ಇವತ್ತು ಲಂಕೇಶ್ ಇದ್ದಿದ್ದರೆ…

ಲಂಕೇಶ್ ಇವತ್ತು ಇದ್ದಿದ್ದರೆ ಪತ್ರಕರ್ತರಲ್ಲಿರುವ ವ್ಯಾಕ್ಯೂಮ್ ತುಂಬ್ತಾ ಇದ್ರು ಅನಿಸುತ್ತದೆ.

ಅವರೊಂದು ದೊಡ್ಡ ಶಕ್ತಿ ಮಾರಾಯ್ರೆ… ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ಗುರುವಿನ ತರಹವಿದ್ದವರು ಅವ್ರು.
ಇವತ್ತು ಅವ್ರು ಇಲ್ಲ ಅನ್ನೋದೇ ಬೇಜಾರಿನ ವಿಷಯ.. ಅವರೇನಾದ್ರು ಇವತ್ತು ಬದುಕಿದ್ರೆ, ಇವತ್ತಿನ ಎಲ್ಲಾ ಬಗೆಯ ತಲ್ಲಣಗಳಿಗೆ ಪಕ್ಕಾ ಉತ್ತರ ಕೊಡ್ತಾ ಇದ್ರು. ಮಾತ್ರವಲ್ಲ, ಪ್ರಗತಿಪರ ಚಳುವಳಿಗಳಿಗೆಲ್ಲಾ ಯಾವ ದಿಕ್ಕಿನಲ್ಲಿ ನಡೆಯಬೇಕೆಂದು ಮಾರ್ಗದರ್ಶನ ಕೂಡಾ ಕೊಡ್ತಾ ಇದ್ರು.
ಇವತ್ತಿನ ಪರಿಸ್ಥಿತಿಗೆ ಉತ್ತರಿಸೋ ಧಾರ್ಷ್ಟ್ಯತನ ಅವರಲ್ಲಿತ್ತು. ಅವರ ರಾಜಕೀಯ, ಸಾಂಸ್ಕೃತಿಕ ವಿಚಾರಧಾರೆ ಇವತ್ತು ಪ್ರಚಲಿತವಾಗಬೇಕಾದ ಅಗತ್ಯವಿದೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆ ಬಯಸಿದ ಲಂಕೇಶರು ನನ್ನೊಳಗೆಲ್ಲಾ ತುಂಬ್ಯಾರಿ… ಆದರೆ ಅವರ ವಿಚಾರಧಾರೆಯನ್ನು ನಾವು ಸಾರ್ವಜನಿಕವಾಗಿ ಎತ್ತಾ ಇದ್ದೀವಿ.
ಆದ್ರ, ಒಂದು ಪ್ರಾಬ್ಲಂ ಏನಂದ್ರ, ನಮ್ಮ ನಿಮ್ಮ ಪ್ರಗತಿಪರ ನಿಲುವುಗಳನ್ನು ಎತ್ತಿ ಹಿಡಿಯೋದಿಕ್ಕೆ ಒಂದು ಸೆಂಟರ್ ಪಾಯಿಂಟ್ ಬೇಕಲ್ರಿ? ಅಂಥಾ ನ್ಯೂಕ್ಲಿಯಸ್ ಆಗಿದ್ರು ಲಂಕೇಶ್ ಸರ್.. ಮತ್ತೆ ಹುಟ್ಟಿ ಬರಲಿ ಲಂಕೇಶಪ್ಪ ಎಂದು ಆಶಿಸುತ್ತಾ….

-ಕಲಿಗಣನಾಥ ಗುಡದೂರು, ಸಿಂಧನೂರು

——————————————————

ಲಂಕೇಶ್ ಭೌತಿಕವಾಗಿ ನಮ್ಮ ನಡುವೆ ಇರದಿದ್ದರೂ ಬರಹದ ಮೂಲಕ ಜೀವಂತವಿದ್ದಾರೆ ಎಂದು ಹೇಳಲು ಹೊರಟವಳ ನಾಲಿಗೆ ತಡವರಿಸಿತು. ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣುಗಳ ಮೇಲೆ ನಡೆಯುತ್ತಿರುವ ಹಲ್ಲೆ, ಹಣವೇ ಮುಖ್ಯವಾದ ರಾಜಕಾರಣ, ಹಳ್ಳಿ ಹಳ್ಳಿಗೂ ಕಾಲಿಟ್ಟು ನೂರಾರು ವರ್ಷದ ಸೌಹಾರ್ದ ಪರಂಪರೆಗೆ ಕೊಳ್ಳಿಯಿಡುತ್ತಿರುವ ಕೋಮುವಾದ, ಇದರ ವಿರುದ್ಧ ಸಣ್ಣ ಸೊಲ್ಲು ಕೇಳಿದರೂ ಸಾಕು ಆ ಸೊಲ್ಲನ್ನೇ ಅಡಗಿಸಲು ನಡೆಯುತ್ತಿರುವ ಥರಾವರಿ ವಿಧಾನಗಳು….
ಇಂಥದೊಂದು ಸಂದರ್ಭದಲ್ಲಿ ಇವುಗಳಿಗೆ ತೆರೆದುಕೊಳ್ಳುವ, ಇವುಗಳೊಂದಿಗೆ ಅನುಸಂಧಾನ ನಡೆಸುವ-ಪ್ರಶ್ನಿಸುವ, ವಿಷಯದ ಆಳಕ್ಕಿಳಿದು ನೋಡುವ ಲಂಕೇಶರ ಬರಹಗಳು ಮತ್ತೆ ಮತ್ತೆ ನೆನಪಾದವು. ಕಾಲ ದೇಶದ ಮಿತಿಯನ್ನು ಮೀರುವ ಶಕ್ತಿ ಅವರ ಬರವಣಿಗೆಗಿದೆ. ಆದರೆ ಈ ಸಂದರ್ಭ ಹೇಗಿದೆಯೆಂದರೆ ಸಾಹಿತ್ಯದ ವಿರೋಧಿಗಳಿರಲಿ ಬದುಕಿಗೇ ವಿರೋಧಿಗಳಾಗಿರುವವರೇ. ಶಕ್ತಿಯುತರಾಗಿ ಬದುಕನ್ನು ಪ್ರೀತಿಸುತ್ತಾ ಬದುಕುವವರ ಧ್ವನಿಯೇ ಉಡುಗಿ ಹೋಗಿದೆ. ಪಬ್ ಹೆಸರಿನಲ್ಲಿ, ಪ್ರೇಮಿಗಳ ದಿನದ ನೆವದಲ್ಲಿ ಜೊತೆಗೆ ಮತ್ಯಾವ್ಯಾವೋ ಕಾರಣವೇ ಅಲ್ಲದ ಕಾರಣ ಶೋಧಿಸಿ ಹೆಣ್ಣುಮಕ್ಕಳ ಮೇಲೆ ಹೀಗೆ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಲಂಕೇಶ್ ಇದ್ದಿದ್ದರೆ ಎಂಬ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತಿದೆ. ಇಂಥದ್ದು ನಡೆಯದ ಹಾಗೆ ಲಂಕೇಶ್ ನೋಡಿಕೊಳ್ಳುತಿದ್ದರು ಎಂದೇನು ನಾನು ಭಾವಿಸಿಲ್ಲ. ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ನಮ್ಮ ಸಮೂಹದಿಂದ ಬರಬೇಕಾದ ಒಂದು ವಿರೋಧಿ ಕೂಗು ನಮ್ಮೊಡಲಲ್ಲಿ ಹಾಗೆ ಉಳಿದು ಹೆಪ್ಪುಗಟ್ಟಿ ಜ್ವಲಿಸುತ್ತಿದೆಯಲ್ಲಾ ಅದಕ್ಕೆ ಒಂದು ಧ್ವನಿ ನೀಡುತ್ತಿದ್ದರು. ಮತ್ತದರಲ್ಲಿ ಇಡೀ ಹೆಣ್ಣಿನ ಸಮೂಹ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಆ ಶಕ್ತಿ ಲಂಕೇಶ್‌ಗಿತ್ತು. ಎಷ್ಟಾದರೂ ಲೇಖಕಿ ವೈದೇಹಿ ಹೇಳಿದಂತೆ ಅವರು ’ ಗೆಳತಿ ಲಂಕೇಶ್’

ಅಕ್ಷತಾ.ಕೆ. ಶಿವಮೊಗ್ಗ

4 ಟಿಪ್ಪಣಿಗಳು (+add yours?)

 1. kirankumari
  ಜುಲೈ 27, 2010 @ 18:31:57

  sir,

  ನಿಜ. ಲ೦ಕೇಶ್ ಮೇಷ್ಟ್ರು ಬದುಕಿದ್ದರೆ…ಅಥವಾ ಅವರ ತೀಕ್ಶ್ಣವಿಮರ್ಷೆ ಮತ್ತು ಸಮಸ್ಯೆಯ ಆಳ-ಅಗಲದ ತಿಳಿವು ನಮ್ಮ ನಡುವಿನ ಎಲ್ಲ ಜಾಗೃತ ಮನಸ್ಸಿನಲ್ಲಿ ಬೇರೂರಿದ್ದರೆ..ಪ್ರಸ್ತುತ ಕರ್ನಾಟಕ ಎದುರಿಸುತ್ತಿರುವ ಎಲ್ಲ ರೀತಿಯ ದ೦ಧೆಗೆ..ಕಡಿವಾಣ ಹಾಕಬಹುದಿತ್ತೇನೋ..ರಾಜಕಾರಣಕ್ಕೆ ಸರಿಯಾದ ಬುದ್ದಿ ಕಲಿಸ ಬೇಕೆ೦ದಾದರೆ..ಅರ್ಥಾತ್ ರಾಜಕೀಯವ್ಯವಸ್ಥೆಯನ್ನು ಸರಿಪಡಿಸಬೇಕಾದರೆ..ಲ೦ಕೇಶ್, ರಾಮದಾಸ್, ತೇಜಸ್ವಿ..ಕೃಷ್ಣಪ್ಪನ೦ಥವರ ವಿಚಾರಧಾರೆಗಳು ಸಾವಿರಾರು ಕಿರು..ತೊರೆ…ನದಿಗಳಾಗಿ…ಹರಿಯಬೇಕಿದೆ ಈ ತಲೆಮಾರಿನ ಜವಾಬ್ದಾರಿಯಲ್ಲಿ..ಹೊಸ ಸೃಷ್ಟಿಯತ್ತ..ಸಮಗ್ರತೆಯತ್ತ ಸಾಗಬೇಕಿದೆ. ನೈತಿಕ ರಾಜಕಾರಣವೆ೦ದರೇನು ಎ೦ಬ ಮೌಲ್ಯವನ್ನೇ ಪುನ: ಪರಿಶೀಲಿಸಿಕೊಳ್ಳಬೇಕಾದ ತುರ್ತನ್ನು ಹಿ೦ದೆ೦ದಿಗಿ೦ತಲೂ ಪ್ರಸ್ತುತ ಹೆಚ್ಚು ಅಗತ್ಯ ಎ೦ದು ನನ್ನ ಅನಿಸಿಕೆ.

  ಕಿರಣ್ ಕುಮಾರಿ.ಎಸ್.

  ಉತ್ತರ

 2. Anil Kumar
  ಜುಲೈ 26, 2010 @ 15:44:06

  ‘ಲಂಕೇಶ್ ಇರಬೇಕಿತ್ತು, ಹೀಗೆ ಮಾಡ್ತಿದ್ದರು’ ಎಂಬ ಹೇಳಿಕೆ ‘ಗಾಂಧಿ ಇದ್ದಿದ್ರೆ ಹಾಗೆ ಮಾಡ್ತಿದ್ದರು’ ಎಂದು ಬರೆಯುವಷ್ಟೇ ಹಾಸ್ಯಾಸ್ಪದ. ಅವರೇನೂ ಮಾಡ್ತಿರಲಿಲ್ಲ, ತಮ್ಮ ಪತ್ರಿಕೆಯಲ್ಲಿ ಒಂದಷ್ಟು ಲೇವಡಿ ಮಾಡುತ್ತಿದ್ದರು, ಪೂರ್ವಾಗ್ರಹ ಪೀಡಿತರಾಗಿ. ಅದನ್ನೇ ನಾವು ಬಾಯಿ ಚಪ್ಪರಿಸಿಕೊಂಡು ಓದುತ್ತಿದ್ದೆವು. ಅವರು ಕಟ್ಟಿದ ಪ್ರಗತಿರಂಗದ ಕತೆ ಏನಾಯ್ತು ಅನ್ನುವ ವಿಷಯ, ಅವರ ಒಡನಾಡಿಗಳಾಗಿದ್ದವರಿಗೆಲ್ಲಾ ಗೊತ್ತಿದೆ. ಅಸಲಿಗೆ ಈ ಸಮಾಜವಾದಿಗಳು (ಮಜಾವಾದಿಗಳು?), ಪ್ರಗತಿಪರರು, ಕೋಮುವಿರೋಧಿಗಳು, ಜಾತ್ಯಾತೀತರು, ಇತ್ಯಾದಿ ಬಿರುದು-ಬಾವಲಿಗಳನ್ನು ಪಡೆದುಕೊಂಡವರು, ಇಟ್ಟುಕೊಂಡವರು, ಹೊಡೆದುಕೊಂಡವರೆಲ್ಲಾ ಪ್ರ(ಖ್ಯಾತ ವಿ)ಚಾರವಾದಿಗಳು. ಕೇವಲ ಪೇಪರ್ ಟೈಗರ್ಸ್. ಲಂಕೇಶ್ ವಿಷಯವನ್ನೇ ತೆಗೆದುಕೊಳ್ಳಿ, ಸೆಂಟ್ರಲ್ ಕಾಲೇಜಿನಲ್ಲಿ ಅವರೆಂಥ ಪಾಠ ಮಾಡ್ತಿದ್ದರು, ಅವರ ಪಾಠ ಅದೆಷ್ಟು ಜನರಿಗೆ ಅರ್ಥವಾಗುತ್ತಿತ್ತು? ಆ ದೇವರೇ ಬಲ್ಲ. ಅವರು ವೇದಿಕೆಯ ಮೇಲೆ ಮಾತಿಗೆ ನಿಂತರೆ ಉದುರುತ್ತಿದ್ದ ಆಣಿಮುತ್ತುಗಳೆಲ್ಲವೂ ಅಸ್ಪಷ್ಟ ಪದಗಳ ಅಸಂಬದ್ಧ ಪ್ರಲಾಪ. ಇನ್ನು ಪತ್ರಿಕೆಯ ಲೇಖನ – ಅವರಿಗೊಂದು ಭ್ರಮೆಯಿತ್ತು. ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದಿದ್ದು ತನ್ನ ಪತ್ರಿಕೆ ಅಂತ. ಆಗಿನ ಸಂದರ್ಭದಲ್ಲಿ, ಲಂಕೇಶ್ ಪತ್ರಿಕೆ ಇಲ್ಲದಿದ್ದರೂ ಜನತಾದಳ ಅಧಿಕಾರಕ್ಕೆ ಬರುತ್ತಿತ್ತು. ಗುಂಡೂರಾವ್ ಭ್ರಷ್ಟರಾಗಿದ್ದರು, ಕಾಂಗ್ರೆಸ್ ಹೈಕಮ್ಯಾಂಡ್ ಕರ್ನಾಟಕವನ್ನು ’ಟೇಕನ್ ಫಾರ್ ಗ್ರಾಂಟೆಡ್ ’ ಅಂದುಕೊಂಡಿತ್ತು. ಖಾದ್ರಿ ಶಾಮಣ್ಣನವರ ಕನ್ನಡಪ್ರಭ ಜನತಾದಳದ ಹ್ಯಾಂಡ್ ಬಿಲ್ ಆಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಎಂದಿನ ಜಡಭರತತನದಲ್ಲಿ ಮಲಗಿದ್ದರು. ಅಪರೂಪಕ್ಕೆ ಕರ್ನಾಟಕದ ಜನ ಎಚ್ಚೆತ್ತಿದ್ದರು.

  ಹೀಗೆಲ್ಲಾ ಬರೆದರೆ ಲಂಕೇಶ್ ಅಭಿಮಾನಿಗಳಿಗೆ ಕೋಪ ಬರುತ್ತದೆಂಬುದು ಗೊತ್ತು. ಸಾಹಿತಿ, ಪತ್ರಕರ್ತ ಹಾಗೂ ರಾಜಕಾರಣಿಗಳಿಗೆ ಅವರನ್ನು ಓಲೈಸಲು ಬೇರೆ, ಬೇರೆ ಕಾರಣಗಳಿದ್ದವು. ನಿಜಕ್ಕೂ ಅವರೊಬ್ಬ ನಾಯಕನಾಗಿದ್ದರೆ ಇಂದು ಕರ್ನಾಟಕಕ್ಕೆ ಉತ್ತಮ ಆಡಳಿತ ಸಿಗುತ್ತಿತ್ತು.

  ಒಟ್ಟಿನಲ್ಲಿ ಲಂಕೇಶ್ ಎಂಬ ವಿಕ್ಷಿಪ್ತ ವ್ಯಕ್ತಿಗೆ ಅನಗತ್ಯವಾಗಿ ಹೆಚ್ಚಿನ ಪ್ರಚಾರ ಕೊಡುತ್ತಿರುವಿರಿ ಎಂದು ಮಾತ್ರ ಹೇಳಬಲ್ಲೆ.

  ಉತ್ತರ

 3. Ramesh Aroli
  ಜುಲೈ 26, 2010 @ 00:34:40

  ಕಿತ್ತಿ ಎಸಿರಯ್ಯಾ ಈ ಮೂರ್ಖರನ್ನ …!

  ನಿಜವಾಗಿಯೂ ಮೇಷ್ಟ್ರು ಇರಬೇಕಿತ್ತು. ಸಮೂಹ ಪ್ರಜ್ಞೆಯನ್ನ ಜೀವಂತ ಇಟ್ಟ ಕೆಲವೇ
  ವ್ಯಕ್ತಿಗಳಲ್ಲಿ ಲಂಕೇಶರು ಪ್ರಮುಖರು. ಒಮ್ಮೆ ಗುಂಡುರಾವ್ ಸರಕಾರ ವಿಧಾನ ಸೌಧಕ್ಕೆ
  ದಿನೇ-ದಿನೇ ಜನರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದದ್ದನ್ನು ತಡೆಯಲು ತಂತಿಬೇಲಿ ಹಾಕಿಸಿತು.
  ಮರು ವಾರ “ಯಾರಪ್ಪನ ವಿಧಾನ ಸೌಧ?” ಎಂದು ಬರೆದಿದ್ದೆ ತಡ ಕೆಲವೇ ದಿನದಲ್ಲಿ ಬೇಲಿ ಮಾಯಾ.
  ಇನ್ನು ಎಂಥೆಂತ ನಾಚಿಕೆಗೇಡು ಕೆಲಸ ಮಾಡುತ್ತಿರುವ ”ಕೋಟಿ ಈರ-ಎಡೆಯೂರ”ಪ್ಪನ ಬಿಡುತ್ತಿದ್ದರೆ?
  ಕಿತ್ತಿ ಬಿಸಾಕರಯ್ಯಾ ಈ ಮೂರ್ಖರನ್ನ ಎಂದು ಗುಡುಗುತ್ತಿದ್ದದ್ದಂತು ನಿಜ. ಜನ ಅತಿವೃಷ್ಟಿ ಬಂದು
  ಇರುವುದಕ್ಕೆ ಸರಿಯಾದ ಗುಡಿಸಲುಗಳು, ಊಟ, ಕುಡಿಯುವ ನೀರು ಸಿಗದೇ ಪರದಾಡುತಿದ್ದರೆ ಈ
  mane haalarella seri badavara hesaralli hana hodedu mele Basavana hesru
  nenesuva intavaranella innyaava kortu, samvidhana sikshistado gottilla.

  ಉತ್ತರ

 4. K.VITTAL SHETTY
  ಜುಲೈ 25, 2010 @ 06:12:48

  There can be only one Lankesh and no one else could ever fill his place.Even while we feel his absence we also feel his presence.The mere name Lankesh me bold,confident and courageous.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: