ್ಸಿ ಇತ್ಯಾದಿ ಎಲ್ಲಾ ಹೂಡಿಕೆಗಳಲ್ಲಿ ಆಗುಹೋಗುವ ವಿದ್ಯಮಾನಗಳನ್ನು ಅರಿತಿರಬೇಕು. ಈಗೀಗ ಜೀವನ ಮೊದಲಿನಷ್ಟು ಸುಲಭವಲ್ಲ.

ಪ್ರಸಂಗದ ಇನ್ನೊಂದು ಮಜಲನ್ನು ಹೇಳದೆ ಹೋದರೆ ಇವತ್ತಿನ ಪ್ರಸಂಗ ಪೂರ್ಣವೆನಿಸದು. ನಮ್ಮ ವಿತ್ತ ಮಂತ್ರಾಲಯಕ್ಕೂ FII ಗಳಿಗೂ ಅಗಾಗ್ಗೆ ಚಕಮಕಿ ನಡೆಯುವುದನ್ನು ನೀವೆಲ್ಲರೂ ಓದಿರಬಹುದು. ಜಾಗತಿಕ ಕರಸ್ವರ್ಗಗಳೆಂದು ಹೆಸರುವಾಸಿಯಾದ ಮಾರಿಶಸ್, ಸ್ವಿಸ್, ಕಿಟ್ಸ್ ಇತ್ಯಾದಿ ನೆಲೆಗಳಲ್ಲಿ ಜನ್ಮವೆತ್ತುವ ಹೆಚ್ಚಿನ FII ಗಳ ಮುಖವಾಡದ ಹಿಂದಿರುವ ಅಸಲಿ ಹೂಡಿಕೆದಾರರು ಯಾರು ಎಂಬ ಸಮಸ್ಯೆ ನಮ್ಮ ಸರಕಾರವನ್ನು ಯಾವತ್ತೂ ಕಾಡುತ್ತಿರುತ್ತದೆ.

ಅದಕ್ಕಾಗಿ ಅವರುಗಳು ತಮ್ಮ ಮುಖವಾಡ ಕಂಪೆನಿಗಳ (ಶೆಲ್ ಕಂಪೆನಿ) ಹಿಂದೆ ಇರುವ ನಿಜವಾದ ಹೂಡಿಕೆದಾರರ ಸಬ್-ಅಕೌಂಟ್ ಮತ್ತು ಅವರುಗಳಿಗೆ ನೀಡಿರುವP-Note (Participatory Note) ಬಗ್ಗೆ ಮಾಹಿತಿ ನೀಡಬೇಕು ಎಂಬಿತ್ಯಾದಿ ತಗಾದೆಗಳನ್ನು ನಮ್ಮ ಮಂತ್ರಾಲಯ ಆಗಿಂದಾಗ್ಗೆ ಎತ್ತುತ್ತಾ ಇರುತ್ತದೆ. ಹಾಗೆ ಎತ್ತಿದಾಗಲೆಲ್ಲ ಮಾರುಕಟ್ಟೆ ಸ್ವಲ್ಪ ಕುಸಿಯುತ್ತದೆ.

ಒಮ್ಮೊಮ್ಮೆ ಅವರುಗಳ ಹಣದ ಒಳಹರಿವಿನ ಮೇಲೆ ಕಡಿವಾಣ ಹಾಕಬೇಕೇ ಬೇಡವೇ ಎಂಬ ಚರ್ಚೆ ಕೂಡಾ ಜೀವಂತವಾಗುತ್ತದೆ.

ಅಗಲೂ ಮಾರುಕಟ್ಟೆ ಕುಸಿಯುವ ಅಂಚಿಗೆ ಬರುತ್ತದೆ. ಭಾರತದ್ದೇ ಕಪ್ಪುಹಣ ಈ ಕರಸ್ವರ್ಗಗಳಿಗೆ ಹವಾಲ ದಾರಿಯ ಮೂಲಕ ಹೋಗಿ ಅಲ್ಲಿಂದ FII ಮುಖವಾಡದಲ್ಲಿ ವಾಪಾಸು ಭಾರತದ ಶೇರುಕಟ್ಟೆಗೆ ಬರುವುದರ ಬಗ್ಗೆ ಸಾಕಷ್ಟು ಗುಸುಗುಸು ಮಾತು ಕೇಳಿಬರುತ್ತಿವೆ. ಇದಕ್ಕೆ Round Tripping ಎನ್ನುತ್ತಾರೆ. ಅಲ್ಲದೆ, ಮಫಿಯಾ ಮತ್ತು ಕ್ರೈಮ್ ದುಡ್ಡು ಕೂಡಾ ಇವುಗಳ ಹಿಂದೆ ಅವಿತಿರಬಹುದು ಎನ್ನುತ್ತಾರೆ, ಬಲ್ಲಿದರು.

ಹೀಗೆ ಹೂಡಿಕೆದಾರರು ಭಾರತೀಯ ಶೇರುಕಟ್ಟೆಯ ಪ್ರಸಂಗದಲ್ಲಿ ಈ FII ಎಂಬ ಅಧಿಕ ಪ್ರಸಂಗವನ್ನೂ ಒಟ್ಟಾರೆ ಗಮನದಲ್ಲಿಟ್ಟುಕೊಂಡಿರಲೇಬೇಕು.

ಇತಿ FII ಮಹಾತ್ಮೆ.

ಮಂಗಳಂ. ಶುಭ ಮಂಗಳಂ !!

೮೮೮೮೮೮೮೮೮೮೮೮೮೮೮೮೮೮೮೮೮೮೮೮

Tips:

ಇದೇ ೧೮ ನೇ ಅಕ್ಟೋಬರ್ ನಂದು ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ಜನತೆಗಾಗಿ ೧೦೦೦ ಕೋಟಿ ರುಪಾಯಿಗಳ ೯.೫% ಬಡ್ಡಿದರದ ಭಾರೀ ಭರ್ಜರಿ ಬಾಂಡುಗಳನ್ನು (Unsecured,taxable)  ಮಾರುಕಟ್ಟೆಯಲ್ಲಿ ಬಿಕರಿಗಾಗಿ ತೆರೆದಿಟ್ಟಿತು.

ಇಶ್ಯೂ ತೆರೆದ ಮೊದಲನೆಯ ದಿನವೇ ೧೭ ಪಟ್ಟು ಅರ್ಜಿಗಳು ಬಂದವು. ಕಾರಣ ಸಿಂಪಲ್- ಆಕರ್ಷಕ ಬಡ್ಡಿದರ!! ಭಾರತದ ಬಾಯಾರಿದ ಬಡಜನತೆಗೆ ನೀರಿಲ್ಲದ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು. ಜುಜುಬಿ ೭.೫-೮% ಬಡ್ಡಿದರದ ಯುಗದಲ್ಲಿ ಏಕಾಏಕಿ ೯.೫% ಕೊಡುವುದೆಂದರೇನು? ಅದೂ ೧೫ ವರ್ಷಕಾಲಕ್ಕೆ.

ಈ ಬಸ್ಸನ್ನು ಮಿಸ್ ಮಾಡಿಕೊಂಡವರು ವಾಪಾಸು ಬಿಸಿಲು ಮರಳಗಾಡಿನಲ್ಲಿ ಬಳಲಿ bend-ಆಗಿ ನಿರಾಶರಾಗಬೇಕಾಗಿಲ್ಲ. ಹಿಂದೊಮ್ಮೆ ಮಾರುಕಟ್ಟೆಗೆ ಬಂದಿರುವ ೧೦.೨೪% ಬಡ್ಡಿದರ L&T Finance ಕಂಪೆನಿಯ Unsecured, taxable, Non Convertible Debenture (NCD Series 4) ಇದೀಗ ಶೇರುಕಟ್ಟೆಯಲ್ಲಿ ಟ್ರೇಡ್ ಆಗುತ್ತಾ ಇದೆ. ೧೦೦೦ ಮುಖಬೆಲೆಯ ಒಂದು ೧೦.೨೪% ಬಡ್ಡಿದರದ ಈ ಪೇಪರ್ ೧೦೮೦ ರೂಪಾಯಿಗಳ ಅಂದಾಜಿಗೆ ಮಾರಾಟವಾಗುತ್ತಿದೆ. ಅಷ್ಟಕ್ಕೆ ಕೊಂಡಲ್ಲಿ ೯.೫% ದ ಓಯಸಿಸ್ (೧೦.೨೪/೧೦೮೦) ಇಲ್ಲೂ ಸಿಗಬಹುದು. ಸ್ಟೇಟ್ ಬ್ಯಾಂಕ್ ಬಸ್ಸು ಮಿಸ್ಸಾದವರಿಗೆ ಎಲ್ಲೆಂಟಿ ಬಸ್!

ಗಮನಿಸಿ: Unsecured Debenture ಗಳ ಮೇಲೆ ಬ್ಯಾಂಕ್ F.D ಗಳ ಭದ್ರತೆ ಹಾಗೂ ಇನ್ಶ್ಯೂರನ್ಸ್ ಇರುವುದಿಲ್ಲ. ಅದರೂ ಎಲ್ಲೆಂಟಿ ಒಂದು ಉತ್ತಮ ಕಂಪೆನೆಯೆಂಬ ಲೆಕ್ಕದಲ್ಲಿ è NCDyaasaktaru ಧೈರ್ಯವಹಿಸಬಹುದು.

ನಮ್ಮ ಗುರುಗುಂಟಿರಾಯರ ದೂರದ ಸಂಬಂಧಿ, ಹಯಗ್ರೀವ ನಗರದ, ಸರ್ಪಸುತ್ತಿನ ನಾಟಿ ವೈದ್ಯರೂ ಆದ  ಡಾ/ಶ್ರೀನಿವಾಸ ಉಪಾಧ್ಯಾಯರು ಈ ರೀತಿ ರೀಮುಗಟ್ಟಲೆ ಓಅಆಗಳನ್ನು ಖರೀದಿಸುತ್ತಿದ್ದಾರೆ ಅಂತ ಒಂದು ಬ್ರೇಕಿಂಗ್ ನ್ಯೂಸ್ ನಮಗೆ ಬಂದಿದೆ.

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭


1 ಟಿಪ್ಪಣಿ (+add yours?)

  1. Mahesh
    ನವೆಂ 03, 2010 @ 16:16:14

    ತುಂಬಾ ಮಾಹಿತಿ ಕೊಡುವ ಲೇಖನ. ಖಂಡಿತವಾಗಿಯೂ ಇಂದಿನ ನಮ್ಮ ಶೇರು ಪೇಟೆ ವಿದೇಶಿಗರ ಕೈಯಲ್ಲಿದೆ. ನೀವು ಹೇಳಿದಂತೆ 1 ಲಕ್ಲ ರೂಪಾಯಿಗಳಷ್ಚು ಹಣದಿಂದ ಭಾರತದ ಶೇರು ಪೇಟೆಯ ಮೂಡ್ ಅನ್ನು ನಿಯತ್ತಿಸುವ ಶಕ್ತಿ ಅವರಿಗಿದೆ. ಇಂದಿನ ದಿನಗಳಲ್ಲಿ ಶೇರು ಪೇಟೆಯು ವ್ಯಾಲ್ಯುವೇಶನ್ ಗಳಿಗಿಂತ ಮೂಡ್ ನ ಮೇಲೆ ಅತಿ ಹೆಚ್ಚು ನಿಂತಿದೆ

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: