ಹಾಗಾದರೆ ಧರ್ಮ ಎಂದರೇನು?

ಕೃಪೆ: ವಾರ್ತಾ ಭಾರತಿ

ಬ್ರಾಹ್ಮಣರಿಗೆ ‘ಕರುಣೆ’ಯ ದೀಕ್ಷೆ ನೀಡಿ’: ಪೇಜಾವರರಿಗೆ ದೇವನೂರು ಮಹಾದೇವ ಮನವಿ

ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಡಾ. ಬಾಬು ಜಗಜ್ಜೀವನರಾಂ ಅಧ್ಯಯನ, ಸಂಶೋಧನ ಹಾಗೂ ವಿಸ್ತರಣ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ ‘ವೈಷ್ಣವ ದೀಕ್ಷೆ ಪೂರ್ವಾಪರ’: ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ದೇವನೂರು ಮಹಾದೇವ ಅವರ ಲಿಖಿತ ಭಾಷಣ.

ಕುವೆಂಪು ಅವರ ಸಂದರ್ಶನವೊಂದರ ದೃಶ್ಯ ಈಗಲೂ ನನ್ನ ಕಣ್ಣ ಮುಂದೆ ಬರುತ್ತದೆ. ಶ್ರೀಕೃಷ್ಣ ಆಲನಹಳ್ಳಿ ಕುವೆಂಪು ಅವರಿಗೆ ಒಂದು ಪ್ರಶ್ನೆ ಕೇಳಿದರು-‘ಮಾಧ್ವ ಸಿದ್ಧಾಂತ ನೀಚ ಸಿದ್ಧಾಂತವೇ ಸರ್?’ ಅಂತ. ಅದಕ್ಕೆ ಕುವೆಂಪು ‘‘ನೀಚ? ಪರಮ ನೀಚ’’ ಅಂದರು. ಆಲನಹಳ್ಳಿ ನಕ್ಕೂ ನಕ್ಕೂ ಆ ನಗುವಿನ ಅಲೆ ನನ್ನ ಕಿವಿಯಲ್ಲಿ ಇನ್ನೂ ಇದೆ. ಮಾಧ್ವ ಸಿದ್ಧಾಂತದ ಬಗ್ಗೆ ಕುವೆಂಪು ಅಸಹನೆ ಯನ್ನು-ಮನುಷ್ಯರಾದರೆ ಸಾಕು ಎಂದು- ಅರ್ಥಮಾಡಿಕೊಳ್ಳಬಹುದು. ಮಧ್ವ ಸಿದ್ಧಾಂತದ ನಿತ್ಯ ಮುಕ್ತ, ನಿತ್ಯ ಸಂಸಾರಿ, ನಿತ್ಯ ನಾರಕಿ- ಈ ದೃಷ್ಟಿಕೋನ ಈ ಜಗತ್ತು, ಮನುಷ್ಯ ಬದಲಾಗುವುದಿಲ್ಲ.

ಎಲ್ಲವೂ ನಿತ್ಯ, ಅಂದರೆ ಶಾಶ್ವತ ಎಂದು ಸಮಾಜವನ್ನು ಜಡಗೊಳಿಸಿ ಚಲನರಹಿತ ಮಾಡಿ ನರಕವನ್ನೇ-ತಾರತಮ್ಯವನ್ನೇ ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ-ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಇದು ಭೇದಕ್ಕೆ ಕಾರಣವಾಗಿರ ಬಹುದೇ ಹೊರತು ಐಕ್ಯಕ್ಕೆ ಅಲ್ಲ.

ಇಂಥ ಕಡೆ ವಿಶ್ವೇಶ ತೀರ್ಥರು ಹುಟ್ಟಿದ್ದಾರೆ.ಈ ಸಿದ್ಧಾಂತದ ಮಠಕ್ಕೆ ಶ್ರೀಗಳಾಗಿದ್ದಾರೆ. ಆದರೆ ಚಲನೆ ಯನ್ನು ಬಯಸುವಂತೆ ಕಾಣುತ್ತಾರೆ. ಹಾಗಾಗಿ ತನ್ನ ಸಿದ್ಧಾಂತದ ಚೌಕಟ್ಟನ್ನು ಮೀರಲು-ಇವರು ಒದ್ದಾಡುತ್ತಿರುವಂತೆ ಕಾಣಿಸು ತ್ತಿದೆ. ಈ ಒದ್ದಾಟ, ಬಲೆಗೆ ಸಿಕ್ಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಗುಬ್ಬಚ್ಚಿಯ ಒದ್ದಾಟದಂತೆ ಕಾಣಿಸುತ್ತದೆ. ಇದನ್ನು ನೋಡಿದಾಗ ಇವರು ಅಲ್ಲಿರಬೇಕಾದವರಲ್ಲ, ನಮ್ಮ ಜೊತೆ ಇರಬೇಕಾದವರು ಅಂತ ಒಂದೊಂದು ಸಲ ಅನ್ನಿಸುತ್ತದೆ. ಆದರೆ ಇವರ ಒದ್ದಾಟವು ಆಳವಾದ ಧಾರ್ಮಿಕತೆಯಿಂದ ಬಂದುದೇ? ಅಂತರಂಗದ್ದೇ? ಎಂದು ಪ್ರಶ್ನಿಸಿಕೊಂಡಾಗ-ಧೈರ್ಯವಾಗಿ ಹೌದು ಎಂದು ಹೇಳಲು ಕಷ್ಟವಾಗುತ್ತದೆ.

‘‘ಕೀಳಿಂಗಲ್ಲದೆ ಹಯನು ಕರೆಯದು’’ ಎಂದರೆ, ತಾನು ತನ್ನ ಅಹಂ ಅನ್ನು ಅಲ್ಪವಾಗಿಸದೆ ಮೋಕ್ಷವಿಲ್ಲ- ಎಂಬ ತುಡಿತ ದಿಂದಾಗಿ ಅಹಂ ಅಲ್ಪವಿರುವ ಮೇಲರಿಮೆ ಇಲ್ಲದ ತಳ ಸಮುದಾಯವನ್ನು ಶ್ರೇಷ್ಠವೆಂದು ಭಾವಿಸಿದ ವಚನಕಾರರ ನಡೆ ಕಂಡಾಗ, ಶ್ರೀ ಪೇಜಾವರರ ಪಾದಯಾತ್ರೆ ಧಾರ್ಮಿಕವಲ್ಲವೇನೋ ಧರ್ಮರಾಜಕಾರಣವಿರಬೇಕು ಎಂದು ಅನುಮಾನ ಹುಟ್ಟಿಸುತ್ತದೆ. ‘‘ತಮ್ಮ ಮಠಕ್ಕೆ ಉತ್ತರಾಧಿಕಾರಿಯಾಗಿ ಕುರುಬರನ್ನಾದರೂ ಮಾಡುತ್ತೀರಾ? ಎಂದು ಕೇಳಿದರೆ,‘‘ಬ್ರಾಹ್ಮಣ ರನ್ನು ಮಾತ್ರ ಕೇಳುತ್ತೀರಿ? ಕ್ರಿಶ್ಚಿಯನ್ನರನ್ನು ಕೇಳುತ್ತೀರಾ? ಲಾಮಾ ಮಾಡು ಎಂದು ಬೌದ್ಧರನ್ನು ಕೇಳುತ್ತೀರಾ?’’ ಎಂದು ಪೇಜಾವರರು ಸಹನೆ ಕಳೆದುಕೊಳ್ಳುತ್ತಾರೆ. ‘‘ನಾನು ಕ್ರಿಶ್ಚಿಯನ್, ನಾನು ಬೌದ್ಧ ನಾನು ಯಾಕೆ ಮಠಾಧಿಪತಿ ಯಾಗ ಬಾರದು?’ ಎಂದು ಆ ಧರ್ಮಗಳಲ್ಲಿರುವ ಯಾರೇ ಪ್ರಶ್ನಿಸಬಹುದು. ಇದಕ್ಕೆ ಆ ಧರ್ಮಗಳಲ್ಲಿ ಅವಕಾಶ ಇದೆ. ಕೆಲವು ಕಡೆ ಸಾಧ್ಯವೂ ಇದೆ. ಹಿಂದೂ ಎಂದುಕೊಂಡಿರುವ ಜಾತಿಧರ್ಮದಲ್ಲಿ ಇದು ಸಾಧ್ಯವೇ? ಹೊರಗೆ ನಿಂತಿರುವ ಕನಕದಾಸನ ಕುರುಬರು ನಿಮ್ಮ ಸಮಾಜಕ್ಕೆ ಸೇರಿಲ್ಲವೇ? ಅವರ ಧರ್ಮವೇ ಬೇರೆಯೇ? ಅಥವಾ ಪ್ರತಿ ಜಾತಿಯೂ ಒಂದೊಂದು ಧರ್ಮವೇ?

ಹಾಗಾದರೆ ಧರ್ಮ ಎಂದರೇನು? ಜಾತಿಗಳ ಮೇಲು-ಕೀಳು ನಿಷಿದ್ಧಗಳ ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಅದಕ್ಕೆ ಪೇಜಾವರ ರನ್ನು ತಿರುಪತಿಯಲ್ಲಿ ಪೂಜೆಗೆ ಬಿಡುವುದಿಲ್ಲ ಎಂದರೆ- ನಾವೆಂಥ ಕ್ಷುದ್ರ ಜೀವಿಗಳು ಎಂದು ನಮಗನಿಸುವುದಿಲ್ಲ.‘‘ನಿನ್ನನ್ನು ನನ್ನ ಮಠದ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ’’– ಮತಾಂತರ ಆಗಬೇಡ ಎನ್ನಲು ಬಾಯಿ ಬಾರದ ಮಠಾಧಿಪತಿ ‘‘ಮತಾಂತರ ಆಗಬಾರದು’’ ಎಂದು ನೈತಿಕತೆ ಕಾಡದೆ ಹೇಳಿದರೂ ಅದರೊಳಗಿನ ನಿರ್ಲಜ್ಜತೆ ನಮಗೆ ಕಾಣಿಸುವುದಿಲ್ಲ. ‘‘ನೀನು ಹೊರಗಿರುವುದೇ ನಮ್ಮ ಸಂಪ್ರದಾಯ’’ ಎನ್ನುವುದರ ಕ್ರೌರ್ಯವೂ ನಮಗೆ ತಟ್ಟುವುದಿಲ್ಲ.

ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಇದು ಭೇದಕ್ಕೆ ಕಾರಣವಾಗಿರ ಬಹುದೇ ಹೊರತು ಐಕ್ಯಕ್ಕೆ ಅಲ್ಲ. ಪೇಜಾವರ ಶ್ರೀಗಳ ಪಾದಯಾತ್ರೆಯಿಂದ ದಲಿತರಲ್ಲಿ ಇನ್ನಷ್ಟು ದಾಸರು ಹೆಚ್ಚಾಗಬಹುದು. ಶಂಖ ಜಾಗಟೆ ಬಾರಿಸಬಹುದು ! ಇಷ್ಟೆಲ್ಲಾ ಮಾಡಿದರೂ ಅವರು ಅಸ್ಪಶ್ಯ ಸ್ಥಿತಿಯಿಂದ ಚಲಿಸಲೇ ಇಲ್ಲ.

ಹೀಗಿರುವಾಗ ಶ್ರೀ ಪೇಜಾವರರು ವೈಷ್ಣವ ದೀಕ್ಷೆಯನ್ನು ಪುನಃ ಪರಿಶೀಲಿಸುವುದು ಒಳಿತೇನೋ. ಬದಲಾಗಿ ದ್ವಿಜ(ಬ್ರಾಹ್ಮಣ)ರಿಗೆ ತ್ರಿಜ ದೀಕ್ಷೆ ಕೊಡುವುದು ನಮ್ಮ ಸಮಾಜದ ಆರೋಗ್ಯ, ಐಕ್ಯ ಸಮತೋಲನಕ್ಕೆ ಅಗತ್ಯವೇನೋ ಅನ್ನಿಸುತ್ತದೆ. ಹಾಲಿ ದ್ವಿಜ ದೀಕ್ಷೆಯು ಬುದ್ಧಿ ಕೇಂದ್ರಿತವಾಗಿದೆ. ದ್ವಿಜ ದೀಕ್ಷೆಯ ಗಾಯತ್ರಿ ಮಂತ್ರದಲ್ಲಿ, ಬುದ್ಧಿ ಪ್ರಚೋದನೆಯಾಗಲಿ ಎಂಬ ಆಶಯವಿದೆ.

ಬುದ್ಧಿಯಿಂದ ಒಡಕು, ವಂಚನೆ, ಮೇಲರಿಮೆ, ಕೀಳರಿಮೆ ಇತ್ಯಾದಿಗಳು ಹೆಚ್ಚಲೂ ಬಹುದು. ಭಾರತದ ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು-ಕರುಳು ಅಂದರೆ ಅಂತಃಕರಣ ಅಂದರೆ ಬಂಧುತ್ವ-ಇದರ ಪ್ರಚೋದನೆಗಾಗಿ ಅಂದರೆ ಕಾರುಣ್ಯದ ಪ್ರಚೋದನೆಯಾಗಲಿ ಎಂಬ ಆಶಯದ ನವ ದೀಕ್ಷೆಯನ್ನು (ಮುಖ್ಯವಾಗಿ ದ್ವಿಜರಿಗೆ) ನೀಡಿ ಎಂದು ಅವರಲ್ಲಿ ಪ್ರಾರ್ಥಿಸುವೆ.

ನನ್ನ ಈ ಪ್ರಾರ್ಥನೆಯನ್ನು ಉದ್ಧಟತನವೆಂದು ಅವರು ಭಾವಿಸದಿರಲಿ. ( ಈ ತ್ರಿಜ ದೀಕ್ಷೆಯ ಪರಿಕಲ್ಪನೆಯನ್ನು ಯು. ಆರ್. ಅನಂತಮೂರ್ತಿಯವರು ಏನಾರೂ ಕೇಳಿಸಿಕೊಂಡರೆ ಈ ತ್ರಿಜತ್ವ ದೀಕ್ಷೆಯನ್ನು ನೀನೇ ನನಗೆ ಕೊಡಯ್ಯೆ ಎಂದು ಕೇಳೇ ಕೇಳು ತ್ತಾರೆಂಬ ಗ್ಯಾರಂಟಿ ನನಗಿದೆ!) ಭಾರತವು ಏನೇನೋ ಹುಟ್ಟು ಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು. ಚಾತು ರ್ವರ್ಣ್ಯ ಜಾತಿ ಭೇದದ ತಾರತಮ್ಯದ ಕಾನೂನು ಕಟ್ಟಳೆಗಳನ್ನು ಧರ್ಮವಾಗಿಸಲು-ದೇವರುಗಳನ್ನೇ ರೌಡಿಗಳನ್ನಾಗಿಸಿದ ದೇಶ ಇದು. ಇತ್ತೀಚೆಗೆ ಆಕ್ಸಿಡೆಂಟ್ ಗಣೇಶನನ್ನೂ ಹುಟ್ಟು ಹಾಕಿದೆ. ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದಿಡುವೆ. ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ.

ಈ ಜನ್ಮದ ತರ್ಕಕ್ಕೆ-ಕಳೆದ ಜನ್ಮದಲ್ಲಿ ಅಸ್ಪಶತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪಶತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪಶ್ಯರಾಗಿ ಹುಟ್ಟುವರು. ಜನ್ಮ ನಿಜವಿದ್ದರೆ ಇದೂ ನಿಜವಿರ ಬಹುದಲ್ಲವೇ. ಏನೇನೋ ಹುಟ್ಟು ಹಾಕುವವರು ಇದನ್ನೂ ಯಾಕೆ ಹುಟ್ಟು ಹಾಕಬಾರದು? ! ತಾರತಮ್ಯಕ್ಕಾಗಿ ತರ್ಕಿಸಿ ಸಾಯು ವ ಭಾರತದ ಮನಸ್ಸು ಐಕ್ಯಕ್ಕಾಗಿ ಯಾಕೆ ತರ್ಕಿಸಬಾರದು?

ಸುಸ್ತಾಗುತ್ತಿದೆ. ಯಾಕೋ ಮುಗಿಯುತ್ತಿಲ್ಲ. ಪ್ರೀತಿ-ಸಮಾನತೆಯ ಆಸೆಯಿಟ್ಟುಕೊಂಡು ಇತಿಹಾಸ ಕಾಲದಿಂದಲೂ ಜೀವಿಸುತ್ತಿದ್ದೇವೆ. ಪೇಜಾವರ ಶ್ರೀಗಳ ಪಾದಯಾತ್ರೆಯಿಂದಾಗಿ ಕೆಲವರಾದರೂ ಎಳೆಯ ದ್ವಿಜರು ತ್ರಿಜರಾಗಿ ತ್ರಿಜತ್ವ ಪಡೆದು ತಮ್ಮ ದಲ್ಲದ ಜಾತಿಯಲ್ಲಿ ಮದುವೆಯಾಗಿ ಹೊಸ ಮನುಷ್ಯ ಸಂತಾನ ಹುಟ್ಟಲು ಶ್ರೀಪೇಜಾ ವರರ ಈ ಪಾದಯಾತ್ರೆ ಪ್ರಚೋದನೆ ಯನ್ನು ಉಂಟು ಮಾಡಲಿ ಎಂದು ಕನಸು ಕಾಣುವೆ. ನನ್ನ ಕನಸು ನನಸಾಗಲಿ

2 ಟಿಪ್ಪಣಿಗಳು (+add yours?)

 1. Ravi
  ನವೆಂ 02, 2010 @ 12:20:01

  “ಓದಿ ಬ್ರಾಹ್ಮಣನಾಗು..” ಅತ್ಯುತ್ತಮ ಪರಿಕಲ್ಪನೆ. ಜಾತಿಯಲ್ಲಿ ಹುಟ್ಟಿ ಬ್ರಾಹ್ಮಣನಾಗುವುದು ಗತ ಕಾಲ. ನೆಸಸ್ಸಿಟಿ ಇಸ್ ಮದರ್ ಆಫ್ ಇನ್ವೆನ್ಷನ್ ಎಂಬಂತೆ ಈ ದೀಕ್ಷೆಯಂಥ certification course ಗಳೂ ಹುಟ್ಟುತ್ತಿವೆ. “ಮೊದಲು ಮಾನವನಾಗು”ವ ಕಾಲ ಬಂದಿದೆ.

  ಉತ್ತರ

 2. Mahesh
  ನವೆಂ 01, 2010 @ 10:58:47

  ದಲಿತರು ಬ್ರಾಹ್ಮಣರಿಗಿಂತ ಆರ್ಥಿಕವಾಗಿ ಪ್ರಬಲರಾದಲ್ಲಿ ಇಂಥ ಬಹಳಷ್ಚು ಗೊಂದಲಗಳು, ಅಸಮಾನತೆಗಳು ದೂರವಾಗುವದು ಕಷ್ಟಸಾಧ್ಯವೇನಲ್ಲ. ದಲಿತರಿಗೆ ನಿಜವಾಗಿ ಬೇಕಿರುವದು ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ವಿಷಯಗಳ ಶಿಕ್ಷಣ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: