ಕಾಸು ಕುಡಿಕೆ: ‘ಅರ್ಜೆಂಟ್ ಸಾಲ’…

ಕಾಸು ಕುಡಿಕೆ -26
-ಜಯದೇವ ಪ್ರಸಾದ ಮೊಳೆಯಾರ

If you owe the bank $100 that’s your problem. If you owe the bank $100 million,
that’s the bank’s problem…………. J.Paul Getty.
ನೀವು ಬ್ಯಾಂಕಿಗೆ ನೂರು ಡಾಲರು ಕೊಡಬೇಕಾಗಿದ್ದಲ್ಲಿ ಅದು ನಿಮ್ಮ ಸಮಸ್ಯೆ. ಬದಲು, ನೀವು ನೂರು ಮಿಲಿಯ ಡಾಲರು ಕೊಡಬೇಕಾಗಿದ್ದಲ್ಲಿ ಅದು ಬ್ಯಾಂಕಿನ ಸಮಸ್ಯೆ !!. . . . . . . .  ಜೆ. ಪೌಲ್ ಗೆಟ್ಟಿ.
ಹಾಲ್‌ನಲ್ಲಿ ಕುಳಿತು ಕಂಪ್ಯೂಟರ್ ಮೇಲೆ ‘ಕಾಕು-೨೬’ ಅಂತ ಫಾಂಟ್ ಸೈಜ್   ಹದಿನೆಂಟರಲ್ಲಿ ಕುಟ್ಟಿ, ಅದರ ಕೆಳಗೆ ‘ಅರ್ಜೆಂಟ್ ಸಾಲ’ ಅಂತ ಫಾಂಟ್ ಸೈಜ್ ಮೂವತ್ತಾರರಲ್ಲಿ ಕುಟ್ಟಿ, ಇವತ್ತು ಇದರಲ್ಲಿ ಗುರುಗುಂಟಿರಾಯರು ಬೇಕೇ ಬೇಡವೇ? ಮಸಾಲೆ ದೋಸೆ ಬೇಕೇ ಬೇಡವೇ? ಅಂತ ತಲೆಕೆರೆದುಕೊಂಡು ಸ್ಕ್ರೀನನ್ನು ನೋಡುತ್ತಾ ಆಲೋಚಿಸುತ್ತಿರುವಾಗ ‘ಸರ್. .  ’ ಎಂಬ ಹೆಣ್ಣುದನಿ ಸಣ್ಣಗೆ ಕೇಳಿದಂತಾಗಿ ಬಾಗಿಲೆಡೆ ತಲೆಯೆತ್ತಿ ನೋಡಿದೆ.
ಒಂದು ಸಾದಾರಣ ಸೀರೆಯುಟ್ಟ, ಮುಖದಲ್ಲಿ ಸಾಕಷ್ಟು ಚಿಂತೆ ಗಾಬರಿಗಳ ಛಾಯೆಯನ್ನು ಹೊತ್ತ ಸುಮಾರು ನಡುವಯಸ್ಸಿನ ಹೆಂಗಸೊಬ್ಬರು ನನ್ನ ಮನೆ ಬಾಗಿಲಲ್ಲಿ ನಿಂತು ‘ಒಳಗೆ ಬರಲೇ?’ ಎಂಬ ಭಾವವನ್ನು ಕಣ್ಣಿನಲ್ಲೇ ಸೂಚಿಸುತ್ತಾ ಕೈ ಹಿಸುಕುತ್ತಿದ್ದರು. ಅಸಹಾಯಕರಾಗಿ ಕಂಡುಬಂದ ಹೆಂಗಸನ್ನು ಅರೆಕ್ಷಣ ಹಾಗೆಯೇ ನೋಡಿದೆ. ಗುರುತಾಗಲಿಲ್ಲ. ಕುರ್ಚಿಯಿಂದೆದ್ದು ‘ಬನ್ನಿ ಒಳಗೆ’ ಎನ್ನುತ್ತಾ ಸ್ವಾಗತಿಸಲು ಬಾಗಿಲೆಡೆಗೆ ಸಾಗಿದೆ.
‘ನನ್ನ ಹೆಸರು ವಿಮಲ.
ಸ್ವಲ್ಪ ಅರ್ಜೆಂಟು ಮಾತನಾಡ್ಲಿಕ್ಕೆ ಉಂಟು, ಸರ್’ ಎನ್ನುತ್ತಾ ಒಳ ಬಂದು ನಾನು ತೋರಿಸಿದ ಕುರ್ಚಿಯಲ್ಲಿ ನಿಧಾನವಾಗಿ ಕುಳಿತರು.
ಇನ್ನೂ ಗುರುತಾಗಲಿಲ್ಲ. ಯಾರೋಪ್ಪ. ಏನ್ ಕತೆಯೋ?’ ಎನ್ನುತ್ತಾ ನಾನೂ ಅವರೆದುರು ಕುಳಿತು “ಹೇಳಿ ವಿಮಲ, ಏನ್ ವಿಷಯ?” ಅಂತ ವಿಚಾರಿಸಿದೆ.
ವಿಮಲ ಇನ್ನಷ್ಟೂ ಗಂಭೀರರಾದರು. ಮುಖದಲ್ಲಿ ದುಃಖ ಬೇಸರಗಳು ಮುಖದಿಂದ ಒಡೆದು ಹರಿಯುವಂತೆ ಭಾಸವಾಯಿತು. ಚಿಕ್ಕ ಮೋರೆ ಮಾಡಿ ಸ್ವಲ್ಪ ಹೊತ್ತು ಮಾತನಾಡಲು ಶಬ್ದಗಳಿಗಾಗಿ ತಡಕಾಡುತ್ತಾ ಕುಳಿತರು. ಮಹಿಳೆ ಏನೋ ದೊಡ್ಡ ಕಷ್ಟದಲ್ಲಿ ಇದ್ದಂತೆ ತೋರುತ್ತಿತ್ತು.
“ನಾನು ನಿಮ್ಮ ನೇಬರ್. . . ಇಲ್ಲೇ ಹತ್ರ ಸೆಕೆಂಡ್ ಕ್ರಾಸ್. ನಾವು ಸ್ವಲ್ಪ ಸಾಲದ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಮನೆಯವರು. . . , ಮನುಷ್ಯ ಸ್ವಲ್ಪ ದುಬಾರಿ. ಸಿಕ್ಕಿದ್ದಕ್ಕೆಲ್ಲ ಖರ್ಚು ಮಾಡ್ತಾರೆ. ಕಂಡದ್ದೆಲ್ಲ ಬೇಕು. ಇದ್ದಷ್ಟೂ ಸಾಲ್ದು. ಮತ್ತೆ ಸಾಲ ಮಾಡ್ತಾರೆ, ಒಂದು ಸಾಲ ಮುಚ್ಚಲು ಇನ್ನೊಂದು ಕಡೆ ಹೋಗಿ ಸಾಲ ಮಾಡ್ತಾರೆ.
ಹೀಗೆ ಅಲ್ಲಿ ಇಲ್ಲಿ ಅಂತ ಸಿಕ್ಕಿದ ಫೈನಾನ್ಸ್ ಕಂಪೆನಿಗಳಲ್ಲೆಲ್ಲಾ ಹೋಗಿ ಸಿಕ್ಕಪಟ್ಟೆ ಸಾಲ ಮಾಡಿದ್ದಾರೆ. ವಾಪಾಸು ಕಟ್ಟಲು ನಮ್ಮಲ್ಲಿ ದುಡ್ಡು ಇಲ್ಲ. ಈಗ ರಿಕವರಿ ಅಂತ ಮನೆ ಹತ್ರ ಯಾರ್ಯಾರೋ ಬರ್ತಾರೆ. ಗಲಾಟೆ ಮಾಡಿ ಹೋಗ್ತಾರೆ. ಒಟ್ಟಿನಲ್ಲಿ ನನಗೆ ಹೆದರಿಕೆ ಆಗ್ತದೆ. ಏನು ಮಾಡುವುದು ಅಂತ ಗೊತ್ತಾಗುದಿಲ್ಲ. . . “ ನಿಧಾನವಾಗಿ ವಿಮಲ ತಮ್ಮ ಸಮಸ್ಯೆಯನ್ನು ಬಿಡಿಸಿಟ್ಟರು.

%d bloggers like this: