ಅಂಕಿತ: ಪುಸ್ತಕ ಬಿಡುಗಡೆ …

ಅಂಕಿತ ಪುಸ್ತಕ ಹೊರತಂದಿರುವ ಮೊಗಳ್ಳಿ ಗಣೇಶ್  ಅವರ ‘ಕನ್ನೆ ಮಳೆ’ ಕಥಾ ಸಂಕಲನ ಹಾಗು ರಹಮತ್  ತರೀಕೆರೆ ಅವರ ‘ಚಿಂತನೆಯ ಪಾಡು’ ಪುಸ್ತಕಗಳನ್ನು. ಸಾಹಿತಿ   ಯು.ಆರ್ .ಅನಂತಮೂರ್ತಿ ಬಿಡುಗಡೆಗೊಳಿಸಿದರು. ಪತ್ರಕರ್ತ ಜೋಗಿ, ಲೇಖಕರಾದ ರಹಮತ್ ತರೀಕೆರೆ , ಹಾಗು ಮೊಗಳ್ಳಿ ಗಣೇಶ್  ಈ ಕಾರ್ಯಕ್ರಮದಲ್ಲಿ  ಉಪಸ್ತಿತರಿದ್ದರು. ಆ  ಸಮಾರಂಭದ ಒಂದು ನೋಟ ಇಲ್ಲಿದೆ.

ಮತ್ತಷ್ಟು ಫೋಟೋಗಳಿಗೆ ಭೇಟಿ ಕೊಡಿ  ಓದು ಬಜಾರ್

ಅಕ್ಕ ಬಂತು ಅಕ್ಕ

ಬ್ಲಾಗಿಗರ ಬ್ಲಾಗವನ…

-ಶಿವು.ಕೆ

“ಈ ಬಾಟಲಿಸ್ಟ್ ಯಾರು?”

“ನಿಮ್ಮಲ್ಲಿ ಯಾರಾದರೂ ಬಾಟನಿಸ್ಟ್ ಇದ್ದಾರ?” ಈಶ್ವರ ಪ್ರಸಾದ್ ಕೇಳಿದರು. “ಇಲ್ಲಸಾರ್ ಬೇಕಾದರೆ ಬಾಟಲಿಸ್ಟ್ ಸಿಗುತ್ತಾರೆ.” ತಕ್ಷಣ ಪ್ರಕಾಶ್ ಹೆಗಡೆ ಉತ್ತರಿಸಿದರು. “ಅದೇ ಸರ್, ಬಾಟಲಿಸ್ಟು,” ಕೈಬಾಯಿ ಸನ್ನೆ ಮಾಡಿ ತೋರಿಸಿದರು. ಈಶ್ವರ ಪ್ರಸಾದ್ ಸೇರಿದಂತೆ ನಮ್ಮ ಬ್ಲಾಗಿಗರೆಲ್ಲಾ ಎಷ್ಟು ಜೋರಾಗಿ ನಕ್ಕೆವೆಂದರೆ ಹೊಟ್ಟೆ ಹಿಡಿದುಕೊಂಡು ಕೂರುವಷ್ಟು.

“ಶಿವು ನಿಮ್ಮ ವಯಸ್ಸೆಷ್ಟು?” ಈಶ್ವರ ಪ್ರಸಾದ್ ನಮ್ಮ ಜೊತೆ ಊಟ ಮಾಡುತ್ತಾ ನನ್ನನ್ನು ಕೇಳಿದರು. ನಾನು ನನ್ನ ವಯಸ್ಸು ಹೇಳಿದೆ. ಮತ್ತೆ ಹಾಗೆ ಸುತ್ತ ಕುಳಿತಿದ್ದ ಪರಂಜಪೆ, ಉಮೇಶ್ ದೇಸಾಯಿ, ನಂಜುಂಡ,….ಹೀಗೆ ಒಬ್ಬೊಬ್ಬರಾಗಿ ಹೇಳುತ್ತಿದ್ದರು. ಪ್ರಕಾಶ್ ಹೆಗಡೆ ಸರದಿ ಬಂತು. “ಪ್ರಕಾಶ್ ನಿಮ್ಮ ವಯಸ್ಸು ಎಷ್ಟು?” ಮತ್ತೆ ಕೇಳಿದರು ಈಶ್ವರ ಪ್ರಸಾದ್,

“ನೀವೇ ಹೇಳಿ ಸರ್,” “ನಾನು ಮರಗಳ ವಯಸ್ಸನ್ನು ಹೇಳಬಲ್ಲೆ. ಆದ್ರೆ ನಿಮ್ಮ ವಯಸ್ಸನ್ನು ಹೇಗೆ ಹೇಳುವುದು?” “ಹಾಗಾದ್ರೆ ಸರ್, ಮರಗಳ ವಯಸ್ಸನ್ನು ಹೇಗೆ ಗುರುತಿಸುವಿರಿ?” “ಮರಗಳಿಗೆ ಬಂದಿರುವ ಹೊರಪದರಗಳ ಲೇಯರುಗಳಿಂದ.” “ಹಾಗಾದರೆ ನನ್ನ ಲೇಯರಿನ ಟಯರನ್ನು[ಸೊಂಟದ ಸುತ್ತಳತೆ] ನೋಡಿ ನೀವು ಸುಲಭವಾಗಿ ನನ್ನ ವಯಸ್ಸು ಹೇಳಬಹುದು!”

ಊಟ ಮಾಡುತ್ತಿದ್ದವರೆಲ್ಲಾ ಈ ಮಾತು ಕೇಳಿ ನಗು ತಡೆಯಲಾಗಲಿಲ್ಲ. ಇವೆರಡು ದಿನಾಂಕ ೨೯-೮-೨೦೧೦ರ ಭಾನುವಾರ ನಾವು ಬ್ಲಾಗಿಗರೆಲ್ಲಾ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಇರುವ ಸಸ್ಯವನಕ್ಕೆ ಗಿಡನೆಡಲು ಹೋಗಿದ್ದಾಗ ಉಕ್ಕಿದ ನೂರಾರು ನಗೆಬುಗ್ಗೆಗಳಲ್ಲಿ ಇವೆರಡು ಸ್ಯಾಂಪಲ್.

ಅವತ್ತು ಬೆಳಿಗ್ಗೆ ೨೮ ಬ್ಲಾಗಿಗರು ಬಸ್ಸಿನಲ್ಲಿ ಹೊರಟಾಗ ಬೆಳಿಗ್ಗೆ ಒಂಬತ್ತುಗಂಟೆ. ದಾರಿಯುದ್ದಕ್ಕೂ ಅಂತ್ಯಾಕ್ಷರಿ, ನಗು ಜೋಕು ಅನ್ನುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಬಂದುಬಿಟ್ಟಿತ್ತು. ಎಲ್ಲರು ಇಳಿದು ಈಶ್ವರ ಪ್ರಸಾದ್ ಹಿಂದೆ ನಡೆದೆವು.

ಸ್ವಲ್ಪ ದೂರನಡೆಯುವಷ್ಟರಲ್ಲಿ ಒಂದು ಪುಟ್ಟ ಚಪ್ಪರವನ್ನು ಹಾಕಿದ ಜಾಗದ ಮುಂದೆ ನಿಂತರು. ನಮ್ಮ ಅದೃಷ್ಟಕ್ಕೆ ಮೋಡದ ವಾತಾವರಣವಿದ್ದು ಒಂಥರ ತಣ್ಣನೇ ಗಾಳಿ ಬೀಸುತ್ತಿದ್ದರಿಂದ ಎಲ್ಲರಿಗೂ ಒಂಥರ ಹಿತವೆನಿಸುತ್ತಿತ್ತು. ಮೊದಲು ಎಲ್ಲರ ಪರಿಚಯವಾಯ್ತು. ಈಶ್ವರ ಪ್ರಸಾದ್ ಕೂಡ ತಮ್ಮ ಪರಿಚಯವನ್ನು ಮಾಡಿಕೊಂಡರು.

ನಂತರ ಸ್ಥಳ ಮಹಾತ್ಮೆಯ ಬಗ್ಗೆ ತಿಳಿಸಲು ನವೀನ್[ಹಳ್ಳಿಹುಡುಗ]ಗೆ ಓದಲು ತೇಜಸ್ವಿಯವರು ಅನುವಾದ ಮಾಡಿದ ಕೆನೆತ್ ಆಂಡರ್ಸನ್‍ರವರ ಕಾಡಿನ ಕಥೆಗಳು ಮೂರನೇ ಭಾಗವಾದ “ಮುನಿಸ್ವಾಮಿ ಮತ್ತು ಚಿರತೆ” ಪುಸ್ತಕವನ್ನು ಕೊಟ್ಟರು.

ಅದರಲ್ಲಿ ನಾವು ನಿಂತ ಜಾಗ[ತಿಪ್ಪಗೊಂಡನಹಳ್ಳಿ ವಿಶೇಷತೆ], ಪರಿಚಯ, ವಾತವರಣದಲ್ಲಿನ ನೀರಿನ ಮಟ್ಟ, ಇತ್ಯಾದಿ ವಿಚಾರವನ್ನು ಅವರು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು. ನಡುವೆ ನಾವು ಬೆಂಗಳೂರಿನಲ್ಲಿ ಬಳಸುವ ನೀರು ಮತ್ತು ವಿಧ್ಯುತ್ತನ್ನು ಹೇಗೆ ನಮಗೆ ಗೊತ್ತಿಲ್ಲದಂತೆ ಪೋಲು ಮಾಡುತ್ತಿದ್ದೇವೆ ಸ್ವಲ್ಪ ಅಲೋಚನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿದರೇ ಎಷ್ಟು ವಿಧ್ಯುತ್ ಮತ್ತು ನೀರು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.

ನಾವು ಮನೆಯಲ್ಲಿ ತರಕಾರಿ ತೊಳೆದ ನೀರು, ಪಾತ್ರೆ ತೊಳೆದ ನೀರು, ಊಟವಾದ ಮೇಲೆ ಎಂಜಲನೀರು, ಇದನ್ನೆಲ್ಲಾ ಒಟ್ಟು ಮಾಡಿ ಇಟ್ಟರೆ ಮುಸುರೆ ನೀರು ಅನ್ನುತ್ತಾರೆ.

ಇನ್ನಷ್ಟು

‘ಬೌದ್ಧಿಕ ಹಸಿವು ನೀಗದ ಪತ್ರಿಕೆಗಳು’…

ಜಾಹೀರಾತು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಓದುಗರ ಬೌದ್ಧಿಕ ಹಸಿವನ್ನು ನೀಗಿಸಲು ಇತ್ತೀಚಿನ ದಿನಗಳಲ್ಲಿ ಸೋತಿವೆ ಎಂದು ಸಾಹಿತಿ ಫ್ರೊ. ಶಿವರಾಮು ಕಾಡನಕುಪ್ಪೆ ಇಲ್ಲಿ ಅಭಿಪ್ರಾಯಪಟ್ಟರು.

ತಿಂಗಳು ಕನ್ನಡ ಮಾಸ ಪತ್ರಿಕೆಯು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಹಾಗೂ ತಿಂಗಳು ಮತ್ತು ಸೈಕಲ್ ಬ್ರಾಂಡ್ಯ್ ಅಗರಬತ್ತಿ ಕಥಾ ಮತ್ತು ಕಾವ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ನಿಯತಕಾಲಿಕೆಗಳ ಸ್ವರೂಪ ಮತ್ತು ಪ್ರತಿಕ್ರಿಯೆ ವಿಷಯ ಕುರಿತು ಮಾತನಾಡಿದರು.

ದಿನಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂಬುದನ್ನು ಸಾಮಾನ್ಯೀಕರಿಸುವಷ್ಟು ಇಂದು ಸಮಸ್ಯೆ ದೊಡ್ಡದಾಗಿದೆ. ಆದರೆ ನಿಯತಕಾಲಿಕೆಗಳು ಕೊಂಚವಾದರೂ ತಮ್ಮ ಕೆಲಸದ ಮಹತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು.

ಈ ನಿಟ್ಟಿನಲ್ಲಿ ನಿಯತಕಾಲಿಕೆಗಳ ಪ್ರಕಾಶಕರು, ಬದ್ಧತೆಯಿಂದ ಕೆಲಸ ಮಾಡಿ, ಸಮಾಜದಲ್ಲಿ ಸಾಹಿತ್ಯಿಕ, ಸಾಮಾಜಿಕ ಇತ್ಯಾದಿ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡಬೇಕು. ಸಮಾಜದಲ್ಲಿ ಇವತ್ತಿಗೂ ಜ್ವಲಂತವಾಗಿರುವ ಅಸಮಾನತೆ, ಬಡತನಗಳನ್ನು ನಿವಾರಿಸಲು ಸೂಕ್ತ ರೀತಿಯ ಮಾರ್ಗಗಳನ್ನು ತೋರಿಸಿಕೊಡಬೇಕು ಎಂದು ಹೇಳಿದರು.

ಇನ್ನಷ್ಟು

ಬೆಳ್ಳಿ ಗೆಜ್ಜೆಯಲ್ಲಿ ಪಿ ಬಿ

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಮಾಸದ “ಬೆಳ್ಳಿಹೆಜ್ಜೆ” ಯಡಿ ಸಿರಿಕಂಠದ ಗಾಯಕ ಡಾ. ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಸಂವಾದವನ್ನು ಏರ್ಪಡಿಸಿದೆ.

ಸೆ. 4 ರಂದು ಶನಿವಾರ ಸಂಜೆ 4. 30 ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಬಾದಾಮಿ ಹೌಸ್ ನಲ್ಲಿ ಪಿ.ಬಿ. ಶ್ರೀನಿವಾಸ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು.

ಕನ್ನಡ ಚಲನಚಿತ್ರಗೀತೆಗಳಿಗೆ ಮಾಂತ್ರಿಕ ಹಾಗೂ ಮಾಧುರ್ಯದ ಸ್ಪರ್ಶ ನೀಡಿದ್ದ ಡಾ. ಪಿ. ಬಿ. ಶ್ರೀನಿವಾಸ್, ಶಾಲಾ ದಿನಗಳಲ್ಲೇ ಸಂಗೀತದ ಮೋಹಕ್ಕೆ ಬಿದ್ದವರು. ನಂತರ ಅಭ್ಯಾಸ ಮಾಡಿದ್ದು ಕಾನೂನು ಶಾಸ್ತ್ರ. ಆರ್. ನಾಗೇಂದ್ರರಾಯರ ‘ಜಾತಕ ಫಲ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಇವರು, ನಂತರ ಹೊಸ ಗಾಯನ ಪರಂಪರೆಯನ್ನೇ ಆರಂಭಿಸಿದರು.

“ಕನಕದಾಸ” ಚಿತ್ರದ ಮೂಲಕ ಡಾ. ರಾಜ್ ಕುಮಾರ್ ಅವರಿಗೆ ಹಿನ್ನೆಲೆಗಾಯನ ನೀಡಲಾರಂಭಿಸಿದ ಪ್ರತಿವಾದಿ ಭಯಂಕರ, ಇದುವರೆಗೆ ಹಾಡಿರುವ ಗೀತೆಗಳ ಸಂಖ್ಯೆ 3, 450 ಕ್ಕೂ ಹೆಚ್ಚು.ಡಾ. ರಾಜ್ ಕುಮಾರ್ ಶರೀರ ಪಿ.ಬಿ. ಶ್ರೀನಿವಾಸ್ ಶಾರೀರ ಎಂಬ ಮಾತೂ ಚಾಲ್ತಿಯಲ್ಲಿತ್ತು. ಇದು ಪಿಬಿಎಸ್ ಪ್ರತಿಭೆಗೆ ಸಂದ ಗೌರವ.

ಕನ್ನಡ ಸೇರಿದಂತೆ ಎಂಟು ಭಾಷೆಯ ಗೀತೆಗಳನ್ನು ಹಾಡಿರುವ ಇವರು ಸ್ವತಃ ಗೀತ ರಚನೆಕಾರರು. ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಕಾರ್ಯಕ್ರಮ ಕುರಿತ ಹೆಚ್ಚಿನ ಮಾಹಿತಿಗೆ 080-22133441, 22133410

ಒಂದು ಸರೋದ್ ಸಂಜೆ

ಕಿ ರಂ ನೆನಪು

ಆಗಸ್ಟ್ ತಿಂಗಳೇ ಹೀಗೆ..

-ಸುಶ್ರುತ ದೊಡ್ಡೇರಿ

ಮೌನಗಾಳ

ಕಲೆ: ಗುಜ್ಜಾರಪ್ಪ

ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ

ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ

ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್‌ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ

ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾ‌ಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ

ಇಂದು ರಂಗ ಶಂಕರದಲ್ಲಿ …

ನಾಟಕ: ಮರಿಯಂಳ ಮೂರನೇ ಮದುವೆ

ದಿನಾಂಕ: ಆಗಸ್ಟ್ 31.

ಸಮಯ: 7.30pm – 9.30pm

ಸ್ಥಳ : ರಂಗ ಶಂಕರ, ಜೆ.ಪಿ. ನಗರ ಬೆಂಗಳೂರು

ಊರುಮನೆ, ಸರದಿ

Previous Older Entries

%d bloggers like this: