ಮಣಿಕಾಂತ್ ಬರೆಯುತ್ತಾರೆ:ಚಿನ್ನದ ಬೊಂಬೆಯಲ್ಲ…

ಚಿನ್ನದ ಬೊಂಬೆಯಲ್ಲ...

ಚಿತ್ರ: ಸಮಯದ ಗೊಂಬೆ. ಗೀತೆ ರಚನೆ: ಚಿ. ಉದಯಶಂಕರ್.

ಸಂಗೀತ: ಎಂ. ರಂಗರಾವ್. ಗಾಯನ: ಡಾ. ರಾಜ್‌ಕುಮಾರ್.

ಹೇ… ಲಲಲಲ… ಹಾ…. ಲಲಲಲ….. ಹೇ….ಹಾ…ಲಲಲಲ

ಹೇ… ಚಿನ್ನದ ಬೊಂಬೆಯಲ್ಲ ದಂತದ ಗೊಂಬೆಯಲ್ಲ

ಬುದ್ಧಿ ಇರುವ ಬೊಂಬೆಯೂ

ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ

ಆಡುವ ಸಮಯದ ಗೊಂಬೇ… ಮಾನವ,

ಆಡುವ ಸಮಯದ ಗೊಂಬೇ… ||ಪ||

ಹೇ… ಸಿಡಿಯುವ ರೋಷದಲಿ ಬಡಿಯುವ ಸೇಡಿನಲಿ

ದಿನವೂ ಹೋರಾಟವೇ

ಹಾ…. ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ

ಮನುಜ ಜೊತೆಯಾಗಿ ಒಂದಾಗಿ ಬಾಳುವ

ಅವನು ಸಂತೋಷ ಎಲ್ಲೆಂದು ಹುಡುಕುವ

ಬಿಸಿಲಲಿ ಮಳೆಯಲಿ ಚಳಿಯಲಿ ಬೆದರದೆ

ವಿನೋದವೋ ವಿಷಾದವೋ ಹೊಂದಿಕೊಳ್ಳುವಾ ||೧||

ಹೇ… ಜನಿಸಿದ ಊರೊಂದು ಬೆಳೆಯುವ ಊರೊಂದು

ಬದುಕೂ ಉಯ್ಯಾಲೆಯೂ

ಹಾ… ನಡೆಯುವ ನಾಡೊಂದು ಬೆರೆಯುವ ಮಣ್ಣೊಂದು

ಮನುಜ ಇರುವಲ್ಲೇ ಹಾಯಾಗಿ ಬಾಳುವ

ಸುಖದಾ ಕನಸಲ್ಲೇ ದಿನವೆಲ್ಲಾ ತೇಲುವಾ

ನೆನಪಿನ ಸುಳಿಯಲಿ ಮರೆವಿನ ಮರೆಯಲಿ

ವಿನೋದವೋ ವಿಷಾದವೋ ಹೊಂದಿಕೊಳ್ಳುವಾ ||೨||

ಎಲ್ಲರಿಗೂ ಗೊತ್ತಿರುವಂತೆ, ಒಂದು ಸಿನಿಮಾದಲ್ಲಿ ನಾಲ್ಕು ಅಥವಾ ಐದು ಹಾಡುಗಳಿರುತ್ತವೆ. ಹೆಚ್ಚಿನ ಸಿನಿಮಾಗಳಲ್ಲಿ ಒಂದು ಅಥವಾ ಎರಡು ಹಾಡುಗಳು ಜನಪ್ರಿಯವಾಗುತ್ತವೆ. ಕೆಲವು ಸಿನಿಮಾಗಳಲ್ಲಿ ಸಿನಿಮಾ ಮುಗಿವ ವೇಳೆಗೆ ಹಾಡುಗಳೂ ಮರೆತುಹೋಗಿರುತ್ತವೆ.

ಆದರೆ, ರಾಜ್‌ಕುಮಾರ್ ಅಭಿನಯದ ಚಿತ್ರಗಳಲ್ಲಿ ಹಾಗಾಗುತ್ತಿರಲಿಲ್ಲ. ಅಣ್ಣಾವ್ರ ಸಿನಿಮಾಗಳಲ್ಲಿ ಒಟ್ಟು ಐದು ಹಾಡುಗಳಿವೆ ಎಂದಾದಲ್ಲಿ ಅಷ್ಟೂ ಸೂಪರ್ ಹಿಟ್ ಆಗಿರುತ್ತಿದ್ದವು. ಈ ಹಾಡುಗಳ ಹಿಂದಿರುತ್ತಿದ್ದವರು ಗೀತೆರಚನೆಕಾರ ಚಿ. ಉದಯಶಂಕರ್.

‘ಎಕ್ಸ್‌ಪ್ರೆಸ್ ಸ್ಪೀಡಿನ ಚಿತ್ರಸಾಹಿತಿ’ ಎಂದು ಕರೆಸಿಕೊಂಡವರು ಉದಯಶಂಕರ್. ಒಂದು ಸಂದರ್ಭದಲ್ಲಿ ಉದಯಶಂಕರ್ ಅವರನ್ನು ನೆನಪಿಸಿಕೊಂಡು ಹಿರಿಯ ನಿರ್ದೇಶಕ ಭಾರ್ಗವ ಹೀಗೆಂದಿದ್ದರು. ‘ಉದಯಶಂಕರ್‌ಗೆ ಹಾಡಿನ ಸಂದರ್ಭ ವಿವರಿಸಿದರೆ ಸಾಕಾಗಿತ್ತು.

ನಂತರ ಅವರು ಒಂದೆರಡು ಫುಲ್ ಸ್ಕೇಪ್ ಹಾಳೆಗಳನ್ನು ತೆಗೆದುಕೊಳ್ಳುತ್ತಿದ್ದರು. ಪ್ರತಿಯೊಂದು ಹಾಳೆಯನ್ನು ಎಂಟು ಸಮಭಾಗಗಳಾಗಿ ಕತ್ತರಿಸಿಕೊಂಡು ಅವುಗಳನ್ನು ಪ್ಯಾಡ್‌ಗೆ ಫಿಕ್ಸ್ ಮಾಡಿಕೊಂಡು ಚಿತ್ರತಂಡದವರಿಂದ ಒಂದಿಷ್ಟು ದೂರದಲ್ಲಿ ಕೂತುಬಿಡುತ್ತಿದ್ದರು. ಆನಂತರದ ಹತ್ತಿಪ್ಪತ್ತು ನಿಮಿಷ ತಮ್ಮಷ್ಟಕ್ಕೆ ತಾವೇ ಏನೋ ಮಾತಾಡಿಕೊಂಡು ಬರೆಯುತ್ತಿದ್ದರು.

ನಂತರ ಎದ್ದು ಬಂದು ಆ ಹಾಳೆಗಳನ್ನು ಕೊಡುತ್ತಿದ್ದರು! ಅಲ್ಲಿ, ಒಂದೊಂದು ಹಾಡಿಗೂ ಮೂರೋ ನಾಲ್ಕೋ ಮಾದರಿಗಳಿರುತ್ತಿದ್ದವು. ಈ ಪೈಕಿ ನಿಮ್ಗೆ ಯಾವುದು ಚೆನ್ನಾಗಿದೆ ಅನಿಸುತ್ತೋ ಅದನ್ನು ಇಟ್ಕೊಳ್ಳಿ’ ಎಂದುಬಿಡುತ್ತಿದ್ದರು. ನಿಜ ಹೇಳಬೇಕೆಂದರೆ, ಪ್ರತಿಯೊಂದು ಹಾಡುಗಳೂ ಅದ್ಭುತ ಎಂದು ಉದ್ಗರಿಸುವಂತೆಯೇ ಇರುತ್ತಿದ್ದವು. ಪೆನ್ ಹಿಡಿದಾಕ್ಷಣ ಅವರ ಕೈ ಬೆರಳ ಮಧ್ಯೆ ಶಾರದಾಂಬೆ ನಾಟ್ಯ ಮಾಡ್ತಿರ್‍ತಾಳೆ ಎಂಬ ಮಾತು ಆಗ ಜನಜನಿತವಾಗಿತ್ತು…’

‘ಸಮಯದ ಗೊಂಬೆ’ ಚಿತ್ರದ ಟೈಟಲ್ ಸಾಂಗ್ ಹುಟ್ಟಿದ ಸಂದರ್ಭ ವಿವರಿಸಿ ಎಂದಾಗ, ನಿರ್ದೇಶಕ ಭಗವಾನ್ ಕೂಡ, ಭಾರ್ಗವ ಅವರು ಹೇಳಿದ್ದ ಮಾತುಗಳನ್ನೇ ರಿಪೀಟ್ ಮಾಡಿದರು. ಚಿತ್ರಲೇಖ ಅವರ ಕಾದಂಬರಿ ಆದರಿಸಿದ ಚಿತ್ರ ಸಮಯದ ಗೊಂಬೆ. ಸಂಭಾಷಣೆಯ ಹೊಣೆಯನ್ನೂ ಉದಯಶಂಕರ್ ಅವರೇ ಹೊತ್ತಿದ್ದರು. ಹಾಗಾಗಿ, ಅವರಿಗೆ ಇಡೀ ಸಿನಿಮಾದ ಕಥೆ ಗೊತ್ತಿತ್ತು.

ಕಥಾನಾಯಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗ. ಆದರೆ, ವಿಧಿಯಾಟದಿಂದ ಅವನು ಚಿಕ್ಕಂದಿನಲ್ಲೇ ಮನೆಬಿಟ್ಟು ಓಡಿಬರುತ್ತಾನೆ. ಮುಂದೆ ಲಾರಿ ಡ್ರೈವರ್ ಆಗುತ್ತಾನೆ. ಅದೊಂದು ದಿನ, ಲಾರಿ ಓಡಿಸಿಕೊಂಡು ಬರುತ್ತಿದ್ದಾಗಲೇ ಅವನಿಗೆ ತನ್ನ ಬದುಕಿನ ಹಾದಿಯ ನೆನಪಾಗುತ್ತದೆ. ಹಳೆಯದನ್ನೆಲ್ಲ ನೆನಪು ಮಾಡಿಕೊಂಡು ಸ್ವಗತವೆಂಬಂತೆ ಅವನು ಹಾಡಿಕೊಳ್ಳುತ್ತಾನೆ. ‘ಚಿನ್ನದ ಬೊಂಬೆಯಲ್ಲ, ದಂತದ ಗೊಂಬೆಯಲ್ಲ, ಬುದ್ಧಿ ಇರುವ ಬೊಂಬೆಯೂ…’

ಹಳೆಯ ದಿನಗಳನ್ನು ಭಗವಾನ್ ನೆನಪಿಸಿಕೊಂಡದ್ದು ಹೀಗೆ: ‘ಸಮಯದ ಗೊಂಬೆ’ ಚಿತ್ರದ ಕುರಿತು ಮಾತುಕತೆ ನಡೆದದ್ದು ಮದ್ರಾಸಿನ ಸ್ವಾಗತ್ ಹೋಟೆಲಿನಲ್ಲಿ. ಹಾಡಿನ ಸಂದರ್ಭದ ಬಗ್ಗೆ ನಾನು-ದೊರೈ ಹೇಳಿದ್ದನ್ನು ಕಣ್ಮುಚ್ಚಿ ಕೂತು ಕೇಳಿಸಿಕೊಂಡರು ಉದಯಶಂಕರ್. ನಂತರ ಹತ್ತೇ ನಿಮಿಷದಲ್ಲಿ ಹಾಡು ಬರೆದು ನನ್ನ ಕೈಗಿತ್ತು ಹೋಗಿಬಿಟ್ಟರು.

ಮರುದಿನ ಬೆಳಗ್ಗೆ ಆ ಹಾಡಿನೊಂದಿಗೆ ನಾನು ಡಾ. ರಾಜ್ ಅವರ ಮನೆಗೇ ಹೋದೆ. ಹಾಡಿದ್ದ ಹಾಳೆಯನ್ನು ಅಣ್ಣಾವ್ರಿಗೆ ಕೊಟ್ಟೆ. ಸಡಗರದಿಂದಲೇ ಹಾಡನ್ನು ಗಮನಿಸಿದ ರಾಜ್-‘ಭಗವಾನ್ ಅವರೇ, ನಮ್ಮ ಉದಯಶಂಕರ್ ಎಲ್ಲಿ? ಅವರನ್ನು ಅರ್ಜೆಂಟಾಗಿ ಕರೆಸ್ತೀರಾ? ನಾನು ಅವರನ್ನು ಈಗಲೇ ನೋಡಬೇಕು’ ಅಂದರು. ತಕ್ಷಣವೇ ಉದಯಶಂಕರ್‌ಗೆ ಪೋನ್ ಮಾಡಿ ವಿಷಯ ತಿಳಿಸಿದೆ.

ಸ್ವಲ್ಪ ಸಮಯದ ನಂತರ ಉದಯಶಂಕರ್ ಬಂದರು. ಅವರನ್ನು ಕಂಡದ್ದೇ ‘ಉದಯಶಂಕರ್ ಅವರೇ, ಇಲ್ಲಿ ನೀವು ಏನು ಬರೆದಿದ್ದೀರಿ ಗೊತ್ತೋ ಎಂದು ಪ್ರಶ್ನಿಸುತ್ತಲೇ ಚಿ.ಉ. ಅವರನ್ನು ಬಿಗಿಯಾಗಿ ತಬ್ಬಿಕೊಂಡರು ರಾಜ್. ಆನಂತರದ ಒಂದೆರಡು ಕ್ಷಣ ಇಬ್ಬರಲ್ಲೂ ಮಾತಿಲ್ಲ. ನಂತರ ಉದಯಶಂಕರ್ ಅವರ ಎರಡೂ ಕೈಗಳನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಂಡ ರಾಜ್ ಹೇಳಿದರು.

‘ಉದಯಶಂಕರ್ ಅವರೇ, ನೀವು ಇದನ್ನು ಕೇವಲ ಒಂದು ಹಾಡಾಗಿ ಬರೆದಿಲ್ಲ. ಬದಲಾಗಿ, ನನ್ನ ಬದುಕಿನ ಕಥೆಯನ್ನೇ ಹಾಡಲ್ಲಿ ತಂದಿದ್ದೀರಿ. ಈ ಹಾಡು ನನ್ನೊಳಗಿನ ಮಾತುಗಳನ್ನೆಲ್ಲ ಹೇಳಿಬಿಟ್ಟಿದೆ. ಈ ಹಾಡಲ್ಲಿರುವ ಒಂದೊಂದು ಸಾಲೂ ನನಗೇ ಅನ್ವಯಿಸುವಂತಿವೆ. ನೀವು-‘ಚಿನ್ನದ ಬೊಂಬೆಯಲ್ಲ, ದಂತದ ಗೊಂಬೆಯಲ್ಲ’ ಎಂದಿದ್ದೀರಿ.

ನಾನು ಅವೆರಡೂ ಅಲ್ಲ. ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ’ ಆಡುವ ಸಮಯದ ಗೊಂಬೇ…’ ಎಂದಿದ್ದೀರಿ. ನಿಜವಾಗಿಯೂ ಅದೂ ಸರಿ. ನಾನಾದರೂ ಆ ರಾಘವೇಂದ್ರ ಸ್ವಾಮಿ ಹೇಗೆ ಅಪ್ಪಣೆ ಕೊಡಿಸ್ತಾ ಇದ್ದಾನೋ ಅದನ್ನಷ್ಟೇ ಮಾಡುತ್ತಿದ್ದೇನೆ. ಒಂದೊಂದು ಸಂದರ್ಭದಲ್ಲಿ ಯಾವುದೋ ಒಂದು ಸಂಕಟ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತೆ.

ಇನ್ನೊಂದು ಸಂದರ್ಭದಲ್ಲಿ ಯಾವುದೋ ಒತ್ತಡಕ್ಕೆ ಒಳಗಾಗಿ ಇಷ್ಟವಿಲ್ಲದ ಕೆಲಸ ಮಾಡಬೇಕಾಗುತ್ತೆ. ಆಗೆಲ್ಲ ವಿನೋದವೊ, ವಿಷಾದ ಎರಡಕ್ಕೂ ಹೊಂದಿಕೊಂಡು ಬದುಕ್ತಾ ಇದೀನಿ. ಈ ಎಲ್ಲಾ ವಿವರಣೆಯೂ ನಿಮ್ಮ ಹಾಡಲ್ಲಿದೆ. ಇಂಥ ಅಪರೂಪದ ಸಾಲುಗಳೆಲ್ಲ ನಿಮ್ಗೆ ಹೇಗೆ ಹೊಳೆಯುತ್ವೆ?’ ಎಂದಿದ್ದರು. ಮುಂದುವರೆದು-‘ಇದು ಕೇವಲ ನನ್ನೊಬ್ಬನ ಹಾಡಾಗುವುದಿಲ್ಲ. ಬಹುಪಾಲು ಎಲ್ಲ ಮನುಷ್ಯರ ಕಥೆಯೂ ಹೀಗೇ ಆಗಿರುತ್ತೆ. ಎಲ್ಲರೂ ಏನೋ ಆಗಬೇಕು ಅಂದುಕೊಂಡಿರ್‍ತಾರೆ.

ಆದರೆ, ಬೇರೇನೋ ಆಗ್ತಾರೆ. ಹುಟ್ಟೋದೇ ಒಂದು ಊರು, ಬೆಳೆಯೋದೇ ಒಂದು ಊರು, ಸಾಯೋದೇ ಒಂದು ಊರು…. ಹಾಗಿರ್‍ತದೆ ಜೀವನ. ಈ ಎಲ್ಲ ಕಾರಣದಿಂದ ಇದು ಎಲ್ಲರ ಮನದ ಹಾಡಾಗುತ್ತೆ ಎಂದು ಭವಿಷ್ಯ ಹೇಳಿದ್ದರು ರಾಜ್‌ಕುಮಾರ್. ಒಂದು ಹಾಡಿನ ಸಾಹಿತ್ಯವನ್ನ ಅದರ ಒಟ್ಟು ಶಕ್ತಿಯೊಂದಿಗೆ ಗುರುತಿಸುವ ಅಪರೂಪದ ಗುಣ ಅವರಿಗಿತ್ತು… ಮುಂದೆ ರಾಜ್‌ಕುಮಾರ್ ಹೇಳಿದಂತೆಯೇ ಆಯಿತು. ಹಾಡು ಕೇಳಿದ ಬಹುತೇಕ ಮಂದಿ ಅದನ್ನು ತಮ್ಮ ಬದುಕಿಗೇ ಸಮೀಕರಿಸಿಕೊಂಡು ನೋಡಿದ್ದರು. ಪ್ರತಿಯೊಂದು ಸಾಲೂ ತಮ್ಮೆದೆಯ ಮಾತುಗಳೇ ಎಂದುಕೊಂಡು ಖುಷಿಪಟ್ಟಿದ್ದರು…

ಹಾಡು ಹುಟ್ಟಿದ ಕ್ಷಣವನ್ನು ನೆನಪಿಸಿಕೊಂಡು ಹೀಗೆಲ್ಲಾ ಹೇಳುತ್ತಲೇ ಹೋದರು ಭಗವಾನ್.

ಸ್ವಾರಸ್ಯವೆಂದರೆ, ಸೂಪರ್‌ಸ್ಟಾರ್ ಎನ್ನಿಸಿಕೊಂಡ ನಂತರವೂ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆಯಂಥ ಪ್ರಶಸ್ತಿಗಳಿಗೆ ಭಾಜನರಾದ ನಂತರವೂ- ‘ನಾನು ಸಾಮಾನ್ಯರಲ್ಲಿ ಸಾಮಾನ್ಯ. ದೈವ ಕೃಪೆಯಷ್ಟೇ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ’ ಎಂದು ವಿನಯದಿಂದಲೇ ಹೇಳುವುದು ರಾಜ್‌ಕುಮಾರ್‌ಗೆ ಮಾತ್ರ ಸಾಧ್ಯವಿತ್ತು. ತಮಗೆ ಒಲಿದು ಬಂದ ಯಶಸ್ಸಿನ ಬಗ್ಗೆ ಮಾತಾಡುತ್ತಾ, ಈ ಹಿಂದೆ ‘ರೂಪತಾರಾ’ದ ಸಂಪಾದಕರಾಗಿದ್ದ ಬಿ. ಗಣಪತಿ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ರಾಜ್‌ಕುಮಾರ್ ಹೀಗೆಂದಿದ್ದರು:

‘ನನ್ನ ಭಾಗ್ಯ ಅಂದರೆ, ನಮ್ಮ ಅಪ್ಪಾಜಿಯಿಂದ ಆರಂಭವಾಗಿ, ಜೀವನದ ಪ್ರತಿಯೊಂದು ಹಂತದಲ್ಲೂ ನನಗೆ ಉತ್ತಮರ ಸಹವಾಸ ಸಿಕ್ತು. ಶ್ರೀಗಂಧದೊಟ್ಟಿಗೆ ಇದ್ದು ಕಾಟು ಕರಿಮರ ಕೂಡ ಶ್ರೀಗಂಧದ ಸುವಾಸನೆಯನ್ನು ಹೊಂದಿದ ಹಾಗಾಯ್ತು ನನ್ನ ಕಥೆ.

ಸಾಹಿತಿಗಳು, ಕಲಾವಿದರು, ಸಹೋದ್ಯೋಗಿಗಳು… ಹೀಗೆ, ಎಲ್ಲರಿಂದಲೂ ಕಲಿತು ನಾನು ಒಂದಿಷ್ಟು ಬೆಳೆದೆ, ಅಷ್ಟೆ. ಜತೆಗೆ ಚಿತ್ರರಂಗದಲ್ಲಿ ಒಳ್ಳೊಳ್ಳೆಯ ನಿರ್ದೇಶಕರು, ಉದಯಶಂಕರ್ ಅವರಂಥ ಬರಹಗಾರರು ಸಿಕ್ಕಿದ್ರು. ಇವರೆಲ್ಲರ ಸರಸ್ವತಿ ಭಂಡಾರವನ್ನು ನಾನು ತಲೆ ಮೇಲೆ ಹೊತ್ತು ನಡೆದೆ ಅಷ್ಟೆ. ಅಂಥ ಮಹನೀಯರಿಂದಲೇ ಈ ರಾಜ್‌ಕುಮಾರನ ನಾಲಿಗೆ ಶುದ್ಧ ಆದದ್ದು. ಇಲ್ದೇ ಇದ್ರೆ ನನಗೇನು ಗೊತ್ತಿತ್ತು ಬದ್ನೆ ಕಾಯಿ, ಅಲ್ವಾ? ಹಹ್ಹ ಹ್ಹ ಹ್ಹ ಹ್ಹಾ…

…. ನಾನು ಬರೀ ಮೂರ್‍ನೇ ಕ್ಲಾಸು ಓದಿದವನು. ಊರಲ್ಲಿ ಎಮ್ಮೆ ಮೇಯಿಸ್ಕಂಡು, ಹೊಲ ಉಳ್ಕೊಂಡು ಇದ್ದವನು. ಎಂ.ಎ. ಲಿಟ್ರೇಚರ್ ಎಲ್ಲಾ ಮಾಡಿದವರಿಗೆ ಡಾಕ್ಟರೇಟ್ ಕೊಡ್ತಾರೆ. ಆದ್ರೆ ಎಮ್ಮೆ ಮೇಯಿಸ್ಕೊಂಡು ಇದ್ದವನಿಗೂ ಎಲ್ಲ ಪ್ರಜ್ಞಾವಂತರೂ ಸೇರಿ ಡಾಕ್ಟರೇಟ್ ಕೊಟ್ರು. ಏಕೆ? ಎಲ್ಲಿಂದ ಬಂತು ಆ ಪುಣ್ಯ? ರಂಗಭೂಮಿಯಿಂದ, ಸಿನಿಮಾದಿಂದ. ಅದೆಷ್ಟೋ ಹೃದಯವಂತರು ಈ ಗಮಾರನ ಮೇಲೆ ತೋರಿಸಿದ ಪ್ರೀತಿ-ವಿಶ್ವಾಸದಿಂದ, ಆ ಭಗವಂತನ ಕರುಣೆಯಿಂದ ನನಗೆ ಏನೇನೆಲ್ಲಾ ಬದುಕಲ್ಲಿ ಸಿಕ್ಕಿಬಿಡ್ತು…

***

ಈಗ ಒಂದರೆಕ್ಷಣದ ಮಟ್ಟಿಗೆ ಭಗವಾನ್ ಮತ್ತು ರಾಜ್‌ಕುಮಾರ್ ಇಬ್ಬರ ಮಾತುಗಳನ್ನೂ ಮರೆತುಬಿಡಿ. ಒಬ್ಬರೇ ಗಟ್ಟಿಯಾಗಿ ‘ಚಿನ್ನದ ಗೊಂಬೆಯಲ್ಲ…’ ಹಾಡನ್ನು ಓದಿಕೊಳ್ಳಿ. ಅಥವಾ ಥೇಟ್ ರಾಜ್‌ಕುಮಾರ್ ಶೈಲಿಯಲ್ಲೇ ಹಾಡಿಕೊಂಡು ನೋಡಿ: ಹಾಡು ಅರ್ಥವಾಗುತ್ತಾ ಹೋದಂತೆಲ್ಲಾ ಅಲ್ಲಿರುವ ಪ್ರತಿ ಸಾಲೂ, ಪ್ರತಿಯೊಂದು ಪದವೂ ನಮ್ಮ-ನಿಮ್ಮೆಲ್ಲರ ಬದುಕಿಗೇ ಅನ್ವಯಿಸುವಂತಿದೆ, ಅಲ್ಲವಾ?

ನಿಮ್ಮ ಟಿಪ್ಪಣಿ ಬರೆಯಿರಿ