ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ

ನಿಜಕ್ಕೂ ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ ಬರುತ್ತಿದೆ. ವಿ ಗಾಯತ್ರಿ ಗೊತ್ತಲ್ಲ? ಅದೇ ನ್ಯಾಷನಲ್ ಬುಕ್  ಟ್ರಸ್ಟ್ ಗೆ   ತೊತ್ತೋಚಾನ್ ಅನುವಾದಿಸಿಕೊಟ್ಟವರು . ಇದೇ ತೊತ್ತೋ ಚಾನ್ ಎಳೆ ಹಿಡಿದು ಕನ್ನಡದ ಪರಿಸರಕ್ಕೆ ಒಗ್ಗಿಸಿ ಹೊಸ ಕಾದಂಬರಿ ಬರೆದಿದ್ದಾರೆ. ಕಾಡುವ ಕಾದಂಬರಿ ಅದು. ಪ ಸ ಕುಮಾರ್ ರೇಖೆಗಳು, ಅಪಾರ ವಿನ್ಯಾಸ ಸಹಾ ಅಷ್ಟೇ ಕಾಡುವಂತಿದೆ.

ಈ ಪುಸ್ತಕ ನಂಗಿಷ್ಟ ಯಾಕೆ ಎಂಬುದನ್ನು ಇಲ್ಲಿ ವಿವರಿಸಿದ್ದೇನೆ. ಓದಿ-

ಈ ಪುಸ್ತಕ ನಂಗಿಷ್ಟ

‘ಅವಳು ಈ ಶಾಲೆಗೆ ಸುಮ್ಮನೆ ಬರಲಿಲ್ಲ, ಒಂದು ಸಂಭ್ರಮದ ಅಲೆಯನ್ನೇ ಹೊತ್ತು ತಂದಳು..’ ಎಂದು ರೇಖಾ ಮೇಡಂ ತುಂಬಿದ ಸಭೆಗೆ ಕಿನ್ನರಿಯನ್ನು ಪರಿಚಯಿಸಿದಾಗ ನನ್ನ ಕಣ್ಣು ಹಾಗೂ ಮನಸ್ಸು ಎರಡೂ ಒದ್ದೆಯಾಗಿ ಹೋಗಿತ್ತು. ಥೇಟ್ ‘ತುಂಗಾ’ಳ ರೀತಿ ಅವಳ ಪುಟ್ಟ ಬೆರಳನ್ನು ಹಿಡಿದು ಶಾಲೆ ಶಾಲೆ ತಿರುಗಿದ್ದೆವು. ಪ್ರತೀ ಶಾಲೆಯ ಅಂಗಳ ಹೊಗುವಾಗಲೂ ಈ ಶಾಲೆ ಮಗಳ ಮನಸಿನ ಮೇಲೆ ಒಂದು ಕಲೆ ಮೂಡಿಸದಿರಲಿ ಎಂದು ಮನಸ್ಸು ಹಾರೈಸುತ್ತಿತ್ತು. ದುಗುಡ ನಮ್ಮ ಮುಖಗಳ ಮೇಲೆ ಮೋಡದಂತೆ ಬಂದು ನಿಲ್ಲುತ್ತಿತ್ತು.

‘ಅಮ್ಮ, ಅವರು ನಾನು ಬರೆದ ಚಿತ್ರ ಸರಿ ಇಲ್ಲ ಅನ್ನೋದು ಯಾಕೆ’ ಅಂತ ಅವಳು ಶಾಲೆಯಿಂದ ಓಡಿ ಬಂದು ಕೇಳಿದರೆ ನಮ್ಮ ಬದುಕಿನ ಅಷ್ಟೂ ಬಣ್ಣಗಳು ಮುದುಡಿಹೋಗುತ್ತಿತ್ತು. ಒಂದು ಹಾಳೆ, ಒಂದೆರಡೇ ಬಣ್ಣ ಸಿಕ್ಕರೂ ಆಕಾಶದಿಂದ ಕಾಮನ ಬಿಲ್ಲನ್ನು ಎಳೆದು ತಂದು ಹಾಳೆಯೊಳಗೆ ಕೂರಿಸುತ್ತಿದ್ದ ಹುಡುಗಿ ನಿಧಾನವಾಗಿ ಹಾಳೆಯನ್ನೇ ಬದಿಗೆ ಸರಿಸಿ ಬಿಟ್ಟಳು. ಪೆನ್ಸಿಲ್ ಸಿಕ್ಕರೆ ಸಾಕು ಚಕ ಚಕ ನೂರೆಂಟು ಓರೆಕೋರೆ ಗೆರೆ ಎಳೆಯುತ್ತಿದ್ದ ಹುಡುಗಿ ಬಣ್ಣದ ಲೋಕಕ್ಕೆ ಬೆನ್ನು ತಿರುಗಿಸಿ ಕೂತಳು. ಶಾಲೆಯಲ್ಲಿ ಡ್ರಾಯಿಂಗ್ ಮಾಸ್ತರ್ ಬಾಲ್ ಬರಿ, ಎರಡು ಬೆಟ್ಟದ ನಡುವೆ ಮಾತ್ರ ಸೂರ್ಯ ಇರಬೇಕು, ಚಿಟ್ಟೆಗೆ ಇಂತಹದೇ ಬಣ್ಣ ಹಾಕಬೇಕು, ರೆಕ್ಕೆ ಕರಾರುವಾಕ್ಕಾಗಿರಬೇಕು ಎಂದು ಹೇಳುತ್ತಾ ಹೇಳುತ್ತಲೇ ಮಗಳ ಮನಸ್ಸಿನಲ್ಲಿದ್ದ ಬಣ್ಣದ ಲೋಕವನ್ನು ಅವರು ರಬ್ಬರ್ ಹಿಡಿದು ಅಳಿಸುತ್ತಾ ನಡೆದಿದ್ದರು.

ಒಂದು ದಿನ ಹೀಗೆ ಥೇಟ್ ‘ತುಂಗಾ’ಳಂತೆಯೇ ಅವಳು ನೇರ ಪ್ರಿನ್ಸಿಪಾಲ್ ರೂಂ ಹೊಕ್ಕಳು ಅವಳಿಗೆ ಏನೋ ಹೇಳುವುದಿತ್ತು. ಆದರೆ ಅಲ್ಲಿದ್ದವರೆಲ್ಲಾ ಗದರಿಕೊಂಡ ಪರಿಗೆ ಅವಳು ಒಂದು ಭಯವನ್ನು ತನ್ನೊಳಗೆ ಸ್ಥಾಪಿಸಿಕೊಂಡುಬಿಟ್ಟಳು. ಇದು ಎಲ್ಲಿಯೂ ಸಿಗದ ಶಾಲೆ ಎಂದು ಎಲ್ಲರೂ ಶಿಫಾರಸು ಮಾಡಿ ಕಳಿಸಿದ ಶಾಲೆಯಲ್ಲಿ ಮಗಳಿಗೆ ಸತತವಾಗಿ ಸಿಕ್ಕಿದ್ದು ಬೈಗುಳ, ಆಗೀಗ ಪೆಟ್ಟು. ಪಾಪ, ನಮಗೂ ಅರ್ಥವಾಗುತ್ತಿತ್ತು, ಶಾಲೆಯ ಮೇಡಂ ಮನೆಯಲ್ಲಿದ್ದ ಮುಗಿಯದ ಸಮಸ್ಯೆ.

ಆದರೆ ಆ ಒಂದು ಶಾಲೆಯೂ ಇತ್ತು. ಥೇಟ್ ‘ತುಂಗಾ’ಳಿಗೆ ಸಿಕ್ಕ ಶಾಲೆಯಂತೆ- ಈಗಲೂ ನೆನಪಿದೆ. ಬೆಕ್ಕಿನಂತೆ ಹೆಜ್ಜೆ ಇಟ್ಟು ಸದ್ದಾಗದಂತೆ ಕಿಟಕಿಯಿಂದ ಇಣುಕಿ ನೋಡಿದಾಗ ಇನ್ನೂ ಬದುಕಿಗೆ ಕಣ್ಣು ಬಿಡುತ್ತಿದ್ದ ಅವಳು ಕೈನಲ್ಲಿ ಒಂದು ಡಬ್ಬಿ ಹಿಡಿದು ಅಲ್ಲಾಡಿಸುತ್ತಾ ಇದ್ದಳು. ಒಳಗೆ ಒಂದಿಷ್ಟು ಮರಳು. ಅದು ಮಾಡುತ್ತಿದ್ದ ಶಬ್ದ ಅವಳೊಳಗೆ ಕಚಗುಳಿ ಇಡುತ್ತಿತ್ತು. ಅಷ್ಟೇ ಅಲ್ಲ ಮಕ್ಕಳ ಎದೆಯಾಳದಲ್ಲಿ ನಾದದ ನದಿಯೊಂದು ನಡೆಯುವ ಹಾಗೆ ಮಾಡುತ್ತಿತ್ತು. ಹಾಗೇ ಇನ್ನೊಂದು ದಿನ,,ಹಾಗೇ ಕದ್ದು ನೋಡಿದಾಗ ಮಕ್ಕಳ ಎದುರು ಎಷ್ಟೊಂದು ಇಂಗ್ಲಿಷ್ ವರ್ಣಮಾಲೆಯ ಅಕ್ಷರವನ್ನು ಹರಡಿದ್ದರು. ಆಕೆಗೆ ಅವು ಅಕ್ಷರ ಎನ್ನುವುದಕ್ಕಿಂತ ಅವಳ ಜೊತೆ ಆಟಕ್ಕೆ ಕಾದು ಕೂತ ಗೆಳೆಯರ ಹಾಗೇ ಕಾಣುತ್ತಿದ್ದವು. ಅವಳು ಪಾಠ ಕಲಿತದ್ದು ಹಾಗೇ, ಗೆಳೆಯರ ಜೊತೆ ಆಟವಾಡಿದಂತೆ.

ಅಂಬೆಗಾಲು ದಾಟಿ ನಿಂತ ಹುಡುಗಿಗೆ ಸಿಕ್ಕ ಈ ಶಾಲೆಯ ನೆನಪು ಮನಸ್ಸಿನ ಕ್ಯಾನ್ವಾಸ್ ನಿಂದ ಮರೆಯಾಗಲೇ ಇಲ್ಲ. ಊರೂರು ಬದಲು ಮಾಡಿದಾಗಲೆಲ್ಲಾ ಹುಡುಕಿದ್ದು ಅಂತದೇ ಶಾಲೆಯನ್ನು. ಆದರೆ ಶಾಲೆಯ ಅಂಗಳದಲ್ಲಿ ಮಕ್ಕಳ ಕಲರವವೂ ಇರಬೇಕು ಎಂಬುದನ್ನೇ ಎಷ್ಟೋ ಶಾಲೆಗಳು ಮರೆತುಬಿಟ್ಟಿದ್ದವು. ಆ ನಂತರ ಎಷ್ಟು ವರ್ಷಗಳು ಹುಡುಕಿದ್ದೇವೆ. ಅವಳ ಮನಸ್ಸಿಗೆ ಘಾಸಿಯಾಗದಿರುವ ಶಾಲೆ ಸಿಗಲಿ ಅಂತ.

ಮತ್ತೆ ಸಿಕ್ಕಿತು- ಒಂದು ಅಚಾನಕ್ ವರ ಸಿಕ್ಕಿದಂತೆ- ಥೇಟ್ ತುಂಗಾಳಿಗೆ ಸಿಕ್ಕ ಹಾಗೇ. ನೀನು ಸಂಭ್ರಮವನ್ನು ಹೊತ್ತು ತಂಡ ಹುಡುಗಿ ಅಂತ ಸಂಭ್ರಮಿಸಿದ ಶಾಲೆ. ಅಂತಹ ಶಾಲೆಗಳು ಇವೆ. ಅಂಥಹ ಶಾಲೆಗಳನ್ನು ಎಷ್ಟೊಂದು ”ತುಂಗಾ’ಳಂತ ಪುಟಾಣಿಯರು ಹುಡುಕುತ್ತಾ ನಡೆದಿದ್ದಾರೆ. ಅವರ ಹಿಂದೆ ಎಷ್ಟೊಂದು ಆತಂಕ ಹೊತ್ತ ಅಮ್ಮ ಅಪ್ಪಂದಿರು. ಅಂತಹ ಶಾಲೆ ಕಥೆಗಳನ್ನು ಈ ‘ತುಂಗಾ’ ಹೇಳುತ್ತಿದೆಯಲ್ಲಾ ಅದಕ್ಕೇ ‘ಈ ಪುಸ್ತಕ ನಂಗಿಷ್ಟ’.

-ಜಿ ಎನ್ ಮೋಹನ್

ಅವಳೊಬ್ಬಳಿದ್ದಳು

-ಜಯಲಕ್ಷ್ಮಿ ಪಾಟೀಲ್

ಅಂತರಾಳ

ಅವಳೊಬ್ಬಳಿದ್ದಳು…

ತನ್ನವನ ದೃಷ್ಟಿಯನ್ನು ಸಂಧಿಸಲು ಹರ ಸಾಹಸ ಮಾಡಿ ಸೋಲುತ್ತಿದ್ದ ಹುಡುಗಿ. ಅವನಿದಿರು ಅವಳ ರೆಪ್ಪೆಗಳು ಯಾವ ಪರಿಯಾಗಿ ಲಜ್ಜೆಯಿಂದ ಭಾರಗೊಳ್ಳುತಿದ್ದವೆಂದರೆ ಆ ಭಾರಕ್ಕೆ ಅವಳ ಶಿರ ಬಾಗುತ್ತಿತ್ತು !

ಇನ್ನೊಬ್ಬಳು…

ತನ್ನವನ ಕಣ್ಣುಗಳಲ್ಲಿ ತಮ್ಮ ಪ್ರೀತಿಯ ಪಳುವಳಿಕೆಗಳನ್ನು ಹುಡುಕಿ ಸೋತಾಕೆಯ ಶಿರ ಬಾಗುವುದು ಬಿಡಿ, ಕಣ್ರೆಪ್ಪೆ ಒಂದಾಗುವುದು ಸಹ ಮರೆತಂತಿದ್ದವು..

ಮತ್ತೊಬ್ಬಳಿದ್ದಳು...

ತನ್ನವನು ಮತ್ತೊಬ್ಬನಾಗಿ ಮಾತಾಡುತ್ತಾ ಕುಳಿತ ಸಮಯ ಕಣ್ಣಲ್ಲಿ ನಿರ್ಲಿಪ್ತತೆಯ ನಟಿಸಿ, ಮನದಲ್ಲಿ ರೋಧಿಸುತ್ತ ತುಟಿಯಲ್ಲಿ ನಗುವರಳಿಸಿ ಕುಳಿತಾಕೆ…

ಮಗದೊಬ್ಬಳು...

`ಹೋಗುತ್ತೇನೆ’ ಎಂದವನನ್ನು ತಡೆಯದೆ `ಸರಿ’ ಎಂದು ಕಳಿಸಿ ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು, ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ…

ಬರುತ್ತಿದ್ದಾರೆ ಜ್ಯೋತಿ ಬಸು

ಕಾಮಿಡಿ ಕಲ್ಯಾಣ

‘ಸಹಯಾನ’ದ ಯಾನ

ಮುಂಗಾರು ನಾಟಕೋತ್ಸವ

Missing: Half the story

ದೇಶಕಾಲ: ಚರ್ಚೆಗೆ ಸ್ವಾಗತ

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಅವರು ಮಂಡಿಸಿದ ಅಭಿಪ್ರಾಯ ಇಲ್ಲಿದೆ. ಮಂಗಳೂರಿನಿಂದ ಜಿ ಎನ್ ಅಶೋಕವರ್ಧನ ತಮ್ಮ ಅನುಭದ ಜೊತೆ ದೇಶಕಾಲದ ಕಥೆಯನ್ನು ಮೇಳೈಸಿದ್ದಾರೆ  ಅದು ಇಲ್ಲಿದೆ. ಸಂದೀಪ್ ಕಾಮತ್ ಬರಹದ ರುಚಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅವರು ಪತ್ರ ಬರೆದಿದ್ದಾರೆ.

ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-

’ದೇಶ ಕಾಲ’ ವಿಶೇಷ ಚೀಲದಲ್ಲಿ ವಾಪಾಸ್..

ಪ್ರೀತಿಯ ವಿವೇಕ್ ಶಾನಭಾಗ ರೇ,

ತಮ್ಮ ’ ದೇಶಕಾಲ ’ ವಿಶೇಷ ಸಂಚಿಕೆಯನ್ನು ನಾನು ಬಹಳ ಖುಷಿಯಿಂದ ಓದಿದ್ದೆ.ಆದರೆ ಈಗ ಪಶ್ಚಾತ್ತಾಪ ಆಗ್ತಾ ಇದೆ.

ನಾನು ಬೈ ಮಿಸ್ಟೇಕ್ ಎಲ್ಲಾ ಲೇಖನ ,ಕಥೆ,ಕವನಗಳನ್ನು ಓದಿದ್ದೇನೆ.ಓದಿದ ಕಥೆ ಕವನಗಳನ್ನು ಈಗ ಡಿಲೀಟ್ ಮಾಡಲು ನನ್ನ ಮೆದುಳು ಹಾರ್ಡ್ ಡಿಸ್ಕ್ ಅಲ್ಲ .ಹಾಗಾಗಿ ಏನೂ ಮಾಡೊದಿಕ್ಕೆ ಆಗಲ್ಲ .ಆ ಬಗ್ಗೆ ನನಗೆ ಬೇಸರವಿದೆ.ಐಟಿ ಬಿಟಿಯವರ ಕೃಪೆಯಿಂದ ಏನಾದ್ರೂ ಮೆದುಳಿನಿಂದ ’ಬೈ ಮಿಸ್ಟೇಕ್ ಆಗಿ ಓದಿದ’ ಆಯ್ದ ಕಥೆ ಕವನಗಳನ್ನು ಡಿಲೀಟ್ ಮಾಡುವ ಸೌಲಭ್ಯ ಒದಗಿ ಬಂದಲ್ಲಿ ನನ್ನಂಥ ಬಡಪಾಯಿಗಳಿಗೆ ಅನುಕೂಲವಾಗುತ್ತದೆ.

ನನ್ನ ತಕರಾರನ್ನು ಓದಿ ಮುಂದಿನ ’ ದೇಶಕಾಲ’ ದ ಹೊತ್ತಿಗೆ ನಿಮ್ಮ ತಪ್ಪನ್ನು ಸರಿಪಡಿಸಿದಲ್ಲಿ ಬಹಳ ಅನುಕೂಲವಾಗುತ್ತದೆ.

ನಾನು ದೇಶಕಾಲದ ಎಲ್ಲಾ ಕಥೆ ,ಕವನ,ಲೇಖನಗಳನ್ನು ಲೇಖಕರ ಜಾತಿ ಗೊತ್ತಿಲ್ಲದೆ ಓದಿದೆ ಅನ್ನೋದೇ ನನ್ನ ತಕರಾರು.ನಾನು ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಬಹುತೇಕ ಲೇಖಕರ ಜಾತಿ ,ಪಂಥ ,ಅವರು ಬಲ ಪಂಥೀಯರೋ ಎಡಪಂಥೀಯರೋ ಅನ್ನುವದರ ಅರಿವು ಅಷ್ಟೊಂದು ಇಲ್ಲ.ಒಂದು ಬೇಸರದ ಸಂಗತಿ ಅಂದ್ರೆ ಈ ಲೇಖಕರ ಜಾತಿಗಳನ್ನು ಗೂಗಲ್,ವಿಕಿಪಿಡಿಯಾದಲ್ಲಿ ಹುಡುಕಿದರೂ ಆ ಬಗ್ಗೆ ಸರಿಯಾದ ಮಾಹಿತಿ ದೊರಕಿಲ್ಲ.ಹಾಗಾಗಿ ಮುಂದಿನ ’ದೇಶಕಾಲ’ ವಿಶೇಷ ಸಂಚಿಕೆಯಲ್ಲಿ ಎಲ್ಲಾ ಲೇಖಕರ ಕಿರು ಪರಿಚಯವನ್ನು(ಜಾತಿ,ಉದ್ಯೋಗ ,ಎಡಪಂಥ/ಬಲಪಂಥ etc) ಹಾಕಿದಲ್ಲಿ ನಮ್ಮಂಥ ಬಡಪಾಯಿಗಳು ‘ ಆಯ್ದ ’ ಲೇಖಕರ ಲೇಖನ,ಕಥೆ,ಕವನಗಳನ್ನಷ್ಟೇ ಓದಲು ಅನುಕೂಲವಾಗುತ್ತದೆ.

ನಿಮ್ಮ ಸರ್ ನೇಮ್ ಶಾನಭಾಗ ಅಂತ ಇರೋದ್ರಿಂದ ನೀವೂ ಕೂಡ ಕೊಂಕಣಿ ಅನ್ನೋ ಅನಿಸಿಕೆಯಿಂದ ನಾನು ಈಗಾಗಲೇ ಖರೀದಿಸಿರೋ ’ ದೇಶಕಾಲ ’ವನ್ನು ಹಿಂತಿರುಗಿಸುತ್ತಿಲ್ಲ. ಒಂದು ವೇಳೆ ನೀವು ಬೇರೆ ಶಾನಭಾಗರಾಗಿದ್ದಲ್ಲಿ ದಯವಿಟ್ಟು ತಿಳಿಸಿ ’ದೇಶಕಾಲ ವಿಶೇಷ’ ಸಂಚಿಕೆಯನ್ನು ವಿಶೇಷ ಚೀಲದಲ್ಲಿ ವಾಪಾಸ್ ಕಳಿಸುತ್ತೇನೆ.

ಪ್ರೀತಿಯಿಂದ (ಕೊಂಕಣಿಯಾದಲ್ಲಿ ಮಾತ್ರ),

ಸಂದೀಪ್ ಕಾಮತ್

ದೇಶಕಾಲದ ಸಾಧನೆ ಅದ್ಭುತ. ಕೊರತೆಗಳು ಎಂದೂ ಮುಗಿದದ್ದಲ್ಲ..

೧. ನಾನು ಪರ್ವತಾರೋಹಣ ಕೂಟ ಕಟ್ಟಿದೆ (೧೯೭೬ರ ಸುಮಾರಿಗೆ). ಸಲಕರಣೆ ಸಂಗ್ರಹಿಸುವ ಉದ್ದೇಶದಿಂದ ವಾರ್ಷಿಕ ಸದಸ್ಯ ಶುಲ್ಕ ಹದಿನೈದು ಸಂಗ್ರಹಿಸಿದೆ. ಹತ್ತೋ ಹನ್ನೆರಡೋ ಸದಸ್ಯರಾದರೂ ಕಾಡುಬೆಟ್ಟ ಅಲೆಯುವುದು ನಡೆಸಿಯೇ ಇದ್ದೆ. ಒಂದು ವರ್ಷ ಕಳೆದ ಮೇಲೆ ಒಂದರಲ್ಲೂ ಭಾಗವಹಿಸದ ಒಬ್ಬ ಸದಸ್ಯ ಕೂಟದ ರಚನೆಯ ಶೋಧಕ್ಕಿಳಿದ – ಇದು ಪ್ರಜಾಸತ್ತಾತ್ಮಕವೋ? ಎಲ್ಲ ಸದಸ್ಯರ ಅನುಕೂಲ ನೋಡಿ ಒಂದು ಸಭೆ ಯಾಕೆ ಕರೆದಿಲ್ಲ? ಇತ್ಯಾದಿ. ನಾನವನ ಹದಿನೈದು ರೂಪಾಯಿ ಹಿಂದಿರುಗಿಸಿ, ಔಪಚಾರಿಕ ಕೂಟ ಕಟ್ಟುವ ಉತ್ಸಾಹ ಕಳಚಿಕೊಂಡೆ (ಆರೋಹಣ ಇಂದಿಗೂ ಕ್ರಿಯಾಶೀಲವಾಗಿಯೇ ಇದೆ).

೨. ವಾರದಲ್ಲೊಮ್ಮೆ ಬರುವ ಬಿಡುವನ್ನು ಪೂರ್ಣ ಬಳಸಿಕೊಂಡು ಕಾಡು, ಬೆಟ್ಟ ಸುತ್ತುತ್ತಿದ್ದೆ. ಭಾಷಣ-ಭಯಂಕರ ಪರಿಸರ ವಾದಿಯೊಬ್ಬರು ಅದೇ ಕಾಡುಬೆಟ್ಟ ವಲಯದಲ್ಲಿ ಬರುವ ಜನ, ಸಂಸ್ಕೃತಿಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಇವರು ಮೂಲದಲ್ಲಿ ಪಿತ್ರಾರ್ಜಿತ ಸ್ವಂತ ಆಸ್ತಿಯನ್ನು ಹಡಬೆಬಿಟ್ಟು, ಲೋಕೋದ್ಧಾರ ಮಾಡುವ ಮುಖವಾಡದಲ್ಲಿ ಇನ್ಯಾರಲ್ಲೋ ಪರಪುಟ್ಟನಾಗಿದ್ದುಕೊಂಡು ವೇದಿಕೆ ಮತ್ತು ಮಾಧ್ಯಮಗಳಿಗೆ ‘ನುಡಿಸೇವೆ’ ಧಾರಾಳ ಕೊಡುತ್ತಿದ್ದರು. ನಾನೇ ಹುಟ್ಟಿಸಿ, ಕಟ್ಟಿದ ಅಂಗಡಿ ಆರೋಗ್ಯಪೂರ್ಣವಾಗಿ ಮೂವತ್ತೈದರ ಹರಯ ದಾಟಿ ನಡೆದಿದೆ. ನಾನು ಕಾಡು, ಬೆಟ್ಟ ಸುತ್ತುವುದನ್ನು ಬಿಟ್ಟಿಲ್ಲ.

೩. ಶಿವರಾಮ ಕಾರಂತರ ಯಕ್ಷಗಾನ ಪ್ರಯೋಗವನ್ನು ನೋಡಿದ ಪಂಡಿತರೊಬ್ಬರು ಸುದೀರ್ಘ ಪತ್ರ ಬರೆದು – ಹೀಗಲ್ಲ ಹಾಗೆ, ಹಾಗಲ್ಲ ಹೀಗೆ ಎಂದರಂತೆ. ಕಾರಂತರ ಮರುಟಪಾಲಿನ ಚುಟುಕು ಹೇಳಿತಂತೆ – ಸಲಹೆಗಳು ಚೆನ್ನಾಗಿವೆ, ನೀವ್ಯಾಕೆ ಪ್ರಯೋಗಿಸಬಾರದು?

೪. ದೇಶಕಾಲದ ಸಾಧನೆ ಅದ್ಭುತ. ಕೊರತೆಗಳು ಎಂದೂ ಮುಗಿದದ್ದಲ್ಲ. ಸಲಹೆಗಳು ಖಂಡಿತಾ ಬೇಕು. ಪ್ರಾತಿನಿಧ್ಯ, ಧಿಕ್ಕಾರ ಇತ್ಯಾದಿ ‘ಮೌಲ್ಯ’ಗಳು ಸ್ಪಷ್ಟವಾಗಿ ಸ್ವಾರ್ಥಮೂಲ!

-ಜಿ ಎನ್ ಅಶೋಕವರ್ಧನ

Previous Older Entries

%d bloggers like this: