
-ಜೋಗಿ
ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.
ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ.

ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?
ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ.
ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.
ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ.
ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.
ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು