ಸುಮಂಗಲಾ ಕಣ್ಣಲ್ಲಿ ಸರೋದ್ ಮಾಂತ್ರಿಕ

-ಸುಮಂಗಲ

ಕೊನೆಗೂ “ಸರೋದ್ ಮಾಂತ್ರಿಕ, ಪಂಡಿತ್ ರಾಜೀವ ತಾರಾನಾಥ” ಪುಸ್ತಕ ಸಿದ್ಧವಾಗಿದೆ. ಡಿಸೆಂಬರ್ ೨೦೦೮, ಡಿಸೆಂಬರ್ ೩೧ರ ಮೊದಲು ಪಂಡಿತ ರಾಜೀವ ತಾರಾನಾಥರನ್ನು ಭೇಟಿಯಾಗುವೆ ಎಂದು ನನಗೆ ಕನಸಿನಲ್ಲಿಯೂ ಅನ್ನಿಸಿರಲಿಲ್ಲ; ಆ ದಿನ ಭೇಟಿಯಾದಾಗ ಅವರ ಬದುಕಿನ ಕೆಲವು ಸಂಗತಿಗಳನ್ನು ಅಕ್ಷರಕ್ಕಿಳಿಸುವೆ ಎಂದೂ ಅನ್ನಿಸಿರಲಿಲ್ಲ.

ನನಗೆ ಅವರ ಪರಿಚಯವಾಗಿದ್ದೂ ಅಚಾನಕ್ ಆಗಿ. ರೈಲಿನಲ್ಲಿ ಪರಿಚಯವಾದ ಗೋಪಾಲ ಅಂಕಲ್ ಅವರನ್ನು ನನಗೆ ಪರಿಚಯಿಸಿ, ಅವರು ನನ್ನನ್ನು ಮನೆಗೆ ಆಹ್ವಾನಿಸಿ, ಹಾಗೆ ಹೋದಾಗ ಆಪ್ತವಾಗಿ ಮಾತನಾಡಿ, ನನ್ನ ಕಥೆಗಳ ಕುರಿತು ಕೇಳಿ…ಹೀಗೆ ಶುರುವಾದ ಪರಿಚಯ, ಅವರ ಹಳೆಯ ಸ್ನೇಹಿತರಾದ ಕಡಿದಾಳು ಶಾಮಣ್ಣ ಅವರಿಗೆ ಆತ್ಮಕಥೆ ಬರೆಯಲೇಬೇಕೆಂಬ ವರಾತ ಹಚ್ಚಿ, ಅವರಿಂದ ಬೈಸಿಕೊಳ್ಳುತ್ತಲೇ ಯಾರಾದ್ರೂ ಬರ‍್ಕೋತಾರೆ ಎಂದು ಒತ್ತಾಯದಿಂದ ಹೇಳುತ್ತಿರುವಾಗ ಸರಿ, ಸುಮಂಗಲಾ ಬಂದು ಬರ‍್ಕೋತಾರೆ ಎಂದು ಒಪ್ಪಿಕೊಂಡಿದ್ದರು.

ಕೃತಿಯಲ್ಲಿ ಸಂಗೀತದ ಕುರಿತು ಅವರು ಹೇಳಿದ, ನನಗಿಷ್ಟವಾದ ಕೆಲವು ಪ್ಯಾರಾಗಳು ಅವಧಿಯ ಓದುಗರಿಗಾಗಿ ಇಲ್ಲಿವೆ:

ರಾಗ ಇದೆಯಲ್ಲ,

ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಹುಟ್ಟುತ್ತೆ, ಹಾಗೆ… ಹಾಗೇ ಬರುತ್ತೆ… ಆಮೇಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಲ್ಲಿ ಎಷ್ಟು ಇರಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ.

ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ.ಮುದುಕಿಯ ಅಲಂಕಾರವನ್ನು ಹುಡುಗಿಗೆ ಅಥವಾ ಹುಡುಗಿಯ ಅಲಂಕಾರವನ್ನು ಚಿಕ್ಕ ಮಗುವಿಗೆ ಮಾಡಲಿಕ್ಕಾಗಲ್ಲ. ಯಾವುದಕ್ಕೆ ಎಷ್ಟು, ಹೇಗೆ ಅಲಂಕಾರ ಮಾಡಬೇಕು ಅಂತ ಯೋಚಿಸಿ ಮಾಡಬೇಕಾಗುತ್ತೆ. (ಅವರು ಕಿಟಿಕಿಗೆ ಸ್ವಲ್ಪ ಎದುರಾಗಿ ಕುಳಿತಿದ್ದರು. ರಾಗವೊಂದು ಈಗ ಹುಟ್ಟಿ ಅವರ ಬೊಗಸೆಯಲ್ಲಿದೆ ಎಂಬಂತೆ ಕೈಗಳ ಲಾಸ್ಯ ಇತ್ತು…

ಕಿಟಿಕಿಯಿಂದ ಹಾದು ಬಂದ ಬೆಳಕಿನ ಕಿರಣಗಳು ಅವರ ಬೊಗಸೆಯಲ್ಲಿ ರಾಗಲಾಸ್ಯ ಸೃಷ್ಟಿಸಿದ್ದವು.)ಬ್ಯಾರೆಯವ್ರ, ಹಿಂದಿನವರ ಸಂಗೀತ ಭಾಳಾ ಕೇಳ್ಬೇಕು… ಇಲ್ಲಿ ಕಿವಿಯಾಗ ಇಟ್ಟುಕೋಬೇಕು, ಕಿವಿಯಿಂದ ಸೋರಿ ಅದು ಮಿದುಳಿಗೆ ಹೋಗಬೇಕು. ಸಂಗೀತದಲ್ಲಿ ನಮ್ಮದು ಅನ್ನೋದು ಇಲ್ವೇ ಇಲ್ಲ, ಎಲ್ಲ ಹಿಂದಿನಿಂದ ಬಂದಿದ್ದು. ಸ್ವಂತಿಕೆ, ಅವನ ವೈಯಕ್ತಿಕ ಛಾಪು ಹಿಂಗೆಲ್ಲ ಬರೀತಾರಲ್ಲ ಎಲ್ಲ ಬುರುಡೆ.

ಏನಿದೆಯೋ ಅದು ಅಲ್ಲಿ ಆಗ್ಲೇ ಇದೆ. ಆ ರಾಗಗಳು, ಆಲಾಪದಲ್ಲಿ ಆಗ್ಲೇ ಇದ್ದುಬಿಟ್ಟಿವೆ. ನಾವು ಈಗ ಗುರುಗಳಿಂದ ಕಲಿತು ಹಾಡೋದು ಅಷ್ಟೆ.

ಹಂಗೆ ಹಾಡಬೇಕಿದ್ರೆ, ಎಷ್ಟೇ ಆಗಲಿ ಅವರು ಬ್ಯಾರೆ ಮನುಷ್ಯಾ, ನಾವು ಬ್ಯಾರೇನೆ ಮನುಷ್ಯಾ ಆಗಿದ್ದರಿಂದ ನಾವು ಹಾಡಬೇಕಿದ್ದರೆ, ಬಾರಿಸಬೇಕಿದ್ರೆ ಸ್ವಲ್ಪ ವ್ಯತ್ಯಾಸ ಆಗ್ತದೆ.

ಏನೂ ಇಲ್ಲದೆ ಮನ್ಯಾಗ ಮೊಸರು ಹೆಪ್ಪಾಗುತ್ತೇನು… ಇಲ್ಲ, ಪಕ್ಕದ ಮನಿಯಿಂದ ಚೂರು ಮೊಸರು ಕಡ ತಂದು ಹೆಪ್ಪು ಹಾಕಬೇಕು…ಹಂಗೆ ಹೆಪ್ಪು ಹಾಕಿದಾಗ ನಿನ್ನ ಹಾಲು ಎಷ್ಟು ಬಿಸಿ ಇದೆ, ಎಷ್ಟು ಗಟ್ಟಿ ಇದೆ, ಎಷ್ಟು ಹೆಪ್ಪು ಹಾಕ್ತಿ ಅನ್ನೋದ್ರ ಮ್ಯಾಲೆ ನಿನ್ನ ಮೊಸರು ಸಿಹಿ ಇದೆಯೋ, ಹುಳಿ ಇದೆಯೋ, ಗಟ್ಟಿ ಇದೆಯೋ ಅನ್ನೋದು ನಿರ್ಧಾರ ಆಗುತ್ತೆ.

ಮೊಸರು ನೀನು ಮಾಡಿದೆ ನಿಜ, ಆದ್ರೆ ಹೆಪ್ಪು ಎಲ್ಲಿಂದ ಬಂದಿದ್ದು, ಅಲ್ಲಿ ಪಕ್ಕದ ಮನೆಯಿಂದ ಬಂದಿದ್ದು, ಪಕ್ಕದ ಮನೆಯ ಮೊಸರು ಇಲ್ಲಿ ನಿಮ್ಮ ಮನೆಯ ಮೊಸರಿನಲ್ಲಿ ಇದ್ದೇ ಇರುತ್ತೆ.ಎಷ್ಟೆಷ್ಟು ನೀನೇ ಮನೆಯಲ್ಲಿ ಮೊಸರು ಮಾಡಕ್ಕೆ ಶುರು ಮಾಡ್ತೀಯೋ ಅಷ್ಟಷ್ಟು ಪಕ್ಕದ ಮನಿಯಿಂದ ಮೊಸರು ಕಡ ತರೂದು ನಿಲ್ಲುತ್ತೆ, ಆದರೂ ಈ ಮೊಸರಿನಲ್ಲಿ ಅವರ ಮನೆಯ ಮೊಸರಿನ ಮೂಲ ಇದ್ದೇ ಇರುತ್ತೆ, ಅದು ನಮಗೆ ಯಾವಾಗ್ಲೂ ನೆನಪಿರಬೇಕು.

ಸಂಗೀತವೂ ಹಂಗೇ. ನಾವು ಹಾಡಿದ್ದೆಲ್ಲ ಹಿಂದಿನಿಂದ ಇದ್ದಿದ್ದೆ…ಎರಡೂವರೆ ವರ್ಷಕ್ಕೆ ಗ್ರಾಮಾಫೋನ್ ಹುಚ್ಚು ನಂಗೆ. ಒಟ್ಟಾರೆ ಬೇರೆ ಮಕ್ಕಳಿಂದ ದೂರವಾಗಿಬಿಟ್ಟೆ. ಮಕ್ಕಳ, ನನ್ನ ಸಮವಯಸ್ಕರ ಅನುಭವವೇ ನನಗೆ ಇರಲಿಲ್ಲ. ಕಾಲೇಜಿಗೆ ಹೋಗೋವರೆಗೆ ಹಾಗೆಯೇ.

ಹಾಗಂತ ಬೇಜಾರೇನಿರಲಿಲ್ಲ. ಮಕ್ಕಳಿದ್ದಾಗ ಎಲ್ಲಿ ಸೇರಿಸ್ತಾರೋ ಅಲ್ಲಿ ಸೇರಿಕೊಂಡುಬಿಡ್ತೀವಿ ಅಲ್ವೆ.ಏನಾದ್ರೂ ಸಿಕ್ಕಿದ್ರ್ರೆ ಏನಾದ್ರೂ ಕಳಕೊಳ್ಳೋದು ಸಹಜ. ಕೆಲವೆಲ್ಲ ಕಳ್ಕೊಳೋದು… ಕಳ್ಕೊಂಡೆ. ಇನ್ನೆಷ್ಟೋ ಪಡಕೊಳ್ಳೋದು… ಪಡಕೊಂಡೆ. ನನ್ನ ವಯಸ್ಸಿನ ಮಕ್ಕಳಿಗಿಲ್ಲದ ಕೆಲವನ್ನು ಪಡಕೊಂಡೆ. ವಿಷಯಗಳು, ವಿದ್ಯೆ ಎಲ್ಲ ಬೆಳೀತು, ಅವರಿಗಿಂತ ಭಾಳಾ ಮುಂದೆ.ಸರೋದ್ ಮಾಯೆಯ ಬೆಂಬತ್ತಿ…ನಾನು ಕಾಲೇಜಿಗೆ ಹೋಗುವ ಸಮಯದಲ್ಲಿ ಮನೆಯವರು ಮತ್ತು ಆಪ್ತರು ಸಿವಿಲ್ ಸರ್ವಿಸ್ ಪರೀಕ್ಷೆ ತೆಗೆದುಕೊಳ್ಳುವ ಸಲಹೆ ನೀಡಿದ್ದರೆ ನಾನು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕನಾಗುವ ಕನಸು ಕಾಣುತ್ತಿದ್ದೆ.

ಆ ದಿನಗಳಲ್ಲಿ ಪಂಡಿತ ರವಿಶಂಕರ ಅವರು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕಛೇರಿ ಕೊಡ್ತಿದ್ರು. ಹದಿನೈದು, ಹದಿನಾರನೇ ವಯಸ್ಸಿನಲ್ಲಿ ನನ್ನ ಧ್ವನಿ ಒಡೆಯಲಾರಂಭಿಸಿತು. ನನಗೆ ಒಳ್ಳೆ ಧ್ವನಿಯಿತ್ತಲ್ಲ, ಬಾಲ ಕಲಾವಿದ ಅಂತ ಪರಿಗಣಿಸಿಬಿಟ್ಟಿದ್ದರು, ನನ್ನ ಗಾಯನವನ್ನು ಮೆಚ್ಚುವವರ ಒಂದು ಗುಂಪೇ ನನ್ನ ಸುತ್ತ ಇತ್ತು.

ಧ್ವನಿ ಒಡೆಯಕ್ಕೆ ಶುರುವಾಗಿದ್ದೇ ಕೋಗಿಲೆ ಹೋಗಿ ಕಾಗೆಯಾಯ್ತು.ಸುತ್ತ ಇದ್ದವರೆಲ್ಲ ಎಲ್ಲೋ ಕಣ್ಮರೆಯಾದ್ರು! ಸ್ವಲ್ಪ ದಿನ ಸಂಗೀತ ಅಭ್ಯಾಸ ನಿಲ್ಲಿಸಿಬಿಟ್ಟೆ. ಮತ್ತೆ ಕಾಲೇಜಿನಲ್ಲಿದ್ದಾಗ ಹಾಡಲು ಆರಂಭಿಸಿದೆ, ಆಗೆಲ್ಲ ಹಿಂದಿ ಸಿನಿಮಾ ಹಾಡುಗಳನ್ನು, ಗಜಲ್‌ಗಳನ್ನು ಹಾಡ್ತಿದ್ದೆ.

ಒಮ್ಮೆ ನನ್ನ ಹಾಡನ್ನು ಕೇಳಿದ್ದ ತಲತ್ ಮಹಮೂದ್ ಬಾಂಬೆಗೆ ಬಂದ್ರೆ ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದರು. ಹಿನ್ನೆಲೆ ಗಾಯಕನಾಗುವ ಕನಸು ನನ್ನಲ್ಲಿ ಹುಟ್ಟಲು ಇದೂ ಕಾರಣವಾಗಿರಬಹುದು.ಚಿಕ್ಕಂದಿನಲ್ಲಿ ನನಗೆ ಸರೋದ್ ವಾದ್ಯವೆಂದರೆ ಇಷ್ಟವಿರಲಿಲ್ಲ. ಸೀಮೆಎಣ್ಣೆ ಡಬ್ಬಿ ಎನ್ನುತ್ತಿದ್ದೆ.

ಅದೇನು ವಾದ್ಯ, ಆ ಮರದ ತುಂಡು, ಅದಕ್ಕೆ ಚರ್ಮದ ಹೊದ್ದಿಕೆ, ತಂತಿಗಳನ್ನು ಮೀಟುವುದು, ಇದೊಂದು ವಾದ್ಯವೇ, ವಾದ್ಯಗಳಲ್ಲಿ ರಾಜಾ ಎಂದರೆ ಸಿತಾರ್ ಎಂಬ ಭಾವನೆ ಇತ್ತು.

ಒಮ್ಮೆ ೧೯೪೯ರಲ್ಲಿ ಪಂ. ರವಿಶಂಕರ್ ಅವರ ಸಿತಾರ್ ಕಛೇರಿಯನ್ನು ಪ್ರತ್ಯಕ್ಷ ಕೇಳಿದ ಮೇಲೆ ಈ ಅನ್ನಿಸಿಕೆ ಮತ್ತಷ್ಟು ಗಟ್ಟಿಯಾಯಿತು.ನಾನಾಗ ಪಂಡಿತ ರವಿಶಂಕರ್ ಅವರ ದೊಡ್ಡ ಫ್ಯಾನ್ ಮತ್ತು ಈಗ್ಲೂ ಕೂಡ. ನನಗೆ ಅಷ್ಟು ಹೊತ್ತಿಗೆ ಈ ಶಾಸ್ತ್ರೀಯ ಸಂಗೀತ ಒಂಥರದ ಬೇಸರ ಹುಟ್ಟಿ, ಸಿನಿಮಾ ಹಾಡು, ಗಜಲ್‌ಗಳನ್ನು ಹಾಡ್ತಿದ್ದೆ.

ಕಾಲೇಜಿನ ಮತ್ತು ಅಂತರಕಾಲೇಜಿನ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ತಗೋತಿದ್ದೆ. ಬಿ.ಎ. ಇಂಗ್ಲಿಷ್ ಆನರ‍್ಸ್ ಮಾಡುವಾಗ ಕಾಲೇಜಲ್ಲಿ ಒಬ್ಬಳು ಹುಡುಗಿ ನನ್ನ ಫ್ಯಾನ್ ಆಗಿದ್ಲು.೧೯೫೩ರ ಸುಮಾರಿಗೆ, ಒಮ್ಮೆ ಟೌನ್‌ಹಾಲ್‌ನಲ್ಲಿ ಪಂಡಿತ ರವಿಶಂಕರ್ ಮತ್ತು ಉಸ್ತಾದ್ ಅಲಿ ಅಕ್ಬರ್ ಖಾನ್ ಈ ಇಬ್ಬರ ಸಿತಾರ್- ಸರೋದ್ ಜುಗಲಬಂದಿ ಕಾರ್ಯಕ್ರಮ ಇತ್ತು.

ಆ ಹುಡುಗಿ ನನ್ನ ಜೊತೆಗೆ ಬರ‍್ತೀನಿ ಎಂದಿದ್ದಕ್ಕೆ ನಾನವಳನ್ನು ಕರ‍್ಕೊಂಡು ಹೋಗಿದ್ದೆ. ಹುಡುಗಿ ಒಬ್ಬಳಿಗೇ ಕಳಿಸಕ್ಕೆ ಆಗಲ್ಲವಲ್ಲ, ಹಿಂಗಾಗಿ ಅವರಪ್ಪನೂ ನಮ್ಮ ಜೊತೆಗೆ ಬಂದಿದ್ದ. ನನಗೆ ಸ್ಕಾಲರ್‌ಶಿಪ್ ೧೫ ರೂಪಾಯಿ ಬರ‍್ತಿತ್ತಲ್ಲ, ಅದ್ರಲ್ಲಿ ಹೀಗೆ ಕಛೇರಿಗೆ ಹೋಗೋದಕ್ಕೆ ದುಡ್ಡು ಉಳಿಸ್ತಿದ್ದೆ.

ನಾನು ಆ ಮೊದಲು ಸರೋದ್ ಕೇಳಿದ್ದು ೭೮ ಆರ್‌ಪಿಎಂ ರೆಕಾರ್ಡ್‌ಗಳಲ್ಲಿ. ಅವುಗಳ ಗುಣಮಟ್ಟ ಚೆನ್ನಾಗಿರಲಿಲ್ಲವೋ ಏನೋ ಅಂತು ನನಗೆ ಅದು ತುಂಬಾ ಹಾರ್ಶ್ ವಾದ್ಯ ಎನ್ನಿಸಿತ್ತು.

ಆ ದಿನ ಟೌನ್‌ಹಾಲ್‌ಗೆ ಕಛೇರಿ ಕೇಳಲು ಹೋಗಿದ್ದೂ ಕೂಡ ಮುಖ್ಯವಾಗಿ ರವಿಶಂಕರ್ ಅವರ ಸಿತಾರ್‌ಗಾಗಿ. ವೇದಿಕೆಗೆ ಮೊದಲು ರವಿಶಂಕರ್ ಆಗಮಿಸಿದರು.

ಆಗಿನ್ನೂ ಯುವಕರಾಗಿದ್ದ ಅವರು ಎಷ್ಟು ಸುಂದರವಾಗಿ ಕಾಣ್ತಿದ್ರು ಅಂದರೆ ಕೃಷ್ಣನ ಸಾಕಾರರೂಪ. ತಲೆಯಲ್ಲಿ ನವಿಲುಗರಿ, ಕೈಯಲ್ಲಿ ಕೊಳಲು ಅಷ್ಟೇ ಇರಲಿಲ್ಲ.

ಅವರ ಹಿಂದೆ ಭಾರವಾದ ಹೆಜ್ಜೆ ಹಾಕುತ್ತ ಅಲಿ ಅಕ್ಬರ್ ಬಂದರು.ಮೊದಲಿಗೆ ಪುರಿಯಾ ಕಲ್ಯಾಣ್ ರಾಗ ಎತ್ತಿಕೊಂಡ್ರು.

ರವಿಶಂಕರ್ ನುಡಿಸಿದ ನಂತರ ಸರೋದ್‌ನಲ್ಲಿ ಅದರ ಮೊದಲ ಸಂಚಾರಗಳು ಮೂಡಿ ಬರುತ್ತಿದ್ದಂತೆಯೇ ನನಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು.

ಅಲಿ ಅಕ್ಬರ್ ಖಾನರು ಆ ರಾಗವನ್ನು ಸರದಿಯಲ್ಲಿ ಎತ್ತುವುದನ್ನೇ ಕಾಯಲಾರಂಭಿಸಿದೆ. ಆ ದಿನ ಲಲಿ ಚತುರಲಾಲ್ ತಬಲಾ ಸಾಥ್.

ಕಣ್ಮುಚ್ಚಿ ತನ್ಮಯರಾಗಿ ನುಡಿಸುತ್ತಿದ್ದ ಅಲಿ ಅಕ್ಬರ್ ಖಾನ್‌ರನ್ನು ನೋಡುತ್ತ ಸ್ವತಃ ರವಿಶಂಕರ್ ಸ್ತಬ್ಧರಾಗಿದ್ದರು.ಆ ರಾಗ ಮುಗಿಯುವ ವೇಳೆಗೆ ನನ್ನ ಮನಸ್ಸೇ ಅಲ್ಲೋಲಕಲ್ಲೋಲವಾಯಿತು.

ಅದು ಜಡಿಮಳೆಯ ಸದ್ದಿನಂತಿತ್ತು. ಆ ಮಳೆ ನಿಂತ ನಂತರ ನಾನು ಪ್ರತಿ ಹನಿಯೂ ಕೆಳಬೀಳುವ ಸದ್ದನ್ನು ಆಲಿಸಬಲ್ಲವನಾಗಿದ್ದೆ.

ಎಲ್ಲವೂ ಮರೆತುಹೋದಂತಾಯಿತು. ಕಾರ್ಯಕ್ರಮ ಮುಗಿದಾಗ ಆ ಹುಡುಗಿ, ಅವರಪ್ಪ ಎಲ್ಲೋ ದೂರದ ಕನಸಿನಂತೆ ಭಾಸವಾದರು.

ಆವರೆಗೆ ನಾನು ಪ್ರತಿಭಾನ್ವಿತ ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿ, ಉತ್ತಮ ಚರ್ಚಾಪಟು, ಒಳ್ಳೆಯ ಕ್ರಿಕೆಟ್ ಆಟಗಾರ, ತಲತ್ ಮಹಮೂದ್ ಹಾಡುಗಳ ಹಾಡುಗಾರ, ಸಿವಿಲ್ ಸರ್ವಿಸ್ ಪರೀಕ್ಷೆ ತೆಗೆದುಕೊಳ್ಳುವ ಸಿದ್ಧತೆಯಲ್ಲಿದ್ದವ ಈ ಎಲ್ಲವೂ ಆಗಿದ್ದೆ.

ಆ ಕ್ಷಣದಲ್ಲಿ ನನ್ನ ಬದುಕಿನಿಂದ ಆ ಎಲ್ಲವೂ ಅಕ್ಷರಶಃ ಒರೆಸಿಹೋಯಿತು… ನನ್ನೊಳಗೆ ಉಳಿದಿದ್ದು ಅಲಿ ಅಕ್ಬರ್ ಅವರ ಸರೋದ್ ಸಂಗೀತವೊಂದೇ……… ಆಗೆಲ್ಲ ಬಿ.ಎ. ಮುಗಿದ ಕೂಡಲೇ ಲೆಕ್ಚರರ್ ಆಗಿ ಸೇರಬಹುದಿತ್ತು ಎಂದೆನಲ್ಲ… ಹಾಗೆ ೧೯೫೫, ಜುಲೈ ಒಂದಕ್ಕೆ ನನಗೆ ಅಪಾಯಿಂಟ್‌ಮೆಂಟ್ ಆರ್ಡರ್ ಸಿಕ್ಕಿತು. ಅಷ್ಟರಲ್ಲಾಗಲೇ ನನಗೆ ಸರೋದ್ ವ್ಯಾಮೋಹ ಹುಟ್ಟಿಬಿಟ್ಟಿತ್ತು.

ಅಮ್ಮನಿಗೆ ಸರೋದ್ ಧ್ವನಿ ಕೇಳಿದ್ರೆ ಎದೆಯಲ್ಲಿ ಡವಡವಗುಟ್ಟೋದು, ಅವಳಿಗೆ ಆಗ ಹುಷಾರಿರಲಿಲ್ಲ. ನಾನು ಕೆಲಸಕ್ಕೆ ಸೇರಿದ ಏಳನೇ ದಿನ ಅಮ್ಮ ತೀರಿಕೊಂಡಳು.

ಬಹಳ ಆಘಾತವಾಯಿತು ನನಗೆ. ಅದು ಭರಿಸಲೇಬೇಕಾದ ನೋವು. ಖಾನ್‌ಸಾಹಿಬ್‌ರ ಸರೋದ್ ಕೇಳಿದಾಗ ಯಾವುದೋ ಒಂದು ಮಾಯೆ ಕುದುರಿಬಿಡ್ತು ನನಗೆ.

ಒಟ್ಟು ನನ್ನೆಲ್ಲ ನೋವು, ಒಂಟಿತನ ಮರೆತು, ಎಲ್ಲವನ್ನೂ ಮೀರಿ, ಇದನ್ನೇ ಒಂದು ಪರಿಶ್ರಮ ಮಾಡಬೇಕು, ಅವರಲ್ಲಿ ಹೋಗಿ ಕಲಿಯಲೇಬೇಕು ಎಂದು ದೃಢನಿರ್ಧಾರ ಮಾಡಿದೆ.

ಗೌರೀಶಂಕರದಂತೆ ನನ್ನ ಗುರುಈ ಗುರುವಿನ ಪ್ರಜ್ಞೆ ಇದೆಯಲ್ಲ, ಅದು ಸಾಹಿತ್ಯದಲ್ಲಿ ಇಲ್ಲ.

ಗುರುವಿನ ಮುಂದೆ ದೈನ್ಯದಿಂದ ಮನಸ್ಸು ಜಳಜಳ ಸ್ವಚ್ಛವಾಗಬೇಕು. ಅವರು ಎದುರಿಗೆ ಇದ್ರು ಅಂದರೆ ಮೈಯೆಲ್ಲ ಬೆಚ್ಚಗಾಗಿ ಹೆದರಿಕೆಯಾಗುತ್ತೆ.ಗುರು ಎದುರಿಗಿದ್ದಾಗ ನಾವು ಮಾಡ್ತಿರೋದು ಚೆನ್ನಾಗಿ ಹೋಗ್ತಿದೆ ಅಂತಾದ್ರೆ ಇನ್ನೂ ಚೆನ್ನಾಗಿ ಹೋಗ್ತದೆ.

ಹ್ಯಾಗಾಗುತ್ತೋ ಅಂತ ಹೆದರಿಕೆಯಾದರೆ ಅವರೇ ಕೊಟ್ಟಿದ್ದು, ಎಲ್ಲ ಅವರದೇ, ತಪ್ಪಾದ್ರೆ ಅವರೇ ಸರಿಪಡಿಸೋ ಧೈರ್ಯ ಕೊಡ್ತಾರೆ ಅಂತ ಅಂದುಕೊಂಡರೆ ಮತ್ತೆ ಎಲ್ಲ ಸರಿಯಾಗುತ್ತದೆ.

ನಮ್ಮ ಗುರುಗಳು ಒಂದು ರಾಗದ ಹೃದಯ ಮಾತ್ರವಲ್ಲ, ಅದರ ಚಲನೆಗಳನ್ನೆಲ್ಲ ತಿಳಿದುಕೊಂಡು, ರಾಗವನ್ನು ಸಂಪೂರ್ಣವಾಗಿ ತಿಳ್ಕೊಂಡು, ಅನುಭವಿಸಿ, ಅದರ ರುಚಿ ಕಂಡುಕೊಂಡು, ತಾನು ಸವಿದು, ರಾಗದ ಹಿತವನ್ನು ಅನುಭವಿಸ್ತಾ ಕೇಳುಗರಿಗೂ ದಾಟಿಸ್ತಿದ್ರು.

ಕೆಲವು ಸಂಗೀತಗಾರರು ರಾಗದ ಜೊತೆ, ತಬಲಾ ಜೊತೆ, ಪಕ್ಕವಾದ್ಯಗಳ ಜೊತೆ ಚಕಮಕಿ ನಡೆಸ್ತಾರೆ.

ಇವ್ರು ಹಾಗಲ್ಲ.ಮಗುವಿನ ಕೈಗೆ ಹಾಲು ಕೊಟ್ರೆ ಏನು ಮಾಡುತ್ತೆ ಅದು… ಸುಮ್ಮನೆ ಕಣ್ಮುಚ್ಚಿ ಕುಡೀತಾ ಮಲಗುತೆ. ಹಾಗೆ ನಮ್ಮ ಗುರುಗಳ ಕೈಗೆ ಸರೋದ್ ಕೊಟ್ರೆ ಒಂದೆರಡು ನಿಮಿಷ ಅಷ್ಟೆ… ಆಮೇಲೆ ಅವರು ಕಣ್ಮುಚ್ಚಿ ಯಾವುದೋ ಲೋಕದಲ್ಲಿ ಇರ‍್ತಾರೆ. ಅವರು ಪ್ರತಿ ಬಾರಿ ರಾಗದ ಒಳಹೊಕ್ಕು ರಾಗದಲ್ಲಿ ಮಿಂದು, ಅದನ್ನು ಹಂಗೇ ಕೇಳುಗನಿಗೆ ದಾಟಿಸ್ತಾರೆ.

ಕೇಳುಗ ಕಿವಿಡನಾಗಿದ್ರೆ ಏನೂ ಮಾಡಕ್ಕಾಗಲ್ಲ.ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ‍್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ.

ಹಾಗೆ ನಮ್ಮ ಗುರುಗಳು ಆಕಾಶದಲ್ಲಿ ಮೇಲೆ ಹಾರಾಡೋ ಗರುಡ.ಇಲ್ಲಿ ಕೆಳಗೆ ಗರುಡನ ನೆರಳಿದೆ.

ಅವರು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಇದ್ದಾರೆ ಎನ್ನುವುದೇ ನನಗೆ ಒಂದು ಸುರಕ್ಷಿತ ಭಾವನೆ ನೀಡುತ್ತಿತ್ತು. ಆ ಗುರು ಅಲ್ಲಿದ್ದರು ಅಂತ ಇವತ್ತು ರಾಜೀವ ಇಲ್ಲಿದ್ದಾನೆ.

ಇಲ್ಲದಿದ್ದರೆ ಏನು ಸಾಧ್ಯವಿತ್ತು… ಗೌರೀಶಂಕರ ಪರ್ವತದಂತಿದ್ದರು ಅವರು. ಈಗ ಆ ಪರ್ವತ ಉರುಳಿದೆ. ನನ್ನೊಳಗೆ ಅಪಾರ ಒಂಟಿತನ ಆವರಿಸಿದೆ.ಸೂರ್ಯ ತನ್ನಷ್ಟಕ್ಕೆ ಮೇಲೆ ಬರ‍್ತಾನೆ, ಬಿಸಿಲು, ಬೆಳಕು ನೀಡ್ತಾನೆ.

ಗಿಡದಲ್ಲಿರೋ ಎಲೆ ತನ್ನ ಹಸಿರನ್ನು ಬಿಸಿಲಿಗೆ ಒಡ್ಡುತ್ತೆ.

ತನ್ನ ಪತ್ರ ಹರಿತ್ತಿನಿಂದ ಸೂರ್ಯನ ಶಕ್ತಿ ಹೀರಿಕೊಂಡು ತನ್ನ ಶಕ್ತಿ ಬೆಳೆಸಿಕೊಳ್ಳುತ್ತೆ.

ಸೂರ್ಯ ತನ್ನ ಬೆಳಕನ್ನು ಹೀರಿಕೊಳ್ಳಬೇಡ ಅಂತ ಎಲೆಗೆ ಹೇಳೋಕಾಗಲ್ಲ ಅಥವಾ ಎಲೆಗಾಗಿಯೇ ಆತ ಪ್ರತಿದಿನ ಮೇಲೆ ಬರೋದು ಇಲ್ಲ.

ಮೇಲೆ ಏರೋದು ಸೂರ್ಯನ ಸಹಜಗುಣ.ಹಾಗೆ ಮೇಲೆ ಏರೋವಾಗ ಬೆಳಕು ಕೊಡೋಲ್ಲ ಅಂತ ಸೂರ್ಯ ಹೇಳಕ್ಕಾಗಲ್ಲ.

ಏಕೆಂದರೆ ಬೆಳಕು ಕೊಡೋದು ಸಹಜ ಸ್ವಭಾವ. ಈ ಎಲೆ ಎಷ್ಟು ಚೆನ್ನಾಗಿ ತನ್ನನ್ನು ಸೂರ್ಯನಿಗೆ ಒಡ್ಡಿಕೊಳ್ಳುತ್ತೆ, ಎಷ್ಟು ಚೆನ್ನಾಗಿ ಸೂರ್ಯನ ಬೆಳಕು ಹೀರಿಕೊಳ್ಳುತ್ತೋ ಅಷ್ಟು ಸಮೃದ್ಧವಾಗಿ ಅದು ಇನ್ನಷ್ಟು ಹಸಿರಾಗಿ ಚಿಗಿಯುತ್ತೆ, ಬೆಳೆಯುತ್ತೆ. ಅಂದರೆ ಎಲೆಗೆ ಹೀರಿಕೊಳ್ಳೋ ಶಕ್ತಿ ಇರಬೇಕು.

ಕೆಲವೆಲ್ಲ ಎಲೆಗಳು, ಏನು ಮಾಡಿದ್ರೂ ಹೆಚ್ಚು ಬೆಳಕನ್ನು ಹೀರೋ ಶಕ್ತಿ ಇರೋದಿಲ್ಲ, ಮುರುಟಿ ಹೋಗುತ್ತವೆ.

ಇನ್ನು ಕೆಲವು ಎಲೆಗಳು ತಾವೂ ಇನ್ನಷ್ಟು ಹಸಿರಾಗಿ, ಅಕ್ಕ ಪಕ್ಕದಲ್ಲಿರೋ ಪುಟ್ಟ ಎಲೆಗಳೂ ಚಿಗುರುವ ಹಾಗೆ ಮಾಡುತ್ತವೆ. ಗುರು ಸೂರ್ಯನಂತೆ ಇರ‍್ತಾನೆ, ಶಿಷ್ಯ ಎಲೆಯಂತೆ ಇರಬೇಕು.

ಸಂಗೀತದಲ್ಲಿ ಕಲಿಕೆ ಎನ್ನುವುದು ಎಂದೂ ಕೊನೆಗೊಳ್ಳಬಾರದು, ನಿಜವಾದ ಶಿಷ್ಯನಿಗೆ ಕಲಿಕೆ ಕೊನೆಗೊಂಡಿತು ಎನ್ನಿಸುವುದೂ ಇಲ್ಲ. ನಾನು ಸರೋದ್ ಕಲಿಯಲು ಆರಂಭಿಸಿದಾಗ ಪ್ರತಿದಿನ, ಪ್ರತಿಗಂಟೆ, ಪ್ರತಿಕ್ಷಣ ಅದಮ್ಯ ಬಾಯಾರಿಕೆ ಅನ್ನಿಸುತ್ತಿತ್ತು.

ಇಂದಿಗೂ ನಾನು ವಿದ್ಯಾರ್ಥಿಯೇ.ಸಾರ್ವಕಾಲಿಕ ಶ್ರೇಷ್ಠ ಅಲಿ ಅಕ್ಬರ್ ಖಾನ್ ಅವರ ವಿದ್ಯಾರ್ಥಿ. ನನ್ನ ಗುರುಗಳು ಒಂದು ಮಾಧ್ಯಮವನ್ನು ಮುಟ್ಟಿದರು ಎಂದರೆ ಅದು ಬದಲಾಗುತ್ತದೆ.

ತನ್ನ ಎಲ್ಲೆಗಳನ್ನು ಹಿಗ್ಗಿಸಿಕೊಂಡು ಮನುಷ್ಯರ ಎಲ್ಲ ತಡೆಗಳನ್ನೂ ಮೀರಿ ಹರಿಯತೊಡಗುತ್ತದೆ. ಇಟ್ ಈಸ್ ನೊ ಮೋರ್ ದಿ ಸೇಮ್.

ತುಂಬ ಶ್ರೇಷ್ಠ ಪುಸ್ತಕ, ತುಂಬ ಶ್ರೇಷ್ಠ ಸಂಗೀತ ಮತ್ತು ತುಂಬ ಶ್ರೇಷ್ಠ ವಿದ್ಯಮಾನ ನಿಮಗೆ ಎಂದಿಗೂ ಪೂರ್ಣವಾಗಿ ಲಭ್ಯವಾಗುವುದಿಲ್ಲ.ನನಗೀಗ ೭೮ ವರ್ಷ ಎಂದರೆ ಎಲ್ಲದಕ್ಕೆ ಅವಸರ… ಇಲ್ಲಿಂದ ಹೋಗುವ ಮೊದಲು ನಮ್ಮಲ್ಲಿದ್ದಿದ್ದನ್ನು ಶಿಷ್ಯಂದಿರ ಕೈಯಲ್ಲಿಡಬೇಕು.

ಸುಮಾರು ೩೨೦ ಪುಟಗಳ ಈ ಕೃತಿಯಲ್ಲಿ ರಾಜಿವ ತಾರಾನಾಥರ ಸಂಗೀತ ಸಾಧನೆ, ಅವರ ಉದಾತ್ತ ಘನ ವ್ಯಕ್ತಿತ್ವದ ಚಿತ್ರಣವಿದೆ.

ಕಾರ್ಯಕ್ರಮಕ್ಕೆ ಬನ್ನಿ, ಅಂದು ನಮ್ಮ ನಡುವಿನ ಉದಾತ್ತ, ಶ್ರೇಷ್ಠ ವ್ಯಕ್ತಿಯನ್ನು ಕಣ್ಣುತುಂಬಿಕೊಂಡು ಕೃತಿಯನ್ನು ಕೊಂಡು, ಪೂರ್ಣ ಓದಿ, ರಾಗಲಾಸ್ಯದ ಚಿತ್ರಣವನ್ನು ಮನತುಂಬಿಕೊಳ್ಳಿ

.

4 ಟಿಪ್ಪಣಿಗಳು (+add yours?)

  1. vijayendra.kulkarni.
    ಜುಲೈ 28, 2010 @ 15:26:06

    dhanyavadagalu sumangala avare

    ಉತ್ತರ

  2. Anon
    ಜುಲೈ 28, 2010 @ 11:37:37

    ಪ್ರೀತಿಯ ಸುಮಂಗಲಾ,

    ಸಣ್ಣ ಕಥೆಗಳ ಲೇಖಕಿ ಎಂದೇ ಖ್ಯಾತರಾಗಿರುವ ತಾವು ಪಂಡಿತ ರಾಜೀವ ತಾರಾನಾಥರ ಜೀವನ ಚರಿತ್ರೆಯನ್ನು ಬರೆದು ಓದುಗ-ಲೋಕಕ್ಕೊಂದು ಉತ್ತಮ ಕಾಣಿಕೆಯನ್ನಿತ್ತಿದ್ದೀರಿ. ಇದರೊಡನೆಯೇ ಸಾಹಿತ್ಯದ ಇನ್ನೊಂದು ಆಯಾಮವನ್ನು ಪ್ರವೇಶಿಸಿ ತಮ್ಮ talentನ್ನು ಪ್ರದರ್ಶಿಸಿದ್ದೀರಿ. ಅಲ್ಲದೆ ಜೀವನದಲ್ಲಿ ಹೊಸ ಅನುಭವವನ್ನು ಪಡೆದಿದ್ದೀರಿ. ತಮ್ಮನ್ನು ಎದೆಯಾಳದಿಂದ ಅಭಿನಂದಿಸುತ್ತೇನೆ.

    ರಾಜೀವ ತಾರಾನಾಥರ ಪುಸ್ತಕದಿಂದ ತಾವು ಆರಿಸಿ ಇಲ್ಲಿ ಪ್ರಸ್ತುತಪಡಿಸಿರುವದನ್ನು ಓದಿದಾಗ ಆ ಮಹಾನ್ ಸಂಗೀತಜ್ಞರ ಜೀವನವನ್ನು ಕುರಿತು ಬರೆದುದು ಅವರ ಸಂಗೀತದಷ್ಟೇ ಲಲಿತವಾಗಿಯೂ ಗಾಢವಾಗಿಯೂ ಇದೆಯೆಂಬುದು ವೇದ್ಯವಾಗುತ್ತದೆ. ಭಾವನೆ ಊಹೆಗಳ ಲೋಕದಲ್ಲಿ ಕಥೆಗಳನ್ನು ಬರೆದು ಸೈ ಎನ್ನಿಸಿಕೊಂಡಿರುವ ನೀವು ರಾಜೀವ ತಾರಾನಾಥರಂಥ ಮಹಾಮಹಿಮರ ಜೀವನ ಚರಿತ್ರೆಯನ್ನು ಬರೆದು ಇಲ್ಲಿಯೂ ಜಯಶೀಲರಾಗಿದ್ದೀರಿ ಎಂದು ನಾನಂದರೆ ಹೊಗಳಿಕೆಯ ಮಾತಾಗಲಾರದು.

    ಪುಸ್ತಕವನ್ನು ಬೇಗನೇ ಕೊಂಡು ಓದುವ ಅಭಿಪ್ರಾಯದಲ್ಲಿದ್ದೇನೆ.

    ಮತ್ತೊಮ್ಮೆ ಅಭಿನಂದನೆಗಳು ಮತ್ತು ಶುಭಾಶಯಗಳು.

    ಉತ್ತರ

  3. aditi
    ಜುಲೈ 23, 2010 @ 10:07:35

    sumala akkanige abhinandanegalu.

    ಉತ್ತರ

  4. ಬಸವರಾಜು
    ಜುಲೈ 22, 2010 @ 21:22:53

    ಫೆಂಟಾಸ್ಟಿಕ್, ಬೇಗ ಬರಲಿ, ಓದೋ ಆಸೆಯಾಗ್ತಿದೆ…

    ಉತ್ತರ

Leave a reply to ಬಸವರಾಜು ಪ್ರತ್ಯುತ್ತರವನ್ನು ರದ್ದುಮಾಡಿ