-ಜೋಗಿ
ಹಸಿರು ಹಬ್ಬಿದ ದಕ್ಷಿಣ ಕನ್ನಡ.
ಕೊಂಚ ದಿಗಿಲಿನಿಂದಲೇ ಹೊರಟಿದ್ದೆ. ದಾರಿ ಸರಿಯಾಗಿಲ್ಲ ಎಂದು ಗೆಳೆಯ ಎಚ್ಚರಿಸಿದ್ದ. ಜೊತೆಗೇ ಭೋರ್ಗರೆವ ಮಳೆ. ಜಾರು ಹಾದಿ. ಕಾರು ಮೈಗೆಲ್ಲ ಗಾಯ ಮಾಡಿಕೊಂಡು ಹೇಗೋ ಹೇಗೋ ಸಾಗುತ್ತಿತ್ತು. ನಾವು ನೆಲದ ಮೇಲೆ ಕಾಲಿಡುವಂತಿರಲಿಲ್ಲ. ನಿರಂತರವಾಗಿ ನೀರು ಹರಿದು ನೆಲವೆಲ್ಲ ಪಾಚಿ ಕಟ್ಟಿತ್ತು.
ಮನಸ್ಸಿಗೂ ಪಾಚಿ ಕಟ್ಟಿದೆ ಎಂದು ವಾರ್ತಾಭಾರತಿ’ಯ ಮಿತ್ರನೊಬ್ಬ ಕಟಕಿಯಾಡಿದ್ದ. ಅವನ ಮಾತು ಪೂರ್ತಿ ಸತ್ಯ ಎಂದು ನಂಬುವಂತಿರಲಿಲ್ಲ. ಸಣ್ಣ ಸಂಗತಿಗಳಿಗೂ ಬೇರೆ ಬಣ್ಣ ಕೊಡುವ ಕಲೆ ಪತ್ರಿಕೆಗಳಲ್ಲಿ ಇರುವ ಅನೇಕರಿಗೆ ಸಿದ್ಧಿಸಿರುತ್ತದೆ. ನಾಲ್ಕು ಮಂದಿ ವಿಚಾರವಾದಿಗಳೂ ಪತ್ರಕರ್ತರೂ ಒಂದೆಡೆ ಸೇರಿದರೆ, ಒಂದು ಹೊಸ ವಿಚಾರವಾದ ಸೃಷ್ಟಿಯಾಗುತ್ತದೆ.
ಉದಾರೀಕರಣ, ಜಾಗತೀಕರಣ, ತಾತ್ವಿಕತೆ, ಜಾತ್ಯತೀತ ವ್ಯವಸ್ಥೆಯ ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುವುದು ಅಲ್ಲಿಯೇ. ಪ್ರತಿಯೊಂದು ಘಟನೆಯನ್ನೂ ತಿರುಚಿ, ಅದಕ್ಕೆ ಜಾತಿಯ ವರ್ಗದ ಮತದ ಬಣ್ಣ ಕೊಟ್ಟು ದಕ್ಷಿಣ ಕನ್ನಡ ಕುಲಗೆಟ್ಟುಹೋಗಿದೆ ಎಂದು ಉದಾಹರಣೆ ಸಮೇತ ವಿವರಿಸುವ ಗೆಳೆಯರನ್ನೂ ನಾನು ನೋಡಿದ್ದೆ.
ಹೊಟೆಲಿನಲ್ಲಿ ಕುಡಿದು ಕುಣಿಯುತ್ತಿದ್ದವರನ್ನು ಅಟ್ಟಾಡಿಸಿಕೊಂಡು ಹೊರಗೆ ಹಾಕಿದ ಸಂದರ್ಭದಲ್ಲಿ ರಾಮಸೇನೆಯ ವರ್ತನೆಯನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಖಂಡಿಸಿದ್ದರು. ದಕ್ಷಿಣಕನ್ನಡ ಮೂಲಭೂತವಾದಕ್ಕೆ ಬಲಿಯಾಗುತ್ತಿದೆ ಎಂದು ಬಹಳಷ್ಟು ಮಂದಿ ವಿಷಾದಿಸಿದ್ದರು. ಅದು ಒಂದು ಘಟನೆ ಮಾತ್ರ. ಅಂಥ ಘಟನೆ ಎಲ್ಲಾ ಕಡೆಯೂ ನಡೆಯುತ್ತಿರುತ್ತದೆ. ಅದನ್ನೇ ಒಂದು ಜಿಲ್ಲೆಯ ಮನಸ್ಥಿತಿ ಎಂದು ಕರೆಯುವುದು ಸರಿಯಾ ಎಂಬುದು ಹಲವರ ಪ್ರಶ್ನೆ.
ಪತ್ರಿಕೆಯ ವರದಿಗಳನ್ನು ನಾನು ನಂಬಬೇಕಾಗಿರಲಿಲ್ಲ. ದಕ್ಷಿಣ ಕನ್ನಡ ನನ್ನ ಊರು. ಅದರ ತುದಿಯಿಂದ ತುದಿಗೆ ನಾನು ಅಡ್ಡಾಡಿದವನೇ. ಒಂದಲ್ಲ ಒಂದು ಘಾಟಿ ರಸ್ತೆ ಏರದ ಹೊರತು ದಕ್ಷಿಣದ ಕನ್ನಡದ ಗಡಿಯಿಂದ ಪಾರಾಗುವುದು ಸಾಧ್ಯವೇ ಇಲ್ಲ.
ಹಾಗಂತಲೇ ಹೊರಗಿನಿಂದ ಬಂದವರನ್ನು ಅವರು ಘಟ್ಟದ ಮೇಲಿನವರು, ಘಟ್ಟದವರು ಅನ್ನುತ್ತಾರೆ. ಘಟ್ಟದ ಮೇಲಿನವರ ಬಗ್ಗೆ ದಕ್ಷಿಣ ಕನ್ನಡಿಗರಿಗೆ ಗುಮಾನಿ, ದಕ್ಷಿಣ ಕನ್ನಡದವರ ಮೇಲೆ ಉಳಿದವರಿಗೆ ಸಂಶಯ. ಎಲ್ಲಿಗೆ ಕಾಲಿಟ್ಟರೂ ಕೆಲವೇ ವರ್ಷಗಳಲ್ಲಿ ನೆಲೆಯೂರುತ್ತಾರೆ. ಸಣ್ಣ ವ್ಯಾಪಾರ ಮಾಡುತ್ತಿದ್ದವರು ಶ್ರೀಮಂತರಾಗುತ್ತಾರೆ ಎಂಬುದು ಅವರ ಅಸಹನೆಗೆ ಕಾರಣ. ಅದಕ್ಯಾಕೆ ಅಸಹನೆ, ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎನ್ನುವುದು ದಕ್ಷಿಣ ಕನ್ನಡಿಗರ ಸಮರ್ಥನೆ.
ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡವನ್ನು ಆವರಿಸಿದ್ದು ಅಡಕೆ ಬೆಳೆ. ಬತ್ತ ಬೆಳೆಯುತ್ತಿದ್ದ ಗದ್ದೆಗಳನ್ನೆಲ್ಲ ಕಡಿದು, ಅಡಕೆ ಸಸಿ ನೆಟ್ಟು ತೋಟ ಮಾಡುವುದು ಆ ಕಾಲದಲ್ಲಿ ಲಾಭದಾಯಕ ಉದ್ಯಮ. ಅಡಕೆಯ ಬೆಲೆ ಕುಸಿಯುತ್ತಿದ್ದ ಹಾಗೆ ಕೋಕೋ ಬೆಳೆಯುವುದಕ್ಕೆ ಶುರುಮಾಡಿದ ಮಂದಿ, ನಂತರದ ದಿನಗಳಲ್ಲಿ ವೆನಿಲ್ಲಾದ ಮೊರೆ ಹೋದರು. ಸದ್ಯಕ್ಕೆ ಅವೆಲ್ಲವನ್ನೂ ರಬ್ಬರ್ ಮೀರಿಸುತ್ತಿದೆ. ರಬ್ಬರ್ ಬೆಲೆ ಆಕಾಶಕ್ಕೇರಿದೆ.
ಒಂದು ಕೇಜಿ ರಬ್ಬರ್ ಬೆಲೆ ಇನ್ನೂರು ರುಪಾಯಿ. ನಾಲ್ಕೈದೆಕರೆ ಜಾಗದಲ್ಲಿ ರಬ್ಬರ್ ಬೆಳೆದರೆ ವರ್ಷಕ್ಕೆ ಹನ್ನೆರಡು ಲಕ್ಷ ದುಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ವ್ಯವಸಾಯ ಸಾಗುತ್ತಿದೆ.
ಇತ್ತೀಚಿನ ಟಿಪ್ಪಣಿಗಳು