ಮಲ್ಲಿಕಾರ್ಜುನ: ಸಂಗೀತದಲ್ಲಿ ಮನೆ ಮಾಡಿದ ಮಹನೀಯ.
ಪು ಲ ದೇಶಪಾಂಡೆ– ಸುರೇಂದ್ರನಾಥ್ ಎಸ್.
ಮಲ್ಲಿಕಾರ್ಜುನ ಮನ್ಸೂರ್ ಸಂಗೀತದಲ್ಲಿ ಮನೆ ಮಾಡಿಕೊಂಡಿದ್ದಾರೆ. ಆವರ ಅಂಚೆ ವಿಳಾಸ ‘ಮೃತ್ಯುಂಜಯ ಬಂಗಲೆ, ಧಾರವಾಡ‘ ಅಂತಿರಬಹುದು. ಆದರೆ ಅವರು ವಾಸ ಮಾಡಿಕೊಂಡಿರೋದು ಸಂಗೀತ ಪ್ರಪಂಚದಲ್ಲಿ. ಬೆಳಿಗ್ಗೆ ತೋಡಿ–ಅಸಾವರಿಯಲ್ಲಿ ಮನೆ ಮಾಡಿದ್ದಲ್ಲಿ, ಮಧ್ಯಾಹ್ನಗಳಲ್ಲಿ ಸಾರಂಗದ ನೆರಳಿನಲ್ಲಿ, ಸಾಯಂಕಾಲ ಪೂರಿಯ–ಮಾರ್ವಾ ಚಪ್ಪರಗಳಡಿಯಲ್ಲಿ, ರಾತ್ರಿ ಯಮನ್–ಭೂಪ್–ಬಾಗೇಶ್ರಿ ಮನೆಗಳಲ್ಲಿ ಅವರ ವಾಸ.
ಅಣ್ಣ ಒಬ್ಬ ನಿಷ್ಠಾವಂತ ಸಂಸಾರಸ್ಥ. ಒಬ್ಬ ಹೆಂಡತಿಯನ್ನೂ, ಐದಾರು ಮದುವೆಯಾದ, ಮದುವೆಯಾಗದ ಹೆಣ್ಣುಮಕ್ಕಳನ್ನೂ, ಒಬ್ಬ ಮಗನನ್ನೂ, ಒಬ್ಬ ಸೊಸೆಯನ್ನೂ, ಹಲವಾರು ಮೊಮ್ಮಕ್ಕಳನ್ನು ಸಾಕಿ ಸಲಹುವ ಒಬ್ಬ ಗೃಹಸ್ಥ. ತಮ್ಮ ಜೀವಮಾನದ ಉಳಿತಾಯದಿಂದ ಧಾರವಾಡದಲ್ಲಿ ಒಂದು ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅದರಲ್ಲಿರುವುದು ಒಬ್ಬ ತಂದೆ, ಒಬ್ಬ ಗಂಡ ಇತ್ಯಾದಿಗಳಾದ ಮಲ್ಲಿಕಾರ್ಜುನ ಮನ್ಸೂರ್. ಆ ತೆಳ್ಳಗಿನ ದೇಹದಲ್ಲಿ ಸಂಗೀತದಲ್ಲೇ ಮನೆ ಮಾಡಿಕೊಂಡಿರುವ ಮತ್ತೊಬ್ಬ ಮಲ್ಲಿಕಾರ್ಜುನ ಅಡಗಿದ್ದಾರೆ. ಈ ಮಲ್ಲಿಕಾರ್ಜುನ ಸಂಗೀತದಲ್ಲಿ ವಾಸ ಮಾಡಲು ತೊಡಗಿದಾಗ ಎಂಟು ವರ್ಷ ವಯಸ್ಸು. ಇವತ್ತು ಅವರಿಗೆ ಅರುವತ್ತೊಂದು. ಇನ್ನೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಈ ಸಂಗೀತಕ್ಕೆ ಅವರಿಗೆ ಯಾವುದೇ ಬಾಡಿಗೆ ಸಭಾಂಗಣದ ಅಗತ್ಯವಿಲ್ಲ. ಯಾವುದೋ ಸಂಗೀತ ಸಂಸ್ಧೆಯ ಕಾರ್ಯದರ್ಶಿಯ ಆಹ್ವಾನದ ಅಗತ್ಯವಿಲ್ಲ. ಒಂದು ಹಾರ್ಮೋನಿಯಂ ಅಥವಾ ತಬಲಾದ ಸಾಥ್ ಬೇಡ. ಅದಕ್ಕೆ ಪ್ರೇಕ್ಷಕರ ಅಗತ್ಯವೂ ಇಲ್ಲ. ಅಲ್ಲಿ ಸಂಗೀತ ಕೇಳುವ ಅಗತ್ಯವೂ ಇಲ್ಲ. ಅವರ ಕಣ್ಣಗಳನ್ನೇ ನೋಡಿ ಸಂಗೀತವನ್ನು ಅನುಭವಿಸಬಹುದು. ಅಣ್ಣ ತಮ್ಮ ಸ್ನೇಹಿತರ ಜೊತೆಯಲ್ಲಿದ್ದಾಗ ಅವರ ಜೊತೆ ಮಾತನಾಡುತ್ತಾರೆ, ಅವರ ಮಾತು ಕೇಳುತ್ತಾರೆ, ಅವರನ್ನು ನೋಡುತ್ತಾರೆ ಅಷ್ಟೇ. ಆದರೆ ನಿಜವಾಗಿಯೂ ಅವರು ಮಾತನಾಡುತ್ತಿಲ್ಲ, ಅವರ ಮಾತುಗಳನ್ನು ಕೇಳುತ್ತಿಲ್ಲ, ಅವರನ್ನು ನೋಡುತ್ತಿಲ್ಲ. ಎಲ್ಲೋ ಕಳೆದು ಹೋಗಿದ್ದಾರೆ. ಯಾವುದೋ ರಾಗದ ಸ್ವರಗಳನ್ನು ಹುಡುಕುತ್ತಿವೆ ಆ ಕಣ್ಣುಗಳು. ಇದ್ದಕ್ಕಿದ್ದ ಹಾಗೇ ಯಾವತ್ತೋ ಕಳೆದು ಹೋಗಿದ್ದ ಜೀಝ್ ಒಂದನ್ನು ಭೇಟಿಯಾದ ಸಂತೋಷ ಕಣ್ಣುಗಳಲ್ಲಿ ಮಿನುಗುತ್ತದೆ. ಮಾತುಕತೆಯ ನಡುವೆ ಸ್ವರಯಾತ್ರೆಯ ಒಬ್ಬ ಸಹಯಾತ್ರಿ ಸಿಕ್ಕಿದ ಕೂಡಲೇ ಆ ಯಾತ್ರಿಯ ಕೈ ಹಿಡಿದು, ’ಈ ಬಂಧಿಷ್ ಕೇಳು’ ಎಂದು, ಅವನನ್ನು ನಿಜ ಜೀವನದಿಂದ, ಸಂಗೀತದ ಆ ಅದ್ಭುತ ಪ್ರಪಂಚಕ್ಕೆ ಕರೆದೊಯ್ಯುತ್ತಾರೆ. ಆ ಕೂಡಲೇ ಗಡಿಯಾರದ ಕೈಗಳು ನಿಶ್ಚಲವಾಗಿ ಬಿಡುತ್ತವೆ. ಕಾಲ ನಿಂತು ಬಿಡುತ್ತದೆ. ಸುತ್ತಲಿನ ಪ್ರಪಂಚ ಕರಗಿ ಆವಿಯಾಗುತ್ತದೆ. ಆ ಕ್ಷಣದಲ್ಲಿ ಅಲ್ಲಿ ಉಳಿಯುವುದು ಸ್ವರ ಲೀಲೆಯ ಒಂದು ಅದ್ಭುತ ಚಿತ್ರ.
ಚಿತ್ರ: ಎಸ್ ಜಿ ಸ್ವಾಮಿ
ನಾನು ಅಣ್ಣನ ಸಂಗೀತವನ್ನು ಸುಮಾರು ಮೂವತ್ತೈದು ಮೂವತ್ತಾರು ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ. ಅವರ ಸಂಗೀತಕ್ಕೆ ಹೇಗೋ ಹಾಗೇ ಅವರೊಂದಿಗಿನ ಒಡನಾಟಕ್ಕೂ ಹಾತೊರೆದಿದ್ದೇನೆ. ಸಂಗೀತದ ಹುಚ್ಚು ಹಚ್ಚಿಸಿಕೊಂಡ ಒಬ್ಬನಿಗೆ ಇರಬೇಕಾದ ಎಲ್ಲಾ ಧಾವಂತಗಳು ನನಗೆ ಚಿಕ್ಕಂದಿನಿಂದಲೂ ಇವೆ. ನನ್ನ ಸ್ನೇಹಿತ ಶಾರು ರೇಡ್ಕರ್ ಮತ್ತು ನಾನು, ಇನ್ನೂ ಶಾಲಾ ಬಾಲಕರು ನಾವು, ಅಣ್ಣನ ಬೈಠಕ್ಗಳನ್ನು ಬಾಗಿಲಲ್ಲಿ ಕೂತು ಕೇಳಿದ್ದೇವೆ. ದೇವರ ಪ್ರಸಾದ ಬೇಕೆಂದಲ್ಲಿ, ಸುತ್ತಲಿನವರನ್ನು ತಳ್ಳಿ, ಮೊಣಕೈಗಳಿಂದ ದೂಡಿ ಪೂಜಾರಿಯ ಎದುರು ನಿಲ್ಲುವುದನ್ನು ಕಲಿತಿರಬೇಕು. ಅವರಿವರು ಗದರಿದರೆ, ಗದರಿಕೊಳ್ಳಲಿ ಬಿಡಿ. ಒಬ್ಬ ಮಹಾನ್ ಗಾಯಕನ ಸಮೀಪ ಹೋಗಬೇಕೆಂದಿದ್ದಲ್ಲಿ, ಆ ಯುದ್ಧದ ಎಲ್ಲಾ ತಂತ್ರಗಳನ್ನೂ ಅರಿತಿರ ಬೇಕು. ಆ ಮಹಾನ್ ಗಾಯಕ ಟಾಂಗಾದಿಂದ ಇಳಿಯುತ್ತಿದ್ದಂತೇ ಅವರ ಕೈಯ್ಯಿಂದ ತಾನ್ಪುರವನ್ನು ಇಳಿಸಿಕೊಂಡು, ಬೈಠಕ್ಕಿನ ಮೊದಲ ಸಾಲಿನಲ್ಲಿ ಕೂಡುವ ತಂತ್ರವನ್ನು ಕರಗತಮಾಡಿಕೊಳ್ಳದವನಿಗೆ ಸಂಗೀತ ಸಮಾರಾಧನೆಯ ಸಾಗರದಲ್ಲಿ ಈಜುವ ಮೊದಲ ಪಟ್ಟೂ ತಿಳಿಯದಿಲ್ಲವೆಂದೇ ಹೇಳಬಹುದು. ಅನೇಕ ಮಹಾನ್ ಸಂಗೀತಗಾರರ ಸೇವೆಯನ್ನು ನಾನು ಹೀಗೆ ಮಾಡಿದ್ದೇನೆ. ಹಾಗಾಗಿ ಭಾರತದ ಸಂಗೀತ ಪ್ರಪಂಚಕ್ಕೆ ನನ್ನದೂ ಒಂದಿಷ್ಟು ಸೇವಾಕಾಣಿಕೆಯಿದೆ. ಎಲ್ಲರಿಗಿಂತ ಹೆಚ್ಚು ನಾನು ಅಣ್ಣನ ಸೇವೆ ಮಾಡಿದ್ದೇನೆ. ಬಹಳ ಸಲ. ಅವರೊಂದಿಗೆ ಹಾರ್ಮೋನಿಯಂ ನುಡಿಸುತ್ತಾ ಅವರ ತಾಳ್ಮೆಯ ಮಿತಿಗಳನ್ನೂ ಅನುಭವಿಸಿದ್ದೇನೆ.
ತಾನ್ಪುರಾದೊಂದಿಗೆ ಮೊದಲ ಪ್ರವೇಶ ಗಿಟ್ಟಿಸುವುದರಲ್ಲಿ ಇನ್ನೂ ಒಂದು ಉದ್ದೇಶವಿದೆ. ತಾನ್ಪುರಾವನ್ನು ಶ್ರುತಿ ಮಾಡುವುದನ್ನು ಕೇಳುವ ಅನಂತ ಆನಂದ. ರಂಗದ ಮೇಲೆ ತಾನ್ಪುರಾವನ್ನು ಶ್ರುತಿ ಮಾಡುತ್ತಿರುವಾಗ ಯಾರಾದರೂ ಮಾತನಾಡಿದರೆ ನಂಗೆ ಅಸಾಧ್ಯ ಕೋಪ. ತಾನ್ಪುರಾವನ್ನು ಶ್ರುತಿ ಮಾಡುವುದನ್ನು ಕೇಳುವುದೆಂದರೆ ಒಬ್ಬ ಸುಂದರಿ ಅಲಂಕಾರ ಮಾಡಿಕೊಳ್ಳುವುದನ್ನು ನೋಡಿದಂತೆ. ಆಕೆ ಕಿವಿಗೆ ಓಲೆ ಧರಿಸಿದ ಕೂಡಲೇ ಸೌಂದರ್ಯ ಹೇಗೆ ಮಾರ್ಪಾಡಾಗುತ್ತದೋ ತಾನ್ಪುರಾದ ಜವಾರಿಯ ಮೇಲೆ ತಂತಿಗಳು ಶ್ರುತಿಗೊಂಡಾಗ ಕೂಡಾ ದೃಶ್ಯ ಹಾಗೇ ಬದಲಾಗುತ್ತದೆ. ಗಾಯಕನಿಂದ ಮೊದಲ ಶಡ್ಜ ಹೊರಹೊಮ್ಮುವುದನ್ನೇ ನಿರೀಕ್ಷಿಸುತ್ತಾ ಸುತ್ತಲಿನ ವಾತಾವರಣ ಉಸಿರು ಬಿಗಿಹಿಡಿದು ತುದಿಗಾಲಿನ ಮೇಲೆ ನಿಲ್ಲುತ್ತದೆ. ಆ ಸುಂದರಿ ನಮ್ಮತ್ತ ತಿರುಗಿ ಒಂದು ನಗು ಚೆಲ್ಲುವುದನ್ನು ಹೇಗೆ ಕಾಯುತ್ತೇವೋ, ಗಾಯಕನ ಮೊದಲ ಸ್ವರದ ಭೇಟಿಗೆ ಕೂಡಾ ಹಾಗೇ ಕಾಯುತ್ತೇವೆ. ಮೊದಲ ಮುಗುಳ್ನಗುವಿನ ಹಾಗೇ ಮೊದಲ ಸ್ವರಕ್ಕೆ ಕೂಡಾ ನಿಮ್ಮನ್ನು ಗೆಲ್ಲಬಲ್ಲ ಎಲ್ಲಾ ಶಕ್ತಿಯಿದೆ…
ಮಲ್ಲಿಕಾರ್ಜುನ ಮನ್ಸೂರ್ ತಮ್ಮ ಮೊದಲ ಸ್ವರದಿಂದಲೇ ಶ್ರೋತೃಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಲ್ಲಂತಹ ಮಹಾನ್ ಗಾಯಕ. ಕಳೆದ ಮೂವತ್ತೈದು ಮೂವತ್ತಾರು ವರ್ಷಗಳಿಂದಲೂ ಸತತವಾಗಿ ಅಣ್ಣನ ಮೊದಲ ಶಡ್ಜ, ಶ್ರುತಿ ಮಾಡಿದ ತಾನ್ಪುರದ ಮೊದಲ ಶಡ್ಜದೊಂದಿಗೆ ಲೀಲಾಜಾಲವಾಗಿ ಬೆರೆತು ಹೋಗುವುದನ್ನು ಕೇಳಿದ ಭಾಗ್ಯ ನನ್ನದು. ಅವರ ಹೃದಯದಲ್ಲಿ ಒಂದು ವೀಣೆಯಿದೆ. ಅಲ್ಲಿ ಈ ಶಡ್ಜ ಯಾವಾಗಲೂ ಝೇಂಕರಿಸುತ್ತಲೇ ಇರುತ್ತದೆ. ಹಾಗೆ ನೋಡಿದಲ್ಲಿ, ಮಲ್ಲಿಕಾರ್ಜುನ ಮನ್ಸೂರ್ ಅವರೇ ಆ ವೀಣೆ.
ಆ ಸಂಗೀತ ಸಮಾರಾಧನೆಗೆ, ಆ ಮೆಹಫಿಲ್ಗೆ ಮತ್ತೇನೂ ಬೇಡ. ನಾನು ಕೇಳಿದ ಅವರ ಸಂಗೀತದ ಬೈಠಕ್ಗಳನ್ನೇ ಯೋಚಿಸುತ್ತಾ ಹೋದರೆ, ನನಗೆ ಮತ್ತೆ ಮತ್ತೆ ಅನಿಸಿದ್ದು, ಮಲ್ಲಿಕಾರ್ಜುನ ಸಂಗೀತದಲ್ಲೇ ಮನೆ ಮಾಡಿಕೊಂಡಿರುವ ಒಬ್ಬ ಮನುಶ್ಯ. ಹಾಗಲ್ಲದೇ ಬೇರಾವ ರೀತಿಯಲ್ಲೂ ಅವರನ್ನು ವಿವರಿಸಲು ಸಾಧ್ಯವಿಲ್ಲ ಅಂತ. ಬಹಳ ವರ್ಷಗಳ ಹಿಂದೆ, ನಾನು ಹೇಳುತ್ತಿರುವುದು ಮುಂಬಯಿಯಲ್ಲಿ ಒಂದಾಣೆಗೆ (ಈಗಿನ ಐದು ಪೈಸೆಗಳಿಗೆ ಸಮ) ಒಂದು ಥಾಲೀ ಊಟ (ಅದೂ ಏನು, ತಿಂದಷ್ಟು ಅನ್ನ, ಮಜ್ಜಿಗೆ, ಜೊತೆಗೆ ಒಂದು ಹಪ್ಪಳ ಬೇರೆ) ಕಾಲದ ಕಥೆ. ಮುಂಬಯಿಯ ಆ ಸಂದುಗೊಂದುಗಳ ಜಾಲದಲ್ಲಿ ಝಾವ್ಬಾಚೀ ಚಾಳ್ನಲ್ಲಿ ಅಣ್ಣನ ಒಬ್ಬ ಗೆಳೆಯ, ತಾಯ್ಕರ್ ಅಂತ ಇದ್ರು. ಈ ತಾಯ್ಕರ್, ಬ್ರಹ್ಮಚಾರಿ, ಇದ್ದದ್ದು ಎಂಟಡಿ–ಎಂಟಡಿ ಒಂದು ಕೋಣೆಯಲ್ಲಿ. ಒಂದಿಂಚು ಹೆಚ್ಚಿಲ್ಲ. ಇಲ್ಲಿ ಒಂದು ಬೈಠಕ್ ಮಾಡಬೇಕೂಂದ್ರೆ, ಇಬ್ಬರು ತಾನ್ಪುರಾ ಹಿಡಿದವರು, ಹಾರ್ಮೋನಿಯಂ ಸಾಥೀ ಮತ್ತು ಬುವಾ (ಅಣ್ಣ) ಕೂತರೆ ಜಾಗ ಭರ್ತಿ. ತಬಲಾ ನುಡಿಸೋರು ಈ ಕೋಣೆಯ ಹೊರಗಿರೋ ಕಾಮನ್ ಬಾಲ್ಕನಿಯಲ್ಲಿ (ಇಂತಹ ಸಿಂಗಲ್ ರೂಮುಗಳ ಸಾಲುಗಳು ಅವು) ಕೂಡಬೇಕು, ಅದೂ ಏನೂ, ಅಲ್ಲಿ ಓಡಾಡುವವರು ತಬಲಾವನ್ನು ಕಾಲಲ್ಲಿ ಒದೆಯದ ಹಾಗೆ ಕಾಪಾಡಿಕೊಂಡು ತಬಲಾ ನುಡಿಸಬೇಕು.
ಬೆಳಿಗ್ಗೆ. ಆ ಕೋಣೆಯ ಒಂದು ಕಡೆ ಒಂದು ಪುಟ್ಟ ಸ್ನಾನದ ಮೂಲೆ. ಅಣ್ಣ ಆ ಬಚ್ಚಲಿನಲ್ಲಿ ಸ್ನಾನ ಮಾಡುತ್ತಾ ಕೂತಿದ್ರು. ಕೋಣೆಯ ಮತ್ತೊಂದು ಮೂಲೆಯಲ್ಲಿ ಗೋಡೆಗೆ ಒರಗಿ, ತನಗೂ ಒಂದಿಷ್ಟು ಜಾಗ ಮಾಡಿಕೊಂಡು, ಒಂದು ತಾನ್ಪುರ ನಿಂತಿತ್ತು. ಅದನ್ನು ಹೊದಿಸಿರಲಿಲ್ಲ. ಮನೆಗೆ ಬಂದ ಅತಿಥಿ ಒಬ್ಬರು ಸುಮ್ಮನಿರಲಾಗದೇ ಅದರ ತಂತಿಗಳನ್ನು ಮೀಟಿದರು. ಅಣ್ಣ ’ಹೂಂ, ನಿಲ್ಲಿಸಬೇಡ, ಮುಂದುವರೆಸು’ ಅಂತ ಸ್ನಾನದ ಮೂಲೆಯಿಂದಲೇ ಹೇಳಿದರು. ಮುಂದುವರೆಸೂ ಅಂದ್ರಲ್ಲ ಮುಗೀತು. ತಾನ್ಪುರದಲ್ಲಿ ಅಡಗಿದ್ದ ಪಂಚಮ್–ಶಡ್ಜ ಇಡೀ ಕೋಣೆಯನ್ನೇ ತುಂಬಿತು. ಬುವಾ ಸ್ನಾನದ ಮೂಲೆಯಿಂದಲೇ ತೋಡಿಯನ್ನು ಆರಂಭಿಸಿದರು. ಬಕೇಟಿನಲ್ಲಿದ್ದ ನೀರು ಮುಗಿಯಿತು. ಅವರ ಒದ್ದೆ ದೇಹ, ಮೈಮೇಲಿದ್ದ ಒದ್ದೆ ಟವೆಲ್ಲೂ ಕೂಡಾ ಒಣಗಿರಬೇಕು. ಆದರೆ ಮಂಗೇಶಿ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ಸದಾಕಾಲ ಹೇಗೆ ತುಂಬಿರುತ್ತದೋ ಹಾಗೆ ಇಡೀ ಕೋಣೆ ತೋಡಿಯ ಪ್ರವಾಹದಲ್ಲಿ ಕಂಠಪೂರ್ತಿ ಮುಳುಗಿತು. ಹಿಂದಿನ ಸಾಯಂಕಾಲ ಗಿರ್ಗಾಂವ್ನ ಅಂಬೇವಾಡಿ ಗಣೇಶ ಉತ್ಸವದಲ್ಲಿ ಅಣ್ಣ ಮೀರಾಬಾಯಿಯ ‘ಮತ್ ಜಾ ಜೋಗೀ‘ ಹಾಡಿ ಇಡೀ ಲೋಕವನ್ನು ಭೈರವಿಯಲ್ಲಿ ಮುಳುಗಿಸಿದ್ದರು. ಮನೆ ಮುಟ್ಟಿ ಮಲಗಿದ್ದವರಿಗೆ ತೋಡಿ ಕಾಡಿರಬೇಕು. ತಾನ್ಪುರಾದ ತಂತಿಗಳು ಸ್ವರವಿಕ್ಕಿದೊಡನೆಯೇ ಆ ಕಾಡುತ್ತಿದ್ದ ತೋಡಿ ಅವರ ಎದೆಯಿಂದ ಹೊರಬಂದಿದೆ. ಆ ಕ್ಷಣದಲ್ಲಿ ಆ ಕ್ಷುದ್ರ ಕೋಣೆಯನ್ನೂ, ಆ ಸ್ನಾನದ ಮೂಲೆಯನ್ನೂ ಸ್ವರಗಳ ಗುಡಿಯನ್ನಾಗಿ ಮಾಡಿತ್ತು. ನೀರಿನಿಂದ ತೊಟ್ಟಿಕ್ಕುತ್ತಿದ್ದ ದೇಹವನ್ನು ಲೆಕ್ಕಿಸದೇ, ‘ಲಂಗರ್ ಕಾ ಕರಿಯೇ‘ ರೂಪದಲ್ಲಿ ಸ್ವರಗಳ ಚಿಗುರುಗಳು ಅಲೆಯಲೆಯಾಗಿ ಹೊಮ್ಮುತ್ತಿದ್ದವು. ತೋಡಿಯ ಧಾರೆ ಅಲ್ಲಿದ್ದ ಇಬ್ಬರು ಮೂವ್ವರನ್ನು ಸಂಪೂರ್ಣ ಮುಳುಗಿಸಿತ್ತು. ಬಹುಶಃ ಯಾವುದೇ ಪವಿತ್ರ ನೀರಿನಿಂದಲೂ ಇದು ಸಾಧ್ಯವಾಗದು.
ಅಣ್ಣಂಗೆ ಅರುವತ್ತು ತುಂಬಿತು ಎಂದು ತಿಳಿದ ಕೂಡಲೇ ನಾವು, ಅವರ ಗೆಳೆಯರಲ್ಲಿ ಕೆಲವರು, ಧಾರಾವಾಡಕ್ಕೆ ಹೋಗುವ ತೀರ್ಮಾನ ಮಾಡಿದೆವು. ಹೋದೆವೂ ಕೂಡಾ. ಉಭಯ ಕುಶಲೋಪರಿಗಳು ಆದವು. ತಾನ್ಪುರಾಗಳನ್ನು ಶ್ರುತಿ ಮಾಡಲಾಯಿತು. ಅಣ್ಣ ಮುಲ್ತಾನಿ ರಾಗದಿಂದ ಆರಂಭಿಸಿದರು. ಆಮೇಲೆ ಶ್ರೀ. ಆಮೇಲೆ ಲಲಿತಾ–ಗೌರಿ. ಅಮೇಲೆ ನಟ್. ಮಾರನೇ ದಿನ ಖಥ್ ತೋಡಿ ರಾಗದಿಂದ ಬೆಳಗಾಯಿತು. ಆಮೇಲೆ ಖತ್, ಶುದ್ಧ ಬಿಲಾವಲ್ ಮತ್ತು ಸಾರಂಗ್. ಮುಂದಿನ ಮೂರು ನಾಲ್ಕು ದಿನಗಳವರೆಗೂ ರಾಗಧಾರೆ ಧುಮ್ಮಿಕ್ಕುತ್ತಲೇಯಿತ್ತು. ಆ ದಿನಗಳಲ್ಲೇ ಆಕಾಶವಾಣಿ ಕೇಂದ್ರ ಒಂದು ಟೀಪಾರ್ಟಿಯನ್ನು ಆಯೋಜಿಸಿತ್ತು. ಅಣ್ಣ ಕನ್ನಡದಲ್ಲಿ ಒಂದು ಸುಂದರ ಭಾಷಣ ಮಾಡಿದರು. ಅದಾದ ಮೇಲೆ ನಾನೂ ಒಂದು ಭಾಷಣ ಮಾಡಬೇಕಾಯಿತು. ನಾನು ಹೇಳಿದ್ದು ಇಷ್ಟೇ. ಒಬ್ಬ ಭಕ್ತ ತೀರ್ಥಯಾತ್ರೆಗೆ ಹೋಗುತ್ತಾನೆ. ಅದೇ ಶ್ರದ್ಧಾ ಭಾವದಿಂದ ಒಬ್ಬ ಸಂಗೀತ ಯಾತ್ರಿ ಧಾರವಾಡಕ್ಕೆ ಬರುತ್ತಾನೆ. ಸುದೈವದಿಂದ ನನ್ನೆಲ್ಲಾ ಸಂಗೀತಯಾತ್ರೆಗಳೂ ಫಲ ಕೊಟ್ಟಿವೆ. ಅದಕ್ಕೆ ಕಾರಣ ಅಣ್ಣ ಸಂಗೀತ ಗಂಗೆಯಲ್ಲಿ ಮುಳುಗಿದ ನನಗೆ ಸಿಕ್ಕ ಪ್ರಸಾದ. ನಾನು ಇಷ್ಟ ಪಡುವ, ನಾನು ಗೌರವಿಸುವ ಎಲ್ಲಾ ಸಂಗೀತಗಾರರ ಮನೆಗೂ ನಾನು ಅದೇ ಶ್ರದ್ಧೆಯಿಂದ ಹೋಗುತ್ತೇನೆ.
ಯಾರೋ ಅಣ್ಣನಿಗೆ ಕೇಳಿದರು, ’ಅಣ್ಣಾ, ಸಂಗೀತ ಸಾಧನೆ ಕಷ್ಟದ್ದಲ್ಲವೇ?’ ಅಂತ. ಅದಕ್ಕೆ ಅಣ್ಣ ಉತ್ತರಿಸಿದರು, ’ಕಷ್ಟವೇ? ಸಂಗೀತದಲ್ಲಿ ಕಷ್ಟವೆಲ್ಲಿಂದ ಬಂತು? ನಾನು ಗಾಯಕನಾಗಿದ್ದು ನನ್ನ ಅದೃಷ್ಟ. ನಮ್ಮ ಈ ದುನಿಯಾದಲ್ಲಿ ಕಷ್ಟ ಅನ್ನೋದೇ ಇಲ್ಲ. ಎಲ್ಲಾ ಸುಖ ಸಂತೋಷಗಳೇ.’
ಈ ಸಂಗೀತ ಜಗತ್ತಿನಲ್ಲಿ ಮನೆ ಮಾಡಿರುವ ಬಗ್ಗೆ ಅಣ್ಣನಿಗೆ ಸಂತೋಷ ಅಷ್ಟೇ ಅಲ್ಲ, ಹೆಮ್ಮೆ ಕೂಡಾ ಇದೆ. ಒಬ್ಬ ಪುಟ್ಟ ಮಗುವಿನಷ್ಟೇ ಸಹಜವಾಗಿ ಬದುಕುವ ಅಣ್ಣನಿಗೆ ಆ ಬಗ್ಗೆ ಒಂದು ಖಂಡಿತವಾದ ನಂಬಿಕೆಯಿದೆ. ಸಲಹಾಗಾರರಾಗಿ ಕೆಲಸ ಮಾಡಬಲ್ಲ ಹೆಸರಾಂತ ಸಂಗೀತಗಾರರನ್ನು ರೇಡಿಯೋ (ಆಕಾಶವಾಣಿ) ಹುಡುಕುತ್ತಿದ್ದ ಕಾಲವದು. ಅಣ್ಣನ ಆರ್ಥಿಕ ಪರಿಸ್ಥಿತಿ ಕೂಡಾ ಅಷ್ಟು ಚೆನ್ನಾಗಿರಲಿಲ್ಲ. ಆದರೂ ಅಣ್ಣ ಆ ಅವಕಾಶವನ್ನು ತಿರಸ್ಕರಿಸಿದರು. ಆಕಾಶವಾಣಿಯ ಭಾವುಸಾಹೇಬ್ ದೀಕ್ಷಿತ್ ಅಣ್ಣನ ಮನವೊಲಿಸಲು ಇನ್ನಿಲ್ಲದ ಪ್ರಯತ್ನಪಟ್ಟರೂ ಅಣ್ಣ ಒಪ್ಪಲಿಲ್ಲ. ಆಕಾಶವಾಣಿಗೆ ಹೋದಾಗ ಒಮ್ಮೆ ಕೆಲವು ಅಪರೂಪದ ಬಂಧಿಷ್ಗಳನ್ನು ಹಾಡಿ ರೆಕಾರ್ಡ್ ಮಾಡಿಕೊಟ್ಟರು. ಅಣ್ಣ ಮೆಹಫಿಲ್ಗಳಲ್ಲಿ ಹಾಡಿದರೆ ಎದೆ ತುಂಬಿ ಹಾಡುತ್ತಾರೆ. ಆದರೆ ಧಾರವಾಡ ತಮ್ಮ ಪುಟ್ಟ ಮನೆಯಲ್ಲಿ ಹಾಡುವುದೆಂದರೆ ಅವರಿಗೆ ಅತ್ಯಂತ ಆತ್ಮೀಯವಾದದ್ದು.
ಸಂಗೀತದ ಕ್ಷೇತ್ರದಲ್ಲಿ ಕೆಲವು ಉತ್ತಮ ಗಾಯಕರನ್ನು ತಯಾರು ಮಾಡುವಂತಹ ಒಂದು ಕೇಂದ್ರವನ್ನು ಸ್ಧಾಪಿಸುವ ಆಸೆ
ಅಣ್ಣನದು. ಅದಕ್ಕಾಗಿ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಆದರೆ ಅಣ್ಣನಿಗೆ ರಾಜಕೀಯದ ಕೈಚಳಕಗಳು ಗೊತ್ತಿಲ್ಲ. ವಿಶ್ವವಿದ್ಯಾಲಯಗಳು ಕಲೆಗೆ ವಿದಾಯ ಹೇಳಿರುವುದು ಅಣ್ಣನಿಗೆ ತಿಳಿದಿಲ್ಲ. ವಿಶ್ವವಿದ್ಯಾಲಯಗಳಲ್ಲಿರುವ ಜನ ಕಲೆ, ಸಂಸ್ಕೃತಿ ಇತ್ಯಾದಿಗಳ ಮೇಲೆ ಪುಟಗಟ್ಟಲೆ ಬರೀತಾರೆ. ಆಮೇಲೆ ವಿಷಯಗಳ ಮೇಲೆ ಕೆಲವು ಗೈಡ್ಗಳನ್ನೂ ಬರೆದು ಹಾಕುತ್ತಾರೆ. ಚುನಾವಣೆಯ ರಾಜಕೀಯ ನಾಟಕವಾಡುತ್ತಾರೆ. ಅಂತಹ ಒಬ್ಬ ಭೃಗು ಅಣ್ಣನ ಈ ಸಂಗೀತ ಕೇಂದ್ರದ ಕಲ್ಪನೆಯನ್ನೇ ನಾಶಮಾಡಿಬಿಟ್ಟ. ಯಾವುದೋ ಒಂದು ಮಾತುಕತೆಯಲ್ಲಿ ಆ ವ್ಯಕ್ತಿಯ ಹೆಸರು ಕೇಳಿಬಂತು. ಅಣ್ಣ ’ಬೇಡ. ನಿಲ್ಲಿಸಿ. ತಾನ್ಪುರಾಗಳಿವೆ ಎಚ್ಚರಿಕೆ. ಇಲ್ಲಿ ಅಂತಹ ನೀಚನ ಹೆಸರು ತೆಗೆಯುವುದು ಯೋಗ್ಯವಲ್ಲ. ಸ್ವರಗಳ ಸಂಗತಿಯೇನಾದರೂ ಅವನಿಗೆ ಗೊತ್ತಿದೆಯೇನು? ಅವನ ಜೋಡಿ ಮಾತನಾಡುವುದೆಂದರೇ ಅಸಹ್ಯವಾಗುತ್ತದೆ. ಸಂಗೀತದ ವಿಷಯ ಬಿಡಿ, ತಾನು ಯಾವ ವಿಷಯದಲ್ಲಿ ಪಂಡಿತ ಅಂತ ಅಂದುಕೊಂಡಿದ್ದಾನೋ ಅದರಲ್ಲೇ ಮುಳುಗಿ ಎದ್ದಿದ್ದಲ್ಲಿ ಇಷ್ಟು ಹೊತ್ತಿಗೆ ಅವನು ಒಬ್ಬ ಮನುಷ್ಯ ಆಗಿರತಿದ್ದ. ಒಂದು ನಾಯಿಗೂ ಈತನಿಗೂ ಯಾವ ವ್ಯತ್ಯಾಸ ಇದೆ ಹೇಳಿ?’ ಅಂದಿದ್ದರು.
ಅಧಿಕಾರ ದಾಹದಿಂದ ಅಮಲೇರಿದ್ದ, ಸಂಗೀತದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಈ ಅಧಿಕಾರಿಯ ಬಗ್ಗೆ ಅಣ್ಣ ಅಷ್ಟು ಖಾರವಾಗಿ ಮಾತನಾಡಿದ್ದು ಕಂಡು ಪೂರ್ವ ಕಾಲದ ಋಷಿ ಮುನಿಗಳು ಹೇಗೆ ತಾತ್ವಿಕ ಕೋಪದಲ್ಲಿ ಭುಗಿಲೆದ್ದಿರಬಹುದಿತ್ತು ಅನಿಸಿತು. ನಾನು ಅಲ್ಲಿದ್ದ ಶಿಷ್ಯರಿಗೆ ತಾನ್ಪುರಾವನ್ನು ಮೀಟುವಂತೆ ಸನ್ನೆ ಮಾಡಿದೆ. ತಾನ್ಪುರಾಗಳು ನಾದಗೈಯ್ಯ ತೊಡಗಿದವೋ ಯಮನ್ ಸ್ವರಗಳಿಂದ ವಾತಾವರಣ ಮುಚ್ಚಿ ಹೋಯಿತು. ಆ ಗಾಯಕ ಹರ್ಷದಿಂದ ಹಾಡುತ್ತಾ ತಮ್ಮ ವಾಸದ ಮನೆಗೆ ನಡೆದರು.
ದಡ ಬಿಟ್ಟ ಹಾಯಿದೋಣಿಗೆ, ನೀರಿನಲ್ಲಿ ಚಲಿಸದಷ್ಟೂ ದಡದಲ್ಲಿನ ಜಗತ್ತು ದೂರವಾಗುತ್ತಾ ಹೋಗುತ್ತದೆ. ಹಾಗೇ ಆ ಕೋಣೆಯ ಆಚೆಗಿನ ಜಗತ್ತು ದೂರ ದೂರವಾಗುತ್ತಾ ಹೋಯಿತು. ಈ ಒಳ ಪ್ರಪಂಚದಲ್ಲಿ ಇದ್ದವರು ನಾವು, ಆ ಮಹಾನ್ ಗಾಯಕ ಮತ್ತು ಆ ವಿಸ್ತಾರವಾದ ಯಮನ್ ಸಾಗರ.
(ಹೀಗೆ ಸಾಗುತ್ತದೆ ಈ ಅದ್ಭುತ ಲೇಖನ. ಇದನ್ನು ಬರೆದವರು ಖ್ಯಾತ ಮರಾಠಿ ನಾಟಕಕಾರ, ನಟ ಶ್ರೀ ಪು ಲ ದೇಶಪಾಂಡೆ. ಬರೆದದ್ದು ಕರ್ನಾಟಕದ ಮಹಾನ್ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ಅರವತ್ತು ತುಂಬಿದಾಗ. ಮಲ್ಲಿಕಾರ್ಜುನ ಮನ್ಸೂರ್ ಶತಮಾನೋತ್ಸವ ಸಮಿತಿ ಹೊರ ತಂದಿರುವ Remembering Mansur ಪುಸ್ತಕದಿಂದ ಈ ಅಧ್ಯಾಯವನ್ನು ಆಯ್ದು ಕೊಳ್ಳಲಾಗಿದೆ. ಇದರ ಪೂರ್ಣ (ಇಂಗ್ಲೀಷ್ನಲ್ಲಿ) ಓದಿಗೆ openthemagazine.com ಭೇಟಿ ಕೊಡಿ.)
ಇತ್ತೀಚಿನ ಟಿಪ್ಪಣಿಗಳು