ಬೇಬೀಸ್ ಬಸ್ ಔಟ್…

-ತೇಜಸ್ ಜೈನ್

ಬಾಳ ದೋಣಿ

ಒಂದಿನಾನೂ ತಪ್ದೆ ಸರಿಯಾಗಿ ಬೆಳೆಗ್ಗೆ ೬.೩೦ಗೆ ಕೂಗಕ್ಕೆ ಶುರು ಮಾಡ್ಬಿಡತ್ತೆ ನನ್ ಮೊಬೈಲು. ನಾನ್ ದಿನಾ ನಾಲ್ಕ್‌ ಸರಿ ಅದನ್ನ ತೆಪ್ಪಗಾಗ್ಸಿ ಮುಕ್ಕಾಲ್ಗಂಟೆ ಆದ್ಮೇಲೇ ಎದ್ದೇಳದು ಅಂತ ಗೊತ್ತಿದ್ರೂ ಒಂದೈದ್ ನಿಮಿಷನೂ ಹಿಂದೆ-ಮುಂದೆ ಹೊಡ್ಕೊಂಡಿಲ್ಲ. ಅವತ್ತೂ ಹಾಗೇ ಆಯ್ತು. ಎಲ್ಲಾ ದಿನದ್ ತರ ಅವತ್ತೂ ಒಂದೈದ್ ಸರ್ತಿ ಸ್ನ್ನೂಜ್ ಮಾಡಿದ್ಮೇಲೇನೇ ಎದ್ದಿದ್ದು.

ದಡಬಡ ಅಂತ ತಯಾರಾಗಿ, ಅಜ್ಜಿಗೆ ಒಂದ್‌ಸರ್ತಿ ಮುಖ ತೋರ್ಸಿ ಬೈಕ್ ಹತ್ತಿ ಐ.ಟಿ.ಪಿ.ಬಿ ಬಾಗ್ಲಿಗೆ ಬಂದಾಗ್ಲೇ ನಾನ್ ನನ್ ಐಡಿ ಮರ್ತು ಬಂದಿರದು ಗೊತ್ತಾಗಿದ್ದು. ೮ ಗಂಟೆ ಒಳಗೆ ಲಾಗ್‌ಇನ್ ಆಗ್ತಿದೌನು ೯ ದಾಟಿದ್ಮೇಲೆ ಮನೆ ಬಿಡಕ್ಕೆ ಶುರುಮಾಡಿ ಬಾಳಾ ದಿನಾನೇ ಆಗಿತ್ತು. ಇವತ್ತು ಸಮಯ ಆಗ್ಲೇ ೯.೪೦ ದಾಟಿತ್ತು.

ಬಿಗ್‌ಬಜಾರ್, ಎಸ್.ಎ.ಪಿ ಹತ್ರ ಟ್ರಾಫಿಕ್ ನೆನೆಸ್ಕೊಂಡು ಮತ್ತೆ ಮನೆ ತಂಕಾ ಹೋಗ್ಬರಕ್ಕೆ ಬೇಜಾರಾಯ್ತು. ಐ.ಟಿ.ಪಿ.ಬಿ ಬಾಗ್ಲಲ್ಲಿ ಸಂದರ್ಶಕರ ಪಾಸ್ ತಗೋಳೋಕ್ನಿಂತಿರೋರ್ನ ನೋಡಿ ಆ ಅರ್ಧ ಮೈಲಿ ಸಾಲಲ್ಲಿ ನಿಂತು ಕಾಯೋಕಿಂತ ಮುಕ್ಕಾಲ್ಗಂಟೆ ಟ್ರಾಫಿಕ್‌ನಲ್ಲಿ ಮನೆಗೆ ಹೋಗಿಬರೋದೇ ವಾಸಿ ಅಂನ್ಕೊಂಡೆ.
ಅಂದ್ಕೋಂಡ ಹಾಗೇ ಟ್ರಾಫಿಕ್‌ ಜಾಸ್ತಿನೇ ಇತ್ತು. ಅಡ್ಡ ನುಗ್ಗೋರ್ನ ಬೈಕೊಂಡು, ಫುಟ್‌ಪಾತ್ ಮೇಲೆ ಬೈಕ್ ಹತ್ತಿಸಿ ಮನೆ ಸೇರೋದ್ರೊಳಗೆ ಸಮಯ ಆಗ್ಲೇ ೧೦.೩೦ ದಾಟಿತ್ತು. ಹ್ಮೂಂ, ಇವತ್ತು ರಜ ಹಾಕ್ಬಿಡಣ ಅಂತ ಯೋಚ್ನೆ ಬಂತು. ಏನಾದ್ರು ಆಗ್ಲಿ ಆಫಿಸ್‌ಗೆ ಬೇಗ ಹೋಗಿ ಮಾಡೋದೂ ಅಷ್ಟರಲ್ಲೇ ಇದೆ ಅಂದ್ಕೊಂಡು ಪುನಃ ಹೊರಟೆ. ಯಾವತ್ತೂ ಇಲ್ಲದ ಟ್ರಾಫಿಕ್ ಇವತ್ತು ಸಿ.ಎಮ್.ಆರ್ ಹತ್ರದಿಂದನೇ ಕಚ್ಕೋಂಡಿತ್ತು.

ನಮ್ ವೋಲ್ವೋ ಬಸ್‌ಗಳೋ, ರಸ್ತೆ ಮಧ್ಯೆ ನಿಲ್ಲಿಸಿ ಜನರನ್ನ ಇಳಿಸ್ತಾವೆ. ಅಂಥಾ ೩ ಬಸ್‌ಗಳು ನನ್ನ ಮುಂದೆ ಟ್ರಾಫಿಕ್ಕಿಗೆ ನಾನ್ ಕಾರಣ ಅಲ್ಲ ಅನ್ನೋತರ ಒಂದನ್ನೊಂದು ಓವರ್‌ಟೇಕ್ ಮಾಡೋ ಆತುರದಲ್ಲಿ ಪೂರ್ಣ ರಸ್ತೆ ಜಾಮಾಗಿತ್ತು. ಒಳ್ಳೇ ಕಥೆ ಆಯ್ತಲ್ಲಾ, ಇವತ್ತು ಮೇಲ್‌ ಚೆಕ್ ಮಾಡಿದ ತಕ್ಷಣ ಕ್ಯಾಂಟೀನ್‌ಗೆ ಹೋಗೋದು ಬೇಡ, ಒಟ್ಟಿಗೇ ಊಟಕ್ಕೇ ಹೋದ್ರೆ ಆಯ್ತು ಅಂತ ಮನಸ್ನಲ್ಲೇ ಲೆಕ್ಕಾಚಾರಾ ಹಾಕ್ಕೊಂಡೆ.

ಅಷ್ಟರಲ್ಲಿ ಸ್ನೇಹಿತನೊಬ್ಬಂಗೆ ನನ್ನ ನೆನಪಾಗಿ ಕಾಲ್ ಮಾಡ್ದ. ಹೇಗೂ ಒಂದಿಂಚೂ ಮುಂದೆಹೋಗೋಕಾದ್ತಿರ್ಲಿಲ್ಲ, ಹೆಲ್ಮೆಟ್ ತೆಗೆದು ಮಾತಾಡೋಕ್ಕೆ ಶುರು ಮಾಡ್ದೆ. ನಾನ್ ೫ ನಿಮಿಷ ಮತಾಡಿ ಮುಗ್ಸಿದ್ರೂ ಟ್ರಾಫಿಕ್ ಕ್ಲಿಯರ್ ಆಗೋ ಯಾವ್ದೇ ಲಕ್ಷಣ ಕಾಣಿಸ್ತಿರ್ಲಿಲ್ಲ. ಸರಿ, ಇನ್ನೇನ್ ಮಾಡೋದು, ಸುತ್ತಾ ಮುತ್ತಾ ಇರೋ ಜನ್ರನ್ನಾ,ಎದುರುಗಡೆಯಿಂದ ಬರೋ ವೊಲ್ವೋಗಳನ್ನಾ, ಅದ್ರಲ್ಲಿರೋ ಹುಡ್ಗೀರ್ನ ಜನರನ್ನ ನೋಡ್ತಾ ನಿಂತ್ಕೊಂಡಿದ್ದೆ. ಐ.ಟಿ ನವ್ರು ಜಾಸ್ತಿ ಕೊಟ್ರೆ ಏನೂ ಆಗಲ್ಲಾ ಅಂತಾನೋ, ಅತ್ವಾ ಮಾಮೂಲಿ ಬಸ್‌ಗಳಿಗೆ ಅವ್ರು ಹತ್ತಲ್ಲ ಅಂತಾನೋ,ನಮ್ ರೂಟಲ್ಲಿ ಮಾಮೂಲಿ ಬಸ್‌ಗಳಿಗಿಂತ ವೋಲ್ವೂಗಳೇ ಜಾಸ್ತಿ.

ಐ.ಟಿ.ಪಿ.ಎಲ್‌ಗೆ ಹೋಗೋ ರಸ್ತೆ ಜಾಮಾಗಿದ್ರೂ ವಾಪಸ್ ಬರೋ ರಸ್ತೆ ಅಷ್ಟು ಟ್ರಾಫಿಕ್ ಇಲ್ರಿಲ್ಲ. ಅಷ್ಟರಲ್ಲಿ ಮೆಜೆಷ್ಟಿಕ್‌ಗೆ ಹೊರಟ್ಟಿದ್ದ ವೋಲ್ವೋ ಯಾವ್ದೂ ರೇಸ್ನಲ್ಲಿ ಬಿದ್ದಿರೋ ತರಾ ಜನರನ್ನ ಇಳಿಸಿ ಮುಂದೆ ಹೋಯ್ತು. ಮುಕ್ಕಾಲು ಇಂಜಿನೀರಿಂಗ್ ಕಾಲೇಜ್‌ನವ್ರಿದ್ರು. ಅವರೆಲ್ಲರ ಜೊತೆ ಒಂದು ೨-೩ ವರ್ಷದ ಮಗೂನೂ ಇಳಿದಿತ್ತು. ಟಿ.ವಿ ಜಾಹಿರಾತುಗಳಲ್ಲಿ ಬರುತ್ವಲ್ಲಾ, ಹಾಗೆ, ತುಂಬಾ ಮುದ್ದಾಗಿತ್ತು.

ಮಾಮೂಲಿ ರೀತಿಲಿ ನಾನು ದೂರದಿಂದಲೇ ‘ಹಾಯ್’ ಮಾಡ್ದೆ. ಒಂದ್ಸರ್ತಿ ನನ್ನ ನೋಡಿ ಸ್ವಲ್ಪ ನಕ್ಕು ಬೇರೆ ಕಡೆ ತಿರುಗ್ಬಿಡ್ತು. ಅದ್ರ ಶೂ ನೆಡೆದಾಗ ‘ಪುಯ್-ಪುಯ್’ ಅನ್ನುತ್ತಲ್ಲಾ, ಆತರದ್ದು. ನಾವೆಲ್ಲಾ ಟ್ರಾಫಿಕ್ ಮಧ್ಯೆ ಯಾವ್ದೋ ಚಿಂತೆಲಿ ಮುಳ್ಗಿರೋ ಹೊತ್ತಲ್ಲಿ ಯಾವ್ ಚಿಂತೇನೂ ಇಲ್ದೇ ಆರಾಮವಾಗಿ ನಗ್ತಿರೋ ಮಗೂ ನೋಡಿ ಒಂದು ಕ್ಷಣ ನಾನು ಕಳೆದು ಹೋಗಿದ್ದು ಸುಳ್ಳಲ್ಲ.

ಬಸ್‌ನಿಂದ ಇಳಿದ ಜನ ಸ್ವಲ್ಪ ಹೊತ್ತಲ್ಲಿ ಅವರವರ ಪಾಡಿಗೆ ನಡೆದು ಹೋದ್ರು. ಅಯ್ಯೋ, ಮಗು ಮಾತ್ರಾ ಒಂದೇ ನಿಂತಿದೆ. ಯಾರಾದ್ರು ಜೊತೆಗೆ ಇದ್ದಾರಾ ಅಂತ ನಾನು ನಿಂತಲ್ಲೇ ಹುಡುಕ್ತಿದ್ದೆ, ಅದು ಕಿಟಾರನೆ ಚೀರಿ ಅಳೋಕೆ ಶುರು ಮಾಡ್ತು… ಇನ್ನೂ ಒಂದೆರಡು ಕ್ಷಣ ನೋಡಿದೆ, ಊಹ್ಮೂಂ, ಯಾರೂ ಮಗು ಕಡೆಯವ್ರು ಅದರ ಹತ್ರ ಬತ್ರಿಲ್ಲ… ಮಗು ಬಸ್‌ನಿಂದಾನೇ ಇಳೀತಾ ಅಥವಾ ಮೊದ್ಲೇ ಅಲ್ಲೇ ಇತ್ತಾ? ಬಸ್‌ನಿಂದ ಇಳಿದ್ಮೇಲೆ ಮಗೂನ ಬಿಟ್ಟು ಹೋಗ್ಬಿಟ್ರಾ? ಅಥ್ವಾ ಮಗು ತಾನು ಮಾತ್ರಾ ಬಸ್‌ನಿಂದ ಇಳ್ಕೋಂಡ್‌ಬಿಡ್ತಾ??? ತಲೇಲಿ ತರಾವರಿ ಯೋಚನೆಗಳು ಬಂದು ಹೋದ್ವು. ತಿರುಗಿ ನೋಡ್ದೆ, ಟ್ರಾಫಿಕ್ ಸಾಗರದ ಮಧ್ಯೆ ಆ ಬಸ್ ಇನ್ನೂ ಕಾಣ್ತಾ ಇತ್ತು. ನನ್ ಬೈಕ್‍ನ ಅಲ್ಲೇ ಬಿಟ್ಟು ಮಗು ಹತ್ರ ಓಡ್ದೆ.

‘ಹಲೋ, ಈ ಮಗು ನಿಂಮ್ದಾ…?’ ಅಂತ ಸ್ವಲ್ಪ ದೂರ ನಿಂತಿದ್ದವನ್ರೆಲ್ಲಾ ಕೇಳಿದ್ರೂ ಹೌದು ಇಲ್ಲ ಅಂತಾ ಕೂಡಾ ಉತ್ರ ಕೊಡ್ದೆ ಜನ ನಿಂತಿದ್ರು. ಉಫ್, ನಾನು ಇರೋದು ಬೆಂಗ್ಳೂರಲ್ಲಿ ಅಂತ ನೆನಪ್ಮಾಡ್ಕೊಂಡು ಇಂಗ್ಲೀಷ್‌ನಲ್ಲೂ ಕೇಳಿದ್ದಾಯ್ತು (ನಂಗೆ ತಮಿಳು, ತೆಲುಗು ಬರೋಲ್ಲ). ಈಗ ‘ನೋ’ ಅಂತಾ ಉತ್ರ ಸಿಕ್ಕಿದ್ದೇ ಲಾಭ. ಮಗು ಬಸ್ ಕಡೆ ಕೈ ತೋಸ್ರಿ ‘ಮಮ್ಮಿ…’ ಅಂತ ಅಳ್ತಿರೋದ್ ಬಿಟ್ಟು ಇನ್ನೇನೂ ಮಾತಾಡ್ತಿಲ್ಲ. ನಿನ್ನಪ್ಪ, ಅಮ್ಮ ಎಲ್ಲಿ ಅಂತಾ ಮಗೂನ ಕನ್ನಡ ಇಂಗ್ಲೀಷ್ ಎರಡರಲ್ಲೂ ಕೇಳ್ದೆ. ಅಳೋದ್ ಬಿಟ್ಟು ಇನ್ನೇನೂ ಹೇಳ್ಲಿಲ್ಲ.

ನನ್ ಹತ್ರ ಇದಿದ್ದು ೩ ದಾರಿ. ಒಂದು ಮಗೂನ ಅಲ್ಲೆ ಬಿಟ್ಟು ನನ್ ಪಾಡಿಗೆ ನಾನು ಆಫಿಸ್‌ಗೆ ಹೋಗ್ಬಿಡೋದು. ಎರಡನೇದು ಪೋಲೀಸ್‌ಗೆ ಮಗೂ ಕೊಡೋದು. ಕಡೇದು ಇನ್ನೂ ಕಾಣ್ತಿರೋ ಬಸ್‌ನ ಫಾಲೋ ಮಾಡಿ ಹಿಡ್ದು, ಅದರಲ್ಲಿ ಮಗೂ ಕಡೆಯವ್ರು ಇದ್ದಾರಾಂತ ನೋಡೋದು.

ಮಗೂನ ಅಲ್ಲೇ ಬಿಟ್ಟು ಹೋಗಕ್ಕೆ ಮನಸಾಗ್ಲಿಲ್ಲ. ಮೊದ್ಲು ಬಸ್‌ನಲ್ಲಿ ನೋಡಿ ಅಲ್ಲಿ ಸಂಬಂಧ ಪಟ್ಟವ್ರು ಯಾರೂ ಇರ್ಲಿಲ್ಲ ಅಂದ್ರೆ ಪೋಲೀಸ್‌ಗೆ ಕೊಟ್ಟ್ರಾಯ್ತು ಅಂತ ಅಂದ್ಕೊಂಡು ಮಗೂನ ಎತ್ಕೊಂಡೆ. ಯಾರಾದ್ರು ತಪ್ಪಾಗಿ ತಿಳ್ಕೋಂಡು ಧರ್ಮದೇಟು ಕೊಡೋಕ್ಕೆ ಬರ್ತಿದ್ದಾರಾ ಅಂತ ನೋಡ್ದೆ. ಸುತ್ತಾ ಮುತ್ತಾ ಇದ್ದ ಜನ ಕಳ್ಳನನ್ನ ನೋಡೋತರ ನೋಡಿದ್ರೆ ಹೊರ್ತು ಯಾರಪ್ಪ ನೀನು, ಮಗು ಯಾರ್ದು ಅಂತ ಕೇಳೋ ಗೋಜಿಗೇ ಹೋಗ್ಲಿಲ್ಲ. ಜಾಸ್ತಿ ರಂಪಾಟ ಮಾಡ್ದೆ ಮಗು ಸುಮ್ನೆ ನಂಜೊತೆ ಬಂತು.

ರೋಡ್ ಕ್ರಾಸ್ ಮಾಡಿ ನನ್ ಬೈಕ್ ಹತ್ರ ಬರೋ ಹೊತ್ತಿಗೆ ಸ್ವಲ್ಪ ಟ್ರಾಫಿಕ್ ರಿಲೀಸ್ ಆಗಿತ್ತು. ಹತ್ತಿರದಲ್ಲಿ ಯು ಟರ್ನ್ ಇರ್ಲಿಲ್ಲ. ಮುಂದೆ ಹೋಗಿ ಯು ಟರ್ನ್ ತಗೊಂಡು ಬರೋತನಕ ಬಸ್ ನನಗಾಗಿ ಕಾಯ್ತಾ ನಿಂತಿರುತ್ತೆ ಅನ್ನೋ ಭ್ರಮೆಗೆ ಒಳಗಾಗ್ದೆ ರಾಂಗ್ ಸೈಡ್‌ನಲ್ಲೇ ಗಾಡಿ ಓಡಿಸ್ಕೋಂಡ್ ಹೊರ್ಟೆ.

ಎದುರಿಗೆ ಸಿಕ್ಕವರೆಲ್ಲಾ ನನ್ನ ಕೆಕ್ಕರಿಸಿ ನೋಡ್ತಿದ್ರು (ರಾಂಗ್ ಸೈಡ್‌ ಯಾರಾದ್ರು ಬಂದ್ರೆ ನಾನೂ ಹಾಗೇ ನೋಡೋದು ಬಿಡಿ). ಇಷ್ಟೋತಂಕ ಅಳ್ತಿದ್ದ ಮಗು ಈಗ ಸ್ವಲ್ಪ ಸುಮ್ಮನಾಗಿ ಸರ್ಕಸ್ ರೈಡ್ ಎಂಜಾಯ್ ಮಾಡ್ತಿತ್ತು. ಟಾಟಾ ಮೋಟಾರ್ಸ್ ಹತ್ರ ಎಡಗಡೆ ರೋಡಿಗೆ ಸೇರೋಕ್ಕೆ ಜಾಗ ಇತ್ತು. ಇನ್ನೇನು ಬೈಕ್ ಪಕ್ಕಕ್ಕೆ ತಿರುಗಿಸಬೇಕು, ಎದುರಿನಿಂದ ಬಂದ (ಅವ್ರು ಸರಿಯಾಗೇ ಬರ್ತಿದ್ರು, ನಾನೇ ರಾಂಗ್‌ಸೈಡ್ ನಲ್ಲಿದ್ದೆ) ಒಂದು ಸ್ವಿಫ್ಟ್ ಯು ಟರ್ನ್ ತಗೋಳಕ್ಕೆ ಹೋಗಿ ಹಿಂದೇನೂ ಹೋಗಕ್ಕಾಗ್ದೆ, ಮುಂದೆನೂ ಬರೋಕ್ಕಾಗ್ದೆ ಸಿಕ್ಕಾಕ್ಕೋಂಡ್ ಬಿಡ್ತು.

ಸಾಮಾನ್ಯವಾಗಿ ಇಂತಾ ಸನ್ನಿವೇಶಗಳು ಎದುರಾದಾಗ ಡ್ರೈವರ್ ಹುಡುಗನೋ, ಹುಡುಗಿಯೋ, ಅಜ್ಜನೋ ಅಜ್ಜಿಯೋ ಅಥವಾ ಲೈಸನ್ಸ್ ಇಲ್ಲದಿರೋ ಮಕ್ಕಳೋ ಅಂತ ಒಂದು ಊಹೆ ಮಾಡೊದು ನನ್ನ ಅಭ್ಯಾಸ. ಈ ಬಾರಿಯೂ ನನ್ನ ಊಹೆ ಸರಿಯಾಗಿತ್ತು. ಡ್ರೈವರ್ ಸೀಟ್‌ನಲ್ಲಿರೋರು ಗಾಬರಿಯಾಗಿ ಚಡಪಡಾಯಿಸ್ತಿರೋದು ಕಾಣಿಸ್ತಿತ್ತು. ಇದೆಲ್ಲಾ ಸರ್ಕಸ್‌ಗಳು ನಡಿತಿರ್ಬೇಕಾದ್ರೆ ಬಸ್ ಮುಂದೆ ಹೋಗಿದ್ದು ಕಾಣಿಸ್ತು. ಜನ ಏನಾರ್ದು ಬೈಕೊಳ್ಳಿ ಅಂತ ಅಂದ್ಕೋಂಡು ಎಲ್ಲರ ಮಧ್ಯೆನೇ ಬೈಕ್ ನುಗ್ಸಿ ಎಡಗಡೆಗೆ ಬಂದೆ.

ಬಸ್ ಆಗ್ಲೇ ಬ್ರೂಕ್‌ಫೀಲ್ಡ್ ನಿಲ್ದಾಣದಿಂದ ಮುಂದೆ ಹೋಗಿತ್ತು. ನನ್ ಸ್ನೇಹಿತ್ರು ಹೇಳೋ ಭಾಷೆಲಿ, ವಿಡಿಯೋ ಗೇಮ್ ತರ ಬೈಕ್ ಓಡಿಸ್ಕೋಂಡು ಹೋದೆ. ಕಾಸ್ಮೋಸ್ ಹತ್ರ ಹೊಸ್ದಾಗಿ ಹಂಪ್ ಹಾಕಿದ್ರು. ಅದ್ರ ಮುಂದೆ ಯಾದುದೋ ನದಿಯ ಮೂಲ ಹರಿದು ಹೋಗ್ತಿತ್ತು (ನಾವು ೨ ವರ್ಷದ ಹಿಂದೆ ಮನೆ ಹುಡ್ಕಕ್ಕೆ ಈ ಏರಿಯಾದಲ್ಲಿ ಅಡ್ಡಾಡ್ಬೇಕಾದ್ರೆ ಮೊದಲಸಲ ನೋಡಿದ್ದೆ. ಬಹುಶಃ ಈ ನದಿ ಮೂಲಕ್ಕೆ ಇನ್ನೂ ದೊಡ್ದ ಇತಿಹಾಸ ಇರಬಹುದು.

ಹನಿ-ಹನಿ ಉಳಿಸಿ ಅಂತ ಹೊಡ್ಕೊಳ್ಳೊ ಮಹಾನಗರಪಾಲಿಕೆಗೆ ವರ್ಷಗಳಿಂದ ನಿರಂತರ ಸೋರ್ತಿರೋ ಪೈಪ್ ಸರಿ ಮಾಡೋ ಮನಸ್ಸಾಗಿಲ್ಲ). ಅನಿವಾರ್ಯವಾಗಿ ಸ್ಪೀಡ್ ಕಮ್ಮಿ ಮಾಡ್ಕುಳ್ಳೇಬೇಕಾಯ್ತು. ಸರಿ, ಅಲ್ಲಿಂದ ರಿಲಯನ್ಸ್ ಫ್ರೆಶ್ ತನಕ ರೇಸ್ ನಡ್ಸಿದ್ರೂ ಕುಂದಲಹಳ್ಳಿ ಸರ್ಕಲ್ ಸಿಗ್ನಲ್‌ನಲ್ಲಿ ನನ್ನ ಮತ್ತು ಬಸ್ ಮಧ್ಯೆ ಹತ್ತಾರು ಬೇರೆ ವಾಹನಗಳು ಸೈಕಲ್ ಕೂಡಾ ಹೋಗೋಕ್ಕಾಗ್ದಷ್ಟು ಒತ್ತಾಗಿ ನಿಂತ್ಕೊಂಡಿದ್ವು. ಗಾಡಿ ಅಲ್ಲೇ ನಿಲ್ಸಿ ಮಗೂ ಎತ್ಕೋಂಡ್ ಬಸ್ ಹತ್ರ ಓಡ್ಬೇಕು ಅಂತ ಗಾಡಿಯಿಂದ ಇಳ್ಯಕ್ಕೂ, ಸಿಗ್ನಲ್ ಬೀಳಕ್ಕೂ ಸರಿಹೋಯ್ತು. ಇನ್ನೂ ಹಸಿರು ದೀಪ ಹತ್ತಿಲ್ಲ, ಆಗ್ಲೇ ನಮ್ ಬಸ್ ಡ್ರೈವರ್ ಮಹಾಶಯ ಬಲಗಡೆ ಮಾರುತಹಳ್ಳಿ ಕಡೆ ಬಸ್ ತಿರುಗಿಸಿಯಾಗಿತ್ತು (ಭಾರತದಲ್ಲಿ ಎಫ್೧ ರೇಸ್ಗಳು ಯಾಕೆ ಜಾಸ್ತಿ ಪ್ರಸಿದ್ದಿಯಲ್ಲಿಲ್ಲ ಅಂತ ಅವತ್ತು ಗೊತ್ತಾಯ್ತು.

ಜನಕ್ಕೆ ದಿನಾ ರೇಸ್ ಮಾಡಿ, ಎಫ್೧ನಲ್ಲಿ ಏನೂ ಸ್ಪೆಷಲ್ ಕಾಣೋಲ್ವೇನೋ!). ನಾನು ಕುಂದಲಹಳ್ಳಿ ಸರ್ಕಲ್ ಕ್ರಾಸ್ ಮಾಡೋ ಹೊತ್ತಿಗೆ ಬಸ್ ಒಂದು ಸ್ಟಾಪ್ ಕೊಟ್ಟು ಮುಂದೆ ಹೊರಟಾಗಿತ್ತು. ಆ ರೋಡ್ನಲ್ಲಿ ಟ್ರಾಫಿಕ್ಕೇ ಇರ್ಲಿಲ್ಲ. ಮಾರುತಹಳ್ಳಿ ಬ್ರಿಡ್ಜ್ ಮೇಲೆ ಇದ್ದ ಟ್ರಾಫಿಕ್ಕಿಗೇ ಮತ್ತೆ ಬಸ್ ನಿಂತಿದ್ದು. ಈ ಸಾರಿ ಯಾವ್ದೇ ತಪ್ಪು ಮಾಡ್ದೇ ಬಸ್ನ ಹಿಂದೆನೇ ಹೋಗಿ ಬೈಕ್ ನಿಲ್ಲಿಸಿ ಮಗು ಎತ್ಕೊಂಡು ಬಸ್ ಬಾಗಿಲಿನ ಹತ್ರ ಓಡಿದೆ.

ಹಿಂದೆ ೩ ಸ್ಟಾಪ್‌ಗಳಲ್ಲಿ ಮಗು ಕಡೆಯವ್ರು ಇಳ್ಕೋಂಡ್ ಬಿಟ್ರಾಂತ ಒಂದು ಸಣ್ಣ ಭಯ ಶುರುವಾಗಿತ್ತು. ಬಸ್ ಪಕ್ಕಕ್ಕೆ ಹೋಗ್ತಿದ್ದ ಹಾಗೇ ಪಪ್ಪಾ… ಅಂತ ಯಾರನ್ನೋ ತೋರ್ಸಿ ಅಳೋಕ್ಕೆ ಶುರು ಮಾಡ್ತು. ಉಫ್, ನಾನು ಮೊದಲಸಲ ಒಂದು ಮಗು ಅಳೋದು ಕೇಳಿ ಖುಷ್ ಆಗಿದ್ದೆ. ಆ ವ್ಯಕ್ತಿ ಸುಮಾರು ೩೫ರ ಆಜುಜಾಜಿನವರಿರಬೇಕು. ಮಗೂನ ಕಿಡ್ಕಿಲಿ ನೋಡಿದ ತಕ್ಷಣ ಬಾಗಿಲು ತೆಗ್ಸಿ ಓಡಿ ಬಂದ್ರು. ಆಚೆ ಬಂದವ್ರೇ “೧ ಮಿನಿಟ್ ಸಾರ್…” ಅಂತೇಳಿ ಮತ್ತೆ ಬಸ್ ಒಳಗೆ ಓಡಿದ್ರು, ಮಗು ನನ್ ಹತ್ರಾನೇ ಬಿಟ್ಟು! ಇದೋಳ್ಳೇ ಕಥೆ ಆಯ್ತಲಪ್ಪಾ ಅಂತ ಏನೂ ಅರ್ಥ ಆಗ್ದೇ ನಿಂತಿದ್ದೆ. ಈ ನಡುವೆ ಮಗು ಮತ್ತೆ ಅಳು ನಿಲ್ಲಿಸಿತ್ತು. ಬಸ್‍ನಿಂದ ಆ ವ್ಯಕ್ತಿ ಒಬ್ಬರು ಹೆಂಗಸಿನ ಜೊತೆ ಹೊರಗೆ ಬಂದ್ರು. ಮಗುವಿನ ತಾಯಿ ಅದನ್ನ ಎಳ್ಕೋಂಡು ತಬ್ಬಿ ಅಳೋಕ್ಕೆ ಶುರು ಮಾಡಿದ್ರು.

ಇಷ್ಟೋತಂಕ ಸುಮ್ನಿದ್ದ ಮಗೂನೂ ಅಳೋಕೆ ಶುರು ಮಾಡ್ತು. ನಂಗೆ ‘ಥ್ಯಾಂಕ್ಸ್ ಸಾರ್..’ ಅಂತೇಳಿದ ಆ ವ್ಯಕ್ತಿ ಮಗು ತಾಯಿನ ಹಿಂದಿ ತರಾ ಕೇಳೋ ಭಾಷೆಲಿ ಬಯ್ಯೋಕ್ಕೆ ಶುರು ಮಾಡ್ದ. ನಂಗೆ ಆಫಿಸ್ ನೆನಪಾಗಿ, ಮಾಮೂಲಿ ಬೈಗುಳ ಬೈದು, ಮಗು ಒಂದೇ ಹೇಗೆ ಬಸ್‌ನಿಂದ ಕಳಗಿಳಿತು ಅಂತ ತಿಳ್ಕೋಂಡು ಹೊರಟೆ. ತಿರುಗಿ ನೋಡಿದೆ, ಮಗು ಇನ್ನೂ ಬಿಕ್ಕಳಿಸಿ ಅಳುತ್ತಿತ್ತು.

ಮುಂದೆ ಅರ್ಧ ಕಿಲೋಮೀಟರ್ ತನಕ ಯು ಟರ್ನ್ ಇರ್ಲಿಲ್ಲ. ೧೧.೧೫ ದಾಟಿದ್ರೂ ಆಫಿಸ್‌ನಲ್ಲಿ ಲಾಗ್‌ಇನ್ ಆಗಿ, ಕ್ಯಾಂಟೀನ್‌ನಲ್ಲಿ ಟೀ ಹೀರುತ್ತಾ ಎಲ್ಲವನ್ನೂ ಮತ್ತೆ ಯೋಚಿಸಿದೆ. ಅಲ್ಲಿ ಆದದ್ದಿಷ್ಟು, ಐ.ಟಿ.ಪಿ.ಎಲ್ ಹತ್ರ ಮಗು ಮತ್ತು ಅದರ ತಂದೆ ಬಸ್‌ನ ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದಾರೆ, ಅದರ ತಾಯಿ ಮುಂಭಾಗದ ಸೀಟ್‌.

ಸ್ವಲ್ಪ ಹೊತ್ತಿನಲ್ಲಿ ಆಕೆಗೆ ನಿದ್ದೆ ಹತ್ತಿದೆ. ಮಗು ತಾಯಿ ಹತ್ರ ಹೋಗ್ಬೇಕು ಅಂತ ಹೇಳಿದಕ್ಕೆ ಅದರ ತಂದೆ ಮುಂದೆ ಇದ್ದಾರೆ ಹೋಗು ಅಂತ ಬಿಟ್ಟು ತಾನೂ ನಿದ್ದೆ ಮಾಡಿದ್ದಾರೆ. ಅಷ್ಟರಲ್ಲಿ ಸಿ.ಎಮ್.ಆರ್ ಸ್ಟಾಪ್ ಬಂದಿದೆ. ಬೇರೇ ಜನಗಳ ಜೋತೆ ಮಗೂನೂ ಇಳ್ಕೋಂಡ್ಬಿಟ್ಟಿದೆ…

4 ಟಿಪ್ಪಣಿಗಳು (+add yours?)

 1. ಕುಮಾರ ರೈತ
  ನವೆಂ 03, 2010 @ 21:17:43

  ಅಷ್ಟೆಲ್ಲ ರಿಸ್ಕ್ ತಗೊಂಡ ನಿಮ್ಮ ಮಾನವೀಯ ಗುಣ ದೊಡ್ಡದು

  ಉತ್ತರ

 2. ವಸುಧೇಂದ್ರ
  ನವೆಂ 03, 2010 @ 15:38:32

  ಮಗುವನ್ನು ತಂದೆ-ತಾಯಿಗೆ ತಲುಪಿಸುವಲ್ಲಿ ನೀವು ವಹಿಸಿದ ಶ್ರಮ ಶ್ಲಾಘನೀಯ. ನಿಮ್ಮ ಅನುಭವ ಕಣ್ಣುಗಳನ್ನು ತೇವಗೊಳಿಸಿತು. ನಿಮ್ಮ ಒಳ್ಳೆಯತನ ಮನಸ್ಸನ್ನು ಹಗುರಗೊಳಿಸಿತು.

  ವಸುಧೇಂದ್ರ

  ಉತ್ತರ

 3. Radhika
  ನವೆಂ 03, 2010 @ 12:23:44

  So very nice of you. I appreciate your kind gesture.

  ಉತ್ತರ

 4. Muralidhar bhat
  ನವೆಂ 03, 2010 @ 10:51:10

  very beautiful and heart warming story

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: