ಕರ್ನಾಟಕ ಪ್ರಕಾಶಕರ ಸಂಘ ಪುಸ್ತಕೋದ್ಯಮದಲ್ಲಿ ಆಸಕ್ತಿ ಇರುವವರಿಗೆ ಒಂದು ದಿನದ ಶಿಬಿರವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಅವಧಿಯಲ್ಲಿ ಪ್ರಕಟವಾದಾಗ ಹಿರಿಯ ಪುಸ್ತಕೋದ್ಯಮಿ, ಆತ್ಮೀಯರಾದ ಜಿ ಎನ್ ಅಶೋಕವರ್ಧನ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ- ನಿಮ್ಮ ಸಲಹೆ ಚರ್ಚೆಗೆ ಸ್ವಾಗತ
ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ ಇಂಥದ್ದೇ ಒಂದು ಶಿಬಿರವನ್ನು ಅಂಕೋಲದಲ್ಲಿ ಶ್ರೀ ವಿಷ್ಣು ನಾಯಕ್ ಅವರ ಸಹಯೋಗದಲ್ಲಿ ನಡೆಸಿದ್ದಾಗ ನಾನು ಆಹ್ವಾನಿತನಾಗಿ ಭಾಗವಹಿಸಿದ್ದೆ. ಮತ್ತೂ ಹಿಂದೆ ಡಾ| ರಾಜಕುಮಾರ್ ಎನ್ನುವವರು ಕೆಲವು ಊರು ತಿರುಗಿ ಇಂಥವೇ ಕಮ್ಮಟಗಳನ್ನು ಹೆಚ್ಚುಕಡಿಮೆ ವೈಯಕ್ತಿಕ ನೆಲೆಯಲ್ಲೇ ನಡೆಸಿದ್ದೂ ನನಗೆ ತಿಳಿದಿದೆ. ಅಲ್ಲೆಲ್ಲ ಅಂತಿಮವಾಗಿ ಹೊಲ ಹಸನು ಮಾಡುವ, ಉತ್ತಮ ಬೆಳೆ ತೆಗೆಯುವ ಮಾತು ಬರಲಿಲ್ಲ; ಕೇವಲ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ಈಗ ಈ ಪ್ರಕಾಶಕರ ಸಂಘವಾದರೂ ಹೆಚ್ಚಿನದನ್ನು ಸಾಧಿಸುವ ನಿರೀಕ್ಷೆ ನನಗಿಲ್ಲ.
ಕನ್ನಡ ಪುಸ್ತಕ ಪ್ರಾಧಿಕಾರ ಇದೇ ಅಕ್ಟೋಬರ್ ಸುಮಾರಿಗೆ ಮಂಗಳೂರಿನಲ್ಲಿ ‘ಪುಸ್ತಕ ಮೇಳ’ ನಡೆಸಲು ಭಾರೀ ರಂಗ ವ್ಯವಸ್ಥೆಗೆ ಟೆಂಡರ್ ಕರೆದದ್ದನ್ನು ನೋಡಿದೆ. ಇದರಲ್ಲಿ ಲಕ್ಷಾಂತರ (ಕೋಟಿಯೂ ಇರಬಹುದು) ಹುಡಿ ಹಾರಿಸಿದ ಮೇಲೆ ಸೇರುವ ಪುಸ್ತಕಗಳೇನೇನು ಎಂದು ಯೋಚಿಸಿದರೆ ವಿಷಾದವೊಂದೇ ಉಳಿಯುತ್ತದೆ. ಎಲ್ಲಾ ವಿವಿನಿಲಯಗಳು, ಇಲಾಖೆಗಳು ತಮ್ಮ ಮಾಸಲು, ಗೆದ್ದಲುಹಿಡುಕ ಪುಸ್ತಕಗಳ ಹೊರೆಯೊಡನೆ ಬೀಡುಬಿಟ್ಟು ಕನಿಷ್ಠ ೨೫% ರಿಂದ ೫೦%ರವರೆಗೆ ರಿಯಾಯ್ತೀ ವ್ಯಾಪಾರ ಭಯಂಕರವಾಗಿ ನಡೆಸುತ್ತಾರೆ.
ಮತ್ತೆ ಕೆಲವು ತಾಕತ್ತಿನ ಪ್ರಕಾಶನ ಸಂಸ್ಥೆಗಳು ನಾಲ್ಕೆಂಟು ಗುಪ್ತನಾಮಗಳಲ್ಲಿ ಹರಡಿ, ಮೇಳದ ಆಯಕಟ್ಟಿನ ಜಾಗಗಳಲ್ಲೆಲ್ಲಾ ತಮ್ಮ ಪ್ರಕಟಣೆಗಳ ಹೆದ್ದೆರೆಗಳನ್ನು ಎಬ್ಬಿಸಿ ಗಿರಾಕಿಗಳನ್ನು ಕೆಡವಲು ವ್ಯೂಹ ರಚಿಸುತ್ತಾರೆ. ಅಪ್ಪಿ ತಪ್ಪಿ ನುಗ್ಗಿದ ಸಣ್ಣಪುಟ್ಟ ಪ್ರಕಾಶಕರು ಒಂದೋ ಶರಣಾಗಿ ಅಥವಾ ಹತಾಶೆಯಿಂದ ಬಳಲುತ್ತಿರುತ್ತಾರೆ.
ಮತ್ತೆ ಚಾಟ್ ಜ್ಯಾಮ್ಗಳು, ಅತ್ಯುತ್ತಮ ಟೊಪ್ಪಿ ಹೊಲಿಯುವುದು ಹೇಗೆ, ಹಕ್ಕಿ ಕವಡೆ ಶಾಸ್ತ್ರದವರಂತೂ ಬೇಕೇ ಬೇಕು – ಮೇಳದ ಕೊನೆಯಲ್ಲಿ ‘ಯಶಸ್ಸಿನ ಮಾನಕ’ ಇರುವುದೇ ಇವರ ಕೈಯಲ್ಲಿ.
ಹಾಯ್ ಕನ್ನಡ ತಾಯ್!
ಅಶೋಕವರ್ಧನ
ಇತ್ತೀಚಿನ ಟಿಪ್ಪಣಿಗಳು