ಗಮನಿಸಿ : ‘ಕಿ.ರಂ. ಕಮ್ಮಟ ಸಾಲೆ’ ಮುಂದೂಡಲಾಗಿದೆ …

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ 144 ನೇ ಸೆಕ್ಷನ್ ಘೋಷಿಸಿರುವುದರ ಕಾರಣ
ಅಕ್ಟೋಬರ್ 1-2  ಮತ್ತು 3 ರಂದು   ನಡೆಯಬೇಕಿದ್ದ, ಕಿ.ರಂ. ಕಮ್ಮಟಸಾಲೆ ಸಾಹಿತ್ಯ ತರಬೇತಿ ಕಾರ್ಯಾಗಾರವನ್ನು ಮುಂದೂಡಲಾಗಿದೆ.

ಲವ್ ವಿಷ್ಯ ಅಂದ್ರೆ ಹೆಚ್ಚು ಮಾರಾಟ ಆಗುತ್ತೆ ನೋಡ್ರಪ್ಪ…

ರೇಡಿಯೋ ಸದ್ದು…

ಒಂಬತ್ತು ಗಂಟೆಯ ಬಳಿಕ ಕಾರ್ಯಕ್ರಮಗಳು ಪ್ರಸಾರ ಆಗುತ್ತದಲ್ಲ ಅದರಲ್ಲಿ ಕೆಲವು ರೆಕಾರ್ಡಿಂಗ್ ಇರಬಹುದು, ಲೈವ್ ಇರಬಹುದು, ಆದರೆ ಆ ಸಮಯದಲ್ಲಿ ಕೇಳುಗ ವರ್ಗ ಬೇರೆ ಇರುತ್ತದೆ, ಹೆಚ್ಚಾಗಿ ಬಸ್ ಡ್ರೈವರ್ಸ್, ಆಟೋದವರು, ಶಾಪ್ ಕೀಪರ್ಸ್, ಕಾಲೇಜ್ ಹುಡುಗರು [ಓದಲು ರೂಂ ಬಾಗಿಲು ಜಡಿದು ಕೂತಿರ್ತಾರೆ :-) ] ಇವರೆಲ್ಲರೂ ಗಮನ ಕೊಟ್ಟು ಕೇಳ್ತಾ ಇರ್ತಾರೆ.

93 .5 ಸಂದೀಪ್, 92 .7 ನೇತ್ರ-ಮಂತ್ರ :-) , 104 ಹರೀಶ್, ಮಯೂರ್,91 .1 ಲವ್ ಗುರು , 98 .7 ಬೀಟ್ ರಾಜ ರಾಜ್ :-) ನಡೆಸಿ ಕೊಡುವ ರೀತಿ ಆಕರ್ಷಕ, ಯಾಕೇಂದ್ರೆ ಅಪಾರ ಸಂಖ್ಯೆಯ ಕೇಳುಗರು ಯಾವ ರೀತಿಯ ಕಾರ್ಯಕ್ರಮ ಕೇಳ್ತಾ ಇರ್ತಾರೆ ಅನ್ನುವುದು ಆರ್ಜೆಗಳಿಗೆ ತಿಳಿದಿರುವುದಿಲ್ಲವಲ್ಲ :-) . ಆದರೂ ನಾನು ಕಂಡಗೆ-ಕೇಳಿದಂಗೆ ಲವ್ ವಿಷ್ಯ ಅಂದ್ರೆ ಹೆಚ್ಚು ಮಾರಾಟ ಆಗುತ್ತೆ ನೋಡ್ರಪ್ಪ :-)

ಪೂರ್ಣ ಓದಿಗೆ ಮೀಡಿಯಾ ಮೈಂಡ್

ನ್ಯೂಜೆರ್ಸಿಯಲ್ಲಿ ‘ಮೇಫ್ಲವರ್’ ಬಿಡುಗಡೆ …

ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಎಚ್ ಎಸ್ ವಿ ಅನಾತ್ಮ ಕಥನ’ ಪುಸ್ತಕ ನ್ಯೂಜೆರ್ಸಿಯಲ್ಲಿ ಬಿಡುಗಡೆಗೊಂಡಿತು. ಮೇ ಫ್ಲವರ್ ಹಾಗೂ ಪ್ರಸ್ತಾಪ ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದವು. ನ್ಯೂಜೆರ್ಸಿಯ ಡಾ. ರಂಗಾಚಾರ್ ಅವರ ಮನೆ ಸಮಾರಂಭದ ಅಂಗಳವಾಗಿತ್ತು. ಎಚ್ ವೈ ರಾಜಗೋಪಾಲ್ ಪುಸ್ತಕ ಬಿಡುಗಡೆ ಮಾಡಿದರು.  ಬಿ.ಆರ್. ಲಕ್ಷ್ಮಣ ರಾವ್ , ಎಚ್.ಎಸ್ .ವೆಂಕಟೇಶಮೂರ್ತಿ ಸಮಾರಂಭದಲ್ಲಿದ್ದರು. ಅಮೆರಿಕಾದ ವಿವಿಧೆಡೆಗಳ ಕನ್ನಡಿಗರು ಭಾಗವಹಿಸಿದ್ದರು. ಶ್ರೀಕಾಂತ ಬಾಬು ಕಂಡಂತೆ ಪುಸ್ತಕ ಸಂಭ್ರಮ ಹೀಗಿತ್ತು.

ಮತ್ತಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ ಓದು ಬಜಾರ್

ಸಂಚಾರಿಯ “ಧರೆಯೊಳಗಿನ ರಾಜಕಾರಣ”

ಸಂಚಾರಿ ಥಿಯೇಟ್ರು ತಂಡ ಬೆಂಗಳೂರಿನ ರಂಗಶಂಕರದಲ್ಲಿ “ಧರೆಯೊಳಗಿನ ರಾಜಕಾರಣ” ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ.

ದಿನಾಂಕ : ಅಕ್ಟೋಬರ್14

ಸಮಯ: ಸಂಜೆ 7.30

ಸ್ಥಳ : ರಂಗಶಂಕರ ಜೆ.ಪಿ.ನಗರ ಬೆಂಗಳೂರು

ಈ ಮಾಹಿತಿ ಇಲ್ಲೂ ಸಿಗುತ್ತದೆ : invitationsblog

ಟೂರಿಂಗ್ ಟಾಕೀಸ್ : ’ದೇವ್’

-ಜಯಂತ ಕಾಯ್ಕಿಣಿ

ಪ್ರಿಯ ಗೋವಿಂದ ನಿಹಲಾನಿ,

ದೇವರಿಗಾಗಿ ಕಾದಂತೆ ನಾವೆಲ್ಲ ನಿಮ್ಮ ’ದೇವ್’ಗಾಗಿ ಕಾಯುತ್ತಿದ್ದೆವು. ಏಕೆಂದರೆ ಈ ಕರಣ ಜೋಹರ್, ಯಶ್ ಛೋಪ್ರಾ ಕಂಪನಿಗಳ ಜೇನಿನಲ್ಲಿ ಅದ್ದಿದ ಬಣ್ಣಬಣ್ಣದ ಜಿಲೇಬಿಗಳನ್ನು ತಿನ್ನುವುದಿರಲಿ, ನೋಡಿಯೇ ನಾಲಿಗೆ ಕೆಟ್ಟು ಹೋಗಿದೆ.

ಡಾಲರ್ ಕನಸಿನ ದೇಸೀ ಆವೃತ್ತಿಯನ್ನು ಮಧ್ಯಮ ವರ್ಗದ ಮನೆಗಳಲ್ಲಿ ಬಿತ್ತುತ್ತಿರುವ ಇಂಥ ಹುಸಿ ಆಡಂಬರದ ಫಾರ್ಮ್ಯುಲಾ ಒಂದು ಕಡೆ ಆದರೆ, ಅಪ್ ಮಾರ್ಕೆಟ್, ನಿಶ್ ಮಾರ್ಕೆಟ್ ಎಂದು ಮುಂಬಯಿಯ ಭೂಗತ ಜಗತ್ತು, ಇಂಗ್ಲಿಷ್-ಹಿಂದಿ ಮಿಶ್ರಣ, ಒಂದಿಷ್ಟು ಹಸಿ ಶಕ್ತಿಯ ಕುಲುಕು ಹೊಂದಿರುವ ಅಡ್ನಾಡಿ ಪರದೇಶಿ ಫಾರ್ಮ್ಯುಲಾ ಇನ್ನೊಂದು ಕಡೆ.

ಕಾಲು ಶತಮಾನದ ಹಿಂದೆ ಓಂ ಪುರಿ ಎಂಬ ಅನಾಮಿಕ ನಟನನ್ನು ಒಂದೂ ಮಾತಿಲ್ಲದ ಒಳ ತುಡಿತದ ಪಾತ್ರ ಕೊಟ್ಟು “ಆಕ್ರೋಶ್” ಮೂಲಕ ತೆರೆಗೆ ತಂದವರು ನೀವು. ಆ ಮೊದಲೇ ಶಾಂ ಬೆನಗಲ್, ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೇ, ವಿಜಯ್ ತೆಂಡೂಲ್ಕರ್ ಗರಡಿಯಲ್ಲಿ ನಿಮ್ಮ ಕಣ್ಣಿನ ಜತೆಗೆ ಸಂವೇದನೆಯನ್ನೂ ಹರಿತ ಮಾಡಿಕೊಂಡವರು.(ಕಾಡು, ಮಂಥನ್, ಭೂಮಿಕಾ, ಅಂಕುರ್, ನಿಶಾಂತ್, ಕಲ್‌ಯುಗ್‌ಗಳ ಛಾಯಾಗ್ರಾಹಕರು ನೀವು.) ಸ್ವತಂತ್ರವಾಗಿ “ಆಕ್ರೋಶ್” ಮಾಡಿದ ನಂತರ “ಅರ್ಧಸತ್ಯ”ದ ಮೂಲಕ ಹೊಸ ಅಲೆಯ ಚಿತ್ರಗಳು ಅದ್ಭುತವಾದ ಎನರ್ಜಿಯನ್ನು ಹೊಂದಬಲ್ಲವು ಎಂಬುದನ್ನು ತೋರಿಸಿ ಕೊಟ್ಟಿರಿ.

ಅವಾರ್ಡ್ ಚಿತ್ರಗಳು ಎಂದರೆ ರಾತ್ರಿ ಕೀಟಗಳ ಜೀರುಂಡೆ ಸದ್ದುಗಳ ನಡುವಿನ ಸುದೀರ್ಘ ಆಕಳಿಕೆ ಎಂಬ ಆಗಿನ ಇನ್‌ಸ್ಟಿಟ್ಯೂಟ್‌ಗಳಿಂದ ಹೊರಬಿದ್ದ ಗಡ್ಡಸಿದ್ದಾಂತಿಗಳ ವರಸೆಯನ್ನು ಮುರಿದಿರಿ. “ತಮಸ್”ನಲ್ಲಂತೂ ಕೋಮು ತಲ್ಲಣದ ಭಯವನ್ನು ನೆತ್ತರಿನಲ್ಲೇ ಉದ್ದೀಪಿಸುವಷ್ಟು ಪರಿಣಾಮಕಾರಿಯಾಗಿ ಬಿಂಬಿಸಿದಿರಿ.”ಗೋವಿಂದ ನಿಹಲಾನಿ ಛಾಯಾಗ್ರಾಹಕ.

ಆದ್ದರಿಂದ he will be obsessed with his frames and images ಕೇವಲ ನೋಡೋಕಷ್ಟೆ ಚೆನ್ನಾಗಿರಬಹುದಾದ ಚಿತ್ರಗಳನ್ನು ತೆಗೀಬಹುದು” ಎಂದು ಅನುಮಾನ ಪಟ್ಟವರೆಲ್ಲ ನಿಮ್ಮ ದೃಶ್ಯಗಳ ಹಿಂದಿನ ವಿವಿಧ ಅರ್ಥಸ್ತರಗಳಿಗೆ ಮಾರು ಹೋದರು. ಅಂದರೆ ಕಾಣುವುದನ್ನು ನಿಚ್ಚಳವಾಗಿ ತೋರಿಸುತ್ತಲೇ-ಅದರ ಜತೆಗೆ ಅಗೋಚರವನ್ನೂ ಉದ್ದೀಪಿಸುವ ಸಿನಿಮಾ ಕಲೆಯನ್ನು ಪಳಗಿಸಿಕೊಂಡಿರಿ.

’ಅರ್ಧಸತ್ಯ’ದಲ್ಲಿ ಓಂಪುರಿ ಸ್ಮಿತಾ ಪಾಟೀಲ್ ಜತೆ ಒಂದು ಸಾರ್ವಜನಿಕ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ತನ್ನೊಳಗಿನ ಹಿಂಸೆಯನ್ನು ತೋಡಿಕೊಳ್ಳುವ ದೃಶ್ಯ ’ತಮಸ್’ನಲ್ಲಿ ಸ್ವತಃ ಛಾಯಾಗ್ರಾಹಕರಾದ ನೀವು-ನಿಮ್ಮ ಗುರು ವಿ.ಕೆ ಮೂರ್ತಿ ಅವರನ್ನು ಛಾಯಾಗ್ರಾಹಕರಾಗಿ ಬಳಸಿಕೊಂಡು ತೆಗೆದ ಹೊಗೆ ಕವಿದ ಭಯತ್ರಸ್ತ ದಂಗೆಯ ನಿರ್ಜನ ಬೀದಿಗಳ ಚಿತ್ರ; ’ದೃಷ್ಟಿ’ಯಲ್ಲಿ ಶೇಖರ್ ಕಪೂರ್, ಡಿಂಪಲ್ ಕಪಾಡಿಯಾಗೆ ತನ್ನ ’ಪ್ರೇಮದ್ರೋಹ’ಕ್ಕೆ ಸಮಜಾಯಿಷಿ ಕೊಡುತ್ತ “ಅವಳನ್ನು ಕಂಡು ನನಗೆ ೧೫ ವರುಷಗಳ ಹಿಂದಿನ ನಿನ್ನನ್ನು ಕಂಡಂತಾಯಿತು” ಎಂದು ಅಂಗಲಾಚುವ ಮತ್ತು ಮಳೆಗಾಲದ ಕೆಂಪು ಸಮುದ್ರದ ತೀರದಲ್ಲಿ ಇಬ್ಬರೂ ಮಾತಿಲ್ಲದೆ ನಡೆಯುವ ದೃಶ್ಯ… ಎಲ್ಲ ನೆನಪಾಗುತ್ತಿವೆ.

ಯಾಕೆ ಎಂದರೆ ಒಳ್ಳೆಯ ಸಿನಿಮಾ ಎಂದರೆ ಕಾಣಿಸುವುದರ ಜತೆಗೆ ಕಾಣದ ಸ್ವರಗಳನ್ನೂ ಅನುಭವ ವಲಯಗಳನ್ನೂ ನಮ್ಮಲ್ಲಿ ಹುಟ್ಟಿಸುತ್ತದೆ ಎಂಬ ನಂಬಿಕೆಯನ್ನು ಬಲಗೊಳಿಸಿದ ದೃಶ್ಯ ರುವಾರಿ ನೀವು(ಬೆನಗಲ್,ಅಡೂರ್,ಹರಿಹರನ್,ಗೌತಮ್ ಘೋಷ್,ಕೇತನ ಮೆಹ್ತಾ ಇವರೆಲ್ಲರಂತೆ).

ನಿಮ್ಮ ’ತಕ್ಷಕ್’ ನಾನು ನೋಡಲಿಲ್ಲ. ಏನೋ ಹಿಂಜರಿಕೆ. ಅದರ ಹಾಡುಗಳನ್ನು ನೋಡಿ, ಬೇಡ ಅನಿಸಿತು. ’ದೇಹಂ’ ನೋಡಲು ಸಿಗಲಿಲ್ಲ. ಹೀಗಾಗಿ ದೇಶಾದ್ಯಂತ ’ದೇವ್’ ಬಿಡುಗಡೆ ಆಗುತ್ತಿದೆ ಎಂದಾಗ ಉತ್ಕಟನಾಗಿ ಕಾದೆ. ಅದರ ದೊಡ್ಡ ದೊಡ್ಡ ಪೋಸ್ಟರುಗಳು, ಅಮಿತಾಬ್, ಅಡ್ವಾನ್ಸ್ ಬುಕ್ಕಿಂಗ್, ಮೀಡಿಯಾ ಜಾಹೀರಾತು ಎಲ್ಲ ನೋಡಿ ಹೆಮ್ಮೆಪಟ್ಟೆ ನೀವು, ಬೆನಗಲ್ ಎಲ್ಲ ಚಿತ್ರಗಳನ್ನು ಬರೆ ಕ್ಯಾನ್‌ಗಳಲ್ಲಿ ತುಂಬಿ ’ಕಾನ್’ ಉತ್ಸವಗಳಿಗೆ ಮಾತ್ರ ಹೊತ್ತುಕೊಂಡು ಹೋಗುವುದೆ ಎಂದೆಲ್ಲ ಹಿಂದೆ ಬೇಸರಪಟ್ಟ ನನ್ನಂಥ ಅಭಿಮಾನಿಗಳಿಗೆ-ನಿಮ್ಮ ಚಿತ್ರಗಳು ಈಗ ಹೀಗೆ ಅಬ್ಬರದಿಂದ ಆಗಿನ ’ಅಮರ್ ಅಕ್ಬರ್ ಅಂತೋನಿ’ ಚಿತ್ರಗಳಂತೆ ಬಿಡುಗಡೆ ಆಗುವುದು ಅಭಿಮಾನದ ಸಂಗತಿ. ಅದು ನಮ್ಮ ಉದ್ಯಮದ ಶೀಲ ಬೆಳೆದದ್ದರ ಪುರಾವೆ. ಆದರೆ,

ಚಿತ್ರ ನೋಡಿದ್ದೇ ತುಂಬಾ ಸಿಟ್ಟು, ಬೇಸರ ಎಲ್ಲಾ ಬಂದು ಬಿಟ್ಟಿತು. ಕೋಮುಗಲಭೆಯಂಥ ಅತ್ಯಂತ ತೀಕ್ಷ್ಣ ಮತ್ತು ಸೂಕ್ಷ್ಮ ವಸ್ತುವನ್ನು ’ಬಳಸಿ’ಕೊಂಡಂತೆ , ಒಂದು ಚಪ್ಪಟೆಯಾದ, ಯಾವ ರೀತಿಯಿಂದಲೂ ವೀಕ್ಷಕರನ್ನು ಬೆಳೆಸದ, ಯಾವ pseudo secularist ಗಳನ್ನು ಓಂ ಪುರಿ ಚಿತ್ರದಲ್ಲಿ ಬೈಯುತ್ತಾನೋ-ಅಂಥದೇ pseudo ಆದ ಒಂದು, ಪತ್ರಿಕಾ ವರದಿಯ feature ನಂಥ ಚಿತ್ರ ಮಾಡಿಬಿಟ್ಟಿದ್ದೀರಿ.

ನಿಮ್ಮ ಉದ್ದೇಶದ ಪ್ರಾಮಾಣಿಕತೆಯ ಬಗ್ಗೆ ಖಂಡಿತ ನಮಗೆ ಸಂಶಯವಿಲ್ಲ. ಮನುಷ್ಯ ಮನುಷ್ಯನನ್ನು ಜಾತಿ, ಧರ್ಮದ ಆಧಾರದ ಮೇಲೆ ದ್ವೇಷಿಸುವ-ದಳ್ಳುರಿಯನ್ನು ರಾಜಕಾರಣಿಗಳು ಬಳಸುವ ರೀತಿ, ಅದಕ್ಕೆ ಅಮಾಯಕರು ಬಲಿಯಾಗುವ ರೀತಿ… ಇದಕ್ಕೆ ಅತ್ಯಂತ ಸ್ಪಂದನಾಶೀಲವಾಗಿ ನೀವು ಚಿತ್ರ ಮಾಡಲು ಹೊರಟಿರಿ ನಿಜ. ಆದರೆ ಫಲ?

ನಾನು ಬೆಂಗಳೂರಿನಲ್ಲಿ ಚಿತ್ರ ನೋಡಿದ ಟಾಕೀಸಿನಲ್ಲಿ ಚಿತ್ರ ನೋಡುತ್ತಿದ್ದಂತೆ ಜನ ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟರು! ಓಂಪುರಿ “ನಾವು ಹಾವಿಗೆ ಹಾಲೆರೆಯುತ್ತಿದ್ದೇವೆ”. ಎಂದು ಹೇಳಿದಾಗ ಕೆಲವರು ಚಪ್ಪಾಳೆ ತಟ್ಟಿದರೆ, ಫರ್‌ದೀನ್ ಖಾನ್ ” ಹಿಂದು ಮುಸ್ಲಿಂ ಬಾಂಧವ್ಯವೆಲ್ಲ ಬೊಗಳೆ.

ಸುಳ್ಳು. ಗೊಡ್ಡು ಆದರ್ಶ” ಎಂದಾಗ ಇಡೀ ಥೇಟರು ಚಪ್ಪಾಳೆ ತಟ್ಟಿತು! ಅಂದರೆ ಚಿತ್ರದುದ್ದಕ್ಕೂ ಕೋಮುದ್ವೇಷವನ್ನು ಬಿಂಬಿಸಲು ನೀವು ಬಳಸಿದ ಎಲ್ಲ ದೃಶ್ಯಗಳೂ ತೀರ ಆಳವಾಗಿ ಪ್ರಭಾವ ಬೀರುತ್ತಿದ್ದವು ಅಂದಾಯಿತು. ಮುಂದೆ? ಮುಂದೇನಾಗಬೇಕು? ಈ ನೆಲೆಯಿಂದ ಚಿತ್ರ ಒಂದು ಮಾನವೀಯವಾಗಿ ವಿಶಾಲವಾದ ವರಪೇಕ್ಷಕ್ಕೆ ನೆಗೆದು-ಈ ಎಲ್ಲ ದ್ವೇಷದ ಅರ್ಥಹೀನತೆಯನ್ನು ಮನಗಾಣಿಸಬೇಕಲ್ಲವೆ? ಕಲೆ ಮಾಡಬೇಕಾದ್ದು ಅದನ್ನಲ್ಲವೆ? ಇಲ್ಲ, ಹಾಗಾಗುವುದಿಲ್ಲ.

ಎರಡು ಗಂಟೆಯುದ್ದಕ್ಕೂ ದ್ವೇಷದ ಬೀಜಗಳನ್ನು ಇಬ್ಬಣದಲ್ಲೂ ಬಿತ್ತುತ್ತ ಹೋಗುವ ಚಿತ್ರ, ಕೊನೆಗೆ ಹಠಾತ್ತನೆ ನಮ್ಮನ್ನು ಆ ಅರೆಸ್ಥಿತಿಯಲ್ಲೇ ಬೀದಿಗೆ ಬಿಟ್ಟು ಬಿಡುತ್ತದೆ. ಅರ್ಧ ಹಿಪ್ನೋಟಿಸಂ ಮಾಡಿ ಜನರನ್ನು ಬೀದಿಗೆ ಬಿಟ್ಟಂತಿದೆ ಅದು! ಅದರಷ್ಟು ಅಪಾಯಕಾರಿ ಸಂಗತಿ ಬೇರಿಲ್ಲ.

ಕಮರ್ಶಿಯಲ್ ಎನ್ನಲಾದ ಚಿತ್ರಗಳ ಮಚ್ಚು ಮಾರಾಮಾರಿ, ಟೊಮೆಟೊ ರಕ್ತ ಕ್ರೌರ್ಯಗಳೆಲ್ಲ ಎಷ್ಟೇ ಗಲೀಜಾಗಿದ್ದರೂ- ಚಂದಮಾಮದ ಕತೆಯಂಥ ಒಂದು ಅವಾಸ್ತವಿಕ ವ್ಯಾಕರಣದಲ್ಲಿ ಪಚನಗೊಂಡುಬಿಡುತ್ತವೆ. ಆದರೆ ಇಲ್ಲಿ ನೀವು ವಾಸ್ತವದ ವಿವರಗಳನ್ನು ಇಟ್ಟು ಕತೆ ಕಟ್ಟಲು ಹೊರಟಿದ್ದೀರಿ.

More

ಜೋಗಿ ಬರೆಯುತ್ತಾರೆ: ಸಂತೋಷಪಡುವುದಕ್ಕೆ ಎರಡು ಕಾರಣ

ಸಂತೋಷಪಡುವುದಕ್ಕೆ ಎರಡು ಕಾರಣ. ಈ ಸಲದ ಎರಡೂ ಜ್ಞಾನಪೀಠ ಪ್ರಶಸ್ತಿಗಳೂ ಕವಿಗಳ ಪಾಲಾಗಿದೆ. ದುಃಖಪಡುವುದಕ್ಕೆ ಒಂದು ಕಾರಣ, ಆ ಪಟ್ಟಿಯಲ್ಲಿ ಕನ್ನಡ ಲೇಖಕರ ಹೆಸರಿಲ್ಲ. ಪ್ರತಿಸಲ ಜ್ಞಾನಪೀಠ ಪ್ರಶಸ್ತಿ ಘೋಷಣೆ ಹತ್ತಿರಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳು ಈ ಸಲವಾದರೂ ಎಸ್ ಎಲ್ ಭೈರಪ್ಪನವರಿಗೆ ಬಂದೀತು ಎಂದು ಪ್ರೀತಿಯಿಂದ ನಿರೀಕ್ಷಿಸುತ್ತಾರೆ. ಹಾಗೇ ಕಂಬಾರರ ಅಭಿಮಾನಿಗಳದ್ದೂ ಅದೇ ನಿರೀಕ್ಷೆ. ಈ ಮಧ್ಯೆ ಜಿ ಎಸ್ ಶಿವರುದ್ರಪ್ಪನವರ ಹೆಸರನ್ನೂ, ಚನ್ನವೀರ ಕಣವಿಯವರ ಹೆಸರನ್ನೂ ಅನೇಕರು ಪ್ರಸ್ತಾಪಿಸುವುದುಂಟು.

ಮಲಯಾಳಿ ಕವಿ ಕುರುಪ್ ಕುರಿತು ಹೆಚ್ಚಿನ ಮಾಹಿತಿ ಇರುವವರು ದಕ್ಷಿಣ ಕನ್ನಡಿಗರು. ಅವರು ಅನೇಕ ಸಿನಿಮಾಗಳಿಗೆ ಸೊಗಸಾದ ಗೀತರಚನೆ ಮಾಡಿದವರು. ಹತ್ತೋ ಹನ್ನೆರಡೋ ಸಿನಿಮಾ ಪ್ರಶಸ್ತಿಗಳನ್ನು ಆ ಗೀತೆಗಳಿಗೆ ಗೆದ್ದುಕೊಂಡವರು. ಕೇರಳದಲ್ಲಿ ಸಿನಿಮಾ ಮತ್ತು ಸಾಹಿತ್ಯದ ನಡುವೆ ನಮ್ಮಲ್ಲಿರುವಷ್ಟು ಅಗಾಧ ಕಂದರ ಇಲ್ಲ. ಅಲ್ಲಿನ ಅತ್ಯುತ್ತಮ ಲೇಖಕರಲ್ಲಿ ಅನೇಕರು ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಅದರಿಂದ ತಮ್ಮ ಘನತೆಗೆ ಕುಂದು ಬಂದೀತೆಂದು ಅವರೆಂದೂ ಭಾವಿಸಿಲ್ಲ.

ಅಲ್ಲಿನ ಚಿತ್ರರಂಗವೂ ಹಾಗೇ ಇದೆ. ಅನೇಕ ಸಿನಿಮಾಗಳು ಕಾವ್ಯದಂತಿರುತ್ತವೆ. ಕವಿಯಷ್ಟೇ ಸೂಕ್ಷ್ಮ ನಿರ್ದೇಶಕರಿದ್ದಾರೆ. ಸಣ್ಣ ಸಣ್ಣ ತಲ್ಲಣಗಳನ್ನು, ಕವಿತೆಯಷ್ಟೇ ಹಿಡಿದಿಡಬಹುದಾದ ಭಂಗುರ ಕ್ಷಣಗಳನ್ನು ಅವರು ಸಿನಿಮಾದಲ್ಲಿ ಹಿಡಿದಿಡಲು ಶ್ರಮಿಸುತ್ತಾರೆ. ಅಂಥ ಸಿನಿಮಾಗಳಿಗೆ ಹಾಡು ಬರೆಯುವುದು ಕವಿಗೂ ಪ್ರೀತಿಯ ಕೆಲಸವೇ. ಇನ್ನೂ ಮಲಯಾಳಂ ಚಿತ್ರಗೀತೆಗಳು ತಮ್ಮ ಮೂಲಲಯ ಕಳೆದುಕೊಂಡಿಲ್ಲ ಎನ್ನುವುದನ್ನು ಗಮನಿಸಿ. ಸೋನುನಿಗಮ್ ಹಾಡಿದರೆ ಅವರಿಗೆ ರುಚಿಸುವುದೇ ಇಲ್ಲ. ಜೇಸುದಾಸ್ ಇವತ್ತಿಗೂ ಅಲ್ಲಿ ಅಮರ ಗಾಯಕ.

ಉರ್ದು ಕೂಡ ಅಷ್ಟೇ. ಅತ್ಯುತ್ತಮ ಗಜಲ್‌ಗಳನ್ನು ಕೊಟ್ಟ ಉರ್ದು ಯಾವತ್ತೂ ಲಯ ಮತ್ತು ರೂಪಕತೆಯನ್ನು ಬಿಟ್ಟು ಕೊಡಲಿಲ್ಲ. ಮೊನ್ನೆ ಮೊನ್ನೆ ಜಾವೆದ್ ಅಖ್ತರ್ ಉರ್ದು ಭಾಷೆಯನ್ನು ಕೊಂಡಾಡುತ್ತಾ, ಹಿಂದಿ ಚಿತ್ರರಂಗ ಹೇಗೆ ಆ ಭಾಷೆಯ ಶ್ರೀಮಂತಿಕೆಯನ್ನು ಕಳಕೊಂಡು ಕೇವಲ ದುಂದುವೆಚ್ಚ ಮಾಡುವುದರಲ್ಲಿ ನಿರತವಾಗಿದೆ ಎನ್ನುವುದನ್ನು ಬೇಸರದಿಂದ ಹೇಳಿಕೊಂಡಿದ್ದರು.

ಕಾವ್ಯ ಮತ್ತು ನಾಟಕ ನಮ್ಮದೇ ಆದ ಅಭಿವ್ಯಕ್ತಿ ವಿಧಾನ. ಕತೆ, ಕಾದಂಬರಿಯಂಥ ಪ್ರಕಾರಗಳು ಆನಂತರ ಬಂದವು. ಮಹಾಕಾವ್ಯ ಮತ್ತು ಮಹಾನಾಟಕಗಳ ಮೂಲಕವೇ ಭಾರತೀಯ ಭಾಷೆಗಳು ಎಲ್ಲವನ್ನೂ ಹೇಳಿದ್ದು. ನಮ್ಮಲ್ಲಿ ವಿಜ್ಞಾನ ಕೂಡ ಕಾವ್ಯರೂಪದಲ್ಲಿ ಹೇಳಲ್ಪಟ್ಟಿತು ಅನ್ನುವುದನ್ನು ಮರೆಯುವಂತಿಲ್ಲ. ಶಾಸ್ತ್ರಗಳೂ ಕಾವ್ಯದ ಲಯದಲ್ಲೇ ಇದ್ದುಕೊಂಡು ಶ್ರುತಿ ಮತ್ತು ಶ್ರೌತಕ್ಕೆ ಇಂಬುಕೊಟ್ಟವು. ಕೇಳುವುದು ಮತ್ತು ನೆನಪಿಟ್ಟುಕೊಳ್ಳುವುದರ ಮೂಲಕವೇ ಕಾವ್ಯವನ್ನು ಪ್ರಚರಿಸುತ್ತಾ ಬಂದವರು ನಾವು.

More

%d bloggers like this: