ಜೋಗಿ ಹೊಸ ಕವಿತೆ : ಈ ರಾತ್ರಿ ಮಳೆಯಾಗುತ್ತದೆ..

ನಾನು

ಈ ರಾತ್ರಿ ಮಳೆಯಾಗುತ್ತದೆ

ಎಂದು ಕಾಯುತ್ತಿದ್ದೇನೆ.

ಬೆಳಗ್ಗೆ ಭಯಂಕರ ಸೆಕೆ, ಮಗಳು

ಅದ್ಯಾರ ಜೊತೆಗೋ ಓಡಾಡುತ್ತಿದ್ದಾಳೆ

ಎಂಬ ಅನುಮಾನ, ಅಮ್ಮನಿಗೂ

ಅಪ್ಪನಿಗೂ ಇಳಿವಯಸ್ಸಿನ ಜಗಳ,

ಹಂಡೆಯಲ್ಲಿ ಕೊಳೆತ ಮೀನು

ಮೈತುಂಬ ಮತ್ಯ್ಸಗಂಧ.

ಈ ರಾತ್ರಿ ಮಳೆಯಾಗುತ್ತದೆ

ಎಂಬ ನಿರೀಕ್ಷೆ.

ಊರು ತುಂಬ ಗಲಾಟೆ, ಅದ್ಯಾರಿಗೂ

ನನ್ನ ಮೇಲೆ ಸಿಟ್ಟು, ಮತ್ಯಾರಿಗೋ ಹೊಟ್ಟೆಕಿಚ್ಚು.

ಮಾತಾಡಿದರೆ ತಕರಾರು, ಸುಮ್ಮನಿದ್ದರೆ

ಸಂಕಟ. ಉಸಿರು ಒಳಗೆಳೆದುಕೊಂಡರೆ

ಸೀಸ, ಕಾರ್ಬನ್ನು. ನನಗಾಗಿಯೇ ಕಾಯುತ್ತಿರುವ

ಸಂಚಾರಿ ಪೊಲೀಸು.

ಇವತ್ತು ರಾತ್ರಿ ಮಳೆಯಾಗುತ್ತದೆ

ಎಂದು ಹವಾಮಾನ ವರದಿ.

ವಿಪರೀತ ರಕ್ತದೊತ್ತಡ, ಔಷಧಿ ಅಂಗಡಿಗೆ

ರಜಾ. ಪತ್ರಿಕೆಯಲ್ಲಿ ಪಂಚರಂಗಿ ಗೆದ್ದ ಸುದ್ದಿ

ಭಾರತೀಯ ಕ್ರಿಕೆಟ್ ಟೀಮಿಗೆ ಹೀನಾಯ ಸೋಲು

ಕಿರುಚುವ ಅವಳು, ಪರಚುವ ಅವನು,

ಕ್ಷಣಕ್ಷಣಕ್ಕೂ ಬಡಕೊಳ್ಳುವ ಮೊಬೈಲು.

ನಾನೇ ತುಳಿದುಕೊಂಡ ನನ್ನದೇ ಕಾಲು.

ಈ ರಾತ್ರಿ ಮಳೆಯಾಗುತ್ತದೆ ಎಂದು ಕುರುಡುಗಣ್ಣಲ್ಲಿ

ಆಕಾಶ ನೋಡುವ ಅಪ್ಪನ ಭವಿಷ್ಯ

ಹೊಡೆದಾಡುವ ಮಂತ್ರಿಮಂಡಲ

ರಾಜೀನಾಮೆ ನಾಟಕ, ಮುಗಿಯದ ಮೆಟ್ರೋ

ಪ್ರತಿಕೃತಿ ಸುಟ್ರೋ, ಬಿಗ್‌ಬಜಾರಿನಲ್ಲಿ ಒಂದಕ್ಕೆರಡು

ಫ್ರೀ, ಮನೆತುಂಬ ಬೇಡದ ಕುರ್ಚಿ, ಮೇಜು, ಹೂಕುಂಡ.

ಯುಮುನೆಗೆ ಮಹಾಪೂರ, ಪರಸಂಗದ ಸಚಿವನಿಗೆ

ವೀರ್ಯಪರೀಕ್ಷೆಯಲ್ಲಿ ಸೋಲು.

ಆ ರಾತ್ರಿ ಮಳೆಯಾಯಿತು. ನನಗೋ ಗಾಢ ನಿದ್ದೆ.

ಎದ್ದು ಕಿಟಕಿ ಬಳಿ ಕುಳಿತು

ಜಗತ್ತನ್ನೇ ಶಪಿಸುತ್ತಾ….

ಈ ರಾತ್ರಿ ಮಳೆಯಾಗುತ್ತದೆ

ಎಂದು ಕಾಯುತ್ತಿದ್ದೇನೆ


5 ಟಿಪ್ಪಣಿಗಳು (+add yours?)

  1. ashok shettar
    ಸೆಪ್ಟೆಂ 23, 2010 @ 12:51:13

    ಗಿರೀಶ್ ರ ಕವಿತೆ (ಈ ರಾತ್ರಿ ಮಳೆಯಾಗುತ್ತದೆ) ಯಲ್ಲಿ ಒಂದು nauseating ಸ್ಥಿತಿಯಿಂದ ವಿಮೋಚನೆಗೊಳಿಸುವ ರೂಪಕವಾಗಿ ಮಳೆಯ ಕಲ್ಪನೆ ಚೆನ್ನಾಗಿದೆ. ಒಳ್ಳೆ ಕವಿತೆ..

    ಉತ್ತರ

  2. Pamparaddy
    ಸೆಪ್ಟೆಂ 22, 2010 @ 19:20:11

    very nice …..!

    ಉತ್ತರ

  3. ಆತ್ರಾಡಿ ಸುರೇಶ ಹೆಗ್ಡೆ
    ಸೆಪ್ಟೆಂ 21, 2010 @ 13:23:50

    ಹೂಂ… ನಿಜಕ್ಕೂ ಈ ರಾತ್ರಿ ಮಳೆಯಾಗುತ್ತದೆ.

    ಉತ್ತರ

  4. Sunil Kumar KM
    ಸೆಪ್ಟೆಂ 21, 2010 @ 11:05:36

    Tumba chennagide 😉

    ಉತ್ತರ

  5. savitri
    ಸೆಪ್ಟೆಂ 21, 2010 @ 10:35:48

    Poem is very nice Sir.

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ