ನಿಮ್ಮಿ ಮತ್ತು ರಟ್ಟಿನ ಬಾಕ್ಸ್ …

-ಉದಯ್ ಇಟಗಿ

ಬಿಸಿಲ ಹನಿ

ನಾನು ಲಂಕೇಶ್ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ತೊಂಬತ್ತರ ದಶಕದ ಮಧ್ಯಭಾಗದಿಂದ. ಅವು ನನ್ನ ಕಾಲೇಜು ದಿನಗಳು. ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಹದಿ ಹರೆಯದ ಹಳವಂಡಗಳಿಗೆ ಜೋತುಬಿದ್ದ ಕಾಲವದು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಲ್ಲಿ ವಯೋಸಹಜನುಗುಣವಾಗಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು “ತುಂಟಾಟ”. ಜೊತೆಗೆ ನೀಲು ಪದ್ಯಗಳು ಮತ್ತು ನಿಮ್ಮಿ ಕಾಲಂ.

ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಲಂಕೇಶರೇ ಮೊದಲಿಗೆ ಅದನ್ನು ಪರಕಾಯ ಪ್ರವೇಶ ಮಾಡಿ ಬರೆದರು. ಆನಂತರ ಪ್ರತಿಭಾ ನಂದಕುಮಾರ್ ಒಂದಷ್ಟು ದಿವಸ ಬರೆದರು. ಮುಂದೆ ಅದನ್ನು ಅನಿತಾ ನಟರಾಜ್ ಹುಳಿಯಾರ್ ಮುಂದುವರೆಸಿಕೊಂಡು ಹೋದರು.

ನಿಮ್ಮಿ ಕಾಲಂ ಆ ಕಾಲದ ಹದಿ ಹರೆಯದವರ ಹೃದಯಕ್ಕೆ ಲಗ್ಗೆ ಹಾಕುವದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಏಕೆಂದರೆ ಅದು ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಒಂದಿಷ್ಟು ಅವರ ಜಗಳ, ಮುನಿಸು ಮತ್ತು ಸಲ್ಲಾಪಗಳಿಂದ ರಾರಾಜಿಸುವದರ ಮೂಲಕ ನನ್ನಂತ ಹದಿ ಹರೆಯದವರನ್ನು ಹಿಡಿದಿಟ್ಟಿತ್ತು. ಹೆಚ್ಚು ಕಮ್ಮಿ ನಿಮ್ಮಿ ನನ್ನಂತ ಎಷ್ಟೊ ಹುಡುಗರಿಗೆ ಪ್ರೇಯಸಿಯಾಗಿ ಬಿಟ್ಟಿದ್ದಳು. ಅವಳ ಕಚುಗುಳಿಯಂತ ಬರಹ ನನ್ನನ್ನು ಬಹುವಾಗಿ ತಾಕಿತ್ತು.

ಬಹಳಷ್ಟು ಸಾರಿ ನಿಮ್ಮಿ ಅವಳು ಮತ್ತು ಅವಳ ಪ್ರಿಯಕರ ಅಮರ ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದಿದ್ದರು, ಏನು ಗಿಫ್ಟು ತಂದಿದ್ದರು ಬರಿ ಇಂಥವೇ ವಿಷಯಗಳೊಂದಿಗೆ ಬೋರ್ ಹೊಡೆಸುತ್ತಿದ್ದಳು. ಆದರೆ ಇವೆಲ್ಲವುಗಳ ಮಧ್ಯ ಆಗೊಮ್ಮೆ ಈಗೊಮ್ಮೆ ಮನಸ್ಸನ್ನು ತಾಕುವಂಥ ತುಂಬಾ ಇಂಟರೆಸ್ಟಿಂಗ್ ವಿಷಯಗಳನ್ನು ಸಹ ಬರೆಯುತ್ತಿದ್ದಳು. ಅಂಥವುಗಳಲ್ಲಿ ರಟ್ಟಿನ ಬಾಕ್ಸಿನ ಕತೆಯೊಂದು. ನಿಮ್ಮಿ ಬರೆದ ಆ ಅನುಭವಕಥನವನ್ನು ನಾನು ಓದಿದಂತೆ ಜ್ಞಾಪಿಸಿಕೊಂಡು ಅವಳ ಧಾಟಿಯಲ್ಲಿಯೇ ನಿಮ್ಮ ಮುಂದೆ ಇಡುತ್ತಿದ್ದೇನೆ.

ಒಂದು ಇಳಿಸಂಜೆ ನಾನು ನನ್ನ ಸ್ಕೂಟಿಯನ್ನು ತೆಗೆದುಕೊಂಡು ಮೈಸೂರಿನ ಚಾಮುಂಡಿ ಬೆಟ್ಟದಿಂದ ವಾಪಾಸಾಗುತ್ತಿದ್ದೆ. ಅವತ್ತು ಸಣ್ಣಗೆ ತುಂತುರು ಮಳೆ ಹುಯ್ಯುತ್ತಿತ್ತು. ಹಾಗೆ ಹೋಗುವಾಗ ಆ ರಸ್ತೆಯ ಪಕ್ಕದಲ್ಲಿ ಗಾರೆ ಕೆಲಸ ಮಾಡುವ ಹೆಂಗಸೊಬ್ಬಳು ತನ್ನ ಪುಟ್ಟ ಗುಡಿಸಿಲಿನಲ್ಲಿ ಕುಳಿತುಕೊಂಡು ಒಲೆ ಹೊತ್ತಿಸಲು ಹರ ಸಾಹಸ ಮಾಡುತ್ತಿದ್ದಳು ಮತ್ತು ಏನೇನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಳು. ಅವಳು ಉಟ್ಟಿದ್ದ ಸೀರೆ ಮಾಸಿ ಹೋಗಿ ರವಿಕೆಯ ತೋಳು ಎಡಗೈ ಹತ್ತಿರ ಸ್ವಲ್ಪ ಹರಿದು ಹೋಗಿತ್ತು.

ಬಹುಶಃ ಅವಳು ಆಗಷ್ಟೆ ಹೊರಗಿನ ಕೆಲಸ ಮುಗಿಸಿ ಬಂದಿದ್ದರಿಂದ ಅವಳ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಬಡತನ ಅವಳನ್ನು ಹಿಂಡಿ ಹಿಪ್ಪಿ ಮಾಡಿದಂತಿತ್ತು. ಅದೇಕೊ ಅವಳ ಮುಖದಲ್ಲಿನ ಮುಗ್ಧತೆ ಹಾಗು ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುವ ಬಡತನದ ಛಾಯೆ ನನ್ನಲ್ಲಿ ತಟ್ಟನೆ ಒಂದು ಕರುಣಾ ಭಾವವನ್ನು ಮೂಡಿಸಿತು. ಎಂದೂ ಇಂಥ ಬಡತನದ ಬಿಸಿ ಅನುಭವಕ್ಕೆ ತೆರೆದುಕೊಳ್ಳದ ಶ್ರೀಮಂತ ಹುಡುಗಿಯಾದ ನನಗೆ ಏಕೋ ಆ ಹೆಂಗಸಿನ ಹೋರಾಟದ ಬದುಕು ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿತು.

ನಾನು ತಕ್ಷಣ ನನ್ನ ಸ್ಕೂಟಿಯನ್ನು ನಿಲ್ಲಿಸಿ ಆ ಹೆಂಗಸು ಹೇಗೆ ಒಲೆ ಹೊತ್ತಿಸಬಹುದು ಎಂದು ದೂರದಿಂದಲೇ ನೋಡುತ್ತಾ ನಿಂತೆ. ಮೊದಲು ಅವಳು ಸೌದೆಯನ್ನು ಇಟ್ಟು, ಸ್ವಲ್ಪ ಸೀಮೆ ಎಣ್ಣೆ ಸುರಿದು, ಕಡ್ಡಿ ಗೀರಿ ಬೆಂಕಿ ಹೊತ್ತಿಸಲು ನೋಡಿದಳು. ಊಹೂಂ, ಒಲೆ ಹೊತ್ತಿಕೊಳ್ಳಲಿಲ್ಲ. ಬರಿ ಹೊಗೆ ಮಾತ್ರ ಏಳುತ್ತಲೇ ಇತ್ತು. ಪಕ್ಕದಲ್ಲಿಯೇ ಇದ್ದ ರಟ್ಟಿನ ಊದುಗೊಳವೆಯನ್ನು ತೆಗೆದುಕೊಂಡು ಊದೇ ಊದಿದಳು. ಒಲೆ ಹೊತ್ತಲಿಲ್ಲ. ನಂತರ ಎಂದೋ ಆಯ್ದಿಟ್ಟಿದ್ದ ಹಾಳೆಯ ಚೂರುಗಳನ್ನು ಒಲೆಯಲ್ಲಿ ಹಾಕಿ ಹೊತ್ತಿಸಲು ನೋಡಿದಳು. ಈಗ ಬರಿ ಹೊಗೆ ಎದ್ದಿತು. ಆದರೆ ಬೆಂಕಿ ಹೊತ್ತಿಕೊಳ್ಳಲಿಲ್ಲ. ಆ ಹೊಗೆಗೆ ಅವಳು ಏದುಸಿರು ಬಿಡುತ್ತಾ ಹತ್ತಾರು ಬಾರಿ ಕೆಮ್ಮಿದಳು. ಜೊತೆಗೆ ಅವಳ ಕಣ್ಣು, ಮೂಗಿಂದ ನೀರು ಸುರಿಯಿತು.

ಆಮೇಲೆ ಒಣ ಹುಲ್ಲುಕಡಿಗಳನ್ನು ತೆಗೆದುಕೊಂಡು ಒಂದಿಷ್ಟು ಪುರಳೆ ಮಾಡಿ ಬೆಂಕಿ ಹೊತ್ತಿಸಲು ನೋಡಿದಳು. ಬರಿ ಪುರಳೆ ಮಾತ್ರ ಉರಿದು ಮುಖ್ಯವಾದ ಸೌದೆ ಹೊತ್ತಿಕೊಳ್ಳಲಿಲ್ಲ. ಬಹುಶಃ ಮಳೆಯಿಂದಾಗಿ ಸೌದೆಗಳು ಒದ್ದೆಯಾಗಿ ಹಸಿ ಹಸಿಯಾಗಿದ್ದವೆಂದು ಕಾಣುತ್ತದೆ. ಅಷ್ಟರಲ್ಲಿ ಅವಳ ಐದು ವರ್ಷದ ಕಂದಮ್ಮ “ಅಮ್ಮಾ, ಹಸಿವಾಗ್ತಿದೆ. ಬೇಗ ಮುದ್ದೆ ಬೇಯಿಸಮ್ಮ” ಎಂದು ಅವಳ ಸೆರಗನ್ನು ಹಿಡಿದು ಎಳೆದಾಗ ಅವಳ ಕರುಳು ಚುರ್ರು ಎಂದಿರಬೇಕು. ಇನ್ನು ತಡ ಮಾಡದೆ ಗುಡಿಸಿಲಿನಿಂದ ಹೊರ ಬಂದು ಹತ್ತಿರದಲ್ಲಿಯೇ ಇದ್ದ ಕಿರಾಣಿ ಅಂಗಡಿಯೆಡೆಗೆ ನಡೆದಳು. ನಾನು ಇವಳೇನು ಮಾಡಬಹುದೆಂದು ಕುತೂಹಲದಿಂದ ಅವಳನ್ನೇ ಹಿಂಬಾಲಿಸಿದೆ.

ಆ ಕಿರಾಣಿ ಅಂಗಡಿಯವನ ಹತ್ತಿರ ಹೋಗಿ “ಬುದ್ಧಿ, ಇವತ್ತು ಸೌದೆಯೆಲ್ಲಾ ನೆಂದು ಹೋಗಿ ಯಾಕೋ ಒಲೆನೇ ಹತ್ಕೊಳ್ತಾ ಇಲ್ಲ. ಅದ್ಕೆ ನಿಮ್ತಾವ ಸಾಮಾನು ತುಂಬೋ ಖಾಲಿ ರಟ್ಟಿನ ಬಾಕ್ಸು ಇದ್ರೆ ಕೊಡ್ತೀರಾ ಬುದ್ಧಿ. ಅದನ್ನೇ ಒಲೆಯೊಳಗಿಟ್ಟು ಹೆಂಗೋ ಉರಿ ಹೊತ್ತಿಸಿ ನನ್ನ ಮಗೀಗೆ ಒಂದಿಷ್ಟು ಮುದ್ದೆ ಬೇಸಿ ಹಾಕ್ತಿನಿ. ಬೋ ಹಸ್ಗೊಂಡಿದೆ” ಎಂದು ಬೇಡಿದಳು. ಅವಳು ಅಷ್ಟು ಕೇಳಿದ್ದೆ ತಡ ಆ ಕಿರಾಣಿ ಅಂಗಡಿಯವ ”ರಟ್ಟಿನ ಬಾಕ್ಸಂತೆ ರಟ್ಟಿನ ಬಾಕ್ಸು. ಎಲ್ಲಿಂದ ತರೋಣಮ್ಮಾ? ಯಾವ ರಟ್ಟಿನ ಬಾಕ್ಸು ಇಲ್ಲ, ಏನೂ ಇಲ್ಲ.

ಹೋಗಮ್ಮಾ ಹೋಗು. ಬಂದಬಿಟ್ಲು ದೊಡ್ಡದಾಗಿ ರಟ್ಟಿನ ಬಾಕ್ಸು ಕೇಳ್ಕೊಂಡು” ಎಂದು ಅವಳ ಮೇಲೆ ಹರಿಹಾಯ್ದ. ಪಾಪ, ಅವಳು ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಸಪ್ಪೆ ಮುಖ ಹಾಕಿಕೊಂಡು ಗುಡಿಸಿಲಿನತ್ತ ಹೆಜ್ಜೆ ಹಾಕಿದಳು. ನನಗೆ ಅವಳ ಅವಸ್ಥೆಯನ್ನು ನೋಡಿ ಮರುಕ ಉಂಟಾಯಿತು. ಹಾಗೆಯೇ ಕಿರಾಣಿ ಅಂಗಡಿಯವನ ಮೇಲೆ ಕೋಪ ಬಂತು. ನಾನೇ ನೋಡುತ್ತಿದ್ದಂತೆ ಅವನ ಬಳಿ ಅಷ್ಟೊಂದು ರಟ್ಟಿನ ಬಾಕ್ಸುಗಳಿದ್ದವು. ಅದರಲ್ಲಿ ಒಂದನ್ನು ಕೊಟ್ಟಿದ್ದರೆ ಅವನ ಗಂಟೇನು ಹೋಗುತ್ತಿತ್ತು? ಎಂದು ಬೇಸರಗೊಳ್ಳುತ್ತಾ ತಡಮಾಡದೆ ಅವನ ಬಳಿ ಹೋಗಿ “ನನಗೆ ಒಂದು ಖಾಲಿ ರಟ್ಟಿನ ಬಾಕ್ಸು ಬೇಕು.

ಅತ್ಯವಶ್ಯವಾಗಿ ಬೇಕು. ನಾನದಕ್ಕೆ ದುಡ್ಡು ಕೊಡ್ತೇನೆ” ಎಂದು ಕೇಳಿದೆ. “ಅಯ್ಯೋ, ಒಂದೇನು ಮೇಡಂ, ಅಂಥಾವು ಹತ್ತು ಬೇಕಾದ್ರೆ ತಗೊಂಡು ಹೋಗಿ, ನಾವವನ್ನ ಇಟ್ಕೊಂಡು ಏನ್ ಮಾಡೋದಿದೆ? ಮತ್ತೆ ಖಾಲಿ ಬಾಕ್ಸುಗಳಿಗೆಲ್ಲ ದುಡ್ಡು ಯಾಕೆ ಮೇಡಂ? ಹಂಗೇ ಸುಮ್ನೆ ತಗೊಂಡು ಹೋಗಿ ಮೇಡಂ” ಎಂದು ನನ್ನ ನೋಡಿ ನಗುತ್ತಾ “ಏಯ್, ಮೇಡಮ್ಮೋರಿಗೆ ಒಂದಿಷ್ಟು ರಟ್ಟಿನ ಬಾಕ್ಸು ಅಂತೆ ಕೊಟ್ಟು ಕಳಿಸೋ” ಎಂದು ತನ್ನ ಕೆಲಸದ ಆಳಿಗೆ ತಾಕೀತು ಮಾಡಿದ. ಅವನು ಆ ಖಾಲಿ ರಟ್ಟಿನ ಬಾಕ್ಸುಗಳನ್ನೆಲ್ಲಾ ಸರಿಯಾಗಿ ಮಡಿಚಿ ಒಂದರ ಮೇಲೆ ಒಂದಿಟ್ಟು ದಾರವನ್ನು ಕಟ್ಟಿ ನನ್ನ ಕೈಗಿತ್ತ. ನಾನು ಆ ಅಂಗಡಿಯವನಿಗೆ ಥ್ಯಾಂಕ್ಸ್ ಹೇಳಿ ಅವಳ ಗುಡಿಸಿಲಿನತ್ತ ನಡೆದೆ.

ನಾನು ಅವಳ ಗುಡಿಸಿಲಿನೊಳಕ್ಕೆ ನಡೆದು ಆ ಬಾಕ್ಷುಗಳನ್ನೆಲ್ಲಾ ಅವಳ ಮುಂದೆ ಇಟ್ಟು “ತಗೋ ಇವನ್ನ, ಇನ್ನೂ ಎಂಟು ದಿನಕ್ಕಾಗುವಷ್ಟು ತಂದಿದೇನೆ” ಎಂದು ಹೇಳಿದೆ. ಅವಳು ಕೃತಜ್ಞತಾ ಭಾವದಿಂದ ನನ್ನ ಕೈಯನ್ನು ಹಿಡಿದು “ಮುಂದಿನ ಜನ್ಮಾ ಅಂತಾ ಇದ್ರೆ ನಾನ್ ನಿನ್ ಹೊಟ್ಯಾಗ ಮಗಳಾಗಿ ಉಟ್ಟಿ ನಿನ್ ಉಪಕಾರ ತಿರಿಸ್ತೇನವ್ವಾ” ಎಂದು ಕಣ್ಣೀರಿಟ್ಟಳು. ನಾನು “ಅಳಬೇಡ. ಮಗೂಗೆ ಬೇಗ ಮುದ್ದೆ ಬೇಸಿ ಹಾಕಮ್ಮ” ಎಂದೆ.

ಅವಳು ಮುದ್ದೆ ಬೇಯಿಸಿ ಮಗೂಗೆ ಉಣ್ಣಿಸೋವರೆಗೆ ಅವಳ ಹತ್ತಿರ ಇದ್ದು ಆ ದೃಶ್ಯಗಳನ್ನು ಕಣ್ತುಂಬಾ ತುಂಬಿಕೊಂಡು ಮನೆಯತ್ತ ಹೊರಟೆ. ರಾತ್ರಿ ಎಷ್ಟು ಹೊತ್ತಾದರು ನಿದ್ರೆ ಬರಲಿಲ್ಲ. ಏಕೋ ಈ ಘಟನೆ ನನ್ನನ್ನು ಕೊರೆಯುತ್ತಲೇ ಇತ್ತು. ಹಾಗೆ ನೋಡಿದರೆ ರಟ್ಟಿನ ಬಾಕ್ಸುಗಳು ನನಗೆ ಅವಶ್ಯವಾಗಿರಲಿಲ್ಲ. ಅವಶ್ಯವಿದ್ದದ್ದು ಆ ಹೆಂಗಸಿಗೆ.

ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಂಗಡಿಯವ ಅವನ್ನು ಅವಳಿಗೆ ಕೊಡದೆ ನನಗೇಕೆ ಕೊಟ್ಟ? ಅಂದರೆ ನನ್ನ ಯೌವನ, ರೂಪ ನೋಡಿ ಕೊಟ್ಟನೆ? ಅಥವಾ ನಾನು ವಿದ್ಯಾವಂತೆಯೆಂದು ಕೊಟ್ಟನೆ? ಅಥವಾ ನಾನು ಕೇಳಿದ ರೀತಿ ಆಧುನಿಕ ಬದುಕಿನ ನಯ ನಾಜೂಕತೆಯಿಂದ ಕೂಡಿತ್ತೆಂದು ಕೊಟ್ಟನೆ? ಅಥವಾ ಜನರಿಗೆ ಬಡತನ, ಬಡವರ ಗೋಳನ್ನು ಅರ್ಥ ಮಾಡಿಕೊಳ್ಳದಷ್ಟು ವ್ಯವಧಾನ, ತಾಳ್ಮೆ ಹೊರಟು ಹೋಗಿದೆಯೆ? ಅಥವಾ ಇವರೆಲ್ಲಾ ಇದ್ದವರಿಗೆ ಮಾತ್ರ ಸಹಾಯ ಮಾಡುತ್ತಾರಾ? ಉತ್ತರ ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ.

4 ಟಿಪ್ಪಣಿಗಳು (+add yours?)

 1. anasuya mr
  ನವೆಂ 03, 2010 @ 21:31:13

  Nijajivanadallu hige tane . Mukha nodi mane hakuttare jana.

  ಉತ್ತರ

 2. harsha
  ನವೆಂ 03, 2010 @ 16:34:17

  Heart touching…Thanks for sharing this memoir with us..

  ಉತ್ತರ

 3. ಆಸು ಹೆಗ್ಡೆ
  ನವೆಂ 03, 2010 @ 15:17:50

  ಉದಯ ಇಟಗಿಯವರೇ,
  ತೊಂಭತ್ತರ ದಶಕದ ಮಧ್ಯಭಾಗ ಎನ್ನುವುದು ತಪ್ಪು,
  ಅದು ೧೯೯೦ರ ದಶಕದ ಮಧ್ಯಭಾಗವೆಂದರೇ ಒಪ್ಪು!

  ಉಳಿದಂತೆ ನೆನಪಿಸಿಕೊಂಡು ಬರೆದ ಕತೆ ಇಷ್ಟವಾಯ್ತು.

  ಉತ್ತರ

 4. Mahesh
  ನವೆಂ 03, 2010 @ 14:58:49

  ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಗಂಡಸು ಹೆಂಗಸಾಗಿ ಪರಕಾಯ ಪ್ರವೇಶ ಮಾಡಿ ಬರೆಯುವದನ್ನು ಸ್ತ್ರೀವಾದಿಗಳು ಒಪ್ಪಿಕೊಳ್ಳಬಹುದೇ.. ಹೆಂಗಸರು ಗಂಡಸಾಗಿ ಪರಕಾಯ ಪ್ರವೇಶ ಮಾಡಿ ಬರೆಯುವವರೂ ಇದ್ದಾರೆಯೇ.. ಕುತೂಹಲ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: