12.971606
77.594376
ಬೆಪ್ಪುತಕ್ಕಡಿಯನ್ನು ನೋಡಲು ಬನ್ನಿ
21 ಸೆಪ್ಟೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in Invite
ಯಲ್ಲಾಪುರ ತಾಲೂಕಿನ, ಮಂಚಿಕೇರಿ ನಾಟಕ ರಂಗದಲ್ಲಿ ರಾಜ್ಯದಲ್ಲಿಯೇ ಗುರುತಿಸಲ್ಪಟ್ಟ ಊರು. ಇಂತಹ ಪ್ರಖ್ಯಾತಿಯ ಮಂಚಿಕೇರಿಯ ’ಸಂಹತಿ ಟ್ರಸ್ಟ್’ ರವರು ಡಾ.ಚಂದ್ರಶೇಖರ ಕಂಬಾರ ಅವರ ’ಬೆಪ್ಪುತಕ್ಕಡಿ ಬೋಳೆ ಶಂಕರ’ ನಾಟಕವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
ಇದೇ ೨೯ ಮತ್ತು ೩೦ ನೇ ದಿನಾಂಕದಂದು ಸಂಜೆ ೭ ಕ್ಕೆ ಜೆ.ಪಿ.ನಗರದ ರಂಗ ಶಂಕರದಲ್ಲಿ ’ಬೆಪ್ಪುತಕ್ಕಡಿ ಬೋಳೆ ಶಂಕರ’ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಟಿಕೆಟ್ ಗಳಿಗಾಗಿ ವೀಣಾ ಭಟ್ – ೯೮೪೫೬ ೯೫೦೧೫
ಜೋಗಿ ಹೊಸ ಕವಿತೆ : ಈ ರಾತ್ರಿ ಮಳೆಯಾಗುತ್ತದೆ..
21 ಸೆಪ್ಟೆಂ 2010 5 ಟಿಪ್ಪಣಿಗಳು
ನಾನು
ಈ ರಾತ್ರಿ ಮಳೆಯಾಗುತ್ತದೆ
ಎಂದು ಕಾಯುತ್ತಿದ್ದೇನೆ.
–
ಬೆಳಗ್ಗೆ ಭಯಂಕರ ಸೆಕೆ, ಮಗಳು
ಅದ್ಯಾರ ಜೊತೆಗೋ ಓಡಾಡುತ್ತಿದ್ದಾಳೆ
ಎಂಬ ಅನುಮಾನ, ಅಮ್ಮನಿಗೂ
ಅಪ್ಪನಿಗೂ ಇಳಿವಯಸ್ಸಿನ ಜಗಳ,
ಹಂಡೆಯಲ್ಲಿ ಕೊಳೆತ ಮೀನು
ಮೈತುಂಬ ಮತ್ಯ್ಸಗಂಧ.
–
ಈ ರಾತ್ರಿ ಮಳೆಯಾಗುತ್ತದೆ
ಎಂಬ ನಿರೀಕ್ಷೆ.
–
ಊರು ತುಂಬ ಗಲಾಟೆ, ಅದ್ಯಾರಿಗೂ
ನನ್ನ ಮೇಲೆ ಸಿಟ್ಟು, ಮತ್ಯಾರಿಗೋ ಹೊಟ್ಟೆಕಿಚ್ಚು.
ಮಾತಾಡಿದರೆ ತಕರಾರು, ಸುಮ್ಮನಿದ್ದರೆ
ಸಂಕಟ. ಉಸಿರು ಒಳಗೆಳೆದುಕೊಂಡರೆ
ಸೀಸ, ಕಾರ್ಬನ್ನು. ನನಗಾಗಿಯೇ ಕಾಯುತ್ತಿರುವ
ಸಂಚಾರಿ ಪೊಲೀಸು.
–
ಇವತ್ತು ರಾತ್ರಿ ಮಳೆಯಾಗುತ್ತದೆ
ಎಂದು ಹವಾಮಾನ ವರದಿ.
–
ವಿಪರೀತ ರಕ್ತದೊತ್ತಡ, ಔಷಧಿ ಅಂಗಡಿಗೆ
ರಜಾ. ಪತ್ರಿಕೆಯಲ್ಲಿ ಪಂಚರಂಗಿ ಗೆದ್ದ ಸುದ್ದಿ
ಭಾರತೀಯ ಕ್ರಿಕೆಟ್ ಟೀಮಿಗೆ ಹೀನಾಯ ಸೋಲು
ಕಿರುಚುವ ಅವಳು, ಪರಚುವ ಅವನು,
ಕ್ಷಣಕ್ಷಣಕ್ಕೂ ಬಡಕೊಳ್ಳುವ ಮೊಬೈಲು.
ನಾನೇ ತುಳಿದುಕೊಂಡ ನನ್ನದೇ ಕಾಲು.
–
ಈ ರಾತ್ರಿ ಮಳೆಯಾಗುತ್ತದೆ ಎಂದು ಕುರುಡುಗಣ್ಣಲ್ಲಿ
ಆಕಾಶ ನೋಡುವ ಅಪ್ಪನ ಭವಿಷ್ಯ
–
ಹೊಡೆದಾಡುವ ಮಂತ್ರಿಮಂಡಲ
ರಾಜೀನಾಮೆ ನಾಟಕ, ಮುಗಿಯದ ಮೆಟ್ರೋ
ಪ್ರತಿಕೃತಿ ಸುಟ್ರೋ, ಬಿಗ್‌ಬಜಾರಿನಲ್ಲಿ ಒಂದಕ್ಕೆರಡು
ಫ್ರೀ, ಮನೆತುಂಬ ಬೇಡದ ಕುರ್ಚಿ, ಮೇಜು, ಹೂಕುಂಡ.
ಯುಮುನೆಗೆ ಮಹಾಪೂರ, ಪರಸಂಗದ ಸಚಿವನಿಗೆ
ವೀರ್ಯಪರೀಕ್ಷೆಯಲ್ಲಿ ಸೋಲು.
ಆ ರಾತ್ರಿ ಮಳೆಯಾಯಿತು. ನನಗೋ ಗಾಢ ನಿದ್ದೆ.
ಎದ್ದು ಕಿಟಕಿ ಬಳಿ ಕುಳಿತು
ಜಗತ್ತನ್ನೇ ಶಪಿಸುತ್ತಾ….
–
ಈ ರಾತ್ರಿ ಮಳೆಯಾಗುತ್ತದೆ
ಎಂದು ಕಾಯುತ್ತಿದ್ದೇನೆ
ಇಂದು ‘ಥಟ್ ಅಂತ ಹೇಳಿ’ ಯಲ್ಲಿ ತುಂಗಾ
21 ಸೆಪ್ಟೆಂ 2010 2 ಟಿಪ್ಪಣಿಗಳು
ಇಂದು ರಾತ್ರಿ ೧೦-೩೦ ಕ್ಕೆ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ.
ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ ಅವರ ಈ ಕಾಡುವ ಕಾದಂಬರಿಯ ಬಗ್ಗೆ ನಾ ಸೋಮೇಶ್ವರ್ ಅವರ ಎಕ್ಸ್ಪರ್ಟ್ ಕಾಮೆಂಟ್ ಕೇಳಲು ಮರೆಯದಿರಿ
Our Bamboo, Our Music, Our Planet..
21 ಸೆಪ್ಟೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
-ಗಾಣಧಾಳು ಶ್ರೀಕಂಠ
ಸೆಪ್ಟೆಂಬರ್ 18, ವಿಶ್ವ ಬಿದಿರು ದಿನ. ಹೀಗೆಂದು ಗೊತ್ತಾಗಿದ್ದು ಡೆಕನ್ ಹೆರಾಲ್ಡ್ ನ ಪನೋರಮಾ ಪುಟದಲ್ಲಿ ಅಪ್ಪಿಕೋ ಚಳುವಳಿ ನೇತಾರ ಪಾಂಡುರಂಗಹೆಗಡೆಯವರ ಬರೆದ ಲೇಖನ ಓದಿದ ಮೇಲೆ. ಈ ಸಂದರ್ಭದಲ್ಲಿ ‘ಬಿದಿರಿನ ಗೆಳೆಯ’ ಕೇರಳದ ಉನ್ನಿಕೃಷ್ಣ ಪಕ್ಕನಾರ್ ನನಪಾದರು. ಹತ್ತಾರು ಬಿದಿರು ವಾದ್ಯಗಳ ಮೂಲಕ ಸಂಗೀತ ಸುಧೆ ಹರಿಸುತ್ತಾ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿರುವ ಉನ್ನಿಕೃಷ್ಣ ತಂಡದ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ದರ್ಶನದಲ್ಲಿ ಲೇಖನ ಬರೆದಿದ್ದೆ. ಹಾಗೆ ನೆನಪಿಸುವ ಸಲುವಾಗಿ ಇಲ್ಲಿ ಪೋಸ್ಟ್ ಮಾಡಿದ್ದೇನೆ
Our Bamboo,
Our Music,
Our Planet,
Save Bamboo,
Save Athirapilly,
Save Western ghats,
– ಹೀಗೆ ‘ಪ್ರಾರ್ಥಿಸುತ್ತಲೇ’ ಉನ್ನಿಕೃಷ್ಣ ಪಕ್ಕನಾರ ಮತ್ತು ತಂಡದವರು ‘ಬೊಂಬಿನ ಸಂಗೀತ ಸಂಜೆ’ ಆರಂಭಿಸುತ್ತಾರೆ. ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಜನಪದ ಗೀತೆಗಳನ್ನು ಹಾಡುತ್ತಾರೆ. ನೋಡುಗರು ಮತ್ತು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.
‘ಸಂಗೀತವೇ ನಮ್ಮ ದೇವರು, ಪರಿಸರ ಸಂರಕ್ಷಣೆಯೇ ನಮ್ಮ ಉಸಿರು. ಬಿದಿರು ಉಳಿಸಿ, ಅಥಿರಪಲ್ಲಿ ರಕ್ಷಿಸಿ, ಪಶ್ಚಿಮ ಘಟ್ಟ ಸಂರಕ್ಷಿಸಿ.. ಎಂದು ಹೇಳುತ್ತಾ ಸಂಗೀತ ಕಾರ್ಯಕ್ರಮಕ್ಕೆ ‘ಮಂಗಳ’ ಹಾಡುತ್ತಾರೆ!
ಉನ್ನಿಕೃಷ್ಣ ಪಕ್ಕನಾರ್ ಹಾಗೂ ಗೆಳೆಯರು ಕೇರಳದ ತ್ರಿಶ್ಯೂರ್ ಜಿಲ್ಲೆಯವರು. ಚಾಲುಕುಡಿ ನದಿಯ ದಡದ ನಿವಾಸಿಗಳು. ತಮ್ಮ ಊರಿನ ನದಿ ನೀರು ಬಳಸಿ ವಿದ್ಯುತ್ ತಯಾರಿಸಲು ಕೇರಳ ಸರ್ಕಾರ ಮುಂದಾದಾಗ ಆ ಪ್ರಕ್ರಿಯೆ ವಿರುದ್ಧ ಹೋರಾಟ ನಡೆಸಲು ಉನ್ನಿಕೃಷ್ಣ ಬಿದಿರು ವಾದ್ಯಗಳ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದರು. ಕಳೆದ ಹತ್ತು ವರ್ಷಗಳಿಂದ ‘ಮೂಲ ಪಾಡುಂ ರಾವು’(ಬಿದಿರು ಸಂಗೀತ ಸಂಜೆ) ತಂಡದೊಂದಿಗೆ ಪರಿಸರ ಸಂರಕ್ಷಣೆಗೆ ಧ್ವನಿಯಾಗಿದ್ದಾರೆ.
‘ಬ್ಯಾಂಬೂ ಮ್ಯೂಸಿಕ್ ತಂಡ’ದಲ್ಲಿ ಹತ್ತು ಮಂದಿ ನುರಿತ ಕಲಾವಿದರಿದ್ದಾರೆ. ಎಂಬತ್ತಕ್ಕೂ ಹೆಚ್ಚು ವೈವಿಧ್ಯಮಯ ಬಿದಿರು ವಾದ್ಯಗಳನ್ನು ಈ ತಂಡದ ಕಲಾವಿದರು ಬಳಸುತ್ತಾರೆ. ಅವನ್ನು ಅವರೇ ತಯಾರಿಸಿದ್ದಾರೆ. ವಾದ್ಯಗಳಿಗೆ ಧ್ವನಿ ಆಧರಿಸಿ ಹೆಸರಿಟ್ಟಿದ್ದಾರೆ. ‘ಮೊಳದುದ್ದ ಬಿದಿರಿಗೆ ಒಂದು ರಂಧ್ರ ಮಾಡಿದರೆ ‘ಅಂಬಾ’ ಎಂಬ ಶಬ್ದ ಹೊಮ್ಮುತ್ತದೆ. ಅದಕ್ಕೆ ‘ಅಂಬಾ’ ಎಂದು ಹೆಸರಿಟ್ಟೆವು. ಇದೇ ಬೇಸ್ ವಾಯ್ಸೆ. ಇನ್ನೊಂದಕ್ಕೆ ಮರಿಂಬಾ, ಮತ್ತೊಂದಕ್ಕೆ ಮೂಲಂ ತಡಿ (ರಿದಂ ಪ್ಯಾಡ್), ಮೂಲಂತಟ್ಟು (ರಿದಂ ಪ್ಯಾಡ್‌ನಂತಹ ವಾದ್ಯ), ನ್ಯಾಲಿಕೋರ್, ಆಂಕ್ಲನ್ – ಸೈಲೋ ಫೋನ್ (ಇಂಡೋನೇಷ್ಯಾದ ವಾದನ), ಮುಂಗೇತರಂಗ್, ಪ್ಯಾನ್ ಪ್ಲೂಟ್(ಮೌತ್ ಆರ್ಗನ್), ಮರುಮೂಳಿ (ಮಳೆ ಹನಿ ಶಬ್ದ ಹೊರಡಿಸುವ ವಾದ್ಯ), ಪಕ್ಕನಾರ್-1 ಮತ್ತು ಪಕ್ಕನಾರ್-2 ಹೀಗೆ ಅವರದೇ ವಿಧಾನಗಳಲ್ಲಿ ವಾದ್ಯಗಳನ್ನು ಅನುಶೋಧಿಸಿದ್ದಾರೆ. ವಿಶೇಷವೆಂದರೆ ಪ್ರತಿ ವಾದ್ಯದ ಅನುಶೋಧನೆಯ ಹಿಂದೆ ಪರಿಸರದ ಲಯವಿದೆ. ತಾಳವಿದೆ. ದನಿಯಿದೆ.
ಯಪ್ಪಾ ಅದೇನು ಕುಣಿದರು ಕಣ್ರೀ.. !
21 ಸೆಪ್ಟೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
ಯಪ್ಪಾ ಅದೇನು ಕುಣಿದರು ಕಣ್ರೀ.. !ಎಲ್ರೂ ಮೈಕ್ಲಿ ಜಾಕ್ಸನ್ನುಗಳೇ, ಪ್ರಭುದೇವಗಳೇ :-). ನಾನೇನ್ ಕಡಿಮೆ ಅಂತ ಒಬ್ಬ ಬಾಟಲನ್ನು ತಲೆ ಮೇಲೆ ಇಟ್ಟುಕೊಂಡು ಕುಣಿದು ಕುಪ್ಪಳಿಸಿದರೆ ಮತ್ತೊಬ್ಬ ಉರುಳಾಡಿ ಸಂತೋಷ ವ್ಯಕ್ತಪಡಿಸಿದ. ಅಯ್ಯೋ ಅಯ್ಯೋ ಎಲ್ರಿ ಸಿಕ್ತಾರೆ ಇಂತಹ ಅಪರೂಪದ ಪ್ರತಿಭೆಗಳು? 🙂 . ಶನಿವಾರ ಇಡಿ ದಿನ ಸಂತ ಪುಟ್ಟರಾಜ ಗವಾಯಿಗಳಿಗೆ ಶೋಕಾಚರಣೆ ಮಾಡಿ ರಾತ್ರಿ ಆ ದುಃಖ ತಡೆಯಲಾಗದೆ ಎಂತಹ ಬೇಜಾನ್ ಪಾರ್ಟಿ :-). ಅತ್ಯಂತ ಹೇಯ ವರ್ತನೆ ಕಿಮ್ಸ್ ವೈದ್ಯೋ ಡ್ಯಾ ನ್ಸೋ ಎಣ್ಣೆ ರಾಜ ! 🙂
ಕನಿಷ್ಠ ಸ್ವಲ್ಪ ದಿನ ಮುಂದೆ ಹಾಕಿದ್ರೆ ಯಾವ ರಾಜ್ಯ ಕೊಳ್ಳೆ ಹೋಗ್ತಾ ಇತ್ತೋ ದೇವರೇ ಬಲ್ಲ. ಸಾಮಾನ್ಯವಾಗಿ ನಾನು ಕೇಳಿದಂತೆ, ವೈದ್ಯರ ಜೊತೆ ಕೆಲಸ ಮಾಡಿದವರು ಹೇಳೋದು ವಿಶ್ವದಲ್ಲಿ ಅತಿ ಹೆಚ್ಚು ಕೊಳಕರು ಅಂದ್ರೆ ಡಾಕ್ಟರ್ಗಳು ಮಾತ್ರ. ಅವರ ಸ್ವಭಾವ , ಅವರ ಬದುಕಿನ ವೈಖರಿ ಎಲ್ಲವೂ ಗಲೀಜಂದ್ರೆ ಗಲೀಜು. ಅಂತಹ ವೈದ್ಯ ಕೇವಲ ಸ್ಟಾಫ್ ಮುಂದೆ ಮಾತ್ರವಲ್ಲ ,ಇಡೀ ಸಮಾಜದ ಮುಂದೆ ತಾವೆಷ್ಟು ಗಲೀಜು ಎನ್ನುವದನ್ನು ಸಾರಿ ತೋರಿಸಿ ಬಿಟ್ರು. ಛಿ! ನಾಚಿಕೆಗೇಡು.
ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ನಿರೂಪಕ ರೆಹಮಾನ್ ಈ ಕಿಮ್ಸ್ ಕಿಂಗಳ ಬಗ್ಗೆ ಹೇಳುವಾಗ ಅತ್ಯಂತ ದುಃಖ ಆಯ್ತು
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಅಪ್ಪಾ…ಸೋತೆ ಅನ್ಸಿತ್ತಾ ನಿಂಗೆ?
21 ಸೆಪ್ಟೆಂ 2010 4 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಅಪ್ಪಾ ನಿನ್ ಕಂಡ್ರೆ ನಂಗೆ ತುಂಬಾ ಇಷ್ಟಾ ಅಂತ ಗೊತ್ತಿಲ್ವಾ? ‘ನಿಮ್ ಪ್ರೀತಿ ಮಗ್ಳು ಯಾವಾಗ್ಲೂ ನಿಮ್ಗೇ ಸಪೋರ್ಟು’ ಅಂತ ಅಮ್ಮ ಅಂದಾಗ್ಲೆಲ್ಲಾ ನೀನು ಒಂದ್ ಪುಟ್ಟ ಸ್ಮೈಲ್ ಕೊಡ್ತಿದ್ದೆ ನೆನ್ಪಿದ್ಯಾ?? ಆಗಂತೂ ನಾನು ನಿನ್ ಜೊತೇಗ್ ನಿಲ್ಲೋದ್ ಇನ್ನೂ ಜಾಸ್ತೀನೇ ಮಾಡ್ತಿದ್ದೆ.
ನಾನ್ ಎಷ್ಟ್ ಮಾತಾಡ್ತಿದ್ನಲ್ವಾ? ನಿಂಗೆ ಅಷ್ಟ್ ಮಾತಾಡೋದು ಇಷ್ಟ ಇಲ್ಲ. ನೀನು ಇಂಟ್ರೋವರ್ಟು. ಆದ್ರೂ ನನ್ ಮಾತನ್ನೆಲ್ಲಾ ಕೇಳ್ಸಕೊತಿದ್ದೆ. ಪ್ರತಿ ದಿನಾ ಕಾಲೇಜಿಂದ ಬಂದ್ ಮೇಲೆ ಸಿಂಧು ಹಾಗೆ ಹೀಗೆ ಅಂತ ನಿಂಗೆ ಅಮ್ಮಂಗೆ ತಲೆ ತಿಂತಿದ್ದೆ. ಆದ್ರೆ ನಿಂಗೆ ಯಾವತ್ತಾದ್ರೂ ನನ್ ಬೆಸ್ಟ್ ಫ್ರೆಂಡ್ ಹೆಸ್ರು ಹೇಳು ಅಂದ್ರೆ ಗೊತ್ತಿರ್ತಿರ್ಲಿಲ್ಲ. ಆದ್ರೆ ಅಮ್ಮ ನಾನ್ ಹೇಳಿದ್ದನ್ನೆಲ್ಲಾ ಜ್ನಾಪಕ ಇಟ್ಕೊಂಡು ನಿಂಗೂ ಜ್ನಾಪಿಸುತ್ತಿದ್ಲು ಆದ್ರೂ, ಏನೋ ನಾನು ಹೆಚ್ಚು ಒತ್ತುಕೊಟ್ಟು ನಿಂಗೇ ಎಲ್ಲಾ ಹೇಳ್ತಿದ್ದೆ.
ಅಮ್ಮಂಗಿಂತ ನಿಂಗೆ ಸಿಟ್ಟು ಜಾಸ್ತಿ ಅನ್ಸಲ್ವ? ಅಕ್ಕನ ಮದ್ವೇಲಿ ನಾನು ಓಡಾಡ್ತಿದ್ದಿದ್ ನೋಡಿ ಎಲ್ಲರೂ ‘ ಇವ್ಳೊಬ್ಳೇ ಸಾಕು ಕಣೋ ನಿಂಗೆ, ನಿನ್ ಬಲ್ಗೈ ಥರ.’ ಅಂತ ಹೇಳೋವಾಗ ನೀನು ಎಷ್ಟು ಖುಷಿಯಾಗಿದ್ದೆ. ಇನ್ನೂ ಅದೆಲ್ಲಾ ನನ್ ಕಣ್ಣಿಗ್ ಕಟ್ದಾಗ್ ಇದೆ. ಆಗ ಶಾಮಣ್ಣ ಮಾಮ ‘ಇವ್ಳಿಗೂ ಬೇಗ ಮದ್ವೆ ಮಾಡಿ ಮುಗ್ಸು.’ ಅಂದಾಗ ನಿಂಗೆ ಅಮ್ಮಂಗೆ ಮನ್ಸ್ನಲ್ಲಿ ‘ಅಯ್ಯೋ ಇನ್ನ್ ಸ್ವಲ್ಪ ದಿನ ಇವ್ಳೂ ಹೊರ್ಟು ಹೋಗ್ತಾಳೆ’ ಅನ್ಸಿತ್ತು ಅಲ್ವ? ಆಗ್ಲೇ ನಂಗ್ ಅನ್ಸಿದ್ದು ಸಮರ್ಥ್ ವಿಷ್ಯ ನಿಂಗೆ ಹೇಳ್ಬಿಡ್ಬೇಕು ಅಂತ. ನಂಗೆ ನೀನು ಒಪ್ಪೇ ಒಪ್ತಿಯ ಅಂತ ನಂಬ್ಕೆ, ಯಾಕೆ ಅಂದ್ರೆ ಅವ್ನೂ ನಮ್ ಥರ ಸ್ಮಾರ್ಥರವನೇ ಮತ್ತು ಅಷ್ಟು ದೊಡ್ಡ ಕುಟುಂಬ, ಅಷ್ಟ್ ಆಸ್ತಿ, ಲಕ್ಷಣ. ನಂಗೆ ಅವ್ನಲ್ಲಿ ಏನು ಕಡಿಮೆ ಅನ್ನಿಸಲೇ ಇಲ್ಲ. ಅಕ್ಕನ್ ಮದುವೆಯಾಗಿ ಆರು ತಿಂಗ್ಳಿಗೆ ನಾನು ಹೇಳಿದ್ದೆ. ಅವತ್ತು ನೀನು ಎಷ್ಟು ಕೂಗಾಡಿದ್ದೆ. ನಿಂಗೆ ಅಂಥ ಪದಗಳು ಬಯ್ಯೋಕ್ಕೆ ಬರುತ್ತೆ ಅಂತ ಗೊತ್ತೇ ಇರ್ಲಿಲ್ಲ.ಚಿಕ್ಕ ವಯಸ್ಸಲ್ಲಿ ನಾನು ಅಕ್ಕನ್ನ ಕೋತಿ ಅಂದ್ರೂ ಸಾಕು ನೀನು ಹಾಗೆಲ್ಲಾ ಅನ್ಬಾರ್ದು ಬೈಬಾರ್ದು ಅಂತ ಹೇಳ್ಕೊಡ್ತಿದ್ದೆ ಅಲ್ವ. ಅದಕ್ಕೇ ಏನೋ ಕೆಟ್ಟ ಪದಗಳೇ ಗೊತ್ತಿರ್ಲಿಲ್ಲ ಕಾಲೇಜಿನಲ್ಲಿ ನನ್ನ ಸ್ನೇಹಿತರು ಮಾತಾಡಿದ್ರೆ ಕಣ್-ಕಣ್ ಬಿಡ್ತಿದ್ದೆ ಮತ್ತೆ ಅದನ್ನೇ ಮನೇಲ್ ಬಂದ್ ಹೇಳಿದ್ರೆ ಆಗ ಅಮ್ಮ ಅಯ್ಯೋ ಅಪ್ಪಂಗೆ ಇದೆಲ್ಲ ಇಷ್ಟ ಆಗಲ್ಲ ಅವ್ರ ಮುಂದೆ ಇದನ್ನೆಲ್ಲಾ ಮಾತಾಡ್ಬೇಡ ಅಂತಿದ್ಲು. ಮತ್ತೆ ಯಾವಾಗ ಪಾ ನೀನು ದ್ರಾಬೆ, ದರಿದ್ರ ಅನ್ನೋ ಪದಗಳನ್ನ ಕಲ್ತೆ?
ಅಮ್ಮಂಗೂ ಸಮರ್ಥ್ ಮತ್ತೆ ಅವನ ಮನೆಯವರು ಇಷ್ಟ ಆಗಿದ್ರು. ಅಥ್ವಾ ಅವ್ಳು ಹಾಗೆ ನಾಟ್ಕ ಮಾಡ್ತಿದ್ಲೇನೋ ಯಾಕಂದ್ರೆ ಅವ್ಳಿಗೆ ನನ್ನ ಖುಷಿ ಹೆಚ್ಚು ಬೇಕಿತ್ತು ನೀ ಒಬ್ನೇ ಅಲ್ವಾ ಹಾಗೆ ಆಡಿದ್ದು.
ಅವತ್ತು ‘ನಾನು ಹೆಚ್ಚೋ ಅವ್ನೋ?’ ಅಂತ ನೀನು ಅಂದಾಗ ನಂಗೆ ನೀನೇ ಹೆಚ್ಚು ಅನ್ಸಿದ್ದೆ ಅಪ್ಪಾ… ಆದ್ರೆ ಅವ್ನಿಗೆ ನಾನು ಹೆಚ್ಚಾಗಿದ್ದೆ. ಅವ್ನು ಅವ್ರ ಮನೇಲೆಲ್ಲಾ ನನ್ನ ಒಪ್ಸಿ ಎಲ್ಲಾ ತಯಾರು ಮಾಡಿದ್ದ. ನಿನ್ನ ಒಪ್ಪಿಗೆಯೊಂದೇ ಬಾಕಿಯಿದ್ದಿದ್ದು. ಎಲ್ಲರ ಬಲವಂತಕ್ಕೆ ನೀನು ಒಪ್ಪಿಕೊಂಡೆ. ಆದ್ರೆ ಅವತ್ತೇ ಮಾತಾಡ್ಸದ್ ಬಿಟ್ಟ್ಬಿಟ್ಯಲ್ಲಪ್ಪಾ.. ಯಾಕೆ? ಸೋತೆ ಅನ್ಸಿತ್ತಾ ನಿಂಗೆ? ಈಗೋಗೆ ಹರ್ಟ್ ಆಯ್ತಾ? ಯಾಕ್ ಹಿಂಗ್ ಮಾಡ್ಬಿಟ್ಟೆ ಅಪ್ಪಾ? ಇಲ್ಲ ನಿಂಗೆ ಈಗೋ ಇಲ್ಲಾ? ಚಿಕ್ಕವಯ್ಸ್ನಿಂದಾ ಇಲ್ಲೀವ್ರೆಗೂ ನಂಗೆ ಎಲ್ಲಾ ನೀನೇ ಕೊಡ್ಸಿದ್ದು ಹಾಗೇ ಮದುವೆ ಆಗೋನನ್ನೂ ನೀನೇ ಆರಿಸಬೇಕು ಅನ್ಕೊಂಡಿದ್ದೆ ಅನ್ಸತ್ತೆ ಅಲ್ವ? ನಂಗೆ ಈಗ ಅನ್ಸ್ತಿದೆ ಹೌದು ನಿನ್ ಆಯ್ಕೆಗೇ ಬಿಡ್ಬೇಕಿತ್ತು ಆಗ್ಲೂ ಇವ್ನೇ ಸಿಕ್ಕಿದ್ರೆ ಬೇಡಾ ಅಂತಿದ್ಯಾ? ನಾನಿವಾಗಿಲ್ಲಿ ತುಂಬ ಖುಷಿಯಾಗಿದಿನಿ.
ಸರಿಯಾಗಿ ಹತ್ತು ತಿಂಗ್ಳಾಯ್ತು ನಮ್ಮ ಮದ್ವೆ ಆಗಿ, ಹಾಗನ್ನೋಕ್ಕಿಂತಾ ನೀನು ನನ್ನ ಮಾತಾಡ್ಸೋದು ಬಿಟ್ಟು. ಇನ್ನು ಹತ್ತು ದಿನಕ್ಕೆ ದೀಪಾವಳಿ ಮದ್ವೆ ಆದ್ಮೇಲೆ ಮೊದಲ್ನೇ ದೀಪಾವಳಿ ಹುಡುಗಿ ಮನೇಲೇ ಮಾಡ್ಬೇಕು ಅಲ್ವಪ್ಪಾ? ಆದ್ರೆ ನಿಂಗೆ ನನ್ನ ನೋಡೋಕ್ಕಾಗ್ಲಿ, ಮಾತಾಡ್ಸಕ್ಕಾಗ್ಲಿ ಇಷ್ಟ ಇಲ್ಲ. ಅಮ್ಮ ಅಕ್ಕ ತುಂಬ ಜ್ನಾಪಕ ಬರ್ತಿದಾರೆ ನಿಮ್ಮನ್ನೆಲ್ಲಾ ನೋಡ್ಬೇಕು ಅನ್ನಿಸ್ತಿದೆ…..
ನಾವು ಬರದಾ ಅಪ್ಪಾ….
ನಿನ್ನ ಸ್ಪಂದನೆಗೆ ಕಾಯುತ್ತಾ,
ನಿನ್ನ ಪ್ರೀತಿಯ ಮಗಳು
ಇತ್ತೀಚಿನ ಟಿಪ್ಪಣಿಗಳು