ಭಟ್ಟರಿಗೆ ನಮಸ್ಕಾರ
ಯೋಗರಾಜ ಭಟ್ಟರಿಗೆ ನಮಸ್ಕಾರಗಳು,
ತಮ್ಮಲ್ಲಿ ಯೋಗಕ್ಷೇಮ ವಿಚಾರಿಸುವುದೂ ಮಟನ್ ಅಂಗಡಿಯಲ್ಲಿ ಮಲ್ಲಿಗೆ ಹೂ ಕೇಳುವುದೂ ಒಂದೇ ಅಂತ ಗೊತ್ತಿದೆ. ನಿಮ್ಮ ಯೋಗವೂ ಕ್ಷೇಮವೂ ಚೆನ್ನಾಗಿಯೇ ಇದೆ. ಕಾಲಕಾಲಕ್ಕೆ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ ತಾವು ಸುಖವಾಗಿದ್ದೀರಿ ಮತ್ತು ಸಂಕಟದಲ್ಲಿದ್ದೀರಿ. ನಿಮ್ಮ ಸುಖಸಂಕಟಗಳು ಹಾಗೇ ಇರಲಿ ಎಂದು ನೀವು ನಂಬಿದ ದೇವರಲ್ಲಿ ನಮ್ಮದೂ ಒಂದು ವಿನಂತಿ.
ನಿಮ್ಮ ಮುಂಗಾರು ಮಳೆಯಲ್ಲಿ ಮಿಂದವರಿಗೆ ನಿಮ್ಮೊಳಗೆ ಇಷ್ಟೆಲ್ಲ ಸರಕಿದೆ ಎಂದು ಗೊತ್ತಿರಲಿಲ್ಲ. ತುಂಬ ಹಿಂದೆ ಟೀವಿಗೊಂದು ಸೀರಿಯಲ್ಲು ಮಾಡಬೇಕೆಂದು ಓಡಾಡುತ್ತಿದ್ದ ದಿನಗಳಲ್ಲಿ ನೀವು ಸರಳ ಸಜ್ಜನ ಜಾಣ ಬ್ರಾಹ್ಮಣನ ಹಾಗೆ ಕಾಣಿಸುತ್ತಿದ್ದಿರಿ. ಆಗಲೂ ಕತೆಯಿಲ್ಲದೆ ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿದ್ದಿರಿ. ಕತೆಯಿಲ್ಲದೆ ಸಿನಿಮಾ ಮಾಡುವುದು ಸಾಧ್ಯವೇ ಇಲ್ಲ ಎಂದೂ ಕನಿಷ್ಠ ಮೂರೋ ನಾಲ್ಕು ಹೊಡೆದಾಟ, ಪ್ರೇಮದ ಕುರಿತ ಅಸ್ಖಲಿತ ಹಪಾಹಪಿ ಮತ್ತು ಒಂದು ನಾಲ್ಕೋ ಐದು ಹಾಡುಗಳನ್ನೇ ಕತೆ ಎಂದೂ ನಂಬಿದ್ದ ಗಾಂಧೀನಗರದ ಬಂಗಾರದ ಮನುಷ್ಯರಿಗೆ ನೀವು ಕತೆಯಿಲ್ಲದೇ ಸಿನಿಮಾ ಮಾಡುತ್ತೇನೆ ಎಂದಾಗ ಕಿವಿಯ ಪಕ್ಕ ಬಾಂಬು ಸಿಡಿದಂತಾಗಿರಬೇಕು.
ನಿಮ್ಮ ಮಣಿ’ ಚೆನ್ನಾಗಿತ್ತು. ಕೆಲವರು ತಮಿಳು ಸಿನಿಮಾದಂತಿದೆ ಎಂದರು. ಸೈಕಲ್ಲು ಹಿಡಕೊಂಡು ಓಡಾಡುವ ನಾಯಕ, ಸಿಗದ ಹುಡುಗಿ, ಅವನ ಹುಡುಕಾಟ, ಅಲ್ಲೊಬ್ಬ ಬೊಬ್ಬೆ ಹಾಕಿಕೊಂಡು ಓಡಾಡುವ ಅರೆಜಾಣ- ಎಲ್ಲವೂ ಸೇರಿಕೊಂಡು ಆಹಾ ಎಂಥಾ ಸೊಗಸಾಗಿದೆ ಎಂದು ಖುಷಿಪಡುವ ಹೊತ್ತಿಗೆ ಕ್ಲೈಮ್ಯಾಕ್ಸು ಬಂದುಬಿಟ್ಟಿತ್ತು. ವಧೂವರರು ಎಷ್ಟು ಸೊಗಸಾಗಿದ್ದರೆ ಏನಂತೆ, ಊಟ ಭರ್ಜರಿಯಾಗಿರಬೇಕಲ್ಲ. ಕೊನೆಯ ಪುಟ ನನ್ನದಲ್ಲ ಎಂದು ನೀವು ಗುಟ್ಟಾಗಿ ಹೇಳಿ ಕೈ ತೊಳೆದುಕೊಂಡಿರಿ.
ಮುಂಗಾರು ಮಳೆಯ ನಾಯಕ ಗಣೇಶ್ ಅಂತ ಯಾರೆಷ್ಟೇ ಹೇಳಿದರೂ ಅಲ್ಲಿ ಕಂಡದ್ದು ನೀವೇ. ನಿಮ್ಮ ಆತ್ಮಚರಿತ್ರೆಯ ಒಂದು ಅಧ್ಯಾಯದಂತಿತ್ತು ಅದು. ಹಾಗಿಲ್ಲದೇ ಹೋದರೆ ಅಷ್ಟು ಗಾಢವಾದ ವಿರಹ, ಅಷ್ಟು ಮಾರ್ದವದ ಪ್ರೀತಿಯನ್ನು ತೆರೆಯ ಮೇಲೆ ತರಲಿಕ್ಕಾಗುತ್ತಿತ್ತೇ? ನಿಮ್ಮೊಳಗಿನ ಪ್ರೀತಿಯನ್ನೆಲ್ಲ ಸುರಿದು ಮಾಡಿದ ಸಿನಿಮಾದಂತೆ ಅದು ಕಾಣಿಸುತ್ತಿತ್ತು. ನೀವು ಅಷ್ಟೊಂದು ತರಲೆ ಅಂತ ಗೊತ್ತಾದದ್ದು ಆಗಲೇ. ಗಾಳಿಪಟದ ಸೂತ್ರ ನಿಮ್ಮ ಕೈಗೆ ಸಿಕ್ಕೇಬಿಟ್ಟಿತ್ತು. ಗಣೇಶ್ ಬಾಲಂಗೋಚಿಯಂತೆ ಗೋಚರಿಸುತ್ತಿದ್ದರು. ಗಾಂಧೀನಗರದ ಬುದ್ಧಿವಂತರು ಮೊದಲ ಬಾರಿಗೆ ಜೋಗಾದ್ ಗುಂಡಿ ನೋಡಿದರು.
ಮುಂದೆ ಎಲ್ಲವೂ ನಿಮ್ಮಿಷ್ಟದಂತೆಯೇ ನಡೆಯಿತು. ನೀವು ಮನಸಾರೆ ಒಪ್ಪಿಕೊಂಡು ಮಾಡಿದ್ದನ್ನು ನಾವೂ ಮನಸಾರೆ ಸ್ವೀಕರಿಸಿದೆವು. ತರಲೆಯ ಹಾಗೆ ಮಾತಾಡುತ್ತಾ, ತುಂಟತನ ಬಿಟ್ಟುಕೊಡದಂತೆ ನಟಿಸುತ್ತಾ, ಒಳಗೊಳಗೇ ಸಿಟ್ಟಾದರೂ ತೋರಿಸಿಕೊಳ್ಳದೇ, ಮನೆ, ಮಗು, ಮಡದಿ ಮತ್ತು ಗೆಳೆಯರನ್ನು ಸಂಭಾಳಿಸುತ್ತಾ ನಡುನಡುವೆ ಕತೆಯಲ್ಲದ ಕತೆ ಬರೆಯುತ್ತಾ ಪದ್ಮನಾಭನಗರದ ಆಸುಪಾಸಲ್ಲೇ ಓಡಾಡಿಕೊಂಡಿದ್ದಿರಿ. ನೀವು ಈಗಲೂ ಎಸ್‌ಎಲ್‌ವಿಯಲ್ಲಿ ಇಡ್ಲಿ ತಿನ್ನುತ್ತೀರಂತೆ, ಗೆಳೆಯ ಹೇಳುತ್ತಿರುತ್ತಾನೆ. ಗೆದ್ದ ನಿರ್ದೇಶಕರೂ ಇಡ್ಲಿ ತಿನ್ನುತ್ತಾರೆ ಎಂದು ಶ್ರೀಸಾಮಾನ್ಯರಿಗೆ ಗೊತ್ತಾದದ್ದೇ ಆಗ. ನಮ್ಮ ಖ್ಯಾತ ನಟರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂಬುದು ಇವತ್ತಿಗೂ ಚಿದಂಬರ ರಹಸ್ಯ.
ನೀವು ಅಸಾಧ್ಯರು ಮಾರಾಯರೇ. ಯೋಗರಾಜ ಅಲ್ಲ ರಾಜಯೋಗ ನಿಮ್ಮದು. ಈ ಮನುಷ್ಯ ಏನು ಮುಟ್ಟಿದರೂ ಚಿನ್ನ ಅಂತಿರುತ್ತಾರಂತೆ ಗಾಂಧೀನಗರದ ಮಂದಿ. ಹಾಗಂತ ಮುಟ್ಟಿಸಿಕೊಳ್ಳಲು ಅವರಿಗೆ ಇನ್ನೂ ಭಯ. ನೀವೂ ಕೂಡ ಎಲ್ಲಿ ಮುಟ್ಟಿಸಿಕೊಳ್ಳುತ್ತಾರೋ ಎಂಬ ಭಯಕ್ಕೆ ಅತ್ತ ಕಾಲಿಡುತ್ತಿಲ್ಲವಂತೆ, ಹೌದೇ..
ಮೊನ್ನೆ ಪಂಚರಂಗಿ’ ನೋಡಿದೆ. ಮಾತಿದೆ, ಕತೆಯಿಲ್ಲ ಎಂದು ಅನೇಕರು ಎಚ್ಚರಿಸಿದ್ದರು. ದಿನಾ ಬೆಳಗ್ಗೆ ಒಬ್ಬರು ನಿರ್ದೇಶಕರು ಮತ್ತೊಬ್ಬ ಹಂಚಿಕೆದಾರರಿಗೆ ಫೋನು ಮಾಡಿ ಕಲೆಕ್ಷನ್ನುಗಳು ಹೇಗಿದೆ’ ಎಂದು ವಿಚಾರಿಸಿಕೊಳ್ಳುತ್ತಾರಂತೆ. ನಿಮ್ಮ ಎಂಥಾ ಅದಮ್ಯ ಕಾಳಜಿ. ಜಗತ್ತಿಗೂ ಐದು ಬಣ್ಣ, ಎಲ್ಲವೂ ಇಲ್ಲಿ ಪಂಚರಂಗಿ.
ಎಲ್ಲಾ ತಮಾಷೆಗಳನ್ನೂ ಪಕ್ಕಕ್ಕಿಟ್ಟು ನಿಮಗೆ ನಮಸ್ಕಾರ, ಕತೆಯಿಲ್ಲದೆ ಸಿನಿಮಾ ಮಾಡಿದ್ದಕ್ಕಲ್ಲ, ಮಾತಲ್ಲೇ ಮರುಳು ಮಾಡಿದ್ದಕ್ಕೂ ಅಲ್ಲ, ಪ್ರೇಕ್ಷಕರನ್ನು ಮರಳಿ ಥೇಟರಿಗೆ ಕರೆತಂದದ್ದಕ್ಕೂ ಅಲ್ಲ, ಕಾವ್ಯಕ್ಕಷ್ಟೇ ಒಗ್ಗುವ ಭಾಷೆಯನ್ನು ತೆರೆಗೆ ಒಗ್ಗಿಸಿದ್ದಕ್ಕೂ ಅಲ್ಲ. ಅದೆಲ್ಲ ನಿಮಗೆ ಅಷ್ಟೇನೂ ಕಷ್ಟದ್ದಲ್ಲ ಎಂದು ಗೊತ್ತು. ಅದನ್ನೂ ಮೀರಿ ನೀವೊಂದು ಕೆಲಸ ಮಾಡಿದ್ದೀರಿ. ಕೋಟ್ಯಂತರ ರುಪಾಯಿ ಖರ್ಚು ಮಾಡಿದರಷ್ಟೇ ಸಿನಿಮಾ ಎಂದು ಬೀಗುವ ಮಂದಿಗೆ, ವಿದೇಶದಲ್ಲಿ ಚಿತ್ರೀಕರಣ, ನೂರಾರು ದಿನ ಶೂಟಿಂಗು, ಭಯಂಕರ ಸೆಂಟಿಮೆಂಟು, ಕರುನಾಡನ್ನು ಹೊಗಳುವ ಒಂದು ಹಾಡು, ಕೈಯಲ್ಲೊಂದು ಕತ್ತಿ, ಹೊಡೆದಾಟ ಬಲ್ಲ ನಾಯಕ- ಇವಿಷ್ಟಿಲ್ಲದೇ ಸಿನಿಮಾ ಆಗುವುದಿಲ್ಲ ಎಂದು ನಂಬಿದ ನಮಗೆ ಬೇರೊಂದು ಜಗತ್ತು ತೋರಿಸಿದ್ದಕ್ಕೆ.
ಯಾವತ್ತೋ ಎಚ್‌ಎಸ್‌ವಿ ಬರೆದ ಒಂದು ತುಂಟ ಪದ್ಯ ನಿಮ್ಮ ಸಂಭಾಷಣೆ ಕೇಳುವಾಗೆಲ್ಲ ನೆನಪಾಗುತ್ತಿತ್ತು. ಜೋತಾಡುವ ವಸ್ತುಗಳು ಎಂದು ಕವಿತೆಯ ಹೆಸರು. ಅದರ ಒಂದಷ್ಟು ಸಾಲು ಹೀಗೆ: ಮುದುಕರ ಹುಬ್ಬುಗಳು, ಹರೆಯದವರ ಉಬ್ಬುಗಳು, ಹಿಂದಿನವರ ಆಸೆಗಳು, ಇಂದಿನವರ ಮೀಸೆಗಳು- ಜೋತಾಡುವ ವಸ್ತುಗಳು. ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ್ದನ್ನು ಅವರು ಕವಿತೆಯಲ್ಲಿ ಹಿಡಿದಿಟ್ಟು ಮಜಾ ಕೊಟ್ಟಿದ್ದರು. ಕೊಂಚ ಯೋಚಿಸಿದರೆ ಅದಕ್ಕೆ ಅರ್ಥವೂ ಇರುತ್ತಿತ್ತು.
ನೀವೂ ಅಷ್ಟೇ, ನಮ್ಮ ಸದ್ಯದ ಗೊಂದಲ, ಭಾಷೆಯ ಮೂಲಕ ಹೇಳಲಾಗದ ಪರಿತಾಪ, ಈ ರಗಳೆ, ಈ ಹಿಂಸೆ, ಹೊಟ್ಟೆಕಿಚ್ಚು, ನಮ್ಮದಲ್ಲದ ಅಂಗಿ, ಬಟ್ಟೆ, ತಿಂಡಿ, ಊಟ, ನಮ್ಮ ವಿದ್ಯೆಗೆ ಒಗ್ಗದ ಉದ್ಯೋಗ, ಸೀರಿಯಲ್ಲು ಭರಾಟೆ, ಚಾನಲ್ಲುಗಳ ರಿಯಾಲಿಟಿ ಷೋ, ಅದದೇ ಮಾತು, ದಿಕ್ಕೆಟ್ಟ ಹಗಲು ರಾತ್ರಿ, ಕಂಗೆಟ್ಟ ರಸ್ತೆ- ಇವನ್ನೆಲ್ಲ ನೋಡಿ ಇಷ್ಟನ್ನೆಲ್ಲ ಒಟ್ಟಿಗೆ ಹೇಳುವುದು ಹೇಗೆ ಒಂದು ಗೊತ್ತಾಗದೇ ಪರದಾಡುತ್ತಿದ್ದವರಿಗೆ ಒಂದೊಳ್ಳೇ ಮಾತು ಕರುಣಿಸಿದಿರಿ. ಎಲ್ಲವೂ ಮೀಡಿಯೋಕರ್ ಆಗುತ್ತಾ, ಅದೇ ಶ್ರೇಷ್ಠ ಎಂದು ನಂಬುತ್ತಾ, ಅದನ್ನೆ ಬಹುಪರಾಕ್ ಎಂದು ಕೊಂಡಾಡುತ್ತಿದ್ದವರನ್ನು ಕೊಂಚ ಸೈಡ್‌ವಿಂಗಿಗೆ ಕರೆದುಕೊಂಡು ಹೋಗಿ, ಬಣ್ಣ ಕಳಚಿದ್ದೀರಿ.
ಮರಳಲ್ಲಿ ಹುಗಿದು ಕೂತವನ ವಿಚಿತ್ರ ತತ್ವಜ್ಞಾನ, ಆ ಹುಡುಗನ ಉಡಾಫೆ, ಅವಳ ತರಲೆ, ವಾಸ್ತುಶಾಸ್ತ್ರಜ್ಞನ ಅಗ್ನಿಮೂಲೆಗೆ ನೀವು ಬೆಂಕಿ ಹಚ್ಚಿದ ರೀತಿ, ಎಲ್ಲರನ್ನೂ ಸುಳ್ಳೇ ಸುಳ್ಳೇ ನಂಬಿಸುತ್ತಿರುವ ಜಗದ್ಗುರುಗಳ ಕಾವಿ ಕಳಚಿದ್ದು, ಎಲ್ಲವನ್ನೂ ನೋಡುತ್ತ ನಕ್ಕೆವು. ನನ್ನ ಪುಟ್ಟ ಮಗಳೂ ಪಂಚರಂಗಿ ಪಾಂವ್ ಪಾಂವ್ ಅನ್ನುತ್ತಾಳೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ನನಗೆಷ್ಟು ಅರ್ಥವಾಯಿತು ಅನ್ನುವುದೇ ಇನ್ನೂ ಸ್ಪಷ್ಟವಿಲ್ಲ.
ಮುಂದೇನು ಅಂತ ನಿಮಗೂ ಗೊತ್ತಿಲ್ಲ ಎಂದು ಗೊತ್ತು. ಯೋಚಿಸಿ ಮಾಡುವ ಸಿನಿಮಾ ಅಲ್ಲ ಅದು. ಥಟ್ಟನೆ ಏನೋ ಹೊಳೆದು, ಅದನ್ನು ಕಾರ್ಯರೂಪಕ್ಕೆ ಇಳಿಸಿ, ಸುಮ್ಮನೆ ಹೀಗಿದೆ ನೋಡಿ ಎಂದು ಮುಂದಿಡುವ ಪೈಕಿ ನೀವು ಅಂತ ಗೊತ್ತು. ನಮ್ಮೆಲ್ಲರ ದುರಂತ ಏನೆಂದರೆ, ಇಷ್ಟೆಲ್ಲ ಆದ ಮೇಲೂ ಸಿನಿಮಾ ಮಾಡ್ತೀನಿ ಅಂದರೆ ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ- ಕತೆ ಏನು? ಸಿನಿಮಾ ನೋಡಿ ಖುಷಿಯಾಗಿ ಮನೆಗೆ ಹೋಗೋ ಹೊತ್ತಿಗೆ ಅದೇ ಮಾತಾಡುತ್ತಾರೆ, ಚೆನ್ನಾಗಿದೆ ಆದ್ರೆ ಕತೆಯಿಲ್ಲ. ಕತೆ ಹೇಳೋದಕ್ಕೆ ಸಿನಿಮಾ ಮಾಧ್ಯಮ ಯಾಕೆ ಬೇಕು, ಕಾದಂಬರಿ ಓದ್ಕೊಳ್ಳಿ ಹೋಗಿ ಅಂತ ಮುಖಕ್ಕೆ ಹೊಡೆದ ಹಾಗೆ ನೀವು ಹೇಳಿಬಿಟ್ಟಿದ್ದೀರಿ.
ನಿಮ್ಮ ಆರಂಭದ ದಿನಗಳ ಹುಡುಕಾಟ, ನಂತರದ ಕಳವಳ, ನಡುವೆ ಆದ ಅವಮಾನ ಎಲ್ಲವನ್ನೂ ನೀವೂ
ಮರೆತಿದ್ದೀರಿ. ಈ ಮಧ್ಯೆ ಒಂಚೂರು ವಿನಯವಂತನ ಹಾಗೆ ನಟಿಸೋದಕ್ಕೂ ಕಲಿತಿದ್ದೀರಿ. ನಿಮ್ಮ ಆಶೀರ್ವಾದ ಅಂತ ಥೇಟ್ ಜಾಣರ ಹಾಗೂ ಮಾತಾಡ್ತೀರಿ. ಅಂಥದ್ದೇನಿಲ್ಲ ಅನ್ನೋದು ನಿಮಗೂ ಗೊತ್ತಿದೆ. ಇರ್ಲಿ ಬಿಡಿ, ಸಹಿಸ್ಕೋತೀವಿ.
ಮುಂದೇನು ಮಾಡ್ತೀರಿ ಅಂತ ಅವರೆಲ್ಲ ಕಾಯ್ತಿದ್ದಾರೆ. ಯಾರೋ ಆಗ್ಲೇ ಭಟ್ರು ಇಷ್ಟೇನೇ’ ಅಂತ ಹೇಳಿಯೂ ಬಿಟ್ಟಿದ್ದಾರೆ. ಹೌದು ಅಂತ ತಲೆಯಾಡಿಸಿ ಅಷ್ಟೇ ಅಲ್ಲ ತೋರಿಸೋದಕ್ಕೆ ನೀವೂ ತಯಾರಾಗಿದ್ದೀರಿ ಅಂತ ಗೊತ್ತು. ವಿಚಿತ್ರವಾಗಿ ಹಾಡು ಬರೀತಾ, ಯಾವುದೋ ಲಯದಲ್ಲಿ ಮಾತಾಡ್ತಾ, ಮಾತೇ ಬಂಡವಾಳ ಅಂದವರಿಗೆ ಹೌದಪ್ಪಾ ಹೌದು ಅಂತ ಹೇಳ್ತಾ, ಅದೇ ಮಾತಲ್ಲಿ ಅವರಿಗೆ ಒಂಚೂರು ಸುಖ ಕೊಡ್ತಾ ಇದ್ದೀರಿ. ಹಾಗೇ ಇರಿ, ಏನಂತೆ. ಅಷ್ಟಕ್ಕೂ ಭಟ್ಟರು ಸಾಂತ್ವನ ನೀಡೋದು ಮಾತಲ್ಲೇ ಅಲ್ವೇ. ಸಂಸ್ಕೃತದಲ್ಲಿ ಮಂತ್ರ ಹೇಳ್ತಾ ಭಕ್ತರ ಆಶಯಗಳನ್ನು ದೇವರಿಗೆ ಮುಟ್ಟಿಸ್ತಾ ಆ ಕಾಲದ ಭಟ್ಟರು ನೆಮ್ಮದಿ ನೀಡ್ತಿದ್ದರು. ನೀವೊಂಚೂರು ಮಾಡರ್ನು, ಅಚ್ಚಕನ್ನಡದಲ್ಲಿ ಅರ್ಥ ಆಗೋ ಹಾಗೆ ಮಾತಾಡ್ತಾನೇ ಖುಷಿ ಕೊಡ್ತಿದ್ದೀರಿ.
ಹೋಗ್ಲಿ ಬಿಡಿ. ಮತ್ತೇನು ವಿಶೇಷಗಳು. ಉದ್ದುದ್ದ ಮಾತುಗಳು, ಒಂಚೂರು ಕತೆಗಳು, ನಮ್ಮೆಲ್ಲರ ವ್ಯಥೆಗಳು, ತರಲೆ ಗೀತೆಗಳು, ಭಯಂಕರ ಕಲೆಕ್ಷನ್ನುಗಳು, ಹೆಣ್ಮಕ್ಕಳ ಪ್ರೇಮಗಳು, ಹುಡುಗರ ಡ್ರೀಮುಗಳು.. ಲೆಟರು ಇಷ್ಟೇನೇ. ಯಾವಾತ್ತಾದ್ರೂ ಸಿಕ್ಕರೆ, ಮುಂದಿನ ಮಾತುಗಳು.

12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು