ದೇವನೂರರನ್ನ ನೋಡಬೇಕು ಅಂದಿದ್ಯಲ್ಲ, ಸಂಜೆ ಹೋಗೋಣ…

-ರವಿ ಅಜ್ಜೀಪುರ

ನದಿಪ್ರೀತಿ

dev1

ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೇ. ‘ಬರೀತಾ ಇರು. ನಿಲ್ಲಿಸಬೇಡ’ ಅಂತ ಬೆನ್ನುತಟ್ಟಿದವರೂ ಅವರೇ.

ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಪೊಯಿಟ್ರಿ ವರ್ಕ್ ಶಾಪ್ ಅಂತ ಮಾಡಿದ್ರು. ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ ಸಿ ಇ ಆರ್ ಟಿ ಕ್ಯಾಂಪಸ್ ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ ಸಿ ಇ ಆರ್ ಟಿ ಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವರ್ಕ್ ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ ಗಳೇ.

ಆ ವರ್ಕ್ ಶಾಪ್ ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು ‘ಪರವಾಗಿಲ್ಲ ಕಣೋ ವರ್ಕ್ ಶಾಪ್ ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ’ ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೇ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪರ್ಧೆ ಯಲ್ಲಿ ನನಗೆ ಮೊದಲ ಬಹುಮಾನ ಬಂತು.

ಹೀಗಿರುವಾಗಲೇ ಒಂದಿನ ಲತಾ ಮೇಡಮ್ ಹೇಳಿದ್ರು. ‘ನೀನು ದೇವನೂರರನ್ನ ನೋಡಬೇಕು ಅಂದಿದ್ಯಲ್ಲ. ಸಂಜೆ ಹೋಗೋಣ. ಅವರು ಗಾಂಧಿಭವನಕ್ಕೆ ಬರುತ್ತಾರೆ. ಅಲ್ಲಿ ರಾಮದಾಸ್ ಒಂದು ಇಂಟರ್ ಕ್ಯಾಸ್ಟ್ ಮದುವೆ ಮಾಡಸ್ತಿದಾರೆ’ ಅಂದ್ರು. ನನಗೆ ಖುಷಿ. ದೇವನೂರರನ್ನು ನೋಡಬಹುದಲ್ಲ ಅಂತ.

ಅಲ್ಲಿ ಹೋದ್ರೆ ಸಣ್ಣದೊಂದು ಸಮಾರಂಭ ಅದು. ರಾಮದಾಸ್ ಇದ್ದರು. ದೇವನೂರು ಬಂದ್ರು. ನೋಡಿ ಅವಾಕ್ಕಾಗಿ ಹೋದೆ ನಾನು. ಒಡಲಾಳದಂತಹ, ಕುಸುಮಬಾಲೆಯಂತಹ ಮೌಲಿಕ ಕೃತಿ ಬರೆದದ್ದು ಈ ಮನುಷ್ಯನಾ?

ಅದೇ ಕಾಡ್ರಾಯ್ ಪ್ಯಾಂಟ್, ಇಸ್ತ್ರೀ ಇಲ್ಲದ ಕಾಟನ್ ಶರ್ಟ್, ಹಳೇ ಚಪ್ಲಿ. ಬಾಚದ ತಲೆ, ಅಥವಾ ಆ ತಲೆ ಬಾಚಿದರೂ ಹಾಗೇ ಇರುತ್ತೆ ಅನ್ನುವುದು ನನ್ನ ಅನಿಸಿಕೆ. ಟಿಪಿಕಲ್ ದೇವನೂರ ಮಹಾದೇವ. ‘ಮೇಡಮ್ ಇವರಾ?’ ಅಂದೆ. ‘ಎಷ್ಟು ಸಿಂಪಲ್ ಆಗಿದಾರೆ ನೋಡು’ ಅಂದ್ರು.

ಆಮೇಲೆ ಅವರನ್ನು ನಾನು ಅವಾಗವಾಗ ನೋಡತೊಡಗಿದೆ. ಕೆಲವು ಸಲ ಲೂನಾದಲ್ಲಿ ನಮ್ಮ ಕಾಲೇಜಿನ ಮುಂದೇನೆ ಹಾದು ಹೋಗ್ತಿದ್ರು.

ಅದಾಗಿ ಎಷ್ಟೋ ದಿನಗಳ ನಂತರ ನಾನು ಒಂದು ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಬಡತನ ಕೆಲಸ ಮಾಡುವುದನ್ನು ಕಲಿಸಿತ್ತು. ಪ್ರೆಸ್ನಲ್ಲಿ ದೇವನೂರರ ಒಡಲಾಳ ಪ್ರಿಂಟಾಗುತ್ತಿತ್ತು. ಬಹುಶಃ ಅದು ಯಾವುದೋ ವಿಶ್ವವಿದ್ಯಾನಿಲಯಕ್ಕೆ ಟೆಕ್ಸ್ಟ್ ಬುಕ್ ಆಗಿತ್ತು ಅನಿಸುತ್ತೆ. ನಾನಾಗಲೇ ಅವರನ್ನು ಓದಿಕೊಂಡಿದ್ದೆ. ಮೆಚ್ಚಿಕೊಂಡಿದ್ದೆ.

ಒಂದಿನ ಇದ್ದಕ್ಕಿದ್ದಂತೆ ನಮ್ಮ ಪ್ರೆಸ್ಸಿಗೆ ಬಂದರು. ಅದದೇ ಗೆಟಪ್. ಕೈಯಲ್ಲೊಂದು ಸಿಗರೇಟ್. ಕಡುಗಪ್ಪಿನ ಗಡ್ಡ.

ಬಂದವರೇ ಪುಸ್ತಕ ಕೊಡಿ ಅಂತ ದೊಡ್ಡ ಟೇಬಲ್ ಮೇಲೇನೆ ಕೂತರು. ಕೊಟ್ಟೆ. ನಮ್ಮ ಓನರ್ ಇರಲಿಲ್ಲ. ಚೆನ್ನಾಗಿ ಮಾಡ್ತಿದೀರಿ ಕಣ್ರಯ್ಯಾ. ಅಂದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಖುಷಿಯಾಯ್ತು ಅವರಿಗೆ. ಸರ್ ನಿಮ್ಮ ಕುಸುಮಬಾಲೆ ಒಂದು ಕಾಪಿ ಇದ್ರೆ ಕೊಡಿ. ಹುಡುಕಿ ಹುಡುಕಿ ಸಾಕಾಯ್ತು ಅಂದೆ. ಮುಂದಿನ ಸಲ ತರ್ತೀನಿ ಅಂದ್ರು. ಹಾಗನ್ನುತ್ತಲೇ ಮತ್ತೊಂದು ಸಿಗರೇಟು ಹಚ್ಚಿ ಕೂತರು. ಹಣ ಕೊಡಲು ಬಂದರು. ನಾನು ಬೇಡ ಸಾರ್ ಅಂದೆ. ಚೆನ್ನಾಗಿ ಮಾಡ್ತಿದೀರಿ. ಏನಾದರೂ ತಿಂಡಿ ತರಿಸ್ಕೊಂಡು ತಿನ್ನಿ ಅಂದರು. ಎಷ್ಟೇ ಬೇಡವೆಂದರೂ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ಪಡೆದುಕೊಂಡೆ. ವಿಷಯ ಏನಂದ್ರೆ ನನ್ನನ್ನ ಬಿಟ್ಟರೆ ಅಲ್ಲಿದ್ದ ಉಳಿದ ಇಬ್ಬರೂ ತಮಿಳರು. ಅವರಿಗೆ ದೇವನೂರರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅಷ್ಟರಲ್ಲಿ ನಮ್ಮ ಓನರ್ ಮಹಾಶಯ ಬಂದ. ದೇವನೂರರು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟರು.

ಅವರು ಹೋದ ಮೇಲೆ ನಮ್ಮ ಓನರ್ ಕೇಳಿದ.

‘ನೀನಾದರೂ ಹೇಳಬಾರದೇನಯ್ಯಾ ಸಿಗರೇಟ್ ಸೇದಬೇಡಿ ಅಂತ’.

‘ನಾನೇಗೆ ಹೇಳಲಿ ಸಾರ್, ಅಷ್ಟು ದೊಡ್ಡವರಿಗೆ. ನೀವೇ ಹೇಳಬಹುದಿತ್ತಲ್ಲ. ನೀವು ಬಂದಮೇಲೂ ಸಿಗರೇಟ್ ಸೇದುತ್ತಿದ್ರಲ್ಲ’ ಅಂದೆ.

‘ಹೋಗಲಿ ಬಿಡು. ಇನ್ನೊಮ್ಮೆ ಬಂದಾಗ ಸರ್ ಪ್ರೆಸ್ನಲ್ಲಿ ಸಿಗರೇಟ್ ಸೇದೋ ಹಾಗಿಲ್ಲ ಅನ್ನು. ಪೇಪರ್ ಜಾಸ್ತಿ ಇರುತ್ತಲ್ಲ. ಬೆಂಕಿ ಬಿದ್ರೆ ಕಷ್ಟ ಅಂತ ಹೇಳು’ ಅಂದ್ರು.

ಆಯ್ತು ಅಂದೆ.

ಅವರು ಮತ್ತೆ ಬರಲಿಲ್ಲ. ನಾನೋ ಬದುಕು ಅರಸಿಕೊಂಡು ಬೆಂಗಳೂರಿನ ಹಾದಿ ಹಿಡಿದೆ.

ಇದೆಲ್ಲ ಯಾಕೆ ನೆನಪಾಯ್ತು ಅಂದ್ರೆ ನಿನ್ನೆ ಅವರ ಒಡಲಾಳ ನಾಟಕ ನೋಡಿ ಬಂದೆ. ತುಂಬಾ ಖುಷಿ ಆಯ್ತು. ಉಮಾಶ್ರೀ ಸಾಕವ್ವನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳಕೂ ನೈಜವಾಗಿತ್ತು. ಎಲ್ಲಾ ಓಕೆ. ಆದರೆ ಇಡೀ ನಾಟಕದಲ್ಲೇನೋ ಕೊರತೆ ಇದೆ ಅನಿಸ್ತು. ಅದು ಭಾಷೆಯದ್ದು. ಸಾಮಾನ್ಯವಾಗಿ ದೇವನೂರರ ಭಾಷೆ ಸ್ವಲ್ಪ ಕಷ್ಟಾನೆ. ಆದರೆ ನನ್ನಂಥವರಿಗೆ ಅದು ತುಂಬಾನೇ ಇಷ್ಟ. ಆ ಭಾಷೆಯ ಸೊಗಡೇ ಅಂಥದ್ದು. ಪ್ರಾದೇಶಿಕವಾದ ಆ ಭಾಷೆಗೆ ಅದರದೇ ಆದ ಒಂದು ಗುಣವಿದೆ. ಲಾಲಿತ್ಯವಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ರೆ ನಾಟಕ ಇನ್ನಷ್ಟು ಪ್ರಬುದ್ಧವಾಗ್ತಿತ್ತೇನೋ ಅನಿಸ್ತು.

ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಲೇಖಕ ದೇವನೂರು. ಮೈಸೂರು ಕಡೆ ಹೋದಾಗ ಒಮ್ಮೆ ಅವರ ತೋಟದ ಕಡೆಗೆ ಹೋಗಿಬರೋಣ ಅಂದುಕೊಂಡಿದ್ದೇನೆ.

ನೋಡೋಣ.

4 ಟಿಪ್ಪಣಿಗಳು (+add yours?)

 1. srinivasagowda
  ಮೇ 16, 2009 @ 20:07:06

  aytu ree sanje hogona…
  chennaagide guru baraha

  ಉತ್ತರ

 2. raviajjipura
  ಮೇ 16, 2009 @ 15:41:18

  ಪ್ರಿಯ ಗಾಯತ್ರಿ ಉರುಫ್ ಚೇತನಾ
  ಖಂಡಿತವಾಗಿಯೂ ನಾನು ಅದೇ ರವಿಕುಮಾರ್. ಪತ್ರಕರ್ತನಾದಮೇಲೆ
  ರವಿ ಅಜ್ಜೀಪುರ ಆಗಿದ್ದೇನೆ. ನೀವು ಹೇಗೆ ಚೇತನಾ ತೀರ್ಥಹಳ್ಳಿ ಆದ್ರಿ?
  ಇದೆಲ್ಲ ನಾವು ಬೆಳೆದಂತೆಲ್ಲ ರೂಪಾಂತರಗೊಳ್ಳುವ ಬಗೆ ಅನಿಸುತ್ತೆ.
  ಆ ವರ್ಕ್ ಶಾಪ್ ನಲ್ಲಿ ನನ್ನಷ್ಟು ತಿಂದಿದ್ದು ಬಹುಶಃ ಯಾರೂ ಇಲ್ಲ. ನಾನೇ ಮೊದಲು
  ಅಡುಗೆ ಮನೆಗೆ ಹೋಗ್ತಿದ್ದುದು. ಕೊನೆಗೆ ಬರುತ್ತಿದ್ದದ್ದೂ ನಾನೆ. ಇವತ್ತಿಗೂ ಆ ರುಚಿ
  ನನಗೆ ಸಿಕ್ಕಿಲ್ಲ. ಅಷ್ಟು ಚೆನ್ನಾಗಿ ರಘುನಾಥ್ ಸರ್ ಅಡುಗೆ ಮಾಡಿಸಿ ಹಾಕಿದ್ದರು.
  ನೆನಪಿಗೆ ಮತ್ತೆ ಮೊಳಕೆ ಬಂದಿದೆ.
  ಥ್ಯಾಂಕ್ಸ್.
  ರವಿ ಅಜ್ಜೀಪುರ

  ಉತ್ತರ

 3. ಆಲಾಪಿನಿ
  ಮೇ 16, 2009 @ 11:34:40

  ರವಿ, ಚೆನ್ನಾಗಿದೆ

  ಉತ್ತರ

 4. chetana Teerthahalli
  ಮೇ 15, 2009 @ 16:12:28

  ರವಿ!

  ನಾನು ದೇವನೂರರನ್ನು ಮೊದಲ ಬಾರಿ (ಹಾಗೂ ಕಡೆ ಬಾರಿ) ನೋಡಿದ್ದು ಅದೇ ಕ್ಯಾಂಪಸ್ಸಿನ ಅದೇ ಕಲ್ಲು ಬೆಂಚಿನ ಮೇಲೆ!!
  ಅರ್ರೆ! ನೀವೂ ಆ ವರ್ಕ್ ಶಾಪಿಗೆ ಬಂದಿದ್ರಾ? ನೆನಪಿಸಿಕೊಳ್ಳೋಕೆ ಟ್ರೈ ಮಾಡ್ತಿದೇನೆ. ನನಗೂ ಇತ್ತೀಚೆಗೆ ಅಂದಿನ ಬಹುತೇಕ ಗೆಳೆಯರು ಸಿಕ್ಕರು. ಒಂದಿಬ್ಬರು ಸ್ನೇಹಿತರಾಗಿ ಉಳಿದಿದಾರೆ… ನೀವು ಮಾತ್ರ ನೆನಪಿಂದ ತಪ್ಪಿ ಹೋಗಿದ್ದು ಹೇಗೆ ಅಂತ ಯೋಚಿಸ್ತಿದೇನೆ…
  ಆಗಲೂ ನಿಮ್ಮ ಹೆಸರು ರವಿ ಅಜ್ಜೀಪುರ ಅಂತಲೇ ಇತ್ತಾ?
  ಆಗ ನಾನಿನ್ನೂ ಚೇತನಾ ಆಗಿರಲಿಲ್ಲ. ತೀರ್ಥಹಳ್ಳಿಯ ಗಾಯತ್ರಿ ನಿಮಗೆ ನೆನಪಿರಲಾರಳು…

  ಮತ್ತೆ ಅದನ್ನೆಲ್ಲ ನೆನೆಯುವ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸ್…

  ನಲ್ಮೆ,
  ಚೇತನಾ ತೀರ್ಥಹಳ್ಳಿ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: