‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ…

ಹಳೇ ಮಂಚದ  ಕಥೆಯು

-ವೆಂಕಟ್ರಮಣ ಗೌಡ

ಅವಳದೇ ಕನ್ನಡಿ, ಅವಳದೇ ಮಂಚದ ಒಂದು ಪ್ರತ್ಯೇಕ ಪ್ರಪಂಚದಂತೆ  ಆ ಅಷ್ಟು ದೊಡ್ಡ ಮನೆಯಲ್ಲಿ  ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿಂದ ಗೌಡನ ಮಗಳು ಬೇರೆ ಯೆಂಬಂತೆ ಮಾಡಿರುವಲ್ಲಿ ಇತರ ಹಲವಾರು ಸಂಗತಿಗಳೊಂದಿಗೆ ಕೋಣೆಯ ಪಾಲೂ ಬಹಳವೇ ಇದೆ.

ತನ್ನ ಓರಗೆಯ ಎಲ್ಲಾ ಹುಡುಗಿಯರನ್ನು ಜಲಕಾಕ್ಷಿ ಆ ಕೋಣೆಯೋಳಗೆ  ಸೇರಿಸುತ್ತಾಳಾದರೂ, ಅವರಾರೂ ಗೆಳತಿಯ ಸಲಿಗೆಯನ್ನು  ದುಂದು ಮಾಡುವುದಿಲ್ಲ  ಹೀಗಾಗೇ ಅವರೆಲ್ಲರ ಕಣ್ಣಲ್ಲಿ ಜಲಜಾಕ್ಷಿ  ದೊಡ್ಡವಳೇ  ಆಗಿ ಅವಳ ಆ ಕೋಣೆ  ಬೆಚ್ಚಗಿನ  ಸ್ವಪ್ನಕ್ಕೆ ಆವರನ್ನಿಳಿಸುವಂತದ್ದಾಗಿ ಗಾಢವಾಗಿರುವುದು.


ಆ ಕೋಣೆ ಎಂದ ತಕ್ಷಣ ಆದು ಒಂದು ಕೋಣೆಯಲ್ಲ  ಬಾಗಿಲು ತೆರೆ ದರೆ ಒಂದು ಇನ್ನೊಂದು ಮತ್ತೊಂದು ಎಂದು ಮೂರು  ಕೋಣೆಗಳುಳ್ಳದ್ದಾಗಿ ಪ್ರತ್ಯೇಕ ಮನೆಯೇ ಎಂಬಂತಿರುವ ಅದನ್ನು ಕೋಣೆಯೆಂದೇ ಕರೆದುಕೊಂಡು ಬರಲಾಗಿದೆ . ಅದು ಜಲಜಾಕ್ಷಿಗಾಗಿ  ಇರುವಂತದ್ದು ಎಂಬುದನ್ನು ಸೂಚಿಸಲಿಕ್ಕಾಗಿಯೇ ಅವಳ ಕೋಣೆ  ಎಂದು ಎಂತದೋ  ಒಂದು  ಬಗೆಯ ಗೌರವ  ಭಾವವನ್ನು ವಿನೀತ ಭಾವವನ್ನು  ತೋರುವುದು  ಗೌಡನ ಮನೆಯೊಳಗೇ  ನಡೆದು ಬಂದಿದೆ.
ಅವಳದೆಂಬುವ ಆ ಕೋಣೆಯ ಮುಂಬಾಗಿಲು ತೆರದು  ಒಳಗೆ ಹೋದರೆ ನೇರ ಮುಖಕ್ಕೆ ಮುಖ ಕೊಟ್ಟು ಕರೆಯುವುದೇ ಅಷ್ಟೆತ್ತರದ ಕನ್ನಡಿ. ಈಗಷ್ಟೇ ಅರಲಿದ್ದೆಮ್ಬಂತ   ಭಾಸದಲ್ಲಿ ಒಂದು ಕ್ಷಣ ಆದ್ದಿ ತೆಗೆಯುವಂತಹ  ಜೀವಂತ ಹೂ ಚಿತ್ರಗಳನ್ನು ಬಿಡಿಸಿರುವ ಮರದ ಚೌಕಟ್ಟು ಆ ಕನ್ನಡಿಗೆ.

ಗೌಡನ ಮನೆ  ತನದಲ್ಲಿ ಲಾಗಾಯ್ತಿನಿಂದಲೂ ಉಳಿದು ಕೊಂಡು ಬಂದಿರುವ ಆಸ್ತಿಯಾದ ಅದು ಜಲಜಾಕ್ಷಿಯ ಬೆಳವಣೆಗೆಯ ಪ್ರತಿ ಹಂತವನ್ನು  ತನ್ನ ಕಣ್ಣಲ್ಲಿ  ಹಿಡಿದಿದೆ.. ನಾಲ್ಕು ತಲಗಳಿಗೆಯ ನಂತರ ಹುಟ್ಟಿದ ಆ ಹೆಣ್ಣು ಮಗಳಿಗೆ ಎಷ್ಟೊಂದು ಅಕ್ಕರೆಯಿಂದ ಚೆಲುವನ್ನು ದಯಪಾಲಿಸಿ ಧನ್ಯಗೊಂಡಂತಿದೆ.
ಪುಟ್ಟಪೋರಿಯಾಗಿದ್ದಾಗ  ಅಂಗಿಯನ್ನು  ಸೀದಾ ಮೇಲೆತ್ತಿ  ಬಾಯಿಗಿಟ್ಟು ಕಚ್ಚುತ್ತಿದ್ದ ಹುಡುಗಿಗೆ ಈಗ ಪ್ರಾಯದ ವಜ್ಜೆಯನ್ನು  ಎಂತದೋ ಬಿಗಿತವನ್ನು  ಸಂಬಾಳಿಸಲು ಕಲಿಸಿದ್ದು, ಕೋಡುಬಳೆ ತಿನ್ನುವಾಗಲೂ ಕನ್ನಡಿಯೆದುರೇ ನಿಂತು ತಾನು ಹೇಗೇ ಗೆಲ್ಲ ಜಗಿಯುತ್ತೇನೆ ಎಂದು ನೋಡುತ್ತಾ ದೊಡ್ಡವರನ್ನು ನಗಿಸುತ್ತಿದ್ದವಳಿಗೆ ತನ್ನ ಬೆಳೆದ ಕಣ್ಣುಗಳ ಸಮುದ್ರದಲ್ಲಿ  ಪ್ರೀತಿಯ ದೋಣಿಯೊಂದು ಅಲೆಗಳನ್ನು ದಾಟುವಾಟದಲ್ಲಿ ಚೆಂದಗಟ್ಟಿದೆ ಎಂಬ ಸುಳಿವು ಕೊಟ್ಟಿದ್ದು.

ಮೈನೆರೆದ ಅನುಭವವಾದ ಮೊದಲ ಕ್ಷಣದಲ್ಲಿ ತನ್ನ ಮುಖದ ತುಂಬಾ ಮೂಡಿದ್ದ ಆತಂಕದ ಕಂಪನದ ಬಾಧೆಯಲ್ಲಿ ಬೆಚ್ಚಿದವಳಿಗೆ  ಲಜ್ಜೆಯ ಬಣ್ಣಗಳ ಗುರುತನ್ನು ಹೇಳಿ ಕೊಡುತ್ತ ಪುಳಕ ಮೀಯಿಸಿದ್ದು… ಎಲ್ಲವೂ ಎಲ್ಲವೂ ಇದೇ ಕನ್ನಡಿ.
ಈ ಕನ್ನಡಿಯ ಹೂ ಚಿತ್ರಗಳ ಚೌಕಟ್ಟನ್ನು  ಮಾಡಿದ ಮಾಟದ  ಕೈಯವನೇ ಮಾಡಿದ್ದೆಂಬಂತಿರುವ ಒಂದು ಮಂಚ  ಈ ಹಿಂದೆ  ಗೌಡನ ಮನೆಯಲ್ಲಿತ್ತು ಆದರೆ ಗೌಡನ ಮನೆತನದ ಹಿರಿಯನೇ ಆ ಮಂಚವನ್ನು  ಮಾಡಿದವನಾಗಿದ್ದ.
ಇದು ನಾಲ್ಕು ತಲಗಳಿಗೆಯ ಹಿಂದೆ.

ಜಲಜಾಕ್ಷಿಗಿಂತ ಮೊದಲು  ಈ ಮನೆಯಲ್ಲಿ ಹುಟ್ಟಿದ್ದ ಹೆಣ್ಣು ಮಗಳಿಗಾಗಿ ಅವನು ಅಷ್ಟೋಂದು ಪ್ರೀತಿಯಿಂದ ಮಾಡಿದ ಮಂಚ ಎಂತಾ ಸುಂದರವಾದದ್ದಾಗಿತ್ತೆಂದರೆ, ಅದು ಹೇಗೋ ಅದನ್ನು ನೋಡುತ್ತಾ  ನೋಡುತ್ತಾ ಇದ್ದರೆ ಮೈ ತುಂಬಿದ ಹೆಣ್ಣುಮಗಳನ್ನೇ ಎದುರಲ್ಲಿ ಕಂಡಂತಾಗಿಬಿಡುತ್ತಿತ್ತಂತೆ. ಎಲ್ಲರೂ ಆ ಮಂಚದ ಸೊಗಸನ್ನು ಹೊಗಳುವವರೇ. ಆದರೆ ಈ ಹೊಗಳಿಕೆಯ ಕೇಳಿಸಿಕೊಳ್ಳುಲು  ಅದನ್ನು ತಯಾರು ಮಾಡಿದ ಹಿರಿಯ ಇರಲಿಲ್ಲ. ಮಂಚವನ್ನು ಪೂರ್ತಿ ಮಾಡಿ ಮುಗಿಸಿದ ದಿನ ಅದರ ಚೆಂದಕ್ಕೆ ತಾನೇ ಹುಚ್ಚನಂತಾಗಿ ಸಂಭ್ರಮಪಟ್ಟವನು  ಮತ್ತೆ ಮೂರೇ ದಿನಗಳಲ್ಲಿ ಸತ್ತಿದ್ದ.

ಈ ಮೂರುದಿನಗಳಲ್ಲಿ  ಅವನು ಮಂಕಾಗುತ್ತಾ ಮಂಕಾಗುತ್ತಾ ಮಂಚ ತಯಾರಾದ ದಿನ ಎಷ್ಟು ಸಂಭ್ರಮಪಟ್ಟಿದ್ದನೋ ಅದಕ್ಕೆ ಪೂರ್ತಿ  ವಿರುದ್ದವಾಗಿ  ವಿಚಿತ್ರ ಕನಲಿಕೆಯ ಸ್ಥಿತಿಗೆ  ಹೋಗಿ ಬಿದ್ದಿದ್ದವನನ್ನು ಗಮನಿಸುವದಕ್ಕೂ ಒಬ್ಬರೂ  ಇರಲಿಲ್ಲ. ಎಲ್ಲರೂ ಮಂಚದ ಮೋಡಿಗೆ  ಸಿಕ್ಕಿ ಬಿಟ್ಟಿದ್ದರು.

ಗೌಡನ ಮನೆಯ ಆ ಹಿರೀ ತಲೆ ಅತ್ಯಂತ ದರಿದ್ರ, ಅನಾಥ ಭಾವದಲ್ಲಿ ಬಾಯೇ ಇಲ್ಲದಂತಾ ಸ್ಥಿತಿಯಲ್ಲಿ ಏನೇನನ್ನೋ ಕನವರಿಸುತ್ತಾ  ಎದೆ ಬಡಿದುಕೊಳ್ಳುತ್ತಾ  ಉಸಿರು ಬಿಟ್ಟಿತ್ತು. ಎಂತಾ ಚೆಂದದ ಮಂಚ  ಮಾಡಿದ್ದವ ಅದರ ಮೇಲೆ  ಒಂದು ದಿನವಾದರೂ ಮಲಗಲಿಲ್ಲ, ಯಾವುದಕ್ಕೂ ಪಡೆದು ಬಂದಿರಬೇಕು ಅಂಬೂದು ಎಷ್ಟು  ಖರೆ ಎಂದೇ ಕೊರಗಿತ್ತು ಊರು  ಆ ಮೇಲೆ ಅವನ  ಸಾವು ಮರೆತುಹೋಯಿತು. ಮಂಚ ಮಾತ್ರ ಎಲ್ಲರ ಕಣ್ಣಲ್ಲಿ ನಿಂತು ಬಿಟ್ಟಿತು.
ಗೌಡನ ಮನೆಮಗಳ ಹೆಸರಲ್ಲೇ ತಯಾರಾದ ಮಂಚಕ್ಕೆ ಅದಾಗಲೇ ಪ್ರಾಯಕ್ಕೆ ಬಂದ ಆಕೆಯೇ ಹಕ್ಕುದಾರಳಾದಳು. ಅದರ ಹೂಗೊಂಡೆ ಸುತ್ತಿ ದಂತಾ ಕಾಲುಗಳ ಸೊಗಸಿಗೆ, ಕಾಲುಗಳ ತುದಿಯಲ್ಲಿ ನೆಲದಿಂದ  ಒಂದಂಗುಲ ಮೇಲೆ ತೂಗುತ್ತಿರುವಂತೆ  ಕಟ್ಟಿರುವ  ಬೆಳ್ಳಿ ಗೆಜ್ಜೆಗಳ ಇಂಪಾದ  ಉಲಿತಕ್ಕೆ ಮಂಚದ ಮೈ ಯ ನಯಕ್ಕೆ ಅವಳು ಸೋಲುತ್ತಾ ಹೋಗುವಳು. ಮಂಚದೊಂದಿಗೆ ಒಬ್ಬಳೇ ಮಾತಾಡುತ್ತಾ ಎಷ್ಟೋ ಹೊತ್ತು ಕಳೆದು ಬಿಡುವಳು. ಹೀಗೆ ಮಂಚದೊಂದಿಗೆ ಸಂಬಂಧ ಬೆಳೆದ ಕೆಲವೇ ದಿನಗಳಲ್ಲಿ ಅವಳು ಸುಂದರ ಳಾಗುತ್ತಾ ಆಗುತ್ತಾ ಹೋದಷ್ಟೇ ಮನೆಯ ಮಂದಿಯಿಂದ ದೂರವಾಗುತ್ತಲೂ ಹೋದಳು.
ಇದು ಎಷ್ಟಕ್ಕೆ ಬಂತೆಂದರೆ  ಮಂಚವನ್ನು ಬಿಟ್ಟು ಅವಳು  ಉಳಿಯುವುದೇ ಅಪರೂಪವಾಯಿತು. ಆದರೆ  ಮನೆಮಂದಿಗಾರಿಗೂ ಇದು ಕಾಡಲಿಲ್ಲ. ಬದಲಾಗಿ ಮಂಚದ ಬಗ್ಗೇ  ಹೊಗಳುವರು.
ಹೀಗಿರುವಾಗಲೇ ಒಂದು ರಾತ್ರಿ ಊರೆಲ್ಲಾ ಮಲಗಿದೆ. ಗೌಡನ ಮನೆಯಲ್ಲೂ ಮಾತಿಲ್ಲ, ಕತೆಯಿಲ್ಲ, ಅಳುಮಕ್ಕಳೂ ಎಚ್ಚರವಿಲ್ಲ. ಇದ್ದಕ್ಕಿದ್ದಂತೆ ಯಾರೋ ಭೀಕರವಾಗಿ ಚೀರಿಕೊಂಡಂತೆ ಒಂದು ಧ್ವನಿ ಎದ್ದಿತು. ಇಡೇ ಊರನ್ನೇ ಒಂದು ಕ್ಷಣ ಎಚ್ಚರಿಸಿದ  ಚೀರಿಕೆಯಾಗಿತ್ತು ಅದು.
ಎಚ್ಚರಾದ ಎಲ್ಲರಿಗೂ ಆ ಚೀರಿಕೆಯ ಕೊನೆಯ ಸೊಲ್ಲು ಎಲ್ಲಿಂದಲೋ ಕೇಳಿಬಂದಂತಾಯಿತೆ ಹೊರತು ಇಂತಾ ದಿಕ್ಕಿನಿಂದಲೇ, ಇಂತಾ ಮನೆಯಿಂದಲೇ ಬಂತು ಎಂದು ತಿಳಿಯಲು ಆಗಲಿಲ್ಲ, ಗೌಡನ ಮನೆ ಮಂದಿಗೂ ಹೀಗೇ ಅನುಭವವಾಯಿತು.
ರಾತ್ರಿ ಕಳೆದು ಬೆಳಗಾದಾಗಲೇ ಎಲ್ಲಾ ಗೊತ್ತಾದದ್ದು. ಮಂಚದ ಮೇಲೆ ಮಲಗಿದ್ದ ಗೌಡನ ಮಗಳು ಮಂಚದಿಂದ ಸಿಡಿದೇ ಬಿದ್ದಿದ್ದಾಳೆಂಬಂತೆ ಬಾಗಿಲ ಬಳಿ ಹೆಣವಾಗಿ ಬಿದ್ದಿದ್ದಳು. ಅಷ್ಟೊಂದು ಚೆಂದವಿದ್ದವಳ ಮುಖ ನೋಡಲಿಕ್ಕೇ ಆಗದ ಹಾಗೆ ವಿಕಾರವಾಗಿತ್ತು. ಅವಳು ಮಲಗಿದ್ದ ಮಂಚವಂತೂ ಸೀಳಿ ಸೀಳಿ ಹೋಗಿತ್ತು. ಮೋಹಿನಿ ನೆಲೆ ಯಾಗಿದ್ದ ಮಂಚ ಅದಾಗಿತ್ತು ಎಂದು ಚೌಕಶಿಯಿಂದ ತಿಳಿಯಿತು. ಮಾತು ಕಳಕೊಂಡು ದಕ್ಕಾಗಿ ಹೋಗಿದ್ದರು ಎಲ್ಲ. ಕನ್ನೆ ಹೆಣ್ಣಿನ ಹೆಣದೊಂದಿಗೆ  ಆ ಮಂಚವನ್ನು ಸುಟ್ಟು ಹಾಕಲಾಯಿತು.
ಮನೆತನದ ಹೀಗೊಂದು ದುರಂತವಾದ ನಂತರ ಗೌಡನ ಮನೆತನದಲ್ಲಿ ಯಾರು ಮಂಚದ ಬಗ್ಗೆ ಮೋಹಪಡಲಿಲ್ಲ. ಈ ಕೆಟ್ಟ ಘಟನೆಯ ನೆನಪು ಮುಂದಿನ ಪೀಳಿಗೆಗಳಲ್ಲೂ ಉಳಿದುಕೊಂಡು ಬಂತು. ಹೀಗಿದ್ದಾಗ ಜಲಜಾಕ್ಷಿ ತನಗೊಂದು ಮಂಚ ಬೇಕೇ ಬೇಕೇಂದು ಹಠ ಹಿಡಿದು ಬಿಟ್ಟಳು. ಗೌಡ ದಿಗ್ಬ್ರಾಂತನಾಗಿ ಹೋದ. ಕಡೆಗೂ ದೇವರಲ್ಲಿ ಕೇಳಿ ಒಪ್ಪಿಗೆ ಸಿಕ್ಕಿದ ಮೇಲೆ ಮಂಚ ಮಾಡಿಸಲಾಯಿತು.
ಈಗ ಜಲಜಾಕ್ಷಿಯ ಕೋಣೆಯಲ್ಲಿ ಕನ್ನಡಿಯಷ್ಠೇ ದೊಡ್ಡ ಆಸ್ತಿ ಎಂಬಂತೆ ಇರುವ ಈ ಹೊಸ ಮಂಚವೂ ತುಂಬಾ ಸುಂದರವಾದ್ದೇ. ಜಲಜಾಕ್ಷಿಗೂ ಈ ಮಂಚವೆಂದರೆ ಇಷ್ಟ. ಈ ಮಂಚದ ಮೇಲೆ ಕೂತೇ ಅವಳು ಅಜ್ಜನ ಬಾಯಿಂದ ಹಳೇ ಮಂಚದ  ಕತೆ ಹೇಳಿಸಿಕೊಂಡಿದ್ದಾಳೆ.

1 ಟಿಪ್ಪಣಿ (+add yours?)

  1. armanikanth
    ನವೆಂ 02, 2010 @ 18:54:05

    namma preetiya venkatramana elli kaledu hoda?

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: