ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಗೆ ಅದರ ಸಂಪಾದಕ
ವಿವೇಕ ಶಾನಭಾಗ ಬರೆದ ಮಾತು ಇಲ್ಲಿದೆ
ಚಿತ್ರ: ಹರಿಪ್ರಸಾದ್ ನಾಡಿಗ್
ಪುಸ್ತಕದ ಮುಖಪುಟ ವಿನ್ಯಾಸ: ಅಪಾರ
–
ನಮ್ಮ ಮಹತ್ವದ ಲೇಖಕರ ಮರು ಓದು ನಮ್ಮ ಗ್ರಹಿಕೆಗಳನ್ನು ಮರುಪರಿಶೀಲಿಸಲಿಕ್ಕೆ ಅನುವು ಮಾಡಿಕೊಡುತ್ತದೆ. ಅಂತೆಯೇ ಇಂಥ ಕೃತಿಗಳನ್ನು ಆಗಾಗ ಚಚರ್ೆಯ ಮುಂಚೂಣಿಗೆ ತರುವುದು ಸಾಹಿತ್ಯ ವಾತಾವರಣದ ಒಟ್ಟಾರೆಯಾದ ಆರೋಗ್ಯಕ್ಕೆ ಕೂಡ ಬಹಳ ಅಗತ್ಯವೆಂದು ಈಗ, ಆಲನಹಳ್ಳಿಯವರ ಎಲ್ಲ ಕೃತಿಗಳನ್ನು ಮತ್ತೊಮ್ಮೆ ಓದುವ ಈ ಸಂದರ್ಭದಲ್ಲಿ ನನಗೆ ಪದೇಪದೇ ಅನಿಸಿತು. ಶ್ರೀಕೃಷ್ಣ ಆಲನಹಳ್ಳಿಯವರನ್ನು ನಾನು ಮೊದಲ ಬಾರಿಗೆ ಓದುವ ಸಮಯದಲ್ಲಿ ಅವರು ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಅವರ ಕಾಡು ಮತ್ತು ಗೆಂಡೆತಿಮ್ಮ ಚಲನಚಿತ್ರಗಳಾಗಿ ಯಶಸ್ಸನ್ನು ಪಡೆದಿದ್ದವು. ಅವರ ಸಾಹಿತ್ಯದ ಕುರಿತ ಚಚರ್ೆ ನಡೆಯುತ್ತಿದ್ದ ದಿನಗಳವು. ಹಾಗಾಗಿ ನನ್ನ ಆ ಮೊದಲನೆಯ ಓದು ಆಗ ಚಚರ್ೆಯಲ್ಲಿದ್ದ ಹಲವು ಸಂಗತಿಗಳಿಂದ ಪ್ರಭಾವಿತವಾಗಿತ್ತು. ಈಗ ಕಾಲದಲ್ಲಿ ದೂರ ನಿಂತು, ನಮ್ಮ ಸಾಹಿತ್ಯ ಮತ್ತು ಸಮಾಜ ಈವರೆಗೆ ಹಾದು ಬಂದ ದಾರಿಯನ್ನೂ ಗಮನದಲ್ಲಿಟ್ಟುಕೊಂಡು ನೋಡಿದಾಗ ಕೃಷ್ಣರ ಬರವಣಿಗೆಯು ಹೊಸ ಬೆಳಕಿನಲ್ಲಿ ಕಾಣತೊಡಗಿತು. ಈ ವಾಚಿಕೆಯ ಬರಹಗಳನ್ನು ಆರಿಸುವಾಗ ನಾನು ಈವತ್ತಿನ ಕಣ್ಣಿನಿಂದ ಕೃಷ್ಣರ ಬರವಣಿಗೆಯನ್ನು ನೋಡಲು ಪ್ರಯತ್ನಿಸಿದ್ದೇನೆ. ಇಂದಿನ ಹೊಸ ಓದುಗರಿಗೆ ಕೃಷ್ಣರ ಸಾಹಿತ್ಯದ ಒಂದು ನೋಟ ಕೊಡುವುದು ಹಾಗೂ ಅದರಲ್ಲಿ ಆಸಕ್ತಿ ಹುಟ್ಟಿಸುವುದು ನನ್ನ ಮುಖ್ಯ ಉದ್ದೇಶ.

ಆಧುನಿಕತೆಯ ಮೂಲಕ ಪ್ರಕಟವಾಗುವ ನಾಗರೀಕತೆಯ ಕೆಲವು ಅನಿವಾರ್ಯತೆಗಳು, ಮನುಷ್ಯನ ಮುಗ್ಧತೆ ಮತ್ತು ನೈತಿಕತೆಗಳ ನಡುವಿನ ಸೂಕ್ಷ್ಮ ಸಂಬಂಧ – ಇವೆರಡೂ ಕೃಷ್ಣರನ್ನು ಆಳವಾಗಿ ಕಾಡಿದ ವಸ್ತುಗಳು. ಅವರ ಗದ್ಯಬರಹಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾದಂಬರಿಗಳಲ್ಲಿ ಇವು ಪದೇಪದೇ ಮುನ್ನೆಲೆಗೆ ಬರುತ್ತವೆ. ಅಭಿವೃದ್ಧಿಯ ಕುರಿತ ನಮ್ಮ ವಿಚಾರಗಳನ್ನೇ ನಾವು ಪರೀಕ್ಷೆಗೊಳಪಡಿಸುವ ಅಗತ್ಯವಿರುವ ಇಂದಿನ ದಿನಗಳಲ್ಲಿ ಈ ವಸ್ತುಗಳು ಅತ್ಯಂತ ಪ್ರಸ್ತುತವಾಗಿ ಕಾಣುವುದು ಸಹಜವಾಗಿದೆ. ಸಮುದಾಯಗಳು ತಮ್ಮ ಉಳಿವಿಗಾಗಿ ನಂಬಿಕೆ, ಶ್ರದ್ಧೆ ಮತ್ತು ನಿಯಮಗಳನ್ನು ರೂಪಿಸಿಕೊಳ್ಳುವುದನ್ನು ಮತ್ತು ಇಂಥ ವ್ಯವಸ್ಥೆಯ ಒಡಲಿನಿಂದಲೇ ಅವುಗಳನ್ನು ಪ್ರಶ್ನಿಸುವ, ಮೀರುವ ಶಕ್ತಿಗಳು ಹುಟ್ಟುವ ಪ್ರಕ್ರಿಯೆಯನ್ನು ಕೃಷ್ಣ ತಮ್ಮ ಕಾದಂಬರಿಗಳಲ್ಲಿ ಬಹಳ ಸೂಕ್ಷ್ಮಜ್ಞತೆಯಿಂದ ಚಿತ್ರಿಸಿದ್ದಾರೆ. ಬದಲಾವಣೆಯೆಂಬುದು ಮನುಷ್ಯನ ಒಳಗಿನದೇ, ಅಥವಾ ಹೊರಗಿನಿಂದ ಬಂದು ಅಪ್ಪಳಿಸುವುದೇ ಎಂಬ ಪ್ರಶ್ನೆಗಳನ್ನೆತ್ತಿಕೊಂಡು ಇದರ ಹಿಂದಿರುವ ವ್ಯಕ್ತಿಕೇಂದ್ರಿತ ತುಡಿತಗಳನ್ನೂ ಪರೀಕ್ಷಿಸಿದ್ದಾರೆ. ಪೇಟೆಯ ಯಾವುದೋ ಒಂದು ವಸ್ತುವೋ, ಆಚಾರವೋ ಇನ್ನೊಂದೋ ಬಂದು ಹಳ್ಳಿಗಳನ್ನು ಕಲಕುವುದಿಲ್ಲ; ಬದಲಿಗೆ ಬದಲಾವಣೆಗೆ ತುಡಿಯುವ ಮನಸ್ಸುಗಳಿಗೆ ಅವೆಲ್ಲ ವೇಗವರ್ಧಕವಾಗುತ್ತವೆ ಎಂಬುದು ಅವರ ಬರಹಗಳಲ್ಲಿ ಸೂಚಿತವಾಗಿದೆ. ಹಾಗಾಗಿ ಯಾವುದೇ ಬದಲಾವಣೆಯನ್ನು ಚಿತ್ರಿಸುವಾಗ ಕೃಷ್ಣ ಯಾರೊಬ್ಬರ ಪರವಾಗಿಯೋ ವಿರೋಧವಾಗಿಯೋ ನಿಂತು ಎಲ್ಲವನ್ನೂ ನೋಡುತ್ತಿದ್ದಾರೆ ಅನಿಸುವುದಿಲ್ಲ. ಇದು ಅವರ ಗದ್ಯ ಬರಹಗಳಲ್ಲಿ, ಮುಖ್ಯವಾಗಿ ಕಾದಂಬರಿಗಳಲ್ಲಿ, ಕಂಡುಬರುವ ನಿಲುವು. ಇದು ಅತ್ಯುತ್ತಮವಾಗಿ ಸಾಧ್ಯವಾಗಿರುವುದು `ಪರಸಂಗದ ಗೆಂಡೆತಿಮ್ಮ ಕಾದಂಬರಿಯಲ್ಲಿ. ಈ ಕೃತಿ ಅವರ ಬರವಣಿಗೆಯ ಅತ್ಯುತ್ತಮ ಮಾದರಿಯೆಂದು ನನಗೆ ತೋರುತ್ತದೆ.
ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ಬಂಡಾಯ ಎರಡೂ ಚಳುವಳಿಗಳು ಉತ್ತುಂಗದಲ್ಲಿರುವಾಗಲೇ ಕೃಷ್ಣ ತಮ್ಮ ಬರವಣಿಗೆಯಲ್ಲಿ ಕ್ರಿಯಾಶೀಲವಾಗಿದ್ದರು ಮತ್ತು ತಮ್ಮ ಉತ್ತಮ ಕೃತಿಗಳನ್ನು ರಚಿಸಿದರು. ವೈಯಕ್ತಿಕವಾಗಿ ಎರಡೂ ಚಳುವಳಿಗಳ ಜೊತೆ ಅವರಿಗೆ ಗಾಢವಾದ ಸಂಪರ್ಕವಿತ್ತು. ಆದರೆ ಅವರ ಬರವಣಿಗೆ ಮಾತ್ರ ಈ ಯಾವೊಂದೂ ಚಳುವಳಿಯ ಪ್ರಾತಿನಿಧಿಕ ಗುಣಗಳನ್ನು ಪಡೆದಿರಲಿಲ್ಲ. ಸಾಹಿತ್ಯಕೃತಿಯೊಂದು ವೈಚಾರಿಕವಾದ ಅನುಭವವೂ ಕೂಡ ಆಗಿ ನಿಜವಾಗಬೇಕೆಂಬುದರತ್ತ ನವ್ಯದ ಮುಖ್ಯ ಬರಹಗಾರರು ದೃಷ್ಟಿ ಇಟ್ಟಿದ್ದರು. ಬರಿದೇ ಒಂದು ಕತೆಯನ್ನೋ ಕವಿತೆಯನ್ನೋ ಇಷ್ಟಪಟ್ಟರೆ ಸಾಲದು; ಯಾಕೆ ಇಷ್ಟವಾಯಿತು ಅನ್ನುವ ಪ್ರಶ್ನೆಯನ್ನು ಕೂಡ ಓದುಗ ಕೇಳಿಕೊಳ್ಳಬೇಕೆಂಬುದು ಆ ಕಾಲದ ಒಂದು ಸುಪ್ತ ಒತ್ತಾಯವಾಗಿದ್ದರಿಂದಲೇ, ಕೃತಿಯ ವೈಚಾರಿಕ ಅನುಭವದತ್ತ ವಿಮಶರ್ಾವಲಯ ಲಕ್ಷ್ಯ ಕೊಡತೊಡಗಿತು. ನಂತರದ ಬಂಡಾಯ ಚಳುವಳಿಯು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿದ್ದರಿಂದ, ಸಾಮಾಜಿಕ ಪ್ರಸ್ತುತತೆಯ ಪ್ರಶ್ನೆಗಳು ಸಾಹಿತ್ಯಕೃತಿಯ ವೈಚಾರಿಕ ಅನುಭವದ ಭಾಗವಾದವು. ಅಂದರೆ, ಬಂಡಾಯ ಚಳುವಳಿಯಿಂದಾಗಿ ಹೊಸ ಅನುಭವಲೋಕ, ಹೊಸ ಬಗೆಯ ಬರವಣಿಗೆ ಬರತೊಡಗಿತೇ ಹೊರತು ಮೂಲಭೂತವಾಗಿ ಸೃಜನಶೀಲ ಬರವಣಿಗೆಯನ್ನು ನೋಡುವ ಕ್ರಮ ನವ್ಯಕ್ಕಿಂತ ಬೇರೆಯಾಗಿರಲಿಲ್ಲ. ಆದರೆ ಕೃಷ್ಣ ಮಾತ್ರ ಇದರಿಂದ ಭಿನ್ನವಾಗಿ, ಎದೆಯಿಂದ ಎದೆಗೆ ಅನುಭವವನ್ನು ದಾಟಿಸುವಲ್ಲಿ ನಂಬಿಕೆಯಿಟ್ಟವರು. ಅನುಭವಗಳ ಅರ್ಥಶೋಧನೆಗಿಂತ ಹೆಚ್ಚಾಗಿ, ಬೌದ್ಧಿಕ ಠರಾವುಗಳನ್ನು ಕೃತಿಯಾಗಿಸುವುದಕ್ಕಿಂತ ಹೆಚ್ಚಾಗಿ ಅನುಭವಗಳನ್ನು ಅದರ ಸಂಪೂರ್ಣ, ಸಂಕೀರ್ಣ ಸ್ವರೂಪದಲ್ಲಿ ಓದುಗರಿಗೆ ದಾಟಿಸುವುದರತ್ತ ಅವರ ಲಕ್ಷ್ಯವಿದೆ. ವಿಶ್ಲೇಷಣೆಯ ಒತ್ತಾಯವನ್ನು ಅವರು ಓದುಗರ ಮೇಲೆ ಹೇರುವವರಲ್ಲ. ಈ ಗುಣದಿಂದಾಗಿ ಬಹುಶಃ ಅವರನ್ನು ನವ್ಯಕ್ಕಾಗಲೀ ಬಂಡಾಯಕ್ಕಾಗಲೀ ಪೂರ್ಣವಾಗಿ ಸೇರಿಸುವುದು ಸಾಧ್ಯವಾಗಲಿಲ್ಲ. ಆದರೆ ಸಾಹಿತ್ಯ ಸಲಕರಣೆಗಳ ಮಟ್ಟಿಗೆ ಹೇಳುವದಾದರೆ, ಅವರು ನವ್ಯಮಾರ್ಗದಿಂದ ಪ್ರಭಾವಿತರಾದರು ಹಾಗೂ ಎಲ್ಲ ಮುಖ್ಯಧಾರೆಗಳಿಂದಲೂ ತಮಗೆ ಅಗತ್ಯವಾದ ಕೌಶಲ್ಯವನ್ನು ಪಡೆದರು. ಆದ್ದರಿಂದಲೇ ವಾಸ್ತವವಾದಿ ಮಾರ್ಗವನ್ನು ತುಳಿದಾಗಲೂ ಅವರು ಭಾವೋದ್ವೇಗದ ಬರವಣಿಗೆಯನ್ನು ಮಾಡಲಿಲ್ಲ. ಹಳ್ಳಿಗಳ ಪ್ರಪಂಚವನ್ನು ಬಿಚ್ಚಿಟ್ಟಾಗಲೂ ಘೋಷಣೆಗಳ ನೆರಳಿನಲ್ಲಿ ನಿಲ್ಲಲಿಲ್ಲ. ಇದು ಅವರ ಎಲ್ಲ ಕಾದಂಬರಿಗಳ ಮಟ್ಟಿಗೆ ಹೇಳಬಹುದಾದ ಮಾತು. ಆದರೆ ಕೆಲವು ಕತೆಗಳಲ್ಲಿ ಮಾತ್ರ ಅವರು ವೈಚಾರಿಕ ಅನುಭವವನ್ನೂ ಸೃಷ್ಟಿಸಲು ಪ್ರಯತ್ನಿಸಿ ಸೋತಿದ್ದಾರೆ. ಆದ್ದರಿಂದ ಅದು ಅವರ ಚೇತನಕ್ಕೆ ಸಹಜವಾದುದಲ್ಲವೆಂದೇ ತೋರುತ್ತದೆ.
More
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು