‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ..

ಕೃಪೆ : ಗಲ್ಫ್ ಕನ್ನಡಿಗ

ಬೆಂಗಳೂರು, ಮಾ. ೨೦: ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘವಾರದ ‘ನರಹತ್ಯೆ’ಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಗೋವಿನ ಸಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇಕೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಆಯೋಜಿಸಿದ್ದ ಲೋಹಿಯಾ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಹಾರ ಸಂಸ್ಕೃತಿಯ ಅರಿವಿಲ್ಲದ ಅವಿವೇಕಿ ಸರಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ. ಇದು ಅನಾಗರೀಕ ಕೆಲಸ ಎಂದು ಕಿಡಿಕಾರಿದರು.

ಬರಲಿರುವ ದಿನಗಳಲ್ಲಿ ಗೋಮಾಂಸದ ಖಾದ್ಯಗಳನ್ನು ತಯಾರಿಸಿ ಸಾರ್ವಜನಿಕವಾಗಿ ತಿನ್ನಬೇಕು. ಈ ಖಾದ್ಯಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದ ದೇವನೂರು, ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿ ದಲಿತ, ರೈತ ಮತ್ತು ಸಮಾಜವಾದಿಗಳೆಲ್ಲ ಒಗ್ಗೂಡಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಲೋಹಿಯಾ ಬೌತಿಕವಾಗಿ ನಮ್ಮನ್ನು ಅಗಲಿದ ದಿನವೇ ನಾನು ಅವರ ಪ್ರಜ್ಞೆಯನ್ನು ಮೈಗೂಡಿಸಿಕೊಂಡೆ. ಜಾತಿ ಪದ್ಧತಿಯ ವಿರುದ್ಧ ಅವಿರತ ಕೆಲಸ ಮಾಡಿದ ಲೋಹಿಯಾರ ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ದೇವನೂರು, ಜಾತಿ ವ್ಯವಸ್ಥೆಯಲ್ಲಿ ಮುಳುಗಿದರೆ ನೀರಲ್ಲಿ ಮುಳುಗಿ ಮೂರ್ಛೆಹೋದಂತೆ. ಜಾತಿ ವ್ಯವಸ್ಥೆಯ ವಿರುದ್ಧ ವಿರುದ್ಧ ಹೋರಾಡುವುದು ತಂತಿಯ ಮೇಲಿನ ನಡಿಗೆ ಇದ್ದಂತೆ. ಜಾತಿ ಪದ್ಧತಿಯ ನಾಶ ಜಾತ್ಯತೀತ ಮನೋಭೂಮಿಕೆಯ ಮೇಲೆ ನಡೆಯಬೇಕಾಗಿದೆ. ಯಾವುದೇ ರೀತಿಯ ದ್ವೇಷದ ಸೋಂಕಿಲ್ಲದೆ ಪ್ರೀತಿಯಿಂದ ಈ ಕಾರ್ಯ ನಿರ್ವಹಿಸಬೇಕಾದುದು ಎಲ್ಲ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ನಾಣ್ಯ ಬೇಕು: ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ರಾಮಮನೋಹರ ಲೋಹಿಯಾರ ಸೈದ್ದಾಂತಿಕ ವಿಚಾರಗಳನ್ನು ಕರಗಿಸಿ ಹೊಸ ನಾಣ್ಯ ತಯಾರಿಸುವ ಅಗತ್ಯವಿದೆ ಎಂದ ದೇವನೂರು ಮಹಾದೇವ, ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ತಾತ್ವಿಕತೆ ಬೇಕಾಗಿದೆ. ಇದೇ ಸಂದರ್ಭದಲ್ಲಿ ಕಮ್ಯೂನಿಷ್ಟ್ ಸಂಘಟನೆಯ ಬಿಗಿ ರಚನೆಯನ್ನು ಉದಾರಗೊಳಿಸಿ ಸ್ವೀಕರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ನನ್ನ ಬಿಡುಗಡೆಗಾಗಿ ನನ್ನ ಸಾಮಾಜಿಕ ಹೋರಾಟ ಎಂಬ ಭಾವನೆಯನ್ನು ಬೆಳೆಸಿಕೊಂಡು ಜಗತ್ತಿನ ಕತ್ತಲನ್ನು ತೊಡೆದು ಹಾಕಲು ಒಗ್ಗೂಡಬೇಕು. ಆ ಮೂಲಕ ಸಮಾಜವಾದದ ಮೌಲ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಮೀಸಲು ಮಸೂದೆಯಿಂದ ಪ್ರಾದೇಶಿಕ ಪಕ್ಷಗಳ ನಾಶ: ಕಾರ್ಯಕ್ರದಲ್ಲಿ ಪ್ರಸ್ಥಾವಿಕವಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸುವುದರಿಂದ ದೇಶದಲ್ಲಿನ ಪ್ರಾದೇಶಿಕ ಪಕ್ಷಗಳು ಸಂಪೂರ್ಣ ನಾಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಸೂದೆ ಜಾರಿಯಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ನಾಯಕರುಗಳ ಸ್ಥಾನಗಳಿಗೆ ಧಕ್ಕೆಯುಂಟಾಗಲಿದೆ. ಈಗಾಗಲೇ ಮುಂಚೂಣಿಯಲ್ಲಿನ ಜಾತಿಗಳಿಗೆ ಮಹಿಳಾ ಮೀಸಲಾತಿ ಮಸೂದೆಯಿಂದ ಅನುಕೂಲವಾಗಲಿದೆ ಎಂದು ಹೇಳಿದ ಅವರು, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ನಾಯಕರು ಕಷ್ಟಪಟ್ಟು ಉಳಿಸಿಕೊಂಡು ಕ್ಷೇತ್ರಗಳು ಅವರಿಂದ ಕೈತಪ್ಪಿ ಹೊಗಲಿವೆ ಎಂದು ಬಹಿರಂಗಪಡಿಸಿದರು.

ಮಹಿಳಾ ಮೀಸಲಾತಿ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸುವ ಸೋನಿಯಾಗಾಂಧಿ. ಅವರ ಪಕ್ಷದಲ್ಲಿ ಶೇ.೧೦ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಿಲ್ಲ. ಮೊದಲು ಟಿಕೆಟ್‌ನಿಂದ ಬದ್ಧತೆ ಪ್ರದರ್ಶಿಸಲಿ ಎಂದು ಒತ್ತಾಯಿಸಿದ ರವಿವರ್ಮ ಕುಮಾರ್, ಮಹಿಳಾ ಮೀಸಲಾತಿ ಮಸೂದೆಯನ್ನು ಕಡುವೈರಿಗಳೆಂದು ಬಿಂಬಿತವಾಗಿದ್ದ ಬಿಜೆಪಿ ಮತ್ತು ಕಮ್ಯೂನಿಷ್ಟರು ಒಗ್ಗೂಡಿದ್ದಾರೆ.

ಸುಷ್ಮಾ ಮತ್ತು ಬೃಂದಾ ಕಾರಟ್‌ರ ಆಲಿಂಗನದ ಹಿಂದೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ತುಳಿಯುವ ಹುನ್ನಾರ ಅಡಗಿದೆ. ಮಾತ್ರವಲ್ಲ ಮಸೂದೆಯಿಂದ ದಮನಿತ ಸಮುದಾಯಗಳಿಗೆ ಮಾರಕವಾಗಲಿದೆ ಎಂದು ಹೇಳಿದರು.

ಮಹಾತ್ಮಗಾಂಧಿಯವರ ‘ಕ್ವಿಟ್ ಇಂಡಿಯಾ’ ಚಳುವಳಿಯೆ ಪ್ರೇರಣೆ ನೀಡಿದ್ದು ಲೋಹಿಯಾ ಚಿಂತನೆಗಳು. ಇಂದು ಬಂಡವಾಳವಾದ ಅಪ್ರಸ್ತುತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿ ಮತ್ತು ಲಿಂಗ ಅಸಮಾನತೆಯ ವಿರುದ್ಧ ತಮ್ಮ ಪ್ರಖರ ವಿಚಾರ  ಮಂಡಿಸಿದ ಲೋಹಿಯ ಅತ್ಯಂತ ಪ್ರಸ್ತುತ ಎಂದು ಪ್ರತಿಪಾದಿಸಿದ ರವಿವರ್ಮ ಕುಮಾರ್, ೨೧ನೆ ಶತಮಾನವನ್ನು ಲೋಹಿಯಾ ಚಿಂತನೆ ಆವರಿಸಲಿದೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆಂಧ್ರದ ತೆಲಂಗಾಣ ಹೋರಾಟ ಸಮಿತಿ ಅಧ್ಯಕ್ಷ ಕೇಶವರಾವ್ ಜಾದವ್, ಮಧ್ಯಪ್ರದೇಶದ ಜಸ್ವೀರ್ ಸಿಂಗ್, ಮಾಜಿ ಸಚಿವ ಆಹಗೂ ಹಾಲಿ ಶಾಸಕ ಡಾ.ಎಚ್.ಸಿ.ಮಹಾದೇವಪ್ಪ, ಹಂಪಿ ವಿಶ್ವ ವಿದ್ಯಾಲಯದ ಡಾ.ರೆಹಮತ್ ತರೀಕೆರೆ, ಪ್ರೊ.ಕೆ.ಬಿ.ಸಿದ್ಧಯ್ಯ, ಸಾಹಿತಿ ನಟರಾಜ್ ಮತ್ತಿತರರು ಲೋಹಿಯಾ ಪ್ರಸ್ತುತತೆಯ ಕುರಿತು ಮಾತನಾಡಿದರು. ಆದಿಮ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು

3 ಟಿಪ್ಪಣಿಗಳು (+add yours?)

 1. Ravi
  ನವೆಂ 02, 2010 @ 11:44:48

  ಗೋ ಮಾಂಸ ಔಷಧಿ! ವಾಟ್ ಅ ಕಾನ್ಸೆಪ್ಟ್!
  ಇಂಥಹುದೇ ಇನ್ನೊಂದು ಓದಿದ್ದೆ- “ಬೆಳಗಿನ ೫ದರ ಜಾವದ ಪ್ರಾರ್ಥನೆ ಜನರ ನಿದ್ದೆ ಕೆಡಿಸುತ್ತಿದೆ. ಮುಸ್ಲಿಮರು ಬೆಳಗಿನ ಪ್ರಾರ್ಥನೆ ನಿಲ್ಲಿಸಬೇಕು”
  ಇಂಥ extremist ಗಳಿಂದಲೇ ನಮ್ಮ ಸಮಾಜ ಸ್ವಾಸ್ಥ್ಯ ಕಳೆದುಕೊಳ್ಳುತ್ತಿರುವುದು. ನಾವು ಇನ್ನೊಬ್ಬರ ಆಚರಣೆಗಳನ್ನು ಗೌರವಿಸಲು ಕಲಿಯಬೇಕೆ ಹೊರತು, ಇಂಥ ಪ್ರಚೋದನಕಾರಿ ಹೇಳಿಕೆಗಳು ಯಾವತ್ತು ಹೇಯ. ಅತೀ ಹೆಚ್ಚಿನ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಧರ್ಮ ಹಿಂದೂ ಧರ್ಮ. ಅದು ವೈಚಾರಿಕತೆಯನ್ನು ಪ್ರಚೋದಿಸಿತೆ ವಿನಃ ಜನರ ಮೇಲೆ ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸಲಿಲ್ಲ. ಗೋ ಹತ್ಯೆ ನಿಷೇಧದ ಮೂಲಕ ಧರ್ಮವನ್ನು ಜನರ ಮೇಲೆ ಹೇರುವುದೂ ಅತಿ ಹೇಯ ಕೃತ್ಯ. ದೇಶದ ಏಕತೆಗೆ ಒಡಕುಂಟು ಮಾಡುವ ಪ್ರತೀಯೋಬ್ಬರಿಗೂ ಬಹಿಷ್ಕಾರ. ನಾವು ವಿಶ್ವ ಮಾನವರಾಗುವುದು ಬಹುಷಃ ಕನಸಿಗೂ ನಿಲುಕದು. ಶಾಲೆಯಲ್ಲಿ ಸಣ್ಣವರಿದ್ದಾಗ ಹೇಳಿದ ಶಾಂತಿ ಮಂತ್ರ ನೆನಪಾಗುತ್ತಿದೆ – ‘ನಮ್ಮ ನಮ್ಮೊಳಗೆ ಜಗಳಬೇಡ, ಶಾಂತಿ ಇರಲಿ. ಓಂ ಶಾಂತಿ ಶಾಂತಿ….’

  ಉತ್ತರ

 2. Mahesh
  ನವೆಂ 01, 2010 @ 11:24:48

  ದಲಿತರು ಹಸುಗಳನ್ನು ತಿನ್ನುತ್ತಿದ್ದರು ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಹಸುಗಳನ್ನು ಕೊಂದು ತಿನ್ನುತ್ತಿದ್ದರೇ? ಅಥವಾ ನೈಸರ್ಗಿಕವಾಗಿ ಸತ್ತ ದನಗಳನ್ನಷ್ಟೇ ತಿನ್ನುತ್ತಿದ್ದರೇ?

  ಉತ್ತರ

  • ಹುಲಿಕುಂಟೆ ಮೂರ್ತಿ
   ನವೆಂ 01, 2010 @ 22:38:25

   ತಿನ್ನುತ್ತಿದ್ದರು ಅಲ್ಲಾ ಸಾರ್.. ಈಗಲೂ ತಿನ್ನುತ್ತಿದ್ದಾರೆ.. ಅದು ಅವರ ಸಾಂಪ್ರದಾಯಿಕ ಆಹಾರ… ‘ಕೊಲ್ಲುವುದು’- ‘ತಿನ್ನುವುದು’ ಈ ಪ್ರಶ್ನೆಯಲ್ಲಿ ಏನೋ ಸಮಸ್ಯೆ ಇದೇ..

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: